ರಾಮಾಯಣದಲ್ಲಿ ಬರುವ ಒಂದು ಶ್ಲೋಕ:
”ಶನೈರ್ಯಂತಿ ಪಿಪೀಲಿಕಾ ಯೋಜನಾನಿ ಶತಾನಪಿ
ಅಗಛ್ಚನ್ ವೈನತೇಯೋಪಿ ಪದಂ ಏಕ ನ ಗಛ್ಚತಿ”
ಎಂದು ಹೇಳುತ್ತದೆ. ಸಂದರ್ಭ ನನಗೆ ನೆನಪಿಲ್ಲ. ಆದರೆ ಇದರ ಅರ್ಥ ಜೀವನದ ಎಲ್ಲಾ ಸಮಯ -ಸಂದರ್ಭಕ್ಕೂ, ಕಾರ್ಯ ಕಲಾಪಗಳಿಗೂ ಅನ್ವಯವಾಗುತ್ತದೆ. ಇದರ ಅರ್ಥ ಇಷ್ಟೇ “ ಕಾರ್ಯ ಸಾಧನೆಗೆ ತೊಡಗುವ ಮನಸ್ಸುಳ್ಳು ಇರುವೆಯು, ನೂರು ಯೋಜನ ದೂರವನ್ನು ಕ್ರಮಿಸಬಲ್ಲುದಾದರೆ,ಇಚ್ಚಾಶಕ್ತಿ ಇರದ ಶಕ್ತಿಶಾಲಿ ಗರುಡ,ಒಂದೇ ಒಂದು ಹೆಜ್ಜೆಯನ್ನೂ ಕ್ರಮಿಸಲಾರದು” ಎಂಬುದೇ ಆಗಿದೆ.
ನಮ್ಮ ಸಾಮರ್ಥ್ಯ ಏನೇ ಇದ್ದರೂ ,ಕಾರ್ಯ ತತ್ಪರತೆ ಇರದಿದ್ದಲ್ಲಿ, ಗುರಿಮುಟ್ಟುವುದು ಅಸಾಧ್ಯ. ಈ ನಿಟ್ಟಿನಲ್ಲಿ, ನಮ್ಮ ಕೆಲಸವನ್ನು ಅವಲೋಕಿಸಿಕೊಂಡು ಮುಂದಿನ ಹಾದಿಯನ್ನು, ನಡೆಯನ್ನು ನಿರ್ಧರಿಸಲು ಅನುವಾಗುವ ಮೊದಲ ಹೆಜ್ಜೆ ಈ ಲೇಖನ ಮಾಲೆ. ಓದಿ, ನಿಮ್ಮ ಅನಿಸಿಕೆ ತಿಳಿಸಿ.
ಅನಿವಾಸಿಗೆ ಒಂದು ವರ್ಷ! ಅವಲೋಕನ – ಡಾ.ರಾಜಾರಾಮ ಕಾವಳೆ, ಡಾ. ಶ್ರೀವತ್ಸ ದೇಸಾಯಿ
ಡಾ.ರಾಜಾರಾಮ ಕಾವಳೆ ಅವರ ಲೇಖನ
ಹೊರನಾಡಿನ ಕನ್ನಡಿಗರ ‘ಕನ್ನಡ’ ಎಲ್ಲಿದೆ?
ನಮ್ಮ ರಾಷ್ಟ್ರಕವಿಗಳಾದ ಕುವೆಂಪು ಅವರ ನುಡಿ ‘ಎಲ್ಲಾದರು ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ನುಡಿಯು, ವಿಪರೀತವಾಗಿ ಉಪಯೋಗಿಸಿ ಸವಕಲಾಗಿದ್ದರೂ (cliche) ಈ ನುಡಿ ಇನ್ನೂ ಚಲಾವಣೆಯಲ್ಲಿದ್ದು ಹೊರನಾಡಿನಲ್ಲಿ ನೆಲಸಿರುವ ಕನ್ನಡಿಗರಿಗೆ ಅದು ಶಾಶ್ವತ ಹಿತನುಡಿಯಾಗಿ ಇನ್ನೂ ಮಾರ್ಗದರ್ಶಕವಾಗಿ ಉಳಿದಿದೆ. ’ಕನ್ನಡವಾಗಿರಬೇಕಾದ ಕನ್ನಡಿಗರ ಅವಶ್ಯಕವಾದ ’ಕನ್ನಡ’ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ನನಗೆ ದೊರಕಿದ್ದು ನಾನು ಮಧ್ಯ ಪ್ರಾಚ್ಯ ದೇಶದಲ್ಲಿ ವಾಸಿಸಲು ಹೋದಮೇಲೆ. ಜೀ ಪಿ ರಾಜರತ್ನಮ್ ಅವರು ಬರೆದ ’ಕನ್ನಡ ಪದಗೊಳು’ ಪದ್ಯದಲ್ಲಿ ಹೇಳಿದ ಹಾಗೆ, ’ನರಕಕ್ಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ- ಮೂಗ್ನಲ್ ಕನ್ನಡ್ ಪದವಾಡ್ತೀನಿ! ನನ್ ಮನಸನ್ನ ನೀ ಕಾಣೆ! ’ ಎಂಬ ಸಾಲುಗಳು ನನ್ನ ಮನಸ್ಸಿಗೆ ಬಂದವು. ಸೌದೀ ಅರೇಬಿಯ ನರಕದ ತರಹ ಇಲ್ಲದಿದ್ದರೂ, ಓದಲು ಯಾವ ಕನ್ನಡದ ಭಾಷೆಯ ಪುಸ್ತಕಗಳೂ ಲಭ್ಯವಿರಲಿಲ್ಲ. ೧೯೯೫ರಲ್ಲಿ ಅಲ್ಲಿಗೆ ಅಂತರಜಾಲವು ಇನ್ನೂ ಬಂದಿರಲಿಲ್ಲ. ಕನ್ನಡದ ವಿಚಾರವಾಗಿ ನನಗೆ ’ನಾಲಗೆ ಸೀಳ್ಸಿ, ಬಾಯ್ ಒಲಿಸಾಕಿ, ಕಿವಿ ಮುಚ್ಚಿದ’ ಹಾಗೆ ಅನಿಸಿತು. ೨೦೦೦ನೇಯ ಇಸವಿಯಲ್ಲಿ ಆ ದೇಶಕ್ಕೆ ಅಂತರಜಾಲ ಬಂದಿತು. ಕತ್ತಲೆಯನ್ನು ಆವರಿಸಿದ ಸುರಂಗದ ಕೊನೆಯಲ್ಲಿ ಕನ್ನಡದ ಬೆಳಕು ಕಾಣಿಸಿತು. ನನ್ನ ಆನಂದಕ್ಕೆ ಯಾವ ಮಿತಿ ಇರಲಿಲ್ಲ. ಕನ್ನಡದ ’ಅದೋ-ಕನ್ನಡ’((That’s Kannada) ಎಂಬ ಪತ್ರಿಕೆಯನ್ನು ಅಂತರಜಾಲದಲ್ಲಿ ಓದಲು ಪ್ರಾರಂಭಿಸಿದೆ. ಆ ಪತ್ರಿಕೆಯ ಸಂಪಾದಕ ಶಾಮಸುಂದರ್ ಅವರ ಪರಿಚಯವಾಯಿತು. ಅವರ ಉತ್ತೇಜನದಿಂದ ಕನ್ನಡದಲ್ಲಿ ಲೇಖನಗಳನ್ನು ಬರೆಯಲು ಶುರುಮಾಡಿದೆ. ಆ ಸಮಯದಲ್ಲಿ ಇಂಗ್ಲಿಷಿನಲ್ಲಿರುವ ಕನ್ನಡ ಪದಗಳಿಗೆ ಭಾಷಾಂತರಿಸಲು ನನ್ನ ಬಳಿ ಯಾವ ನಿಘಂಟು ಇರದೆ ಹಲವು ತಿಂಗಳು ಕಳೆದೆ. ಆ ಸಮಯದಲ್ಲಿ ಕನ್ನಡ ಲೇಖನಗಳನ್ನು ಬರೆಯುವಾಗ ಇಂಗ್ಲಿಷ್ ಪದಗಳಿಗೆ ಸರಿಯಾದ ಕನ್ನಡ ಪದಗಳು ಸಿಗುವ ಜಾಗ ನನ್ನ ಮನಸ್ಸೊಂದೇ ಎಂದು ಧೃಡವಾಯಿತು. ಒಂದು ಪದವನ್ನು ಮನಸ್ಸಿನಲ್ಲಿ ಹುಡುಕಲು ಅನೇಕ ಘಂಟೆಗಳಕಾಲ ಮನೆಯಲ್ಲೇ ಶತಪಥ ತಿರುಗಾಡುವುದು ಸಾಮಾನ್ಯವಾಯಿತು. ಆಶ್ಚರ್ಯವೆಂದರೆ, ಹಾಗೆ ಯೋಚನೆಯಲ್ಲಿ ತೊಡಗಿ ತಿರುಗಾಡುತ್ತಿರುವಾಗ ಸರಿಯಾದ ಪದಗಳು ನನಗೆ ಮನಸ್ಸಿನಲ್ಲಿ ಹೊಳೆಯುತ್ತಿದ್ದವು. ಆಗ ನನಗೆ, ‘ಹೊರನಾಡಿನಲ್ಲಿ ನೆಲಸಿರುವ ಕನ್ನಡಿಗ, ಕನ್ನಡತಿಯರಿಗೆ ಕನ್ನಡದ ಗಣಿಯು ಅವರವರ ಮನಸ್ಸಿನಲ್ಲಿಯೇ ಇದೆ ಎಂಬುದು ನನಗೆ ಖಚಿತವಾಯಿತು.
ನಮ್ಮ ಬಳಗದ ಕನ್ನಡ ಸಾಹಿತ್ಯ ವಿಚಾರ ವೇದಿಕೆಯ ಒಂದನೆಯ ಹುಟ್ಟು ಹಬ್ಬದ ಸಮಯದಲ್ಲಿ ನನ್ನ ಅನುಭವಗಳನ್ನು ಏಕೆ ಹೇಳುತ್ತಿದ್ದೇನೆ ಎಂದರೆ ಬಳಗದ ಲೇಖಕ ಲೇಖಕಿಯರು ಕರ್ನಾಟವನ್ನು ಬಿಟ್ಟು ದಶಕಗಳಾಗಿದ್ದರೂ ಇವರುಗಳ ಕೃತಿಗಳು ದಿನೇದಿನೆ ಉತ್ಕೃಷ್ಟವಾಗುತ್ತ ಬೆಳೆದು ಬಂದಿವೆ. ಇವರಲ್ಲಿ ಅನೇಕರು ಕಾವ್ಯಬರೆಯುವುದರಲ್ಲಿ ಯಾವ ಕವಿಗಳಿಗೂ ಕಡಿಮೆಯೇನಿಲ್ಲ. ಇವರ ಬರವಣಿಗೆಗಳು ಓದುಗರನ್ನು ಮೈಮರೆಸಿ ಸರಾಗವಾಗಿ, ರಭಸದಿಂದ ಅವರಿಗರಿವಿಲ್ಲದೇ ಕಥಾಸನ್ನಿವೇಶದೊಳಗೆ ಅವರನ್ನು ಕರೆದೊಯ್ದು ಅಲ್ಲಿನ ಆಗು ಹೋಗುಗಳನ್ನು ಅಗೋಚರವಾಗಿ ವೀಕ್ಷಿಸಲು ಅನುವುಮಾಡುವುವು. ಇವರುಗಳಿಗೆ ಈ ಉನ್ನತ ಬರವಣಿಗೆಗಳನ್ನು ಬರೆಯಲು ಮೂಲವಾದ ಕನ್ನಡ ಜ್ಞಾನ ಭಂಡಾರವು ಅವರವರ ಅಂತರಾಳದ ಮನಸ್ಸೇ ಅಲ್ಲವೇ?
ಇನ್ನೊಂದು ಮಹತ್ವದ ವಿಚಾರವೆಂದರೆ, ಈ ವೇದಿಕೆಯ ಸದಸ್ಯರುಗಳು ವರ್ಷಕ್ಕೆ ಎರಡು ಸಲ ನೂರಾರು ಮೈಲುಗಳ ಪ್ರಯಾಣಮಾಡಿ ಒಟ್ಟಿಗೆ ಸೇರಿ ವಿಚಾರ ವಿನಿಮಯ ಮಾಡುವರು. ಆದೂ ಅಲ್ಲದೆ ವೇದಿಕೆಯು ತಮ್ಮದೇ ಆದ ಅಂತರಜಾಲ ತಾಣವನ್ನು ನಿರ್ಮಿಸಿ ತಮ್ಮ ಲೇಖನ, ಕಾವ್ಯ ಮತ್ತು ಇತರ ಬರಹಗಳನ್ನು ಪ್ರಕಟಿಸುವರು. ಈ ತಾಣದ ಜಾಲಜಗುಲಿಯಲ್ಲಿ ಪ್ರಕಟಿತವಾದ ಬರಹಗಳಿಗೆ ಓದುಗರು ತಮ್ಮ ಪ್ರತಿಕ್ರಿಯೆಗಳನ್ನು ತಕ್ಷಣ ಬರೆಯಲು ಅವಕಾಶವಿರುವುದು. ಆದರೆ ಒಂದೇ ಕೊರತೆಯೇನೆಂದರೆ, ಕನ್ನಡ ಬಳಗದ ಸದಸ್ಯರುಗಳು ಅಷ್ಟು ಹೆಚ್ಚಾಗಿ ಈ ವೇದಿಕೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರಿಗೆ ಈ ವೇದಿಕೆಯ ವಿಚಾರವಾಗೆ ಅಷ್ಟು ಗೊತ್ತಿಲ್ಲದಿರಬಹುದು. ಗೊತ್ತಿದ್ದರೂ ಅವರಿಗೆ ಎನೋ ಆತಂಕ. ಅನೇಕರಿಗೆ ಕನ್ನಡದಲ್ಲಿ ಬರೆಯಲು ಕಷ್ಟವಿರಬಹುದು, ಬಳಗದ ಅನೇಕ ಸದಸ್ಯರುಗಳು ಹಿರಿಯರಾಗಿ ನಿವೃತ್ತಗೊಂಡಿರುವುದರಿಂದ ಮತ್ತು ವೈಯುಕ್ತಿಕ ತೊಡಕುಗಳಿರಬಹುದು. ಆದರೂ ಎಲ್ಲರೂ ತಮ್ಮ ಪ್ರತಿಕ್ರಿಯೆಗಳನ್ನು ಆಂಗ್ಲಭಾಷೆಯಲ್ಲೇ ಬರೆಯಬಹುದಲ್ಲಾ! ಆದುದರಿಂದ ನಮ್ಮ ಕನ್ನಡ ಸಾಹಿತ್ಯ ಸಂಸ್ಕೃತಿ ವಿಚಾರ ವೇದಿಕೆಯ ಪ್ರಚಾರ ಇನ್ನೂ ಅಧಿಕಗೊಳಿಸುವುದು ಅತ್ಯವಶ್ಯಕ.
————-xxxxxxxxx———–
ಅನಿವಾಸಿಗೆ ಒಂದು ವರ್ಷ! ಡಾ. ಶ್ರೀವತ್ಸ ದೇಸಾಯಿ
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ (ಕ ಸಾ ಸಾಂ ವಿ ವೇ) ಎಂಬ ಉದ್ದನ್ನ ಹೆಸರಿನೊಂದಿಗೆ ಜನ್ಮ ತಾಳಿದ ನಮ್ಮ ಜಾಲಜಗುಲಿಗೆ ಈಗ ಒಂದು ವರ್ಷ ತುಂಬಿದೆ. ಹಸುಳೆಯ ಬೆಳವಣಿಗೆಯನ್ನಷ್ಟೇ ನೋಡುವ ಲೇಖನವಿದು; ಅದರ ಸಾಧನೆಯನ್ನಳೆಯುವದು ತಪ್ಪಾದೀತು. ಈಗ ಪೋಷಿಸುತ್ತಿರುವ ಸದಸ್ಯರು ಕೂಸಿನ ಮೈಲಿಗಲ್ಲುಗಳನ್ನು (milestones) ಕಂಡು ಆನಂದ-ಸಮಾಧಾನ ಪಡೆಯಬಹುದೋ? ಇನ್ನೂ ಅಂಬೆಗಾಲಿಡುತ್ತಿರುವಾಗ ಇದನ್ನು ’ನಡೆದು ಬಂದ ದಾರಿ’ ಯೆನ್ನುವದಕ್ಕೆ ಅಥವಾ ಸಿಂಹಾವಲೋಕನ ಎನ್ನಲು ಬರುವದಿಲ್ಲ.
ಹಿನ್ನೋಟ:
ಎಲ್ಲದಕ್ಕೂ ಒಂದು ಕಾಲ ಬರಬೇಕಾಗುತ್ತದೆ.

ನಾನು 1970 ರ ದಶಕದಲ್ಲಿ ಯು ಕೆ ಗೆ ಬಂದಾಗ ಕನ್ನಡಿಗರನ್ನು ಕಾಣುವದೂ ಕಷ್ಟವಾಗಿತ್ತು. ಅಂತರ್ಜಾಲ, ಮೋಬೈಲುಗಳು ಇನ್ನೂ ಬಂದಿರಲಿಲ್ಲ. ’ಯು. ಕೆ.ಕನ್ನಡ ಬಳಗ’ವನ್ನು ಕಟ್ಟಿದ್ದೇ ಒಂದು ಸಾಹಸ. ಕನ್ನಡಿಗರು ಒಂದುಗೂಡಿದಾಗಲಿಂದಲೇ ಬರಹ ಮಾಧ್ಯಮದ ಅವಶ್ಯಕತೆಯ ಅರಿವಿದ್ದರೂ ಸಂಪನ್ಮೂಲ ತಂತ್ರಜ್ಞಾನ ಇವುಗಳ ಅಭಾವವಿತ್ತು. ಆಗ ಕನ್ನಡ, ಇಂಗ್ಲಿಷ್ನಲ್ಲಿ ಟೈಪು ಮಾಡಿ, ಅಥವಾ ಕೈಯಲ್ಲಿ ಬರೆದು ಪತ್ರಿಕೆಗಳನ್ನು ಅಚ್ಚು ಹಾಕಿಸುತ್ತಿದ್ದೆವು (ಚಿತ್ರ ನೋಡಿರಿ –>). ಈಗ ವಿದ್ಯುನ್ಮಾನ ತಂತ್ರಗಳ ಸೌಲಭ್ಯವಿದೆ. ಕಳೆದ ಎರಡು ಮೂರು ದಶಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕನ್ನಡ ನವ ಪೀಳಿಗೆಯ ಉತ್ಸಾಹ ಮತ್ತು ಕಾರ್ಯಪ್ರವೃತ್ತಿಯಿಂದ ನಮ್ಮದೇ ಒಂದು ವೇದಿಕೆಯನ್ನು ರೂಪಿಸಬೇಕೆಂದು ಮುಂದಾದ ಕನಸುಗಾರರ ಕೂಸು ಈ ಬ್ಲಾಗು ಎನ್ನಲಡ್ಡಿಯಿಲ್ಲ. ಆ ಪ್ರಸವ ವೇದನೆಯಲ್ಲಿ ಪಾಲುಗೊಂಡ (ವಿವಿಧ ರೀತಿಯ) ಡಾಕ್ಟರುಗಳಾದ ಉಮಾ ವೆಂಕಟೇಶ್, ಕೇಶವ ಕುಲಕರ್ಣಿ, ಶಿವಪ್ರಸಾದ್ ಮುಂತಾದವರನ್ನು ನೆನೆಯಲೇ ಬೇಕು. ಹಿಂದೆ ಸಂದೇಶದ ಸಂಪಾದಕ ಮಂಡಲಿಯಲ್ಲಿ ಕೆಲಸ ಮಾಡಿದ ವತ್ಸಲಾ ಅವರೂ ಬಂದು ಕೂಡಿದರು. ”ಕಣಿಯೇಕೆ ಕೇಳುತ್ತೀರಿ?” ಎಂದು ಕೇಳಿದ ಕೇಶವ ಏನೂ ತಾಂತ್ರಿಕ ಅರಿವಿರದ ನನ್ನಂಥವರಿಗೆ ಭರವಸೆ ಕೊಟ್ಟು ಬ್ಲಾಗನ್ನು ರಚಿಸಿ ದಾರಿ ಮಾಡಿ ಕೊಟ್ಟರು. ಮೊದಲ ಸಂಚಿಕೆ ಫೆಬ್ರುವರಿ 3 ರಂದು ಪ್ರಕಟವಾದಾಗ ಹೊಸ ಕೂಸನ್ನು ಕಂಡಂತೆ ಹರ್ಷ! “ಹುಟ್ಟಿಸುವದು ಸುಲಭ, ಬೆಳೆಸುವದು ಕಷ್ಟ” ಅಂದರು ಒಬ್ಬ ಅನುಭವಿ! ಆ ಜವಾಬ್ದಾರಿಗೆ ಬೆನ್ನು ಕೊಟ್ಟವರು ಅನೇಕ. ಮೊದಲ ಪುಟದಲ್ಲಿ ಅವರ ಹೆಸರು (email ID) ಗಳಿವೆ. ಬೇರೆ ಕೆಲವರದು ಇನ್ನೂ ಸೇರುವದಿದೆ. ಒಂದು ವರ್ಷದಲ್ಲಿ 68 ಬರಹಗಳು. ಈ ಸಂಖ್ಯೆ ಅಂಥದೇನೂ ಮಹಾನ್ ಅಲ್ಲ. ಹೆಚ್ಚಾಗಿನ ”ಸದಸ್ಯರು’’ ವೃತ್ತಿಯಿಂದ ವೈದ್ಯರಾಗಿದ್ದು ಬರೆಯುವ ಹವ್ಯಾಸ, ಉತ್ಸಾಹವಿದ್ದರೂ (ಒಬ್ಬಿಬ್ಬರ ಸ್ಫೂರ್ತಿಯ ಸುನಾಮಿಯನ್ನು ಬಿಟ್ಟರೆ) ಬರವಣಿಗೆಯಲ್ಲಿ ತೊಡಗಿದವರು ಬಹಳಿಲ್ಲ. ಇದು ಸದ್ಯಕ್ಕಂತೂ ಇನ್ನೂ ನಮ್ಮ ನಾಮಫಲಕ ಬಿತ್ತರಿಸಿ ಹೇಳುವಂತೆ ‘ಯು ಕೆ ಕನ್ನಡಿಗರ ತಂಗುದಾಣ’ವಾಗಿದೆ. ಮುಂದೆ ಇದನ್ನು ಮುಕ್ತ ಮಾಡುವದೆಂದು ಎಂದು ನಿರ್ಧರಿಸಬೇಕಾಗಿದೆ.
ಬ್ಲಾಗಿನಲ್ಲಿ ಹೆಚ್ಚಿನವು (17) ಕವನಗಳೇ. ಕೆಲವು ಚಿತ್ರ-ಕವನಗಳು. ಇದು ಇಂದಿನ ಯುಗದ ಮಹಾತ್ಮೆಯೋ? ಯಾರೋ ಹೇಳಿದರು: “ಫೇಸ್ ಬುಕ್ ಹುಟ್ಟಿಸಿದಂತೆ ಇಷ್ಟೊಂದು ಕವಿಗಳು ಎಂದೂ ಒಮ್ಮೆಲೆ ಹುಟ್ಟಿರಲಿಲ್ಲ; ಡಿಜಿಟಲ್ ಕ್ಯಾಮರಾದ ಕರಾಮತ್ತಿನಿ೦ದ ಎಲ್ಲರೂ ನ್ಯಾಷನಲ್ ಜಿಯಾಗ್ರಫಿಕ್ ದರ್ಜೆಯ ಛಾಯಾಚಿತ್ರಕಾರರೇ ಆಗಿದ್ದಾರೆ!” ಇದು ಸ್ವಲ್ಪ ಉತ್ಪ್ರೇಕ್ಷೆಯಾದರೂ ಈ ಜಾಲಜಗುಲಿಯಲ್ಲಿ ಗುಣಮಟ್ಟದ ಮತ್ತು ಪ್ರಾಸ, ಲಯಭರಿತ ಕವನಗಳಿಂದ ಹಿಡಿದು ಚುಟುಕ, ನವ್ಯ ವಸ್ತುಗಳನ್ನೊಳಗೊ೦ಡ ಪದ್ಯಗಳು ಎಲ್ಲ ಸೇರಿವೆ. ಪ್ರಕಟವಾದ ಗದ್ಯದಲ್ಲಿ ವೈಚಾರಿಕ ಲೇಖನಗಳುಂಟು, ಹರಟೆಗಳುಂಟು. ಸುದರ್ಶನರು ಕಟ್ಟಿದ ಹರಟೆ ಕಟ್ಟೆಗೆ ವಿಜಿ ಮಾಮಾ ಮತ್ತು ಅವರ ಮೂರು ಸೋದರಳಿಯರಾಗಲಿ, ವಿಜಯ ಮತ್ತು ನಾಲ್ವರು ’ಪೋಲಿ’ ಗೆಳೆಯರಾಗಲಿ ಬಂದು ಕೂತಿರುತ್ತಾರೆ! ಒಮ್ಮೊಮ್ಮೆ ನಮ್ಮನ್ನೂ ವೈಕುಂಠಕ್ಕೋ, ವ್ಯೋಮಕ್ಕೋ ಎಳೆದುಕೊಂಡು ಹೊಗುತ್ತಾರೆ! ಎಲ್ಲವೂ ರಸವತ್ತಾಗಿವೆ.
ನಮ್ಮಲ್ಲಿ ಕೆಲವರಿಗಾದರೂ ಕಂಪ್ಯೂಟರಿನಲ್ಲಿ ಕನ್ನಡ ಬರೆಯಲು ತೊಂದರೆಯಾಗುತ್ತಿದೆಯೆಂದು ಎಲ್ಲರಿಗೂ ಸಹಾಯವಾಗಲೆಂದು ಲೇಖನ ಬರೆಯುವ ಸಮಯದಲ್ಲಿ ಲಭ್ಯವಿರುವ ಎಲ್ಲ ಸಾಫ್ಟ್ ವೇರ್, ಆಪ್ ಇವುಗಳನ್ನೆಲ್ಲ ಜಾಲಾಡಿಸಿ ಒಂದು ಅತ್ಯಂತ ಉಪಯುಕ್ತ ಲೇಖನವನ್ನು ಕೇಶವ ಕುಲಕರ್ಣಿಯವರು ಕೊಟ್ಟಿದ್ದಾರೆ.(http://wp.me/p4jn5J-76) ನಾನ೦ತೂ ಅದನ್ನು ಪದೇ ಪದೇ ಪರಾಮರ್ಶಿಸುತ್ತೇನೆ. ಧನ್ಯವಾದಗಳು, ಕೇಶವ್.
“ನಮ್ಮೂರು” ಎ೦ದು ಯಾರಿಗೆ ತಾನೆ ಅಭಿಮಾನವಿಲ್ಲ? ಊರಿನ ನೆನಪುಗಳ ಸರಣಿಯಲ್ಲಿ ಗಹನ ವಿಚಾರಗಳನ್ನು ಯಾರೂ ಹುಡುಕಿಲ್ಲ; ಆದರೆ nostalgia ಅಕ್ಷಮ್ಯವಲ್ಲ! ಬಂದ ಲೇಖನಗಳಿಗೆ ಬೆ೦ಗಳೂರು-ಮೈಸೂರಿನವರದ೦ತೂ ಕ೦ಪ್ಲೇ೦ಟ್ ಇಲ್ಲ. ಇದಲ್ಲದೆ ಇಲ್ಲಿ ಹೊರಬ೦ದ ಸಿನಿಮಾ, ಸ೦ಗೀತದ, ಪುಸ್ತಕ ವಿಮರ್ಶೆಗಳಲ್ಲಿ ಪ್ರಾಮಾಣಿಕ ಅಭಿಪ್ರಾಯಗಳು ಕಂಡು ಬರುವದು ಅರೋಗ್ಯಕರವೇ.
ಮುನ್ನೋಟ
ಅ೦ತೂ ಈ ವರ್ಷದ ಪೈರಿನಲ್ಲಿ ವೈವಿಧ್ಯತೆಯಿದೆ (ಪ್ರವಾಸ, ವ್ಯಕ್ತಿಚಿತ್ರ, ಸ೦ದರ್ಶನ) ಎನ್ನಬಹುದಾದರೂ, ಮು೦ದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ವೈವಿಧ್ಯತೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಯತ್ತ ಗುರಿಯಿಡಬೇಕಾಗಿದೆ.
ಮೇಲೆ ಹೇಳಿದ ಕಾರಣಗಳಿಂದ ಇದಕ್ಕೆ ಖಾಯ೦ ಸ೦ಪಾದಕರಿಲ್ಲ ಎನ್ನುವ ಕೊರತೆಯಿದೆ. ಇದನ್ನು ನಿವಾರಿಸಿದರೆ ತನ್ನತನ ಕಳೆದುಕೊಳ್ಳದೆ ರೆಕ್ಕೆ ಬಿಚ್ಚಿ ಹಾರುವಾ ಎಂದು ಹಾರೈಸೋಣವೇ?
ಡಾ. ಶ್ರೀವತ್ಸ ದೇಸಾಯಿ
Sorry for writing in English.
Its amazing feat to complete one year and what a way to recollect! I wish this forum to grow up and involve more people in the UK and away.
Special thanks to Sudarshan for increasing the quality of the website and articles. Special thanks to Desai and Uma for making it happen.
LikeLike
ಕಸಾಸವಿವೇ ಯ ಮೊದಲ ಹುಟಿದಬ್ಬಕ್ಕೆ ನಮ್ಮೆಲ್ಲರ ಶುಭ ಹಾರೈಕೆಗಳು. ಅದರ ಕನಸನ್ನು ಕಟ್ಟಿ, ಹುಟ್ಟು ಹಾಕಿ, ವೇದಿಕೆ ಕಟ್ಟಿ, ಅನಿವಾಸಿ ಕನ್ನಡಿಗರಿಗೆ ಒಂದು ಜಾಲ ಜಗುಲಿಯನ್ನು ಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದಗಳು. ಅದನ್ನು ಬೆಳೆಸುತ್ತಿರುವವರಿಗೂ, ಹೊಸ ರೂಪ ವಿನ್ಯಾಸಗಳಿಂದ ಆಕರ್ಷಕವಾಗುವಂತೆ ಕಾಣುವಂತೆ ಮಾಡಲು ಶ್ರಮಿಸುತ್ತಿರುವವರಿಗೂ ಮತ್ತು ಎಲ್ಲ ಬರಹಗಾರರಿಗೂ ನಮ್ಮ ಶುಭಾಶಯಗಳು.
ಒಂದು ವರ್ಷದ ಅವಲೋಕನವನ್ನು, ಅನುಭವಗಳನ್ನು ಬರೆದ ಹಿರಿಯ ಸ್ಪೂರ್ತಿದಾಯಕ ಚೇತನಗಳಾದ ರಾಜಾರಾಮ ಕಾವಳೆ ಮತ್ತು ದೇಸಾಯಿಯವರು ನೆನಪಿನ ಮೈಲಿಗಲ್ಲನ್ನು ಈ ಮೂಲಕ ಸ್ಥಾಪಿಸಿದ್ದಾರೆ.
LikeLike
ಅನಿವಾಸಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ಈ ವೇದಿಕೆಯ ಸದಸ್ಯರಿಗೆ ಅಬಿನಂದನೆಗಳು
LikeLike
ಕನ್ನಡತನವನ್ನು, ಸಿರಿಗನ್ನಡದ ಸೊಬಗು ಮತ್ತು ಸೊಗಡನ್ನು ಲೇಖನಗಳ ಮೂಲಕ ಉಳಿಸಿ, ಬೆಳಸಿ ನಡೆಸಿಕೊಂಡು ಹೋಗುವ ಒಂದು ಮಹತ್ವಾಕಾಂಕ್ಷೆಯಿಂದ ಹುಟ್ಟುಹಾಕಿದ “ಅನಿವಾಸಿ“ ತಂಗುದಾಣಕ್ಕೆ ಮೊದಲ ವರ್ಷದ ಹುಟ್ಟುಹಬ್ಬ. ಯು.ಕೆ ಕನ್ನಡ ಬಳಗದ ಹಿರಿಯ, ಸಹೃದಯಿ ಕನ್ನಡಿಗರಾದ ಡಾ ದೇಸಾಯಿ ಮತ್ತು ಡಾ ಕಾವಳೆ ಅವರು, ಈ ಸಂಧರ್ಬದಲ್ಲಿ ಬೆರೆದಿರುವ ಈ ಲೇಖನಗಳು, ಸಂಧರ್ಭೋಚಿತವಾಗಿವೆ. ಕನ್ನಡ ಬಳಗದ ಜನ್ಮ ದಿನದಿಂದಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಆಂಗ್ಲ ನಾಡಿನಲ್ಲಿ ಉಳಿಸಿ, ಬೆಳಸುವ ಸತ್ಕಾರ್ಯದಲ್ಲಿ ಬೆನ್ನಲುಬಾಗಿ ನಿಂತು, ಇಂದಿಗೂ ಆ ಕಾರ್ಯವನ್ನು ಯಶಸ್ವಿಯಾಗಿ ನಡೆಯಲು ತಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತಿರುವ ಈ ಕನ್ನಡಿಗರಿಗೆ ನನ್ನ ನಮನಗಳು. ಅನಿವಾಸಿಯ ಜನ್ಮ ವೃತ್ತಾಂತ ನಿಜಕ್ಕೂ ಒಂದು ಕುತೂಹಲಕಾರಿ ಸಂಗತಿ. ಕನ್ನಡ ಬಳಗ ಯು.ಕೆ ಪ್ರಾರಂಭವಾದ ೩೦ ವರ್ಷಗಳ ನಂತರ , ಯು.ಕೆ ಕನ್ನಡಿಗರಿಗೆ ತಮ್ಮ ಮನದ ಮಾತುಗಳನ್ನು, ತಮ್ಮ ಬರವಣಿಗೆಯ ಪ್ರತಿಭೆಯನ್ನು ಹೊರಹೊಮ್ಮಿಸಲು ಒಂದು ವೇದಿಕೆಯ ಲಭ್ಯವಾಯಿತು. ಎಲ್ಲಕ್ಕೂ ಕಾಲ ಕೂಡಿಬರಬೇಕು ಎನ್ನುವ ಮಾತುಗಳು ಬಹುಶಃ ನಿಜವೇನೋ. ಮೊದಲ ಈ ಹನ್ನೆರಡು ತಿಂಗಳುಗಳಲ್ಲೇ, ತಮ್ಮ ವೈವಿಧ್ಯತೆಯ ಬರವಣಿಗೆಗಳ ಮೂಲಕ, ಬಳಗದ ಸದಸ್ಯರು ತಮ್ಮ ಕನ್ನಡತನವನ್ನು ಮೆರೆದಿದ್ದಾರೆ. ಸಧ್ಯದಲ್ಲಿ ಇದೊಂದು ಅಲ್ಪಸಂಖ್ಯಾತರ ಗುಂಪಾಗಿದೆ ನಿಜ. ಆದರೆ ತಮ್ಮ ಹುರುಪು, ಹುಮ್ಮನಸ್ಸುಗಳ ಮೂಲಕ, ಅದನ್ನು ಒಂದು ಜನಪ್ರಿಯ ಸಮೂಹವನ್ನಾಗಿ ಮಾಡುವ ಪ್ರತಿಭೆ ಮತ್ತು ಸಾಮರ್ಥ್ಯಗಳು ಅವರಲ್ಲಿವೆ. ಮುಂಬರುವ ವರ್ಷಗಳಲ್ಲಿ ಅನಿವಾಸಿ ಕನ್ನಡಿಗ ತನ್ನ ಲೇಖನಗಳ ಮೂಲಕ, ಬಳಗದ ಸದಸ್ಯರ ಮನಗಳಲ್ಲಿ ಕನ್ನಡತನವನ್ನು ಬಡಿದೆಬ್ಬಿಸಿ, ಅವರ ಮನಗಳಲ್ಲಿ ತನ್ನ ಛಾಪನ್ನು ಯಶಸ್ವಿಯಾಗಿ ಮೂಡಿಸುತ್ತಾನೆ ಎಂದು ಆಶಿಸುತ್ತೇನೆ.
ಉಮಾ ವೆಂಕಟೇಶ್
LikeLike