ಒಂದೊಳ್ಳೆಯ ಬದಲಾವಣೆಗಾಗಿ ನಮ್ಮ ಸ್ವಯಂಸೇವೆ – “ಕೊಡುವುದು ಸ್ವಲ್ಪ, ಗಳಿಸುವುದು ಬಹಳ”.-ವಿನತೆ ಶರ್ಮ ಅವರ ವೈಚಾರಿಕ ಲೇಖನ

ಒಂದೊಳ್ಳೆಯ ಬದಲಾವಣೆಗಾಗಿ ನಮ್ಮ ಸ್ವಯಂಸೇವೆ – ಕೊಡುವುದು ಸ್ವಲ್ಪ, ಗಳಿಸುವುದು ಬಹಳ.

_LJF3524

‘‘ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ’ ಎಂಬುದೊಂದು ಸರ್ವೇ ಸಾಮಾನ್ಯವಾದ ನಾಣ್ನುಡಿ. ಇದು ಹಲವಾರು ದೃಷ್ಟಾಂತಗಳಿಂದ ನಿರೂಪಿಸಲ್ಪಟ್ಟಿದೆ. ನಮ್ಮದೇ ಜಾಲಜಗುಲಿಯಲ್ಲಿ, ಈ ಕುರಿತ “ಹುಡುಗ ಮತ್ತು ಮರ” ಎಂಬ ಕವಿತೆಯು ಇದೆ.

ಉಪಕಾರಃ ಪರಮೋಧರ್ಮಃ ಪರಾರ್ಥಂ ಕರ್ಮ ನೈಪುಣ್ಯಂ

ಪಾತ್ರೇ  ದಾನಂ ಪರಃ ಕಾಮಃ ಪರೋ ಮೋಕ್ಷೋ ವಿತೃಷ್ಣತಾ

ಪರೋಪಕಾರವೇ ದೊಡ್ಡ ಧರ್ಮ;ಇತರರಿಗಾಗಿ ಕೆಲಸ ಮಾಡುವುದೇ ಕಾರ್ಯ ನೈಪುಣ್ಯತೆ; ಸತ್ಪಾತ್ರರಲ್ಲಿ ದಾನ ಮಾಡಲು ಸಾಧ್ಯವಾಗಲಿ ಎಂದು ಬಯಸುವುದೇ ಶ್ರೇಷ್ಠವಾದ ಅಸೆ;ಆಶೆಯಿಲ್ಲದಿರುವಿಕೆಯೇ ನಿಜವಾದ ಮೋಕ್ಷ . ಎನ್ನುವುದು ಇದರ ಅರ್ಥ.

ಈ ಪ್ರಕ್ರಿಯೆಯನ್ನು ಕುರಿತ ಲೇಖನ, ಶ್ರೀಮತಿ ವಿನತೆ ಶರ್ಮ ಅವರ ಲೇಖನಿಯಿಂದ ಈ ವಾರ ನಮ್ಮ ಜಗುಲಿಯಲ್ಲಿ ಮೂಡಿಬಂದಿದೆ.

ವಿನತೆಯವರದ್ದು ಒಂದು ಅನೂಹ್ಯ ಚೇತೋಹಾರೀ ವ್ಯಕ್ತಿತ್ವ. ಬಹುಮುಖ ಪ್ರತಿಭೆ, ಚಿಂತನಾಶೀಲತೆ, ಚಿಂತನೆಗಳನ್ನು ಕಾರ್ಯರೂಪಕ್ಕೆ ಇಳಿಸುವ ತತ್ಪರತೆ ಎಲ್ಲವೂ ಮೇಳೈಸಿದ ಚೈತನ್ಯದ ಚಿಲುಮೆಯಂತೆ ಎಂದರೆ ಉತ್ಪ್ರೇಕ್ಷೆಯಲ್ಲ. ಅವರದ್ದೇ ಆದ  ಜಾಲ ಜಗುಲಿಯನ್ನು ಕಟ್ಟಿ ಅದರಲ್ಲಿ ಹಲವಾರು ಲೇಖನ, ಕವಿತೆಗಳನ್ನು ಕುಟ್ಟಿದ್ದಾರೆ. Our World is Our Actionable space ಎನ್ನುವುದು ಇವರ ಜಾಲ ಜಗುಲಿಯ  ( ಹಾಗೂ ಬದುಕಿನ ) ಧ್ಯೇಯವಾಕ್ಯ!! ವೃತ್ತಿಯಿಂದ ಶಿಕ್ಷಣ ತಜ್ಞರಾದ ಇವರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಆಸಕ್ತಿಯನ್ನು ಪೋಷಿಸಿಕೊಂಡು, ಅದರಲ್ಲಿ ತೊಡಗಿಸಿಕೊಂಡು ಸಾಧನೆಗಳನ್ನು ಮುಡಿಗೇರಿಸಿಕೊಂಡು  ಬಂದಿದ್ದಾರೆ.

ಇಂದಿನ ಲೇಖನವನ್ನು ಓದಿ, ನೀವೂ ನಿಮ್ಮ ಅನುಭವ-ಅನಿಸಿಕೆಗಳನ್ನು ಹಂಚಿಕೊಳ್ಳಿ

ಒಂದೊಳ್ಳೆಯ ಬದಲಾವಣೆಗಾಗಿ ನಮ್ಮ ಸ್ವಯಂಸೇವೆ – ಕೊಡುವುದು ಸ್ವಲ್ಪ, ಗಳಿಸುವುದು ಬಹಳ.

ಸ್ವಯಂಸೇವೆ ಎನ್ನುವ ಪದ ಮತ್ತು ಆಚರಣೆ ಭಾರತದಲ್ಲಿ ಬಹಳ ಹಿಂದಿನ ಕಾಲದಿಂದಲೂ ಪ್ರಚಲಿತವಾಗಿದೆ. ಒಂದು ಸಮುದಾಯದ ಜನರೆಲ್ಲರೂ ಕೂಡಿ ಹಬ್ಬವೊಂದನ್ನು ನಡೆಸಿದರು ಎಂದುಕೊಳ್ಳಿ. ಅವರಲ್ಲಿ ಕೆಲಮಂದಿ ಸಂಬಂಧ ಪಟ್ಟ ಕೆಲಸಗಳನ್ನು ವಹಿಸಿಕೊಂಡು ಯಾವುದೇ ಮರುಪಾವತಿ, ಸ್ವಾರ್ಥ, ಲಾಭಸಾಧನೆ ಅಥವಾ ಹಣ ಸಂಪಾದನೆಯಿಲ್ಲದೆ ಸ್ವಯಂ ಇಚ್ಚೆಯಿಂದ ಅವನ್ನು ನೆರವೇರಿಸಿದಾಗ, ಅವರು ಸ್ವಯಂಸೇವಕರು. ಅಂದರೆ ತಾವೇ ಸ್ವತಃ ಇಚ್ಛಾ ಪೂರ್ವಕವಾಗಿ ಒಂದು ಉದ್ದೇಶವನ್ನು ಈಡೇರಿಸುವ ದಿಶೆಯಲ್ಲಿ ಕಾರ್ಯೋನ್ಮುಖರಾಗುವುದು. ಅವರು ತಮ್ಮ ಸಮಯವನ್ನು ಕೊಡಬಹುದು, ತಮ್ಮ ಜಾಣ್ಮೆ, ವಿದ್ಯೆ, ಅರಿವು, ಕೈಕೆಲಸ ಇತ್ಯಾದಿಗಳನ್ನು ಕೂಡ ಕೊಡಬಹುದು. ಈ ರೀತಿ ಕೊಡುವಿಕೆಯಲ್ಲಿ ಅವರಿಗೆ ಸಿಗುವುದು ಭಾವನಾತ್ಮಕವಾದ ಹೆಮ್ಮೆ, ತೃಪ್ತಿ, ಸಂತೋಷ. ಒಂದು ಉದ್ದೇಶದ ಸಾಧನೆಯಲ್ಲಿ ಜೊತೆಗೂಡಿದ ಸಂಭ್ರಮ. ಅದಲ್ಲದೆ ಸ್ವಯಂಸೇವೆ ಹಲವಾರು ತರಹದ ಸಂಘಟನೆಗಳಲ್ಲಿ ಕಂಡು ಬರುತ್ತದೆ ಕೂಡ. ಭಾರತದ ರಾಜಕೀಯ ಪಕ್ಷಗಳಲ್ಲಿ ಸ್ವಯಂ ಸೇವಕರು, ಮತ್ತು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಪರಿಸರ ಸಂಘಟನೆಗಳ ಕೆಲಸಕಾರ್ಯದಲ್ಲಿ  ಸ್ವಯಂಸೇವಕರು ತಮ್ಮನ್ನು ತೊಡಗಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಇದು ಪ್ರಪಂಚದಾದ್ಯಂತ ಇದ್ದದ್ದೇ ಹೌದು ಮತ್ತು ಇರುವುದೂ ಕೂಡ. ಉದಾಹರಣೆಗೆ ಭಾರತದ ಸ್ವಾತಂತ್ರ್ಯ ಚಳುವಳಿಗಳಲ್ಲಿ ಅನೇಕ ಸ್ವಯಂಸೇವಕರು ಒಟ್ಟಾರೆ ಸೇರಿ ಬೃಹತ್ ಬದಲಾವಣೆಗಾಗಿ ಶ್ರಮಿಸಿದರು. ರಾಜಾರಾಮ್ ಮೋಹನ್ ರಾಯ್ ನೇತೃತ್ವದಲ್ಲಿ ಕೆಲ ನಿರ್ದಿಷ್ಟ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಾಗಿ ಸ್ವಯಂಸೇವಕರು ಬದ್ಧರಾದರು. ಇಪ್ಪತ್ತನೆ ಶತಮಾನದಲ್ಲಿ ಅಪ್ಪಿಕೋ ಮತ್ತು ಚಿಪ್ಕೋ ಚಳುವಳಿಗಳಲ್ಲಿ ಸ್ವಯಂಸೇವಕರು ಪರಿಸರ ಸಂಘಟನಾಕಾರರಾದರು. ಇವು ಕೆಲವು ಉದಾಹರಣೆಗಳು.

social_networkಪ್ರಪಂಚದಾದ್ಯಂತ ಇಪ್ಪತ್ತು ಮತ್ತು ಇಪ್ಪತ್ತೊಂದನೆ ಶತಮಾನಗಳಲ್ಲಿ ಅಭಿವೃಧ್ಧಿ ಕ್ಷೇತ್ರಗಳಲ್ಲಿ, ಸಾಮಾಜಿಕ ಬದಲಾವಣೆ ಮತ್ತು ಪರಿಸರ ಬದಲಾವಣೆ ಪೂರ್ವಕವಾದ ಸ್ವಯಂಸೇವೆ ಹೊಸ ರೂಪ ಮತ್ತು ಹೊಸ ಪರಿ ಪಡೆದಿದೆ. ಈ ಶತಮಾನಗಳು ಮುಂಚೆ ಇದ್ದ ಹಲವಾರು ಸಾಂಪ್ರದಾಯಿಕ ಮತ್ತು ನಿರ್ದಿಷ್ಟ ಚೌಕಟ್ಟುಗಳನ್ನು ದಾಟಿ, ಬೇರೆ ಬೇರೆ ಕ್ಷೇತ್ರಗಳನ್ನು ಸ್ವಯಂಸೇವಕರಿಗೆ ಪರಿಚಯಿಸಿವೆ. ಹಲವಾರು ಉದ್ದೇಶಗಳ ಬದಲು ಈಗ ಸಾವಿರಾರು ಕಾರಣಗಳಿವೆ. ಸ್ವಯಂಸೇವೆ ನಾನಾ ರೀತಿಯ ಕಾರಣಗಳಿಗಾಗಿ ಈಗ ಹೆಸರುವಾಸಿಯಾಗಿದೆ.

ಈ ರೀತಿ ದೊಡ್ಡದಾಗಿ ಸ್ವಯಂಸೇವೆ ಕಣ್ಣಿಗೆ ಕಾಣುವಂತೆ ಮತ್ತು ದೇಶಗಳ ಗಡಿಗಳನ್ನು ದಾಟಿ ಬೇರೆ ಬೇರೆ ಕ್ಷೇತ್ರಗಳು, ಬೇರೆ ಬೇರೆ ಜನಸಮುದಾಯಗಳನ್ನು ತಲುಪುವಂತೆ ಮಾಡಿದ್ದು ಕೆಲ ಪಾಶ್ಚಾತ್ಯ ದೇಶಗಳು ಮತ್ತು ಎರಡನೇ ಪ್ರಾಪಂಚಿಕ ಮಹಾಯುದ್ಧದ ನಂತರ ಮರುಹುಟ್ಟು ತಳೆದ ವಿಶ್ವಸಂಸ್ಥೆಯ ಘಟಕಗಳು. ಆ ಮೂಲಕ ಪಾಳೆಗಾರಿಕೆ ದೇಶಗಳಾಗಿದ್ದ ಗ್ರೇಟ್ ಬ್ರಿಟನ್, ಫ್ರಾನ್ಸ್ ಮುಂತಾದವು, ನಂತರದ, ಹೊಸ ನೀರು ಹರಿಸಿದ ಅಮೇರಿಕಾ, ನಾರ್ವೆ, ಫಿನ್ಲ್ಯಾಂಡ್, ಸ್ವೀಡನ್ ಇತ್ಯಾದ ದೇಶಗಳು ಸ್ವಯಂಸೇವಾ ಸಂಘಟನೆಯಲ್ಲಿ ಹೊಸ ಗಾಳಿಯನ್ನು ಬೀಸಿದವು. ಇವರುಗಳ ಸ್ವಯಂಸೇವಾ ಹಸ್ತ ತಮ್ಮ ದೇಶದೊಳಗೆ, ತಮ್ಮ ಜನರಷ್ಟೇ ಅಲ್ಲದೆ ಹೊರದೇಶಗಳ ಅಗತ್ಯವಿದ್ದ ಜನರನ್ನೂ ತಲುಪಿತು.

ಇದರ ಹಿಂದೆ ಅಂತರರಾಷ್ಟ್ರೀಯ ರಾಜಕೀಯವಿದೆ, ಕೆಲ ಪಾಳೆಗಾರಿಕೆ ದೇಶಗಳು ಭಾರತ, ಆಫ್ರಿಕ ಖಂಡದಂತಹ ದೇಶಗಳನ್ನು ಆಕ್ರಮಿಸಿಕೊಂಡು ಅವುಗಳ ಸಮಾಜಗಳಲ್ಲಿ ನಾನಾ ರೀತಿಯ ಅಪಸ್ವರಗಳನ್ನು ಸೃಷ್ಟಿಸಿ ಒಟ್ಟಾರೆ ಬುಡಮೇಲು ಮಾಡಿದ ನಂತರ ಸಹಾಯಹಸ್ತವನ್ನು ಚಾಚಿ ಮತ್ತೆ ರಾಜಕೀಯ ಮಾಡುತ್ತವೆ ಎಂಬ ಕೂಗು ಭಾರತದಲ್ಲಿ ಹಿಂದೆ ಇತ್ತು, ಈಗಲೂ ಇದೆ. ಇನ್ನೊಂದು ವಾದದ ಪ್ರಕಾರ ವಿಶ್ವ ಹಣಕಾಸು ಸಂಸ್ಥೆಯ ಹುನ್ನಾರದ ಪ್ರಕಾರ ಭಾರತದಂತಹ “ಮೂರನೇ ಪ್ರಪಂಚ” ದ ರಾಷ್ಟ್ರಗಳು ಬೇಕಿರಲಿ, ಬೇಡದಿರಲಿ ಹಣ ಸಹಾಯವನ್ನು ಪಡೆದೇ ತೀರಬೇಕು, ಹಾಗೆ ಮಾಡಿದ ನಂತರ ಕೃತಕವಾಗಿ ಸೃಷ್ಟಿಸಿದ ಬಡತನ ನಿರ್ಮೂಲನೆ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಅದರ ಮೂಲಕ ಆ ದೇಶಗಳು ಖಾಯಂ ಮತ್ತೊಬ್ಬರಿಗೆ ಕೈ ಒಡ್ಡುವ ಸನ್ನಿವೇಶದ, ಮತ್ತು ಸ್ವಾವಲಂಬನೆಯ ಕನಸನ್ನು ದೂರ ಮಾಡಿದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಕೆಲವರ ವಾದ.

vol workhender300x225colourboxವಾದವೇನೆ ಇರಲಿ. ಎರಡನೇ ಪ್ರಾಪಂಚಿಕ ಮಹಾಯುದ್ಧದ ನಂತರ ಯುನೈಟೆಡ್ ಕಿಂಗ್ಡಮ್ ದೇಶದ ಸ್ವಯಂಸೇವಾ ಕ್ಷೇತ್ರ ಬಹಳ ವೇಗವಾಗಿ, ಅರ್ಥಪೂರ್ಣವಾಗಿ, ಸಾಮಾನ್ಯ ಜನರ ದೈನಂದಿನ ಬದುಕನ್ನು ಉತ್ತಮಗೊಳಿಸಲು ಬೆಳೆದು ಪ್ರಪಂಚದ ಇತರ ದೇಶಗಳ ಮೇಲೆ ಸ್ವಲ್ಪ ಮಟ್ಟಿಗಾದರೂ ಪ್ರಭಾವವನ್ನು ಬೀರಿದೆ. ಇಂತಹ ಪ್ರಭಾವೀಕರಣಕ್ಕೆ ಮತ್ತೊಂದು ಕಾರಣ ಗ್ರೇಟ್ ಬ್ರಿಟನ್ ಬಹಳ ಹೆಸರುವಾಸಿ ಪಾಳೆಗಾರಿಕೆ ದೇಶವೂ ಹೌದು. ಹಿಂದೆ ತನ್ನ ವಶದಲ್ಲಿದ್ದ ದೇಶಗಳ ಪರಿಚಯ ಹಾಗೂ ತನ್ನ ಆಕ್ರಮಣದಿಂದ ಉಂಟಾದ ವ್ಯಪರೀತ್ಯಗಳ ಪರಿಚಯ ಚೆನ್ನಾಗೆ ಇದ್ದ ಬ್ರಿಟನ್ ಗೆ ಸಹಾಯ ಹಸ್ತ ಚಾಚಲು ಅನೇಕ ಕಾರಣಗಳೂ ಇದ್ದವು. ಬ್ರಿಟನ್ ನಂತಹ ರಾಷ್ಟ್ರಗಳಲ್ಲಿ ಇಪ್ಪತ್ತನೆ ಶತಮಾನದಲ್ಲಿ ಎಲ್ಲಾ ರೀತಿಯ ಬದಲಾವಣೆಗಾಗಿ ಸಾಮಾನ್ಯ ಜನರನ್ನೊಳಗೊಂಡ ಸ್ವಯಂ ಸೇವೆ ಬಹಳ ಆಳವಾಗಿ ಮತ್ತು ಸಮಾಜದಾದ್ಯಂತ ಹರಡಿದ ಬೃಹತ್ ಕ್ಷೇತ್ರ. ಉದಾಹರಣೆಗೆ 1939 ರಲ್ಲಿ ಆರಂಭವಾದ ಪ್ರಜಾ ಸಲಹೆ ಸಂಸ್ಥೆ (Citizens Advice Bureau) ಈಗ ಯುನೈಟೆಡ್ ಕಿಂಗ್ಡಮ್ ದೇಶದ ಉದ್ದ ಅಗಲಗಳನ್ನು ವ್ಯಾಪಿಸಿ ಸುಮಾರು 2000 ಸಲಹಾ ಕೇಂದ್ರಗಳನ್ನು ಹೊಂದಿದೆ. ವರ್ಷಕ್ಕೆ ಸುಮಾರು 5.5 ಮಿಲಿಯನ್ ಜನರ ಸಲಹಾ-ಸಂಬಂಧ ಕರೆಗೆ ಓಗೊಡುತ್ತದೆ. ಈ ಸೇವಾ ಸಂಸ್ಥೆಯ ಸಾಧನೆಗೆ ಕಾರಣ ಅದು ಹೊಂದಿರುವ ಸಾವಿರಾರು ಸ್ವಯಂ ಸೇವಕರು (ನಾನೂ ಕೂಡ ಒಬ್ಬಳು). ಅವರು ಕೊಡುವ ಸಮಯ ಆ ಸಂಸ್ಥೆಯ ಬಹು ದೊಡ್ಡ ನಿಧಿ.

ಮತ್ತೊಂದು ಅತ್ಯುತ್ತಮ ಉದಾಹರಣೆ ಎಂದರೆ ತೇನ್ ಸಿಂಗ್ ಜೊತೆಗೆ ನ್ಯೂ ಸ್ಹಿ ಲ್ಯಾಂಡ್ ನ ಎಡ್ಮಂಡ್ ಹಿಲರಿ 1953 ರಲ್ಲಿ ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಹತ್ತಿ ದಾಖಲೆ ಮಾಡಿದ ನಂತರ ಹಿಲರಿಗೆ ನೇಪಾಳಕ್ಕೆ ಹೋಗುವುದು ಬಹಳ ಪ್ರಿಯವಾದ ಹವ್ಯಾಸವಾಗುತ್ತದೆ. ತನ್ನ ಭೇಟಿಗಳಲ್ಲಿ ತಾನು ನೋಡಿದ ಬಡತನ, ಹಿಮಾಲಯದ ಜನರಿಗೆ ಲಭ್ಯವಾಗದ ಶಿಕ್ಷಣ, ಮಕ್ಕಳಿಗೆ ಇಲ್ಲವಾದ ಶಾಲೆಗಳನ್ನು ಅರಿತ ಹಿಲರಿ ಹಿಮಾಲಯನ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅಂತಹ ಸೌಲಭ್ಯಗಳನ್ನು ಒದಗಿಸುವ ಕೆಲಸಕ್ಕೆ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಅವರ ಆ ಕೆಲಸದಲ್ಲಿ ಸಾವಿರಾರು ಮಂದಿ ಜೊತೆಗೂಡಿ ತಮ್ಮ ಸ್ವಯಂಇಚ್ಛೆಯಿಂದ ತನು, ಮನ, ಧನಗಳನ್ನು ನೀಡಿ ನೇಪಾಳದ/ಭಾರತದ ಶೆರ್ಪ ಜನಸಮುದಾಯಕ್ಕೆ ಬೇಕಿದ್ದ ಅನೇಕ ಅವಶ್ಯಕತೆಗಳ ಕನಸನ್ನು ನನಸು ಮಾಡಿದ್ದಾರೆ. ಇದು ಸಾಧ್ಯವಾಗಿರುವುದೂ ಸ್ವಯಂಸೇವಕರಿಂದ.

ಇತ್ತೀಚಿನ ಕಳೆದ ಮೂವತ್ತು ವರ್ಷಗಳಲ್ಲಿ ಉತ್ತರ ಯುರೋಪ್ನ ನಾರ್ವೆ, ಸ್ವೀಡನ್, ಫಿನ್ಲ್ಯಾಂಡ್ ನಂತಹ ದೇಶಗಳು ಯಾವುದೇ ರಾಜಕೀಯ ಕಾರಣಗಳಿಲ್ಲದೆ ಭಾರತದಂತಹ ದೇಶಗಳ ಸ್ವಯಂ ಸೇವಾ ಸಂಸ್ಥೆಗಳಿಗೆ ಧನ ಸಹಾಯ ಮಾಡುವುದರ ಜೊತೆಗೆ ತನ್ನ ಸ್ವಯಂಸೇವಕರನ್ನೂ ಕಳಿಸಿಕೊಡುತ್ತಿವೆ. ಅದರ ಮೂಲಕ ಬಲವಂತವಾಗಿ ಅವಕಾಶ ವಂಚಿತರಾಗಿ ಬದುಕುತ್ತಿರುವ ಕೋಟ್ಯಾನುಕೋಟಿ ಜನರಿಗೆ ಸೇವಾ ಹಸ್ತ ಚಾಚುತ್ತಿವೆ (ಜಾತಿ, ಮತ, ಲಿಂಗ, ಭಾಷೆ, ನಿರ್ಲಭ್ಯವಾದ ಅವಕಾಶಗಳು, ಬುಡಕಟ್ಟು ಜನರ ಬದಲಾದ ಪರಿಸರ, ಸಮಾಜದ ಅಂಚಿಗೆ ದೂಡಲ್ಪಟ್ಟ … ಈ ರೀತಿ ಅನೇಕ ಕಾರಣಗಳಿವೆ). ನಾವು ನೋಡುತ್ತಿರುವಂತೆ ರಾಜಕೀಯ ಕಾರಣಗಳಿಂದ ಉಂಟಾದ ಆಂತರಿಕ ಬಿಕ್ಕಟ್ಟು, ಸಮಸ್ಯೆಗಳಿಂದ ತೊಳಲಾಡುತ್ತಿರುವ ಆಫ್ರಿಕಾ ಖಂಡದ ಬಹುದೇಶಗಳು ಈ ರೀತಿ ಸ್ವಯಂಸೇವಾ ಕ್ಷೇತ್ರದಿಂದ ಬಹಳಷ್ಟು ಚೇತರಿಸಿಕೊಂಡಿವೆ. ಅತ್ತ ಕಡೆ ಸಿರಿಯಾದಂತಹ ದೇಶಗಳ ಸಾಮಾನ್ಯ ಜನರೂ ಕೂಡ ಸ್ವಯಂಸೇವಾ ಕ್ಷೇತ್ರದಿಂದ ಮರು ಉಸಿರು ಪಡೆಯುತ್ತಿದ್ದಾರೆ. ಸ್ವಯಂ ಸೇವಕರು ಕೊಡುತ್ತಿರುವ ಅಮೂಲ್ಯ ಸೇವೆ ಲಕ್ಷಲಕ್ಷ ಜನರ ಜೀವನಾಧಾರವಾಗಿದೆ.

ಖುಷಿ ಕೊಡುವ ವಿಚಾರವೆಂದರೆ ಈ ಸ್ವಯಂಸೇವಾ ಕ್ಷೇತ್ರ ಮತ್ತಷ್ಟು ಮಗದಷ್ಟು ಬೆಳೆಯುತ್ತಿದೆ, ಬಲಿಷ್ಠವಾಗುತ್ತಿದೆ. ದಿನ ದಿನವೂ ಇನ್ನೂ ಅನೇಕರು ಸ್ವಯಂಸೇವಕರಾಗಲು ಹುಮ್ಮಸ್ಸು ತೋರುತ್ತಿದ್ದಾರೆ. ಯಾವುದೋ ದನಿ ಅವರನ್ನು ಸೆಳೆಯುತ್ತಿದೆ. ಯಾವುದೀ ದನಿ? ಏನೀ ಸ್ವಯಂಸೇವಾ ಕ್ಷೇತ್ರದ ಮೋಡಿ? ಯಾರು ಇದರ ಸೆಳೆತಕ್ಕೆ ಒಳಗಾಗುವುದು? ಯಾವ ಕಾರಣಕ್ಕಾಗಿ? ಬನ್ನಿ, ಸ್ವಲ್ಪ ಕೆದಕೋಣ.

ಈಗಿನ ಇಪ್ಪತ್ತೊಂದನೆ ಶತಮಾನದ ವರ್ಷಗಳಲ್ಲಿ ಸುಮಾರು ಅಭಿವೃಧ್ಧಿ ಹೊಂದಿರುವ ದೇಶಗಳ ಜನರು ತಾವು ಹೊಂದಿರುವ ಅನುಕೂಲ-ಅವಶ್ಯಕತೆಗಳು ಇತರರಿಗೆ ಸಿಗುತ್ತಿಲ್ಲ ಎಂದು ತಿಳಿದರೆ ಅಂತಹ ಅಗತ್ಯಿಗಳಿಗೆ ತಮಗಾಗುವುದನ್ನು ನೀಡಲು ಮುಂದೆ ಬರುತ್ತಿದ್ದಾರೆ. ಇದು ಬ್ರಿಟನ್ ನಂತಹ ದೇಶದಲ್ಲಿ ಒಂದು ಪೌಂಡ್ ನೀಡುವುದೇ ಆಗಬಹುದು, ಇಲ್ಲಾ ಸೇವಾಸಂಸ್ಥೆಯಲ್ಲಿ ವಿನಿಯೋಗಿಸುವ ಒಂದು ತಾಸಾಗಬಹುದು. ಇಲ್ಲವೋ, ಅವರಿಗೆ ಬೇಡವಾದ ಮತ್ತೊಬ್ಬರಿಗೆ ಬೇಕಿರುವ ಬಟ್ಟೆಬರೆ ಆಗಬಹುದು, ಆಹಾರ ಸಾಮಗ್ರಿ, ಔಷಧ, ಯಾವುದೇ ಆಗಬಹುದು. ಇಲ್ಲವೋ, ತಮಗೆ ಸ್ವಲ್ಪ ಸಮಯವಿದೆ ಆದ್ದರಿಂದ ತಮಗೆ ಗೊತ್ತಿರುವ ಕೌಶಲ್ಯವನ್ನು ಸೇವಾನಿರತ ಸಂಸ್ಥೆಯೊಂದಕ್ಕೆ ನೀಡುತ್ತೀವಿ, ಆ ಮೂಲಕ ತಮ್ಮ ಸೇವೆ ಅಗತ್ಯ ಜನರನ್ನು ತಲುಪುತ್ತದೆ ಎಂಬ ಮನೋಭಾವನೆ ಆಗಬಹುದು. ಉದಾಹರಣೆಗೆ ಹೋದ ವರ್ಷ (2014) ನಾನು ಆಸ್ಟ್ರೇಲಿಯಾದಲ್ಲಿ, ಮನೆಯಲ್ಲಿ ಮಾಡಿದ ಭಾರತೀಯ ಆಹಾರವನ್ನು ನಮ್ಮ ಮಕ್ಕಳ ಶಾಲೆಯ ಸಮುದಾಯದಲ್ಲಿ ಮಾರಿ ಸ್ವಲ್ಪ ಹಣವನ್ನು ಶಾಲೆಗೇ ಕೊಟ್ಟು, ಮತ್ತಷ್ಟು ಹಣವನ್ನು ಬೇರೆ ಬೇರೆ ಸೇವಾನಿರತ ಸಂಸ್ಥೆಗಳಿಗೆ ಹಂಚಿ ಕಳಿಸಿಕೊಟ್ಟೆ. ನಂತರ ಶಾಲೆಯ ಸಮುದಾಯದ ಕುಟುಂಬಗಳಿಗೆ ಹೇಗೆ ಆ ಹಣವನ್ನು ಹಂಚಿದ್ದೀನಿ ಎಂದು ಹೇಳಿದೆ – ಹಲವಾರು ಮಂದಿ ಅವರನ್ನೂ ಈ ಕಾರ್ಯದಲ್ಲಿ ಸೇರಿಸಿ ಕೊಂಡದ್ದಕ್ಕೆ ಖುಷಿಪಟ್ಟರು.

ವಿವಿಧ ದೇಶಗಳಲ್ಲಿ ಈಗ ಅನುಕೂಲವಂತರು, ಓದಿದ ಯುವಜನತೆಯನ್ನು ಸ್ವಯಂಸೇವಾ ಕೆಲಸಗಳಲ್ಲಿ ತೊಡಗಿಸುವ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಈ ಸೇವಾನಿರತ, ಲಾಭರಹಿತ ಸಂಸ್ಥೆಗಳು ಅಂತಹ ಓದಿದ, ಯಾವುದಾದರು ಒಂದು ನಿರ್ದಿಷ್ಟ ಕೌಶಲ್ಯವಿರುವ ಯುವಕ ಯುವತಿಯರನ್ನು ಸ್ವಯಂಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಆಹ್ವಾನಿಸುತ್ತವೆ. ಈ ಸಂಸ್ಥೆಗಳು ಅಂತಹ ಉತ್ಸಾಹಿ ಯುವಜನರನ್ನು ಕೆಲ ತಿಂಗಳ ಕಾಲ, ಅಥವಾ ಒಂದು ವರ್ಷದ ಕಾಲ ಬೇರೆ ರಾಜ್ಯದ, ಪ್ರಾಂತ್ಯದ, ದೇಶದ ಒಂದು ನಿರ್ದಿಷ್ಟ ಅಗತ್ಯವಿರುವ ಜನಸಮುದಾಯಕ್ಕೆ ಕಳಿಸಿ ಕೊಡುತ್ತವೆ. ಕಳಿಸುವ ವೆಚ್ಚ ಆ ಸಂಸ್ಥೆಯದ್ದು, ಅಥವಾ ಹಲವೊಮ್ಮೆ ಆಯ್ಕೆಗೊಂಡ ಸ್ವಯಂ ಸೇವಕರೇ ಆ ಖರ್ಚನ್ನು ವಹಿಸಿಕೊಳ್ಳಬಹುದು. ಸ್ವಯಂ ಸೇವಕರ ನಿತ್ಯದ ಊಟ ತಿಂಡಿ, ಸಣ್ಣ ಪುಟ್ಟ ಖರ್ಚುಗಳ ಉಸ್ತುವಾರಿ ಆ ಜನಸಮುದಾಯದ ಜೊತೆ ಕೆಲಸ ಮಾಡುತ್ತಿರುವ ಅಲ್ಲಿನ ಸ್ಥಳೀಯಸ್ವಯಂ ಸೇವಾ ಸಂಸ್ಥೆಯದ್ದು. ಅಲ್ಲಿಗೆ ಹೋದ ಸ್ವಯಂಸೇವಕಿ/ಕ ಆ ಜನಸಮುದಾಯದ ಜೊತೆ ಬೆರೆತು, ಅವರಿಗೆ ಬೇಕಿರುವ ಅಗತ್ಯವಿರುವ ನಿರ್ದಿಷ್ಟ ಕೌಶಲ್ಯ-ಪೂರಕ ಸೇವೆಯನ್ನು ನೀಡುವುದು. ಸ್ಥಳೀಯ ಸ್ವಯಂಸೇವಾ ಸಂಸ್ಥೆ ಸ್ವಯಂಸೇವಕರ ಕುಶಲೋಪರಿಯನ್ನು ವಿಚಾರಿಸಿಕೊಂಡು, ಅವರನ್ನು ನೋಡಿಕೊಳ್ಳುತ್ತದೆ. ಉದಾಹರಣೆಗೆ ಸ್ವಯಂಸೇವಕರೊಬ್ಬರು ಶಾಲಾಶಿಕ್ಷಕಿ ಅಥವಾ ನರ್ಸ್ ಎಂದಿಟ್ಟುಕೊಳ್ಳಿ. ಇವರು ಸ್ಥಳೀಯ ಸಮುದಾಯದಲ್ಲಿ ಮಕ್ಕಳಿಗೆ ಟೀಚರ್ ಆಗಿ ಪಾಠ (ಹೆಚ್ಚು ಅಗತ್ಯವಿರುವುದು, ಎಲ್ಲರಿಗೂ ಬೇಕಿರುವುದು ಇಂಗ್ಲಿಶ್ ಭಾಷಾ ಜ್ಞಾನ, ಗಣಿತದ ಮತ್ತು ವಿಜ್ಞಾನದ ಪಾಠ) ಹೇಳಿಕೊಡುತ್ತಾರೆ ಅಥವಾ ಸಮುದಾಯದ ನರ್ಸ್ ಆಗಿ ಕೆಲಸ ಮಾಡುತ್ತಾರೆ. ಆ ಜನರಿಗೆ ಇವರಿಂದ ಕೌಶಲ್ಯ ಕಲಿಕೆ ಆಗುತ್ತದೆ. ಅಷ್ಟೇ ಅಲ್ಲ, ಸ್ವಯಂಸೇವಕರು ಶಾಲಾಕಟ್ಟಡ ಕಟ್ಟಲು ಹೋಗುತ್ತಾರೆ; ಹಳ್ಳಿಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಗಣಿತದ ಕಲಿಕೆ, ಗಣಕ ಯಂತ್ರದ ಉಪಯೋಗ, ವೈದ್ಯಕೀಯ ಜ್ಞಾನದ ಹಂಚಿಕೆ … ಹೀಗೆ ಎಷ್ಟೋ ವಿಷಯಗಳ ಹಂಚಿಕೆ ಮಾಡಲು ನಮ್ಮ ಸ್ವಯಂ ಸೇವಕರು ತಯಾರು.

ಇದರಿಂದ ಅವರಿಗೆ ಏನು ಸಿಗುವುದು? ಉತ್ತರ ಅಡಗಿರುವುದು ಸ್ವಲ್ಪ ಮಟ್ಟಿನ ವಿಶ್ಲೇಷಣೆಯಲ್ಲಿ.

ಪಾಶ್ಚಾತ್ಯ ದೇಶಗಳಲ್ಲಿ ಹಿಂದೆ ಗ್ಯಾಪ್ ಇಯರ್ ಅನ್ನುವ ಒಂದು ವಿಚಾರವಿತ್ತು (ಈಗಲೂ ಇದು ಬಹಳ ಯುವ-ಪ್ರಿಯವಾದದ್ದು). ಹತ್ತನೇ ತರಗತಿ ಅಥವಾ ಹದಿನೆಂಟು/ಹತ್ತೊಂಭತ್ತು ವರ್ಷದ ತನಕ ಓದಿ ಓದಿ ಕೂಚಂಬಟ್ಟರಾದ ಹುಡುಗಹುಡುಗಿಯರು ನಮಗಿದು ಸಾಕಾಯ್ತು ಎಂದು ಅಪ್ಪಅಮ್ಮಂದಿರಿಗೆ ಬಾಯ್ ಹೇಳಿ ಬ್ಯಾಕ್ ಪ್ಯಾಕ್ ಬೆನ್ನಿಗೆರಿಸಿಕೊಂಡು ದೇಶ ಸುತ್ತಲು ಹೊರಡುತ್ತಾರೆ. ಒಂದು ವರ್ಷ ಪರದೇಶ ಸುತ್ತಿ, ಒಂದಷ್ಟು ಅನುಭವವನ್ನು ಬಗಲಿಗೇರಿಸಿಕೊಂಡು ವಾಪಸ್ ಬರುವ ಹುಡುಗ ಹುಡುಗಿಯರು ಮುಂದಿನ ತಮ್ಮ ಜೀವನವನ್ನು ತಾವೇ ನಿರ್ಧಾರ ಮಾಡುವ ದಿಕ್ಕಿನಲ್ಲಿ ಸ್ವಾವಲಂಬಿತನ ಪಡೆಯುತ್ತಾರೆ.  ಈಗಲೂ ಇದು ಚಾಲ್ತಿಯಲ್ಲಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲೂ  ದೇಶ ಸುತ್ತಿ ಜಾಣರಾಗುವ ಬಗ್ಗೆ ಗಾದೆಗಳಿವೆ. ನಾನು ಓದುತ್ತಿದ್ದ ಕಾಲದಲ್ಲಿ ನಾನು ಗರ್ಲ್ಸ್ ಗೈಡ್, ರೆಡ್ ಕ್ರಾಸ್, ಏನ್. ಸಿ. ಸಿ., ಏನ್. ಎಸ್. ಎಸ್. ನಂತಹ ಸಾಂಘಿಕ ತಂಡಗಳಿಗೆ ಸೇರಿ ಸ್ಥಳೀಯ ವಿವಿಧ ಚಟುವಟಿಕೆಗಳು ಮತ್ತು ಸೇವಾನಿರತ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ.  ಇವುಗಳಿಂದ ನನ್ನ ವಿದ್ಯಾರ್ಥಿದೆಸೆಯ ಅನುಭವ ಇನ್ನೂ ಹೆಚ್ಚಾಗಿತ್ತು. ಸ್ವಯಂಸೇವಕರು ವಯಸ್ಕರಾಗೆ ತೀರಬೇಕೆಂಬ ನಿಯಮವೇನೂ ಇಲ್ಲ, ಶಾಲಾಮಕ್ಕಳೂ ಕೂಡ ಪರಿಸರ ಮತ್ತು ಪ್ರಕೃತಿ ಸಂಬಂಧಪಟ್ಟ ಅನೇಕ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ಅನುಭವ ಗಳಿಸಬಹುದು. ಇದಕ್ಕೆ ಬಹಳಷ್ಟು ಸಂಸ್ಥೆಗಳು ಪ್ರೋತ್ಸಾಹವನ್ನೂ  ಕೊಡುತ್ತವೆ. ಇಂತಹ ಸನ್ನಿವೇಶಗಳಲ್ಲಿ ಶಾಲಾ ಮಕ್ಕಳು ಬಹಳಷ್ಟು ಹೊಸ ವಿಷಯಗಳನ್ನು ಕಲಿಯುವುದಲ್ಲದೆ ತಮ್ಮ ಸಮಾಜದಲ್ಲಿ ಏನೆಲ್ಲಾ ಹೇಗೆಲ್ಲಾ ಪರಿಸ್ಥಿತಿ ಇದೆ ಎಂದು ಕೂಡ ಅರಿಯುತ್ತಾರೆ.

ಇಪ್ಪತ್ತೊಂದನೆ ಶತಮಾನದ ಮಂದಿ ಏನೇ ಮಾಡಲು ಸೈ. ಅನುಭವಗಳಿಕೆ ಅವರಿಗೆ ಅಚ್ಚುಮೆಚ್ಚು. ಜೊತೆಗೆ ಈಗ ಹೇಗೆಂದರೆ ಯಾಂತ್ರಿಕ ಜೀವನದ ಶಾಲೆ, ಕಾಲೇಜು, ಯೂನಿವರ್ಸಿಟಿ, ಬೆಳಗಿಂದ ಸಂಜೆವರಗಿನ ಕೆಲಸ, ಇದರಿಂದ ಈಗಿನ ಯುವಜನತೆಗೆ ಬೇಸರವಾಗಲಾರಂಭಿಸಿದೆ. ಸುಮಾರುಮಂದಿಗೆ ಯಾವುದೇ ಕಷ್ಟದ ಪರಿಸ್ಥಿತಿ ಅನುಭವ, ಕೊರತೆಯಿರುವುದಿಲ್ಲ. ಕಾಲೇಜು, ಯೂನಿವರ್ಸಿಟಿ ತನಕ ಓದಿ ಡಿಗ್ರಿ ಸಂಪಾದಿಸಿ, ಒಂದಷ್ಟು ಹಣಗಳಿಸಿದ ಮೇಲೆ ಜೀವನಕ್ಕೆ ಒಂದು ನಿರ್ದಿಷ್ಟವಾದ ಅರ್ಥ ಇಲ್ಲಾ ಎಂಬ ಕೊರಗು ಶುರುವಾಗುತ್ತದೆ. ಅಥವಾ, ಒಳ್ಳೆ ಕೆಲಸದಲ್ಲಿರುವ ಹುಡುಗಹುಡುಗಿಗೆ ಮತ್ತಷ್ಟು ಹೆಚ್ಚಿನ ಏನನ್ನೋ ಮಾಡುವ ಉತ್ಸಾಹ, ಶಕ್ತಿಯ ಚಿಲುಮೆ, ಆಸಕ್ತಿ, ಸಂತೋಷ ಇರುತ್ತದೆ. ಹೀಗೆ ಬೇರೆ ಬೇರೆ ಕಾರಣಗಳಿಂದ ಹೊಸ ಅನುಭವಕ್ಕಾಗಿ ಅವರು ತುಡಿಯುತ್ತಿರುತ್ತಾರೆ. ಅವರಿಗೆ ಸರಿಯಾದ ದಾರಿ ಎಂದರೆ ಸ್ವಯಂಸೇವಾ ಕ್ಷೇತ್ರ. ಇದು ನಾಣ್ಯದ ಒಂದು ಮುಖ.

ಮತ್ತೊಂದು ಮುಖವೆಂದರೆ 1980ರ ನಂತರ ಭಾರತದ ಸ್ವಯಂಸೇವಾ ಕ್ಷೇತ್ರದಲ್ಲಿ ಕಾಣಿಸಿಕೊಂಡ ಕಾರ್ಪೊರೇಟ್ ಕಂಪನಿಗಳ ಮತ್ತು ಅವುಗಳ ನೌಕರರ ತೊಡಗುಕೊಳ್ಳುವಿಕೆ ಮತ್ತಷ್ಟು ಸ್ವಯಂಸೇವಕರನ್ನು ಹುಟ್ಟುಹಾಕಿತು. ಈ ಹೊಸ ಅಲೆಯ ಸ್ವಯಂಸೇವಕರು ಹೆಚ್ಚಾಗಿ ಐ.ಟಿ ಕ್ಷೇತ್ರದಿಂದ ಬಂದವರು. ಅದು ವಿಪ್ರೊ, ಇನ್ಫೋಸಿಸ್, ಎಚ್.ಪಿ ಅಂತಹ ದೊಡ್ಡ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿಸುವ ಜೊತೆಗೆ ತಮ್ಮ ನೌಕರವರ್ಗವನ್ನು ಕೂಡ  ಸ್ವಯಂಸೇವಾ ಕ್ಷೇತ್ರಕ್ಕೆ ಪರಿಚಯಿಸಿದರು. ಎಲ್ಲರಿಗೂ ತಿಳಿದಿರುವಂತೆ ಇನ್ಫೋಸಿಸ್ ಬಳಗದ ಸುಧಾ ಮೂರ್ತಿ ತಮ್ಮ ಸೇವಾಸಂಸ್ಥೆಯಿಂದ ಬಹಳಷ್ಟು ಕೆಲಸ ಮಾಡುತ್ತಿದ್ದಾರೆ. ಈ ಹೊಸ ಬಗೆಯ ಹೆಚ್ಚು ಓದಿದ ಐ. ಟಿ ಪರಿಣಿತರ ಸ್ವಯಂಸೇವೆ ಶಿಕ್ಷಣ ಮತ್ತು ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಗಮನ ಕೊಟ್ಟು ಹೊಸ ಹೊಸ ರೀತಿಯ ತೊಡಗುಕೊಳ್ಳುವಿಕೆಯನ್ನು ಪರಿಚಯಿಸಿದರು. ಸ್ಲಂಗಳಿಗೆ ಹೋಗಿ ಮಕ್ಕಳಿಗೆ ಇಂಗ್ಲಿಷ್ ಹೇಳಿಕೊಡುವುದರಿಂದ ಹಿಡಿದು, ಬೆಂಗಳೂರಿನ ಕಾರ್ಪೊರೇಟ್ ವಲಯದಲ್ಲಿ ಕ್ವಿಜ್ ಮಾಡಿ ಹಣ ಸಂಗ್ರಹಿಸಿಕೊಟ್ಟರು ಕೂಡ.

ಸ್ವಯಂಸೇವಾ ಸಂಸ್ಥೆಗಳು ಭಾರತದಲ್ಲಿ ಈಗ ಎಲ್ಲೆಲ್ಲೂ ಇವೆ. ಇಪ್ಪತೈದು-ಇಪ್ಪತ್ತು ವರ್ಷಗಳ ಹಿಂದೆ ಇದ್ದಂತೆ ಹಲವು ಹತ್ತು ಅನ್ನುವ ಹಾಗಿಲ್ಲ ಈಗ; ಎಲ್ಲೆಲ್ಲೂ ಏನ್ ಜಿ ಓ ಗಳ ವಹಿವಾಟು, ಪೈಪೋಟಿ ಕಣ್ಣಿಗೆ ರಾಚುತ್ತವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಸಹ ಬಹಳಷ್ಟು ಸ್ವಯಂಸೇವಾ ಸಂಸ್ಥೆಗಳ ಬಗ್ಗೆ ಒಡ್ಡಿಕೊಂಡಿದ್ದಾರೆ. ಜೊತೆಗೆ “ವಾಲೆನ್ ಟೀರಿಂಗ್” ಎನ್ನುವುದು ಕೂಡ ಸಾರ್ವತ್ರಿಕವಾಗಿ ಒಗ್ಗಿಕೊಂಡ, ಒಪ್ಪಿಕೊಂಡ ವಿಷಯವಾಗಿದೆ. ಯುವ ಜನತೆಯಲ್ಲಿ ಏನ್ ಜಿ ಓ ವಾಲೆನ್ಟೀರಿಂಗ್ ಮಾಡುವುದು ಈಗ ಸಾಮಾನ್ಯವಾಗಿದೆ. ಎಷ್ಟೂ ಜನ ತಾವೇ ಅಂತಹ ಲಾಭರಹಿತ (non-profit organisation), ಸೇವಾನಿರತ ಸಂಸ್ಥೆಗಳನ್ನು ಕೂಡ ನಡೆಸುತ್ತಿದ್ದಾರೆ. ಅದು ಪರಿಸರಕ್ಕೆ ಸಂಬಂಧ ಪಟ್ಟದ್ದಾಗಿರಬಹುದು ಅಥವಾ ಸಾಮಾಜಿಕ ಬದಲಾವಣೆಗಾಗಿ ಇರಬಹುದು.

ಇದರ ಜೊತೆಗೆ ಅಮೆರಿಕೆಯಲ್ಲಿದ್ದು, ಬ್ರಿಟನ್ ನಲ್ಲಿದ್ದು ಅಥವಾ ಅಂತಹ ಪಾಶ್ಚಾತ್ಯ ದೇಶಗಳಲ್ಲಿರುವ ಭಾರತೀಯರು ಆರಂಭಿಸಿದ ಬೆಂಬಲಯತ್ನ  – ವಿವಿಧ ರೀತಿಯ ಕಾರಣಗಳಿಗಾಗಿ. ಅವುಗಳಲ್ಲಿ ಮುಖ್ಯವಾದ್ದು ಶಿಕ್ಷಣ. ಭಾರತದ ಜನರ ಶಿಕ್ಷಣ ಮತ್ತು ಸಾಕ್ಷರತೆ ಉತ್ತಮಗೊಳ್ಳಬೇಕೆಂಬ ಉದ್ದೇಶದಿಂದ ಅನೇಕರು ಆ ಆ ದೇಶಗಳಲ್ಲಿ ಲಾಭರಹಿತ ಸೇವಾಸಂಸ್ಥೆಗಳನ್ನು ಆರಂಭಿಸಿದರು. ಅಲ್ಲಿ ಸಂಗ್ರಹಿಸಿದ ಹಣ ಮತ್ತು ಇತರೆ ರೀತಿಯ ಸಂಪನ್ಮೂಲಗಳನ್ನು ಭಾರತದ ಸೇವಾಸಂಸ್ಥೆಗಳಿಗೆ ಹಂಚುವ ಮೂಲಕ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಸಮುದಾಯ ಸಂಘಟನೆ, ಪರಿಸರ ಇಂತಹ ಕಾರಣಗಳಿಗೆ ತಮ್ಮ ಬೆಂಬಲವನ್ನು ಕೊಡುತ್ತಿದ್ದಾರೆ. ಉದಾಹರಣೆಗೆ ಭಾರತದಾದ್ಯಂತ ಇರುವ ಇಂಡಿಯಾ ಲಿಟರೆಸಿ ಪ್ರಾಜೆಕ್ಟ್, ಆಶ ಫಾರ್ ಎಜುಕೇಶನ್, ರಿಜುವನೆಟ್ ಇಂಡಿಯಾ ಮೂವ್ಮೆಂಟ್, ದೇಶಪಾಂಡೆ ಫೌಂಡೇಶನ್ ಹೀಗೆ ಹಲವಾರು ಅನಿವಾಸಿ ಭಾರತೀಯರ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇವುಗಳ ಸ್ವಯಂ ಸೇವಕರು ಭಾರತದ ಸ್ಥಳೀಯ ಸೇವಾಸಂಸ್ಥೆಗಳಿಗೆ ಹಲವಾರು ರೂಪದಲ್ಲಿ ಸಹಾಯವನ್ನು ನೀಡುತ್ತಿದ್ದಾರೆ.

other-volunt-work-age-sexಕಳೆದ ಹತ್ತು ವರ್ಷಗಳಲ್ಲಿ ಅಮೇರಿಕಾ, ಬ್ರಿಟನ್ ನಲ್ಲಿ ಇರುವಂತೆ ಭಾರತದಲ್ಲೂ ಕೂಡ “ಐ ವಾಲನ್ಟೀರ್” ತರಹದ ಸಂಸ್ಥೆಗಳ ಸ್ಥಳೀಯ ಕೊಂಡಿಗಳು ಹರಡಿ, ಉತ್ಸಾಹದ ತರುಣತರುಣಿಯರನ್ನು ಅವು ಬೇರೆಬೇರೆ ಕಾರಣಗಳ ಉದ್ದೇಶ ಸಫಲತೆಗಾಗಿ ಸ್ವಯಂಸೇವಕರಾಗಿ ಕಳಿಸುವ ಕಾರ್ಯವನ್ನು ಮಾಡುತ್ತಿವೆ. ಹಾಗೆ ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುವುವರಲ್ಲಿ ಹೈಸ್ಕೂಲ್ ಮತ್ತು ಕಾಲೇಜ್ನಲ್ಲಿ ಓದುವ ಯುವಜನರಿದ್ದರೆ ಅವರಿಗೆ ಅಂತಹ ಸೇವೆಯಿಂದ ಬಹಳಷ್ಟು ಲಾಭವಿದೆ – ಮುಂದೆ ಕೆಲಸಕ್ಕಾಗಿ ಅರ್ಜಿ ಹಾಕಿಕೊಂಡಾಗ ಅಂತಹ ಸೇವಾ ಅನುಭವವಿದೆ ಎಂದು ಅವರು ಹೇಳಿಕೊಂಡರೆ ಕಂಪನಿಗಳು ಅದನ್ನು ಇಷ್ಟ ಪಡುತ್ತವೆ ಕೂಡ.

ಹಾಗೆ ತಮ್ಮ ಸ್ವಯಂಸೇವೆಯ ಅವಧಿಯನ್ನು ಮುಗಿಸಿಕೊಂಡು ಬರುವ ಯುವಜನತೆ ಹೇಳುವಂತೆ ಅವರ ಅನುಭವ ಚಿರಸ್ಮರಣೀಯವಾದದ್ದು. ಬೇರೆ ಭಾಷೆಯ, ಸಂಸ್ಕೃತಿಯ, ಪರಿಸರದ, ಆಹಾರ, ಅಚಾರ, ವಿಚಾರ, ಉಡುಗೆ ತೊಡುಗೆ ಗಳ ವೈಶಿಷ್ಟ್ಯಗಳ ಬಗ್ಗೆ ಅವರು ಬಹಳ ಆಸಕ್ತಿಯಿಂದ ಹಂಚಿಕೊಳ್ಳುತ್ತಾರೆ, ತಮ್ಮ ಸ್ನೇಹಿತರಿಗೆ ಅಂತಹ ಸಾಹಸವನ್ನು ಕೈಗೊಳ್ಳುವಂತೆ ಪ್ರೇರೇಪಿಸುತ್ತಾರೆ. ಹೀಗೆ ಮಾಡುವುದರಿಂದ ಸ್ವಯಂಸೇವಕರಿಗೆ ಬೇರೆ ಒಂದು ಸಾಂಸ್ಕೃತಿಕ, ಬೇರೆ ಭಾಷೆಯ, ಆಚಾರ ವಿಚಾರಗಳ ಪರಿಚಯವಾಗುತ್ತದೆ.

ಬ್ರಿಟನ್ ನಲ್ಲಿ ಇರುವಷ್ಟು ಸೇವಾನಿರತ ಸಂಸ್ಥೆಗಳನ್ನು ನಾನು ಬೇರೆ ದೇಶಗಳಲ್ಲಿ ಕಂಡರಿಯೆ. ಈ ದೇಶದಲ್ಲಿ ಇರುವ ಸಾವಿರಾರು ಚಾರಿಟಿ ಸಂಸ್ಥೆಗಳು ಹೆಚ್ಚಾಗಿ ಕೆಲಸ ಮಾಡುವುದು ಸಾಮಾನ್ಯ ಜನತೆ ನೀಡುವ ಔದಾರ್ಯದ, ಅನುಕಂಪದ, ಪ್ರೀತಿಯ, ವಿಶ್ವಾಸದ, ನಂಬಿಕೆಯ ದಾನದಿಂದ. ಅದು ಹಣವೇ ಆಗಿರಬಹುದು ಅಥವಾ ಸಮಯದ ದಾನ, ವಸ್ತುಗಳ ದಾನ ಇತ್ಯಾದಿ ಆಗಿರಬಹುದು. ಒಟ್ಟಿನಲ್ಲಿ ನಮ್ಮ ಮನೆಯಲ್ಲಿ ಬೇಡವಾದ ಒಂದು ವಸ್ತು ಇದ್ದು ಅದು ಚೆನ್ನಾಗಿರುವುದಾದರೆ ಮತ್ತೊಬ್ಬರ ಮನೆಯನ್ನು ಸೇರಿ ಅಲ್ಲಿನವರಿಗೆ ಉಪಯೋಗವಾಗಲಿ ಎಂಬ ಭಾವನೆ ಎಲ್ಲರಲ್ಲೂ ಇದೆ. ಕ್ರಿಸ್ಮಸ್ ಸಮಯದಲ್ಲಿ ನಾನು ನೋಡಿದಂತೆ ನನಗೆ ತಿಳಿದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ದಾನ ಮಾಡುವ ಚಟುವಟಿಕೆಯಲ್ಲಿದ್ದರು. ಹಾಗೆ, ನನಗೆ ತಿಳಿದ ಮಟ್ಟಿಗೆ ಚಾರಿಟಿ ಸಂಸ್ಥೆಗಳಲ್ಲಿ ಸಾಮಾನ್ಯ ಜನರು ತಮಗೆ ಕೈಲಾದ ಮಟ್ಟಿಗೆ ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅದು ಏಜ್ ಯು ಕೆ (Age UK) ಆಗಿರಬಹುದು, CAB, Red Cross, ಯಾವುದಾದರೂ  Wildlife Conservation ಸಂಸ್ಥೆ ಆಗಿರಬಹುದು, ಅಥವಾ ಸ್ಥಳೀಯ ಶಾಲೆಯಾಗಬಹುದು; ಬಹಳಷ್ಟು ಜನರಲ್ಲಿ ಈ ಸ್ವಯಂಸೇವಾ ಮನೋಭಾವ ಜಾಗೃತವಾಗಿದೆ. ಇದನ್ನು ಪ್ರಶಂಸಿಸಬೇಕು. ಅಂತಹ ಸೇವೆಗೆ ಮೀರಿದಷ್ಟು ಅಷ್ಟೇ ಮಟ್ಟಿಗೆ ಸಾಮಾಜಿಕ ಸಮಸ್ಯೆಗಳೂ ಇವೆ ಎನ್ನುವುದೂ ನಿಜ.

ಅಂತೂ ನಾನಾ ಕಾರಣಗಳಿಗೆ, ಬೇರೆ ಬೇರೆ ತರಹದ ಅಗತ್ಯವಿರುವ ಎಲ್ಲಾ ಜನರಿಗೂ ಯಾವುದೇ ಖರ್ಚಿಲ್ಲದೆ ವಿವಿಧ ರೀತಿಯ ಸಹಾಯದ ಬೆಂಬಲ, ಸೌಲಭ್ಯ ಇದೆ ಎನ್ನುವುದು ನಮ್ಮೀ ಕಾಲದ ಸಂತೋಷದ ವಿಷಯ. ಇದು ಸಾಧ್ಯವಾಗಿರುವುದು ಸ್ವಯಂ ಸೇವಾ ಕ್ಷೇತ್ರದ ಬೆಳವಣಿಗೆಯಿಂದ, ಸ್ವಯಂಸೇವಕರು ತೆರೆದಿರುವ ದೊಡ್ಡ ಹೃದಯ ಮತ್ತು ಸಮಾಜದ ಪ್ರಗತಿಗಾಗಿ ಅವರು ತೋರುತ್ತಿರುವ ಕಾಳಜಿಯಿಂದ. ಅವರು ಕೊಡುವುದು ಸ್ವಲ್ಪವಾದರೂ ಅವರು ಮತ್ತು ಮತ್ತಿತರು ಗಳಿಸುವುದು ಬಹಳ. ನಮ್ಮ ಸ್ವಯಂಸೇವಕರಿಂದ ನಮ್ಮ ಸಮಾಜ, ದೇಶ, ಪ್ರಪಂಚ, ಸಮುದಾಯಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮತ್ತು ಬೆಳವಣಿಗೆಗಳಾಗುತ್ತಿವೆ ಎನ್ನುವುದು ಅತಿಶಯೋಕ್ತಿಯ ಮಾತಲ್ಲ.

ವಿನತೆ ಶರ್ಮ

5 thoughts on “ಒಂದೊಳ್ಳೆಯ ಬದಲಾವಣೆಗಾಗಿ ನಮ್ಮ ಸ್ವಯಂಸೇವೆ – “ಕೊಡುವುದು ಸ್ವಲ್ಪ, ಗಳಿಸುವುದು ಬಹಳ”.-ವಿನತೆ ಶರ್ಮ ಅವರ ವೈಚಾರಿಕ ಲೇಖನ

 1. ವಿನುತೆ ಅವರೆ ನಿಮ್ಮ ಲೇಖನ ಬಹಳ ಸಮಯೋಚಿತವಾಗಿದೆ. ಸ್ವಯಂ ಕ್ಷೇತ್ರ ರಂಗದಲ್ಲಿ, ಸಾಕಷ್ಟು ಕ್ರಾಂತಿಗಳಾಗುತ್ತಿವೆ. ಒಂದು ಕಾಲಕ್ಕೆ ಪ್ರಪಂಚವನ್ನೇ ಆಳಿ ಕೈಸುಟ್ಟುಕೊಂಡ ಬ್ರಿಟನ್ ಇಂದು ಈ ಕ್ಷೇತ್ರದಲ್ಲಿ ಸಾಧಿಸಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು. ಭಾರತದಲ್ಲಿ ಈಗ ತಾನೇ ಜನಗಳ ಮನಗಳನ್ನು ಮುಟ್ಟುತ್ತಿರುವ ಈ ಕ್ಷೇತ್ರಕ್ಕೆ , ಸುಧಾಮೂರ್ತಿ ಅವರಂತಹ ಮಹಿಳೆಯರಿಂದ ಒಳ್ಳೆಯ ಪ್ರಚಾರ ಪಡೆಯುತ್ತಿದೆ. ಇತ್ತೀಚೆಗೆ ಲಾಸ್ ಏಂಜಲೀಸಿನಲ್ಲಿ ಆಕೆಯನ್ನು ಭೇಟಿಯಾದಾಗ, ನಿಜಕ್ಕೂ ಬಹಳ ಸಂತೋಷವಾಯಿತು. ಸರಳತೆಯೇ ಮೂರ್ತಿವೆತ್ತಂತಿರುವ ಆಕೆಯ ವಿಚಾರಗಳು, ಬಹಳ ಉನ್ನತವಾದದ್ದು. ಗ್ಯಾಪ್ ಇಯರ್ ತೆಗೆದುಕೊಂಡ ಅನೇಕ ಪಾಶ್ಚಾತ್ಯ ಮಕ್ಕಳಿಗೆ, ಭಾರತ, ಆಫ಼್ರಿಕಾ, ಬಾಂಗ್ಲಾದಂತಹ ದೇಶಗಳಲ್ಲಿ, ಕಳೆಯುವ ಒಂದು ವರ್ಷ, ಅವರ ಜೀವನದಲ್ಲಿ ಬಹು ದೊಡ್ಡ ಬದಲಾವಣೆಗಳನ್ನೇ ತಂದಿರುವ ದ್ರುಷ್ಟಾಂತಗಳನ್ನು ಕೇಳಿದ್ದೇನೆ. ನಮ್ಮ ಜೀವನದ ಸ್ವಲ್ಪ ಸಮಯವನ್ನು, ಹಣವನ್ನು , ಅಗತ್ಯವಿರುವ ಜನಗಳಿಗೆ ಮುಟ್ಟಿಸಿ ಅದರೈಂದ ಅವರ ಜೀವನದಲ್ಲಿ ಉಂಟಾಗುವ ಉತ್ತಮ ಬದಲಾವಣೆಯನ್ನು ನೋಡಿ ಆನಂದಿಸುವ ಅನುಭವವೇ ಬೇರೆ. ನಿಮ್ಮ ಲೇಖನ ನಮಗೆ ಅಂತಹ ಕಾರ್ಯಗಳನ್ನು ಹಮ್ಮಿಕೊಂಡು ನಡೆಸುವಲ್ಲಿ ಪ್ರೇರಕವಾಗಲಿ ಎಂದು ಆಶಿಸುವೆ. ಲೇಖನ ಬಹಳ ಮಾಹಿತಿಪೂರ್ಣವಾಗಿದೆ. ಧನ್ಯವಾದಗಳು.
  ಉಮಾ ವೆಂಕಟೇಶ್

  Like

 2. ತತ್ವದಲ್ಲಿ,ಕಾರ್ಯದಲ್ಲಿ ಲೇಖನದಲ್ಲಿನ ಎಲ್ಲ ವಿಚಾರಗಳೂ ಅರ್ಥಪೂರ್ಣ. ಯುಕೆ ಪ್ರಪಂಚಕ್ಕೆ ಈ ನಿಟ್ಟಿನಲ್ಲಿ ಒಂದು ಮಾದರಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.
  ಪ್ರಪಂಚಕ್ಕೆ ಅಪೂರ್ವ ಮಾದರಿಯಾಗಿ ಸ್ವದೇಶ, ವಿದೇಶಗಳನ್ನೂ ಸಂಘಟಿಸಿದ ನಮ್ಮ ಮಹಾತ್ಮ ಗಾಂಧಿಗಿನ್ನ ಮಾದರಿ ಬೇಕೆ? ಅತಿರಿಕ್ತ ವಾತವರಣದಲ್ಲಿ ಶತಮಾನದ ಹಿಂದೆ ದಾಸ್ಯದ ಅವನತಿಗೆ ಶ್ರಮಿಸಿದ ಅಮೆರಿಕದ ಜಾನ್ ಬ್ರೊವ್ನ ಇಲ್ಲವೇ?
  ನ್ಯಾಯಾಲಯಗಳು ಮತ್ತು ಪೋಲಿಸರು ಭ್ರಶ್ಟಾಚಾರ ವಿಮುಕ್ತರಾಗದಿದ್ದಲ್ಲಿ ಈ ಕೆಲಸ ಸುಲಭಸಾದ್ಯವೇನಲ್ಲ.ಇಲ್ಲದಿದ್ದಲ್ಲಿ ಜನಸಾಮಾನ್ಯರ ಮಟ್ಟಿನಲ್ಲಿ ಈ ಕಾರ್ಯ ಸಾದ್ಯವಿದ್ದರೂ ಸಾಮಾಜಿಕಮಟ್ಟದಲ್ಲಿ ಮುಕ್ತವಾಗಿ ಹರಿಯಲು ಅಡೆಚಣೆಗಳಿವೆ (ಭಾರತದಲ್ಲಿದ್ದಂತೆ). ಸಮೂಹ ಮಾದ್ಯಮಗಳು ಪ್ರಪಂಚವನ್ನು ಒಂದು ಸಾಮಾನ್ಯ ವೇದಿಕೆಯನ್ನಾಗಿ ಮಾಡುತ್ತಿರುವ ಈ ಕಾಲದಲ್ಲಿ ಸ್ವಯಂ ಸೇವೆಗೆ ಮತ್ತಷ್ಟು ಮನ್ನಣೆ ಹೆಚ್ಚಾಗಬೇಕಿದೆ.

  Like

 3. ವಿನತೆ ಅವರೇ,
  The date has been corrected, now. Hope it is acceptable.
  ನಿಮ್ಮ ವಿಚಾರಪೂರಿತ ಲೇಖನ ನಮ್ಮ ವೇದಿಕೆಗೆ ಹೊಸ ಆಯಾಮಗಳನ್ನು ಕೊಟ್ಟಿವೆ. ನೀವು ಕೆಲಸ ಮಾಡುವ ವಿಚಾರ ಮಾಡುವ ರಂಗ ವೈಶಿಷ್ಠ್ಯಪೂರ್ಣವಾದಂತಿದೆ. ಸ್ವಯಂ ಸೇವಕ ಸಂಘಟನೆಗಳ ಬಗ್ಗೆ ಇತ್ತಿತ್ತಲಾಗಿ ವಾಮ ದೃಷ್ಟಿಯಿಂದ ನೋಡಲಾಗುವ ಪರಿಪಾಠವಿರುವಾಗ ಇಂಥ ಲೇಖನಗಳು ಅವುಗಳ ಮೇಲೆ ನಂಬಿಕೆಯನ್ನು ಭದ್ರಗೊಳಿಸಳು ಸಹಾಯವಾಗುತ್ತವೆ. ಸ್ವತಃ ಸ್ವಯ೦ ಸೇವಕರಾದ್ದರಿಂದ ನಿಮ್ಮ ಬರಹಕ್ಕೆ ಇನ್ನು ತೂಕವಿದೆ. ಈ ನಿಷ್ಕಾಮ ಪ್ರವೃತ್ತಿಯ ಮೋಡಿ, ಅದರ ಸೆಳತದ ಕಾರಣಗಳು, ಅದರ ವೈಶಾಲ್ಯ ಇವೆಲ್ಲದರ ವಿವೇಚನೆ ಇಲ್ಲಿದೆ. ಈ ಸೇವಾಭಾವ character building ಎಂಬ ಮಾತನ್ನು ಸೂಚಿಸಿದ್ದಿರಿ. ಇದನ್ನು ಬರೆದು ನನ್ನ ಕಣ್ಣು ತೆರೆಸಿದ್ದಕ್ಕೆ ವಂದನೆಗಳು.

  Like

 4. Lekhana chennagide. Bhaaratadalli haagu kela mattige videshadalloo kelasa maaditturu swayamseva samsthe – Raashtriya Swayam Sevak Sangha. Bhaarata vibhjaneyaadaga sansastara neravige ninta samstegalli ondu. Janarinda Yaava shulka vantike kelade yele mareya haage kelasa maaduttade. Aadare ee politically correct prapanchadalli adakke siguva mannane sikkilla.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.