ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರು 1. ಪಲ್ಸಾರ್ ಅನ್ವೇಷಕಿ, ಖಭೌತಶಾಸ್ತ್ರಜ್ಞೆ–ಜೋಸಲೀನ್ ಬೆಲ್ ಬರ್ನೆಲ್ (Jocelyn Bell Burnell) ಡಾ ಉಮಾ ವೆಂಕಟೇಶ್

ವಿಜ್ಞಾನಕ್ಕೆ ಸಂಬಂಧಿಸಿದ  ಲೇಖನಗಳನ್ನು ಬರೆಯುವದರಲ್ಲಿ ಅತ್ಯಂತ ಆಸಕ್ತಿ ಮತ್ತು ವಿಶೇಷ ಪರಿಣತಿ ಹೊಂದಿರುವ ಬರಹಗಾರರಾದ ಡಾ ಉಮಾ ವೆಂಕಟೇಶ್ ಈಗಾಗಲೇ ಈ ವೇದಿಕೆಯ ಓದುಗರಿಗೆ ಚಿರ ಪರಿಚಿತರು. ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರನ್ನು ಕುರಿತಾದ  ಈ ಹೊಸ ಸರಣಿಯಲ್ಲಿ ಅವರ ಮೊದಲ ಲೇಖನ  ಇದು.

 ಹೆಂಗಸರು ಕೇವಲ ಮದುವೆಯಾಗಿ, ಮಕ್ಕಳನ್ನು ಹೆತ್ತು……..?

ವೃತ್ತಿಪರ ರಂಗವನ್ನು ಪ್ರವೇಶಿಸಿ ಅಲ್ಲಿ ಯಶಸ್ಸನ್ನು ಗಳಿಸುವುದು ಮಹಿಳೆಯರಿಗೆ ಸದಾಕಾಲ ಒಂದು ಸವಾಲಿನ ಪ್ರಶ್ನೆಯಾಗೇ ಉಳಿದಿದೆ. ಇದಕ್ಕೆ ಕಾರಣ ಮಹಿಳೆ ತನ್ನ ಬುದ್ಧಿಶಕ್ತಿಯಲ್ಲಾಗಲಿ, ಅಥವಾ ಕಾರ್ಯನಿರ್ವಹಣೆಯ ಸಾಮರ್ಥ್ಯದಲ್ಲಾಗಲಿ ಗಂಡಿಗಿಂತ ಕಡಿಮೆ ಎನ್ನುವ ಕಾರಣದಿಂದಲ್ಲ. ಕೇವಲ ಅವಳು ಪುರುಷಳಲ್ಲ ಎನ್ನುವುದೊಂದೇ ಅದಕ್ಕೆ ಕಾರಣ. ನಮ್ಮ ಸಮಾಜವೆಷ್ಟೇ ಆಧುನಿಕಗೊಂಡು ಮುನ್ನಡೆದಿದೆ ಎಂದುಕೊಂಡರೂ, ಮಹಿಳೆಯರ ಬಗ್ಗೆ ಇರುವ ಕೆಲವು ಕೀಳು ಭಾವನೆಗಳು ಮತ್ತು ಪೂರ್ವಾಗ್ರಹಗಳು ಇನ್ನೂ ಆಳವಾಗಿ ಬೇರೂರಿಯೇ ಇವೆ.  ಇಷ್ಟಾದರೂ, ಈ ಪುರುಷ ಪ್ರಧಾನ ಸಮಾಜದ ವಿವಿಧ ವೃತ್ತಿಪರ ರಂಗಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು, ಅಂತಹ ಸಮಯವನ್ನು ಹಿಂದಕ್ಕೆ ನೂಕಿ, ಮುನ್ನಡೆದ ಮಹಿಳೆಯರು ಅನೇಕರಿದ್ದಾರೆ. ಅಂತಹ ವನಿತೆಯರಲ್ಲಿ ಒಬ್ಬಳು ಜೋಸಿಲೀನ್ ಬೆಲ್ ಬರ್ನೆಲ್. ಅತ್ಯಂತ ಪುರುಷ-ಪ್ರಧಾನ ರಂಗವೆನಿಸಿದ ವಿಜ್ಞಾನದಲ್ಲಿ, ಅದರಲ್ಲೂ ಭೌತಶಾಸ್ತ್ರದ ಉಪಕ್ಷೇತ್ರವಾದ ರೇಡಿಯೋ ಖಗೋಳಶಾಸ್ತ್ರದಂತಹ ಅಪರೂಪದ ವಿಷಯದಲ್ಲಿ ಸಾಧನೆಗೈದ ಬ್ರಿಟಿಷ್ ಖಭೌತಶಾಸ್ತ್ರಜ್ಞೆ ಜೋಸಿಲೀನ್ ಬೆಲ್, ಮೊಟ್ಟಮೊದಲ ರೇಡಿಯೋ ಪಲ್ಸಾರ್ ಶೋಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಮಹಿಳೆಯಾಗಿದ್ದಾಳೆ.

ಡೇಮ್ ಜೋಸಲೀನ್ ಬೆಲ್ ಬರ್ನೆಲ್
ಡೇಮ್ ಜೋಸಲೀನ್ ಬೆಲ್ ಬರ್ನೆಲ್ DBE, FRS, FRSE, FRAS

 ನೋಬೆಲ್ ಪ್ರಶಸ್ತಿ

ವಿಜ್ಞಾನ, ಸಾಹಿತ್ಯ ಮತ್ತು ಇನ್ನಿತರ ಸಾಂಸ್ಕೃತಿಕ ರಂಗಗಳಲ್ಲಿ ಗೈದ ಉನ್ನತ ಸಾಧನೆಗಳನ್ನು ಮನ್ನಿಸಿ, ಸುಮಾರು ಒಂದು ಶತಮಾನದಿಂದ ಆ ವ್ಯಕ್ತಿಗಳಿಗೆ ನೋಬೆಲ್ ಪಾರಿತೋಷಕವನ್ನು ನೀಡುತ್ತಾ ಬಂದಿರುವ ಸ್ವೀಡಿಷ್ ಮತ್ತು ನಾರ್ವೆಯ ದೇಶದ ನೋಬೆಲ್ ಸಮಿತಿ, ತನ್ನ ಹಾದಿಯಲ್ಲಿ ಅನೇಕ ಬಾರಿ ಎಡವಿದ ಪ್ರಸಂಗಗಳಿವೆ. ಪ್ರಶಸ್ತಿಗೆ ಅರ್ಹರಾದ ಅನೇಕರಿಗೆ ಆ ಪ್ರಶಸ್ತಿ ಲಭ್ಯವಾಗಿಲ್ಲ. ಆ ರೀತಿಯ ಅನ್ಯಾಯಕ್ಕೆ ಒಳಗಾದವರಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾದದ್ದು.

 1960ರ ದಶಕದ ಮಧ್ಯಭಾಗದ ಸಮಯದಲ್ಲಿ, ಇಂಗ್ಲೆಂಡಿನಲ್ಲಿರುವ ಪ್ರಸಿದ್ಧ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಹೊರವಲಯದಲ್ಲಿದ್ದ ಹೊಲವೊಂದರಲ್ಲಿ, ರೇಡಿಯೋ ತಟ್ಟೆಯ ಸ್ಪರ್ಶತಂತುಗಳ ವ್ಯೂಹವೊಂದು (Radio Dish Antenna array) ತಯಾರಾಗುತ್ತಿತ್ತು. ಪ್ರಸಿದ್ಧ ರೇಡಿಯೋ ಖಗೋಳತಜ್ಞನಾದ (Radio-Astronomer) ಆಂಥೋನಿ ಹ್ಯೂಯಿಷನಿಗೆ, ಕ್ವೇಸಾರುಗಳು (Quasars) ಮತ್ತು ಇತರ ರೇಡಿಯೋ ಗಲಾಕ್ಸಿಗಳನ್ನು ಹುಡುಕುವ ಆಸಕ್ತಿಯಿತ್ತು. ಆ ಸಮಯದಲ್ಲಿ ಕ್ವೇಸಾರುಗಳು ಬಹಳ ಪ್ರಬಲವಾದ, ಹಾಗೂ ಅತ್ಯಂತ ದೂರದಲ್ಲಿರುವ ರೇಡಿಯೋ ತರಂಗಗಳ ಉಗಮಸ್ಥಾನಗಳೆಂದು ಗೊತ್ತಿತ್ತು. ಇಂದು ಕ್ವೇಸಾರುಗಳೆಂದರೆ, ತಮ್ಮ ಕೇಂದ್ರಭಾಗದಲ್ಲಿ ಭಾರಿ ಕಪ್ಪುಕುಳಿಗಳನ್ನು (Black holes) ಹೊಂದಿರುವ ಕಿರಿಯ ತಾರಾಗಣಗಳೆನ್ನುವುದು ನಮಗೆ ತಿಳಿದಿರುವ ವಿಷಯವಾಗಿದೆ. ಆದರೆ 1960ರ ಸಮಯದಲ್ಲಿ, ಕ್ವೇಸಾರುಗಳು ಇನ್ನೂ ನಿಗೂಢವಾದ ವಿಷಯವಾಗೇ ಉಳಿದಿದ್ದವು. ಅವುಗಳನ್ನು ಕ್ರಮಬದ್ಧವಾಗಿ ವೀಕ್ಷಿಸುವ ಸಲುವಾಗಿ, ಹ್ಯೂಯಿಷ್, 4.5 ಎಕರೆಗಳಷ್ಟು ವಿಸ್ತಾರವಾಗಿದ್ದ ಹೊಲದಲ್ಲಿ, ರೇಡಿಯೋ ದೂರದರ್ಶಕವೊಂದನ್ನು ವಿನ್ಯಾಸಗೊಳಿಸಿದ್ದನು. 2,048 ಸಂಖ್ಯೆಯ ದ್ವಿಧ್ರುವಿ (Dipole) ಸ್ಪರ್ಶತಂತುಗಳಿದ್ದ

ಆ  ದೂರದರ್ಶಕದಲ್ಲಿ, ಪ್ರತಿಯೊಂದು

ಕೇಂಬ್ರಿಜ್ಜಿನಲ್ಲಿ ಯುವ ಜೋಸಲಿನ್

ಸ್ಪರ್ಶತಂತುವನ್ನೂ ಒಂದು ಮರದ ಕೋಲಿನ ಮೇಲ್ಭಾಗದಲ್ಲಿ ಸಿಕ್ಕಿಸಲಾಗಿತ್ತು. ಈ ಸ್ಪರ್ಶತಂತುಗಳು, ಕೇಂಬ್ರಿಡ್ಜ್ ಮೇಲಿನ ಆಕಾಶದ ಒಂದು ಸಣ್ಣ ಪಟ್ಟಿಯಿಂದ ಸಂಕೇತಗಳನ್ನು ಪಡೆದುಕೊಳ್ಳುತ್ತಿದ್ದವು. ಭೂಮಿಯ ಪರಿಕ್ರಮಣದಿಂದಾಗಿ, ಇಪ್ಪತ್ನಾಲ್ಕು ಗಂಟೆಗಳ ಅವಧಿಯಲ್ಲಿ ಆ ದೂರದರ್ಶಕವು ಆಕಾಶದ ಒಂದು ದೊಡ್ಡ ಭಾಗದ ವೀಕ್ಷಣೆಯನ್ನು ನಡೆಸುವ ಕಾರ್ಯವನ್ನು ಖಚಿತಪಡಿಸಿತ್ತು. ಅಲ್ಲಿದ್ದ 2,048 ಸ್ಪರ್ಶತಂತುಗಳಲ್ಲಿ, ಪ್ರತಿಯೊಂದರಲ್ಲೂ ದೊರೆತ ಸಂಕೇತವನ್ನು ಒಟ್ಟುಗೂಡಿಸಿ, ಒಂದು ಅಂತಿಮ ಸಂಕೇತವನ್ನು ಪಡೆಯುತ್ತಿದ್ದರು. ಈ ದೂರದರ್ಶಕದ ಯಶಸ್ಸು ಬಹುತೇಕವಾಗಿ ಅದರಲ್ಲಿದ್ದ ಸ್ಪರ್ಶತಂತುಗಳ ಮೇಲೆ ಅವಲಂಬಿತವಾಗಿದ್ದು, ವಿದ್ಯುತ್ ತಂತಿಗಳನ್ನು ಉಪಯೋಗಿಸಿ, ಎಚ್ಚರಿಕೆಯಿಂದ ಅದನ್ನು ಅಳವಡಿಸುವ ಕಾರ್ಯ ಬಹಳ ಮಹತ್ವದ್ದಾಗಿತ್ತು. ಈ ಬಹುಮುಖ್ಯವಾದ ವೈರಿಂಗ್ ಕಾರ್ಯವನ್ನು, 24 ವರ್ಷ ವಯಸ್ಸಿನ ತರುಣಿ ಜೋಸಿಲೀನ್ ಬೆಲ್ಲಳಿಗೆ ನೀಡಲಾಗಿದ್ದು, ಅವಳು ಆ ಸಮಯದಲ್ಲಿ, ಹ್ಯೂಯಿಷನ ಪಿ.ಎಚ್.ಡಿ ವಿದ್ಯಾರ್ಥಿಯಾಗಿದ್ದಳು. ಕೇಂಬ್ರಿಡ್ಜಿನ ಕೊರೆಯುವ ಚಳಿಗಾಲದಲ್ಲಿ, ಇತರ 6 ವಿದ್ಯಾರ್ಥಿಗಳೊಂದಿಗೆ ಈ ಕಾರ್ಯವನ್ನು ನಿರ್ವಹಿಸಿದ ಕೀರ್ತಿ ಬೆಲ್ಲಳದಾಗಿತ್ತು. 1967ರ ಜುಲೈ ತಿಂಗಳಲ್ಲಿ ಕಾರ್ಯವಾರಂಭಿಸಿದ ಈ ದೂರದರ್ಶಕವು, ಹೆಚ್ಚುಕಡಿಮೆ ಒಂದು ಭೂಕಂಪ ಲೇಖಿಯಂತೆ (Seismograph) ದತ್ತಾಂಶವನ್ನು ಸಂಗ್ರಹಿಸುತ್ತಿತ್ತು. ಕಂಪ್ಯೂಟರುಗಳಿಲ್ಲದ ಆ ಕಾಲದಲ್ಲಿ, ಜೋಸಲೀನ ಬೆಲ್ ಪ್ರತಿ ದಿನದ ಅಂತ್ಯದಲ್ಲಿ ಸುಮಾರು ನೂರು ಅಡಿಗಳಷ್ಟು ಉದ್ದದ ಕಾಗದದ ಮೇಲೆ ಸಂಗ್ರಹವಾಗುತ್ತಿದ್ದ ದತ್ತಾಂಶವನ್ನು (Data) ವಿಶ್ಲೇಷಿಸುತ್ತಿದ್ದಳು.

Radio dish antenna array

 ಅಕ್ಟೋಬರ್ ತಿಂಗಳ ಕೊನೆಯ ಭಾಗದ ಹೊತ್ತಿಗೆ, ದತ್ತಾಂಶ ಸಂಗ್ರಹವಾಗುತ್ತಿದ್ದ ಕಾಗದದ ಮೇಲೆ ಮೂಡಿದ್ದ ಹಲವಾರು ಡೊಂಕುಗೆರೆಗಳು (“Scruff”) ಏನನ್ನು ಸೂಚಿಸುತ್ತಿರಬಹುದು ಎಂದು ಬೆಲ್ಲಳು ಯೋಚಿಸುತ್ತಿದ್ದಳು. ಕಾಗದವು ಒಂದು ಇಂಚಿನಷ್ಟು ಕದಲಿದಾಗ, ಪ್ರತಿ ಐದು ನಿಮಿಷಗಳಿಗೂ ದೊರೆಯುತ್ತಿದ್ದ ಆ ಸಂಕೇತಗಳು ಕಲಸಿದಂತೆ ಕಾಣುತ್ತಿದ್ದವು. ಆ ರೀತಿ ಕಲೆಸಿದ ಸಂಕೇತಗಳನ್ನು ಹಿಗ್ಗಿಸಿ ನೋಡುವುದೊಂದೇ ಅವಳಿಗಿದ್ದ ಮಾರ್ಗವಾಗಿತ್ತು. ಹಾಗೆ ಮಾಡಿ ನೋಡಿದಾಗಲೂ, ಬೆಲ್ಲಳಿಗೆ ಅಂತಹ ಅಸಾಮಾನ್ಯವಾದುದೇನೂ ಕಂಡುಬರಲಿಲ್ಲ. ಕೊನೆಗೆ ನವೆಂಬರ್ ತಿಂಗಳಲ್ಲಿ ಮತ್ತೊಮ್ಮೆ ದೊರೆತ ಆ ಸಂಕೇತಗಳು, ಆಶ್ಚರ್ಯವೆಂಬಂತಹ ಕ್ರಮಬದ್ಧತೆಯಲ್ಲಿ ಪುನರಾವರ್ತಿತವಾಗುತ್ತಿತ್ತು. ಜೊತೆಗೆ ಈ ಸಂಕೇತಗಳು ಪ್ರತಿದಿನವೂ, ಹಿಂದಿನ ದಿನಕ್ಕಿಂತ ನಾಲ್ಕು ನಿಮಿಷಗಳು ಮುಂಚಿತವಾಗಿ ಗೋಚರವಾಗುತ್ತಿತ್ತು. ಅವರ ತಂಡದವರು ಆ ರೇಡಿಯೋ ಸಂಕೇತಗಳು ಬರುತ್ತಿದ್ದ ಉಗಮಸ್ಥಾನದ ದೂರವನ್ನು ಲೆಕ್ಕಾಚಾರ ಮಾಡಿ ನೋಡಿದಾಗ, ಹ್ಯೂಯಿಷ್ ಮತ್ತು ಬೆಲ್ ಆ ದೂರವನ್ನು 200 ಜ್ಯೋತಿರ್ವರ್ಷಗಳೆಂದು ನಿರ್ಧರಿಸಿದರು.

ಕ್ರಿಸ್ಮಸ್ ರಜೆ

 ಆಗಲೇ ಕ್ರಿಸ್ಮಸ್ ರಜೆಯ ದಿನಗಳು ಹತ್ತಿರವಾಗುತ್ತಿತ್ತು. ರಜೆಗೆ ತನ್ನ ಊರಿಗೆ ಹೋಗುವ ಮುನ್ನಾ ದಿನವೂ, ಬೆಲ್ ಅಂತಹುದೇ ಮತ್ತೊಂದು ಸಂಕೇತವು ಕಾಗದದ ಮೇಲೆ ದಾಖಲಾಗಿದ್ದನ್ನು ನೋಡಿದಳು. ಆ ಸಮಯದಲ್ಲಿ ಹೆಚ್ಚಿಗೆ ಮತ್ತೇನನ್ನೂ ಮಾಡಲಾಗದೆ, ತನ್ನ ತಂದೆತಾಯಿ ಮತ್ತು ಕುಟುಂಬವನ್ನು ಭೇಟಿಮಾಡುವ ಸಲುವಾಗಿ, ಉತ್ತರ ಐರ್ಲೆಂಡಿನಲ್ಲಿರುವ ತನ್ನೂರು ಆರ್ಮಾಕ್ಕೆ ತೆರಳಿದಳು. ಅಲ್ಲಿ ಅವಳ ತಂದೆ, ಹೊಸದಾಗಿ ನಿರ್ಮಾಣವಾಗುತ್ತಿದ್ದ ಆರ್ಮಾ ಖಗೋಳವೀಕ್ಷಣಾಲಯಕ್ಕೆ ಅವಳನ್ನು ಕರೆದೊಯ್ದು, ಅಲ್ಲಿನ ನಿರ್ದೇಶಕರಾದ ಪ್ರಸಿದ್ಧ ಖಗೋಳ ವೀಕ್ಷಕ, ಸರ್ ಪಾಟ್ರಿಕ್ ಮೂರ್ ಅವರನ್ನು ಅವಳಿಗೆ ಪರಿಚಯಿಸಿದರು. ಅಲ್ಲಿ ಆತ ಪ್ಲಾನೆಟೊರಿಯಮ್ಮಿನ ಪ್ರೊಜೆಕ್ಟರಿನ ಸಹಾಯದಿಂದ, ಆಕಾಶದ ಚಿತ್ರವನ್ನು ಗುಮ್ಮಟದ ಮೇಲೆ ಫಕ್ಕನೆ ಮಿಂಚಿಸಿದಾಗ, ಆಕೆಗೆ ತಕ್ಷಣವೇ ತಮ್ಮ ರೇಡಿಯೋ ದೂರದರ್ಶಕದಲ್ಲಿ ದಾಖಲಾಗುತ್ತಿರುವ ಸಂಕೇತಗಳು ಎಲ್ಲಿಂದ ಬರುತ್ತಿರಬಹುದು ಹೊಳೆಯಿತು. ಆದರೆ ಆ ಹಂತದಲ್ಲಿ ತಮ್ಮ ಸಂಶೋಧನೆಯ ಬಗ್ಗೆ ಯಾರೊಡನೆಯೂ ಚರ್ಚಿಸುವ ವಿಶ್ವಾಸವಿಲ್ಲದ ಕಾರಣ, ಬೆಲ್ ನಿಶ್ಯಬ್ದವಾಗಿ ಗುಮ್ಮಟದ ಮೇಲಿದ್ದ ಆಗಸದತ್ತ ದಿಟ್ಟಿಸಿ ನೋಡುತ್ತಿದ್ದಳು.

ಪಲ್ಸಾರ್ಸ್ (Pulsars)

 ಕ್ರಿಸ್ಮಸ್ ರಜೆಯ ನಂತರ, ಕೇಂಬ್ರಿಡ್ಜಿಗೆ ಮರಳಿದ ಬೆಲ್, ಅಂತಹುದೇ ಇನ್ನೆರಡು ಸಂಕೇತಗಳನ್ನು ಕಂಡಾಗ, ಅವಳ ಮಾರ್ಗದರ್ಶಕ ಹ್ಯೂಯಿಷ್, ತಮ್ಮ ಫಲಿತಾಂಶವನ್ನು ಖಗೋಳಶಾಸ್ತ್ರದ ಸಮುದಾಯಕ್ಕೆ ತಿಳಿಸಿದರು. ಹ್ಯೂಯಿಷ್ ಆ ಸಂಕೇತಗಳು, ಶ್ವೇತ ಕುಬ್ಜ ನಕ್ಷತ್ರಗಳು (White Dwarf stars), ಅಥವಾ ನ್ಯೂಟ್ರಾನ್ ನಕ್ಷತ್ರಗಳಿಂದ (Neutron stars) ಬರುತ್ತಿರಬೇಕು ಎಂದು ಸೂಚಿಸುತ್ತಾ, ಅವನ್ನು ಸ್ಪಂದಿಸುವ ರೇಡಿಯೋ ಮೂಲಗಳು (Pulsating Radio Sources), ಅಥವಾ ಪಲ್ಸಾರ್ಸ್ (Pulsars) ಎಂದು ಕರೆದರು. ಅದಾದ ಒಂದು ವರ್ಷದೊಳಗೆ, ಪಲ್ಸಾರುಗಳು ನ್ಯೂಟ್ರಾನ್ ನಕ್ಷತ್ರಗಳು-ಅಂದರೆ ಭಾರಿ ನಕ್ಷತ್ರಗಳು ಸಿಡಿದು ಮಹಾನವ್ಯಗಳಾದಾಗ (Supernova), ಅದರಿಂದ ಉಳಿದ ಅವಶೇಷಗಳೆಂದು ಖಚಿತಪಡಿಸಲಾಗಿತ್ತು. ಈ ನ್ಯೂಟ್ರಾನ್ ನಕ್ಷತ್ರಗಳ ದೃವಗಳಿಂದ ಹೊರಸೂಸುವ ರೇಡಿಯೋ ತರಂಗಗಳು, ವಿಕಿರಣ ರಶ್ಮಿಯನ್ನು, ನಮ್ಮ ಭೂಮಿಯ ಉದ್ದಗಲಕ್ಕೂ ಬೆಳಕಿನ ಕಡಲ ದೀಪಸ್ತಂಭಗಳಂತೆ ಪಸರಿಸುತ್ತದೆ.

ಪಲ್ಸಾರ್ Cc: Wiki
ಪಲ್ಸಾರ್

 1968ರಲ್ಲಿ, ಈ ಫಲಿತಾಂಶವನ್ನು ಪ್ರಕಟಿಸಿದ ನಂತರ, ಹ್ಯೂಯಿಷ್ ಮತ್ತು ಬೆಲ್, ಒಂದಾದ ಬಳಿಕ ಇನ್ನೊಂದರಂತೆ ಅನೇಕ ಸಂದರ್ಶನಗಳನ್ನು ಮಾಧ್ಯಮಗಳಿಗೆ ನೀಡಿದ್ದರು. ಆದರೆ ಆ ಪ್ರತಿಯೊಂದು ಸಂದರ್ಶನದಲ್ಲೂ, ಸಂಶೋಧನೆ ಮತ್ತು ಪ್ರಯೋಗದ ಬಗ್ಗೆ ಪ್ರಶ್ನೆಗಳನ್ನು ಕೇವಲ ಹ್ಯೂಯಿಷನನ್ನು ಮಾತ್ರಾ ಕೇಳುತ್ತಿದ್ದರು, ಹಾಗೂ ಬೆಲ್ಲಳನ್ನು ಕೇವಲ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಮುಜುಗರಗೊಳ್ಳಿಸುತ್ತಿದ್ದರು. ನಿಮ್ಮ ಅಂಗಾಂಗಗಳ ಅಳತೆಗಳೇನು? ನಿಮಗೆಷ್ಟು ಬಾಯ್ ಫ಼್ರೆಂಡುಗಳಿದ್ದಾರೆ? ನೀವು ಬ್ರಿಟನ್ನಿನ ರಾಜಕುವರಿ ಮಾರ್ಗರೆಟ್ಟಿಗಿಂತ ಹೆಚ್ಚು ಎತ್ತರವಿರುವಿರಾ? ಎನ್ನುವ ಅಸಭ್ಯ ಮತ್ತು ಅನುಚಿತವಾದ ಪ್ರಶ್ನೆಗಳನ್ನು ಕೇಳಿ, ಆಕೆಯೊಬ್ಬ ವಿಜ್ಞಾನಿ ಎನ್ನುವುದನ್ನೇ ಮರೆತು ವರ್ತಿಸುತ್ತಿದ್ದರು. ಇದರ ಜೊತೆಗೆ, ಅವರ ಆ ಕಾರ್ಯಕ್ಕಾಗಿ ದೊರೆತ 1974ರ ನೋಬೆಲ್ ಪಾರಿತೋಷಕವನ್ನು ಕೇವಲ ಆಂಥೋಣಿ ಹ್ಯೂಯಿಷ ಮತ್ತು ಅವರ ಇನ್ನೊಬ್ಬ ಸಹೋದ್ಯೋಗಿ ಮಾರ್ಟಿನ್ ರೈಲನಿಗೆ ನೀಡಲಾಯಿತು. ಜೋಸಲೀನಳ ಹೆಸರನ್ನು ಕೈ ಬಿಟ್ಟಿದ್ದರು. ನೋಬೆಲ್ ಸಮಿತಿಯ ನಿಯಮಗಳ ಪ್ರಕಾರ ಪ್ರಶಸ್ತಿಯನ್ನು ಮೂವರಿಗಿಂತ ಹೆಚ್ಚು ಸದಸ್ಯರಿಗೆ ನೀಡುವುದಿಲ್ಲ. ಆದರೆ ಜೋಸಲೀನಳನ್ನು ಮೂರನೆಯವಳನ್ನಾಗಿಯೂ ಸೇರಿಸಲಿಲ್ಲ. ಹೆಂಗಸರು ಕೇವಲ ಮದುವೆಯಾಗಿ, ಮಕ್ಕಳನ್ನು ಹೆತ್ತು ಸಂಸಾರ ನೋಡಿಕೊಳ್ಳಬೇಕು. ಗಂಡಸರು ನೋಬೆಲ್ ಪಾರಿತೋಷಕವನ್ನು ಪಡೆದುಕೊಳ್ಳಬೇಕು. ಇದುವೇ ಜೀವನದ ಸತ್ಯ ಎನ್ನುವುದನ್ನು ಅಂದಿನ ಪುರುಷ-ಪ್ರಧಾನ ಪ್ರಪಂಚ ಅವಳಿಗೆ ತೋರಿಸಿತ್ತು.

ದಕ್ಕದ ನೋಬೆಲ್ ಪಾರಿತೋಷಕ !

ಎರಡು ವರ್ಷಗಳ ಕಾಲ ಅವಳು ರೇಡಿಯೋ ದೂರದರ್ಶಕದ ನಿರ್ಮಾಣದ ಕಾರ್ಯದಲ್ಲಿ ವಹಿಸಿದ ಮಹತ್ವದ ಪಾತ್ರ, ಹಾಗೂ ಪ್ರತೀ ರಾತ್ರಿಯೂ ಸುಮಾರು 100 ಅಡಿಗಳಷ್ಟು ಪುಟದ ದತ್ತಾಂಶವನ್ನು ವಿಶ್ಲೇಷಿಸುತ್ತಿದ್ದ ಅವಳ ಶ್ರಮಕಾರ್ಯ, ಅಷ್ಟೇ ಅಲ್ಲದೇ ಅವರಿಗೆ ದೊರೆತ ದತ್ತಾಂಶ ಸಂಕೇತಗಳ ಅಸಾಮಂಜಸ್ಯಗಳ ಬಗ್ಗೆ ಹ್ಯೂಯಿಷನಿಗೆ ಬಿಡದೇ ಮಾಡುತ್ತಿದ್ದ ವರದಿ ಇವೆಲ್ಲವನ್ನೂ ಕಡೆಗಣಿಸಿ, ಅವಳಿಗೆ ದಕ್ಕಬೇಕಾಗಿದ್ದ ನೋಬೆಲ್ ಪಾರಿತೋಷಕವನ್ನು ಅವಳಿಗೆ ನೀಡಿರಲಿಲ್ಲ. ಈ ಎಲ್ಲಾ ಕಹಿ ಅನುಭವಗಳ ಹೊರತಾಗಿಯೂ, ಜೋಸಿಲೀನ್ ಬೆಲ್, ತನ್ನ ಸಂಶೋಧನೆ ಮತ್ತು ಇತರ ಕಾರ್ಯಗಳನ್ನು ಮುಂದುವರೆಸಿ, ತನ್ನ ಕ್ಷೇತ್ರದಲ್ಲಿ ಅನೇಕ ಗೌರವ ಮತ್ತು ಪ್ರಶಸ್ತಿಗಳನ್ನು ಸಂಪಾದಿಸಿದಳು. ನೋಬೆಲ್ ಸಮಿತಿ ಮೊಟ್ಟಮೊದಲ ಬಾರಿಗೆ ರೇಡಿಯೋ ಖಗೋಳಶಾಸ್ತ್ರವನ್ನು, ಪ್ರಶಸ್ತಿಗೆ ಅರ್ಹವೆಂದು ತೀರ್ಮಾನಿಸಿದ ಸಂಶೋಧನೆಯಲ್ಲಿ ಭಾಗವಹಿಸಿದ್ದ ಕೀರ್ತಿ ಅವಳದ್ದು. ತರುಣ ಪೀಳಿಗೆಯ ಯುವತಿಯರಲ್ಲಿ ವಿಶ್ವಾಸ ತುಂಬಿ, ಅವರ ಪಾಲಿಗೆ ಒಂದು ಆದರ್ಶಪ್ರಾಯದ ವ್ಯಕ್ತಿ ಎನಿಸಬಹುದಾದ ಮಹಿಳೆ ಜೋಸಲೀನ್ ಬೆಲ್. ಇಂದಿಗೂ ಚಟುವಟಿಕೆಯ ಜೀವನವನ್ನು ನಡೆಸುತ್ತಿರುವ 72 ವಯಸ್ಸಿನ ಜೋಸಲೀನ್, ಇದೀಗ ದಕ್ಷಿಣ ಆಫ್ರಿಕೆಯ ಕಾರೂ ಮರುಭೂಮಿಯಲ್ಲಿ ನಿರ್ಮಿತವಾಗುತ್ತಿರುವ ಪ್ರಪಂಚದ ಅತಿ ದೊಡ್ಡ ರೇಡಿಯೋ ದೂರದರ್ಶಕವಾದ, ಚದುರ ಕಿಲೋಮೀಟರ್ ವ್ಯೂಹದ (Square Kilometre Array) ಯೋಜನೆಯ ಬಗ್ಗೆ ಅತೀವ ಉತ್ಸಾಹ ಮತ್ತು ಭರವಸೆಯನ್ನು ಹೊಂದಿದ್ದಾರೆ.

ಡಾ ಉಮಾ ವೆಂಕಟೇಶ್

4 thoughts on “ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರು 1. ಪಲ್ಸಾರ್ ಅನ್ವೇಷಕಿ, ಖಭೌತಶಾಸ್ತ್ರಜ್ಞೆ–ಜೋಸಲೀನ್ ಬೆಲ್ ಬರ್ನೆಲ್ (Jocelyn Bell Burnell) ಡಾ ಉಮಾ ವೆಂಕಟೇಶ್

  1. ಬಹು ಪ್ರಸಿದ್ಧ ಬ್ರಿಟಿಷ್ ಯಹೂದಿ ಮನೆತನದಲ್ಲಿ ಹುಟ್ಟಿದ ವೈಜ್ನಾನಿಕಿ ರೋಸಲಿಂಡ್ ಫ್ರಾಂಕ್‍ಲಿನ್ ಅವರೂ ಇದೇರೀತಿ ಸ್ತ್ರೀಭೇದಭಾವಕ್ಕೊಳಗಾಗಿದ್ದರು. ಇವರು ಲಂಡನ್ನಿನ ಕಿನ್ಂಗ್ಸ್ ಕಾಲೇಜಿನಲ್ಲಿ ಕ್ಷಕಿರಣ ರೇಖಾಚಿತ್ರೀಕರಣದ ಪ್ರಯೋಗಗಳನ್ನು, ಮಾರಿಸ್ ವಿಲ್ಕಿನ್ಸ್ ಅವರೊಂದಿಗೆ ಡಿಎನ್‍ಎ ಕಣದ (molecule) ಆಕಾರದ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದರು. ೧೯೫೩ರಲ್ಲಿ ಕ್ರಿಕ್ ಮತ್ತು ವಾಟ್ಸನ್ ಎಂಬ ವೈಜ್ನಾನಿಕರು ರೋಸಲಿಂಡ್ ತೆಗೆದ ಕ್ಷಕಿರಿಣ ಛಾಯಾಚಿತ್ರವನ್ನು ಅಜ್ನಾತವಾಗಿ ಪಡೆದು ಅದನ್ನು ಉಪಯೋಗಿಸಿ ’ಡಿ‍ಎನ್‍ಎ‍’ಯ ಆಕೃತಿಯ ಬಗ್ಗೆ ತಮ್ಮ ಸಂಶೋಧನೆಯ ಫಲಿತಾಂಶವನ್ನು ಪ್ರಕಟಿಸಿದರು. ಅದಕ್ಕೆ ಇವರಿಬ್ಬರಿಗೂ ೧೯೬೨ರಲ್ಲಿ ನೊಬೆಲ್ ಪಾರಿತೋಶಕವನ್ನು ಕೊಡಲಾಯಿತು. ನೊಬೆಲ್ ಸಮಿತಿಯು ಮರಣೋತ್ತರವಾಗಿ ಪಾರಿತೋಶಕನ್ನು ಕೊಡಲು ಯಾವ ಆದೇಶವೂ ಇಲ್ಲದುದರಿಂದ ೧೯೫೮ರಲ್ಲಿ ಮಡಿದ ರೋಸಲಿಂಡ್ ಅವರಿಗೆ ಈ ಪಾರಿತೋಶಕವು ಲಭಿಸಲಿಲ್ಲ.
    -ರಾಜಾರಾಮ ಕಾವಳೆ

    Like

  2. ಜಗತ್ತು ಎಷ್ಟು ಮುಂದುವರೆದರು, ಒಬ್ಬ ವ್ಯಕ್ತಿಯನ್ನು , ನಿಂತು ಉಚ್ಚೆ ಮಾಡುತ್ತನೋ ಅಥವಾ ಕುಳಿತು ಉಚ್ಚೆ ಮಾಡುತ್ತಾನೊ ಅನ್ನುವ ಗಣಕದಲ್ಲಿ ಅಳೆಯುವುದು ನಗೆಪಾಟಲಿನ ವಿಚಾರ . ಅದರಲ್ಲೂ ಸಾಧನೆಯಲ್ಲಿ ತೊಡಗಿದ ವ್ಯಕ್ತಿ,ಒಂದು ಹಂತವನ್ನು ಮೀರಿ ಮೇಲೆ ಹೋದ ಮೇಲೆ ಲಿಂಗ ವಿಚಾರ ನಗಣ್ಯ. ರಾಜಕೀಯವಿಲ್ಲದ ರಂಗವೆಲ್ಲಿದೆ?
    ನಿಮ್ಮ ಈ ಲೇಖನ ತುಂಬ ಚೆನ್ನಾಗಿದೆ.

    Like

  3. ಅಪ್ರತಿಮ ಮಹಿಳೆಯ ಅದ್ಭುತ ಅನ್ವೇಷಣೆಯ ಕಥೆ. ನೊಬೆಲ್ ಪಾರಿತೋಷಕ ವಿಜೇತರ ಆಯ್ಕೆಯ ಇತಿಹಾಸದಲ್ಲಿ ಇದೇನೂ ಪ್ರಥಮ ಪ್ರಮಾದವಲ್ಲ. (ಕೊನೆಯದೂ ಆಗಲಿಕ್ಕಿಲ್ಲ!).ಇತ್ತೀಚಿನ ‘ಸುಧಾರಣೆ’ಯ ವಾತಾವರಣದಲ್ಲೂ ಪುರುಷಪ್ರಧಾನ ಸಮಾಜ ಅಷ್ಟು ಬದಲಾಗಿಲ್ಲ ಎನ್ನಿಸುವದು ವಿಷಾದದ ಸಂಗತಿ. ಆದರೆ ಜೋಸಲಿನ್ನಳ ಕಾರ್ಯದಕ್ಷತೆ, ಉತ್ಸಾಹ, ಸಂಶೋಧನೆಗೆ ಮೀಸಲಾಗಿಟ್ಟ ಜೀವನ ಶ್ಲಾಘನೀಯ. ತಮ್ಮ ನೆಚ್ಚಿನ ಭೌತ, ಖಭೌತ ವಿಜ್ಞಾನ ಶಾಖೆಯಲ್ಲಿಯ ಆಸಕ್ತಿಯೇ ಲೇಖಕಿಯನ್ನು ಈ ರೋಚಕ, ಆದರೆ ನಿರಾಶೆಯ ವೃತ್ತಾಂತವನ್ನು ನಮಗೆ ನೀಡಲು ಅನುವು ಮಾಡಿತೇನೋ. ಆದರೆ ಸತ್ಯವನ್ನು ಹೇಳಲೇ ಬೇಕಲ್ಲವೇ? ”ಸತ್ಯಂ ಬ್ರೂಯಾತ್” ಸರಿ. ‘ನ ಬ್ರೂಯಾತ್ ಸತ್ಯಮಪ್ರಿಯಂ’ ಎಂದು ಸುಮ್ಮನೆ ಕುಳಿತುಕೊoಡಿರಲಾದೀತೆ? ಅದೇ ಕ್ಷೇತ್ರದಲ್ಲೇ ಆಕೆ ಇನ್ನೂ ಕಾರ್ಯಪ್ರವೃತ್ತವಾಗಿರುವದು ಮೆಚ್ಚುವಂಥದು. ಈ ಕಥೆಯನ್ನು ಹೇಳಿದ ಉಮಾ ಅವರಿಗೆ ಧನ್ಯವಾದಗಳು. ಈ ಸರಣಿಯ ಮುಂದಿನ ಲೇಖನಗಳನ್ನು ಎದುರು ನೋಡುವೆ. ಆ ‘Pandora’ ಪೆಟ್ಟಿಗೆಯಲ್ಲಿ ಏನೇನಿದೆಯೋ!

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.