ಯಾನ ಕಾದಂಬರಿ – ಒಂದು ಕಥೆ- ಹಲವು ನೋಟ. ವಿಮರ್ಶಾ ಮಾಲಿಕೆ. ಡಾ.ಉಮಾ ವೆಂಕಟೇಶ್,ಡಾ. ರಾಮಶರಣ್,ಡಾ. ದಾಕ್ಷಾಯಿಣಿ ಗೌಡ &ಸುದರ್ಶನ ಗುರುರಾಜರಾವ್

Kssvv_2

ಭೈರಪ್ಪನವರ ಕಾದಂಬರಿಗಳು, ವಸ್ತು ವಿಷಯದಿಂದಲೂ, ಕಥೆಯ ಗಂಭೀರ ಹಂದರದಿಂದಲೂ ಇತರರಿಗಿಂತ ಭಿನ್ನವಾಗಿರುವ ವಿಚಾರ ತಿಳಿಯದ್ದೇನಲ್ಲ. ಈ ಸರಣಿಗೆ ಮತ್ತೊಂದು ಸೇರ್ಪಡೆ ‘ಯಾನ’. ಇಂಗ್ಲೆಂಡಿನ ಸಾಹಿತ್ಯಾಸಕ್ತರು ಯಾನವನ್ನು ಓದಿ ವಿಮರ್ಶಿಸಿ ಬರೆದ ಲೇಖನಗಳ ಸರಣಿ ನಿಮ್ಮ ಮುಂದಿದೆ.  ಇಣುಕು ನೋಟದ ಪರಿಚಯ ನಿಮಗೆ ನೀಡುತ್ತಿದ್ದೇವೆ,ಪ್ರಯಾಣದಲ್ಲಿ ಹೊರ ನೋಟದ ಅನುಭವ  ಕಣ್ಣಿಗೆ ಒಂದೇ ಆಗಿದ್ದರೂ, ಅನುಭಾವ ವಿಭಿನ್ನವೇ.   

1.ಎಸ್.ಎಲ್.ಭೈರಪ್ಪನವರ ಯಾನ ಕಾದಂಬರಿಯ ಬಗ್ಗೆ ಒಂದು ಕಿರು ವಿಮರ್ಶೆ   (ಡಾ.ಉಮಾ ವೆಂಕಟೇಶ್)

ಕನ್ನಡದ ಆಧುನಿಕ ಸಾಹಿತ್ಯ ಪ್ರಪಂಚದಲ್ಲಿ, ಗಂಭೀರವಾದ ಕಥಾ ವಸ್ತುಗಳನ್ನೊಳಗೊಂಡ ತಮ್ಮ ಕಾದಂಬರಿಗಳ ಮೂಲಕ, ಇಪ್ಪತ್ತನೆಯ ಶತಮಾನದ ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿರುವ ಜನಪ್ರಿಯ ಲೇಖಕ ಎಸ್.ಎಲ್.ಭೈರಪ್ಪನವರು, ತಮ್ಮ ಪುಸ್ತಕಗಳಲ್ಲಿನ ಕಥಾ ವಸ್ತುವಿನ ವೈವಿಧ್ಯತೆಗೆ ಹೆಸರುವಾಸಿಯಾದ ಲೇಖಕರು. ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ತಮ್ಮ ಸಾಹಿತ್ಯದ ಮೂಲಕ ಜನಸಾಮಾನ್ಯರ ಮನಗಳನ್ನು ಪರಿಣಾಮಕಾರಿಯಾಗಿ ಮುಟ್ಟಿದ ಹಲವೇ ಸಾಹಿತಿಗಳಲ್ಲಿ ಒಬ್ಬರು. ಇವರ ಕಾದಂಬರಿಗಳು ಸರ್ವೇ ಸಾಮಾನ್ಯವಾಗಿ, ತಮ್ಮ ಕಥಾ ವಸ್ತು, ಅದನ್ನು ನಡೆಸುವ ರೀತಿ ಮತ್ತು ಅದಕ್ಕೆ ನೀಡುವ ಅಂತ್ಯದ ಬಗ್ಗೆ ಯಾವಾಗಲೂ ಚರ್ಚೆಗೆ ಕಾರಣವಾಗಿವೆ ಎನ್ನುವುದೂ ಅವರ ಓದುಗರಿಗೆ ತಿಳಿದ ವಿಷಯವೇ. ಇವರ ಪುಸ್ತಕಗಳು ಮುದ್ರಣವಾಗುವ ಮುಂಚೆಯೇ, ಓದುಗರ ಭಾರಿ ಬೇಡಿಕೆಯಿಂದಾಗಿ ಮಾರಾಟವಾಗುವುದು ಹಾಗೂ ಮರುಮುದ್ರಣ ಕಾಣುವುದು ಸಹಾ ಜನವಿದಿತವೇ ಆದ ವಿಷಯವಾಗಿದೆ. ಭೈರಪ್ಪನವರ ಹೊಸ ಕಾದಂಬರಿ “ಯಾನ” ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಿಡುಗಡೆಗೆ ಮುನ್ನ ಓದುಗರ ವಲಯಗಳಲ್ಲಿ ಇಂತಹುದೇ ಒಂದು ಕುತೂಹಲವನ್ನು ಎಬ್ಬಿಸಿತ್ತು.

ಶಾಲಾಕಾಲೇಜಿನ ದಿನಗಳಿಂದಲೂ, ಇವರ ಪುಸ್ತಕಗಳನ್ನು ಅಸ್ಥೆಯಿಂದ ಓದುತ್ತಿರುವ ನನಗೆ, ಇವರ ಕೆಲವೇ ಪುಸ್ತಕಗಳು ನಿರಾಸೆಯನ್ನುಂಟುಮಾಡಿವೆ. ಯಾನ ಕಾದಂಬರಿಯ ಬಿಡುಗಡೆಯನ್ನು ಎದಿರು ನೋಡುತ್ತಿದ್ದ ನನಗೆ, ಅಮೆರಿಕೆಯ ಅಕ್ಕ ಸಮ್ಮೇಳನದಲ್ಲಿ ಖುದ್ದಾಗಿ ಅವರನ್ನೇ ಭೇಟಿಯಾಗಿ ಅಲ್ಲಿ ಅಕ್ಕ ಸಮಿತಿಯವರು ಪ್ರತಿಯೊಬ್ಬರಿಗೂ ಕಾಣಿಕೆಯಾಗಿ ಇತ್ತ ಈ ಪುಸ್ತಕವನ್ನು ಓದುವ ಅವಕಾಶ ದೊರೆಯಿತು. ಯಾನ ಪುಸ್ತಕದ ಕಥಾ ವಸ್ತುವಿನ ಬಗ್ಗೆ ಅರಿವಿಲ್ಲದಿದ್ದ ನನಗೆ, ಪುಸ್ತಕದ ಮೊದಲಲ್ಲಿ ಅದರ ಬಗ್ಗೆ ದೊರೆತ ಕಿರು ಪರಿಚಯ ಒಂದು ವಿಧದ ರೋಮಾಂಚನವನ್ನೇ ಉಂಟುಮಾಡಿತು.

With SLBಯಾನ ಕಾದಂಬರಿಯಲ್ಲಿ ಒಂದು ವಿನೂತನ ಕಥಾವಸ್ತುವಿನ ಮೂಲಕ ಭೈರಪ್ಪನವರು ಒಂದು ನೂತನ ಪ್ರಪಂಚವನ್ನೇ ಅವರ ಓದುಗರಿಗೆ ಪರಿಚಯಿಸಿದ್ದಾರೆ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿನ ಗಂಭೀರ ಸಮಸ್ಯೆಗಳನ್ನು ಆಳವಾಗಿ ವಿಶ್ಲೇಷಿಸಿ, ಅದನ್ನು ತಾವು ಸೃಷ್ಟಿಸಿದ ಪಾತ್ರಗಳ ಮೂಲಕ ಓದುಗರಿಗೆ ತಲುಪಿಸಿ, ಅವರಲ್ಲಿ ಚಿಂತನೆಯ ಅಲೆಗಳನ್ನು ಎಬ್ಬಿಸುವಲ್ಲಿ ಯಶಸ್ವಿಯಾಗುವ ಅವರ ಪುಸ್ತಕಗಳು, ಯಾನದಲ್ಲೂ ಅಂತಹುದೇ ಭಾವನೆಗಳನ್ನು ಎಬ್ಬಿಸುತ್ತದೆ. ೨೧ನೆಯ ಶತಮಾನದ ಭಾರತ, ತನ್ನ ಅನುಪಮ ತಂತ್ರಜ್ಞಾನದ ಮೂಲಕ, ಸೂರ್ಯಮಂಡಲದಾಚೆಗೆ ಮಾಡುವ ನಕ್ಷತ್ರಲೋಕದ ಯಾನದಲ್ಲಿ, ಮಾನವನ ನೈತಿಕ ಚೌಕಟ್ಟುಗಳಲ್ಲಾಗುವ ಪಲ್ಲಟವೇ ಈ ಕಾದಂಬರಿಯ ವಸ್ತು.

ಈ ಯಾನವನ್ನು ನಡೆಸಲು ಆಯ್ಕೆಯಾಗುವ ಒಬ್ಬ ಖಭೌತ-ವಿಜ್ಞಾನಿ, ಕಂಪ್ಯೂಟರ್ ತಂತ್ರಘ್ಯಾನದಲ್ಲಿ ನಿಪುಣನಾದ ಸುದರ್ಶನ್ ಮತ್ತು ಅವನ ಸಹಚಾರಿ,  ಭಾರತೀಯ ವಿಮಾನದಳದ ಅತ್ಯುತ್ತಮ ಫೈಟರ್ ಪೈಲಟ್ (ಮುಂದೆ ಅವನ ಪತ್ನಿಯಾಗಿ, ಅವರು ಸೃಷ್ಟಿಸ ಬೇಕಾಗಿದ್ದ ಮಕ್ಕಳ ತಾಯಿ) ಉತ್ತರೆಯ ಸುತ್ತಮುತ್ತಾ ಹೆಣೆದ ಈ ಕಥೆ, ಓದುಗನನ್ನು ಬಾಹ್ಯಾಕಾಶಲೋಕದ ಯಾನದಲ್ಲಿ ಆಳವಾಗಿ ಕರೆದೊಯ್ಯುತ್ತದೆ. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ವಿನ್ಯಾಸಗೊಳಿಸಿದ ಆಕಾಶ ನೌಕೆಯಲ್ಲಿ, ನಮ್ಮ ಸೂರ್ಯನ ಗುರುತ್ವವನ್ನೂ ಮೀರಿ, ೪.೬ ಜ್ಯೋತಿರ್ವರ್ಷಗಳ ದೂರದಲ್ಲಿರುವ, ಮತ್ತೊಂದು ನಕ್ಷತ್ರಮಂಡಲ ಪ್ರಾಕ್ಸಿಮಾ ಸೆಂಟಾರಿಸ್ ಕಡೆಗೆ ಪ್ರಯಾಣಿಸುವ ಈ ಜೋಡಿಯ ನಡುವಿನ ಸಂಬಂಧ, ಅವರ ಆಂತರಿಕ ತುಮುಲಗಳು, ಪರಸ್ಪರ ದ್ವೇಷದ ಭಾವನೆಗಳು, ತಮ್ಮ ಮಾತೃ ಗ್ರಹವನ್ನು ಪೂರ್ಣವಾಗಿ ತೊರೆದು, ಮಾನವನ ಮುಂದಿನ ಪೀಳಿಗೆಯ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಧಾರೆಯೆರಿಯುವ ದೃಢ ಮನೋಸಂಕಲ್ಪದ ಇಬ್ಬರು ಅಪರೂಪದ ವ್ಯಕ್ತಿಗಳ ಸುತ್ತಾ ಹೆಣೆದ ಯಾನದಲ್ಲಿ, ಭೈರಪ್ಪನವರು ಕೇವಲ ವೈಜ್ಞಾನಿಕ ಮತ್ತು ತಂತ್ರಜ್ಞಾನದ ವಿಷಯಗಳನ್ನಷ್ಟೇ ಅಲ್ಲಾ, ಮತ್ತೊಮ್ಮೆ ಮಾನವನ ನಡುವಿನ ಸಂಬಂಧಗಳ ಸಂಕೀರ್ಣತೆಯನ್ನು ವಿಶ್ಲೇಷಿಸುವಲ್ಲಿ ಸಫಲವಾಗಿದ್ದಾರೆ.

ನಮ್ಮ ಸೂರ್ಯಮಂಡಲದ ಭೌತಿಕ ನಿಯಮಗಳಿಗೆ ಬದ್ಧವಾಗಿ, ಮಾನವ ರಚಿಸಿಕೊಂಡಿರುವ ಸಾಮಾಜಿಕ, ಮತ್ತು ನೈತಿಕ ನಿಯಮಗಳು, ಸೂರ್ಯನ ಗುರುತ್ವವನ್ನು ದಾಟಿ ನಡೆದ ಮೇಲೂ ಅವನಿಗೆ ಅನ್ವಯವಾಗುವುದೇ, ಆ ಮೌಲ್ಯಗಳನ್ನು ಅವನಿಗೆ ಕಾಪಾಡಿಕೊಳ್ಳಲು ಸಾಧ್ಯವೇ, ಅಲ್ಲಿ ಅವನು ಎದುರಿಸುವ ವಿವಿಧ ಸಮಸ್ಯೆಗಳನ್ನು ವಿಶ್ಲೇಷಿಸಿ ವಿವರಿಸುವ ಪ್ರಯತ್ನವೇ, ಯಾನ ಕಾದಂಬರಿಯಲ್ಲಿನ ಒಂದು ಪ್ರಯತ್ನ.

ಪುಸ್ತಕದ ಹಿನ್ನುಡಿಯಲ್ಲಿ ಅವರೇ ಹೇಳಿರುವ ಪ್ರಕಾರ, ಈ ಪುಸ್ತಕದ ಪರಿಕಲ್ಪನೆ ಅವರಿಗೆ ೧೯೬೦ರ ದಶಕದಲ್ಲಿ, ಮೊಟ್ಟಮೊದಲ ಬಾರಿಗೆ ರಶ್ಯನ್ ವಿಜ್ಞಾನಿಗಳು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಲಗ್ಗೆಯಿಟ್ಟು, ನಂತರ ಅಮೆರಿಕೆಯ ಅಂತರಿಕ್ಷವಿಜ್ಞಾನಿಗಳು ಚಂದ್ರನ ಮೇಲೆ ಕಾಲಿಟ್ಟು ಅಲ್ಲಿಂದ ಸಫಲರಾಗಿ, ಸುರಕ್ಷಿತವಾಗಿ ಭೂಮಿಗೆ ತಲುಪಿದ ಸಮಯದಿಂದಲೂ ಇತ್ತು ಎನ್ನುವುದನ್ನು ಓದಿ ಮಹದಾಶ್ಚರ್ಯವಾಯಿತು. ತತ್ವಶಾಸ್ತ್ರದ ಹಿನ್ನೆಲೆಯನ್ನು ಉಳ್ಳ ಒಬ್ಬ ವ್ಯಕ್ತಿ, ನಾಲ್ಕು ದಶಕಗಳ ಕಾಲ, ಸದ್ದಿಲ್ಲದೇ ಭೌತಶಾಸ್ತ್ರ, ಅಂತರಿಕ್ಷಯಾನ, ವೈಮಾಂತರಿಕ್ಷ ವಿಜ್ಞಾನಗಳಲ್ಲಿ ಪರಿಣಿತರೊಂದಿಗೆ ಚರ್ಚಿಸಿ, ಕಲಿತು ಇಷ್ಟೊಂದು ನಿಖರವಾಗಿ ಈ ಕ್ಲಿಷ್ಟ ವಿಷಯಗಳನ್ನು ಮನದಟ್ಟು ಮಾಡಿಕೊಂಡು, ಅದನ್ನು ಒಂದು ಕಥಾ ಚೌಕಟ್ಟಿಗೆ ಅಳವಡಿಸಿ, ಕನ್ನಡದ ಓದುಗರಿಗೆ ನಮ್ಮ ದೇಶದ ವಿಜ್ಞಾನಿಗಳು ಬಾಹ್ಯಾಕಾಶ-ತಂತ್ರಜ್ಞಾನದಲ್ಲಿ ಪಡೆದಿರುವ ಪರಿಣಿತಿಯ ಪರಿಚಯವನ್ನು ಸರಳ ರೀತಿಯಲ್ಲಿ ಮಾಡಿಕೊಟ್ಟಿರುವುದು ನಿಜಕ್ಕೂ ಅಭಿನಂದನೀಯ.

ನಕ್ಷತ್ರಯಾನದಂತಹ ಭವಿಶ್ಯದ ಪರಿಕಲ್ಪನೆಗಳಲ್ಲಿ ಉಂಟಾಗಬಹುದಾದ ಅನೇಕ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಉದಾಹರಣೆಗೆ, ನಕ್ಷತ್ರಯಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆಮಾಡುವ ಸಂಧರ್ಭದಲ್ಲಿ ಎದುರಾಗುವ ನೈತಿಕ ಸಮಸ್ಯೆಗಳು, ತನ್ನ ಪ್ರಿಯಕರನೊಂದಿಗಲ್ಲದೇ, ಇನ್ನೊಬ್ಬನೊಂದಿಗೆ ಈ ಯಾನಕ್ಕೆ ಹೋಗುವ ಇಚ್ಛೆಯಿಲ್ಲ ಎನ್ನುವ ನಾಯಕಿಯನ್ನು, ತಮ್ಮ ನಯವಾದ ಮತ್ತು ಚತುರ ರೀತಿಗಳಿಂದ ಮನವೊಲಿಸಿ, ಅವಳನ್ನು ಯಾನಕ್ಕೆ ಒಪ್ಪಿಸುವ ಅಂತರಿಕ್ಷವಿಜ್ಞಾನ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಅವರ ಬುದ್ಧಿಕುಶಲತೆಗಳು, ತಾನು ಒಲಿದ ಯಾದವ್, ಮಾತೃಗ್ರಹವನ್ನು ತೊರೆದು ಬರಲಾರೆ ಎಂದಾಗ, ಆಂತರಿಕ ತುಮುಲದಲ್ಲಿ ತೊಳಲಾಡುವ ಉತ್ತರೆಯ ಹೆಣ್ಣಿನ ಹೃದಯದ ಮನಸ್ಥಿತಿ, ಇದೇ ಯಾನಕ್ಕಾಗಿ ಆಯ್ಕೆಯಾಗುವ ಮತ್ತೊಬ್ಬ ಅಭ್ಯರ್ಥಿ ಸುದರ್ಶನ್ ಜೀವನದ ವಿಭಿನ್ನ ಅನುಭವಗಳು, ಮತ್ತು ಅವನ ಆಂತರಿಕ ಹೋರಾಟ, ಹೀಗೆ ಹಲವು ಹತ್ತು ಸಂಕೀರ್ಣವಾದ ಅಂಶಗಳನ್ನು ಬಹಳ ಚತುರತೆಯಿಂದ ನಿಭಾಯಿಸಿ, ಓದುಗರನ್ನು ಪುಸ್ತಕದಲ್ಲಿ ಬಿಗಿಯಾಗಿ ಬಂಧಿಸಿಡುವುದರಲ್ಲಿ ಭೈರಪ್ಪನವರು ಸಫಲರಾಗಿದ್ದಾರೆ.

ಸ್ತ್ರೀ ಮುಕ್ತಿ ವಿಚಾರದ ಮತ್ತೊಂದು ರೂಪವೋ ಎನ್ನುವಂತಿರುವ ನಾಯಕಿ ಉತ್ತರೆ, ಯುದ್ಧ ವಿಮಾನ ಚಲಾಯಿಸುವ ಪೈಲಟ್ ಆಗಿ ನೇಮಕವಾಗುವ ಸಮಯದಲ್ಲಿ ತನ್ನ ಹಟದ ಮನೋಭಾವವನ್ನು ವ್ಯಕ್ತಪಡಿಸಿದರೂ ಕೂಡಾ, ಅಪರಿಚಿತ ಯಾದವನೊಂದಿಗೆ, ಮದುವೆ ಎಂಬ ಬಂಧನವಿಲ್ಲದೆ ಅಂತರಿಕ್ಷದಲ್ಲಿ ೧೦೦ ದಿನಗಳ ದೈಹಿಕ ಸಂಪರ್ಕಕ್ಕೆ ಒಲ್ಲೆ ಎನ್ನುವ ವಿಚಾರ ಸ್ವಲ್ಪ ಆಶ್ಚರ್ಯವೆನಿಸುತ್ತದೆ, ಮತ್ತು ತನ್ನ ಈ ನಡವಳಿಕೆಯಿಂದ ತಾನು ಏನೇ ಆದರೂ ಭಾರತೀಯ ನಾರಿ ಎನ್ನುವುದನ್ನು ತೋರಿಸುತ್ತಾಳೆ. ಮುಂದೆ ನಕ್ಷತ್ರಯಾನದಲ್ಲಿ ಯಾದವನನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದಾಗ, ಅವನಲ್ಲದೇ ಮತ್ತೊಬ್ಬರೊಂದಿಗೆ ತಾನು ಹೋಗುವುದಿಲ್ಲ ಎಂದ ಉತ್ತರೆ, ಯಾದವ್ ಭೂಮಿಯನ್ನು ಶಾಶ್ವತವಾಗಿ ತೊರೆಯಲು ಸಾಧ್ಯವಿಲ್ಲ ಎಂದು ಹೇಳಿದ ನಂತರ, ಪತ್ರಿಕೆಗಳು ತನ್ನನ್ನು ಮನುಕುಲವನ್ನು ಉದ್ಧರಿಸಲು ಹೊರಟ ಮಹಿಳೆಯೆಂದು ಕೊಂಡಾಡಿದ್ದನ್ನು ಓದಿದಾಗ, ಅದರ ಪ್ರಚಾರ ವೈಭವದಲ್ಲಿ, ಮಾನವ ಸಹಜವಾದ ಪ್ರವೃತ್ತಿ  ಯಂತೆ, ಒಂದು ದುರ್ಬಲ ಘಳಿಗೆಯಲ್ಲಿ ಮಾಡಿದ ನಿರ್ಣಯ ಮುಂದೆ ಅವಳಿಗೆ ಕುತ್ತಾಗುವ ಪರಿಸ್ಥಿತಿ ಬಂದಾಗ ಅವಳು ಪ್ರತಿಕ್ರಿಯಿಸುವ ರೀತಿಯೂ ಕೇವಲ ಮಾನವ ಸಹಜವಾದದ್ದು ಎಂಬುದನ್ನು ಲೇಖಕರು ಎತ್ತಿ ಹಿಡಿಯುತ್ತಾರೆ.  ಉತ್ತರೆಯ ಹಟದ ಸ್ವಭಾವದ ಹೊರತಾಗಿಯೂ, ಅವಳು ತನ್ನ ಹೆತ್ತ ತಾಯಿಯಿಂದ ಬರುವ ಸಂದೇಶಗಳಿಗಾಗಿ ಪರಿತಪಿಸುವುದು,  ಹಾಗೂ ತನ್ನ ಪತಿ ಯಾದವನ ಪತ್ರಗಳಿಗೆ ಕೋಪದಲ್ಲಾದರೂ ಸರಿ, ಉತ್ತರಿಸುವ ರೀತಿ, ಅವಳೂ ಒಬ್ಬ ನಾರಿಯೇ, ಅವಳಿಗೂ ಇತರ ನಾರಿಯರಂತೆ ಆಸೆ ಆಕಾಂಕ್ಷೆಗಳಿವೆ ಎನ್ನುವುದನ್ನು ತೋರುತ್ತದೆ.

ಯಾನದ ನಾಯಕ ಸುದರ್ಶನ್, ಮಾನವ ಸಹಜ ಸ್ವಭಾವದಂತೆ ಒಂದು ಗಂಡಿನ ರೀತಿಯಲ್ಲಿ, ಉತ್ತರೆಯ ಮೇಲೆ ಆಕ್ರಮಣ ನಡೆಸಿ ಅವಳನ್ನು ಗರ್ಭಿಣಿಯನ್ನಾಗಿಸುವ ಪ್ರಯತ್ನ, ನಂತರ ತನ್ನ ವರ್ತನೆಗೆ ಪಡುವ ಪಶ್ಚಾತ್ತಾಪ, ಆ ನಕ್ಷತ್ರಯಾನದ ಸಫಲತೆಯ ದೃಷ್ಟಿಯಿಂದ,  ಮುಂದಿನ ಪೀಳಿಗೆಯ ಸೃಷ್ಟಿಗಾಗಿ ಸುದರ್ಶನ್ ಉತ್ತರೆಯನ್ನು ಬೇಡಿಕೊಳ್ಳುವ ಪ್ರಯತ್ನ,  ಇವೆಲ್ಲ ಸನ್ನಿವೇಶಗಳೂ ಓದುಗನಲ್ಲಿ ಈ ಪಾತ್ರಗಳ ಬಗ್ಗೆ ಅನುಕಂಪವನ್ನು ಮೂಡಿಸುತ್ತದೆ. ಅವನ ಪ್ರಯತ್ನಗಳು ಸಫಲವಾಗದಿದ್ದಾಗ, ಅವನು ತನ್ನಲ್ಲಿ ಬೆಳೆಸಿಕೊಳ್ಳುವ ವೇದಾಂತಿಯ ಮನೋಭಾವನೆ, ಕಡೆಗೊಮ್ಮೆ ನಾಯಕಿ ಉತ್ತರಾ, ಪ್ರನಾಳದಲ್ಲಿ ಶೇಖರಿಸಿದ್ದ ಗರ್ಭಾಂಕುರಗಳ ನೆರವಿನಿಂದ ಮಕ್ಕಳನ್ನು ಹೆರುವ ನಿರ್ಧಾರ ಮಾಡಿದಾಗ ಅವಳಿಗೆ ನೀಡುವ ಬೆಂಬಲ, ಮಕ್ಕಳಿಗೆ ನೀಡುವ ತರಬೇತಿ, ಇವೆಲ್ಲವೂ ಲೇಖಕರು ತಮ್ಮ ಪಾತ್ರಗಳನ್ನು ಅರ್ಥಮಾಡಿಕೊಂಡು ಅವನ್ನು ಸಂಪೂರ್ಣವಾಗಿ ತಮ್ಮದೇ ಆದ ಅಸಾಮಾನ್ಯವಾದ ರೀತಿಯಲ್ಲಿ ಬೆಳೆಸಿರುವುದನ್ನು ತೋರುತ್ತದೆ.

ಬಾಹ್ಯಾಕಾಶನೌಕೆಯ ರಚನೆ ಹಾಗೂ ಅದರಲ್ಲಿನ ವ್ಯವಸ್ಥೆಗಳನ್ನು, ತಮ್ಮ ಸಂಶೋಧನೆ ಮತ್ತು ತಜ್ಞರ ಜೊತೆಗೆ ನಡೆಸಿದ ಚರ್ಚೆಗಳ ಮೂಲಕ ಸಂಪೂರ್ಣವಾಗಿ ಮನದಟ್ಟು ಮಾಡಿಕೊಂಡು, ಅಲ್ಲಿನ ಸನ್ನಿವೇಶಗಳು ನಮ್ಮ ಮುಂದೆ ನಡೆಯುತ್ತಿದೆಯೋ ಎನ್ನುವ ಮಟ್ಟದಲ್ಲಿ ಓದುಗರಿಗೆ ತಿಳಿಸುವ ಉತ್ತಮ ಪ್ರಯತ್ನ ಲೇಖಕರದು. ಯಾನದಲ್ಲಿ, ಲೇಖಕರು ಭವಿಶ್ಯದಲ್ಲಿ ಇಂತಹ ನಕ್ಷತ್ರಯಾತ್ರೆಯಲ್ಲಿ, ಮಾನವ ಪೀಳಿಗೆ ಎದುರಿಸಬಹುದಾದ ವೈಜ್ಞಾನಿಕ ಸಮಸ್ಯೆಗಳು, ತಾಂತ್ರಿಕ ಸಮಸ್ಯೆಗಳು, ಆಹಾರ, ನೀರು ಮತ್ತು ಆಮ್ಲಜನಕಗಳ ಉತ್ಪಾದನೆಯ ಸಮಸ್ಯೆಗಳಲ್ಲದೇ, ಮುಂದಿನ ಪೀಳಿಗೆಯ ಮಕ್ಕಳನ್ನು ಹೆತ್ತು ಅವರನ್ನು ಅಲ್ಲಿಯೇ ಬೆಳಸುವ ವಿಷಯಗಳ ಬಗ್ಗೆಯೂ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಯಾನ ಒಂದು ವಿಜ್ಞಾನದ ಹಿನ್ನೆಲೆಯನ್ನು ಕಥಾವಸ್ತುವಾಗಿಟ್ಟುಕೊಂಡು ಬರೆದ ಕಥೆಯೇ ಹೊರತು, ಅದೊಂದು ವಿಜ್ಞಾನ ಕಲ್ಪಿತ ಕಾದಂಬರಿಯಲ್ಲ.  ಒಂದು ಗಂಡು ಮತ್ತು ಒಂದು ಹೆಣ್ಣು ಮನುಕುಲದ ಏಳಿಗೆಗಾಗಿ ಮಾಡುವ ಒಂದು ಬೃಹತ್ ಪರ್ಯಟನೆಯ ಕಥೆ. ಇದು ತಾತ್ವಿಕವಾಗಿ, ತಾರ್ಕಿಕವಾಗಿ ಓದುಗರು ಆನಂದಪಡಬಹುದಾದ ಪುಸ್ತಕವೆಂದು ನನ್ನ ಭಾವನೆ. ಮಾನವ ಸಹಜ ಭಾವನೆಗಳನ್ನು , ಹಲವೊಂದು ಸನ್ನಿವೇಶಗಳಲ್ಲಿ ವಿಘ್ನ್ಯಾನ ಅತಿಕ್ರಮಿಸುತ್ತದೆ ಎಂದು ಲೇಖಕರು ವ್ಯಂಗ್ಯವಾಡಿದ್ದಾರೆ.  ವಿಜ್ಞಾನ, ತಂತ್ರಜ್ಞಾನ ಪರಿಸರ, ತತ್ವಶಾಸ್ತ್ರ, ಪ್ರಚಲಿತ ವಿದ್ಯಮಾನಗಳು ಹೀಗೆ ಅನೇಕ ವಸ್ತುಗಳನ್ನು ಒಟ್ಟುಗೂಡಿಸಿ, ಹೆಣೆದ ಈ ಕಥೆಯಲ್ಲಿ,  ಪಾತ್ರಗಳ ಉತ್ತಮ ವಿಕಸನ, ಸ್ಫುಟವಾದ ನಿರೂಪಣೆಗಳಿದ್ದೂ, ಕಥೆಯನ್ನು ದಿಢೀರನೆ ಅಂತ್ಯಗೊಳಿಸಲಾಗಿದೆ ಎಂದು ನನ್ನ ಅನಿಸಿಕೆ.

ಆದರೂ ಈ ಪುಸ್ತಕ ಭೈರಪ್ಪನವರ  ಒಂದು ನೂತನ ಸಾಹಸ ಮತ್ತು  ಯಶಸ್ವಿ ಪ್ರಯೋಗವೆನ್ನಬಹುದು.

 ಡಾ.ಉಮಾ ವೆಂಕಟೇಶ್

ಯುನೈಟೆಡ್ ಕಿಂಗ್ಡಮ್

————————————————————————————————————————————-

2.ಯಾನ: ನನ್ನ ಅನಿಸಿಕೆ  (ಡಾ. ರಾಮಶರಣ್)

ಭೈರಪ್ಪನವರ ಕಾದಂಬರಿಗಳು ನನಗಿಷ್ಟ. ಆದರೆ ಇತ್ತೀಚೆಗೆ ಅವರ ವಿಚಾರ ಧಾರೆ ಯಾಕೋ ಅಷ್ಟು ಹಿಡಿಸಿಲ್ಲ. ಯಾನ ಓದಲು ಸಿಕ್ಕಾಗ ಹೊಸ ಬಗೆಯ ಕಥೆ ಸಿಕ್ಕಿತೆಂಬ ಹಿಗ್ಗು. ಪುಸ್ತಕದ ಹೆಸರು ಅರ್ಥಪೂರ್ಣವಾಗಿದೆ. ಇತ್ತೀಚೆಗೆ ಇಸ್ರೋ ವಿಜ್ಞಾನಿಗಳ ಮಂಗಳ ಯಾನದ ಸೊಗಡನ್ನು ಆಧರಿಸಿ ಅದರ ಸಾಧನೆಯ ಹಿನ್ನಲೆಯಲ್ಲೇ ಪುಸ್ತಕ ಹೊರತಂದದ್ದು ಸಾಂಕೇತಿಕ. ಆರಂಭದಲ್ಲೇ ಲೇಖಕರು ಇದು ವೈಜ್ಞಾನಿಕ ಕಾಲ್ಪನಿಕ ಕಥೆಯಲ್ಲ ಎಂದು ಹೇಳುತ್ತಾರೆ. ವಿಜ್ಞಾನದ ಹಿನ್ನಲೆಯಲ್ಲಿ ಮನೋಭಾವನೆಗಳನ್ನು ವಿಶ್ಲೇಷಣೆ ಮಾಡುವ ಆಸೆ ತೋರಿಸಿ, ಹೊಸ ಆಯಾಮದಲ್ಲಿ ಓದುಗನನ್ನು ಕರೆದೊಯ್ಯುವ ವಿಚಾರ ಅತ್ಯುತ್ತಮ. ನಾನು ಈ ಬಗೆಯ ಕೃತಿಗಳನ್ನು ಓದಿಲ್ಲ.

ಇಷ್ಟೆಲ್ಲ ಕುತೂಹಲ ಕೆರಳಿಸಿದರೂ, ಈ ಉದ್ದೇಶಗಳನ್ನು ಈಡೇರಿಸುವಲ್ಲಿ ಪುಸ್ತಕ ಮುಗ್ಗರಿಸಿದೆ.  ಪಾತ್ರಗಳ ಬೆಳವಣಿಗೆಗೆ ಹೆಚ್ಚಿನ ಮಹತ್ವ ಕೊಡದೇ ಇರುವುದರಿಂದ, ಯಾವ ಪಾತ್ರಗಳೂ ಆಳವಾದ ವ್ಯಕ್ತಿತ್ವ ತೋರುವಿದಿಲ್ಲ. Science fiction  ಅಲ್ಲವೆಂದು ಹೇಳಿದರೂ, ವೈಜ್ಞಾನಿಕ ಮಾಹಿತಿಗಳ ತಳಹದಿ, ಹಂದರದ ಆಧಾರದ ಮೇಲೆಯೇ ಕಥೆ ಕಟ್ಟಿದ್ದಾರೆ.

ಪುಸ್ತಕದ ತುಂಬೆಲ್ಲ ವಿರೋಧಾಭಾಸ ಹುಟ್ಟಿಸುವ ವಿಚಾರಗಳಿವೆ. ನಮ್ಮ ಆಕಾಶಗಂಗೆಯನ್ನು ದಾಟಿ ಕಾಲ ಪರಿಮಿತಿಯಿಲ್ಲದೇ ಸಾಗುವ ನೌಕೆಗೆ ಬೇಕಾಗುವ ಇಂಧನ ವ್ಯವಸ್ಥೆ ಮಾಡುವ ಸಾಮರ್ಥ್ಯವಿರುವ ವಿಜ್ಞಾನಿಗಳು, ಕೇವಲ ಗುರು ಗೃಹ ದಾಟುವಷ್ಟರ ಮಟ್ಟಿಗಿನ ಇಂಧನ ಉಳಿಸಲು ಗಡಿಬಿಡಿ ಮಾಡುವುದು ಬಾಲಿಶ. Penny wise, pound foolish ಎಂಬ ಮಾತು ನೆನಪಿಗೆ ಬಂತು. ಈ ಒಂದು ಕಾರಣಕ್ಕಾಗಿ, ನಾಯಕಿಗೆ ಯೋಚಿಸಲೂ ಸಾಕಷ್ಟು ಸಮಯಾವಕಾಶ ಮಾಡಿ ಕೊಡದಿರುವುದು ಸರಿ ಕಾಣಿಸೋದಿಲ್ಲ. ಒಂದು ರೀತಿಯಲ್ಲಿ ವೆಂಕಟ್ ದುಡುಕಿ, ಇಬ್ಬರ ಬಾಳನ್ನು ಹಾಳು ಮಾಡಿಬಿಡುತ್ತಾರೆ. ಆತನಿಗೆ ಈ ಥರ ವರ್ತಿಸಲು ಯಾವ ಹಕ್ಕಿದೆ? ವೆಂಕಟ್ ನ ಜ್ಞಾನ ಕೇವಲ ವಿಜ್ಞಾನಕ್ಕೇ  ಸೀಮಿತವೇ? ಆತನಿಗೆ ಎಥಿಕ್ಸ್, ಮನೋವಿಜ್ಞಾನ ಹಾಗೂ ಮನೋಭಾವನೆಗಳ ಮಾಹಿತಿಯಿಲ್ಲವೇ? ನೂರಾರು-ಸಾವಿರಾರು ವರ್ಷಗಳ ಕಾಲ ಸಾಗಬಹುದಾದ ಈ ಯಾನಕ್ಕೆ ಸಜ್ಜು ಮಾಡುವ ವ್ಯಕ್ತಿಗಳ ಮನೋ ಧ್ರಡತೆಯ ಪರೀಕ್ಷೆಯನ್ನೂ ಮಾಡುವಷ್ಟು ವ್ಯವಧಾನ ಆತನಿಗಾಗಲೀ, ತಂಡದ ಇತರ ಸದಸ್ಯರುಗಳಿಗಿರಲಿಲ್ಲವೇ? ವಿದ್ಯಾವಂತ ನಾಯಕಿ ಮಹಾತ್ವಾಕಾಂಕ್ಷಿ ಆದರೂ, ಕೆಲವೇ ಕ್ಷಣಗಳ ಕೀರ್ತಿಯ ಲಾಲಸೆಗೆ ಒಳಗಾಗಿ ಎಲ್ಲರನ್ನೂ ಧಿಕ್ಕರಿಸಿ ಯಾನಕ್ಕೆ ಹೊರಟಿದ್ದನ್ನು ಅರಗಿಸಿಕೊಳ್ಳುವುದು ಕಷ್ಟ. ದೇಶ ವಿದೇಶಗಳಲ್ಲಿ ಸಂಶೋಧನೆ ಮಾಡಿ, ಜನರೊಡನಾಡಿದ ನಾಯಕ, ದೀರ್ಘ ಪ್ರಯಾಣದಲ್ಲಿ ಜೊತೆಗಾತಿಯ ಮನವೊಲಸಿಕೊಂಡು ಸಂಸಾರ ನಡೆಸುವಲ್ಲಿ ತೋರುವ ವೈಫಲ್ಯ ಕೃತ್ರಿಮವೆನಿಸುತ್ತದೆ. ಅವನ ಇತರ ವೈಫಲ್ಯಗಳಿಗೆ ದಾರಿ ತೋರುವ ಮಹಗಣಕ ಯಂತ್ರ ಈ ದಿಕ್ಕಿನಲ್ಲೂ ಆತನಿಗೆ ದೀಪವಾಗಬಹುದಿತ್ತು. ಆತ ತನ್ನೊಳಗೇ ಸಾಕಷ್ಟು ವಿಚಾರ ಮಂಥನ ಮಾಡಿದರೂ ನಾಯಕಿಯೊಡನೆ ಒಮ್ಮೆಯೂ ಪ್ರೀತಿಯಿಂದ, ಗೆಳೆತನ ಬೆಳೆಸುವ ಪ್ರಯತ್ನ ಮಾಡುವುದೇ ಇಲ್ಲ. ಇಬ್ಬರೇ ವರ್ಷಾನುಗಟ್ಟಲೇ ಪಯಣಿಸುವಾಗ ಇದು ಹೇಗೆ ಸಾಧ್ಯ?

ಈ ಅಂತರಿಕ್ಷ ಯಾನ ಸುದೀರ್ಘವಾದರೂ ಪ್ರತಿ ಹಂತದಲ್ಲಿ ಗಡಿಬಿಡಿ; ತಾರ್ಕಿಕ ಮುನ್ದಾಲೋಚನೆಯಿಲ್ಲದೇ ತೀರ್ಮಾನ ತೆಗೆದುಕೊಳ್ಳುವ ಪಾತ್ರಗಳಲ್ಲಿ ನೈಜತೆಯಿಲ್ಲ. ಕನ್ನಡ ಸಾಹಿತ್ಯದಲ್ಲಿ ಹೊಸ ಆಯಾಮ ಹುಟ್ಟಿಸುವ ಸಾಧ್ಯತೆಯನ್ನು ಲೇಖಕರು ಪೂರ್ವಾಗ್ರಹ ಪೀಡಿತ ದೃಷ್ಟಿಕೋನದಿಂದ ವ್ಯರ್ಥ ಮಾಡಿದ್ದಾರೆ; ಓದುಗರಿಗೆ ಅರೆಬೆಂದ ಅನ್ನ ಉಣಬಡಿಸಿದ್ದಾರೆ. ಕೃತ್ರಿಮ ಪರ್ಯಾವರಣದಲ್ಲಿ ಬೆಳೆಸುವ ಕಥೆ ಕೃತ್ರಿಮವಾಗಿಯೇ ಕೊನೆಗೊಳ್ಳುವುದು ಈ ಕೃತಿಯ ದುರಂತ.

ಡಾ. ರಾಮಶರಣ್, ಯು. ಕೆ.

___________________________________________________________________________________

ಭೈರಪ್ಪನವರ ‘ಯಾನ’- ಡಾ. ದಾಕ್ಷಾಯಿಣಿ ಗೌಡ

ಯೆಸ್. ಎಲ್. ಭೈರಪ್ಪನವರ ೨೦೧೪ರಲ್ಲಿ ಹೊರಬ೦ದ ಈ ಹೊಸ ಕಾದ೦ಬರಿ, ಅವರ ಇನ್ನಿತರ ಪುಸ್ತಕಗಳಿಗಿ೦ತ ಬಹಳ ಭಿನ್ನವಾದ ಕಥಾವಸ್ತುವನ್ನು ಒಳಗೊ೦ಡಿದೆ. ಲೇಖಕರು ತಮ್ಮ ಈ ಆಕಾಶ ನೌಕೆಯಲ್ಲಿ ಒದುಗರನ್ನು ಯಾರೂ ಊಹಿಸದ೦ತ ಹೊಸ ಲೋಕಕ್ಕೆ ಕರೆದೊಯ್ಯುತ್ತಾರೆ. ಪುಸ್ತಕವನ್ನು ಬರೆಯುವ ಮು೦ಚೆ ಅವರು ಇದಕ್ಕಾಗಿ ಮಾಡಿರುವ ಸ೦ಶೋಧನೆ ಬಹಳ ಆಳವಾದದ್ದು ಮತ್ತು ಅಪರೂಪದ್ದೆ೦ದು ಹೇಳಬಹದು.

ಮುಖ್ಯ ಪಾತ್ರ ಉತ್ತರಾಳ ಪರಿಚಯವನ್ನು ಲೇಖಕರು ಓದುಗನಿಗೆ ಬಹಳ ರೀತಿಯಲ್ಲಿ ಪರಿಚಯ ಮಾಡಿಕೊಟ್ಟರೂ, ಅವಳು ಕೊನೆಯಲ್ಲಿ ನಮಗೆ ಅಪರಿಚಿತಳಾಗೆ ಉಳಿಯುತ್ತಾಳೆ. ಸುದರ್ಶನ್ ಒ೦ದು ಆದರ್ಶವಾದ ಪಾತ್ರವಾದರೂ, ಮನದಲ್ಲಿ ಉಳಿಯುವುದು ದುರ೦ತ ಪಾತ್ರವಾಗಿ ಎ೦ದು ಹೇಳಬಹುದು. ಖಗೋಳ ಶಾಸ್ತ್ರವನ್ನು ಸಾಮಾನ್ಯ ಒದುಗನಿಗೆ ಬಹಳ ವಿವರವಾಗಿ ಕನ್ನಡದಲ್ಲಿ ಪರಿಚಯ ಮಾಡಿಕೊಟ್ಟಿರುವುದು ಈ ಕಾದ೦ಬರಿಯ ವಿಶೇಷತೆಯೆ೦ದು ಹೇಳಬಹುದು.

ಅ೦ತರಿಕ್ಷದಲ್ಲಿ ಮನೆಯ೦ತಹ ನೌಕೆ ಕಟ್ಟಿ ಎಲ್ಲಾ ರೀತಿಯ ಸೌಕರ್ಯ, ಸವಲತ್ತು ಒದಗಿಸಿ, ಪ್ರಪ೦ಚದಲ್ಲಿ ಯಾರೂ ಮಾಡಿರದ೦ತಹ ಅಪರೂಪದ ಈ ವೈಘ್ನಾನಿಕ ಸ೦ಶೋಧನೆ, ಮಾನವರ ಮನಸ್ಸನ್ನು ಅರಿಯುವಲ್ಲಿ ವಿಫಲವಾಗುವುದು ಈ ಕಾದ೦ಬರಿಯ ದುರ೦ತವೆ೦ದು ಹೇಳಬಹುದು. ಈ ಪುಸ್ತಕವನ್ನು ಓದಲು ಶುರುಮಾಡಿದಾಗ ಹುಟ್ಟಿದ ವಿಷಾದ ಭಾವನೆ ಕೊನೆಯಲ್ಲೂ ಉಳಿದುಬಿಡುತ್ತದೆ. ಪುಸ್ತಕ ಮುಗಿದರೂ ಕತೆ ಮುಗಿದ೦ತೆನ್ನಿಸುವುದಿಲ್ಲ.

ಹಿನ್ನುಡಿಯಲ್ಲಿ ಭೈರಪ್ಪನವರು, ಇದನ್ನು ಬರೆಯುವ ಮೊದಲು ಅವರು ಮಾಡಿದ ಸ೦ಶೋಧನೆ, ಸ್ನೇಹಿತರ ಸಹಕಾರ ಮತ್ತು ಉಪಕಾರಗಳ ಬಗ್ಗೆ ಬರೆಯುತ್ತಾರೆ. ಚಿಕ್ಕವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊ೦ಡ ಸ್ನೇಹಿತರ ಆದರ್ಶ ಸುದರ್ಶನ್ ಪಾತ್ರಕ್ಕೆ ಪ್ರೇರೆಪಣೆಯೆ? ಭೈರಪ್ಪನವರ ಪ್ರತಿಯೊ೦ದು ಕಥೆ ಮತ್ತು ಕಾದ೦ಬರಿ ಕನ್ನಡ ಸಾಹಿತ್ಯದ ಆಣಿಮುತ್ತುಗಳೆ೦ದರೆ ಅತಿಶಯೋಕ್ತಿಯಲ್ಲ. ಯಾನ ಕನ್ನಡದ ಓದುಗನಿಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಭೈರಪ್ಪನವರ ಇನ್ನೊ೦ದು ಅತ್ಯುತ್ತಮ ಕೊಡುಗೆ.

____________________________________________________________________________________________________

3.ಯಾನದ ಕಿಟಕಿಯಿಂದೊಂದು ಇಣುಕು ನೋಟ : (ಸುದರ್ಶನ ಗುರುರಾಜರಾವ್.)

ಯಾನದಲ್ಲಿ ಬರುವ ಪ್ರಮುಖ ಪಾತ್ರಗಳಾದ ಉತ್ತರಾ (ಹೆಣ್ಣು) ಹಾಗೂ ಸುದರ್ಶನ  (ಗಂಡು) ಎರಡೂ ನನಗೆ ಆತ್ಮೀಯವಾದ ಹೆಸರುಗಳೇ. ಉತ್ತರಾ ನನ್ನ ಜನ್ಮ ನಕ್ಷತ್ರದ ಹೆಸರಾದರೆ ಸುದರ್ಶನ ನನ್ನ ಹೆಸರೇ ಆಗಿದೆ. ಸ್ವನಾಮ ಪ್ರೇಮ, ಸ್ವನಾಮಾನುಕಂಪ ಹಾಗೂ ಪಕ್ಷಪಾತಗಳು ತಿಳಿಯದ್ದೇನಲ್ಲ. ಈ ಹಿನ್ನೆಲೆಯಲ್ಲಿ ಈ ಕಾದಂಬರಿಯ ಪಾತ್ರಗಳನ್ನು ನಿರೂಪಣೆಯನ್ನು ಹಾಗೂ ಕಥಾವಸ್ತುವನ್ನು ಅದಷ್ಟು ವಸ್ತುನಿಷ್ಠ ವಾಗಿ ಮಾಡಲು ಪ್ರಯತ್ನಿಸಿದ್ದೇನೆಂದು ಮೊದಲೇ ಘೋಷಿಸಿಬಿಡುತ್ತೇನೆ.

’ಯಾನ’’ ಭೂಮಿಯಿಂದ ಬೇರೊಂದು ಸೌರವ್ಯೂಹವನ್ನೇ ಹೊಕ್ಕು ಅಲ್ಲಿ ಜೀವಸಂಕುಲವನ್ನು ಬೆಳೆಸಬಲ್ಲ, ಪೋಷಿಸಬಲ್ಲ ಗ್ರಹವೊಂದನ್ನು ಹುಡುಕುವ ಮಾನವನ ಮಹದೋದ್ದೇಶದ ಪ್ರಯಾಣಕಥನ., ಪ್ರಯಾಣವೊಂದು ಧಿಢೀರ್ ಎಂದು ಪ್ರಾರಂಭವಾಗುವುದಿಲ್ಲವಷ್ಟೆ ; ಅದಕ್ಕೆ ತಯಾರಿ ಬೇಕು. ಆ ತಯಾರಿಯ ಹಂತದಲ್ಲಿ ಪಾತ್ರ ಪರಿಚಯಗಳಗ್ಗುವುದಲ್ಲದೆಅವರ ಜೀವನದ, ಆ ದೇಶ ಕಾಲಗಳ ವಿದ್ಯಮಾನಗಳ ಭೂಮಿಕೆ ಕಾದಂಬರಿಯಲ್ಲಿ  ಸಿದ್ದಹವಾಗುತ್ತದೆ. ಕಥೆಯು ಭೂತ ವರ್ತಮಾನಗಳ ಮಧ್ಯೆ ತುಯ್ದಾಡುತ್ತಾ,ಪಾತ್ರಗಳ ಮನೋವ್ಯಾಪಾರವನ್ನು ಅವರು ನಂಬಿದ ತತ್ವಗಳ /ಮಾನಸಿಕ ಮಸೂರದ ಮೂಲಕ ಹಾಗೂ ಅವರುಗಳು ಇರುವ ದೇಶ ಕಾಲ ಧರ್ಮ ನಂಬಿಕೆಗಳ ಚೌಕಟ್ಟಿನಲ್ಲಿ ತಿಳಿಸುತ್ತಾ ಸಾಗುತ್ತದೆ. ಇಲ್ಲಿ ಅರಿವು ಮತ್ತು ನಂಬಿಕೆಗಳ ನಡುವಿನ ವ್ಯತ್ಯಾಸ ಗಮನಿಸಬೇಕು.ನಂಬಿಕೆ ಮತ್ತು ಆಯ್ಕೆಗಳ ನಡುವಿನ ತಾಕಲಟಗಳೂ ಬರುತ್ತವೆ. ಮಾನವನ ಜೀವನದ ವಿದ್ಯಮಾನಗಳು ಮತ್ತು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಳ ರೇಖಾತ್ಮಕವಾಗಿರದೆ ಎಡ ಬಲ ಊರ್ಧ್ವ ಹಾಗೂ ಅಧೋಮುಖಗಳಿಂದ ಬಂದು ಬಡಿಯುವ ಹಲಾವಾರು ಘಟನೆ,ಒತ್ತಡಗಳ ಸಂಕೀರ್ಣ ಉತ್ಪತ್ತಿ ಎಂಬುದು ಭೈರಪ್ಪನವರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಹಾಸು ಹೊಕ್ಕಾಗಿರುವ ಅಂಶ ;ಆದರೆ ಆಯಾಮ ಮಾತ್ರ ಬೇರೆ.

ಮೊದಲಿಗೆ ಪಾತ್ರಗಳನ್ನೂ ಕುರಿತು ನೋಡೋಣ.

ಉತ್ತರಾ:

ಉತ್ತರಾ ಒಬ್ಬಳು ಒಬ್ಬಳು ಚೆಲುವು, ಛಲ ,ವಿದ್ಯೆ,ಬುದ್ಧಿ,ಆತ್ಮವಿಶ್ವಾಸ ,ಯಾರೂ ಬಯಬಯಸಬಹುದಾದ ಸಾಮಾಜಿಕ ಹಾಗೂ ಕೌಟುಂಬಿಕ ಹಿನ್ನೆಲೆಯಿಂದ ಬಂದ ಹೆಣ್ಣು. ತಾನು ಬಯಸಿದ್ದನ್ನು ಹೋರಾಡಿ ಪಡೆಯಬಲ್ಲ ಮನೋಸ್ಥೈರ್ಯ ಇರುವಂತಹವಳು್. ಹೊಸ ಅನುಭವ ಸಾಹಸಗಳಿಗೆ ತನ್ನನು ತಾನು ಒಡ್ಡಿಕೊಳ್ಳಬಲ್ಲ ಆಧುನಿಕ ಮನೋಭಾವದವಳಾದರೂ ತನ್ನ ತಾಯಿ ತಂದೆಯರಿಂದ ಭಾರತೀಯ ಧರ್ಮ ನಂಬಿಕೆಗಳ ಅರಿವನ್ನು ಇಟ್ಟುಕೊಂಡು ಬೆಳೆದಿರುವವಳು.. ಪೈಲಟ್ ವ್ರುತ್ತಿಯಿಂದ ಹೊರಬಂದು ವ್ಯೋಮಯಾನದ ಪ್ರಯೋಗಾತ್ಮಕ ಕ್ರಿಯೆಗೆ ಸ್ವ ಇಚ್ಚೆಯಿಂದಲೇ ಹೋಗಿ ಆಯ್ಕೆಯಾಗುತಾಳೆ. ಅಲ್ಲಿ ಯಾದವನೊಂದಿಗೆ ಪ್ರೇಮಾಕುರವೂ ಆಗಿ ಬಾಹ್ಯಾಕಾಶದಲ್ಲಿ ದೇಹಸಂಪರ್ಕ ಮಾಡುವ ಮುನ್ನ ಗಂಧರ್ವ ರೀತಿಯಲ್ಲಿ ವಿವಾಹವನ್ನು ಮಾಡಿಕೊಳ್ಳುತಾಳೆ. ಆ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಹೆಸರನ್ನೂ ಗಳಿಸುತ್ತಾಳೆ. ತನಗಿದ್ದ ಸಂಸ್ಕಾರದ ಫಲವಾಗಿ ಆ ಎಲ್ಲ ಹಣ, ಹೆಸರು ಪ್ರತಿಷ್ಠೆಗಳು ತರಬಹುದಾದ ಅವಘಢ ಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತಾಳೆ. ಮುಂದಿನ ಹಂತದ ಯೋಜನೆಗೆ ಅವಳ ಪ್ರಿಯಕರ  /ಗಂಡನಾದ ಯಾದವನು ಉತ್ಸಾಹ ತೋರದಿದ್ದಾಗ ತಾನು ಹೊರಟು ನಿಲ್ಲುತ್ತಾಳೆ. ಮನೆಯ/ ಮನೆಯವರ ಜವಾಬುದಾರಿಯ ಕಾರಣ ಅವನು ಬರುತ್ತಿಲ್ಲವೆಂದು ತಿಳಿದಿದ್ದರೂ ತನ್ನ ನಿರ್ಧಾರ ಬದಲಾಯಿಸದವಳಾಗುತ್ತಾಳೆ. ಸ್ವತಂತ್ರ ಮನೋಭಾವದ ಉತ್ತರಾ, ಯಾದವನ ಭೂಮಿಯ ಮೇಲಿನ ಕೌಟುಂಬಿಕ ಅನಿವಾರ್ಯತೆಗಳಿಗೆ ಸ್ಪಂದಿಸುವುದಿಲ್ಲ. ಕೀರ್ತಿ, ಹೊಸ ಅನುಭವ, ದೇಶಪ್ರೇಮ ದೇಶಸೇವೆ ಇವುಗಳ ನಡುವಿನ ಗೊಂದಲ ಒಂದು ಕಡೆ ,ಯಾದವನ ಮೇಲಿನ ಪ್ರೀತಿ,ಸೆಳೆತ,ತನ್ನದೇ ಸಂತತಿಯನ್ನು ಬೆಳೆಸುವ ಆಕಾಂಕ್ಷೆ ಇನ್ನೊಂದೆಡೆ. ಯಾದವ ಅವಳ ಒತ್ತಡಕ್ಕೆ ಒಪ್ಪದೇ ಹೋದಾಗ ತನ್ನ ಅಂತರಾತ್ಮಕ್ಕೆ ವಿರುದ್ಧ ಯಾನಕ್ಕೆ ಹೊರಟೆ ಬಿಡುತ್ತಾಳೆ. ಅಲ್ಲಿಂದ ಮುಂದೆ ಅವಳ ಉತ್ಸಾಹ, ಕಾರ್ಯ ತತ್ಪರತೆ ತನ್ನ ತತ್ವಗಳ ಮೇಲಿನ ನಂಬಿಕೆ ಇತ್ಯಾದಿಗಳು ಅವಳ ಜೀವನದಲ್ಲಿ ಮಸುಕಾಗುತ್ತಾ ಹೋಗುತ್ತವೆ. ತನ್ನ ಅಯೋಮಯ ಹೊಯ್ದಾಟದಲ್ಲಿ ಸಹಯಾತ್ರಿ ಸುದರ್ಶನ ನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಅವನನ್ನು ವಿರೋಧಿಸಿ, ಆ ಮೂಲಕ ದಾಂಪತ್ಯ ಜೀವನ ಶುರುಮಾಡುವಲ್ಲಿ ವಿಳಂಬಿಸಿ ಅವನನ್ನು ಮಾನಸಿಕವಾಗಿಯೂ ,ದೈಹಿಕವಾಗಿಯೂ ಕಳೆದುಕೊಳ್ಳುತ್ತಾಳೆ. ಕೃತಕ ಗರ್ಭಧಾರೆಣೆಯ ಮೂಲಕ ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಪಡೆದು, ಅವರ ಆರೈಕೆ ಪಾಲನೆ ಮಾಡಿದಾಗ್ಯು ಅವಳ ಹಾಗೂ ಸುದರ್ಶನನ ಮಧ್ಯೆ ಮಾನಸಿಕೆ ಸಾಹಚರ್ಯ ಸೌಹಾರ್ದತೆ ಬೆಳೆಯುವುದೇ ಇಲ್ಲ. ಒಳ್ಳೆಯ ತಾಯಿಯಾಗುವ ಉತ್ತರಾ ತನ್ನ  ನಡವಳಿಕೆ ನಿರ್ಧಾರಗಳಿಂದ ಹಲವು ಉತ್ತರಗಳಿಲ್ಲದ ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತಾಳೆ.

ಒಂದು ಪಾತ್ರ ಓದುಗರು ಕಟ್ಟಿಕೊಂಡ ನಿರೀಕ್ಷೆ ಅಥವಾ ಆದರ್ಶದ ಪ್ರಕಾರ ಸಾಗಬೇಕೇ ಬೇಡವೇ ಎಂಬುದು ಇಲ್ಲಿನ ಚರ್ಚೆಯ ವಿಷಯ.

ಮಹಿಳಾವಾದಿಗಳ ಪ್ರಕಾರ ಉತ್ತರಾ ಪಾತ್ರ ಪೂರ್ಣ ಪ್ರಮಾಣದಲ್ಲಿ ಮೂಡಿ ಬಂದಿಲ್ಲ ಎಂದೆನ್ನಬಹುದು. ‘ಅಷ್ಟೆಲ್ಲಾ ಪ್ರತಿಭೆಯಿದ್ದವಳನ್ನು, ಕಡೆಗೆ ಯಾವುದನ್ನೂ ವೃದ್ಧಿಗೊಳಿಸಿಕೊಳ್ಳದೆ ಇಡೀ ಯಾನದ ಕಾಲಮಾನದಲ್ಲಿ ತೋಟದಲ್ಲಿ ಕಾಲ ಕಳೆಯುವ, ಮಕ್ಕಳಿಗೆ ತಾಯಿಯಾಗುವ,ಹಾಗೂ ಆಗೀಗ ಅಡುಗೆ ಮಾಡುವ ಗೃಹೀತ ಕೆಲಸಕ್ಕೆ ಸೀಮಿತಗೊಳಿಸಿ ಕಾದಂಬರಿಕಾರರು ಈ ಪಾತ್ರಕ್ಕೆ ಅನ್ಯಾಯ ಮಾಡಿದ್ದಾರೆ; ಮಹಿಳಾ ಸಬಲತೆಯನ್ನು ಎತ್ತಿ ಹಿಡಿದಿಲ್ಲ ,ಮತ್ತೆ ಅದೇ ದಮನೀಯ ಮನೋಧರ್ಮವನ್ನು ಒಬ್ಬ ಆಧುನಿಕ ಮಹಿಳೆಗೆ ಆರೋಪಿಸಿ ಪ್ರಗತಿ ವಿರೋಧಿಯಾಗಿ  ಬಿಂಬಿಸಿಕೊಂಡಿದ್ದಾರೆ’ ಎನ್ನುವ ಟೀಕೆಗಳು ಬರಬಹುದಾದ ಸನ್ನಿವೇಶ ತಂದುಕೊಂಡಿದ್ದಾರೆ .

ಸೈದ್ಧಾಂತಿಕ ನೆಲೆಗಟ್ಟಿನಿಂದ ನೋಡಿದರೆ ಇದು ಸರಿ ಎಂದೆನ್ನಿಸಬಹುದು. ಆ ಪಾತ್ರವನ್ನು ಆದರ್ಶೀಕರಣಗೊಳಿಸಿ ನೌಕಾಯಾನದ ಯಶೋಗಾಥೆಯಲ್ಲಿ ಅವಳ ಸಾಹಸ, ತಾಂತ್ರಿಕ ಪರಿಣತಿಗಳನ್ನು ಒರೆಗಿಟ್ಟು ಪಾತ್ರವನ್ನು ಸಶಕ್ತಗೊಳಿಸಬಹುದಿತ್ತು . ಆದರೆ ಅದು ಕೇವಲ ಸೈದ್ಧಾಂತಿಕ  ನೆಲೆಗಟ್ಟು.

ವೈಚಾರಿಕ ಹಾಗು ವಾಸ್ತವಿಕ ನೆಲೆಗಟ್ಟಿನಿಂದ ನೋಡಿದಾಗ ಹಲಾವಾರು ಹೆಣ್ಣುಗಳು ತಮ್ಮ ಸಾಧನೆಯಾ ಹಾದಿಯಿಂದ ಸರಕ್ಕನೆ ಹೊರಳಿ ತಮ್ಮ ಪಾರಂಪರಿಕವಾದ ,ಜೀವ ವಿಕಾಸದ ಮೂಲಭೂತ ಕೆಲಸವಾದ ಕುಟುಂಬದ ಲಾಲನೆ ಪಾಲನೆಯಲ್ಲಿ ತೊಡಗುವುದು ಅಪರುಪವೂ ಅಲ್ಲ, ಅಸಾಧುವೂ ಅಲ್ಲ,ಅಸಾಧ್ಯವೂ ಅಲ್ಲ. ಅಷ್ಟಕ್ಕೂ ತನ್ನ ಪ್ರೇಮವೈಫಲ್ಯವನ್ನು ಅನುಭವಿಸಿದ ಉತ್ತರೆಯಲ್ಲಿ ಆ ರೀತಿಯ ನಿರಾಸಕ್ತಿ ಮೂಡುವುದು ಹಲವಾರು ಮನೋವ್ಯಾಪಾರಗಳ ಸಾಧ್ಯಾ ಸಾಧ್ಯತೆಗಳ ಪಟ್ಟಿಯಲ್ಲಿ ಪ್ರಮುಖವಾದ ಅಂಶವೇ ಅಗಿದೆ್‌. ಹಾಗಾಗಿ ಭೈರಪ್ಪನವರು ತಮಗೆ ಬೇಕಾದ ಒಂದನ್ನು, ಹಂದರಕ್ಕೆ ಹೊಂದುವಹಾಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅರಿಸಿಕೊಂಡದ್ದು ಅಕ್ಷಮ್ಯವೆಂತೇನೂ ಅನಿಸಲಿಲ್ಲ. ಇಷ್ಟಕ್ಕೂ ಜೀವನ ನಿರ್ವಹಣೆ ಹಾಗೂ ಭದ್ರತೆಯ ದೃಷ್ಟಿಯಿಂದ ಯಾವ ಕೊರತೆಯೂ ಇರದ ಪರಿಸ್ಥಿತಿಯಲ್ಲಿ ಮಾನವ ಜೀವಿಯೊಂದು ಇರುವಾಗ, ದೇಹ – ಮನಸ್ಸುಗಳಿಗೆ ಕಡಿಮೆ ಜಗ್ಗಾಟ ಮಾಡಿಸುವ ಹಾದಿ ಹಿಡಿಯುವುದು ಮೂರರಲ್ಲಿ ಎರಡರಷ್ಟು ಜನ ಆಯ್ದುಕೊಳ್ಳುವ ಆಯ್ಕೆ!!

ಯಾದವ :

ಕೆಳ ಮಧ್ಯಮ ವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದ, ತನ್ನವರ,ತನ್ನ ಮನೆಯವರ ಮೇಲೆ ಪ್ರೀತಿ ಜವಾಬ್ದಾರಿಗಳು ಇರುವ ಯುವಕನೊಬ್ಬನ ಮನೋವ್ಯಾಪಾರಗಳನ್ನು ಪ್ರತಿನಿಧಿಸುವ ಪಾತ್ರ. ಸಾಧಾರಣಕ್ಕಿಂತ ಹೆಚ್ಚಿನ ಬುದ್ಧಿಮತ್ತೆಯಿದ್ದರೂ ಯಾದವ ದೈಹಿಕವಾದ ಚಟ್ಟುವಟಿಕೆಗಳಲ್ಲಿ ಹೆಚ್ಚು ಒಲವಿರುವ ಮನಸ್ಸುಳ್ಳವ;ಸೈದ್ಧಾಂತಿಕ ವಿಜ್ಞಾನ ಹಾಗೂ ಅದರ ಪರಿಕಲ್ಪನೆಗಳು ಅವನಿಗೆ ಹಿಡಿಸವು. ಹೀಗಾಗಿ ಈ ಗ್ಗಾಗಲೇ ವೈಜ್ಞಾನಿಕವಾಗಿ ,ಪ್ರಾಯೋಗಿಕವಾಗಿ ಭದ್ರ  ನೆಲೆಯ ಮೇಲೆ ನಿಂತಿರುವ ಬಾಹ್ಯಾಕಾಶಯಾನ ಅವನಿಗೆ ಸುಲಭ ಸಾಧ್ಯ. ಇಲ್ಲಿ ಅಮೂರ್ತ (ಅಬ್ಸ್ಟ್ರ್ಯಾಕ್ಟ್) ಆಲೋಚನೆಗಳ ವ್ಯಾಪ್ತಿ ಬಹಳ ಕಡಿಮೆ. ಆದರೆ ಇನ್ನೊಂದು ಸೌರವ್ಯೂಹಕ್ಕೆ ಹೋಗುವ ಸೋಲಾರಿಸ್ನಲ್ಲಿ ಅವನ ಬುದ್ಧಿಮತ್ತೆಗೆ ಹೆಚ್ಚಿನ ಸವಾಲು ಎದುರಾಗುತ್ತಿತ್ತು. ಅವನ ಮನಸ್ಥಿತಿ ಅದರ ಮಟ್ಟಕ್ಕೆ ಏರಿಸುವಷ್ಟಿರಲಿಲ್ಲ. ತಂಗಿಯರ ಮದುವೆ ಹಾಗೂ ತಂದೆ ತಾಯಿಯರ ಆರೈಕೆ ಪಾಲನೆಗಳನ್ನು ಪ್ರಧಾನ ಜೀವನ ಧ್ಯೇಯವನ್ನಾಗಿ ಪರಿಗಣಿಸುವ ಅವನಿಗೆ ( ಅಥವಾ ಅವನಮ್ತಿರುವ ಇನ್ಯಾರಿಗಾದರೂ) ಈ ಹೊಸಬಗೆಯ ಸಾಹಸಕ್ಕೆ ಕೈ ಹಾಕಿ ಅವರೆಲ್ಲರಿಂದ ದೂರ ಉಳಿಯುವ ಮನೋಧಾರ್ಢ್ಯತೆ ಇರುವುದಿಲ್ಲ. ಹಾಗಾಗಿಯೇ ಹೊಸ ಸವಾಲಿಗೆ ಒಡ್ಡಿಕೊಳ್ಳುವ ಉತ್ತರೆಯ ಹಂಬಲದಿಂದ ದೂರ ಸರಿಯುತ್ತಾನೆ. ಉತ್ತರಾ ಕೂಡಾ ಅವನ ಕೋರಿಕೆಯನ್ನು ತಿರಸ್ಕರಿಸಿ ಹೊರಟು ನಿಲ್ಲುತಾಳೆ. ಹಾಗೆಂದು ಅವನಿಗೆ ಊತ್ತರೆಯ ನೆನಪು ಮಾಸುವುದಿಲ್ಲ; ತನ್ನ ಹೆಂಡತಿ ರಾಜನಿಗೆ ಅದನ್ನು ತಿಳಿಸಿರುವುದು ಇಲ್ಲ. ರಾಷ್ತ್ರೀಯ ಭದ್ರತೆ, ರಹಸ್ಯದ ಕಾರಣದ ಜೊತೆಗೆ ಪತಿ ಪತ್ನಿಯರ ನಡುವೆ ಬೇರೊಂದು ಹೆಣ್ಣಿನ ವಿಚಾರವಾಗಿ ಇರಬಲ್ಲ ಆತಂಕ, ಸಂಕೋಚ ಎರಡೂ ಕಾರಣ. ಅದು ತಿಳಿದು ಬಿಟ್ಟಾಗ ರಜನಿಯ ಪ್ರತಿಕ್ರಿಯೆಯೂ, ಯಾದವನ ನಡವಳಿಕೆಯೂ ಯಾವ ಆದರ್ಶಗಳ ಚೌಕಟ್ಟಿಗೆ ಮಣಿಯದೆ ಸಾಮಾನ್ಯ ಮನುಷ್ಯರ ಪ್ರಾತಿನಿಧಿಕ ಪ್ರತಿಕ್ರಿಯೆಯಾಗಿಯೇ ಚಿತ್ರಣಗೊಂಡಿದೆ. ಭೈರಪ್ಪನವರ ಕಥಾನಿರೂಪಣೆ ಇದೇ ಕಾರಣಕ್ಕೆ ಸಾರ್ವಕಾಲಿಕ ಕೃತಿಯಾಗಿ ನಿಲ್ಲುವ ಶಕ್ತಿ ಪಡೆದಿರುತ್ತದೆ. ಆದರ್ಶಗಳ ಚೌಕಟ್ಟಿನಲ್ಲಿ ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ಪ್ರಬುದ್ಧ ನಡವಳಿಕೆ ತೋರಬಹುದಿತ್ತು. ಇದು ಅಪರೂಪ.  ಆದರೆ ಇತಿಹಾಸ ಗಮನಿಸಿದಾಗ  ಸಾಂದರ್ಭಿಕ ಅನಿವಾರ್ಯತೆಯನ್ನು ಲೆಕ್ಕಿಸದೆ ಪ್ರತಿಭಟನೆ, ಜಗಳ ದೂಷಣೆ, ಆರೋಪ ಪ್ರತ್ಯಾರೋಪ ಇತ್ಯಾದಿಗಳೇ ಹೆಚ್ಚು ನಡೆಯುವ ಕಾರಣ ವಾಸ್ತವಿಕ ನೆಲೆಗಟ್ಟಿನ ಚಿತ್ರಣ. ಮನೋವ್ಯಾಧಿಗೆ ತುತ್ತಾಗುವುದು ಇದರ ಇನ್ನೊಂದು ಲಕ್ಷಣ. ಅವನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ತನ್ನ ಸಾಮರ್ಥ್ಯದ ಚೌಕಟ್ಟಿನಲ್ಲಿ ಆದಷ್ಟು ಪ್ರಾಮಾಣಿಕವಾಗಿ ಇರಬಯಸುವ ವ್ಯಕ್ತಿ. ವ್ಯಕ್ತಿಕೇಂದ್ರಿತ ಆಸೆ ಆಕಾಂಕ್ಷೆಗಳು ಹಾಗೂ ಕುಟುಂಬ ಅಥವಾ ಸಮುದಾಯ ಕೇಂದ್ರಿತ ನಿರೀಕ್ಷೆಗಳ ತಾಕಲಾಟದಲ್ಲಿ ಯಾದವನ ಮನಸ್ಸು ಎರಡನೆಯ ಕಡೆಗೆ ವಾಲಿದುದು ಅನಿರೀಕ್ಷಿತವೇನಲ್ಲ. ಅದು ಸಂಸ್ಕಾರ ಸಂಸ್ಕೃತಿಗಳು ರೂಪಿಸುವ ಒಂದು ವ್ಯಕ್ತಿತ್ವ.ವೈಯಕ್ತಿಕ ಆಕಾಂಕ್ಷೆ, ಉತ್ತರಾಳ ಆಗ್ರಹ ಹಾಗೂ ತನ್ನ ಕುಟುಂಬ ಇಟ್ಟಿರುವ ನಿರೀಕ್ಷೆ ಇವು ಮೂರರ ತಾಕಲಾಟದಲ್ಲಿ ,ಹಗ್ಗ ಜಗ್ಗಾಟದಲ್ಲಿ ಸಮನ್ವಯ ಸಾಧಿಸುವ ಸಾಧ್ಯತೆ ಇಲ್ಲದೇ ಹೋದಾಗ  ಅಸಹಾಯಕವಾದ, ಬಲಹೀನವಾದ ಹಾಗೂ ವ್ಯತಿರಿಕ್ತ ಪರಿಣಾಮಗಳಿಗೆ ಹಲವು ಜೀವಗಳು ತುತ್ತಾಗುವ ಸಾಧ್ಯತೆ ಮನಗಂಡು ತನ್ನ ಹಾಗೂ ಉತ್ತರಾಳ ಸಂಬಂಧವನ್ನು ತೊರೆಯುವ ಕಷ್ಟ ಸಾಧ್ಯ ಆದರೆ   ಕಾರ್ಯಸಾಧುವಾದ  ನಿರ್ಧಾರ ತೆಗೆದುಕೊಳ್ಳುತ್ತಾನೆ.ವ್ಯಕ್ತಿಗತ ಹಿತಾಸಕ್ತಿಗಾಗಿ ಇನ್ನೊಬ್ಬರ ಹಿತವನ್ನು ಮೆಟ್ಟಲು ಸಧೃಢ ಮನಸ್ಸು ಬೇಕಾಗಿಲ್ಲ. ಹೀಗಾಗಿ ಅವನು ದುರ್ಬಲ ಮನಸ್ಸಿನ ವ್ಯಕ್ತಿಯೆಂದು ನನಗನ್ನಿಸುವುದಿಲ್ಲ.

ಸುದರ್ಶನ

ಮೂರನೆಯ ಪಾತ್ರವಾಗಿ ಮೂಡಿಬರುವ ಸುದರ್ಶನನ ವ್ಯಕ್ತಿತ್ವ ಸ್ವಲ್ಪ ವಿಭಿನ್ನ ಸ್ವರೋಪದ್ದು. ಇವನು ಅಸಾಧಾರಣ ಬುದ್ಧಿವಂತ ಹಾಗೂ ಒಂದು ಚೌಕಟ್ಟಿಗೆ ಒಳಪಟ್ಟ ವ್ಯಕ್ತಿತ್ವದವನಲ್ಲ. ಇವನ ಬಾಲ್ಯ ಯೌವ್ವನಗಳನ್ನು ಹೆಚ್ಚು ಕಟ್ಟಿ ಕೊಟ್ಟಿಲ್ಲವಾದ್ದರಿಂದ ತಂದೆ ತಾಯಿಯರ ಪರಿಪೂರ್ಣ ಆರೈಕೆ ಇವನಿಗೆ ಸಿಕ್ಕಿಲ್ಲ ಹಾಗೂ ಅಕ್ಕನ ಆರೈಕೆಯಲ್ಲಿ ಬೆಳೆದವನೆಂದು ಊಹಿಸಿಕೊಳ್ಳಬಹೌದು. ಇಂತಹ ಸನ್ನಿವೇಶಗಳಲ್ಲಿ ಆಗುವ ಬಹುತೇಕ ಮನ-ಬೆಳವಣಿಗೆಗಳಂತೆ ಇವನಿಗೆ ಸಾಮಾಜಿಕ ಬಂಧನ ವಾತ್ಸಲ್ಯಗಳ ಸೆಳೆತ ಅಷ್ಟಕ್ಕಷ್ಟೆ. ಹಾಗೆಂದು ಮೌಲ್ಯಗಳೇ ಇಲ್ಲವೆನ್ನುವಂತಿಲ್ಲ. ಹೊರದೇಶಗಳಲ್ಲಿ ಇದ್ದ ಕಾರಣಕ್ಕೂ,ಯಾನಕ್ಕೆ ಮುಂಚೆಯೇ ದೇಹ ಸಂಪರ್ಕದ ಅನುಭವ ಇದ್ದುದಕ್ಕೂ, ಮದುವೆಯಾಗದೆ ಉಳಿದವನಾದುದಕ್ಕೂ, ಹೆಚ್ಚಿನ ತಾಕಲಾಟಗಳು ಇವನಲ್ಲಿ ಕಂಡುಬರುವುದಿಲ್ಲ.ಯಾನದಲ್ಲಿ ಉತ್ತರೆಯ ನಡವಳಿಕೆಗಳು ಇವನಲ್ಲ್ಲಿ ಎಬ್ಬಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅಂತರ್ಮುಖಿಯಾಗುವ ಮೂಲಕ ಅವನ ಪಾತ್ರ ಹಾಗೂ ವ್ಯಕ್ತಿತ್ವ ಬೆಳೆಯುತ್ತಾ ಹೋಗುತ್ತದೆ. ಧ್ಯಾನಸ್ಥಿತಿಯಲ್ಲಿ ಇಳಿಯುತ್ತಾ ವಿಶ್ವರಹಸ್ಯದ ಉತ್ತರಗಳನ್ನು ತತ್ವಮೀಮಾಂಸೆಯಲ್ಲಿ ಹುಡುಕುತ್ತಾ ಹೋಗುವ ಅವನ ವೈಚಾರಿಕ ಲಹರಿ ಕಾದಂಬರಿಯ ಮೂಲ ತಿರುಳು ಎಂದೆನ್ನಬಹುದು.ಈ ಮೂಲ ತಿರುಳಿನ ಸುತ್ತಲೇ ಇರುವ ಸಿಪ್ಪೆ, ಬೀಜಗಳಂತೆ ಉಳಿದ ಪಾತ್ರಗಳು ನನಗೆ ಭಾಸವಾಗುತ್ತವೆ.

ಬೆಳಕು- ಕತ್ತಲು,ಸೂರ್ಯ ,ಗುರುತ್ವ, ಕೃಷ್ಣ ಗುಹ್ವರ ಇತ್ಯಾದಿಗಳ ತಾತ್ವಿಕ ಸಂವಾದ ಇಲ್ಲಿನ ಹೈಲೈಟ್ . ಸಮಕಾಲೀನ ಜಗತ್ತಿನ ಎಡ-ಬಲ ರಂಗಗಳ ಸೈಧ್ಧಾಂತಿಕ ಭಿನ್ನಾಭಿಪ್ರಾಯಗಳು , ಜಾಹಿರಾತು ಮಾರುಕಟ್ಟೆ ಹಣ ಪ್ರಚಾರಗಳ  ಜೇಡರ ಬಲೆ,ಹಿಮಾಲಯದ ತಪ್ಪಲು ,ಅಲ್ಲಿ ನಡೆಯುತ್ತಿರುವ ವಿಧ್ವಂಸಕ ಬೆಳವಣಿಗೆಗಳು , ಜನರ ಮನೋಭಾವ ಮೌಲ್ಯಗಳಲ್ಲಾಗುತ್ತಿರುವ ಅಧಃ ಪತನಗಳು ಎಲ್ಲವನ್ನು ವಿವರಿಸುವಲ್ಲಿ ಕಥೆ ನಡೆಯುವ ಕಾಲಮಾನದ ಚಾರಿತ್ರಿಕ ಚೌಕಟ್ಟನ್ನು ಕಟ್ಟಿಕೊಡುತ್ತವೆ,. ಹಾಗಾಗಿ ಈ ಕಾದಂಬರಿಯನ್ನು ಇನ್ನೂ ಐವತ್ತು ವರ್ಷ ಕಳೆದು ಓದಿದರೂ ಅದರ ಪ್ರಸ್ತುತಿ ಸ್ವೀಕರಣೀಯವೆಂದು ನನ್ನ ಭಾವನೆ. ಅಕ್ಕನ ನಿರಪೇಕ್ಷ ಅಂತಃ ಕರಣ, ಭಾವನ,ಅವರ ಮಕ್ಕಳ  ಪ್ರೀತಿ, ಧ್ಯೇಯಸಾಧನೆಗೆ ಮುಖಮಾಡಿದವನಿಗೆ ಅಸ್ತಿ ಪಾಸ್ತಿಯ ಮೇಲಿನ ನಿರಾಸಕ್ತಿಯಂಥ ಸಾರ್ವಕಾಲಿಕ  ಸತ್ಯಗಳು ಕೂಡಾ ಕಥೆಯಲ್ಲಿ ಬಂದು ಹೋಗುತ್ತವೆ. ಭೂಮಿಯಲ್ಲಿ ಲೋಭ ಮೋಹಗಳನ್ನು ಗೆಲ್ಲಬಲ್ಲ ಮನೋಭೂಮಿಕೆ ರೂಪುಗೊಂಡು ಉತ್ತರೆಯೋಂದಿಗೆ ಸೋಲ್ಯಾರಿಸ್ ನಲ್ಲಿ  ಕಾಮವನ್ನು ಗೆಲ್ಲಬಲ್ಲ ,ಕ್ರೋಧವನ್ನು  ಮಣಿಸಬಲ್ಲ ಮನೋಸ್ಥಿತಿ ಮೂಡುವುದರ ಮುನ್ನುಡಿ ಸುಪ್ತವಾಗಿ ವ್ಯಕ್ತಪ ಡಿಸುತ್ತಾರೆ ಭೈರಪ್ಪನವರು. ಏಕಾಂತದಲ್ಲಿ ಕಾಮವನ್ನು ಗೆಲ್ಲುವುದು ಕಷ್ಟಕರ. ಇಲ್ಲಿ ಅವನು ಉತ್ತರೆಯೊಡನೆ ಹೊಂದಾಣಿಕೆ ಮಾಡಿಕೊಂಡು ಉಳಿದ ಸಾಧನೆಗಳ ಶಿಖರ ಏರಬಹುದಿತ್ತೇ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಹಾಗಿದ್ದರೆ ಕಥೆಯ ಓಟಕ್ಕೆ ಚ್ಯುತಿ ಬರುತ್ತಿತ್ತೇ ಇಲ್ಲವೇ ಎಂದು ಹೇಳುವುದು ಕಷ್ಟ.  ಅವರಿಬ್ಬರಲ್ಲಿ ಮೂಡುವ ಬಿರುಕು ಹಾಗೂ ಸಮರಸವಿಲ್ಲದ ಜೀವನ ಓದುಗನಲ್ಲಿ ಒಂದುಬಗೆಯ ಹತಾಶೆ ಮೂಡಿಸುವುದಂತೂ ನಿಜ.ಯಾನದ ನೌಕೆಯ ಒಳಗೂ, ಹೊರಗೂ ಇರುವ ನಿರ್ವಾತವನ್ನು, ಏಕತಾನತೆಯನ್ನು ಇದು ಪ್ರತಿನಿಧಿಸುತ್ತದೆಯೇನೋ ನನಗೆ ತಿಳಿಯದು. ಎರಡು ವಿಭಿನ್ನ ನೌಕೆಗಳಲ್ಲಿ ಎರಡು ವಿಭಿನ್ನ ಪರಸ್ಪರ ಸಂಬಂಧವಿರುವ ಜೋಡಿಗಳ ಕಥಾ ಹಂದರ ಇದ್ದಲ್ಲಿ ಕಥೆಯ ವ್ಯಾಪ್ತಿ ಸಮಗ್ರವಾಗುತ್ತಿತ್ತೇನೋ.

ಉಳಿದ ಮುಖ್ಯಪಾತ್ರಗಳಾದ ಆಕಾಶ್ ಹಾಗೂ ಮೇದಿನಿ ಅವರ ಚಿತ್ರಣ ಕಥಾ ಕ್ರಿಯೆಯ ಮೂಲ ಪರಿಕರಗಳಾಗದೆ ಕೇವಲ ವೇಗವರ್ಧಕಗಳಂತೆ ಮೂಡಿಬರುತ್ತವೆ.

ಕಥಾನಿರೂಪಣೆ:

ವೈಜ್ಞಾನಿಕ ಹಂದರದ ಮೇಲೆ ಕಟ್ಟಿಕೊಟ್ಟ ವೈಚಾರಿಕ ಕಥೆಯಾದ್ದರಿಂದ ಇಲ್ಲಿ ಯಾವ ರೋಚಕ ಸನ್ನಿವೇಶಗಳು ಮೂಡುವುದಿಲ್ಲ. ಬಾಲಿವುಡ್ ಅಥವಾ ಹಾಲಿವುಡ್ ನ ಸಾಹಸ ಇಲ್ಲಿಲ್ಲ ಅಲ್ಲಲ್ಲಿ ಸ್ವಲ್ಪ ನಿಧಾನವಾಗಿ ಹೋಗುತ್ತಿದೆ ಎಂದೆನ್ನಿಸಿದರೂ, ಓದಿಸಿಕೊಂಡು ಹೋಗುವುದರಲ್ಲಿ ಕಾದಂಬರಿ ಸೋಲುವುದೆಂದು ನನಗನ್ನಿಸಲಿಲ್ಲ.ಭೈರಪ್ಪನವರ ಕಥೆಗಳಲ್ಲಿ ಬರುವ ಕಾಮ ಇಲ್ಲಿಯೂ ಸಾಕಷ್ಟು ಇದೆ. ಅಲ್ಲಲ್ಲಿ ವೈಜ್ಞಾನಿಕ ವಿವರಣೆಗಲಿದ್ದರೂ, ಓದುಗನ ಗಮನ ಆ ಕಡೆಗೆ ಅಷ್ಟು ಹರಿಯದು- ಕಾರಣ ಇದು ಮೂಲಭೂತವಾಗಿ ವೈಚಾರಿಕ ಕಾದಂಬರಿ.  ಹಾಗಾಗಿ ಇದನ್ನು ವೈಜ್ಞಾನಿಕ ಕಾದಂಬರಿ ಎಂದೆನ್ನಲಾಗದು.

ಕಥಾವಸ್ತು:

ಕಾದಂಬರಿ ಬರೆಯುವುದು ಮತ್ತು ಓದುವುದು ಏಕೆ ಎಂದು ಕೇಳಿಕೊಂಡರೆ ಹಲವರಿಂದ ಹಲವು ಉತ್ತರಗಳನ್ನು ನಿರೀಕ್ಷಿಸಬಹುದು. ಮಕ್ಕಳಿಗೆ ಕಥೆಗಳನ್ನು ಹೇಳುವುದರ ಮೂಲ ಧ್ಯೇಯ ಅವು ಪುರಾಣ, ಇತಿಹಾಸ, ದೃಷ್ಟಾಂತಗಳ ಮೂಲಕ ಪ್ರಪಂಚದ ಗುಣ ಸ್ವರೂಪಗಳನ್ನು , ಒಳ್ಳೆಯದು-ಕೆಟ್ಟದ್ದು  ಸ್ವೀಕೃತ -ಅಸ್ವಿಕೃತ ನಡವಳಿಕೆಗಳ ನಡುವಿನ ವ್ಯತ್ಯಾಸ ಗ್ರಹಿಸಿ ವ್ಯಕ್ತಿತ್ವವನ್ನು ರೂಪುಗೊಳಿಸಲಿಕ್ಕೆ ಹಾಗೂ ಮನರಂಜನೆಗೆ ಎಂದು ವ್ಯಾಖ್ಯಾನಿಸಬಹುದು.

ಆದರೆ ಪ್ರೌಢರು ಈ ಕಾದಂಬರಿಗಳಿಂದ  ಏನನ್ನು ತೆಗೆದುಕೊಳ್ಳಬೇಕು? ಕನಸುಗಳನ್ನೇ ,ಆದರ್ಶಗಳನ್ನೇ,ಕಟುವಾಸ್ತವಗಳನ್ನೇ, ಅಥವಾ ಕ್ರಾಂತಿಕಾರಿ ಮನೋಭಾವಎಗಳನ್ನೇ, ವೈಚಾರಿಕತೆಯನ್ನೇ ಹೇಳುವುದು ಕಷ್ಟ. ಮೇಲಿನ ಎಲ್ಲ ನಿರೀಕ್ಷೆಗಳನ್ನು,  ವಾಸ್ತವಿಕ, ಪ್ರಾಯೋಗಿಕ ಅಥವಾ ಕಾಲ್ಪನಿಕ ಆಯಾಮಗಳ ನಡುವೆ  ಯಾವುದರಲ್ಲಿ ಭಾವಿಸಿಕೊಳ್ಳಬೇಕು ಎಂದಾಗ ಪ್ರಶ್ನೆ ಇನ್ನೂ ಜಟಿಲವಾಗುತ್ತದೆ. ಯಾರಿಗೆ ಯಾವುದು ಬೇಕು ಎನ್ನುವುದು ಅವರವರ ಭಾವ ಭಕುತಿ ಸಂಸ್ಕೃತಿ ಸಂಸ್ಕಾರಗಳನ್ನು , ಮನೋಧರ್ಮ ಮನೋವಾಂಛೆಗಳನ್ನು ಅವಲಂಬಿಸಿರುತ್ತದೆ.

ನನ್ನ ಮಟ್ಟಿಗೆ ಹೇಳುವುದಾದರೆ ಒಂದು ಸಾಹಿತ್ಯ ಕೃತಿ ವೈಚಾರಿಕತೆಯನ್ನು ಪ್ರಚೋದಿಸಬೇಕು. ಪರಂಪರೆ ತಳಹದಿಯ ಮೇಲೆ ನಮ್ಮ ಮನಸ್ಸಿನ ಗಡಿಯನ್ನು ವಿಸ್ತರಿಸುವಂತಿರಬೇಕು. ಹಳೆ ಬೇರಿನ ಮರಕ್ಕೆ ಹೊಸಚಿಗುರನ್ನು ಟಿಸಿಲೊಡೆಸಬೇಕು- ಬರೀ ಎಲೆಗಳನ್ನಲ್ಲ, ರೆಂಬೆ ಕೊಂಬೆಗಳ ಸಮೇತವಾಗಿ.  ನಮ್ಮ ನಡುವಿನ ತಾಕಲಾಟಗಳಿಗೆ ನಮ್ಮ ಮನೋಧರ್ಮ ,ಮಾನವನ ಮೂಲಗುಣಗಳು ಕಾರಣವೇ ಹೊರತು ಅವುಗಳನ್ನು ಮೀರಿನಿಂತ  ಧರ್ಮ ಅಲ್ಲ ಎಂಬ ಸತ್ಯವನ್ನು ಸಾರುವಂತಿರಬೇಕು. ಈ ಕಡೆಯ ಅಂಶ ಕೆಲವರಿಗೆ ಒಪ್ಪಿಗೆಯಾಗದೇ ಇರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಾವು ಒಂದು ಸಮುದಾಯವಾಗಿ ಸಧೃಢವಾಗಿ ಮುನ್ನಡೆಯಬೇಕಾದರೆ ನಮ್ಮ ಮೂಲ ಹಾಗೂ ದೇಶೀ ಪರಂಪರೆಯ ಬಗೆಗೆ ವೈಜ್ಞಾನಿಕ ಅರಿವು,’ ಚಿಕಿತ್ಸಕ ಹೆಮ್ಮೆ ‘  ಇರುವುದು ಬಹಳ ಮುಖ್ಯ. ನಮ್ಮ ಸಂಸ್ಕೃತಿಯ ಅರಿವು ನಮಗೆ ಗಹನವಾಗಿ ಇದ್ದಲ್ಲಿ ಮಾತ್ರ ವಿಧ್ವಂಸಕ ಶಕ್ತಿಗಳು ಕೀಳಾಗಿ ಕಾಣುವುದಾಗಲೀ, ಕೀಳರಿಮೆ ಮೂಡಿಸುವುದಾಗಲೀ ಮಾಡಲಾರವು. ಒಡೆಯಲಾರವು.

ಇದೇ ಕಾರಣಕ್ಕೆ ಭೈರಪ್ಪನವರ ಯಾನ ನನಗೆ ಪ್ರಸ್ತುತವಾಗಿಯೂ, ಆಪ್ತವಾಗಿಯೂ ಕಾಣುತ್ತದೆ.. ದೇಶೀ ಭಾವನೆಗಳು ಹಾಗೂ ಚಿಂತನೆಗಳನ್ನು ಒರೆಗಿಟ್ಟು  ಹೊಸ ಯುಗದ  ವೈಜ್ಞಾನಿಕತೆಗೆ ಪೂರಕವಾಗಿ ತಾತ್ವಿಕ ಅಂಶಗಳ ಸಮನ್ವಯ ಸಾಧಿಸುತ್ತಾ ಹೋಗುತ್ತಾರೆ. ಪಾತ್ರಗಳನ್ನೂ ಯಾವ ಆದರ್ಶಗಳ ಚೌಕಟ್ಟಿಗೂ ಬಂಧಿಸದೆ ಅವರವರ ನಿರ್ಧಾರಗಳಿಗೆ ಪಕ್ಕಾಗಿಸುತ್ತಾರೆ ಹಾಗೂ ಆ  ನಿರ್ಧಾರಗಳಿಗಳ  ಪರಿಣಾಮಗಳನ್ನು ತೋರಿಸಿ ಅವಕ್ಕೆ ಹೊಣೆಯಾಗಿಸುತ್ತಾರೆ.

ಪರ್ವ, ಸಾರ್ಥ, ನೆಲೆ ಕಾದಂಬರಿಗಳಷ್ಟು ತೀವ್ರವಾಗಿಲ್ಲದಿದ್ದರೂ ಯಾನ ನಮ್ಮ ಮನೋ ವಿಮಾನವನ್ನು ಅರಿವಿನ ಪರಿಧಿಯ ಹೊರಗೆ ಉಡಾಯಿಸುವುದರಲ್ಲಿ ಯಶಸ್ವಿಯಾಗಿದೆ ಎಂದೆನ್ನಲು ಅಡ್ಡಿಯಿಲ್ಲ.

ಸುದರ್ಶನ ಗುರುರಾಜರಾವ್.

3 thoughts on “ಯಾನ ಕಾದಂಬರಿ – ಒಂದು ಕಥೆ- ಹಲವು ನೋಟ. ವಿಮರ್ಶಾ ಮಾಲಿಕೆ. ಡಾ.ಉಮಾ ವೆಂಕಟೇಶ್,ಡಾ. ರಾಮಶರಣ್,ಡಾ. ದಾಕ್ಷಾಯಿಣಿ ಗೌಡ &ಸುದರ್ಶನ ಗುರುರಾಜರಾವ್

  1. ಬರಹ ಒಂದೇ ಆದರೂ ಅದು ಹುಟ್ಟಿಸುವ ವಿಚಾರಧಾರೆ ಹಲವು ಬಗೆಯದು. ಓದುಗರಿಗೆ ಪೂರ್ತಿ ಕತೆ ಹೇಳದೆ, ಕುತೂಹಲ ಕೆದಕಿ, ಓದುವ ಆಸಕ್ತಿ ಉಳಿಸುವುದು, ವಿಮರ್ಷೆ ಬರೆಯುವವರ ಕಾರ್ಯವೆಂದು ನನ್ನ ಅಭಿಪ್ರಾಯ. ನಿಮ್ಮೆಲ್ಲರ ” ಯಾನ” ಮತ್ತದರ ವಿಭಿನ್ನ ಅನುಭವ ಓದಿ ಸಂತೋಷವಾಯಿತು

    Like

  2. ಸೌರವ್ಯೂಹದ ಆಚೆಗಿನ ಯಾನ, ಮಾನವನ ನೈತಿಕತೆಯನ್ನು ಮೀರುವ ಯಾನ. ‘ಯಾನ’ದ ವಸ್ತು ಗಂಭೀರ. ಖಗೋಲ ಶಾಸ್ತ್ರವನ್ನು ಭಾರತೀಯ ತತ್ವಮೀಮಾಂಶೆಯ ಜೊತೆ ಬೆರೆಸಿ, ಅದು ಬೇರೆಯಲ್ಲ, ಇದು ಬೇರೆಯಲ್ಲ ಎಂಬುದನ್ನು ಎತ್ತಿತೋರಿಸಲು ಬರೆದ ಪುಟ್ಟ ಕಾದಂಬರಿಯಿದು. ಕಾಲ, ಜೀವ, ನೆಳಕು, ಕತ್ತಲೆ, ವೇಗ ಎಲ್ಲ ಸಾಪೇಕ್ಷತೆಗಳು ಎಂದು ಖಗೋಲ ಶಾಸ್ತ್ರ ಹೇಳುವಂತೆ ತುಂಬಾ ಹಿಂದೆಯೇ ಭಾರತೀಯ ತತ್ವಶಾಸ್ತ್ರದಲ್ಲೂ ಇದೆ ಎಂದು ಹುಡುಕಿ ತೋರಿಸಲು ಹೊರಟಿದ್ದಾರೆ, ಭೈರಪ್ಪನವರು.

    ‘ಸುಧಾ’ದಲ್ಲೋ ‘ತರಂಗ’ದಲ್ಲೋ ‘ವೈಜ್ನಾನಿಕ ಕತೆ’ ಎಂದು ಎರಡು ಮೂರು ಪುಟಗಳಲ್ಲಿ ಬರೆಯಬಹುದಾದ ಕತೆಯನ್ನು ಭೈರಪ್ಪನವರು ಹಿಗ್ಗಿಸಿ ಪುಟ್ಟಕಾದಂಬರಿ ಮಾಡಿದ್ದಾರೆ, ಹೀಗಾಗಿ ಕತೆ ಮುಂದೆಯೇ ಹೋಗುವುದಿಲ್ಲ. ವಸ್ತುವಿಗೆ ಒಂದು ರೂಪವೇ ಬರುವುದಿಲ್ಲ. ಕಾದಂಬರಿಯ ಮುಖ್ಯ ಪಾತ್ರಗಳೆಲ್ಲ ಕಾದಂಬರಿಕಾರ ಹೇಳುವಂತೆ ಕುಣಿಯುತ್ತ ಹೋಗುತ್ತವೆ. ಇತ್ತ ವೈಜ್ನಾನಿಕವೂ ಅಲ್ಲದ ಇತ್ತ ವೈಚಾರಿಕವೂ ಆಗದ ಭಾವುಕತೆಯೇ ಇಲ್ಲದ ಒಣಗಿದ ಯಾನ.

    ನನಗೆ ಇಷ್ಟೆಲ್ಲ ಅನಿಸಿದರೂ ‘ಯಾನ’ ನಂಗೆ ತುಂಬ ಇಷ್ಟ, ಯಾಕೆಂದರೆ ಕನ್ನಡಿಗರು ಇದನ್ನು ಸಾವಿರಾರು ಸಂಖ್ಯೆಯಲ್ಲಿ ಖರೀದಿಸಿ ಬರೆದವರಿಗೆ ಪ್ರಕಟಿಸಿದವರಿಗೆ ಒಂದಿಷ್ಟಾದರೂ ಲಾಭವಾಗುವಂತೆ ಮಾಡಿದ್ದಾರೆ. ಕನ್ನಡದಿಂದ ಬರೀ ಭಾವ ತುಂಬುವುದಿಲ್ಲ, ಹೊಟ್ಟೆಯನ್ನೂ ತುಂಬಿಕೊಳ್ಳಬಹುದು ಎಂದು ಒಂದು ಸಣ್ಣ ಆಸೆಯನ್ನು ಈ ಕಾದಂಬರಿ ಚಿಗುರಿಸುತ್ತದಲ್ಲ, ಅದು ನನಗೆ ತುಂಬ ಇಷ್ಟ.

    – Keshav

    Like

    • ಎಲ್ಲಾ ಕಥೆ ಕಾದಂಬರಿಯ ಪಾತ್ರಗಳು ಕರ್ತೃವಿನ ಲಹರಿಯನ್ನು ತಾನೇ ಬಿಂಬಿಸುವುದು?

      Like

Leave a comment

This site uses Akismet to reduce spam. Learn how your comment data is processed.