ಮ್ಯಾಸಿಡೋನಿಯಾದ ಬಂದರು ಪಟ್ಟಣ- ಥೆಸ್ಸಲೋನಿಕಿ (Thessaloniki)

 

ಉಮಾ ಅನಿವಾಸಿಯ ಜೀವನಾಡಿ. ಪ್ರಪಂಚ ಸುತ್ತಿದ ಅನುಭವ ಅವರದು. ಹೊಸ ಜಾಗವನ್ನು ತಾವು ನೊಡಿದ್ದಲ್ಲದೇ, ಅನಿವಾಸಿಯ ಓದುಗರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿ ಉಣಿಸುವ ಜಾಯಮಾನ ಅವರದ್ದು. ಗ್ರೀಸ್ ದೇಶ ಇಂದಿನ ಜನಾಂಗಕ್ಕೆ ಸಮುದ್ರ ತಡಿಯ ಅನುಭವಕ್ಕೆ; ಸುತ್ತ ಹರಡಿರುವ ನೀಲ ಮೆಡಿಟರೇನಿಯನ್ ಸಮುದ್ರದಲ್ಲಿನ ದ್ವೀಪ ಸಮೂಹಗಳಿಗೆ ಪ್ರಸಿದ್ಧಿ. ನಮಗೆಲ್ಲ ಅಲೆಕ್ಸಾಂಡರ್, ಆರ್ಕಿಮಿಡಿಸ್ ಅವರಂಥ ವಿಶ್ವ ವಿಖ್ಯಾತ ವ್ಯಕ್ತಿಗಳಿಂದ ಪರಿಚಯ. ಸೂಕ್ತವಾಗಿ, ಚಕ್ರವರ್ತಿ ಅಲೆಕ್ಸಾಂಡರ್ ನ ಜನ್ಮಸ್ಥಳವನ್ನು ಸಂದರ್ಶಿಸಿ ಗತ ವೈಭವನ್ನು ಮೆಲಕು ಹಾಕುತ್ತ, ಸಧ್ಯದ ಪರಿಸ್ಥಿತಿಯನ್ನು ಈ ಲೇಖನದಲ್ಲಿ ಮನೋಜ್ಞವಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ…

ಅಲೆಕ್ಸಾಂಡರನ ಪ್ರತಿಮೆ
ಅಲೆಕ್ಸಾಂಡರನ ಪ್ರತಿಮೆ

ಅಲೆಕ್ಸಾಂಡರ್ ಚಕ್ರವರ್ತಿ ಅಲ್ಲೆಲ್ಲೋ ಬರುತ್ತಿದ್ದಾನಂತೆ ಎಂದು ಕೇಳಿದಾಕ್ಷಣವೇ, ನಮ್ಮಲ್ಲಿದ್ದ ರಾಜರು ಹೆದರಿ ಶರಣಾಗತರಾಗುತ್ತಿದ್ದರಂತೆ ಎಂದು ನಮ್ಮ ತಾಯಿ ಚಿಕ್ಕಂದಿನಲ್ಲಿ ನಮಗೆ ಹೇಳಿದ್ದ ಮಾತುಗಳು ಕಿವಿಯಲ್ಲೇ ಗುನುಗುತ್ತಿದೆಯೇನೋ ಅನ್ನಿಸುತ್ತದೆ. ಭಾರತದಲ್ಲಿದ್ದ ಎಲ್ಲಾ ರಾಜರೂ ಅವನಿಗೆ ಹೆದರಿ ತಲೆಬಗ್ಗಿಸಿದ್ದಾಗ, ನಮ್ಮಲ್ಲಿದ್ದ ಒಬ್ಬ ರಾಜ ಪೌರಸ್ ತನ್ನ ಆತ್ಮಾಭಿಮಾನದಿಂದಲೇ ಅವನನ್ನು ಗೆದ್ದಿದ್ದ ಪ್ರಸಂಗವನ್ನು ಕುರಿತಾಗಿ, ನಮ್ಮ ಕನ್ನಡ ಪಠ್ಯ ಪುಸ್ತಕದಲ್ಲಿ ನಮಗಿದ್ದ ಒಂದು ನಾಟಕದ ನೆನಪಾಗುತ್ತದೆ. ಪ್ರಪಂಚದ ಅತ್ಯಂತ ಮಹತ್ವಾಕಾಂಕ್ಷಿ ಸಾಮ್ರಾಟರಲ್ಲಿ ಒಬ್ಬನಾದ ಮಹಾನ್ ಗ್ರೀಕ್ ಯೋಧ ಅಲೆಕ್ಸಾಂಡರನ ಹೆಸರನ್ನು ಕೇಳದವರಾರು? ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿಯೇ ತಂದೆಯ ಕೊಲೆಯಾದನಂತರ, ಸಾಮ್ರಾಜ್ಯದ ಹೊಣೆಯನ್ನು ತನ್ನ ಕೈಗೆತ್ತಿಕೊಂಡ ಅವನ ಶೌರ್ಯಪರಾಕ್ರಮಗಳ ಬಗ್ಗೆ, ಅವನು ಭಾರತಕ್ಕೆ ದಂಡೆತ್ತಿ ಬಂದ ರೀತಿ ಎಲ್ಲವೂ ಒಂದು ಅದ್ಭುತವಾದ ಚಾರಿತ್ರಿಕ ಸಂಗತಿ.

 

ಈ ಪರಾಕ್ರಮಿಯ ಜನ್ಮಸ್ಥಾನವಾದ ಥೆಸ್ಸಲೋನಿಕಿ ಪಟ್ಟಣಕ್ಕೆ ಭೇಟಿ ನೀಡುವ ಅವಕಾಶವೊಂದು ಕಳೆದ ವಾರ ನನಗೆ ಲಭ್ಯವಾಯಿತು. Displaying DSC_0050.JPGಸಧ್ಯದಲ್ಲಿ ಜರ್ಮನಿಯ ರಾಜಧಾನಿ ಬರ್ಲಿನ್ನಿನಲ್ಲಿ ವಾಸ್ತವ್ಯ ಹೋಡಿರುವ ನಮಗೆ, ಇದೊಂದು ಅಪರೂಪವಾದ ಅವಕಾಶವೆನ್ನಿಸಿತ್ತು. ಸರಿ, ಬರ್ಲಿನ್ನಿನ ಶೋನೆಫ಼ೆಲ್ಡ್ ವಿಮಾನ ನಿಲ್ದಾಣದಿಂದ ಬಡ್ಜೆಟ್ ವಾಯುಯಾನ ಕಂಪನಿ ಈಸಿ-ಜೆಟ್ ವಿಮಾನದಲ್ಲಿ, ಸುಮಾರು ೨ ಗಂಟೆಗಳ ಸುಲಭವಾದ ಪ್ರಯಾಣದ ನಂತರ, ನಾವು ಥೆಸ್ಸಲೋನಿಕಿಯ ಮಾಕೆಡೋನಾ ವಿಮಾನ ನಿಲ್ದಾಣದಲ್ಲಿ ಇಳಿದೆವು. ಕ್ರಿ.ಪೂ. ೩೧೫ ಅಂದರೆ ಸುಮಾರು ೩,೩೩೦ ವರ್ಷಗಳ ಇತಿಹಾಸವಿರುವ, ಮ್ಯಾಸಿಡೋನಿಯಾ ಪ್ರಾಂತ್ಯದ ಈ ಪಟ್ಟಣವನ್ನು, ಸುಂದರವಾದ ಪರ್ವತ ಮಾಲೆಗಳು ಆಗ್ನೇಯ ದಿಕ್ಕಿನಲ್ಲಿ ಆವರಿಸಿದ್ದರೆ, ಇದರ ಪೂರ್ವಕ್ಕೆ ಏಜಿಯನ್ ಸಮುದ್ರವಿದೆ. ಮೌಂಟ್ ಒಲಿಂಪಸ್ ಪರ್ವತವೇ ಇಲ್ಲಿನ ಅತ್ಯಂತ ಎತ್ತರವಾದ ಶೃಂಗ. ವಿಮಾನ ನಿಲ್ದಾನದಿಂದ ಸುಮಾರು ೨೫ ನಿಮಿಷಗಳ ದೂರದಲ್ಲಿರುವ ಥೆಸ್ಸಲೋನಿಕಿ ಪಟ್ಟಣ, ಹತ್ತಿರವಾದಂತೆ ಅಲ್ಲಿನ ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ಕಠಿಣತೆಯನ್ನು ನಮಗೆ ಪರಿಚಯಿಸಿತು. ರಸ್ತೆಗಳ ಬದಿಯಲ್ಲಿ ಶೇಖರವಾಗಿದ್ದ ಕಸದ ಡಬ್ಬಗಳು, ಗೀರು-ಬರಹಗಳಿಂದ ತುಂಬಿ ಹೋದ ಗೋಡೆಗಳು, ಅವ್ಯವಸ್ಥೆಯ ವಾಹನಸಂದಣಿ, ಅಲ್ಲಲ್ಲೇ ಕಾಣಬರುವ ಬಡ ಭಿಕ್ಷುಕರು ಇದಕ್ಕೆ ಸಾಕ್ಷಿಯಾಗಿದ್ದವು. ಬಿಬಿಸಿ ಕೃಪೆಯಿಂದ ಗ್ರೀಕಿನ ಹಣಕಾಸಿನ ತೊಡಕಿನ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿರುವ ಕಾರಣ, ಈ ದೃಶ್ಯಗಳು ಆಘಾತಕಾರಿಯಾಗಿರಲಿಲ್ಲ.

 

ಥೆಸ್ಸಲೋನಿಕಿಯ ಉತ್ತಮ ಅಪಾರ್ಟಮೆಂಟ್ ಹೋಟೆಲಿನಲ್ಲಿ ತಂಗಿದ್ದ ನಮಗೆ, ಊಟ-ತಿಂಡಿಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಪ್ರಸಂಗ ಬರಲಿಲ್ಲ. ಮೆಡಿಟರೇನಿಯನ್ ರೀತಿಯ ಆಹಾರ ಸೇವನೆಯಿರುವ ಗ್ರೀಸಿನಲ್ಲಿ, ಉತ್ತಮ ಗುಣಮಟ್ಟದ ಸಸ್ಯಾಹಾರ ದೊರೆಯುತ್ತದೆ. ಹಣ್ಣಹಂಪಲು ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುವ ಈ ದೇಶದಲ್ಲಿ, ಸಸ್ಯಾಹಾರಿಗಳು ಯಾವ ತೊಂದರೆಯನ್ನೂ ಎದುರಿಸಬೇಕಿಲ್ಲ. ಎಲ್ಲೆಲ್ಲೂ ಕೆಂಪು ಬಿಳಿ ಕಣಿಗಿಲೆ ಗಿಡಗಳು ಹುಲುಸಾಗಿ ಬೆಳೆದು ನಿಂತ ಇಲ್ಲಿಯ ಉದ್ಯಾನವನಗಳು ಮತ್ತು ರಸ್ತೆಯ ಬದಿಗಳು ಕಣ್ಣನ್ನು ತಂಪುಗೊಳಿಸುತ್ತವೆ. ಪಟ್ಟಣದ ಒಂದು ಬದಿಗೆ ವಿಸ್ತಾರವಾಗಿ ಹರಡಿರುವ, ನಸುಹಸಿರು ಬಣ್ಣದ ಏಜಿಯನ್ ಸಮುದ್ರದ ಮುಂದೆ ನಡೆದಾಡುವ ಅನುಭವ ನಿಜಕ್ಕೂ ಆನಂದಮಯವೆನ್ನಿಸಿತು. ಈ ಸಮುದ್ರತಡಿಯ ಒಂದು ತುದಿಯಲ್ಲಿರುವ ಬಂದರಿನಿಂದ, ಮತ್ತೊಂದು ತುದಿಗೆ ಸುಮಾರು ೫ ಕಿಲೋಮೀಟರುಗಳ ದೂರವಿದೆ. ಥೆಸ್ಸಲೋನಿಕೆಯ ಉತ್ತಮ ಹೋಟೆಲುಗಳ ಸಾಲೇ ಇರುವ ಮತ್ತೊಂದು ಬದಿ, ಜನಗಳಿಂದ ತುಂಬಿ ಗಿಜಿಗುಟ್ಟುತ್ತಿರುತ್ತದೆ. ರಸ್ತೆಯ ಉದ್ದಕ್ಕೂ ತುಂಬಿರುವ ವಿವಿಧ ರೀತಿಯ ಉಪಹಾರಗೃಹಗಳಲ್ಲಿ ಕುಳಿತು ಹರಟೆಹೊಡೆಯುವ ಇಲ್ಲಿನ ಯುವಜನತೆಯ ಕೈಯಲ್ಲಿ, ಹೊಗೆಯಾಡುವ ಸಿಗರೇಟನ್ನು ನೋಡಿ ನನಗೆ ಸ್ವಲ್ಪ ನಿರಾಸೆಯೆನಿಸಿತು. ಗಂಡಸರಷ್ಟೇ ಸಂಖ್ಯೆಯ ಹೆಂಗಸರೂ ಕೂಡಾ ನಿರಾಳವಾಗಿ ಧೂಮಪಾನ ನಡೆಸಿದ್ದರು. ಬಹುಶಃ ಗ್ರೀಸಿನ ಜನತೆ ಮತ್ತು ಸರ್ಕಾರ ಸಾರ್ವಜನಿಕ ಧೂಮಪಾನದ ಹಾನಿಯ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

 

ಸಮುದ್ರದ ದಂಡೆಯ ಉದ್ದಕ್ಕೂ ನಡೆಯುತ್ತಾ ನಡೆದ ನನಗೆ, ಪಾದಚಾರಿಗಳ ಜೊತೆಗೆ ಸೈಕಲ್ ಸವಾರರ ದಂಡೇ ಇದ್ದದ್ದು ಕಂಡುಬಂತು. ಇತ್ತೀಚೆಗೆ ಯುರೋಪಿನ ದೇಶಗಳಲ್ಲಿ (ಅದರಲ್ಲೂ ಹಾಲೆಂಡ್ ಮತ್ತು ಜರ್ಮನಿ), ಸೈಕಲ್ ಸವಾರಿ ಬಹಳ ಜನಪ್ರಿಯವಾಗುತ್ತಿದೆ. ಉತ್ತಮ ದೇಹದಾರ್ಢ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಪರಿಸರವನ್ನೂ ಕಾಪಾಡಬಹುದಾದ ಇಲ್ಲಿನ ಜನಗಳ ಮನೋಭಾವ ನಿಜಕ್ಕೂ ಶ್ಲಾಘನೀಯ. ಈ ಚಾರಿತ್ರಿಕ ನಗರವು ನ್ಯಾಶನಲ್ ಜಿಯಾಗ್ರಫಿ ಮ್ಯಾಗಝೀನ್ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರವಾಸಿಗರ ಆಯ್ಕೆಯ ಅತ್ಯುತ್ತಮ ಪಟ್ಟಣಗಳಲ್ಲಿ ಒಂದು ಎಂದು ತಿಳಿದು ಬರುತ್ತದೆ. ಇದೇನೂ ಆಶ್ಚರ್ಯದ ವಿಷಯವಲ್ಲ. ಸುಮಾರು 2,500 ವರ್ಷಗಳ ಇತಿಹಾಸವಿರುವ ಈ ನಗರದಲ್ಲಿ, ರೋಮನ್, ಬೈಝಂಟೈನ್, ಆಟ್ಟೋಮಾನ್ ಸಾಮ್ರಾಜ್ಯದ ವೈಭವಗಳ ಗುರುತನ್ನು ಧಾರಾಳವಾಗಿ ಕಾಣಬಹುದು. ಈ ಸಾಮ್ರಾಜ್ಯಗಳ ಸಾರ್ವಭೌಮರು ನಿರ್ಮಿಸಿರುವ ಅದ್ಭುತ ಸ್ಮಾರಕಗಳು, ಇಂದಿಗೂ UNESCO ವಿಶ್ವ ಪರಂಪರೆಯ ತಾಣಗಳಾಗಿ ನಿಂತು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸಾರ್ವಭೌಮ ಅಲೆಕ್ಸಾಂಡರನ ಮಲಸಹೋದರಿ ಥೆಸ್ಸಲೋನಿಕೆಯ ಹೆಸರಿನಿಂದ ಕರೆಯಲ್ಪಡುವ ಈ ನಗರದ ಹೆಸರಿಗೆ, “ವಿಜಯ” ಎನ್ನುವ ಅರ್ಥವೂ ಇದೆ. ಭೂಗರ್ಭದ ನ್ಯೂನತೆಯ ರೇಖೆಯಲ್ಲಿರುವ ಈ ಪ್ರದೇಶ, ಭೂಕಂಪಗಳಿಂದ ಪೀಡಿತವಾಗಿದ್ದು, ಅದರ ಪರಿಣಾಮಗಳನ್ನು ಇಲ್ಲಿನ ಕಟ್ಟಡಗಳಲ್ಲಿ ಕಾಣಬಹುದು.

 

Displaying DSC_0034.JPGಸಮುದ್ರದ ದಂಡೆಯಲ್ಲಿ ನಡೆಯುತ್ತಾ ಸಾಗಿದ್ದ ನನಗೆ, ಇಲ್ಲಿನ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾದ White Tower, ಅಥವಾ ಶ್ವೇತ ಗೋಪುರ ಕಾಣಿಸಿತು. ೧೨ಯ ಶತಮಾನದಲ್ಲಿ, ಇಲ್ಲಿಯ ಬಂದರನ್ನು ಭದ್ರಪಡಿಸುವ ಉದ್ದೇಶದಿಂದ, ಆಟ್ಟೋಮಾನ್ ರಾಜರಿಂದ ನಿರ್ಮಿಸಲ್ಪಟ್ಟ ಈ ಗೋಪುರವು, ಮುಂದೆ ಒಂದು ಕುಖ್ಯಾತ ಸೆರೆಮನೆಯಾಯಿತಲ್ಲದೇ, ಆಟ್ಟೋಮಾನ್ ರಾಜರ ಸಮಯದಲ್ಲಿ ಸಾಮೂಹಿಕ ಹತ್ಯೆಗಳ ಸ್ಥಳವಾಗಿತ್ತು. ಸುಣ್ಣದ ಬಿಳಿಯ ಬಣ್ಣದಿಂದ ಬಳಿಯಲ್ಪಟ್ಟಿರುವ ಈ ಗೋಪುರವನ್ನು, ಇಂದು ಈ ಪಟ್ಟಣದ ಲಾಂಛನವನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಪ್ರವಾಸಿಗರಿಂದ ಕಿಕ್ಕಿರಿದಿದ್ದ ಇಲ್ಲಿ, ಹಲವು ಛಾಯಾಚಿತ್ರಗಳನ್ನು ಕ್ಲಿಕ್ಕಿಸಲು ಸ್ವಲ್ಪ ಪರದಾಡಬೇಕಾಯಿತು. ನಗರದ ಇನ್ನೂ ಹಲವಾರು ಸುಂದರ ಮತ್ತು ಭವ್ಯವಾದ ಕಟ್ಟಡಗಳನ್ನು ಇಲ್ಲಿಂದ ಕಾಣಬಹುದಾಗಿದೆ. ಅಲ್ಲಲ್ಲೇ ಇರುವ ಉದ್ಯಾನವನಗಳಲ್ಲಿ ಅರಳಿನಿಂತ ರೋಡೋಡೆಂಡ್ರಾನ್ ಪುಷ್ಪಗಳು, ಕಣ್ಸೂರೆಗೊಳ್ಳುವಂತಿದ್ದವು. ಹಕ್ಕಿಗಳ ಕಲರವ, ಅದರಲ್ಲೂ ಗಿಣಿಗಳ ಧ್ವನಿಕೇಳಿ, ನನ್ನೂರು ಮೈಸೂರಿನ ನೆನಪಾಯಿತು. ಸಮುದ್ರದಲ್ಲಿ ಸದ್ದಿಲ್ಲದೇ ಸಾಗಿದ್ದ ಹಲವಾರು ಹಡಗುಗಳು, ಎಲ್ಲರ ಗಮನವನ್ನೂ ಸೆಳೆದಿದ್ದವು. ಅಲ್ಲಿಂದ ಸ್ವಲ್ಪ ಮುಂದೆ ಸಾಗುತ್ತಾ ನಡೆದಾಗ ಮತ್ತೊಂದು ಪ್ರವಾಸಿಗರ ಆಕರ್ಷಣೆ ನನ್ನ ಕಣ್ಸೆಳೆಯಿತು. ಗ್ರೀಕ್ ಸಾರ್ವಭೌಮ, ಮಹಾನ್ ಯೋಧ ಅಲೆಕ್ಸಾಂಡರ್ ಚಕ್ರವರ್ತಿಯು, ಕುದುರೆಯ ಮೇಲೆ ಕುಳಿತ ಕರಿಶಿಲೆಯ ದೊಡ್ಡ ಪ್ರತಿಮೆಯನ್ನು ನೋಡಿ ನನ್ನ ಮನಸ್ಸು, ಈಗ ಕೆಲವು ವರ್ಷಗಳ ಹಿಂದೆ ನೋಡಿದ್ದ, ಅಲೆಕ್ಸಾಂಡರನ ಜೀವನವನ್ನು ಆಧಾರಿಸಿ ತೆಗೆದ ಹಾಲಿವುಡ್ಡಿನ ಚಲನಚಿತ್ರವನ್ನು ನೆನೆಯಿತು. ಮಹಾನ್ ದಾರ್ಶನಿಕ, ಚಿಂತಕ, ವಿಜ್ಞಾನಿ ಹೀಗೆ ಹಲವು ಹತ್ತು ವಿಷಯಗಳ ಮಹಾವಿದ್ವಾಂಸನಾಗಿದ್ದ ಅರಿಸ್ಟಾಟಲನಂತಹ ಮಹಾಮೇಧಾವಿಯ ಶಿಷ್ಯನಾದ ಈ ಚಕ್ರವರ್ತಿಯ ಜೀವನದ ಸಾಹಸಗಾಥೆ ನಿಜಕ್ಕೂ ಆಸಕ್ತಿಪೂರ್ಣ. ಒಬ್ಬ ಮಹತ್ವಾಕಾಂಕ್ಷಿಯಾಗಿದ್ದ ಈ ಚಕ್ರವರ್ತಿ, ಪ್ರಪಂಚದ ಚರಿತ್ರೆಯಲ್ಲಿ ಇಂತಹ ದೊಡ್ಡ ಸ್ಥಾನವನ್ನು ಗಳಿಸಿ, ಜನಗಳ ಮನದಲ್ಲಿ ಚಿರಂತನವಾಗಿ ನಿಲ್ಲುವಂತೆ ಮಾಡಿದ ಅವನ ಸಾಹಸಮಯ ಜೀವನ ಬಹುಶಃ ನಭೂತೋ ನಭವಿಷ್ಯತಿ ಎನ್ನುವಂತಿದೆ. ಆದರೆ ಇಂದು ಗ್ರೀಸ್ ದೇಶದಲ್ಲಿರುವ ನೂರಾರು ಸಮಸ್ಯೆಗಳು, ಅಲ್ಲಿನ ಯುವಜನತೆ ನಿರುದ್ಯೋಗವನ್ನು ಎದುರಿಸಿ ನಡೆಸುತ್ತಿರುವ ಹೋರಾಟ, ಇತರ ದೇಶಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿಯನ್ನು ನೋಡಿದರೆ, ಅವರಿಗೆ ಅಲೆಕ್ಸಾಂಡರನಂತಹ ಸಾಹಸ ಪುರುಷನ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲ ಎನ್ನಿಸುತ್ತದೆ. ಕೆಲವೊಮ್ಮೆ ಚರಿತ್ರೆಯ ಗತವೈಭವಗಳು, ಪ್ರಸಕ್ತ ಸಮಸ್ಯೆಗಳಿಗೆ ಯಾವ ಪರಿಹಾರವನ್ನೂ ಒದಗಿಸಲು ಅಸಮರ್ಥವಾಗುತ್ತವೆ.

 

Displaying DSC_0210.JPGನಗರದ ಮಧ್ಯಭಾಗವು ಸಾರ್ವಜನಿಕ ಕಚೇರಿಗಳ ಕಟ್ಟಡಗಳು, ಚಾರಿತ್ರಿಕ ಸ್ಥಳಗಳು, ಅಂಗಡಿಗಳು, ಮಾರುಕಟ್ಟೆಗಳು, ಚೌಕಗಳಿಂದ ತುಂಬಿದೆ. ಅರಿಸ್ಟಾಟಲನ ಹೆಸರಿನಿಂದ ಕರೆಯಲ್ಪಡುವ ಭಾರಿ ಚೌಕದ ಸುತ್ತಮುತ್ತಾ, ಭಾರಿ ಜನಸಂದಣಿಯಿದ್ದು, ನಗರದ ಜೀವಾಳವೇ ಇದಾಗಿದೆ. ಸಮುದ್ರದ ದಂಡೆಯಲ್ಲಿ ನಡೆದಿದ್ದಂತೆಯೇ, ಅಲ್ಲೇ ಇದ್ದ ಉಪಹಾರಗೃಹದೊಳಗಿದ್ದ ಚೆಲುವಾದ ಕೊಳದಲ್ಲಿ ಅರಳಿ ನಿಂತ ನೈದಿಲೆ ಪುಷ್ಪಗಳು ನನ್ನ ಕಣ್ಸೆಳೆದವು. ಹತ್ತಿರ ಹೋಗಿ ಅವುಗಳ ಚೆಲುವನ್ನು ಸವಿದು ಅವುಗಳ ಚಿತ್ರವನ್ನು ನನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸುತ್ತಿದ್ದಾಗ, “ನೀರಿಗೆ ನೈದಿಲೆ ಶೃಂಗಾರ” ಎನ್ನುವ ಬಸವಣ್ಣನವರ ವಚನದ ಸಾಲುಗಳಲ್ಲಿ ಎಂತಹ ಸತ್ಯವಿದೆ ಎಂದೆನಿಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲೇ ನಡೆದಾಡಿದ ನನ್ನ ಮನ, ಮರುದಿನ ನಾವು ಭೇಟಿ ನೀಡಲಿದ್ದ ಮತ್ತೊಂದು ಚಾರಿತ್ರಿಕ ಸ್ಥಳದ ಬಗ್ಗೆ ಯೋಚಿಸುತ್ತಿತ್ತು.

 

Sikandar, 1941, Sohrab Modi.jpgಮರುದಿನ ಥೆಸ್ಸಲೋನಿಕಿಯ ಅರಿಸ್ಟಾಟಲ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದವರು, ಅಲೆಕ್ಸಾಂಡರ್ ಚಕ್ರವರ್ತಿಯ ತಂದೆ ಎರಡನೆಯ ಫಿಲಿಪ್, ಮತ್ತು ಅಲೆಕ್ಸಾಂಡರನ ಮಗನ ಸಮಾಧಿಗಳಿರುವ, ಒಂದು ಪ್ರಸಿದ್ಧ ಪುರಾತತ್ವದ ಸ್ಥಳಕ್ಕೆ ಸಣ್ಣ ಪ್ರವಾಸವನ್ನೇರ್ಪಡಿಸಿದ್ದರು. Vergina the Archaeological Site of Aigai, ಎಂಬ ಹೆಸರಿನ ಈ ಜಾಗವು UNESCO ಜಾಗತಿಕ ಪರಂಪರೆಯ ಒಂದು ತಾಣವಾಗಿದ್ದು, ಇದು ಥೆಸ್ಸಲೋನಿಕಿಯಿಂದ ಸುಮಾರು ೯೦ ಕಿಲೋಮಿಟರುಗಳ ದೂರದಲ್ಲಿದೆ. ಕ್ರಿ.ಪೂ. ೧೧ನೆಯ ಶತಮಾನದ ರಾಜಮನೆತನದ ಸಮಾಧಿಗಳನ್ನು ಹೊಂದಿರುವ ಈ ಸ್ಥಳವು, ಯೂರೋಪಿಯನ್ ನಾಗರೀಕತೆಯ ಬೆಳವಣಿಗೆಗೆ ಒಂದು ಅಸಾಧಾರಣ ಪುರಾವೆಯಾಗಿದ್ದು, ಶಾಸ್ತ್ರೀಯ ನಗರಸ್ಥಿತಿಯಿಂದ, ಸಾಮ್ರಾಜ್ಯಶಾಹಿ ರಚನೆಗಳಾದ ರೋಮನ್ ಅವಧಿಗಳಿಗೆ ಪರಿವರ್ತಿತವಾದ ಸಮಯವನ್ನು ಪ್ರತಿನಿಧಿಸುವ ಒಂದು ಮಹೋನ್ನತ ಸಾರ್ವತ್ರಿಕ ಮೌಲ್ಯದ ಸ್ಥಳವಾಗಿದೆ. ವೆರ್ಗೀನಾ ಎಂಬ ಆಧುನಿಕ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು, ೧೯೭೭ರಲ್ಲಿDisplaying DSC_0035.JPG ಸಾರ್ವಭೌಮ ಅಲೆಕ್ಸಾಂಡರನ ತಂದೆ, ಮ್ಯಾಸಿಡೋನಿಯಾದ ಫಿಲಿಪನ ಸಮಾಧಿಯನ್ನು ಅನ್ವೇಷಿಸಿದಾಗ ಪ್ರಸಿದ್ಧಿಯಾಯಿತು. ಈ ಸಮಾಧಿಯಿರುವ ದಿಬ್ಬವು ಹೊರಗಿನಿಂದ ಆಕರ್ಷಕವೆನಿಸದಿದ್ದರೂ, ಒಮ್ಮೆ ಒಳಹೊಕ್ಕು ನೋಡಿದಾಗ, ಮೋಡಿಮಾಡುತ್ತದೆ. ೧೯೩೭ರಲ್ಲಿ ಪ್ರಾರಂಭವಾದ ಇಲ್ಲಿನ ಉತ್ಖನನಗಳು, ೧೯೭೭ರಲ್ಲಿ ಫಿಲಿಪ್ ಮತ್ತು ಅವನ ಮೊಮ್ಮಗನ ಸಮಾಧಿಗಳನ್ನು ಹೊರತೆಗೆದಾಗ ಪ್ರಸಿದ್ಧಿಯಾದವು. ಕ್ರಿ.ಪೂ ೩೩೬ ಅಕ್ಟೋಬರ್ ತಿಂಗಳಲ್ಲಿ, ನಾಟಕಮಂದಿರದಲ್ಲಿ, ತನ್ನ ರಕ್ಷಣಾದಳದ ಸಿಪಾಯಿಯ ಕೈಯಲ್ಲೇ ಹತನಾದ ಫಿಲಿಪ್, ಒಳಗಿನ ಪಿತೂರಿಗೆ ಬಲಿಯಾಗಿದ್ದನೆಂದು ತಿಳಿದುಬರುತ್ತದೆ.ಈ ರಾಜಸಮಾಧಿಗಳ ಕೋಣೆಗಳಲ್ಲಿ ಕಂಡುಬಂದಿರುವ ವಸ್ತುಗಳು, ನೋಡುಗರನ್ನು ಮತ್ತೊಂದು ಲೋಕ ಮತ್ತು ಸಮಯಕ್ಕೆ ಕೊಂಡೊಯ್ಯುತ್ತವೆ. ರಾಜನ ಉಡುಪುಗಳು, ಚಿನ್ನಾಭರಣಗಳು, ಪಾತ್ರೆಪರಟಿಗಳು, ವರ್ಣರಂಜಿತ ಗಿಲಾವುಗಳು (Frescos), ದಂತದ ಸಾಮಾನುಗಳು, ಯುದ್ಧದ ಪರಿಕರಗಳು, ಅಂದಿನ ನಾಗರೀಕತೆಯ ಉತ್ಕೃಷ್ಟತೆಯನ್ನು ಎತ್ತಿಹಿಡಿಯುತ್ತವೆ. ಈ ಸಮಾಧಿಗಳ ಒಳಗೆ ಛಾಯಾಚಿತ್ರಗಳನ್ನು ತೆಗೆಯಲು ಅನುಮತಿಯಿಲ್ಲ. ಆದರೂ ಸಹಾ, ನಮ್ಮ ಕಣ್ಣುಗಳು ಸೆರೆಹಿಡಿದ ಚಿತ್ರಗಳನ್ನು, ನಮ್ಮ ಮನ ಶಾಶ್ವತವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಯಿತು ಎನ್ನುವುದರಲ್ಲಿ ಸಂದೇಹವೇ ಇಲ್ಲ. ನಮ್ಮೊಡನಿದ್ದ ಮಾರ್ಗದರ್ಶಿ ಈ ಸ್ಥಳದ ಬಗ್ಗೆ ಎಲ್ಲಾ ವಿಷಯಗಳನ್ನು ಬಹಳ ವಿವರವಾಗಿ, ನಿರರ್ಗಳವಾಗಿ ಹೇಳುತ್ತಿದ್ದ ರೀತಿ ನಮ್ಮನ್ನೆಲ್ಲಾ ಗ್ರೀಸ್ ಚರಿತ್ರೆಯನ್ನು ಮತ್ತೊಮ್ಮೆ ಓದಿ ನೋಡಲು ಪ್ರೇರೇಪಿಸಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಲೇ ಬೇಕಾಗಿಲ್ಲ. ಕೊನೆಯಲ್ಲಿ ಆಕೆ ಅಲ್ಲಿನ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಂಶೋಧಕಿ ಎಂದು ತಿಳಿದು ಬಂದಾಗ, ಆಕೆಯ ಜ್ಞಾನದ ಬಗ್ಗೆ ನಮ್ಮ ಗೌರವ ಇಮ್ಮಡಿಯಾಯಿತು.

 

ಮಾರನೆಯ ದಿನ ಅಲ್ಲಿನ ಸ್ಥಳಿಯ ರೆಸ್ಟೋರೆಂಟ್ ಒಂದರಲ್ಲಿ ಮದ್ಯಾನ್ಹದ ಭೋಜನ ಮಾಡಿ, ಸ್ಥಳೀಯ ಖಾದ್ಯಗಳ (ಸಸ್ಯಾಹಾರ) ಸವಿಯನ್ನೂ ಸವಿದೆವು. ಆಲೀವ್ ಎಣ್ಣೆಯಲ್ಲಿ ಹುರಿದ ತರಕಾರಿಗಳು, ಬೇಯಿಸಿದ ಕಾಳಿನ ಜೊತೆಗೆ ಸೇರಿಸಿದ ಅನ್ನ, ಸೊಪ್ಪು, ಹೀಗೆ ಹಲವಾರು ವಿಧದ ಸ್ವಾದಿಷ್ಟವಾದ ಭೋಜನ ನಮ್ಮ ಮನಸ್ಸನ್ನು, ಹೊಟ್ಟೆಯನ್ನು ಸಂತೃಪ್ತಿಗೊಳಿಸಿತು. ಹೀಗೆ ಸಂಸ್ಕೃತಿ, ಪರಂಪರೆ, ಇತಿಹಾಸದ ವೈಭವ ಮತ್ತು ಆಧುನಿಕತೆಯ ಪರಿಪೂರ್ಣ ಮೌಲ್ಯಗಳಿಂದ ಕೂಡಿದ ಥೆಸ್ಸಲೋನಿಕಿಯ ಹಿರಿಮೆ, ಗ್ರೀಸಿನ ಮತ್ತೊಂದು ಶ್ರೇಷ್ಠ ನಗರ ಅಥೆನ್ಸಿನ ವೈಭವಕ್ಕೆ ಸರಿಸಾಟಿಯಿಲ್ಲದಿದ್ದರೂ, ಪ್ರಚಂಡ ಇತಿಹಾಸ, ಹಾಗೂ ವಿಶೇಷ ಲಕ್ಷಣಗಳಿಂದ ತನ್ನದೇ ಆದ ಸೌಂಧರ್ಯ ಮತ್ತು ಸೊಬಗನ್ನು ಹೊಂದಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

-ಉಮಾ ವೆಂಕಟೇಶ್

7 thoughts on “ಮ್ಯಾಸಿಡೋನಿಯಾದ ಬಂದರು ಪಟ್ಟಣ- ಥೆಸ್ಸಲೋನಿಕಿ (Thessaloniki)

  1. ಉಮಾ,
    ನಿಮ್ಮ ಪ್ರವಾಸ ಕಥನದ ವಿವರಣೆಗಳು ಚರಿತ್ರೆಯಲ್ಲಿ, ಪ್ರವಾಸದಲ್ಲಿ, ಸ್ಥಳೀಯ ಜೀವನದಲ್ಲಿ, ಸಸ್ಯಾಹಾರದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಮನಮುಟ್ಟುವಂತಿದೆ. ವರ್ಷಗಳ ಹಿಂದೆ ಬೆನ್ನಿಗೆ ೨೫ ಕಿಲೋಗ್ರಾಂ ತೂಕದ ರಕ್ ಸ್ಯಾಕ್ ಏರಿಸಿಕೊಂಡು ಬ್ಯಾಕ್ ಪ್ಯಾಕಿಂಗ್ ಮಾಡುತ್ತಾ ನಾನೂ ಕೂಡ ಗ್ರೀಸ್ ನ (ಯುರೋಪ್ ಭಾಗಗಳು ಕೂಡ) ಚರಿತ್ರೆಯ ಸ್ಥಳಗಳ ತುಣುಕುಗಳಿಗೆ ಭೇಟಿ ಕೊಟ್ಟಿದ್ದೆ. ಅದರ ಜೊತೆಗೆ ನಾನು ಶಾಲೆ/ಕಾಲೇಜಿನಲ್ಲಿ ಕಲಿತ ಇತಿಹಾಸಕ್ಕೆ, ಪಾತ್ರಗಳಿಗೆ, ಘಟನೆಗಳಿಗೆ, ಆಡಿದ್ದ ನಾಟಕಗಳಿಗೆ, ಕೇಳಿದ್ದ ಕತೆಗಳಿಗೆ, ಭಾವನೆಗಳಿಗೆ ಜೀವ ಕೊಡುತ್ತಾ ಬೇರೊಂದು ಲೋಕಕ್ಕೆ ಜಾರುತ್ತಿದ್ದೆ. ಕೈಲಿದ್ದ ಕ್ಯಾಮೆರ ಮಾತನಾಡಿದ್ದೇ ಆಡಿದ್ದು. ನಿಮ್ಮ ಲೇಖನ ನನ್ನನ್ನು ಮತ್ತೆ ಆ ಫೋಟೋಗಳನ್ನು ನೋಡುತ್ತಾ ನೆನಪುಗಳನ್ನು ಕೆದಕಿ ಅರ್ಧ ಬರೆದಿರುವ ಪುಸ್ತಕಕ್ಕೆ ಕರೆದೊಯ್ಯಿತು.
    ಧನ್ಯವಾದಗಳು, ವಿನತೆ ಶರ್ಮ

    Like

    • ವಿನುತೆ ಅವರೆ ನಿಮ್ಮ ಪ್ರವಾಸದ ನೆನಪುಗಳನ್ನು ಹೊತ್ತ ಪುಸ್ತಕವನ್ನು ಪೂರ್ಣಗೊಳಿಸಿ ನಮಗೆ ತಲುಪಿಸಿ. ನಿಮ್ಮ ಅನುಭವಗಳು ಲೇಖನ ರೂಪದಲ್ಲಾದರೂ ನಮ್ಮನ್ನು ಮುಟ್ಟಲಿ. ಗ್ರೀಸಿನ ಚಾರಿತ್ರಿಕ ವಿಷಯಗಳು ಎಷ್ಟೊಂದು ಮಹತ್ವಪೂರ್ಣವಾದವೆಂಬುದು ನಮಗೆಲ್ಲಾ ಶಾಲಾ ಕಾಲೇಜಿನದಿನಗಳಿಂದಲೂ ನಮ್ಮ ಪಠ್ಯಪುಸ್ತಕಗಳ ಮೂಲಕ ತಿಳಿದ ವಿಷಯ. ಆದರೆ ಅದನ್ನು ಎದುರು ನಿಂತು ನೋಡಿದಾಗ, ಮನಸ್ಸಿಗಾಗುವ ಆನಂದ ಮತ್ತು ರೋಮಾಂಚನ ನಿಜಕ್ಕೂ ಒಂದು ಅವರ್ಣನೀಯವಾದ ಅನುಭವ. ಅಲೆಕ್ಸಾಂಡರನ ಶೌರ್ಯ ಮತ್ತು ಹಲವಾರು ವಿಕೃತ ನಡವಳಿಕೆಗಳ ಬಗ್ಗೆ ಲೇಖನ ಮತ್ತು ಚಲನಚಿತ್ರಗಳಿಂದ ಓದಿ ಕೇಳಿದ್ದೆ. ಆದರೆ ಅವನ ಜನ್ಮಭೂಮಿಯನ್ನು ಮೆಟ್ಟಿ, ಅವನ ತಂದೆ ಮತ್ತು ವಂಶಸ್ಥರ ಸಮಾಧಿಯ ಜಾಗವನ್ನು ನೋಡಿದಾಗ, ಕ್ರಿ.ಪೂರ್ವದಲ್ಲಿ ಗ್ರೀಸ್ ದೇಶದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ನನ್ನ ಮನ ಊಹಿಸಿಕೊಳ್ಳಲು ಪ್ರಯತ್ನಿಸಿ ತೊಳಲಾಡಿತು ಎನ್ನಬಹುದು. ನಾಟಕ ಮತ್ತು ಚರಿತ್ರೆಯ ಮೂಲಕ, ಈ ಅದ್ಭುತ ದೇಶದ ವಿಷಯಗಳನ್ನು ಕೇಳಿದ್ದ ನನಗೆ, ಅಲ್ಲಿನ ಸಂಸ್ಕೃತಿಯನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಸಿಕ್ಕಿದಾಗ, ನಿಮ್ಮಂತೆ ನನಗೂ ಮತ್ತೊಂದು ಲೋಕಕ್ಕೇ ಜಾರಿದ ಅನುಭವವಾಯಿತು.
      ಉಮಾ

      Like

  2. ಉಮಾ ಅವರ ಲೇಖನ , ನಾವು ನಲವತ್ತುನಾಲ್ಕು ವರ್ಷಗಳ ಹಿಂದೆ ಮಾಡಿದ ಬೀಡಾರಪ್ರವಾಸವನ್ನು ನೆನಪಿಗೆ ತಂದಿತು. ನಾನು, ನನ್ನ ಪತ್ನಿ ಪದ್ಮ ಮತ್ತು ನಮ್ಮ ಆತ್ಮೀಯ ಇಬ್ಬರು ಸ್ನೇಹಿತರೊಡನೆ ಕಾರಿನಲ್ಲಿ ಮಾಡಿದ ಪ್ರಯಾಣದಲ್ಲಿ ತೆಸಲೋನಿಕಿಯ ಬಳಿ ಬೀಡಾರ ಮಾಡಿದ್ದೆವು. ಆಗ ನಮ್ಮ ಮಕ್ಕಳು ಇನ್ನೂ ಹುಟ್ಟಿರಲಿಲ್ಲ. ಯೂರೋಪು, ಯುಗೋಸ್ಲಾವಿಯ, ಇಟಲಿ ದೇಶಗಳ ಪ್ರವಾಸವು ಮಾಡಲು ನಮಗೆ ಒಂದು ತಿಂಗಳಷ್ಟು ಕಾಲ ಹಿಡಿಯಿತು. ನಮ್ಮ ಹಳೆಯ ಪ್ರವಾಸವನ್ನು ನೆನಪಿಗೆ ತಂದುಕೊಟ್ಟದ್ದಕ್ಕೆ ಉಮಾ ಅವರಿಗೆ ಧನ್ಯವಾದಗಳು.
    ರಾಜಾರಾಮ ಕಾವಳೆ

    Like

    • ಕಾವಲೆ ಅವರೆ, ಗ್ರೀಸಿನ ಉನ್ನತ ಪರ್ವತ ಶೃಂಗಗಳಾದ ಮೌಂಟ್ ಒಲಿಂಪಸ್ ಮತ್ತು ಮೌಂಟ್ ಎಥೋಸ್ ಗಳನ್ನು ನೋಡುವ ಆಸೆ ಕೈಗೂಡಲಿಲ್ಲ. ಮತ್ತೊಮ್ಮೆ ಹೋಗುವ ಅವಕಾಶ ಬಂದಾಗ ತಪ್ಪದೇ ನೋಡುವ ಆಸೆಯಿದೆ.
      ಉಮಾ

      Like

  3. ನಿಮಗೆ travelogue ಕಲೆ ಕರಗತವಾಗಿದೆ. ಈ ಪ್ರವಾಸ ಕಥನವೂ ಸ್ವಾರಸ್ಯಕರವಾಗಿದೆ. ಸ್ಥಳಪುರಾಣ ಸ್ವತಃ ಅನುಭವಿಸಿದ ಭಾವನೆಗಳ ರಂಗು, ತಾವರಿತ ಮಾಹಿತಿಗೆ ಪ್ರಸ್ತುತ ಪರಿಸ್ತಿತಿಯ ಚೌಕಟ್ಟು ಇತ್ಯಾದಿಗಳನ್ನು. ಕೊಟ್ಟಾಗಲೇ ಅದು ಸುಂದರ ಚಿತ್ರವಾಗಿ ಮೈದಳೆಯುತ್ತದೆ. ಮಹತ್ವಾಕಾಂಕ್ಷೆಗೇ ಇನ್ನೊಂದು ಹೆಸರೆನ್ನುವಂತಹ ಸೇನಾಪತಿಯಾಗಿದ್ದ ಅಲೆಕ್ಸಾಂಡರಿನ ಊರಿಗೆ ಹೋದಾಗ ಯಾರಿಗೆ ತಾನೇ ರೋಮಾಂಚನ ಆಗಲಿಕ್ಕಿಲ್ಲ? ಅದು ಚೆನ್ನಾಗಿ ಮೂಡಿ ಬಂದಿದೆ. ಆ ಊರಿನ ಮೆಸಿದೊನಿಯನ್ ಹೆಸರನ್ನು ಗ್ರೀಕ್ ಜನ ಸ್ವಲ್ಪ ತಿರುಚಿದ್ದಾರೆ ಎಂದು ಓದಿದ ನೆನಪು. ಥೆಸಲಿ ಆ ಪ್ರದೇಶದ ಹೆಸರೇ? ಎಲ್ಲೂ ಕೂತಿರದೆ ಜಗತ್ತು ಸುತ್ತುತ್ತಿರುವ ನಿಮಗೆ ಸೂಟ್ ಕೇಸು ಹೊರಲು bEಸರವಾದರೆ, ನನ್ನನ್ನು ಕರೆದುಕೊಂಡು ಹೋಗಿರಿ. ನಾನು ಯಾವಾಗಲು ಸಿದ್ಧ! ಏನ ಕೇನ ಪ್ರಕಾರೇಣ ಅರ್ಧ ಜಗತ್ತಾದರೂ ನೋಡೇನು!
    ಮೇಲೆ ಪ್ರೇಮಲತಾ ಅವರು ಹೇಳಿದಂತೆ ಮನೆಹಂಬಲು ( nostalgia) ಪೂರೈಸಲು ಸಂಪಾದಕರು ‘ಸಿಕಂದರ್’ ಚಿತ್ರದ bill ಸಹ ಹಾಕಿದ್ದಾರೆ! ಅವರಿಗೂ ನಿಕಿ(ಜೈ)ಹಾಕಿದರಾಯಿತು!

    Like

  4. ಉತ್ತಮ ಪ್ರವಾಸಿ ಲೇಖನ. ನಿಮ್ಮ ಬರಹಗಳಲ್ಲಿನ ಪದ ಸಂಪತ್ತು ಕೂಡ ನಮ್ಮ ಮನ ಸೆಳೆಯಿತು. ಮಾಹಿತೆ, ಇತಿಹಾಸ,ರಾಜಕೀಯ, ಮತ್ತು ಭಾವನೆಗಳ ಮಹಾಪೂರವೆ ಇದರಲ್ಲಿದೆ. ಅಲೆಕ್ಸಾಂಡರಿನ ಹಿರಿಮೆ ಜಗತ್ತನ್ನೆ ಆವರಿಸಿರುವುದರಲ್ಲಿ ಸಂಷಯವಿಲ್ಲ. ಗ್ರೀಸ್ ನಂತಹ ದೇಶವೆ ದಿವಾಳಿಯೆದ್ದಿದ್ದು ದುರಂತ.
    ಸೂರ್ಯನಿರುವ ಎಲ್ಲ ಭಾಗದ ಜಗತ್ತು ನಮ್ಮದೇಶದ ನೆನಪನ್ನು ತರುವುದರಲ್ಲಿ ಸಂದೇಹವೇ ಇಲ್ಲ. ಇತರೆಡೆ ಹೋದಾಗ ಕಣಗಲೆ, ಗಿಳಿಗಳು,ಡಬ್ಬಾ ಹೂವು ಕೆಲವೊಮ್ಮೆ ಇರುವೆಗಳು ಕೂಡ ನಮ್ಮ ದೇಶವನ್ನು ನನಗೆ ನೆನೆಸಿ ನಗುವಂತೆ ಮಾಡಿವೆ. ನಿಮ್ಮ ಲೇಖನದಲ್ಲು ಅದನ್ನು ಕಾಣಬಹುದು.

    Like

Leave a comment

This site uses Akismet to reduce spam. Learn how your comment data is processed.