ಭಾವ

ಸುಂದರ ಬದುಕಿನ ಹಲವು ಮುಖಗಳಲ್ಲಿ ಒಸರುವ ಸ್ವಾರಸ್ಯಗಳನ್ನು ಎಂದಿನಂತೆ ತಮ್ಮ ಲೇಖನಿಯಿಂದ ಹರಿಸಿದ್ದಾರೆ ಸುದರ್ಶನ್:

 

ಮಗುವಿನ ಜೊಚ್ಚಿಲ ಅಳುವನು ಕೇಳುತ

ತಾಯಿಯು ಹರಿಸಿದ ಬಾಷ್ಪ೦ಗಳಲ್ಲಿ

ಹಸಿವನು ಅಳಿಸುತ ನೋವನು ಮರೆಸುತ

ಸಲಹುವ ತಾಯಿಯ ವಾತ್ಸಲ್ಯದಲಿ

 

ತಾಯಿಯ ಪ್ರೀತಿಯ ಸಾರವ ಸವಿಯುತ

ಬೆಳೆಯುವ ಕಂದನ ಮನದಾಳದಲಿ

ಮಕ್ಕಳ ಕನಸನು ನನಸನು ಮಾಡಲು

ದುಡಿಯುವ ತಂದೆಯ ಕೈ ಕಸುವಿನಲಿ

 

ವಿದ್ಯೆಯ ಕಲಿಸಿದ ಗುರುವನು ನೆನೆಯುತ

ಬೆಳೆಯುವ ಶಿಷ್ಯನ ಗುರು ಭಕುತಿಯಲಿ

ತನ್ನನೆ ಮೀರಿಪ ಶಿಷ್ಯನ ಏಳಿಗೆ

ಕಾಣುವ ಗುರುವಿನ ಸಾರ್ಥಕ್ಯದಲಿ

 

ಮನವನು ಮನೆಯನು ಅನುದಿನ ಬೆಳಗುವ

ಮಡದಿಯ ಕೈಬಳೆ ನಿನಾದದಲಿ

ಪ್ರತಿಫಲ ಬಯಸದೆ ಪ್ರೀತಿಯ ತೋರುವ

ನಿಜರೂಪದ ಸಿಹಿ ಗೆಳೆತನದಲ್ಲಿ

 

ವಿಧ ವಿಧ ಬಗೆಯಲಿ ವಿಧ ವಿಧ ರೂಪದಿ

ಒಳಗೂ ಹೊರಗೂ ತೋರುತಲಿರುವ

ಜೀವರ ನಡುವಿನ ಬೆಸುಗೆಯ ಬೆಸೆಯುತ

ತನ್ಮಯ ಲೋಕಕೆ ತಳ್ಳುತಲಿರುವ

 

ಕಾಣುವೆ ಅನುದಿನ ಕಾಣುವೆ ಪ್ರತಿಕ್ಷಣ

ಇರದಿರಲದು ಬರಿ ಬರಡೇ ಜೀವನ

ಏನಿದು,ಏನಿದು, ಏನಿದು ಜೀವ?

ಬಾಳನು ಸುಂದರ ಮಾಡಿದ ಭಾವ!

 

                                            .ಸುದರ್ಶನ ಗುರುರಾಜರಾವ್ 

 

 

4 thoughts on “ಭಾವ

  1. ಏನಿದು ಜೀವ? ಎಂದು ಮೂರು ಮೂರು ಸಲ ಕೇಳಿದರೂ ಒಂದೇ ಉತ್ತರವಿದೆಯಿಲ್ಲಿ. ಒಮ್ಮೆ ಕೇಳಿ ಮೂರು ಸಲ ಭಾವ x 3 ಎಂದು ಉತ್ತರ ಕೊಡುವ ಭಾವಪೂರ್ಣ ಕವಿತೆ, ಸುಂದರವಾಗಿ ಬಂದಿದೆ.

    Like

  2. Sudarshanarige, Dhanyavadagalu. Nimma yee kavan dalli yella nitya jeevanada naija bhavanegalannu chennagi rupisiruviri. Yeedannu odida yellarigu manassu higgalu saku.
    Aravind

    Like

  3. ಭಾವನೆಗಳಿಲ್ಲದಿದ್ದಲ್ಲಿ ಬದುಕುಂಟೆ?
    ಸವಿ ಭಾವನೆಗಳಲ್ಲಿನ ಸಾರ್ಥೈಕ್ಯಕ್ಕೆ ಎಣೆಯುಂಟೆ?
    ಸುಂದರವಾದ ಭಾವಗಳಿರುವ ಕವನ. ತುಂಬ ಚೆನ್ನಾಗಿದೆ. ಹಾಡುಗಾರರ ಕೈಗೆ ಸಿಕ್ಕಲ್ಲಿ, ಸುಂದರ ಗೀತೆಯಾಗಬಹುದು.

    Like

Leave a comment

This site uses Akismet to reduce spam. Learn how your comment data is processed.