ಬೆರಗು
ಮನ ಕುಣಿವುದು ಮುಂಜಾನೆಯ ಮುಸುಗಿಗೆ
ಕಣ್ ತಣಿವುದು ಪ್ರತಿ ಸಂಜೆಯ ಕೆಂಪಿಗೆ
ಬೆರಗಾಗುವುದೀ ಸೃಷ್ಟಿಯ ಬೆಡಗಿಗೆ
ಛಂದಃಪ್ರಾಸವಿರಡಿಗಡಿಗೆ
ಸುಳಿದಾಡುವ ತಂಗಾಳಿಯ ಸ್ಪರ್ಶಕೆ
ಹರಿಯುವ ಹೊನಲಿನ ಬೆಳ್ನೊರೆ ನಗುವಿಗೆ
ಗುಡುಗಿಗೆ ಸಿಡಿಲಿಗೆ ಕಡಲಿನ ಮೊರೆತಕೆ
ವನಖಗಜಲಚರ ನಿಃಸ್ವನಕೆ
ಕುಸುಮಿತ ತರುಗಳ ಬಹುಫಲಭಾರಕೆ
ಗಿರಿಕಟಿಯಟವಿಯ ಮೈಕೈಮಾಟಕೆ
ಸರಸರ ಚಿಮ್ಮುವ ಚಿಗುರಗಳೋಟಕೆ
ಚಂದನಚರ್ಚಿತ ಘಮಘಮಕೆ
ಅನ್ನವ ಬೆಳೆಯುವ ಬುವಿ ತಾಯ್ತನಕೆ
ಚಿನ್ನವ ನೀಡುವ ಗಣಿ ನಿಸ್ಸ್ವಾರ್ಥಕೆ
ಕಾಣದ ಕೈಗಳ ಬಳೆಗಳ ನಾದಕೆ
ಶ್ರುತಿಲಯವಿರೆ ಪ್ರತಿ ಕಣಕಣಕೆ
ಡಿ.ನಂಜುಂಡ
ಸುಂದರವಾದ ಕವನ
ವಂದನೆಗಳು
LikeLike
ಸುದರ್ಶನ್ ಅವರು ನಂಜುಂಡ ಭಟ್ ಅವರ ಪರಿಚಯದಲ್ಲಿ ಬರೆದಿರುವಂತೆ, ಅವರ ಪದ ಭಂಡಾರ ಬಹಳ ಶ್ರೀಮಂತವಾಗಿದೆ. ಪ್ರಕೃತಿಯ ಸೊಬಗು ಮತ್ತು ನಿಸ್ವಾರ್ಥತೆಯನ್ನು ತಮ್ಮ ಸುಂದರ ಲಯದಲ್ಲಿ ಬರೆದಿರುವ ವೈಖರಿ ಬೆರಗುಗೊಳಿಸುವಂತಿದೆ. ಪ್ರಕೃತಿಯ ಮೋಹಕ ಚಲುವನ್ನು ತಮ್ಮದೇ ಶೈಲಿಯಲ್ಲಿ ನಮ್ಮ ಮುಂದಿಟ್ಟಿದ್ದಾರೆ.
ಉಮಾ ವೆಂಕಟೇಶ್
LikeLike
ಪರಿಚಯಿಸಿದ ಸುದರ್ಶನ್ ರಾವ್ ರವರಿಗೂ, ಪತ್ರಿಕೆಗೂ ಮತ್ತು ಸಂಪಾದಕರಿಗೂ ಕೃತಜ್ಞತೆಗಳು
LikeLike
ಬೆರಗು! ನಿಜ. ಇಂದು ’ಮುಂಜಾನೆಯ ಮುಸುಗಿಗೆ ಮನ ಕುಣಿದಂತೆಯೇ’ ನಂಜುಂಡರ ಕವಿತೆ ಬೆರಗು, ಮುದ ಎಲ್ಲ ಕೊಟ್ಟಿತು. ಇದರಲ್ಲಿ ತುಂಬಿದ ’’ಛಂದಃಪ್ರಾಸವಿರಡಿಗಡಿಗೆ” ಇಂಥ ಕವನಗಳು ಹೊಸ ಕವಿಗಳಿಂದ ಬರುವದಪರೂಪ, ಇತ್ತಿತ್ತಲಾಗಿ! ಆ ಛಂದ.ಪ್ರಾಸ, ಲಯವಷ್ಟೇ ಅಲ್ಲ, ಅವರ ಚಂದನ ಸೂಸುವ ಸಾಲು ಸಾಲುಗಳಲ್ಲಿಯ ಪ್ರತಿಮೆಗಳಿಗೆ ಮನಸೋತೆ. ಅತಿಥಿಗಳಿಗೆ ಸುಸ್ವಾಗತ. ಮಹಾ ಸ್ವಾಗತ! ಅನ್ವರ್ಥಕ ಚಿತ್ರವಿನ್ಯಾಸವೊದಗಿಸಿದ ಸಂಪಾದಕರಿಗೂ ಕೃತಜ್ಞತೆಗಳು.
LikeLike