ಕನ್ನಡ ಬಳಗ ಯು ಕೆ ದ ಸಂಸ್ಥಾಪಕ ಸದಸ್ಯರಾದ ಅರವಿಂದ ಕುಲಕರ್ಣಿಯವರ ಪರಿಚಯವಿಲ್ಲದವರು ಕಡಿಮೆ. ಬಳಗದ ಬೆನ್ನೆಲುಬಾಗಿ ನಿಂತು, ದುಡಿದು ಅ೦ದಿನಿ೦ದ ಇಂದಿನ ವರೆಗೆ ಅಖಂಡ ಸೇವೆ ಸಲ್ಲಿಸಿದ್ದಾರೆ. ಅವರಿಗೆ KBಯಷ್ಟೇ ಅಚ್ಚು ಮೆಚ್ಚು ತಮ್ಮ ಊರು. ಅವರು ಬರೆಯುತ್ತಾರೆ …
ನನ್ನೂರು ಧಾರವಾಡ. ನಾನು ಹುಟ್ಟಿದ ಊರು, ನನ್ನ ನೆಚ್ಚಿನ ಊರು. 1930ರ ವರ್ಷದ ಕೊನೆಯಲ್ಲಿ ಹುಟ್ಟಿ, ಬೆಳೆದು, ಕಲಿತು,ಆಟ, ಚೆಲ್ಲಾಟ, ಸ್ನೇಹಿತರ ಕೂಡಿ ಮಂಗತನದ ಹುಡುಗಾಟಗಳಲ್ಲಿ ಆನಂದಪಟ್ಟದ್ದು ಇದೇ ಊರಲ್ಲಿ. ಕಳೆದ 46 ವರ್ಷಗಳಿಂದ ಆಂಗ್ಲನಾಡಿನಲ್ಲಿ ಸ್ಥಾಯಿಕವಾಗಿ ನೆಲಸಿದ್ದರೂ ಕೂಡಾ, ಪಂಪನಂದಂತೆ “ಆರಂಕುಸಮಿಟ್ಟೊಡೇಮ್ ನೆನವುದೆನ್ನ ಮನಂ ಬನವಾಸಿ ದೇಶಮಂ”, ಎನ್ನುವ ತೆರದಿ ನನ್ನ ಮನಸ್ಸು ಈಗಲೂ ಧಾರವಾಡಕ್ಕೆ ಮರಳಲು ಇಚ್ಛಿಸುತ್ತದೆ.
ಐತಿಹಾಸಿಕ ಹಿನ್ನೆಲೆ:

ಧಾರವಾಡ ಎಂಬ ಹೆಸರು ಬರಲು ಹಲವಾರು ಕಾರಣಗಳಿವೆ. ದ್ವಾರ-ವಾಟ, ಅಂದರೆ ಬಯಲುಸೀಮೆಯಿಂದ ಮಲೆನಾಡಿನ ಬಾಗಿಲಿಗೆ (ದ್ವಾರ) ನಿಂತ ಊರು (ವಾಡ,ವಾಟ) ಎನ್ನುವುದು ಕೆಲವರ ಅಭಿಮತ. ಇತಿಹಾಸಕಾರರು 1403ರಲ್ಲಿ, ವಿಜಯನಗರದ ಸಾಮ್ರಾಜ್ಯದ ‘ಧಾರವ’ ಎಂಬ ಅರಸ ಧಾರವಾಡವನ್ನು ಆಳಿದ್ದರ ಉಲ್ಲೇಖವಿದೆ ಎನ್ನುತ್ತಾರೆ. ಅವನಿಂದಲೇ ಆ ಊರಿಗೆ ಆ ಹೆಸರು ಬಂತಂತೆ. ಆ ವರ್ಷದಲ್ಲೇ ಧಾರವಾಡದ ಕೋಟೆ (ಕಿಲ್ಲೆ) ನಿರ್ಮಾಣವಾಯಿತು. ನಂತರ ಅದು 1573ರಲ್ಲಿ, ವಿಜಾಪುರದ ಆದಿಲ್ ಷಾಹಾನ ಕೈವಶವಾಯಿತು. ಅದಾದ ನಂತರ ಧಾರವಾಡವು ಔರಂಗಜೇಬ, ಶಿವಾಜಿ, ಪೇಶ್ವೆ ಬಾಳಾಜಿರಾವ್, ಹೈದರಾಲಿ, ಟಿಪ್ಪು ನಂತರ ಬ್ರಿಟಿಷ್ ಸಾಮ್ರಾಜ್ಯ ಹೀಗೆ ಹಲವು ಹತ್ತು ಜನರ ಅಧಿಕಾರಕ್ಕೆ ಒಳಪಟ್ಟಿತು. ಬ್ರಿಟಿಷರ ವಿರುದ್ಧ ಹೋರಾಡಿದ ಉತ್ತರಕನ್ನಡ ಸ್ವಾತಂತ್ರ್ಯಯೋಧರಲ್ಲಿ, ನರಗುಂದದ ಬಾಬಾಸಾಹೇಬ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ಅಗ್ರಗಣ್ಯರು. 1956ರಲ್ಲಿ, ಭಾರತ ಸ್ವತಂತ್ರವಾದ ಬಳಿಕ ನಡೆದ ಭಾಷಾವಾರು ಪ್ರಾಂತಗಳ ರಚನೆಯ ಸಮಯದಲ್ಲಿ, ಧಾರವಾಡ ಮುಂಬಯಿ ಪ್ರೆಸಿಡೆನ್ಸಿಯಿಂದ ಬೇರ್ಪಟ್ಟು, ಕರ್ನಾಟಕ ರಾಜ್ಯಕ್ಕೆ ಸೇರಿತು.

ಮಲೆನಾಡು ಮತ್ತು ಬಯಲುಸೀಮೆಗಳ ನಡುವೆ ಬೆಟ್ಟಗುಡ್ಡಗಳ ನಡುವೆ ಕೂಡಿಕೊಂಡು, ಕೆಂಪು ಮತ್ತು ಕರಿಬಣ್ಣದ ಮಣ್ಣುಗಳ ಮಿಶ್ರಣದಿಂದ ಕೂಡಿದ ಧಾರವಾಡದಲ್ಲಿ, ಬೇಸಿಗೆಯ ಬಿಸಿಗಾಳಿ ಬೀಸಿದಾಗ ಕೆಂಪುಮಣ್ಣಿನ ಧೂಳು ಎಲ್ಲಕಡೆ ತುಂಬಿಕೊಳ್ಳುತ್ತದೆ. ಅದಕ್ಕೇ ಏನೋ ಅಲ್ಲಿನ ಜನ ಅದನ್ನು “ಧೂಳುವಾಡ” ಎಂದು ಗೇಲಿ ಮಾಡುವರು. ಆದರೂ ಸಮುದ್ರ ಪಾತಳಿಯಿಂದ 750 ಮೀಟರುಗಳ ಎತ್ತರದ ಮೇಲೆ ಇರುವುದರಿಂದ, ನನ್ನೂರಿನ ಹವಾಮಾನ ಸರ್ವೇಸಾಧಾರಣ ತಂಪಾಗಿಯೇ ಇರುವುದು. ಅದಕ್ಕೇನೇ ಇದು “ಛೋಟಾ-ಮಹಾಬಲೇಶ್ವರ”ಎಂದು ಪ್ರಸಿದ್ಧಿ (ಮರಾಠಿಯ ಪ್ರಭಾವ ನೋಡಿ!) ಏಳು ಸಣ್ಣ ಗುಡ್ಡಗಳು ಮತ್ತು (ನಾನು ಚಿಕ್ಕವನಿದ್ದಾಗ) ಹಲವಾರು ಕೆರೆಗಳಿಂದ ಆಕರ್ಷಿತವಾಗಿದ್ದು ’ನನ್ನ ತವರೂರು’ ಅನೇಕ ಕವಿಗಳಿಗೆ ಸ್ಫೂರ್ತಿ ಕೊಟ್ಟಿತ್ತು (‘ಅಂದ ತುಂಬಿತ್ತ ಹಾಲಗೇರಿ’… ದ.ರಾ.ಬೇಂದ್ರೆ).
ಸಂಸ್ಕೃತಿ:

ಧಾರವಾಡ ಸಂಗೀತ, ಕನ್ನಡ ಸಾಹಿತ್ಯ ಮತ್ತು ವಿದ್ಯಾವರ್ಧಕ ಸಂಸ್ಥೆಗಳಿಂದ ಜಗತ್ಪ್ರಸಿದ್ಧವಾಗಿದೆ. ಇನ್ನು ಧಾರವಾಡದ ಫೇಡೆ (ಲೈನ್ ಬಜಾರದ ಬಾಬೂ ಸಿಂಗನ ಫೇಡೆ), ನವಲೂರದ ಪೇರಲ ಹಣ್ಣುಗಳ ಸವಿ ಅದನ್ನು ತಿಂದವರಿಗೇ ಗೊತ್ತು. ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಧಾರವಾಡ ಮತ್ತು ಅದರ ಪರಿಸರಗಳು, ಅಗ್ರಸ್ಥಾನ ಪಡೆದಿವೆ. ಸವಾಯಿ ಗಂಧರ್ವ, ಪಂಡಿತ ಭೀಮಸೇನ ಜೋಶಿ, ಪಂಡಿತ ಮಲ್ಲಿಕಾರ್ಜುನ ಮನ್ಸೂರ, ಪಂಡಿತ ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಹಾಗೂ ಇತ್ತೀಚೆಗೆ ಜಯತೀರ್ಥ ಮೇವುಂಡಿ, ವೆಂಕಟೇಶ ಕುಮಾರ, ಕೈವಲ್ಯಕುಮಾರ ಗುರವ್, ಗೀತಾ ಜಾವಡೇಕರ್ ಮತ್ತು ಸಂಗೀತಾ ಕಟ್ಟಿ* ತಮ್ಮ ಪ್ರತಿಭೆ ಮತ್ತು ಪಾಂಡಿತ್ಯಗಳಿಂದ ಪ್ರಖ್ಯಾತರಾಗಿದ್ದಾರೆ. ಹಲವಾರು ಸುಪ್ರಸಿದ್ಧ ಮಹಾನುಭಾವರು ಧಾರವಾಡದಲ್ಲಿ ಜನ್ಮ ತಾಳಿದ್ದಾರೆ. ಪಾಲವಣಕರ ಬಾಲೂರು ದಲಿತ ಜಾತಿಯಲ್ಲಿ ಹುಟ್ಟಿ, ಕ್ರಿಕೆಟ್ ಆಡಿ, ದಲಿತರ ಏಳಿಗೆಗೆ ಶ್ರಮಿಸಿದ್ದವರು. ಶಿಶುನಾಳ ಶರೀಫ಼, ಸಿದ್ಧಾರೂಢ ಮಠದ ಸ್ವಾಮಿಗಳು ಧಾರವಾಡದ ನೆರೆಹೊರೆಯಲ್ಲಿದ್ದವರು. ದ.ರಾ.ಬೇಂದ್ರೆ, ವಿ.ಕೆ.ಗೋಕಾಕ, ಸಾಲಿ ರಾಮಚಂದ್ರರಾಯರು, ಗಿರೀಶ್ ಕಾರ್ನಾಡ್, ಹಿಂದಿ ಚಲನಚಿತ್ರದ ತಾರೆ ಲೀನಾ ಚಂದಾವರ್ಕರ್, ಶ್ರೀ. ಎಸ್.ಜಿ. ನಾಡಗೀರ್ (ನನ್ನ ನೆಚ್ಚಿನ ಗುರುಗಳು ಹಾಗೂ ತಮ್ಮ ಶಿಕ್ಷಣ ವೃತ್ತಿಯಲ್ಲಿ ಭಾರತದ ಅಧ್ಯಕ್ಷರ ಪದಕ ಗಳಿಸಿದವರು), ಪ್ರಸಿದ್ಧ ಮಾಹಿತಿ ಉದ್ಯಮ Infosys ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಸುಧಾ ಮೂರ್ತಿ ಮತ್ತು ನಂದನ್ ನೀಲೇಕಣಿಯವರು ಧಾರವಾಡಲ್ಲಿದ್ದು ನನ್ನೂರಿನ ಸ್ಥಾನ-ಮಾನಗಳನ್ನು ಜಗತ್ಪ್ರಸಿದ್ಧಿಗೊಳಿಸಿದ ಗಣ್ಯವ್ಯಕ್ತಿಗಳು.

ದ್ವಂದ್ವ:
ನನ್ನೂರಿನಲ್ಲಿ ಅನುಭವಿಸಿ ಆನಂದ ಪಟ್ಟ ಹಲವಾರು ಘಳಿಗೆಗಳನ್ನು ನೆನೆದಾಗ, “ಏನಪಾ, ನಾವು ಈ ಪರದೇಶಕ್ಕೆ ಯಾಕೆ ಬಂದೆವು? ಸುಮ್ಮನೆ ನನ್ನೂರಿನಲ್ಲಿಯೇ ಇದ್ದು ಧಾರವಾಡ ಫೇಡೆ, ನವಲೂರಿನ ಪೇರಲೆ ಹಣ್ಣು, ತುಟಿಯಿಂದ ತಿನ್ನುವ ಪ್ರಸಿದ್ಧ ಮಂಡಿಗೆ, ಆಪೂಸ್ ಮಾವಿನ ಹಣ್ಣು, ಹತ್ತಿಕೊಳ್ಳದ ಕವಳೇ ಹಣ್ಣು, ಅಜ್ಜನ ತೋಟದ ಪಾಡ ಹುಣಿಚೇಕಾಯಿ, ನೇರಲಹಣ್ಣು, ಸೀತಾಫಲಗಳನ್ನೆಲ್ಲಾ ತಿಂದು ಸವಿದು ಮನೆಯಲ್ಲಿನ ಟೆಂಗಿನ ನೀರು ಕುಡಿದು ಹಾಯಾಗಿ ಮುಪ್ಪಿನ ಕಾಲಹರಣ ಮಾಡಬಹುದಿತ್ತಲ್ಲಾ!” ಎಂಬ ವಿಚಾರ ಪದೇ ಪದೇ ಮನದಲ್ಲಿ ಬರುತ್ತಲೇ ಇರುವುವು. ಕೊನೆಗೆ ನನ್ನ ಪ್ರೀತಿಯ ತಾಯಿ ಹೇಳಿದಂತೆ “ಮಾಡಿದ್ದುಣ್ಣೋ ಮಹರಾಯ” ಎಂಬುದನ್ನೂ ನೆನೆದು, ಆಂಗ್ಲ ದೇಶದಲ್ಲಿಯೇ ಇದ್ದು ಇಲ್ಲಿಯ ಜೀವನದಲ್ಲಿ ಹಲವಾರು ಪರಿವರ್ತನೆಗಳನ್ನು ಅಳವಡಿಸಿಕೊಂಡು, ಸುಖ ದುಃಖಗಳ ತಕ್ಕಡಿಯ ಏರಿಳಿತವನ್ನುಂಡು ಉಳಿದ ಜೀವನದ ದಿನಗಳನ್ನು ಸಾರ್ಥಕಗೊಳಿಸಲು ಯತ್ನಿಸುತ್ತಿರುವೆ. ಆಕೆ ”ನೀನು ಎಲ್ಲಿಯೇ ಇರು, ಇದ್ದುದರಲ್ಲಿ ತೃಪ್ತಿ ಪಡೆದುಕೊಂಡು ಸುಖದಿಂದ ಇರು. ಗುರುಹಿರಿಯರ ಸಂಪ್ರದಾಯ, ಕನ್ನಡ ಭಾಷೆ ಮತ್ತು ಸಂಸ್ಕೃತಿಗಳನ್ನು ಎಂದೆಂದಿಗೂ ಮರೆಯಬೇಡ. ನಿನ್ನ ಮಕ್ಕಳು ಮೊಮ್ಮಕ್ಕಳಿಗೂ ಇದೇ ಮೂಲ, ಎಂದು ತಿಳಿಸಿ ಮನವರಿಕೆ ಮಾಡಿಕೊಡು, ಅಪಾ” ಎಂದು ಹೇಳಿದ್ದುದು ಇನ್ನೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ನನ್ನ ಬಾಲ್ಯದ ಸವಿನೆನಪುಗಳು
ಅದರ ಬಗ್ಗೆ ಸ್ವಲ್ಪ ತಿಳಿಸಲು ಇಚ್ಛಿಸುವೆ. ನನ್ನ ಅಜ್ಜನ (ತಾಯಿಯ ತಂದೆ) ಮನೆಯಲ್ಲಿಯೇ ಹುಟ್ಟಿ, ಬೆಳೆದು ದೊಡ್ಡವನಾದೆ. ಆಗ್ಗೆ ಧಾರವಾಡದಲ್ಲಿ ನೀರು ಮತ್ತು ವಿದ್ಯುಚ್ಛಕ್ತಿಗಳ ಅಭಾವವಿತ್ತು. ತಾಯಿಗೆ ಅಡುಗೆ ಮಾಡಲು ಗ್ಯಾಸ್ ಒಲೆ ಇರಲಿಲ್ಲ. ಹಲವು ವರ್ಷಗಳ ನಂತರ ಗ್ಯಾಸ್ ಒಲೆ ಬಂದರೂ, ಅದು ಆಕೆಯ ಮಡಿಗೆ ಸರಿ ಬರುತ್ತಿರಲಿಲ್ಲ. ಇದ್ದಿಲ ಒಲೆಯಲ್ಲಿ ಅನ್ನ, ಕಟ್ಟಿಗೆ ಒಲೆಯಲ್ಲಿ ಬಕ್ಕರಿ, ಚಪಾತಿ ಮತ್ತು ಪಲ್ಲೆಗಳನ್ನು ಮಾಡುತ್ತಿದ್ದಳು ಪ್ರತಿ ನಿತ್ಯ. ತಂದೆಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮೇಲೆ ಅತೀವವಾದ ವಿಶ್ವಾಸ, ಭಕ್ತಿ ಮತ್ತು ಶ್ರದ್ಧೆ. ಪ್ರತಿ ಗುರುವಾರ ಸಾಯಂಕಾಲ, ತಂದೆ ತಾಯಿಯರ ಉಪವಾಸ. ಆದರೆ ನಾವು ಐದು ಹುಡುಗರಿಗೆ ಆನಂದವೋ ಆನಂದ. ಹೊಟ್ಟೆ ತುಂಬ ’ಭಕ್ರಿ-ಪಲ್ಲೆ’ ತಿಂದರೂ, ತಂದೆತಾಯಿಯರೊಂದಿಗೆ ಪುನಃ ಉಪ್ಪಿಟ್ಟು, ಶಿರಾ ಅಥವಾ ಆಣದ ಅವಲಕ್ಕಿಗಳಿಗೆ (ಸಿಹಿ ಅವಲಕ್ಕಿ) ಕೈ ಮುಂದೆ ಮಾಡಿಕೊಂಡು ಸಾಲಾಗಿ ನಿಲ್ಲುತ್ತಿದ್ದೆವು. ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ನಾವು ಐದು ಮಕ್ಕಳು ಎದ್ದು, ಮನೆಗೆ ಬೇಕಾಗುವ ಬಳಕೆ ನೀರನ್ನು ಬಾವಿಯಿಂದ ಹಗ್ಗ-ಕೊಡಗಳನ್ನು ಬಳಸಿ ಜಗ್ಗಿ ತರುತ್ತಿದ್ದೆವು. ಬಾವಿಗೆ ರಾಟೆ ಇದ್ದರೂ ಗಂಡು ಮಕ್ಕಳಿಗೆ ಶಕ್ತಿ ಬರಲಿ ಎಂದೋ, ಅಥವಾ ಪಕ್ಕದ ಮನೆಯ ಸ್ನೇಹಿತೆಯ ಮನಸ್ಸನ್ನು ಆಕರ್ಷಿಸುವದಕ್ಕೋ, ಕೈಯಿಂದಲೇ ನೀರನ್ನು ಜಗ್ಗಿ ನಾನು ನನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದೆ! ಇಷ್ಟೆಲ್ಲಾ ಶ್ರಮ ಪಟ್ಟ ನಂತರ, ಹೊಟ್ಟೆಯಲ್ಲಿ ಕಾಗವ್ವನ ಕೂಗು; ಕೆಟ್ಟ ಹಸಿವೆ. ಇದನ್ನು ಪರಿಹರಿಸಲು, ಅಜ್ಜನ ಬತ್ತದ ಗದ್ದೆಯಿಂದ ಬಂದ, ದೊಡ್ಡ ಅಕ್ಕಿಯ ಅವಲಕ್ಕಿ ತಿನ್ನುವ ಪ್ರೋಗ್ರಾಮು. ದೊಡ್ಡ ಪರಾತದ ತುಂಬ ಅವಲಕ್ಕಿ ಹಾಕಿ, ಮೆಂತೆ ಮೆಣಸಿನಕಾಯಿ ಒಗ್ಗರಣೆ ಹಾಕಿ, ಚಟ್ಣಿಪುಡಿ, ಉಪ್ಪು ಮತ್ತು ಉಳ್ಳಾಗಡ್ಡಿ ಬೆರಸಿ ಹೊಟ್ಟೆ ತುಂಬಾ ತಿಂದು, ಎಮ್ಮೆ ಹಾಲಿನ ಗಟ್ಟಿ ಚಹಾ ಕುಡಿದು ತೇಗಿದಾಗಲೇ ಹೊಟ್ಟೆ ಶಾಂತವಾಗುತ್ತಿತ್ತು. ತಿನ್ನುವಾಗ್ಗೆ ನಾವು ಐದು ಮಕ್ಕಳೂ ಪರಾತದ ಮುಂದೆಯೇ ಕುಳಿರುತ್ತಿದ್ದೆವು. “ಅಣ್ಣಾ ನೀನು ನಾವಿಬ್ಬರು ತಿನ್ನೂ ತನಕ ತಟ್ಟೆಗೆ ಕೈಹಾಕಬೇಡ ನೋಡು. ನಿನ್ನ ಕೈ ಭೀಮಸೇನನ ಕೈ ಹಾಗೆ. ನೀನು ಮೊದಲೇ ತಿಂದ್ರ, ನಮಗೇನೂ ಉಳಿಸೋದಿಲ್ಲ ನೋಡು” ಎಂದು ಚಿಕ್ಕ ತಂಗಿಯರು ಹಿರಿಯಣ್ಣನಿಗೆ ಸದಾ ತಕರಾರು ಮಾಡುತ್ತಿದ್ದರು. ನನ್ನ ತಾಯಿ ಅಜ್ಜಿಯರು ಸದಾ ಅಂತಃಕರಣ ಪ್ರೀತಿಗಳಿಂದ, ವಿವಿಧ ಅಡುಗೆ ಪದಾರ್ಥ, ತಿಂಡಿತಿನಿಸುಗಳನ್ನು ಹಲವಾರು ಬಾರಿ ಕೈತುತ್ತು ಹಾಕಿದಾಗಲೇ ನಮ್ಮ ಹೊಟ್ಟೆ ಹಿಗ್ಗುತ್ತಿತ್ತು. ಎಷ್ಟು ತಿಂದೆವೋ ಎಂಬುದು

ಗೊತ್ತಾಗುತ್ತಿರಲಿಲ್ಲ! ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ, ನೆರೆಹೊರೆಯ ಬಂಧು ಬಳಗ ಮತ್ತು ಮಿತ್ರರೊಂದಿಗೆ ಬೆಳದಿಂಗಳ ಪಂಕ್ತಿ ಮಾಡುತ್ತಿದ್ದೆವು. ಎಲ್ಲರೂ ಆನಂದ ಉತ್ಸಾಹಗಳಿಂದ, ಬಗೆಬಗೆಯ ವಿಶಿಷ್ಟವಾದ ತಿಂಡಿತಿನಿಸುಗಳನ್ನು ಹಂಚಿತಿಂದು ಉಂಡು ನಲಿದಾಡುತ್ತಿದ್ದೆವು. ಈಗಲೂ ಆ ಸವಿನೆನಪುಗಳು ಮರಳಿ ಬರುತ್ತಿರುತ್ತವೆ. ಇಲ್ಲಿಯೂ ಕೂಡಾ ಇಂತಹ ಮನಸ್ಸನ್ನು ಆನಂದಪಡಿಸುವ, ಪಂಕ್ತಿ ಕಾರ್ಯಕ್ರಮಗಳನ್ನು ನಮ್ಮ ಕನ್ನಡದ ಕುಟುಂಬದವರೆಲ್ಲಾ ಸೇರಿ ಏಕೆ ನೆರವೇರಿಸಬಾರದು? ಎಂದು ಮನಸ್ಸು ತವಕಿಸುತ್ತದೆ.
ನನ್ನ ಬಾಲ್ಯದ ಸ್ನೇಹಿತರ ಬಗ್ಗೆ ಈ ಲೇಖನದಲ್ಲಿ ಬರೆಯಲೇ ಬೇಕು ಎಂದು ನನ್ನ ಮನಸ್ಸು ಹೇಳುತ್ತಲೇ ಇದೆ. 1956ರ ನನ್ನ S.S.L.C ಬ್ಯಾಚಿನ ಗೆಳೆಯರೆಲ್ಲಾ ಒಂದೇ ಸ್ಥಳದಲ್ಲಿ ಸೇರಿಕೊಂಡು, ಪ್ರತಿ ವರ್ಷ ಧಾರವಾಡದಲ್ಲಿ ಈಗಲೂ Get-Together ಕಾರ್ಯಕ್ರಮವನ್ನು ನಡೆಸಿಕೊಂಡೇ ಬರುತ್ತಿದ್ದೇವೆ. ಆಗ ಹಾಳು-ಹರಟೆ, ಸುಖ-ದುಃಖಗಳನ್ನು ನಮ್ಮ ಧಾರವಾಡದ ಭಾಷೆಯಲ್ಲಿ ಹೇಳಿ ಕೊಂಡು ಎಲ್ಲರೂ ಆನಂದ ಪಡುತ್ತೇವೆ. ಒಬ್ಬರಿಗೊಬ್ಬರು ತಾರತಮ್ಯವಿಲ್ಲದೇ ಏಕವಚನದಲ್ಲಿ, ಅವರವರ ’nickname’ ನಿಂದಲೇ ಸಂಬೋಧನೆ. ಉದಾ: ಅರ್ವ್ಯಾ (ಅರವಿಂದ-ನಾನು), ವ್ಹಾಘ್ಯಾ (ನರಸಿಂಹ–ವ್ಯಾಘ್ರ ಹೋಗಿ ವ್ಹಾಘ್ಯಾ), ಹೊಸ್ಕ್ಯಾ (ಹೊಸಕೇರಿ), ಸಂಪಿಗ್ಯಾ (ಸಂಪಿಗೆ ರಮೇಶ), ನಾನ್ಯಾ (ನಾರಾಯಣ) ಯಾತ್ಯಾ (ಯಾತಿಗೆರಿ) ಇತ್ಯಾದಿ.
ಇನ್ನು ಬೈಗುಳಗಳ ಸುರಿಮಳೆ: ”ಯಾಕ್ಲೇ ಮಗನ್ಯೇ, ನಿನಗೇನು ಧಾಡಿ ಆಗಿತ್ತು?” ಇಂಥದೇ ಸಂಭಾಷಣೆಗಳು. ನಮ್ಮ ಬ್ಯಾಚಿನ ಮುಕ್ಕಾಲು ಗೆಳೆಯರೆಲ್ಲಾ ನಮ್ಮನ್ನು ಅಗಲಿ ಹೋಗಿರುವುದು ವಿಷಾದಕರ. ಆದರೂ ಉಳಿದ ಗೆಳೆಯರ ಉತ್ಸಾಹ ಮತ್ತು ಅಭಿಮಾನ ಬಲು ಶ್ಲಾಘನೀಯವಾದದ್ದು. ಸೇರಿದಾಗಲೆಲ್ಲಾ “ನೋಡು ಅರ್ವ್ಯಾ (ನಾನು), ನೀನು KMC ಯಲ್ಲಿ ಇದ್ದಾಗ ಕ್ರಿಕೆಟ್ ಮ್ಯಾಚಿನಾಗ ಸೆಂಚುರಿ ಹೊಡೆದದ್ದು ನೆನಪದ. ನಮ್ಮಲ್ಲಿ ನಿನ್ನ ಹೊರತಾಗಿ ಯಾರೂ ಡಾಕ್ಟರುಗಳು ಉಳಿದಿಲ್ಲ. ಅದಕ ನೀನ ಇನ್ನೊಮ್ಮೆ ಸೆಂಚುರಿ ಹೊಡೆದುಬಿಡು. ಆಗ ನಮ್ಮ ಪೈಕಿ ಯಾರು ಉಳಿತಾರೋ ದೇವರೇ ಕಾಣೆ” ಎಂದು ನನ್ನ ಸ್ನೇಹಿತರೆಲ್ಲ ಕುಚೇಷ್ಟೆ ಮಾಡುತ್ತಲೇ ಇರುತ್ತಾರೆ. ಇಂಥ ಎಲ್ಲಾ ಸ್ನೇಹಿತರನ್ನು ಪಡೆದ ನಾನು ಭಾಗ್ಯಶಾಲಿಯೇ ಸರಿ ಎಂದು ಕೊಳ್ಳುತ್ತೇನೆ. ಬರುವ ಡಿಸೆಂಬರದಲ್ಲಿ ನಾವು ಪುನಃ ನಮ್ಮ ಈ ಸಮ್ಮಿಲನದ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದು ಅಷ್ಟರಲ್ಲಿ ಮತ್ತೆ ಎಷ್ಟು ವಿಕೆಟ್ ಬೀಳುವುದರಲ್ಲಿವೆಯೋ!
ಇದೇ ನನ್ನೂರು ಧಾರವಾಡ.
ಅರವಿಂದ ಕುಲಕರ್ಣಿ, (ಈಗ ರಾಡಲೆಟ್, ಹಾರ್ಟ್ಫ಼ೋರ್ಡಶೈರ್, ಯು.ಕೆ. ವಾಸಿ)
*ಸಂಗೀತಾ ಕಟ್ಟಿಯವರು 2011ರಲ್ಲಿ ನಮ್ಮ ಕನ್ನಡ ಬಳಗದ ಅತಿಥಿಯಾಗಿ ಬಂದಾಗ ಕಾರ್ಡಿಪ್ಹ್ ನಲ್ಲಿ ಕೊಟ್ಟ ಸಂದರ್ಶನದ ವಿಡಿಯೋ ಇಲ್ಲಿ ನೋಡಿರಿ: https://www.youtube.com/watch?v=ozWfv9iUTBQ
DakshayaNiyarige,
Tumba dhanyavaadagaLu. Nimma samanjaSa ,Sookta pratikriyegaLinda nannalli sooptavada hummasa punaha chigarodeyuttide. Nimma prothsaahana ,heegeye munduvareyali yendu aashe.
Aravind
LikeLike
ಕುಲಕರ್ಣಿಯವರೇ, ಮನಸ್ಸನ್ನು ತಟ್ಟುವಂತ ಲೇಖನ. ಓದಿದ ತಕ್ಷಣ ಈ ಶೀತ ನಾಡನ್ನು ಬಿಟ್ಟೆದ್ದು ಧಾರವಾಡಕ್ಕೆ ಹೋಗಿ ಭಕ್ಕರಿ ಊಟ ಮಾಡುವ ಆಸೆಯಾಯಿತು. ಈ ನಗರದ ಹೆಸರು ಕೇಳಿದಾಗೆಲ್ಲ ನೆನಪಿಗೆ ಬರುವುದು ಕನ್ನ್ನಡದ ಹೆಸರಾಂತ ಬರಹಗಾರರು ಮತ್ತು ಗಾಯಕರು. ನಿಮ್ಮ ನೆನಪಿನ ಈ ಊರು ಬದಲಾಗದೆ ತನ್ನತನವನ್ನು ಉಳಿಸಿಕೊಳ್ಳಲೆಂದು ಹಾರೈಸುವೆ.
ದಾಕ್ಷಾಯಣಿ
LikeLike
Premalatarige avarige,
DhanyavadagaLu.Nimma pratikriye odi anandavayitu. Houdu, neevu neevedisuddu satya. Ittichige Dr.Kalburgi avar haadi hagale , dharwadadalli kole maDiddudannu navellaru keLi ,kolegaararu hiriya sahityakaararannallade, Kannada sahityatyavannu kooDa kondiruvaru. eedu yaarigoo sahisadadudagide.
Eegina prapanchadalli, yelli noDidalli ,raajakiya,jaati bhedhabhav ,adhikaar prabhutwategaLinda hahaahal,kolluvadu jaariyalli iddidu vshaadakara.
Aravind
LikeLike
ಅರವಿಂದರವರೆ,
ಧಾರವಾಡದ ಬಗ್ಗೆ ಬರೆದ ನಿಮಗೆ ಧನ್ಯವಾದಗಳು. ಧಾರವಾಡವಿಲ್ಲದೆ ಕರ್ನಾಟಕ ಪೂರ್ಣವಲ್ಲ.
ಶೈಕ್ಶಣಿಕತೆಗೆ,ಕಲೆಗೆ ಪ್ರಸಿದ್ದವಾದ ಧಾರವಾಡದಲ್ಲಿ ಗುಂಡು/ ಕೊಲೆಗಳ ಸುದ್ದಿ ನಾನು ಅಮೆರಿಕಾ ಪ್ರವಾಸದಲ್ಲಿರುವಾಗಲೇ ತಿಳಿದು ದಂಗಾಗಿ ಹೋದೆ. ಕಾಲದ ಮಹಿಮೆಯನ್ನು, ಆಟವನ್ನು ನಿಮ್ಮ ಲೇಖನ ಹೇಳುತ್ತಿರುವಂತೆ ಕರ್ನಾಟಕದಲ್ಲಿ ಈ ಬಗೆಯ ಬೆಳವಣಿಗೆ ಖೇದ ಹುಟ್ಟಿಸಿತು.
ತವರು ನಾಡಿಗೆ ಮರಳಲು ಎಲ್ಲ ಅನುಕೂಲಗಳಿದ್ದು ಮರಳಲಾಗದೆ ಅಥವಾ ಅಲ್ಲಿಯ ಬದಲಾವಣೆಗಳನ್ನು ಒಪ್ಪಲಾಗದೆ ನಾನು ಅದೆಶ್ಟು ಪರಿತಪಿಸುವೆನೊ ಗೊತ್ತಿಲ್ಲ.
ಅಲ್ಲಿಯೇ ಇದ್ದಿದ್ದರೆ ಬರಿ ಒಂದೇ ಕೊರಗಿರುತ್ತಿತ್ತೇನೋ ಆದರೆ ಈ ಬಗೆಯ ಪರಿತಾಪ ಅಥವಾ ದ್ವಂದ್ವ ಪ್ರತಿ ಮರುಗಳಿಗೆ ಕಾಡುತ್ತಿರಲಿಲ್ಲವೇನೋ ಎಂದು ನನಗು ಅನಿಸುತ್ತದೆ.
ಮತ್ತೆ ಬರೆಯಿರಿ. ಆಂಗ್ಲ ಭಾಶೆಯಲ್ಲಾದರೂ ಪರವಾಗಿಲ್ಲ.
LikeLike
ಮಾನ್ಯ ಅರವಿಂದ್ ಅವರೆ
ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗು ಸಾಹಿತ್ಯಿಕ ಕೇಂದ್ರಬಿಂದುವಾದ ನಿಮ್ಮ ಹೆಮ್ಮೆಯ ಧಾರವಾಡದ ಕಿರುಪರಿಚಯಕ್ಕಾಗಿ ಧನ್ಯವಾದಗಳು . ನೀವು ನಿಮ್ಮ ಹಿಂದಿನ ದಿನಗಳ ಸವಿನೆನಪುಗಳನ್ನು ಪ್ರಸ್ತಾಪಿಸುವುದರ ಮೂಲಕ ಒಂದು ವೈಯುಕ್ತಿಕ ಕೋನವನ್ನು ಲೇಖನದಲ್ಲಿ ಒದಗಿಸಿದ್ದೀರಿ. ಸಜ್ಜನರು, ವಿಚಾರವಂತರು, ನೆಲಸಿದ ಪ್ರಶಾಂತ ಧಾರವಾಡದಲ್ಲಿ ಇತ್ತಿಚಿಗೆ ಒಬ್ಬ ಖ್ಯಾತ ಸಾಹಿತಿ, ವಿದ್ವಾಂಸರ ಕಗ್ಗೊಲೆ ಧಾರವಾಡದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಧಾರವಾಡದ ಸಾಮಾನ್ಯರಿಗೆ ಬಹಳ ಅಸಮಧಾನವಾದ ಸಂಗತಿಯಾಗಿರಬಹುದು. ತಮ್ಮ ಚೊಚ್ಚಲ ಲೇಖನ ಚೊಕ್ಕವಾಗಿದೆ
LikeLike
Prasad avare,
DhanyavaadagaLu. Nimma samanjasa pratikriye nanage heCChige preraNe tanruttalide. KSSVV pragatiparadalli munduvareyuttiruvadu. Yella Shramisittiruva sadassiyarigella krutajnate.
Aravind
LikeLike
ಅರವಿಂದ್ ಅವರೇ, ನೀವು ಲೇಖನದಲ್ಲಿ ಬರೆದಿರುವ ನಿಮ್ಮ ಹುಟ್ಟುವರ್ಷದ ಸಂಖೆ ತಪ್ಪಿರಬಹುದು, ಅಥವ ನಾನು ಅದನ್ನು ತಪ್ಪಾಗಿ ಓದಿರಬಹುದು.
-ರಾಜಾರಾಮ ಕಾವಳೆ.
LikeLike
ಕಡೆಗೂ ಅರವಿಂದರು ಭರ್ಜರಿ ಲೇಖನದೊಂದಿಗೆ ತಮ್ಮ ಬ್ಯಾಟಿಂಗ್ ಆರಂಭಿಸಿದ್ದಾರೆ.ಚೆನ್ನಾದ ಲೇಖನ.
LikeLike
Sudarshana avare,
tumba DhnyavadagLu. , nanage cricketdalliya huchu nanna koneya ghaLigeya varege uLiyali yendi ashisuve. Eegaladru beLigye 3 ghantege yeddu yella cricket aatagaLannu noDi hiChanante kuNidaduttiruve! Eedarondige jeevanda batting dalli 75 runs tegedu yella kutumbadavarondige beratu anandapaDuttiruve.
Aravind
LikeLike
Dear Rajaram,
I did say at the end of 1930 in my article, it ought to have been precise year 1939. This I clarified by saying 75 not out jokingly in my reply to Sudarshana.
You are quite right in pointing out. Thanks.
Aravind
LikeLike
ಅರವಿಂದ್ ಅವರೆ, ನಾನು ಧಾರವಾಡದಲ್ಲಿ ಹುಟ್ಟಿ ಬೆಳೆಯದಿದ್ದರೂ, ನನ್ನ ಡಾಕ್ಟರೇಟ್ ಪದವಿಯ ೫ ಉತ್ತಮ ವರ್ಷಗಳನ್ನು ಧಾರವಾಡದಲ್ಲಿ ಕಳೆದಿದ್ದೇನೆ. ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ವಾಸವಿದ್ದ ನನಗೆ ಈಗಲೂ ಅಲ್ಲಿಯ ಗೆಳೆಯರು ನನ್ನ ಹೃದಯಕ್ಕೆ ಹತ್ತಿರದವರು. ನೀವು ಹೇಳಿದ ನವಿಲೂರಿನ ಪೇರಳೆ, ಲೈನ್ ಬಜಾರದ ಸಿಂಗನ ಧಾರವಾಡದ ಫೇಡೆ, ಕಡಲೆ ಸೊಪ್ಪನ್ನು ಮನಸಾರೆ ಸವಿದಿದ್ದೇನೆ. ಮಲ್ಲಿಕಾರ್ಜುನ ಮನ್ಸೂರ್ ಅವರ ಮಗ, ಗಿರಡ್ಡಿ ಗೋವಿಂದ ರಾಜ ಇವರೆನ್ನೆಲ್ಲಾ ಮುಖತಃ ಭೇಟಿಮಾಡಿದ್ದೇನೆ. ವಿದ್ಯಾಗಿರಿಯ ಜೆ.ಎಸ್.ಎಸ್ ಕಾಲೇಜಿನಲ್ಲಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡುವಾಗ ನನ್ನೊಡನೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ನನಗೆ ಅಚ್ಚುಮೆಚ್ಚಾಗಿದ್ದ ದಿನಗಳನ್ನು ಈಗಲೂ ಸ್ಮರಿಸುತ್ತೇನೆ. ನಿಮ್ಮ ಲೇಖನ ಮತ್ತೊಮ್ಮೆನನ್ನ ಸವಿನೆನಪುಗಳನ್ನು ಮೆಲಕು ಹಾಕುವಂತೆ ಪ್ರೇರೇಪಿಸಿದೆ. ನಿಮ್ಮ ಉತ್ಸಾಹಕ್ಕೆ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ಕನ್ನಡದ ಬರಹವನ್ನು ಮುಂದುವರೆಸಿ, ನಮ್ಮ ವೇದಿಕೆಗೆ ಮತ್ತಷ್ಟು ಕಳೆಗಟ್ಟಿಸಿ.
ಉಮಾ ವೆಂಕಟೇಶ್
LikeLike
Uma avare, neevadaru nanna nechina uralli kelavu kala kaLedu sukh pattaddannu odi anandavayitu. Nimma hagu Shrivatsara preraNe,salahe,maargadarshangaLindale ee nanna lekhana roopisitu. Tumba manahpoorvaka dhanyavaadagaLu.
Aravind
LikeLike
ಅರವಿಂದರಿಗೆ ಅಭಿನಂದನೆಗಳು. ‘ನನ್ನೂರಿನ’ (ನಾನು ಹುಟ್ಟಿದ್ದೂ ಧಾರವಾಡದಲ್ಲೇ) ಬಗ್ಗೆ ಸುಂದರವಾಗಿ ಬರೆದಿದ್ದಾರೆ. ”ಎಲಾ, ಇವನ, ನನ್ನೂರನ್ನ ಕಸ್ಗೊಳ್ಳಲಿಕ್ಕೆ ಬಂದ್ಯಾ?” ಎಂದು ಅಚ್ಚ ಧಾರವಾಡ ಭಾಷೆಯಲ್ಲಿ (ಅದರ ಸೊಗಡನ್ನು ಬಣ್ಣಿಸಲು ಈ ಮೈಸೂರು ಕನ್ನಡವೇ ಬೇಕು!) ನೀವನ್ನುವ ಮೊದಲೇ ನನ್ನ ಹಕ್ಕನ್ನು ಕಳೆದು ಕೊಂಡಂತೆ ಈಗಾಗಲೇ ಈ ಸರಣಿಯಲ್ಲಿ 29-8-2014ರಲ್ಲಿ ಊಟಿಯ ಬಗ್ಗೆ ಬರೆದಿದ್ದೇನೆ. http://wp.me/s4jn5J-ooty . ನಾನು ತುoಟಬಾಲದ ಮಂಗ್ಯಾತನದ ಬಾಲ್ಯದ ಪೂರ್ವಾರ್ಧವನ್ನು ತಮಿಳು ನಾಡಿನಲ್ಲಿ ಕಳೆದದ್ದರಿಂದ ಎಸ್ ಪ್ಯಾ (ಎಸ ಪಿ ದೇಸಾಯಿ) ಎನ್ನಿಸಿಕೊಳ್ಳಲಾಗಲಿಲ್ಲ! ಆಣದ ಅವಲಕ್ಕಿ ಊಟಿಯಲ್ಲಿ ಸಿಗದಿದ್ದರೂ ತಾಯಿಯ ಮೊಸರನ್ನದ ಕೈತುತ್ತಿನಲ್ಲಿ ಕನ್ನಡದ ಸಿಹಿಯನ್ನೇ ಉoಡಿದ್ದೇನೆ. ಮಿಡಲ್ ಸ್ಕೂಲ್ ಟೈಮಿಗೆ ನಿಮ್ಮದೇ ಶಾಲೆಯಲ್ಲಿ ಭರ್ತಿ. ಅದೇ ನಾಡಗೀರ ಮಾಸ್ತರರ ಸ್ಫೂರ್ತಿ. ಕಲ್ಲು ಕೆಂಪು ಮಣ್ಣಿನ ಬಯಲಿನಲ್ಲಿ (hockey)’ಹಾಕ್ಯಾಟ’ವಾಡಿದ ನಮ್ಮೆಲ್ಲರನ್ನು ಕಟೆದು ರೂಪಕೊಟ್ಟವರು ಅವರು. ಈಗ ಎಪ್ಪತ್ತರ ಹೊಸ್ತಿಲಲ್ಲಿದ್ದೇನೆಯಾದರೂ ‘ಆರು ದಶಕ ಬಿಟ್ಟರೂ ನೆನೆವುದೆನ್ನ ಮನಂ ಶಾಲ್ಮಲಿ (ನದಿ) ದೇಶಮಂ’ ಎಂದು ನಲಿದಾಡುತ್ತಿರುವೆ! ಕರ್ನಾಟಕ ಕಾಲೇಜಿನ ‘ಬೆಲ್ಲಿನ’ ಕೂಗಳತೆಯಲ್ಲಿ ನಮ್ಮನೆ. ‘ಮನೀoದ ಎಡವಿ ಬಿದ್ರ ಕಾಲೇಜು’. ಅದರ ಕೆಂಪು ಮಣ್ಣಾಗ ಎಡವಿ ಬಿದ್ದು ಹೊರಳಾಡಿದ್ದುoಟು. ಇವೆಲ್ಲವುಗಳ ನೆನಪಿನ ಬುತ್ತಿಯನ್ನುಣಿಸಿದ್ದಕ್ಕೆ ಚಿರಋಣಿ. ಈ ಸರಣಿ ಯತಾರ್ಥವಾಗಿ ಅನಿವಾಸಿಗಳ ಮನಸ್ಸನ್ನು ಕಲುಕಿದ್ದರಲ್ಲಿ ಸಂದೇಹವಿಲ್ಲ. ಅದು ಅದರ ಉದ್ದೇಶದ ಸಾಫಲ್ಯವೂ ಅಹುದು. ಇನ್ನು ಮುಂದೆಯೂ ಬೇರೆಯವರು ಬರೆದಾರು. ನೀವೂ ಬರೆಯುತ್ತಿರಿ.
LikeLike
Dear Shrivarsa,
Thanks for your positive response. I certainly stole the idea of writing about our common home town(Nannuru) Dharwad. But your response with your own childhood experiences at Dharwad has put icing on the cake.
I wish to express my heartfelt gratitude to you and dear Uma for giving me inspiration,guidance and editing for my maiden article for our Anivaasi.
Aravind
LikeLike
ಮಾನ್ಯ ಅರವಿಂದ ಕುಲಕರ್ಣಿಯವರೇ,
ನಿಮ್ಮ ’ಚೊಚ್ಚಲು’ ಲೇಖನ ’ನನ್ನೂರು ಧಾರವಾಡ’ ಬಹು ಸ್ವಾರಸ್ಯವಾಗಿದೆ. ಅದರ ಐತಿಹಾಸಿಕ ಹಿನ್ನೆಲೆ, ಮಲೆನಾಡು, ಬೆಟ್ಟಗುಡ್ಡಗಳನ್ನು ಒಳಗೊಂಡ ಆ ಬಯಲು ಸೀಮೆಯ ಸ್ವಾಭಾವಿಕ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವರ್ಣಿಸಿದ್ದೀರಿ. ಆ ಊರಿನ ಪ್ರಸಿದ್ದವಾದ ಸಾಹಿತಿಗಳ, ಸಂಗೀತ ವಿದ್ವಾಂಸರ ಅಲ್ಲದೆ ತಮ್ಮ ಬಾಲ್ಯದ ಜೀವನ ಮತ್ತು ಸ್ನೇಹಿತರ ನೆನಪುಗಳನ್ನು ಸವಿಯುತ್ತಾ ಐದು ದಶಕಗಳ ಜೀವನವನ್ನು ಈ ಪರದೇಶದಲ್ಲಿ ಕಳೆಯುತ್ತಿದ್ದರೂ ತಾವು ಅನಿವಾಸಿ ಕನ್ನಡಿಗರಾಗಿರುವುದರಿಂದ ತಮಗೆ ದ್ವಂದ್ವ ಮನಸ್ಸಿರುವುದು ಸಹಜ. ನನ್ನ ಹಳೆಯ ಲೇಖನದಲ್ಲಿ (ಮನೆಯ ಉಪ್ಪಿನಕಾಯಿ) ನಾನು ಹೇಳಿದಹಾಗೆ, ’ನಾವು ಯಾವ ಮನೆಯಲ್ಲಿ ಮತ್ತು ಊರಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸಿ ಅವರ ಆಟಪಾಠಗಳಲ್ಲಿ ಭಾಗವಹಿಸಿ ನಮ್ಮ ಜೀವನವನ್ನು ಕಳೆಯುವೆವೋ ಆ ಊರೇ ನಮ್ಮ ಊರಾಗುವುದು. ಅದು ನಮ್ಮ ಬಾಲ್ಯದ ಊರೇ ಆಗಿರಬೇಕಿಲ್ಲ. ನಮ್ಮ ಆ ’ಬಾಲ್ಯದ ಊರು’ ನಾವು ಬೇರೆ ದೇಶದಲ್ಲಿ ಅನೇಕ ವರ್ಷಗಳನ್ನು ಕಳೆದರೂಕೂಡ ಅದು ನಮ್ಮ ಮನಸ್ಸಿನಲ್ಲಿ ಉನ್ನತಗೊಂಡು ಬೆಳೆಯುತ್ತಲೇ ಇರುತ್ತದೆ. ಆದುದರಿಂದ ನಮ್ಮ ಮನಸ್ಸಿನಲ್ಲಿ ವಿರೋಧಭಾವಗಳು ಉದಯಿಸಿ ’ದ್ವಂದ್ವ’ ಮನಸ್ಸು ಬರುವುದರಲ್ಲಿ ಆಶ್ಚರ್ಯವಿಲ್ಲ.
ತಮ್ಮ ಲೇಖನವನ್ನು ಓದಿ ನನಗೂ ನನಗೂ ’ಗೃಹವೇದನೆ’ ಬಂದಿತು.
– ರಾಜಾರಾಮ ಕಾವಳೆ
LikeLike
Dear Rajaram,
Thanks for your prompt response. I have tried to portray some of my most memorable childhood memories in this article.
Please forgive me if I replied to you in English as I have yet to learn how to use word press. I welcome any mentors from our Anivasi members.
LikeLike