ಯಕ್ಕಾ ಮರ ರಾಷ್ಟ್ರೀಯ ಉದ್ಯಾನ (Joshua Tree National Park)– ಉಮಾ ವೆಂಕಟೇಶ್

yakka

ಯಕ್ಕಾ ಮರ ರಾಷ್ಟ್ರೀಯ ಉದ್ಯಾನ (Joshua Tree National Park)

 ಸೂರ್ಯನ ಪ್ರಖರವಾದ ಬಿಸಿನ ಹಿನ್ನೆಲೆಯಲ್ಲಿ ಜೋಷುವಾ ಮರಗಳ ತೋಪು
ಸೂರ್ಯನ ಪ್ರಖರವಾದ ಬಿಸಿಲಿನ ಹಿನ್ನೆಲೆಯಲ್ಲಿ ಜೋಷುವಾ ಮರಗಳ ತೋಪು

ನಾಲ್ಕು ಸಮಯದ ವಲಯಗಳು, ಹತ್ತಾರು ದೇಶಗಳು ಮತ್ತು ಸಂಸ್ಕೃತಿಗಳ ಜನರನ್ನು ತನ್ನಲ್ಲಿ ಕೂಡಿಸಿಕೊಂಡಿರುವ, ವಿಶಾಲವಾದ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಭೌಗೋಳಿಕ ವೈವಿಧ್ಯತೆಗೇನೂ ಕೊರತೆಯಿಲ್ಲ. ಪರ್ವತಗಳು, ಮರುಭೂಮಿಗಳು, ಪ್ರಸ್ಥಭೂಮಿ, ಮಹಾ ಸರೋವರಗಳು, ಅದ್ಭುತವಾದ ಕಮ್ಮರಿಗಳಂತಹ  ವಿವಿಧ ರೀತಿಯ ಭೌಗೋಳಿಕ ಪ್ರದೇಶಗಳಿರುವ ಇಲ್ಲಿ, ನೋಡುಗರಿಗೆ ಸಂದರ್ಶಿಸಲು ಅನೇಕ ಸ್ಥಳಗಳಿವೆ. ಕ್ಯಾಲಿಫ಼ೋರ್ನಿಯಾದ ದಕ್ಷಿಣದಲ್ಲಿರುವ, ಲಾಸ್ ಏಂಜಲೀಸ್ ಮಹಾನಗರಕ್ಕೆ ಪೂರ್ವದಲ್ಲಿ ಮೊಹಾವೆ ಎಂಬ ಮರುಭೂಮಿಯಿದೆ. ಇದರ ಬಗ್ಗೆ ಅನೇಕರಿಂದ ಕೇಳಿದ್ದೆ. ಇತ್ತೀಚೆಗೆ ನಮ್ಮ ಸ್ನೇಹಿತರೊಬ್ಬರು, ನೀವು ಜೋಶುವಾ ಮರಗಳ ರಾಷ್ಟ್ರೀಯ ಉದ್ಯಾನ ನೋಡಿದ್ದೀರಾ? ಇಲ್ಲವಾದರೆ ಖಂಡಿತಾ ನೋಡಿ ಬನ್ನಿ ಎಂದರು. ಸಧ್ಯದಲ್ಲಿ ಕಳೆದ ಆರು ತಿಂಗಳಿಂದ ಲಾಸ್ ಏಂಜಲೀಸಿನಲ್ಲಿ ವಾಸ್ತವ್ಯ ಹೂಡಿರುವ ನಮಗೆ ಇದಕ್ಕಿಂತ ಉತ್ತಮ ಅವಕಾಶ ಇನ್ನು ಸಿಗದು ಎಂದು, ನಾವು ಈ ಉದ್ಯಾನಕ್ಕೆ ಭೇಟಿ ನೀಡುವ ನಿರ್ಧಾರ ಮಾಡಿದೆವು. ಕಳೆದ ವಾರ ಇದನ್ನು ಕಾರ್ಯರೂಪಕ್ಕಿಳಿಸಿ, ಈ ಅಪರೂಪದ ಸ್ಥಳಕ್ಕೆ ಹೋಗಿದ್ದೆವು. ಜೋಶುವಾ ಮರ ಸಸ್ಯಶಾಸ್ತ್ರದಲ್ಲಿ “ಯಕ್ಕಾ ಮರ”(Yucca brevifolia) ಅಥವಾ ಭೂತಾಳೆ ಎಂಬ ಪ್ರಭೇಧಕ್ಕೆ ಸೇರಿದ ಸಸ್ಯವಾಗಿದೆ. ಸಾಮಾನ್ಯವಾಗಿ ನೀರಿಲ್ಲದ ಒಣ ಹವೆಯ ಪ್ರದೇಶಗಳಲ್ಲಿ ಬೆಳೆಯುವ ಈ ಗಿಡಗಳು, ತಮ್ಮ ಮಂದವಾದ ಎಲೆಗಳು, ಮುಳ್ಳುಗಳ ಮೂಲಕ ನೀರನ್ನು ಸಂಗ್ರಹಿಸಿ, ಒಣ ಹವೆಯಲ್ಲೂ ತಮ್ಮ ಶಾರೀರಕ ಕ್ರಿಯೆಗಳನ್ನು ಚೊಕ್ಕವಾಗಿ ನಡೆಸಿಕೊಂಡು ಹೋಗುತ್ತವೆ.

ಸುಮಾರು 5,000 ವರ್ಷಗಳಿಂದ ಈ ಸಸ್ಯಗಳು, 800,000 ಎಕರೆಗಳಷ್ಟು ವಿಶಾಲವಾದ ಈ ಪ್ರದೇಶವನ್ನು ಆಕ್ರಮಿಸಿವೆ. ಒಂದು ಪ್ರಬೇಧದ ಸಸ್ಯಜಾತಿ, ಇಷ್ಟೊಂದು ದೊಡ್ಡ ಪ್ರದೇಶವನ್ನೆಲ್ಲಾ ಆಕ್ರಮಿಸಿರುವ ವೈಖರಿಯನ್ನು ಮೊದಲ ಬಾರಿಗೆ ಇಲ್ಲಿ ಕಂಡೆವು. ಸಾನ್ ಆಂಡ್ರೆಯಾಸ್ ಎಂಬ ಭೂಮಿಯ ನ್ಯೂನತೆಯ ಸ್ಥಳವು, ಈ ಉದ್ಯಾನದ ದಕ್ಷಿಣವನ್ನು ಆಕ್ರಮಿಸಿದ್ದು, ಭೂಕಂಪಗಳು ಇಲ್ಲಿ ಸರ್ವೇ ಸಾಮಾನ್ಯವಾದ ಸಂಗತಿ. ಹತ್ತೊಂಬತ್ತನೆ ಶತಮಾನದ ಮಧ್ಯಭಾಗದಲ್ಲಿ, ಮಾರ್ಮನ್ಸ್ ಎಂಬ ಒಂದು ಗುಂಪಿನ ಜನಾಂಗ, ಮೊಹಾವೆ ಮರುಭೂಮಿಯನ್ನು ದಾಟುತ್ತಿದ್ದರು. ಈ ಮರಗಳನ್ನು ನೋಡಿದಾಗ ಅವರಿಗೆ ಇದರ ವಿಶೇಷವಾದ ಆಕಾರ,  ಬೈಬಲ್ಲಿನಲ್ಲಿ ಬರುವ ಜೋಷುವಾ ಎಂಬ ವ್ಯಕ್ತಿ ತನ್ನ ಕೈಗಳನ್ನು ಆಗಸದೆಡೆಗೆ ಎತ್ತಿ ಪ್ರಾರ್ಥಿಸಿದ ಸಂಗತಿ ನೆನಪಾಯಿತಂತೆ. ಆದ್ದರಿಂದ ಅವರು ಈ ಮರಕ್ಕೆ “ಜೋಷುವಾ ಮರ” ಅಥವಾ ಯಕ್ಕಾ ತಾಳೆಯ ಮರ or Yucca Palm ಎಂಬ ನಾಮಕರಣ ಮಾಡಿದರು ಎಂದು ದಾಖಲಾಗಿದೆ. ಈ ಮರಗಳನ್ನು ಕಂಡಾಗ, ನನಗೆ ಅದರ ಹೆಸರಿನ ಹಿನ್ನೆಲೆಗಿಂತ, ಈ ಸಸ್ಯಜಾತಿ ಇಷ್ಟೊಂದು ದೊಡ್ಡ ಜಾಗವನ್ನು ಆಕ್ರಮಿಸಿ ಯಶಸ್ವಿಯಾಗಿ ನಲಿದಾಡುತ್ತಿರುವುದರ ಬಗ್ಗೆ ಸೋಜಿಗವೆನಿಸಿತು. ಸಸ್ಯಶಾಸ್ತ್ರದಲ್ಲಿ ಭೂತಾಳೆ ಪ್ರಭೇಧದ ಸಸ್ಯಗಳ ಉತ್ಕೃಷ್ಟ ಮಟ್ಟದ ಅಳವಡಿಕೆಯ ಸ್ವಭಾವವನ್ನು ನಾನು ತಿಳಿದಿದ್ದರೂ ಸಹಾ, ಈ ಮಟ್ಟದಲ್ಲಿ ಅವುಗಳ ರೂಪಾಂತರ ನಡೆಯಬಹುದು ಎನ್ನುವುದರ ಅರಿವಿರಲಿಲ್ಲ.

ಡಿಸೆಂಬರ್ ೨೭ನೆಯ ಮುಂಜಾನೆ ನಾವೆಲ್ಲಾ ಪಸಡೀನಾದಿಂದ ಪೂರ್ವಕ್ಕೆ, ಅಂತರ ರಾಜ್ಯ ಹೆದ್ದಾರಿ ೧೦ರಲ್ಲಿ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಲಾಸ್ ಏಂಜಲೀಸ್ ಪಟ್ಟಣದ ಸುತ್ತಾಮುತ್ತಾ ವಾಹನಗಳ ಸಂದಣಿ ಅತಿಯಾಗಿರುತ್ತದೆ. ಒಬ್ಬ ಮನುಶ್ಯನಿಗೆ ತಲಾ ೩ ಕಾರುಗಳಿರುವ ಈ ದೇಶದಲ್ಲಿ, ರಸ್ತೆಗಳು ನಿಬಿಡವಾಗಿರುವುದು ಅಪರೂಪದ ಸಂಗತಿ. ಕ್ರಿಸ್ಮಸ್ ಹಬ್ಬದ ರಜೆಯಾದ್ದರಿಂದ, ಅಂದು ಮುಂಜಾನೆ ರಸ್ತೆಯಲ್ಲಿ ಅಷ್ಟೇನೂ ಸಂದಣಿ ಇರಲಿಲ್ಲ. ಲಾಸ್ ಏಂಜಲೀಸಿನಿಂದ ಪೂರ್ವಕ್ಕೆ ಪಾಮ್ ಸ್ಪ್ರಿಂಗ್ ಪಟ್ಟಣದ ದಿಕ್ಕಿನಲ್ಲಿ ಸಾಗುತ್ತಿದ್ದಂತೆ, ಸುತ್ತಲಿರುವ ಸಿಯೆರಾ ನಿವೇಡಾ ಪರ್ವತಗಳ ಶ್ರೇಣಿಯ ಸೊಬಗು ನಮ್ಮ ಕಣ್ಣುಗಳನ್ನು ಕುಕ್ಕುತ್ತಿತ್ತು. ಹಿಂದಿನ ರಾತ್ರಿ ಬಿದ್ದ ಹಿಮದ ಪರಿಣಾಮವಾಗಿ, ಹಲವಾರು ಶೃಂಗಗಳು ಬೆಳ್ಳಿಯ ಗೋಪುರಗಳಂತೆ ಮುಂಜಾನೆಯ ಸೂರ್ಯನ ಬೆಳಕಿನಲ್ಲಿ ಲಕಲಕಿಸುತ್ತಿದ್ದವು. ಸುಮಾರು ಎರಡು ಗಂಟೆಗಳ ಹೆದ್ದಾರಿಯ ಪ್ರಯಾಣದ ನಂತರ, ಒಳಗಿನ ಸಣ್ಣ ರಸ್ತೆಗೆ ತಿರುಗಿದಾಗ, ಅಲ್ಲಲ್ಲೇ ಕಳ್ಳಿಗಳು, ತಾಳೆ ಮರಗಳ ಗುಂಪುಗಳು ನಮ್ಮ ಕಣ್ಣಿಗೆ ಬೀಳಲಾರಂಭಿಸಿದವು. ಸಮುದ್ರದಿಂದ ೩೦೦೦ ಅಡಿಗಳಷ್ಟು ಎತ್ತರದಲ್ಲಿರುವ ಈ ಮರುಭೂಮಿಯ ಪ್ರದೇಶದಲ್ಲಿ, ಬೇಸಿಗೆಯ ಕುದಿಯುವ 100°F ರ ತಾಪಮಾನ, ಅತ್ಯಂತ ಕಡಿಮೆ ನೀರಿನ ಲಭ್ಯತೆ, ಕಡಿಮೆ ಮಳೆ, ಹೀಗೆ ಅನೇಕ ವೈಪರೀತ್ಯಗಳ ವಾತಾವರಣವಿದೆ. ಆದರೂ ಸಹ, ಇಲ್ಲಿ ನೂರಾರು ಪ್ರಬೇಧಗಳ ಸಸ್ಯಗಳು, ಪ್ರಾಣಿ-ಪಕ್ಷಿಗಳು ಹಾಗೂ ಕ್ರಿಮಿಕೀಟಗಳು ತೇವಾಂಶವನ್ನು ಸಂಗ್ರಹಿಸಿ, ಯಶಸ್ವಿಯಾಗಿ ಇಲ್ಲಿನ ಬಿಸಿಲ ಬೇಗೆಯನ್ನು ಎದುರಿಸಿ ಜೀವಿಸುತ್ತಿವೆ. ಈ ಜೀವಿಗಳು ಎಷ್ಟೇ ಕಠಿಣವಾಗಿದ್ದರೂ, ಅವುಗಳ ಪ್ರಪಂಚ ಬಹಳ ನಾಜೂಕೆಂದೇ ಹೇಳಬಹುದು. 1930ರ ದಶಕದಲ್ಲಿ, ಇಲ್ಲಿನ ಸೌಂಧರ್ಯವನ್ನು ಕಂಡ ಮಿನರ್ವಾ ಹೋಯ್ಟ್ (Minerva Hoyt) ಎಂಬ ಪರಿಸರವಾದಿ, ಇಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಮಾನವರಿಂದ ತಗುಲಬಹುದಾದ ಬೆದರಿಕೆಯನ್ನು ಗಮನಿಸಿ, ಅಂದಿನ ಅಮೆರಿಕೆಯ ಅಧ್ಯಕ್ಷರಾಗಿದ್ದ ಫ಼್ರಾಂಕಲೀನ್ ರೋಸವೆಲ್ಟರಿಗೆ ಬರೆದು, ಈ ಪ್ರದೇಶವನ್ನು ಜೋಷುವಾ ರಾಷ್ಟ್ರೀಯ ಉದ್ಯಾನವನವೆಂದು ಪರಿಗಣಿಸಿ, ಅದನ್ನು ಸುರಕ್ಷತೆಯ ಪ್ರದೇಶವನ್ನಾಗಿ ಘೋಷಿಸಲು ಮನವಿ ಮಾಡಿಕೊಂಡಳು. ಅದರ ಪ್ರಕಾರ 794,000 ಎಕರೆಗಳಷ್ಟು ವಿಸ್ತಾರವಾದ ಈ ಮರುಭೂಮಿಯ ಉದ್ಯಾನವನವು, ಇಲ್ಲಿನ ಪರಿಸರವನ್ನು ರಕ್ಷಿಸುತ್ತಿದೆ. ಇಲ್ಲಿ ಮೊಹಾವೆ ಮತ್ತು ಕೊಲರಾಡೋ ಮರುಭೂಮಿಗಳು ಒಟ್ಟಿಗೆ ಸೇರುತ್ತವೆ. ಭಾರಿ ಕೋಡಿನ ಕುರಿಗಳಿಂದ ಹಿಡಿದು, ಇಲಿಗಳು, ಹಲ್ಲಿಗಳು, ಅನೇಕ ವಿಧದ ಪಕ್ಷಿಗಳು, ಮರುಭೂಮಿಯ ಆಮೆ, ನರಿ, ಮೊಲ, ಬುಡುಬುಡಿಕೆ ಸರ್ಪಗಳಲ್ಲದೇ, ಅನೇಕ ಪ್ರಬೇಧದ ಕಳ್ಳಿ ಜಾತಿಯ ಗಿಡಗಳು, ತಾಳೆಯಮರಗಳು ಇಲ್ಲಿವೆ. ಆದರೆ ಎಲ್ಲಕ್ಕಿಂತ ನಮ್ಮ ಗಮನ ಸೆಳೆಯುವ ಯುಕ್ಕಾ ಮರ, (Joshua Tree) ಇಲ್ಲಿಯ ಪ್ರಮುಖ ಸಸ್ಯವಾಗಿದೆ.

DSC_0035
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೇ

ಉದ್ಯಾನವನವನ್ನು ಪ್ರವೇಶಿಸುವ ಸ್ಥಳದಲ್ಲಿ, ಟಿಕೇಟು ಖರೀದಿಸಲು ವಾಹನಗಳ ಸಾಲೇ ಇತ್ತು. ಸುತ್ತಲಿನ ಬೆಟ್ಟಗುಡ್ಡಗಳ ಸಾಲು ಸೂರ್ಯನ ಪ್ರಖರವಾದ ಬಿಸಿಲಿನಲ್ಲಿ ಕಣ್ಣುಕುಕ್ಕುವಂತಿದ್ದರೂ, ಇಲ್ಲಿನ ತಾಪಮಾನ ಕೇವಲ 3°C ಮಾತ್ರ ಎಂದು ಹೊರಗೆ ಕಾಲಿಟ್ಟಾಗ ಅನುಭವವಾಯಿತು. ಮೊದಲೇ ಈ ವಿಷಯ (ಗೂಗಲ್ ಕೃಪೆಯಿಂದ) ತಿಳಿದಿದ್ದರಿಂದ, ನಾವೆಲ್ಲಾ ಅದಕ್ಕೆ ತಕ್ಕ ಉಡುಪನ್ನು ಧರಿಸಿದ್ದೆವು. ಇಲ್ಲಿನ ಬೆಟ್ಟಗುಡ್ಡಗಳಲ್ಲಿರುವ ಚಿತ್ರವಿಚಿತ್ರವಾದ ಆಕಾರಗಳ ಕಲ್ಲುಗಳ ಬಗ್ಗೆ ಹೇಳಲೇ ಬೇಕು. ಮೊದಲಿಗೆ ಬೆಂಗಳೂರು-ಮೈಸೂರಿನ ನಡುವಿರುವ, ರಾಮನಗರ ಪಟ್ಟಣದ ಆಸುಪಾಸಿನ ಕಲ್ಲುಗಳಂತೆ ಕಂಡು ಬಂದರೂ, ಇಲ್ಲಿನ ಬಂಡೆಗಳ ವಿನ್ಯಾಸ ಇನ್ನೂ ಬಹಳ ಅಪರೂಪವಾದದ್ದು ಎಂದು ತಿಳಿಯುತ್ತದೆ. ಇದಕ್ಕೆ ಕಾರಣವೂ ಇದೆ. ನೋಡುಗರ ಕಣ್ಣಿಗೆ, ಯಾರೋ ಒಂದರ ಮೇಲೊಂದರಂತೆ ಪೇರಿಸಿಟ್ಟಂತೆ ಕಾಣುವ ಈ ಬಂಡೆಗಳು, ನಮ್ಮ ಕಲ್ಪನೆಗೂ ಮೀರಿದ ಗಾತ್ರ ಮತ್ತು ಆಕಾರಗಳಲ್ಲಿವೆ. ಭೂಗರ್ಭಶಾಸ್ತ್ರದ ಪ್ರಕಾರ, ಭೂಮಿಯೊಳಗೆ ನಡೆಯುವ ಲಾವಾ ಪ್ರವಾಹದ ಚಟುವಟಿಕೆಯ ಕಾರಣದಿಂದ, ದ್ರವರೂಪದ ಶಿಲಾದ್ರವವಾದ ಮಾನ್ಝೋ ಗ್ರಾನೈಟ್ (Monzo-granite), ಭೂಮಿಯಾಳದಿಂದ ಮೇಲೆದ್ದು, ಮೇಲಿನ ಪದರದ ಬಂಡೆಗಳ ಮೂಲಕ ಹಾಯ್ದು ಹೋಗುತ್ತದೆ. ಈ ದ್ರವರೂಪದ ಗ್ರಾನೈಟ್ ತಂಪಾಗಿ, ಹರಳಾದಾಗ, ಉದ್ದ ಹಾಗೂ ಅಡ್ಡವಾದ ಬಿರುಕುಗಳು ಉಂಟಾಗುತ್ತವೆ. ನಂತರ ಅಂತರ್ಜಲದ ಮೂಲಕ ನಡೆಯುವ ರಾಸಾಯನಿಕ ಸವೆತವು, ಅಂತಿಮವಾಗಿ ಈ ಬೃಹದಾಕಾರವಾದ ಮಾನ್ಝೋಗ್ರಾನೈಟ್ ಬಂಡೆಗಳ ರಚನೆಗೆ ಕಾರಣವಾಗಿದೆ.

ಟಿಕೀಟನ್ನು ಪಡೆದು ಉದ್ಯಾನವನದ ಒಳಗೆ ಮುನ್ನಡೆದೆವು. ಜೋಷುವಾ ಮರಗಳ ತೋಪನ್ನು ನೋಡಿ ಬೆರಗಾದೆ. ಹೀಗೂ ಉಂಟೇ? ಪ್ರಕೃತಿಯ ವೈಚಿತ್ರ್ಯಗಳಿಗೆ ಕೊನೆಯೆಲ್ಲಿದೆ? ಬುಡದಿಂದ ತುದಿಯವರೆಗೆ ಮುಳ್ಳಿನಿಂದಾವೃತವಾಗಿ, ತುದಿಯಲ್ಲಿನ ಕೊಂಬೆಗಳಲ್ಲಿ ಕಠಿಣವಾದ, ಮಂದವಾದ ಸೂಜಿಯಂತಹ ಮೊನೆಗಳ ಎಲೆಗಳ ಕಿರೀಟವನ್ನು ಹೊತ್ತ ಈ ಮರಗಳು, ಕಳೆದ ಹಲವು ತಿಂಗಳಿನಲ್ಲಿ ತಮ್ಮ ಹೂವುಗಳನ್ನು ಮೆರೆಸಿ, ಈಗ ಕೇವಲ ಒಣಗಿದ ಅವಶೇಷಗಳನ್ನು ಹೊತ್ತಿದ್ದವು. ಈ ಮರಗಳ ಬುಡದಿಂದ ತುದಿಯವರೆಗೂ, ಒಣಗಿ ನಿಂತ ಅಥವಾ ಬಿದ್ದು ಹೋದ ಎಲೆಗಳ ಅವಶೇಷಗಳನ್ನೂ ನೋಡಬಹುದು. ಇಂತಹ ಮರಗಳು ಯಾವ ಜೀವಿಗಳಿಗೆ ಆಶ್ರಯ ನೀಡಬಹುದು ಎಂದು ನಾವು ಯೋಚಿಸುತ್ತಿದ್ದಂತೆ, ಆ ಮರಗಳಲ್ಲಿ ಹಾರಾಡುತ್ತಿದ್ದ ಬಣ್ಣಬಣ್ಣದ ಹಕ್ಕಿಗಳು ನಮ್ಮ ಸಂಶಯವನ್ನು ನಿವಾರಿಸಿದವು. ಉದ್ಯಾನವನದ ಸಿಬ್ಬಂದಿವರ್ಗ ನಮಗೆ ನೀಡಿದ ಮಾಹಿತಿ ಕರಪತ್ರದಲ್ಲಿ ಮುದ್ರಿತವಾದ ಚಿತ್ರವೊಂದು ನನ್ನ ಗಮನ ಸೆಳೆಯಿತು. ಆ ಚಿತ್ರದ ಪ್ರಕಾರ, ಜೋಶುವಾ ಮರದ ಬುಡದಲ್ಲಿ ಬುಡುಬುಡುಕೆ ಸರ್ಪದಿಂದ ಹಿಡಿದು, ನೆಲದ ಅಳಿಲು, ಮರುಭೂಮಿ ಹಲ್ಲಿ, ಬೀಟಲ್ ಕೀಟ, ಮರುಭೂಮಿಯ ಇಲಿ, ಹಾಗೂ ಕರಿ ಬಾಲದ ಜಾಕ್-ಮೊಲಗಳು ಜೀವಿಸುತ್ತಿದ್ದರೆ, ಮರದ ತುದಿಯಲ್ಲಿ, ಮರಕುಟಿಗ, ಅಮೆರಿಕನ್ ಡೇಗೆ, ಗೂಬೆ, ಲಾವಕ್ಕಿ, ರೋಡ್-ರನ್ನರ್, ಸಾಮಾನ್ಯವಾಗಿ ಕಂಡುಬರುವ ಮಂಡೆ ಕಾಗೆ, ಕೆಂಪು ಪುಚ್ಛದ ಗಿಡುಗ, ಹೀಗೆ ಹಲವು ಹತ್ತು ವಿಧದ ಪಕ್ಷಿಗಳಿಗೆ ನೆಲೆಯಾಗಿರುವುದು ಕಂಡು ಬರುತ್ತದೆ.ಇದರ ಜೊತೆಗೆ ಅಲ್ಲಿರುವ ಮರುಭೂಮಿಯ ಆಮೆಯನ್ನು ಕಾಣಲು ನನ್ನ ಮನ ತವಕಿಸುತ್ತಿತ್ತು. ನೀರಿನಲ್ಲಿ, ನದಿ ಹಾಗೂ ಸಮುದ್ರಗಳ ಬಳಿಯಲ್ಲಿ ಆಮೆಗಳನ್ನು ನೋಡುವುದು ಸಾಮಾನ್ಯ. ಆದರೆ ಇಂತಹ ಒಣಹವೆಯಲ್ಲೂ ಆಮೆ ಬದುಕುತ್ತಿದೆ ಎಂದು ತಿಳಿದು ಮಹದಾಶ್ಚರ್ಯವಾಯಿತು.

DSC_0189
ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರ್ಯಾರು

ಇವು ಪ್ರಾಣಿಸಂಕುಲದ ವೈವಿಧ್ಯತೆಯಾದರೆ, ಸಸ್ಯಸಂಕುಲದಲ್ಲೂ ಅನೇಕ ಪ್ರಬೇಧಗಳು ಇಲ್ಲಿವೆ. ಜೋಷುವಾ ಮರದ ಜೊತೆಯಲ್ಲೇ ಇಲ್ಲಿ ಕಂಡು ಬರುವ ಅನೇಕ ಜಾತಿಯ ಕಳ್ಳಿಗಳು: ಚೊಲ್ಲಾ ಕ್ಯಾಕ್ಟಸ್ ಅಥವಾ ಟೆಡ್ಡಿ ಬೇರ್ ಕ್ಯಾಕ್ಟಸ್ ಎಂಬ ಸಸ್ಯದಲ್ಲಿ, ವಸಂತ ಋತುವಿನಲ್ಲಿ ಹೊಂಬಣ್ಣದ ಸುಂದರ ಪುಷ್ಪಗಳನ್ನು ಅರಳಿದಾಗ, ಅದರ ಮಕರಂದವನ್ನು ಸವಿಯಲು ನೂರಾರು ಕೊರಳ-ಝೇಂಕಾರದಹಕ್ಕಿಗಳು (Hummingbirds) ಈ ಪುಷ್ಪಗಳನ್ನು ಮುತ್ತುತ್ತವೆಯಂತೆ. ವಸಂತದಲ್ಲಿ ಇಲ್ಲಿನ ಕಳ್ಳಿ ಗಿಡಗಳಲ್ಲಿ ಅರಳುವ ಕೆಂಪು, ಹಳದಿ, ನೀಲಿ, ನೇರಳೆ, ಬಿಳಿ ಬಣ್ಣದ ಪುಷ್ಪಗಳ ಸೌಂಧರ್ಯವನ್ನು ಸವಿಯಲು, ಜನಗಳ ಜಾತ್ರೆಯೇ ನೆರೆಯುತ್ತದೆ ಎಂದು ಅಲ್ಲಿನ ಮಾರ್ಗದರ್ಶಿ ತಿಳಿಸಿದಳು. ಕಳ್ಳಿ ಗಿಡಗಳ ಪುಷ್ಪದ ಸುಂದರತೆಯನ್ನು ಕಂಡು, ಆ ಪ್ರದೇಶಕ್ಕೆ ಚೊಲ್ಲಾ ಉದ್ಯಾನವನ  Cholla Garden ಎಂದೇ ಕರೆಯುತ್ತಾರೆ. ಇವುಗಳ ಜೊತೆಗೆ ಪಿನಿಯನ್ ಪೈನ್ ಮರಗಳು, ಜ್ಯೂನಿಪರ್ ಮರಗಳು, ಪೊದೆಯ ಓಕ್ ಸಸ್ಯಗಳನ್ನು ಇಲ್ಲಿ ನೋಡಬಹುದು. ವರ್ಷಕ್ಕೆ ಒಂದು ಇಂಚಿನಂತೆ ಬೆಳೆಯುವ ಜೋಷುವಾ ಮರಗಳು, ಸುಮಾರು ೪೦ ಅಡಿಗಳಷ್ಟು ಎತ್ತರ ಬೆಳೆಯುತ್ತವೆ. ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ, ಕೆನೆ ಬಣ್ಣದ ಹೂವುಗಳು ನಳನಳಿಸಿ ಅರಳುತ್ತವೆ.

DSC_0227
ಸೊಬಗಿನಾ ಸೆರೆಮನೆಯಾಗಿಹೆ ನೀನು

ವಿಶಾಲವಾದ ಈ ಉದ್ಯಾನವನದಲ್ಲಿ, ಪ್ರವಾಸಿಗರಿಗೆ ನೋಡಲು ಸ್ಥಳಗಳು, ಹಾಗೂ ಮಾಡಲು ಅನೇಕ ಚಟುವಟಿಕೆಗಳಿವೆ. Hidden valley, Barker Dam, Key view, Oasis of Mara, Skull rock ಹೀಗೆ ಹಲವು ಹತ್ತು ಅಸಕ್ತಿಪೂರ್ಣವಾದ ಸ್ಥಳಗಳಿವೆ. ಸುಮಾರು ಒಂದರಿಂದ ಎರಡು ಮೈಲಿಗಳ ಕಾಲುಹಾದಿಯ ನಡಿಗೆಯಲ್ಲಿ, ಈ ಸ್ಥಳಗಳನ್ನು ತಲುಪಬಹುದು. ಇಲ್ಲಿನ ಅಪರೂಪವಾದ ಆಕಾರದ ಬಂಡೆಗಳನ್ನೇರುವುದು ಒಂದು ವಿಶೇಷವಾದ ಅನುಭವವೆನಿಸಿತು. ಕ್ಯಾಂಪಿಂಗ್ ಇಲ್ಲಿ ಬಹಳ ಜನಪ್ರಿಯವಾದ ಹವ್ಯಾಸವಾಗಿದ್ದು, ಬಹಳಷ್ಟು ಮಂದಿ ಕೈಗಳಲ್ಲಿ ಟೆಂಟುಗಳನ್ನು ಹೊತ್ತು ನಡೆಯುವುದನ್ನು ಕಂಡೆವು. ಮದ್ಯಾನ್ಹವಾಗುತ್ತಿದ್ದಂತೆ ಅಲ್ಲಿನ ತಾಪಮಾನ ಮತ್ತಷ್ಟು ಕಡಿಮೆಯಾಗಿ, ನಮ್ಮ ಕೈಕಾಲುಗಳು ಅದರ ಅನುಭವವನ್ನು ಪಡೆಯಲಾರಂಭಿಸಿದವು. ಹಲವಾರು ಕಡೆ ಬಂಡೆಗಳನ್ನೇರುವಾಗ, ಅದರ ಮೇಲೆ ಬೆಳೆದಿದ್ದ ಕಡು ಹಸಿರು-ಹಳದಿ ಮಿಶ್ರಿತ ವರ್ಣದ ಶಿಲಾವಲ್ಕಗಳು ಮನಸೆಳೆಯುವಂತಿದ್ದವು. ಇಲ್ಲಿರುವ ಗುಪ್ತ-ಕಣಿವೆಯಲ್ಲಿ, ವಸಂತ ಋತುವಿನಲ್ಲಿ ಕಳ್ಳಿಯ ಗಿಡಗಳ ಹೂವುಗಳು ಅರಳಿ ರಾರಾಜಿಸುವಾಗ ಅದರ ಸೌಂಧರ್ಯವನ್ನು ನೋಡಲು ಬಹಳ ಸುಂದರವಾಗಿರುತ್ತದೆ ಎಂದು ಅಲ್ಲಿ ನಮ್ಮ ಜೊತೆಯಲ್ಲಿದ್ದ ಪ್ರವಾಸಿಗರೊಬ್ಬರು ನಮ್ಮೊಡನೆ ಹೇಳಿದರು. ಮನುಷ್ಯನ ಬುರುಡೆಯಾಕಾರದ ಬಂಡೆಯನ್ನು ನೋಡುವಷ್ಟರಲ್ಲಿ, ಎಲ್ಲೆಡೆ ಕತ್ತಲಾಗಿತ್ತು. ದೂರದಿಂದಲೇ ಅದರ ಆಕೃತಿ ಕಂಡರೂ, ಬೆಳಕಿನಲ್ಲಿ ನೋಡಿದ್ದರೆ ಚೆನ್ನಾಗಿತ್ತು ಎನ್ನಿಸಿತು. ಸಂಜೆಯಾಗುತ್ತಿದ್ದಂತೆ ಉದ್ಯಾನವನದಲ್ಲಿ ಒಂದು ರೀತಿಯ ಸ್ತಬ್ಧತೆ ಆವರಿಸಿತು. ಪಕ್ಷಿಗಳೆಲ್ಲಾ ತಮ್ಮ ಕಲರವವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದವು. ಮರುಭೂಮಿಯ ಆಮೆಯನ್ನು ನೋಡುವ ನನ್ನ ಮನದಾಸೆ ನೆರವೇರಲಿಲ್ಲ. ಅಲ್ಲಿನ ಬಂಡಗಳಡಿಯಲ್ಲಿ ಬಹಳಷ್ಟು ಇಣುಕಿ ಹುಡುಕಿದರೂ, ಒಂದು ಕೂರ್ಮವೂ ಕಾಣಸಿಗಲಿಲ್ಲ.

DSC_0272
ಸಂಜೆಯು ಮೋಹನ, ಕೆಂಪಿದು ಮೋಹನ

ಸೂರ್ಯ ಪಶ್ಚಿಮದತ್ತ ಸರಿಯಲಾರಂಭಿಸಿದೊಡನೆ, ಅಲ್ಲಿದ್ದ ವಾಹನಗಳೆಲ್ಲ ಸೂರ್ಯಾಸ್ಥವನ್ನು ನೋಡಲು, ಪ್ರಸಿದ್ಧವಾದ ಕೀಸ್ ವ್ಯೂ (Keys view) ಕಡೆಗೆ ಚಲಿಸಲಾರಂಭಿಸಿದ್ದವು. ಚಳಿ ಹೆಚ್ಚಿದ್ದು ನಾವೆಲ್ಲಾ ಕಾರಿನೊಳಗೇ ಬೆಚ್ಚಗೆ ಕುಳಿತುಕೊಳ್ಳಲು ಲೆಕ್ಕಹಾಕುತ್ತಿದ್ದೆವು. ಆದರೆ ಒಮ್ಮೆ ಕೀಸ್ ವ್ಯೂ ಸ್ಥಳವನ್ನು ತಲುಪಿದೊಡನೆ, ಅಲ್ಲಿಯ ದೃಶ್ಯವನ್ನು ನೋಡಿದಾಕ್ಷಣ, ಕ್ಯಾಮೆರಾ ಹಿಡಿದು ಹೊರಕ್ಕೆ ದೌಡಾಯಿಸಿದೆ. ಸಾನ್ ಬರ್ನಾರ್ಡಿನೋ ಪರ್ವತಮಾಲೆಯಿಂದ ಸುತ್ತುವರೆದು, ಸಂಧ್ಯೆಯ ವರ್ಣದೋಕುಳಿಯಿಂದ ರಂಜಿತವಾದ ಆ ಸ್ಥಳವನ್ನು ನನ್ನ ಮನಸ್ಸಿನ ಕಣ್ಣುಗಳಲ್ಲೇ ಆದಷ್ಟು ಸೆರೆ ಹಿಡಿದೆ. ನನ್ನ ಕ್ಯಾಮೆರಾ ಸದ್ದಿಲ್ಲದೇ ಕ್ಲಿಕ್ಕಿಸಿದರೂ, ಆ ಸಂಜೆಯ ವೈಭವವನ್ನು ಸೆರೆಹಿಡಿಯುವ ಶಕ್ತಿ ಅದಕ್ಕಿರಲಿಲ್ಲ. ದೂರದಲ್ಲಿನ ಹಿಮಾವೃತ ಶೃಂಗದ ಮೇಲೆ ಪ್ರತಿಫಲಿಸಿದ್ದ ಸಂಜೆಯ ಸೂರ್ಯನ ಕಿರಣಗಳು, ಪರ್ವತದ ತುದಿಯನ್ನು ಚಿನ್ನದ ಗೋಪುರವನ್ನಾಗಿ ಪರಿವರ್ತಿಸಿತ್ತು. ಕೆಂಪು, ಹೊನ್ನವರ್ಣದ ಅನೇಕ ಛಾಯೆಗಳನ್ನು ಹೊತ್ತ ಆಗಸವನ್ನು ವರ್ಣಿಸಲು ಕವಿ-ಹೃದಯಕ್ಕಷ್ಟೇ ಸಾಧ್ಯ. ಸಂಧ್ಯೆಯ ನಸುಗತ್ತಲಲ್ಲಿ ಹೊಳೆಯುತ್ತಿದ್ದ ತಾರೆಗಳು, ಅಲ್ಲಿ ಹರಡಿದ್ದ ಜೋಶುವಾ ಮರಗಳ ನೆರಳನ್ನು ಪರ್ವತದ ಹಿನ್ನೆಲೆಯಲ್ಲಿ ಎತ್ತಿ ಹಿಡಿದಿದ್ದವು. ಚಂದ್ರ ಆಗಷ್ಟೇ ಮೂಡುತ್ತಿದ್ದ. ಕೊರೆಯುವ ಚಳಿಯೊಂದು ಇಲ್ಲದಿದ್ದರೆ, ಆ ಸೌಂಧರ್ಯವನ್ನು ಇನ್ನೂ ಅನೇಕ ಗಂಟೆಗಳ ಕಾಲ ಕುಳಿತು ಸವಿಯಬಹುದಿತ್ತೇನೋ! ಕತ್ತಲಲ್ಲಿ ನಿಖರವಾಗಿ ಕಾಣುತ್ತಿದ್ದ ತಾರಾಮಂಡಲಗಳು ಕಣ್ಣುಕೋರೈಸುವಂತಿದ್ದವು. ಸುತ್ತಮುತ್ತಾ ಯಾವ ದೊಡ್ಡ ಪಟ್ಟಣಗಳೂ ಇಲ್ಲದ ಕಾರಣ, ಬೆಳಕಿನ ಮಾಲಿನ್ಯವಿರಲಿಲ್ಲ. ಹಾಗಾಗಿ ಆಗಸದ ದೃಶ್ಯ ನಿಜಕ್ಕೂ ಮೋಹಕವೆನಿಸಿತ್ತು. ಇಡೀ ದಿನದ ಆಯಾಸವೆಲ್ಲಾ ಒಮ್ಮೆಗೇ ಪರಿಹಾರವಾದಂತೆ ಭಾಸವಾಯಿತು. ದಕ್ಷಿಣ ಭಾರತದಲ್ಲಿ ಹುಟ್ಟಿ ಬೆಳೆದ ನಮಗೆ, ಮರುಭೂಮಿಯ ಪರಿಚಯ ಕೇವಲ ಚಲನಚಿತ್ರಗಳಲ್ಲಿ ನೋಡಿ ಗೊತ್ತು. ಅದರ ಅಪರೂಪದ ಸಂಗತಿಯನ್ನು ಜೋಷುವಾ ಮರದ ಉದ್ಯಾನವನದಲ್ಲಿ ಪ್ರತ್ಯಕ್ಷವಾಗಿ ಕಾಣುವ ಅವಕಾಶ ದೊರೆಯಿತು. ಈ ಸ್ಥಳದ ನೆನಪು ನನ್ನ ಮನದಲ್ಲಿ ಬಹಳ ಕಾಲ ನಿಲ್ಲುವುದರಲ್ಲಿ ಸಂದೇಹವೇ ಇಲ್ಲ. ಪರಿಸರದಲ್ಲಿ ನಡೆಯುವ ಅಳವಡಿಕೆಯ ಅದ್ಭುತಗಳನ್ನು ಪ್ರತ್ಯಕ್ಷವಾಗಿ ಕಂಡು, ಅದರಿಂದ ಕಲಿಯಬೇಕಾದರೆ, ಜೋಶುವಾ ಮರದ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲೇ ಬೇಕು.

4 thoughts on “ಯಕ್ಕಾ ಮರ ರಾಷ್ಟ್ರೀಯ ಉದ್ಯಾನ (Joshua Tree National Park)– ಉಮಾ ವೆಂಕಟೇಶ್

 1. ಊಮ ಅವರೆ
  ಅಮೇರಿಕ ಸಂಸ್ಥಾನದಲ್ಲಿ ನಮ್ಮ ಭಾರತ ದೇಶದ ತರಹ ಭೌಗೋಳಿಕ ವೈವಿಧ್ಯತೆ ಇರುವ ಹೋಲಿಕೆಯನ್ನು ಗಮನಿಸಬಹುದು. ವ್ಯತ್ಯಾಸವೆಂದರೆ ಪ್ರಕೃತಿಯ ಬಗ್ಗೆ ಹಾಗು ಅದನ್ನು ವೀಕ್ಷಿಸಲು ಬರುವ ಪ್ರವಾಸಿಗಳ ಬಗ್ಗೆ ಅವರಿಗಿರುವ ಕಾಳಜಿ ಮತ್ತು ಸಂಪನ್ಮೂಲಗಳು ನಮಲ್ಲಿಲ್ಲ. ನಾನು ಕಳೆದ ವರ್ಷ Grand Tetons ಹಾಗು Yellow stone national park ಪ್ರವಾಸ ಕೈಗೊಂಡಾಗ ಅಲ್ಲಿ ಒದಗಿಸಿರುವ ಸೌಲಭ್ಯಗಳು ಹಾಗು ನಿರ್ಭಂಧನೆಗಳನ್ನು ಮೆಚ್ಚಿದ್ದೇನೆ. ನೀವು ವರ್ಣಿಸಿರಿವ ಜೋಷುವಾ ಮರ ಉದ್ಯಾನ ಹಿಂದೆ ನಾನು ಭೇಟಿನೀಡಿದ ಫೀನಿಕ್ಸ್ ಪ್ರದೇಶದಲ್ಲಿ ಯಕ್ಕ ಮರ ಹಾಗೂ ಮರುಭೂಮಿ ಪ್ರದೇಶವನ್ನು ನೆನಪಿಗಿ ತರುವಂತಿದೆ. ಒಣ ಬಂಜರು ಭೂಮಿಯಾದರು ಯಕ್ಕ ಮರಗಳ ಬಗೆ ಬಗೆಯ ವಿನ್ಯಾಸ ಹಾಗು ಬಂಡೆಗಳ ಕಲಾಕೃತಿಯ ತಮ್ಮ ವರ್ಣನೆ ಸೊಗಾಸಾಗಿದೆ.
  ತಾವು ಕವಿಯಿತ್ರಿಯಲ್ಲವೆಂಬುದು ನನ್ನ ಅರಿವು (ತಪ್ಪಿದಲ್ಲಿ ಕ್ಷಮಿಸಿ) ಯಕ್ಕ ಉದ್ಯಾನದಲ್ಲಿನ ಸೂರ್ಯಾಸ್ತದ ಬಗ್ಗೆ ನಿಮ್ಮಿಂದ ಒಂದು ಕವಿತೆಯನ್ನು ನಿರೀಕ್ಷಿಸಬಹುದಿತ್ತು. ಸಸ್ಯಶಾಸ್ತ್ರ ತಜ್ಞರಾದ ತಾವು ಯಕ್ಕ ಮರದ ಸಸ್ಯಶಾಸ್ತ್ರದ ವಿವರಣೆಯ ಗೋಜಿಗೆ ಹೋಗದೆ ಅಲ್ಲಿನ ಸೌಂದರ್ಯ ವರ್ಣನೆಗೆ ತೊಡಗಿಕೊಂಡದ್ದು ನಮಗೆ ಒಂದುರೀತಿ ಸಮಾಧಾನಕರವಾದ ಸಂಗತಿ!

  ನಿಮ್ಮ ಬರವಣಿಗೆಯ ಭಾಷೆ ಮತ್ತು ವರ್ಣನೆ ಉದ್ಯಾನವನದಷ್ಟೆ ವೈವಿಧ್ಯಮಯವಾಗಿ ಹಾಗು ಸುಂದರವಾಗಿದೆ ಎಂಬುದು ನನ್ನ ಅಭಿಪ್ರಾಯ. ನೀವು ಅಮೇರಿಕದಲ್ಲಿ ಗಳಿಸಿಕೊಳುತ್ತಿರುವ ಈ ಒಂದು ಅನುಭವಗಳನ್ನು ಮುಂದೆ ಒಂದು ಪ್ರವಾಸ ಕಥನ ರೂಪದಲ್ಲಿ ಅಥವ ದಿನಚರಿಯ ರೂಪದಲ್ಲಿ ಹೊರತರುವ ವಿಚಾರದ ಬಗ್ಗೆ ಅಲೊಚಿಸಬೇಕೆಂದು ಕೋರುತ್ತೇನೆ.
  ನಿಮ್ಮ ಲೇಖನದ ಚಿತ್ರಗಳಿಗೆ ಶೀರ್ಷೆಕೆಯನ್ನು ನೀಡುವಲ್ಲಿ ಸುದರ್ಶನ್ ಅವರ ಕೈವಾಡವಿರಬಹುದೆಂದು ನನ್ನ ಸಂದೆಹ. ಅದು ಯಾರೆ ಇರಲಿ ಬಹಳ ಸೂಕ್ತವಾಗಿದೆ

  Like

  • Dear Dr shivaprasad, sorry for replying in English . I am writing from my iPad. I do appreciate your very encouraging feedback and kind words. I am compiling my visit to California through these little articles. I will consider your suggestion and publish a travel diary. Just last weekend I was in Death Valley , it was mind boggling . I am going to write an article on this remarkable place. Thanks for reading my article.
   Uma

   Like

 2. ಉಮಾ ಅವರ ಸವಿಸ್ತಾರದ ಪ್ರವಾಸ ಲೇಖನ, ಸ್ಥಳ ಪರಿಚಯವನ್ನಷ್ಟೇ ಅಲ್ಲದೆ ಅಲ್ಲಿಯ flaura and faunaದ ವರ್ಣನೆಯಿಂದ ಸಸ್ಯ ಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಪಾಠವೂ ಆಗಿದೆ! ಇವೆಲ್ಲವನ್ನೂ ಒಂದರಲ್ಲೊಂದು ಹೆಣೆದು ರಸವತ್ತಾದ ಊಟವನ್ನು ಬಡಸಿದ್ದಾರೆ. ನಾನು ಕಳೆದ ಸಲ ಆಪ್ರದೇಶಕ್ಕೆ ಹೋದಾಗ ಯಕ್ಕಾ ಮರ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿಕೊಡಲಾದದ್ದಕ್ಕೆ ಹಳಹಳಿಸಿದ್ದೆ. ಇದನ್ನು ಓದಿ ಸ್ವಲ್ಪ ಸಮಾಧಾನವಾದರೂ, ಅಲ್ಲಿಯ ಸಂಜೆಯ ವರ್ಣನೆ ಆ ಅವಕಾಶ ತಪ್ಪಿದ್ದಕ್ಕೆ ಖೇದವನ್ನೂ ತಂದಿತು. ಇನ್ನೂ ಇಂಥ ಪ್ರವಾಸ ಕಥನಗಳ ಸರಕು ಅವರಲ್ಲಿರಲಿಕ್ಕೆ ಸಾಕು! ಅವನ್ನೂ ಎದುರು ನೋಡುವಾ.

  Like

  • Dear Dr Desai,
   I was in Death Valley last week. I remembered your words about its landscape. It is a remarkable place. I will write about it. Sudarshan has written very nice captions for pictures in this article. His introduction is also very nice.
   Uma

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.