ಕಾವ್ಯ ಅನುಸಂಧಾನ

“ಶಬ್ದವನ್ನು ಪೋಣಿಸಿ ರಚಿಸುವರು ಕಾವ್ಯ, ಸಾಹಿತ್ಯದ ಮಾಲೆಯನ್ನೇ ರಚಿಸಿದವರ ದರ್ಶನ ಲಭಿಸಿದ್ದು ನಮ್ಮೆಲ್ಲರ ಭಾಗ್ಯ!”

ನಿಜವಾಗಿಯೂ ಇದೊಂದು ಪುಣ್ಯ, ಭಾಗ್ಯ. ಸಾಹಿತಿಗಳ ದರ್ಶನ, ಅವರೊಂದಿಗೆ ಲಭಿಸಿದ ಒಡನಾಟ, ಅವರ ಮಾರ್ಗದರ್ಶನ ಪಡೆಯುವ ಸೌಭಾಗ್ಯ ಕನಸು ನನಸಾದ ಅನುಭವ…..

ಕನ್ನಡ ಬಳಗದಲ್ಲಿ ಸಾಹಿತ್ಯದ ಕೆಲಸ ಆಗುತ್ತಿಲ್ಲ, ಸಾಹಿತ್ಯಾಸಕ್ತರಿಗೆ ಭೇಟಿಯಾಗಿ, ವಿಚಾರ ವಿನಿಮಯ ಮಾಡುವ ಅವಕಾಶ ಬೇಕೆಂಬ ಒತ್ತಾಸೆಯಿಂದ ಉಮಾ, ಪ್ರಸಾದ್, ಶ್ರೀವತ್ಸ ಹಾಗೂ ಕೇಶವ್ ಮುಂದಾದರು; ಕನ್ನಡ ಸಾಹಿತ್ಯ, ಸಾಂಸ್ಕೃತಿಕ, ವಿಚಾರ ವೇದಿಕೆಗೆ ಬುನಾದಿ ಹಾಕಿದರು. ಮತ್ತೆ ಹಲವು ಸಮಮನಸ್ಕರನ್ನೊಡಗೂಡಿ ಜಾಲಜಗುಲಿಯಲ್ಲಿ ಕನ್ನಡ ವಾರಪತ್ರಿಕೆ ಪ್ರಾರಂಭವಾಯಿತು. ೨೦೧೪ರ ಅಕ್ಟೋಬರ್ ನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಈ ಜಗುಲಿಯ ಉದ್ಘಾಟನೆ “ಅನಿವಾಸಿ” ಎಂಬ ಹೆಸರಿನೊಂದಿಗೆ ಪ್ರಸಿದ್ಧ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಂದ ಆದದ್ದನ್ನು ನೀವು ಓದಿದ್ದೀರ. ಆ ಸಮಾರಂಭದಲ್ಲಿ ಪ್ರಥಮ ಬಾರಿಗೆ ಕವಿ ಗೋಷ್ಠಿ ಸೊಗಸಾಗಿ ನಡೆದು, ವೇದಿಕೆಯ ಸದಸ್ಯರಲ್ಲದೇ, ಇತರ ಸಾಹಿತ್ಯಾಸಕ್ತರ ಗಮನ ಸೆಳೆಯಿತು; ವೇದಿಕೆಗೆ ಹೊಸ ಆಯಾಮ ಕೊಟ್ಟಿತು.

ಯುಗಾದಿ ಕಾರ್ಯಕ್ರಮಕ್ಕೆ ಹೊಸತನವಿರಬೇಕೆಂದು ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಆಹ್ವಾನಿತ ಕವನಗಳನ್ನು ಅತಿಥಿಗಳಾದ ಬಿ.ಆರ್.ಲಕ್ಷ್ಮಣರಾಯರಿಗೂ, ಮಮತಾ ಸಾಗರ್ ಅವರಿಗೂ ಮೊದಲೇ ಕಳಿಸಿ, ಅವರ ಅನಿಸಿಕೆಗಳನ್ನೂ, ಕಾವ್ಯ ಕಮ್ಮಟವನ್ನೂ ನಡೆಸಿದರೆ, ನಮಗೆಲ್ಲ ಹೊಸ ಹುರುಪು ಬರುವುದು ಶತಃಸಿದ್ಧ ಎಂಬುದು ಎಲ್ಲರ ಒಮ್ಮತದ ಅನಿಸಿಕೆಯಾಗಿತ್ತು. ಈ ತರಹದ ಕಮ್ಮಟಗಳನ್ನು ನಡೆಸಿ ಅನುಭವವಿರುವ ಮಮತಾ ಸಾಗರ್ ನಮ್ಮೊಡನೆ ಕಾಲ ಕಳೆಯುವ ವಿಚಾರ ನಮ್ಮನ್ನು ಹುರಿದುಂಬಿಸಿದ್ದರಲ್ಲಿ ಸಂದೇಹವಿಲ್ಲ.  ಸಮಯ ಕಳೆದಂತೆ, ಚಿಮ್ಮಿದ ಹುರುಪಿನ ಒಸರೆ ಆರದಂತೆ ನಮ್ಮನ್ನೆಲ್ಲ ಪ್ರಸಾದ್ ಹಾಗೂ ಶ್ರೀವತ್ಸ ಪ್ರೋತ್ಸಾಹಿಸುತ್ತ ಕವನ ಬರೆಸಿದರು. ಬರೆದಿದ್ದನ್ನು ಮಮತಾ ಹಾಗೂ ಲಕ್ಷ್ಮಣರಾಯರಿಗೆ ಸಮಯಕ್ಕೆ ಸರಿಯಾಗಿ ಕಳಿಸಿ, ತೆರೆಮರೆಯಲ್ಲಿ  ಕಮ್ಮಟದ ಯಶಸ್ಸಿಗೆ ನಾಂದಿ ಹಾಡಿದರು.

Displaying image.jpgನಮಗೆಲ್ಲ ಬೆಳಗಿನಿಂದಲೇ ಕಾತರ. ಕಾರಣಾಂತರಗಳಿಂದ ತುಸು ತಡವಾಗಿಯೇ ಆರಂಭವಾದರೂ, ಪ್ರಸಾದರ ಪೀಠಿಕೆಯ ನಂತರ ಕಾರ್ಯಕ್ರಮವು ಕ್ಷಣಾರ್ಧದಲ್ಲಿ ತನ್ನ ಲಯವನ್ನು ಕಂಡುಕೊಂಡಿತು. ಲಯಕ್ಕೆ ಪೂರಕವಾಗಿ ಶ್ರೀವತ್ಸ ದೇಸಾಯಿ ಕಾರ್ಯಕ್ರಮವನ್ನು ಔಪಚಾರಿಕವಾಗಿ ಪ್ರಾರಂಭಿಸಿದರು. ಮುಖ್ಯ ಅತಿಥಿಗಳಾದ ಶ್ರೀಯುತ ಬಿ. ಆರ್. ಲಕ್ಷ್ಮಣರಾವ್ ಹಾಗೂ ಡಾ.ಮಮತಾ ಸಾಗರ ಅವರ ಪರಿಚಯವನ್ನು ಪ್ರೇಮಲತಾ ಮತ್ತು ರಾಮಶರಣ ಕ್ರಮವಾಗಿ ಮಾಡಿಕೊಟ್ಟರು.ರಾಮಶರಣ ಅವರು ಹೊಸಬರಿಗೆ ನಮ್ಮ ಜಾಲಜಗುಲಿ “ಅನಿವಾಸಿ”ಯ ಪರಿಚಯ ಮಾಡಿಸಿ ಕಳೆದ ದೀಪಾವಳಿ ಸಮಾರಂಭದಲ್ಲಿ  ಡಾ. ಹೆಚ್ ಎಸ್ ವೆಂಕಟೇಶ ಮೂರ್ತಿಯವರಿಂದ ಉದ್ಘಾಟನೆಯಾದದ್ದನ್ನು ನೆನಪಿಸಿ, ಇನ್ನೂ ಹೆಚ್ಚು ಹೆಚ್ಚು ಜನ “ಅನಿವಾಸಿ” ಜಗುಲಿಗೆ ಭೇಟಿ ನೀಡಿ ಎಂದು ಕಳಕಳಿಯಿಂದ ವಿನಂತಿಸಿದರು.

ಕಾರ್ಯಕ್ರಮದ ಆರಂಭವು ವೇದಿಕೆಯ ಉದಯೋನ್ಮುಖ ಕವಿಗಳ ಕವಿತೆ ವಾಚನದಿಂದ ಆಯಿತು. ಪ್ರೇಮಲತಾ ಅವರು ಮಗುವಿನ ನಗುವಿನ ಸಿಹಿಯನ್ನು ಕವಿತೆಯ ಮೂಲಕ ತುಂಬಾ ಸವಿಯಾಗಿ ಉಣಬಡಿಸಿದರು. ಸುದರ್ಶನರಾಯರು ಮಿತ್ರನಿಗೆ ಬರೆಯಲು ಹೊರಟ ಪತ್ರದ ಸನ್ನಿವೇಶವನ್ನು ನೈಜತೆಗೆ ಕನ್ನಡಿ ಹಿಡಿದಂತೆ ನಿರೂಪಿಸಿದರು. ಶ್ರೀವತ್ಸರ ‘ಅವಳ ನೆನಪು’, ಶಬ್ದಗಳು ಮಿತವಾಗಿದ್ದರೂ ಭಾವಪೂರ್ಣವಾಗಿದ್ದವು. ಸುಹಾಸ ಕರ್ವೆ ಅನಿವಾಸಿ ಭಾರತೀಯರ ಅಮ್ಮಂದಿರ ನಿಟ್ಟುಸಿರನ್ನು ತಮ್ಮ ‘ತಾಯಿ’ ಕವಿತೆಯಲ್ಲಿ ಹೊರಸೂಸುವಲ್ಲಿ ಯಶಸ್ವಿಯಾದರು.
ರಾಮಶರಣ ಅವರು ಬರೆದ ‘ವಿನ್ಸೆಂಟನ ನೆನಪು’ ಚಿತ್ರಕಾರ ವ್ಯಾನ್ ಗಾಘ್ ನ ಜೀವನವನ್ನು ಚಿತ್ರಿಸುವ ಪ್ರಯತ್ನ ಮಾಡಿತು. ಕೇಶವ ಕುಲಕರ್ಣಿ ‘ಮೈನೆ ಗಾಂಧಿ ಕೊ ನಹೀ ಮಾರಾ’ ಎಂಬ ಕವಿತೆಯಲ್ಲಿ ಸರಳವಾಗಿ ‘ಇದ್ದ, ಎದ್ದ, ಗೆದ್ದ, ಬಿದ್ದ’ ಪದಗಳನ್ನು ಅರ್ಥಪೂರ್ಣವಾಗಿ ಬಳಸಿ, ಗಾಂಧೀಜಿಯವರನ್ನು ನಮ್ಮ ಮಧ್ಯವೇ ಹುಟ್ಟಿಸಿ, ಬೆಳೆಸಿ, ಬೀಳಿಸಿದರು. ಪ್ರಸಾದರ ‘ಭರವಸೆ’ – ಆತಂಕ, ಭಯೋತ್ಪಾದನೆ ನಡುವೆಯೂ ಆಶಾಭಾವನೆಯನ್ನು ಚೆನ್ನಾಗಿ ನಿರೂಪಿಸಿತು.ಸುಧಾ ಮಧುಸೂದನ ಅವರ ‘ಆಕಾಶ ದೀವಿಗೆ’ ಹೊಸ ಬೆಳಕಿನೊಂದಿಗೆ ನವ ಉತ್ಸಾಹದ ಕಿರಣಗಳ ಜೊತೆಗೆ ಮುಗಿಲೆತ್ತಕ್ಕೇರುವ ಭಾವವನ್ನು ವರ್ಣಿಸಿದರು. ಹೇಮಾ ಅವರು ಲಯಬದ್ಧವಾಗಿ ತಮಿಳಿಗೆ ತಾವು ಅನುವಾದಿಸಿದ ಮಮತಾರವರ ‘ಮತ್ತೆ ಮಳೆ’ ಕವನವನ್ನು ಓದಿ ನಮ್ಮನ್ನು ರಂಜಿಸಿದರು. ಭಾಷೆ ನಮಗೆ ಸುಲಭವಾಗಿ ಅರ್ಥವಾಗದಿದ್ದರೂ ಅದರ ಭಾವ ನಮ್ಮನ್ನು ತಟ್ಟಿದಾಗ ಅದ್ಭುತವೆನಿಸಿತು. ಸಹಜವಾಗಿಯೇ ಈ ಕವಿತೆಗಳ ಬಗ್ಗೆ ಬರೆದದ್ದು ಈ ಅಲ್ಪಮತಿಯ ಅನಿಸಿಕೆಗಳು ಮಾತ್ರ.
ಸಾಹಿತ್ಯದ ಅಗಾಧ ಜ್ಞಾನ, ಬೆಟ್ಟದಷ್ಟು ಅನುಭವ ಹೊಂದಿದ ಮುಖ್ಯ ಅತಿಥಿಗಳು ಕಾವ್ಯದ ಬಗ್ಗೆ ತಮ್ಮ ಅನಿಸಿಕೆಯನ್ನು ತುಂಬಾ ಉತ್ತಮವಾಗಿ ಬಣ್ಣಿಸಿದರು.
‘ಮಗು-ನಗು’ ಮತ್ತು ‘ತಾಯಿ’ ಕವಿತೆಗಳು ತುಂಬಾ ಸುಂದರವಾಗಿ ಮೂಡಿಬಂದರೂ ಆ ಕವಿತೆಯ ವಿಷಯಗಳು ಪ್ರವಾಹಕ್ಕೆ ಅನುಗುಣವಾಗಿ ಇದ್ದವು. ಕವಿಯು ಪ್ರವಾಹಕ್ಕೆ ವಿರುದ್ಧವಾಗಿ, ವಿಭಿನ್ನವಾಗಿ ಯೋಚಿಸುವ ಕಲೆಯನ್ನು ಕೂಡ ಕರಗತ ಮಾಡಿಕೊಳ್ಳಬೇಕು. ಕವಿ ಉಪಯೋಗಿಸುವ ಶಬ್ದಗಳು  ಬರೀ ಅರ್ಥವನ್ನು ಕೊಡುವದಲ್ಲದೆ ಅವುಗಳ ಹಿಂದಿನ ಅವನ
ವಿಚಾರಗಳನ್ನು ಎತ್ತಿ ಹಿಡಿಯುವ  ಮೆಟಫರ್ (metaphor) ಆಗಿರುತ್ತವೆ ಎಂಬುದನ್ನು ಮಮತಾ ಸಾಗರ ಅವರು ಮನಮುಟ್ಟುವಂತೆ  ಪ್ರತಿಪಾದಿಸಿ ಸಭಿಕರನ್ನು ತಮ್ಮ ವಾಗ್ಝರಿಯ ಉತ್ಸಾಹದಲ್ಲಿ ಕೊಚ್ಚಿಕೊಂಡು ಹೋದರು.
‘ಮೈನೆ ಗಾಂಧಿ ಕೊ ನಹೀ ಮಾರಾ’ ಕವಿತೆ ‘ಇದ್ದ, ಎದ್ದ, ಗೆದ್ದ ಮತ್ತು ಬಿದ್ದ’ ಈ ನಾಲ್ಕು ಶಬ್ದಗಳಿಗೆ ಹೊಸ ಅರ್ಥವನ್ನೇ ಕಲ್ಪಿಸಿವೆ. ಲಕ್ಷ್ಮಣರಾಯರಿಗೆ ಈ ಕವಿತೆ ತುಂಬಾ ಇಷ್ಟವಾಯಿತು. ‘ನೆನಪು’,  ‘ವಿನ್ಸೆಂಟನ ನೆನಪು’, ‘ಆಕಾಶ ದೀವಿಗೆ’  ಮನಸಲ್ಲಿ ಮನೆ ಮಾಡಿದ ಕವಿತೆಗಳು. ‘ಭರವಸೆ’ ಕವಿತೆಯು ವರ್ತಮಾನ ವಸ್ತುಸ್ಥಿತಿಯಲ್ಲಿ ಕೂಡ ಹೊಸ ಆಶಾಭಾವವನ್ನು ಮೂಡಿಸಿತು. ‘ಪತ್ರದ ರೂಪಾಂತರ’ ನೈಜತೆಯನ್ನು, ಅಂತರ್ಜಾಲದಿಂದ ಕ್ಷೀಣಗೊಳ್ಳುತ್ತಿರುವ ಪತ್ರದ ಮಹಿಮೆಯನ್ನು ಚೆನ್ನಾಗಿ ಹೇಳಿದ್ದಾರೆ.

ಮಮತಾ ಸಾಗರರವರ ‘ಮಳೆ’ ಹಾಗೂ ‘ತಾಯಿ’ ಕವಿತೆ ಮೈಯಲ್ಲಿ ರೋಮಾಂಚನ ಹುಟ್ಟಿಸಿತು. ಅವರ ಕವನ ವಾಚನಾ ಶೈಲಿ ಅನುರೂಪ. ಶಬ್ದಗಳ ಮೋಡಿ, ಮತ್ತೆ ಮತ್ತೆ ಬರುವ ಸಾಲುಗಳು ನದಿಯ ಪ್ರವಾಹದಂತೆ ನಮ್ಮನ್ನು ಸುಳಿ ಸಿಕ್ಕಿಸಿ  ‘ಮಳೆ’ ಕವಿತೆಯ ಪ್ರೇಮಿಗಳ ನಡುವಿನ ಸಂಭಾಷಣೆಯಲ್ಲಿ ನಮ್ಮನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದಿತು. ಬಿ. ಆರ್. ಲಕ್ಷ್ಮಣರಾವ್ ಅವರ ‘ಅದ್ಭುತ ರಸದ’ ಬಗ್ಗೆ ಬರೆದ ಕವನ ಅವರ ವೈವಿಧ್ಯತೆಗೆ ಎತ್ತಿ ಹಿಡಿದ ಕನ್ನಡಿಯಂತಿತ್ತು.

ಇನ್ನೂ ಸ್ವಲ್ಪ ಇದ್ದರೂ ಬೇಕಿತ್ತು ಎಂದೆನಿಸುತ್ತಿದರೂ, ಮುಂದಿನ ಕಾರ್ಯಕ್ರಮಗಳಿಗೆ ಆಸ್ಪದ ಮಾಡಿಕೊಡಲು ಕಾರ್ಯಕ್ರಮಕ್ಕೆ ‘ಇತಿಶ್ರೀ’ ಹೇಳಲಾಯಿತು.ವಂದನಾರ್ಪಣೆಯ ಮೂಲಕ ಕಾರ್ಯಕ್ರಮನ್ನು ಮುಗಿಸಿ, ಮುಂದಿನ ಕಾರ್ಯಕ್ರಮಕ್ಕೆ ಎಲ್ಲರೂ ‘ತೃಪ್ತ’ ಮನಸ್ಸಿನಿಂದ ಮುಖ್ಯ ವೇದಿಕೆಯತ್ತ ತೆರಳಿದರು. ಈ ವರದಿಯನ್ನು ಓದಿದ ನಂತರ, ಈ ಜಾಲಜಗುಲಿಯ ಕೊಂಡಿಯನ್ನು ತಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಂಡು ಓದಿ; ನಿಮ್ಮಲ್ಲೂ ಬರೆಯುವ ಹುರುಪಿದ್ದರೆ, ಗದ್ಯ-ಪದ್ಯಗಳನ್ನು ಬರೆದು ಕಳಿಸಿ. ಕನ್ನಡ ಬಳಸಿ, ಉಳಿಸಿ, ಬೆಳೆಸಿ.

-ಸುಹಾಸ್ ಪುರುಷೋತ್ತಮ ಕರ್ವೆ/ರಾಂ  

6 thoughts on “ಕಾವ್ಯ ಅನುಸಂಧಾನ

  1. ಈ ಹಿಂದೆ ಕನ್ನಡ ಬಳಗದಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ವಿಚಾರವೇದಿಕೆ ಹುಟ್ಟಿಕೊಂಡ ಮೇಲೆ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿರುವುದು ಕನ್ನಡ ಬಳಗದ ಹಾಗು ವಿಚಾರವೇದಿಕೆಯ ಸೌಭಾಗ್ಯ. ವಿಚಾರವೇದಿಕೆ ಕನ್ನಡ ಬಳಗದ ಗೌರವವನ್ನು ಹೆಚ್ಚಿಸಿದೆ. ಸಾಹಿತ್ಯಾಸಕ್ತರಿಗೆ ಕನ್ನಡಬಳಗ ಒಂದು ಅವಕಾಶ ಹಾಗು ವೇದಿಕೆಯನ್ನು ಕಲ್ಪಿಸಿಕೊಟ್ಟು ಹೆಸರಾಂತ ಸಾಹಿತಿಗಳನ್ನು ಬರಮಾಡಿಕೊಳ್ಳಲು ಸಹಾಯಮಾಡಿದೆ. ಕನ್ನಡಬಳಗ ಹಾಗು ವಿಚಾರ ವೇದಿಕೆ ಇವೆರಡು ಒಂದು ಅವಿಭಾಜ್ಯ ಸಂಘಗಳು. ಕನ್ನಡಬಳಗದ ಆಶ್ರಯದಲ್ಲಿ ಸಾಹಿತ್ಯ ವಿಚಾರವೇದಿಕೆ ಹೊಸ ಪ್ರತಿಭೆಗಳನ್ನು ಆಕರ್ಷಿಸುತ್ತ ಬೆಳೆಯುವುದನ್ನು ಗಮನಿಸಿದಾಗ ಆದು ಈ ಹಂತವನ್ನು ಇಷ್ಟು ಕಡಿಮೆ ಸಮಯದಲ್ಲಿ ತಲುಪುತ್ತದೆ ಎಂಬದನ್ನು ಅದನ್ನು ಹುಟ್ಟುಹಾಕಿದ ಕೆಲವು ಸದಸ್ಯರು ನಿರೀಕ್ಷೆ ಮಾಡಿರಲಿಲ್ಲ. ಕನ್ನಡ ಬಳಗದ ಇತಿಹಾಸದಲ್ಲಿ ಇದೊಂದು ಸುವರ್ಣಘಳಿಗೆ. ಇದನ್ನು ಇದೇ ಉತ್ಸಾಹ ಮತ್ತು ಮುತುವರ್ಜಿಯಿಂದ ನಡೆಸುವುದು ಒಂದು ದೊಡ್ಡ ಸವಾಲು! ವಿಚಾರ ಗೊಷ್ಟಿ ಹಾಗು ಕಾವ್ಯ ಕಮ್ಮಟಗಳು ನಮ್ಮ ಬೆಳವಣಿಗೆಗೆ ಅತ್ಯಗತ್ಯ. ಇದನ್ನು ನಡೆಸಿಕೊಂಡು ಹೋಗುವುದಕ್ಕೆ ಕನ್ನಡಬಳಗದ ಸಹಕಾರ ಹಾಗು ನೆರವು ಕೂಡ ಅತ್ಯಗತ್ಯ

    Like

  2. ಸುಹಾಸ ಕರ್ವೆ ಯವರ ಉತ್ಸಾಹ, ಪ್ರತಿಭೆ ಈ ಕಾರ್ಯಕ್ರಮದ ಉದ್ದಕ್ಕೂ ಎದ್ದು ಕಂಡ ವಿಷಯ. ನಮ್ಮ ವೇದಿಕೆಗೆ ಇದಕ್ಕಿಂತ ಹೆಚ್ಚಿನ ಲಾಭ ಬೇಕೆ?
    ನಿಮ್ಮ ಬರವಣಿಗೆಯಲ್ಲೂ ಅದೇ ಉತ್ಸಾಹ ಹೊರ ಹೊಮ್ಮಿದೆ. ನಿಮ್ಮ ಹೊಸ ಬರವಣಿಗೆಗಳೂ ಇದೇ ರೀತಿ ಬರಲಿ.

    Like

    • Tumba dodda matannu heliddira Premalatha avare. Tumba dhanyavadagalu. Ee vedike hagu tammellara parichaya agiddu nijakku nanna bhagyave!

      Like

  3. ಸುಹಾಸ ಮತ್ತು ರಾಮ್ ಅವರ ಈ ಸಮೀಕ್ಷೆ ಆ ದಿನದ ಕಾರ್ಯಕ್ರಮದ ವಿವರವನ್ನು ‘ ಕಿರಿದರೊಳ್ ಪಿರಿದು ವಿಷಯಂ’ ಎಂಬಂತೆ ಈ ಚಿಕ್ಕ ಲೇಖನದಲ್ಲಿ ಹಿಡಿದಿಟ್ಟು ನೆರೆದ ಕಾವ್ಯಾಸಕ್ತರ ಉತ್ಸಾಹವನ್ನು ದಾಖಲಿಸಿದ್ದಾರೆ. ಸಮಯಾಭಾವದಿಂದ ಇನ್ನಷ್ಟು ಲಾಭ ಪಡೆಯಲಾಗಲಿಲ್ಲ ಎಂಬ ಕೊರಗು ಯಾವಾಗಲೂ ಇರುವುದೇ!

    Like

  4. ಕಾರಣಾಂತರಗಳಿಂದ ಈ ಸಮಾರಂಭವನ್ನು ತಪ್ಪಿಸಿಕೊಂಡ ನನಗೆ, ರಾಮಶರಣ್ ಮತ್ತು ಸುಹಾಸ್ ಕರ್ವೆ ಅವರ ವರದಿ ಓದಿ ಬಹಳ ಸಂತೋಷವಾಯಿತು. ಕನ್ನಡ ಬಳಗ ಯು.ಕೆ ಸದಸ್ಯರು ತಮ್ಮ ಸಾಹಿತ್ಯ ಪ್ರತಿಭೆಯನ್ನು ಈ ವೇದಿಕೆಯ ಮೂಲಕ ಹೊರಚಲ್ಲಲು ನಾವು ಪಟ್ಟ ಪ್ರಯತ್ನ ಸಾರ್ಥಕವಾಯಿತು. ಕಳೆದ ಒಂದು ವರ್ಷದಲ್ಲಿ ನಮ್ಮ ಸದಸ್ಯರು ತಮ್ಮ ಉತ್ತಮ ಗುಣಮಟ್ಟದ ಲೇಖನಗಳನ್ನು ಓದುಗರಿಗೆ ಮುಟ್ಟಿಸಿದ್ದಾರೆ. ಕನ್ನಡ ಬಳಗ ಯು.ಕೆ ಸಮಾರಂಭಗಳಲ್ಲಿ, ಸಾಹಿತ್ಯ ಸಂಬಂಧಿ ಚಟುವಟಿಕೆಗಳನ್ನು ನಡೆಸಿ, ಕನ್ನಡದ ಪ್ರಖ್ಯಾತ ಸಾಹಿತಿಗಳ ಸಮ್ಮುಖದಲ್ಲಿ, ನಮ್ಮ ಬಳಗದ ಬಂಧುಗಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸೊಗಡನ್ನು ಸವಿಯಲು ಉತ್ತಮವಾದ ಅವಕಾಶವನ್ನು ನೀಡುತ್ತಿದ್ದಾರೆ ಎನ್ನುವುದು ಬಹಳ ಸಂತೋಷದ ವಿಷಯ. ಈ ಚಟುವಟಿಕೆಗಳು ಹೀಗೆ ಮುಂದುವರೆದು, ನೂತನ ಸದಸ್ಯರು, ಪ್ರತಿಭೆಗಳು ನಮ್ಮ ವೇದಿಕೆಯನ್ನು ಸೇರಿ, ಕನ್ನಡ ಭಾಶೆ ಮತ್ತು ಸಂಸ್ಕೃತಿಗಳನ್ನು ಈ ಹೊರನಾಡಿನಲ್ಲಿ ಮುಂದುವರೆಸಿದರೆ, ನಮ್ಮ ಪ್ರಯತ್ನ ಸಾರ್ಥಕವೆಂದು ನನ್ನ ಆಶಯ.
    ಉಮಾ ವೆಂಕಟೇಶ್

    Like

Leave a comment

This site uses Akismet to reduce spam. Learn how your comment data is processed.