ಹೊರಾಂಗಣ ಆಟ, ಆರೋಗ್ಯ ಮತ್ತು ಮಕ್ಕಳ ಹಕ್ಕುಗಳು- ವಿನತೆ ಶರ್ಮಾ ಅವರ ವೈಚಾರಿಕ ಲೇಖನ

ಹೊರಾಂಗಣ ಆಟ, ಆರೋಗ್ಯ ಮತ್ತು ಮಕ್ಕಳ ಹಕ್ಕುಗಳು. 

”ಇಂದಿಗಿಂತ ಅಂದೇನೆ ಚಂದವು

ಎಂಥಾ ಸೊಗಸು ಆ ನಮ್ಮ ಕಾಲವೂ…… ಅಂಥ ವಯಸು ಅಂಥ ಸೊಗಸೂ….

ಬಾರದು ಬಯಸಲೂ… ದೊರಕದು ಬೇಡಲೂ …”

ಅಂತ ಹಾಡಿಕೊಳ್ತಾ ಇದೀರಾ? ಕಾಲ ಕೆಟ್ಟೋಯ್ತು ಅಂತ ಅನ್ನಿಸ್ತಾ ಇದೀಯಾ? ತಪ್ಪೇನಿಲ್ಲ. ಎಲ್ಲರಿಗೂ ಹಾಗೇ ಅನ್ನಿಸುವುದು!!  ಯಾಕೆ ಅಂತ ಕೇಳ್ಕೊಂಡಿದೀರಾ?

‘ಕೆಡುತ್ತಲೇ ಸಾಗುವುದು ಕಾಲನ ಗುಣಧರ್ಮ’ ಅಂತ ಭಾಗವತದಲ್ಲಿ ವೇದವ್ಯಾಸರು ಹೇಳಿದ್ದಾರೆ. ಪುರಾಣ ಬೇಡ ಅಂದ್ರೆ , ವಿಜ್ಞಾನವಲ್ಲದ ವೈಜ್ಞಾನಿಕ ಶಾಖೆಯಾದ ಸಮಾಜ ವಿಜ್ಞಾನದ ಪ್ರಭೃತಿಗಳು ಇದು entropy (ಜಡೋಷ್ಣ) ಅನ್ನುವ  ಭೌತಿಕ ಪ್ರಕ್ರಿಯೆಯ ಪರಿಣಾಮ- ತನ್ನ ಸುತ್ತಲಿನ ಪರಿಸರದಿಂದ ಪ್ರತ್ಯೇಕವಾಗಿ ಉಳಿದ ವ್ಯವಸ್ಥೆ ಕಾಲಕ್ರಮೇಣ ಸುವ್ಯವಸ್ಥೆಯಿಂದ ( from a state of order )  ಅವ್ಯವಸ್ಥೆಯ (disorder and chaos) ಕಡೆಗೆ  ಕ್ರಮೇಣ  ಜಾರುವುದೆಂದು ಅಪ್ಪಣೆ ಕೊಡಿಸುತ್ತಾರೆ. ಇದರ ಸತ್ಯಾಸತ್ಯತೆಗಳೇನೇ ಇದ್ದರೂ, ಅದರ ಪರಿಣಾಮಗಳಿಗೆ ನಾವು, ನಮ್ಮ ಮಕ್ಕಳು ಹಾಗೂ ಸಮಾಜ ಬಾಧ್ಯಸ್ಥರಾಗುವುದರಿಂದ ಅರಿವಿನಿಂದ ಬದಲಾವಣೆಯ ಹರಿಕಾರರಾಗುವ ಕಡೆಗೆ ಕಾರ್ಯಪ್ರವೃತ್ತರಾಗಲು ವಿನತೆಯವರ ಈ ವೈಚಾರಿಕ ಲೇಖನ ಓದಿ.

—————————-**************—————————–

ಹೊರಾಂಗಣ ಆಟ, ಆರೋಗ್ಯ ಮತ್ತು ಮಕ್ಕಳ ಹಕ್ಕುಗಳು. 

ಹೊರಾಂಗಣ ಆಟ, ಆರೋಗ್ಯ ಮತ್ತು ಮಕ್ಕಳ ಹಕ್ಕುಗಳು
ಕ್ರಿಸ್ಮಸ್ ರಜೆಯ ನಂತರ ಹೋದ ವಾರ ಶಾಲೆಗಳು ಮತ್ತೆ ಆರಂಭವಾದವು. ಕ್ರಿಸ್ಮಸ್ ರಜೆಯಲ್ಲಿ ಎಲ್ಲರೂ ತಂತಮ್ಮ ಕುಟುಂಬದೊಡನೆ ತುಂಬಾ ತೊಡಗಿಕೊಂಡಿದ್ದು, ನಮ್ಮ ಮಕ್ಕಳು ಸ್ನೇಹಿತರೊಡನೆ ಆಟವಾಡಿ ಬಹಳ ದಿನಗಳಾಗಿತ್ತು. ಸರಿ, ಶಾಲೆಯ ಬಳಿಯ ಪಾರ್ಕ್ ಗೆ ಹೋಗೋಣ, ಅಲ್ಲಿ ನಮ್ಮ ಸ್ನೇಹಿತರಿರುತ್ತಾರೆ, ನಾವು ಆಟವಾಡಬಹುದು ಎಂಬ ಗೊಣಗಾಟ, ಪಿರಿಪಿರಿ, ಹಠ ಎಲ್ಲವೂ ಶುರುವಾಯಿತು. ನಾನು ಕೂಡ ಒಪ್ಪಿಕೊಂಡು ಇಬ್ಬರನ್ನು ಪಾರ್ಕ್ ಗೆ ಕರೆದುಕೊಂಡು ಹೋದೆ. ಎಲಾ, ಎಲಾ – ಮಕ್ಕಳು, ದೊಡ್ಡವರು – ಒಂದು ನರಪಿಳ್ಳೆಯೂ ಕಾಣಲಿಲ್ಲ. ನಮಗಂತೂ ಆಘಾತ, ನಿರಾಸೆ. ಚಿಕ್ಕ ಮಗನಂತೂ ಅಳುವುದಕ್ಕೇ ಶುರು ಮಾಡಿದ. ಚಳಿಗಾಲ ಕಣಪ್ಪಾ, ಅದಕ್ಕೇ ಯಾರೂ ಹೊರಬಂದು ಈ ಚಳಿಯಲ್ಲಿ ಆಟವಾಡುವ ಸಾಹಸ ಮಾಡುತ್ತಿಲ್ಲ ಎಂದು ನಾನು ಸಮಾಧಾನ ಮಾಡಲು ನೋಡಿದೆ. ಉಹುಂ, ಇಬ್ಬರೂ ನನ್ನ ವಾದವನ್ನು ಒಪ್ಪಲಿಲ್ಲವೇ! ಚಳಿಯಾದರೇನು, ನಾವಿಬ್ಬರು ಆಟವಾಡಲು ಹೊರಬಂದಿಲ್ಲವಾ, ಹಾಗೆ ನೋಡಿದರೆ ನಾವಿಬ್ಬರು ಹುಟ್ಟಿದ್ದು ಬೆಳೆದಿದ್ದು ಆಸ್ಟ್ರೇಲಿಯಾದ ಬಿಸಿ ವಾತಾವರಣದಲ್ಲಿ. ಈ ಚಳಿದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಏನಾಗಿದೆ, ಎಲ್ಲರೂ ಮನೆಯೊಳಗಡೆ ಸೇರಿಕೊಂಡು ಇಲೆಕ್ಟ್ರಾನಿಕ್ ಪರದೆಯ (electronic screen) ಜೊತೆ ಮುಳುಗಿರುತ್ತಾರೆ, ಎಂದು ಮಕ್ಕಳಿಬ್ಬರು ವಾದಕ್ಕೆ ಇಳಿದಾಗ ನಾನು ಯೋಚನೆಗೀಡಾದೆ. ಸರಿ, ಆ ಪಾರ್ಕ್ ಬಿಟ್ಟು, ಮತ್ತೊಂದು, ಮಗದೊಂದು ಎಂದುಕೊಂಡು ಸುತ್ತುತ್ತಾ, ಕಡೆಗೆ ಪರಿಚಯವಿದ್ದ ದೊಡ್ಡ ಪಾರ್ಕ್ ಗೆ ಹೋದರೆ ಅಲ್ಲೂ ಕೂಡ ಒಂದೂ ಮಗುವೂ ಇಲ್ಲ. ಕಡೆಗೆ ಕಾರ್ ನಲ್ಲಿದ್ದ ಫುಟ್ ಬಾಲ್ ತೆಗೆದುಕೊಂಡು ನಾನು ನನ್ನಿಬ್ಬರು ಮಕ್ಕಳು ಆಡಿದೆವು.

July 2013 384

ನನ್ನ ಮಕ್ಕಳು ಶಾಲೆ ಬಿಟ್ಟ ನಂತರ ಹೊರಗಡೆ ಆಟವಾಡಲು ಸದಾ ಎದುರು ನೋಡುತ್ತಾರೆ. ಹೊರಗಡೆ ಆಟವಾಡುವುದನ್ನು ನಾವು ತಂದೆತಾಯಿಗಳು ಕೂಡ ಪ್ರೋತ್ಸಾಹಿಸುತ್ತೀವಿ. ವಾರಾಂತ್ಯದಲ್ಲಿ ಮಾತ್ರ ಅವರಿಗೆ ಇಲೆಕ್ಟ್ರಾನಿಕ್ ಪರದೆಯನ್ನು ಬಳಸಿ ಆಟವಾಡಲು ಅನುಮತಿ ಇದೆ. ಅದನ್ನು ಅವರೂ ಒಪ್ಪಿಕೊಂಡಿದ್ದಾರೆ. ಅತೀ ಸಮಯ ಇಲೆಕ್ಟ್ರಾನಿಕ್ ವಸ್ತುಗಳ ಜೊತೆ, ಕಂಪ್ಯೂಟರ್ ಆಟಗಳ ಜೊತೆ ಕಳೆದರೆ ಈಗ ಮತ್ತು ಮುಂದೆ ಉಂಟಾಗುವ ಪರಿಣಾಮಗಳನ್ನು ಅವರಿಗೆ ನಾವು ಆಗಾಗ ಮನದಟ್ಟು ಮಾಡಿ, ಇಬ್ಬರ ಜೊತೆಯಲ್ಲೂ ಆ ಬಗ್ಗೆ ಸಾಕಷ್ಟು ಸಂವಾದವನ್ನೂ ನಡೆಸುತ್ತೀವಿ. ಅತೀವ “ಸ್ಕ್ರೀನ್ ಟೈಮ್” (ಇಲೆಕ್ಟ್ರಾನಿಕ್ ಪರದೆ ಸಮಯ) ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟು ಮಾಡುವ ಹಾನಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ನಮ್ಮ ಮನೆಯಲ್ಲಿ ಎಲ್ಲರಿಗೂ ಆಸಕ್ತಿಯಿರುವುದು ಒಂದು ರೀತಿಯಲ್ಲಿ ನಮ್ಮ ಭಾಗ್ಯ. ಈ ವಿಷಯವಾಗಿ ನಾನು ಮತ್ತು ನನ್ನ ಪತಿ ಸಂಶೋಧನೆ ಮಾಡುತ್ತಿರುವುದೂ ಒಂದು ಕಾರಣ.

ಈ ಲೇಖನ ಬರೆಯಲು ನಾನೂ ಕೂಡ ಕಂಪ್ಯೂಟರ್ ಸಹಾಯವನ್ನೇ ಪಡೆದಿದ್ದೀನಿ, ಹೌದು. ನಮ್ಮ ದೈನಂದಿಕ ಕೆಲಸದ ಆಚೆಗೆ ನಾವು ಈ ಇಲೆಕ್ಟ್ರಾನಿಕ್ ಸ್ಕ್ರೀನ್ ಟೈಮ್ ಅನ್ನು ಕಡಿತ ಮಾಡಿದರೆ ಅದೊಂದು ಸಾಧನೆಯೇ ಹೌದು ಎನ್ನುವ ಸಮಾಜದಲ್ಲಿ ನಾವಿದ್ದೇವೆ. ಆದರೆ, ಹಾಗೆ ಸ್ಕ್ರೀನ್ ಟೈಮ್ ಅನ್ನು ಕಡಿತ ಮಾಡುವುದು ಅಷ್ಟೊಂದು ಕಷ್ಟವಲ್ಲ ಅನ್ನುವುದು ಕೂಡ ಅಷ್ಟೇ ನಿಜ.
ನಮ್ಮ ಮಕ್ಕಳು ಹೇಳುವಂತೆ ಅವರ ಸುಮಾರು ಸ್ನೇಹಿತರು ನಾನಾ ರೀತಿಯ “ಸ್ಕ್ರೀನ್” ಪರಿಕರಗಳನ್ನು, ಯಂತ್ರಗಳನ್ನು, ಗ್ಯಾಜೆಟ್ ಗಳನ್ನು ಪ್ರತಿದಿನ ಬಳಸುತ್ತಾರೆ. ಅದು ಮೊಬೈಲ್ ಫೋನ್, ಕಂಪ್ಯೂಟರ್ ಆಟಗಳು, iPad, Wii, ಎಕ್ಸ್ ಬಾಕ್ಸ್ – ಏನೇ ಆಗಿರಬಹುದು. ಮಕ್ಕಳು ಆ ವಸ್ತುಗಳ, ಯಂತ್ರಗಳ ಜೊತೆ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದಾರೆ, ಅದೇ ಕಾರಣವಾಗಿ ಅವರು ಮನೆ ಹೊರಗಡೆ, ಪ್ರಕೃತಿಯೊಡನೆ, ಹೊರಾಂಗಣದಲ್ಲಿ ಇರುವುದು ಕಡಿಮೆಯಾಗುತ್ತಿದೆ, ಇದರಿಂದ ನಾನಾ ರೀತಿಯ ಕೆಟ್ಟ ಪರಿಣಾಮಗಳು ಆಗುತ್ತಿವೆ ಎನ್ನುವುದು ಈಗ ಬಹಳ ಗಂಭೀರವಾದ ಸಂಶೋಧನಾ ವಿಷಯಗಳಾಗಿವೆ. ಶುಭ್ರ ಗಾಳಿಯನ್ನು ಉಸಿರಾಡಿ, ದೇಹಕ್ಕೆ ಮತ್ತು ಮನಸ್ಸಿಗೆ ಬೇಕಾಗುವಷ್ಟು ಆರೈಕೆ, ವ್ಯಾಯಾಮ ಮತ್ತು ಉಲ್ಲಾಸವನ್ನು ಪಡೆಯುವುದರಿಂದ ಎಷ್ಟು ಲಾಭವಿದೆ ಎಂದು ಈಗ ಶಾಲೆಗಳಲ್ಲಿ, ವಿಶ್ವ ವಿದ್ಯಾನಿಲಯಗಳಲ್ಲಿ ಚರ್ಚೆಗಳಾಗುತ್ತಿವೆ.

ನಾನು ನೋಡಿದಂತೆ ಈ ಸಮಸ್ಯೆ ಚಳಿ ದೇಶದ್ದಷ್ಟೇ ಅಲ್ಲ. ನಾವು ಕಳೆದ ಆಗಸ್ಟ್ ತಿಂಗಳಲ್ಲಿ ಇಂಗ್ಲೆಂಡಿಗೆ ಬರುವ ಮುಂಚೆ ಇದ್ದ ಆಸ್ಟ್ರೇಲಿಯಾ ದೇಶದಲ್ಲೂ ಕೂಡ ಮಕ್ಕಳು ಶಾಲೆಯ ನಂತರ ಹೊರಾಂಗಣ ಆಟಗಳಲ್ಲಿ ತೊಡಗುವುದು ಬರುಬರುತ್ತಾ ಕಡಿಮೆಯಾಗಿತ್ತು. ತಂದೆ ತಾಯಿಯರು ತಮ್ಮ ಮಕ್ಕಳನ್ನು ಒಂದು ಸಂಜೆ ಈಜು, ಇನ್ನೊಂದು ಸಂಜೆ ಫುಟ್ ಬಾಲ್ – ಹೀಗೆ ಚೌಕಟ್ಟಿನ ಚಟುವಟಿಕೆಗಳಿಗೆ (structured activities) ಸೇರಿಸುವುದು ಸಾಮಾನ್ಯವಾಗಿತ್ತು. ನಾನು “ಬೀದಿಗೊಂದು ಹೊರಾಂಗಣ ಆಟಗಳ ಸಂಘ” ವನ್ನು ರಚಿಸೋಣ, ನಮ್ಮ ನಮ್ಮ ಬೀದಿಯ ಎಲ್ಲಾ ಮಕ್ಕಳು ಒಟ್ಟಾಗಿ ಸೇರಿ ಹೊರಾಂಗಣ ಆಟಗಳನ್ನು ಕಲಿಯಬಹುದು; ಹಾಗೆ ಬೇರೆ ಬೇರೆ ದೇಶಗಳ, ಸಂಸ್ಕೃತಿಗಳ, ಸಮಾಜಗಳ ಆಟಗಳನ್ನು ಕೂಡ ನಾವು ಕಲಿಯಬಹುದು ಎಂದು ಕೆಲ ತಂದೆ ತಾಯಿಯರ ಜೊತೆ ಹೇಳಿದಾಗ ಹಲವಾರು ವಿಷಯಗಳು ಹೊರಬಿದ್ದವು.

ಒಂದು, ಮಕ್ಕಳು ಮುಕ್ತವಾಗಿ ಆಟವಾಡಲು (Free Play) ನಮ್ಮ ಬೀದಿಗಳು ಸೂಕ್ತ ಸ್ಥಳಗಳಲ್ಲ. ವಾಹನಗಳ ಭಯ. ಸಮೀಪವಿರುವ ಪಾರ್ಕ್ ನಲ್ಲಿ ಆಡಬಹುದು. ಆದರೆ, ಪ್ರತಿ ದಿನವೂ ಇಲ್ಲಿಗೆ ಅವರವರ ಮಕ್ಕಳನ್ನು ಕರೆದುಕೊಂಡು ಬರಲು, ಅಲ್ಲೇ ಎರಡು ಘಂಟೆಗಳ ಕಾಲ ಇರುವುದು ಕುಟುಂಬದ ದೊಡ್ಡವರಿಗೆ ಕಷ್ಟ, ಏಕೆಂದೆರೆ ಮಧ್ಯಾನ್ಹ ನಾಲ್ಕು ಘಂಟೆಯ ನಂತರ ಸಂಜೆ ಊಟದ ತಯ್ಯಾರಿ ಆಗಬೇಕು – ಮಕ್ಕಳು ಸಾಮಾನ್ಯ ಐದುವರೆಗೆ ಅಥವಾ ಆರು ಘಂಟೆಗೆ ಊಟ ಮಾಡುತ್ತಾರೆ. ಇನ್ನು ತಮ್ಮ ಮಕ್ಕಳನ್ನ ಇತರರ ಗಮನದಲ್ಲಿ ಬಿಟ್ಟು ಬಿಡಲು ತುಂಬಾ ಜನರಿಗೆ ಒಪ್ಪಿಗೆಯಿಲ್ಲ – ಕಾರಣ ಮಕ್ಕಳ ಹಿತರಕ್ಷಣೆ ಮತ್ತು ಅವರ ಕಾಪಾಡುವಿಕೆ ವಿಷಯಗಳಲ್ಲಿ ಇರುವ ಭಿನ್ನಾಭಿಪ್ರಾಯಗಳು. ಎಲ್ಲರಿಗೂ ಭಯವಿರುವುದು ಇತರರನ್ನು ಹೇಗೆ ಮತ್ತು ಎಷ್ಟು ಮಟ್ಟಿಗೆ ನಂಬುವುದು? ನಂಬಿದ ವ್ಯಕ್ತಿ ನಮ್ಮ ಮಕ್ಕಳ-ಸ್ನೇಹಿ (child-friendly) ಎಂದು ಹೇಗೆ ಹೇಳುವುದು, ಅವರು ಮಕ್ಕಳ-ಕಂಟಕ (child-abuser) ಎಂದು ಹೇಗೆ ರುಜು ಮಾಡುವುದು? ನಮ್ಮ ಮಕ್ಕಳನ್ನು ಇತರರ ಮಕ್ಕಳಿಗೆ ಬೇರೆಯಾಗಿ ನೋಡುವುದು, ಗದರುವುದು, ಅವರಿಗೆ ಇವರಿಗೆ ಬೇರೆ ಬೇರೆ ರೂಲ್ಸ್ , ಅವರ ಮಕ್ಕಳು ನಮ್ಮ ಮಕ್ಕಳ ಮೇಲೆ ಜೋರು ಮಾಡಿ, ಕಾಟ ಕೊಡುವುದಿಲ್ಲ ಎಂದು ಏನು ಗ್ಯಾರಂಟಿ?

ಕಳೆದ ಜನವರಿಯಲ್ಲಿ ಇದೆ ಸಂಕ್ರಾಂತಿ ಸಮಯದಲ್ಲಿ ನಾನು ಬೆಂಗಳೂರಿನಲ್ಲಿ ನನ್ನ ಸ್ನೇಹಿತರೊಡನೆ ಮಾತನಾಡುತ್ತಿದ್ದಾಗ ಕೂಡ ಮೇಲಿನ ಕೆಲ ವಿಷಯಗಳು ಚರ್ಚೆಗೆ ಬಂದವು. ಬೆಂಗಳೂರಿನಲ್ಲಿ ಹೊರಾಂಗಣ ಆಟವಾಡಲು ನನ್ನ ಮಕ್ಕಳು ಹೊರಟಾಗ ನಮಗೆ ಉಂಟಾದ ಮೊದಲ ಸಮಸ್ಯೆ ಆಟದ ಮೈದಾನ ಎಲ್ಲಿ, ಹೇಗಿದೆ ಎನ್ನುವುದು. ಬೆಂಗಳೂರಿನಲ್ಲಿ ಮಕ್ಕಳ ಆಟದ ಮೈದಾನಗಳು ಈಗ ನಾನಾ ರೀತಿಯಲ್ಲಿ ಬಳಸಿಕೊಳ್ಳಲ್ಪಡುವ ಕೊಂಪೆಗಳಾಗಿವೆ. ಇರುವ ಚಿಕ್ಕ ಚಿಕ್ಕ ಪಾರ್ಕ್ ಗಳು ದೊಡ್ಡವರ ಚಟುವಟಿಕೆಗಳಿಗೆ, ಅವರ ದೈನಂದಿನ ನಡಿಗೆ, ವ್ಯಾಯಾಮಕ್ಕೆ, ಮೀಟಿಂಗ್ ಗಳಿಗೆ, ಹುಡುಗ-ಹುಡುಗಿಯ ಪ್ರೇಮ ತಾಣ – ಹೀಗೆ ಏನೇನಕ್ಕೂ ಮಾರ್ಪಾಡಾಗಿವೆ. ಮಕ್ಕಳು ಆಟವಾಡುತ್ತಿದ್ದಾರೆ ಎಂದರೆ ಅವರ ಕುಟುಂಬದ ದೊಡ್ಡವರು ಬಹಳಾ ಜಾಗರೂಕತೆಯಿಂದ ಎಚ್ಚರ ವಹಿಸಬೇಕಾಗಿದೆ, ಕಾರಣ ಮಕ್ಕಳ ಅಪಹರಣಕಾರರು, ಲೈಂಗಿಕ ಅತ್ಯಾಚಾರಿಗಳು – ಯಾರನ್ನೂ ಸಹ ನಂಬುವಂತಿಲ್ಲ. ಕ್ರಿಕೆಟ್ ಬಾಲ್ ಚಿಮ್ಮಿಕೊಂಡು ಎಲ್ಲೆಲ್ಲೂ ಹೋಯಿತು, ಅದನ್ನು ತರಲು ನಮ್ಮ ಹುಡುಗ ಓಡಿದ ಎಂದರೆ ಅವನ ಜೊತೆಗೆ ನಾವೂ ಕೂಡ ಓಡಲೇ ಬೇಕು, ಅವನೊಬ್ಬನನ್ನೆ ಬಿಡಲು ಭಯ ಎನ್ನುವ ಪರಿಸ್ಥಿತಿ ಈಗ. ಹೆಣ್ಣು ಮಕ್ಕಳಂತೂ ಆಟದ ಮೈದಾನದಲ್ಲಿ ಕಾಣುವುದೇ ಇಲ್ಲ.

ನನ್ನ ಬಾಲ್ಯದಲ್ಲಿ ನಾವು ಸುಮಾರು ಹತ್ತು ಹದಿನೈದು ಜನ ಮಕ್ಕಳು ಸೇರಿ ಒಟ್ಟಿಗೆ ಆಟವಾಡುತ್ತಿದ್ದೆವು. ಬೆಂಗಳೂರಿನ ಆಚೆಕಡೆ ಪ್ರದೇಶದಲ್ಲಿ ಬೆಳೆದ ನನಗೆ ಮುಕ್ತವಾಗಿ ಹೊರಾಂಗಣ ಆಟಗಳನ್ನು ಆಡುವ ಅವಕಾಶ ಯಥೇಚ್ಚೆಯಾಗಿ ಲಭಿಸಿದ್ದು ನನ್ನ ಪುಣ್ಯ. ದೊಡ್ಡವರು ಗೊಣಗಲಿ, ಬೈಯಲಿ, ಗಮನ ಕೊಡದೆ ನಾನು ಆಟವಾಡಿದ್ದೆ ಆಡಿದ್ದು. ಆಟಗಳಲ್ಲಿ ಹೆಣ್ಣು-ಗಂಡುಮಕ್ಕಳ ಆಟಗಳು ಎಂಬ ಭೇದವನ್ನು ಯಾವತ್ತೂ ಒಪ್ಪದ ನಾನು ಎಲ್ಲಾ ತರದ ಹೊರಾಂಗಣ ಆಟಗಳನ್ನ ಆಡಿದ್ದೆ. ಜೂಟಾಟ, ಕಬ್ಬಡಿ, ಕೊಕೊ, ಮರಕೋತಿಯಾಟ, ಲಗೋರಿ, ಗಿಲ್ಲಿದಾಂಡು, ಬಚ್ಚಿಟ್ಟುಕೊಳ್ಳುವ ಆಟ, ಗೋಲಿ, ನಾಲ್ಕು ಮನೆ ಕಲ್ಲಾಟ, ಕುಂಟೆಬಿಲ್ಲೆ, ಕುಂಟಾಟ, ಏರೋಪ್ಲೇನ್ ಆಟ, ಕ್ರಿಕೆಟ್ ಮುಂತಾದ ಆಟಗಳ ಜೊತೆ ಮನಸೋಚ್ಚೆ ಮರ ಹತ್ತಿ ಹಣ್ಣುಗಳನ್ನು ತಿಂದು ಖುಷಿ ಪಟ್ಟಿರುವ ಆ ದಿನಗಳ ಬಗ್ಗೆ ನನ್ನ ಮಕ್ಕಳಿಗೆ ಹೇಳುತ್ತಿರುತ್ತೀನಿ. ಆಗ ಅನ್ನಿಸುವುದು ನನ್ನ ಮಕ್ಕಳು ಅವರ ಬಾಲ್ಯದಲ್ಲಿ ಆ ಪರಿ ಖುಷಿ ಪಡುತ್ತಿಲ್ಲವಲ್ಲ ಎಂದು.

ಹೀಗೆ ಮಕ್ಕಳ ಪ್ರಕೃತಿಯ ಮಧ್ಯೆ ಹೊರಾಂಗಣ ಆಟ, ನಿಸರ್ಗದ ಜೊತೆಯಲ್ಲಿ ಮುಕ್ತವಾಗಿ ಆಡುವ ಅವಕಾಶ, ಇದೆಲ್ಲ ಈಗ ಸಾಮಾಜಿಕ ಸಮಸ್ಯೆಯ ಜೊತೆ ತೀವ್ರತರವಾದ ಆರೋಗ್ಯ ಸಮಸ್ಯೆ ಕೂಡ ಆಗಿದೆ. ಏಕೆಂದರೆ ಹಾಗೆ ಮುಕ್ತವಾಗಿ ಮನೆಹೊರಗಡೆ ಆಡಲು ನಾನಾ ತರವಾದ ಅಡ ತಡೆಗಳು, ಇಬ್ಬಂದಿಗಳು, ಭಯಗಳು…

ಏಕೆ ಈ ಪರಿಸ್ಥಿತಿ ಉಂಟಾಗಿದೆ? ಅಮೆರಿಕೆಯ ರಿಚರ್ಡ್ ಲೂವ್ ಬರೆದ ಪುಸ್ತಕ “ಲಾಸ್ಟ್ ಚೈಲ್ಡ್ ಇನ್ ದ ವುಡ್ಸ್” ದೊಡ್ಡ ಕೋಲಾಹಲವನ್ನೇ ಎಬ್ಬಿಸಿತು. ಆತ ಹುಟ್ಟು ಹಾಕಿದ “ನೇಚರ್ ಡೆಫಿಸಿಟ್ ಡಿಸ್ಆರ್ಡರ್” (ನಿಸರ್ಗ-ರಹಿತ ಅಪರೀತಿ) ಎಂಬ ಹೊಸ ಆಲೋಚನೆ ಮಕ್ಕಳ-ಸಂಬಂಧ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲರಲ್ಲೂ ಕಳವಳವನ್ನುಂಟು ಮಾಡಿತು.
ಮೇಲಿನ ಪ್ರಶ್ನೆಗೆ ಉತ್ತರ ಹುಡುಕಲು ನಾನಾ ವಲಯಗಳಲ್ಲಿ, ಕ್ಷೇತ್ರಗಳಲ್ಲಿ (ಉದಾ. ವಿಶ್ವ ವಿದ್ಯಾನಿಲಯಗಳು, ಸರಕಾರಗಳು) ಸಾಕಷ್ಟು ವಿಶ್ಲೇಷಣೆ ನಡೆಯುತ್ತಿದೆ. ಒಂದು ವಾದ ಏನೆಂದರೆ ತಾಂತ್ರಿಕ ಕ್ಷೇತ್ರದಲ್ಲಿ ವಿಧ ವಿಧವಾದ ಬದಲಾವಣೆಗಳು ಆಗುತ್ತಿದ್ದು, ಹೊರ ಮಾರುಕಟ್ಟೆಗೆ ಬರುತ್ತಿರುವ ಯಂತ್ರಗಳು, ಗ್ಯಡ್ ಜೆಟ್ ಗಳು, ಅಂತರ್ ಜಾಲದ ಸುಲಭತೆ ಮತ್ತು ನಮ್ಮ ಜೀವನದಲ್ಲಿ ಅಂತರ್ ಜಾಲ ಹಾಸು ಹೊಕ್ಕಾಗಿರುವ ಪರಿ, ಸಾಮಾಜಿಕ ತಾಣಗಳು, ಆಟಗಳು, ಸೌಲಭ್ಯಗಳು ನಮ್ಮನ್ನು ಮುಗ್ಧ ಮಾಂತ್ರಿಕವಾಗಿಸಿವೆ. ನಮ್ಮ ನಮ್ಮ ವ್ಯಯಕ್ತಿಕ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನೇ ನಿರ್ಬಲಗೊಳಿಸಿದೆ ಎಂದು. ಹಾಗೆ ಗುಲಾಮರನ್ನಾಗಿಸಿವೆ. ಅಂತರ್ ಜಾಲವಿಲ್ಲದೆ, ಡೈರೆಕ್ಟ್ ಡೆಬಿಟ್ ಸೌಲಭ್ಯ ಇಲ್ಲದೆ ನಾವು ಬದುಕುವಂತೆಯೇ ಇಲ್ಲ ಎನ್ನುವ ಸನ್ನಿವೇಶದಲ್ಲಿ ನಾವಿಂದು ಇದ್ದೇವೆ. ಇನ್ನೊಂದು ವಾದ ಅಂತಹ ವ್ಯಜ್ಞಾನಿಕ ಸಂಶೋಧನೆ ವ್ಯಾಪಾರ ಸಂಸ್ಥೆಗಳಿಗೆ ಸಿಕ್ಕಿ ಅವರು ಇನ್ನೂ ಹೆಚ್ಚು ಹಣ ಮಾಡುವ ದೊಡ್ಡದೊಂದು ಜಾಲವೇ ಸೃಷ್ಟಿ ಆಗಿದೆ, ಇದೆ ವ್ಯಾಪಾರ ಸಂಸ್ಥೆಗಳು ಅಂತಹ ಸಂಶೋಧನೆಗಳಿಗೆ ಇನ್ನೂ ಹೆಚ್ಚು ಹೆಚ್ಚು ಹಣ ಸಹಾಯ ಮಾಡಿ ಮತ್ತೂ ಹೆಚ್ಚಿನ ತಾಂತ್ರಿಕ ಸಂಶೋಧನೆಗಳು ಬರಲಿವೆ, ಇದಕ್ಕೆ ಕೊನೆಯಿಲ್ಲ ಎಂದು. ಉದಾಹರಣೆಗೆ, ಮನೆಯೊಳಗೇ ಟಿವಿ ಮುಂದೆ ಕೂತು, ಅಥವಾ ಕಂಪ್ಯೂಟರ್ ಮುಂದೆ ಕೂತು ಕಾಲ ಕಳೆಯುವ ಜನರು ದೈಹಿಕ ವ್ಯಾಯಾಮವಿಲ್ಲದೆ ಒಬಿಸಿಟಿ, ಡಯಾಬಿಟಿಸ್ ಅಂತಹ ರೋಗಗಳಿಗೆ ತುತ್ತಾಗಿ ಅವರಿಗೆ ಮಾಡುವ ಔಷದೊಪಚಾರದ ಹಣ ಖರ್ಚು ಎಲ್ಲಾ ಸಮಾಜ ವರ್ಗದವರಿಗೂ ಬಿಸಿ ಮುಟ್ಟಿಸುತ್ತಿದೆ. ಆದರೆ ಅಂತಹ ಔಷಧ ವ್ಯಾಪಾರ ಸಂಸ್ಥೆಗಳು ಇನ್ನೂ ಬಗೆ ಬಗೆಯ ಔಷಧಗಳನ್ನು ತಂದು ಜನರಿಗೆ ಮಾರುತ್ತಿವೆ. ಸಣ್ಣ ಸಣ್ಣ ಮಕ್ಕಳಲ್ಲಿ ಇಂದು ಅನೇಕ ರೀತಿಯ ನಡವಳಿಕಾ-ಸಂಬಂಧ ಅಪ ರೀತಿಗಳು (behaviour disorders) ಉಂಟಾಗುತ್ತಿವೆ ಅಥವಾ ಅಂತಹ ನಡವಳಿಕಾ-ಸಂಬಂಧ ಅಪರೀತಿಗಳನ್ನು ಬೇಕೆಂದೇ ಉಂಟು ಮಾಡಲಾಗುತ್ತಿದೆ, ಅಂತಹ ಮಕ್ಕಳು ಸಂಬಂಧ ಪಟ್ಟ ಔಷಧಗಳನ್ನು ಖರೀದಿಸಿದರೆ ಔಷಧ ವ್ಯಾಪಾರ ಸಂಸ್ಥೆಗಳು ಇನ್ನೂ ಶ್ರಿಮಂತವಾಗುತ್ತವೆ ಎಂಬ ವಾದವೂ ಇದೆ.

ಒಂದು ಕಡೆ ಮಕ್ಕಳ ತಜ್ಞರು, ಶಿಕ್ಷಣ ಕ್ಷೇತ್ರದ ಕೆಲ ಪರಿಣಿತರು, ಆರೋಗ್ಯ ಕ್ಷೇತ್ರದವರು, ಹೊರಾಂಗಣ ಶಿಕ್ಷಣ ಸಂಸ್ಥೆಗಳು ಹೇಳುತ್ತಿದ್ದಾರೆ – ಮಕ್ಕಳು ನಿಸರ್ಗದೊಂದಿಗೆ ಕಾಲ ಕಳೆಯಬೇಕು ಇಲ್ಲವಾದರೆ ನಮ್ಮ ಸಮಾಜ ಅತ್ಯಂತ ಕೆಟ್ಟದಾಗಿ ಬೆಲೆ ತೆರಬೇಕಾಗುತ್ತದೆ. ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳು ಉಲ್ಬಣಿಸಿ ಸಮಾಜಕ್ಕೆ ಇನ್ನೂ ಪೆಟ್ಟು ಬೀಳುವುದರ ಜೊತೆಗೆ ದೇಶಗಳ ಆರ್ಥಿಕ ವಲಯ, ವಹಿವಾಟುಗಳಲ್ಲಿ ಬಹಳ ಏರಿಳಿತಗಳಾಗುತ್ತವೆ, ಇದರಿಂದ ಸಾಮಾಜಿಕ ಸ್ತರಗಳಲ್ಲಿ ಇನ್ನೂ ಹೆಚ್ಚು ತಾರತಮ್ಯಗಳಾಗುತ್ತವೆ. ಇನ್ನೊಂದು ಕಡೆ ಶಾಲೆಗಳಲ್ಲಿ “ಫಾರೆಸ್ಟ್ ಸ್ಕೂಲ್” (Forest School) ನಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸರಕಾರಗಳು “ನೇಚರ್ ಪ್ಲೇ” ನಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿವೆ. ಮತ್ತೊಂದು ಕಡೆ ದಿನೇ ದಿನೇ ಶಾಲಾ ಮಕ್ಕಳಲ್ಲಿ ಹೊಸ ಹೊಸ ಅಪ-ರೀತಿಗಳು ಕಂಡು ಬರುತ್ತಿವೆ ಎಂದು ವೈದ್ಯಕೀಯ ಜಗತ್ತು ಹೇಳುತ್ತಿದೆ. ಎಲ್ಲರೂ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಸುತ್ತುತ್ತಾ ಇರುವುದಂತೂ ನಿಜ.
ಮತ್ತೊಂದು ನಿಜವೆಂದರೆ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಘಾಸಿಯಾಗುತ್ತಿರುವುದು. ಮುಕ್ತವಾದ ಹೊರಾಂಗಣ ಆಟಕ್ಕೆ ಅವಕಾಶ ಇಲ್ಲವಾಗಿರುವುದು, ಕಡಿಮೆಯಾಗಿರುವುದು ಅಥವಾ ಅವಕಾಶ ಇದ್ದರೂ ಅಂತಹ ಮುಕ್ತ ಹೊರಾಂಗಣ ಆಟಕ್ಕೆ ಧಕ್ಕೆಯೊದಗಿಸುವ ಸಾಮಾಜಿಕ ಭಯಗಳು – ಇವೆಲ್ಲದರಿಂದ ಮಕ್ಕಳು ತಮ್ಮ ಕೆಲ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎನ್ನುವುದು ಬಹಳಾ ವಾಸ್ತವ್ಯವಾದ ಮಾತು ಮತ್ತು ಕಣ್ಣಿಗೆ ಕಾಣುತ್ತಿರುವ ನಿಜ ಸನ್ನಿವೇಶ. ಮಕ್ಕಳು ಮುಕ್ತವಾಗಿ ಹೊರಾಂಗಣದಲ್ಲಿ, ನಿಸರ್ಗದಲ್ಲಿ, ಪ್ರಕೃತಿಯ ಜೊತೆ ಆಡಲೇ ಬೇಕು. ಬೆಂಗಳೂರಿನ, ಆಸ್ಟ್ರೇಲಿಯಾದ, ಇಂಗ್ಲೆಂಡಿನ ಮಕ್ಕಳು ಆಟವಾಡಲು ಒಳ್ಳೆಯ ಆಟದ ಮೈದಾನ, ಅದರೊಂದಿಗೆ ಅವರ ಹಿತ ರಕ್ಷಣೆ ಮಾಡುವಂತಹ ಪರಿಸರ ಇರುವುದು – ಇವೆರಡು ಮಕ್ಕಳ ಹಕ್ಕುಗಳು. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಸೂಚಿತವಾಗಿರುವ ಪ್ರಕಾರ ಮಕ್ಕಳು ಆಟವಾಡಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ವಿರಬೇಕು. ಆಟಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಚೆನ್ನಾಗಿ ಆಗುತ್ತದೆ, ಅದರೊಡನೆ ಸಾಮಾಜಿಕ ಚೈತನ್ಯ, ಒಗ್ಗಟ್ಟು, ಒಮ್ಮತ, ಸಂಘರ್ಷ-ಪರಿಹಾರ ಕಲೆ, ಸಂವಹನ ಕಲೆ – ಹೀಗೆ ಇನ್ನೂ ಎಷ್ಟೋ ಥರದ ಲಾಭಗಳಿವೆ. ಖುಷಿಯಿಂದ, ತೃಪ್ತಿಯಾಗಿ ಆಡಿ, ಮೈಗೆ, ಮನಸ್ಸಿಗೆ ಕಸರೊತ್ತು ಕೊಟ್ಟು, ಜೋರಾಗಿ ಉಸಿರಾಡುತ್ತಾ, ಬೆವರುತ್ತಾ ನಗುಮುಖದಿಂದ ಬರುವ ನನ್ನ ಮಕ್ಕಳನ್ನು ನೋಡಿದಾಗ ನನ್ನ ಬಾಲ್ಯದ ನೆನಪು ಬರುತ್ತದೆ.

ಹೊರಾಂಗಣ ಆಟಗಳಿಂದ ಮಕ್ಕಳು ವಂಚಿತರಾಗದಂತೆ ಕಾಪಾಡುವ ಜವಾಬ್ದಾರಿ ಎಷ್ಟು ಸರ್ಕಾರದ್ದೋ ಅಷ್ಟೇ ಸಮಾಜದ್ದೂ ಕೂಡ. ನಾವೆಲ್ಲರೂ ನಮ್ಮ ಮಕ್ಕಳು ಮನೆ ಹೊರಗಡೆ, ಹೊರಾಂಗಣ ಪ್ರದೇಶದಲ್ಲಿ ನಿರ್ಭಯವಾಗಿ, ಹರ್ಷದಿಂದ ಆಟವಾಡುವಂತೆ ಆದಕ್ಕೆ ಬೇಕಿರುವ ಪರಿಸರವನ್ನು ನಿರ್ಮಿಸ ಬೇಕು, ಕಾಪಾಡಬೇಕು, ಪ್ರೋತ್ಸಾಹಿಸಬೇಕು. ಇದು ನಮ್ಮೆಲ್ಲರ ಸಾಮಾಜಿಕ ಪ್ರಜ್ಞೆ, ಕರ್ತವ್ಯ ಮತ್ತು ಜವಾಬ್ದಾರಿ. ನಮ್ಮ ಮಕ್ಕಳು ನಾಳಿನ ಪ್ರಜೆಗಳಲ್ಲ ನೋಡಿ, ಅವರು ಇಂದಿನ ಪ್ರಜೆಗಳು.
ವಿನತೆ ಶರ್ಮ

———————-***********——————————-

ಹತ್ತೊಂಭತ್ತನೆಯ ಶತಮಾನ ಕಂಡ ಅಪರೂಪದ ಹಲವಾರು ಗಣಿತಜ್ನರಲ್ಲಿ ಒಬ್ಬನಾದ ಹೆನ್ರಿ ಪಾಯಿಂಕೇರ್ ಈ ಕೆಳಗಿನಂತೆ ನುಡಿದಿದ್ದಾನೆ.

”If nature were not beautiful, it would not be worth knowing, and if nature were not worth knowing, life would not be worth living.”- Henri Poincare

ಮುಂದಿನದನ್ನು ಹೇಳುವ ಗೋಜೇನೂ ಇಲ್ಲ ತಾನೇ?

10 thoughts on “ಹೊರಾಂಗಣ ಆಟ, ಆರೋಗ್ಯ ಮತ್ತು ಮಕ್ಕಳ ಹಕ್ಕುಗಳು- ವಿನತೆ ಶರ್ಮಾ ಅವರ ವೈಚಾರಿಕ ಲೇಖನ

 1. ವಿನತೆಯವರೆ
  ಸಮಯದ ಒತ್ತಡದಿಂದ ಈ ಹಿಂದೆ ನಾನು ಪ್ರತಿಕ್ರಿಯೆ ವ್ಯಕ್ತಪಡಿಸಲಾಗಲ್ಲಿಲ್ಲ
  ಮಕ್ಕಳ ತಜ್ಞನಾದ ನಾನು ನಿಮ್ಮ ವಿಚಾರಧಾರೆಯನ್ನು ಸಂಪೂರ್ಣವಾಗಿ ಅನುಮೊದಿಸುತ್ತೇನೆ. ನಾನು ನೋಡುವ ADHD, Behavioral disorders obesity ಹೀಗೆ ಹಲವಾರು ಮಕ್ಕಳ ತೊಂದರೆಗಳಿಗೆ ಹೊರಾಂಗಣ ಆಟ ಹಾಗು ವ್ಯಾಯಾಮದ ಕೊರತೆ ಕಾರಣವಾಗಿರಬಹುದು. ಇದರ ಜೊತೆಗೆ ಇತರ ಸಾಮಾಜಿಕ ಪಿಡುಗುಗಳು ಮಕ್ಕಳ ಮನೊವಿಕಾಸಕ್ಕೆ ಧಕ್ಕೆ ತರುವ ವಿಚಾರಗಳಾಗಿವೆ. ಮಕ್ಕಳಲ್ಲಿ ಸಹಜವಾಗಿ ಅಡಗಿರುವ ಆ ಚೈತನ್ಯ, ಶಕ್ತಿ ಮತ್ತು ಹುಮ್ಮಸ್ಸು ಇವುಗಳನ್ನು ಹೊರಹಾಕಲು ಹೊರಂಗಣ ಆಟ ಬಹಳ ಅತ್ಯಗತ್ಯ. ಆದು ದೊರಕದಿದ್ದಲ್ಲಿ ಉಂಟಾಗುವ ಪರಿಣಾಮಗಳೆ ನಮ್ಮ ನಾಗರಿಕತೆಯ ಖಾಯಿಲೆಗಳು. As practicing paediatrician I do strongly recommend exercise and outdoor activities to families.
  I live in Sheffield, a sporty city which has produced people like Jessica Innis and to end this on a positive note the parks and play ground in Sheffield is full of kids over the weekend, whatever the weather.

  Like

 2. ಈ ವರೆಗೆ ಬಂದ ಪ್ರತಿಕ್ರಿಯೆಗಳೇ ಸಾಕ್ಷಿ ಈ ಲೇಖನ ಎಷ್ಟು ವಿಚಾರಪೂರ್ಣವಷ್ಟೇ ಅಲ್ಲ ವಿಚಾರ ಪ್ರಚೋದಕವೂ ಉಂಟು ಎಂದು. ವಿನತೆಯವರಿಗೆ ಧನ್ಯವಾದಗಳು. ಸಹಜ ಸ್ವಚ್ಛಂದ ಬಾಲ್ಯದ ದಿನಗಳನ್ನು ಕಳೆದ ನಮ್ಮಂಥ ಹಿರಿಯರಿಗೆ ಮುಂದಿನ ಪೀಳಿಗೆಗೆ ಅದು ಲಭ್ಯವಾಗಲಿಕ್ಕೆಲ್ಲ ಎಂಬ ಸಂಕಟವೇ ಈಗಿನ ಚಿಂತಕರು ಬಗೆಹರಿಸುವ ಪ್ರಯತ್ನದಲ್ಲಿದ್ದಾರೆ. ನಮ್ಮ ಮೇಲೆ ಇಂದಿನ ಮಕ್ಕಳ ಬೆಳವಣಿಗೆಯ ಬಗ್ಗೆ ಹೆಚ್ಚು ಹೊಣೆ ಬಿದ್ದಿದೆ. ಹಳೆಯದು-ಈಗಿನದು, (ಒಳ್ಳೆಯಕಾಲ-ಕೆಟ್ಟಕಾಲ ಎಂದು ಕೆಲವರು ತಿಳಿದರೆ ಸ್ವಾಭಾವಿಕ) ಎಂದು ಇಂದಿನ ವಾತಾವರಣದಲ್ಲಿ ಬೆಳೆಯುತ್ತಿರುವ ಮುಂದಿನ ಪೀಳಿಗೆ ಅಷ್ಟೊಂದು ಹೋಲಿಸಲಿಕ್ಕಿಲ್ಲ. ನಮ್ಮ ಮೊಮ್ಮಕ್ಕಳ ಜೀವನವನ್ನು ನೋಡುವಾಗಲಷ್ಟೇ (ಆ ಸುದೈವ ದೊರಕಿದಾಗ!) ನಾವೆಷ್ಟು ಸಫಲರಗಿದ್ದೇವೆಂದು ಗೊತ್ತಾಗುವದು.
  ನಮ್ಮ ವೇದಿಕೆಗೊಂದು ಹೊಸ ಆಯಾಮ. ಬರೆದ, ಭಾಗವಹಿಸಿದ ಎಲ್ಲರಿಗೂ ಭೇಷ್ ಅನ್ನೋಣ. ಇಂಥವಕ್ಕೆ ಯಾವಾಗಲೂ ಸ್ವಾಗತ.

  Like

 3. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಅನ್ನಪೂರ್ಣಾ ಅವರು ಸವಿಸ್ತಾರವಾದ ಅನುಭವಗಳನ್ನು ಹಂಚಿಕೊಂಡು ಈ ಲೇಖನದ ಪರಿಪೂರ್ಣತೆ ಹೆಚ್ಚಿಸಿದ್ದು ಸೂಕ್ತವಾಗಿದೆ. ನಾನು ಬೆಳೆದದ್ದು ಬಹುತೇಕ ಹಌಯಾದರೂ, ಬೆಂಗಳೂರಿಗೆ ಬಂದಾಗ ನನ್ನ ಸೋದರಮಾವನ ಮಕ್ಕಳ ಜೊತೆಗೆ ಮೇರೆ ಇರದೇ ಕಾಲು ಬಂದಂತೆಲ್ಲಾ ಅಳೆಯಲು ಹೋಗುತ್ತಿದ್ದೆ. ನಮಗೆ ಅಗಾ ಯಾವ ರೀತಿಯ ಆತಂಕಗಳು ಇರಲಿಲ್ಲ. ಜನಗಳು ಕೂಡಾ, ತಪ್ಪಿದ್ದಲ್ಲಿ ಖಂಡಿಸಿ ತಿಳಿಹೇಳುತ್ತಿದ್ದರು ಮತ್ತು ಅದಕ್ಕೆ ಪೂರಕವಾಗಿ ಮನೆಯಲ್ಲೂ ಲಾತ ಬೀಳುತ್ತಿದ್ದವು. ಈಗಿನ ಅತಿ ಕಾಳಜಿ , ಬದಲಾದ ಸಮಾಜದ ಮನೋಭಾವ, ವ್ಯಾವಹಾರಿಕ ಪ್ರಾಧಾನ್ಯತೆ ಎಲ್ಲದರಲ್ಲೂ ನುಸುಳಿ ಯಾವುದಕ್ಕೂ ವ್ಯವಧಾನವಿಲ್ಲದೆ ಜೀವಿಸುವಂತಾಗಿರುವುದು ಒಂದು ವಿಪರ್ಯಾಸ. ದೈಹಿಕ ಕಸರತ್ತುಗಳು ಸ್ವಾಭಾವಿಕ ನೆಲೆಯಲ್ಲಿ ಆಗದಿದ್ದರೂ, ಕೃತಕ ಪರಿಸರಗಳಲ್ಲಿ ಮಾಡುವುದಕ್ಕೆ ಇಂದು ಸಾಕಷ್ಟು ಅವಕಾಶವಿದೆ. ಜ್ಞಾನಾರ್ಜನೆಯ ಅವಕಾಶಗಳು ಇಂದು ಬಹಳ ಸುಲಭವಾಗಿ ಸಿಗುತ್ತವೆ.
  ತಾನೇ ತಾನಾಗಿ ಆಗಬಹುದಾದ ಜೀವನದ ಪ್ರಕ್ರಿಯೆಗಳು ಇಂದು ಪೋಷಕರ ಸಮಯ ಹಾಗೂ ಹಣ ಬೇಡುತ್ತವೆ. ಹೀಗಾಗಿ ಒಟ್ಟಾರೆ ಫಲಕಾರಿತ್ವ ಕಡಿಮೆಯಾಗುವುದಕ್ಕೆ entropy ಯಾ ಉದಾಹರಣೆ ಕೊಟ್ಟು ವಿವರಿಸುತ್ತಾರೆ.

  Like

 4. ಈ ಜಗತ್ತು ಅವ್ಯವಸ್ಥೆಯಿಂದಲೇ ಸುವ್ಯವಸ್ಥೆಯಾಗಿ ಸೃಷ್ಟಿಗೊಂಡಿದೆ. ಅದೇ ರೀತಿಯಲಿ ಮಾನವನು ಈ ಜಗತ್ತಿನಲ್ಲಿ ಉದಯಿಸಿದಮೇಲೆ ಪಶುಪ್ರಾಣಿಗಳ ವರ್ಗದ ಕಪಿಮಾನವನ ಪರಿಸ್ಥಿತಿಯಿಂದ ಆಧುನಿಕ ಮಾನವನಾಗಿ ಬದಲಿಸಿ ಈ ಆಧುನಿಕ ಪ್ರಪಂಚವನ್ನು ರಚಿಸಿದ್ದಾನೆ. ಅಂದರೆ ಮಾನವನು ತನ್ನ ಈ ಆಧುನಿಕ ಅಂತಿಮ ಸ್ಥಿತಿಯನ್ನು ತಲುಪಿ ಸ್ಥಬ್ಧ ಪರಿಸ್ಥಿತಿಯಲ್ಲಿ ಸ್ಥಿರವಾಗಿ ನೆಲೆಸಿಲ್ಲ. ಮಾನವನು ಇನ್ನೂ ಮುನ್ನಡೆಯಲ್ಲೇ ಸಾಗುತ್ತಿದ್ದಾನೆ. ಆದುದರಿಂದ ಈಗಿನ ಮಕ್ಕಳು, ’ನಮ್ಮ ಕಾಲದಹಾಗೆ’ ಮನೆಯ ಹೊರಾಂಗಣದಲ್ಲಿ ದೈಹಿಕ ಕ್ರೀಡೆಗಳನ್ನು ಆಡುವುದರಬದಿಲು ಮನೆಯ ಒಳಗಡೆಯ ಮಾನಸಿಕ ಕ್ರೀಡೆಗಳಿಂದ ತಮ್ಮ ದೈಹಿಕ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವು ಬರುವುದು ಸಹಜ. ಆದರೆ ಇದು ಅನಿವಾರ್ಯ. ವೇದವ್ಯಾಸರು, ವಿಜ್ಞಾನಿಗಳು ಮತ್ತು ನಮ್ಮ ಸಂಪಾದಕರೂ ಹೇಳುವಹಾಗೆ, ‘ಕೆಡುತ್ತಲೇ ಸಾಗುವುದು ಕಾಲನ ಧರ್ಮ’. ತಾರಾಮಂಡಲ, ಗೃಹಪ್ರಪಂಚಗಳನ್ನೊಳಗೊಂಡ ವ್ಯೋಮವೂ ಸ್ಥಬ್ಧವಾಗಿಲ್ಲ. ವಿಜ್ಞಾನಿ ಗಳು ಹೇಳುವ ಹಾಗೆ ಅದು ಹಿಗ್ಗುತ್ತಾ ಮುನ್ನಡೆಯುತ್ತಲೇ ಹೋಗುತ್ತದೆ, ಆದರೆ ಅದು ಅನೇಕ ಸಹಸ್ರಕೋಟಿ ಶತಮಾನಗಳನಂತರ ಸ್ಥಬ್ಧವಾಗಿ ನಿಂತು ಕುಸಿಯಲಾರಂಬಿಸಿ ಕ್ಷೀಣವಾಗುವುದೆಂದು ಹೇಳಿದ್ದಾರೆ. ಅಂದರೆ ಅನೇಕ ಕಾಲವಿಳಂಬನೆಗಳನಂತರ ಅಂದು ಆಧುನಿಕ ಮಕ್ಕಳು ತಮ್ಮ ಮನೆಯನ್ನು ಬಿಟ್ಟು ಹೊರಾಂಗಣದಲ್ಲಿ ಆಡುವರೇ?
  – ರಾಜಾರಾಮ ಕಾವಳೆ

  Like

 5. ಸುದರ್ಶನ್,
  ನನ್ನ ಲೇಖನಕ್ಕೆ ನೀವು ಬರೆದಿರೋ ಮುನ್ನುಡಿ ಚೆನ್ನಾಗಿದೆ. ಥ್ಯಾಂಕ್ಸ್!
  ವಿನತೆ.

  Like

 6. ನಿಮ್ಮ ಲೇಖನ ಬಹಳ ಚೆನ್ನಾಗಿದೆ

  ನಿಜ, ಮಕ್ಕಳು ಹೊರಗೆ ಆಡುವುದು ಕಡಿಮೆ ಆಗ್ತಿದೆ ಮತ್ತು ನೀವು ಹೇಳುವ ಹಾಗೆ ಅವರಿಗೆ ಈಗ ಬಹಳಷ್ಟು alternatives ಇದೆ…

  ನಾವು ಚಿಕ್ಕವರಿದಾಗ ರೇಡಿಯೋ ಬಿಟ್ಟರೆ ಇನ್ಯಾವ gadgetsoo ನಮಗಿರಲಿಲ್ಲ. ಹಾಗಾಗಿ ನಾವು ಹೊರಗೆ ಆಡದಿದ್ದರೆ ಕಾಲ ಕಳೆಯಲು ಕಷ್ಟವಾಗೋದು. ಹಾಗಾಗಿ ಹೋಗ್ತಿದ್ವೇನೋ ಅಂತ ಅನ್ಸತ್ತೆ. ನಮಗೂ alternatives ಇದ್ದಿದ್ರೆ ನಾವು ಏನು ಮಾಡ್ತಿದ್ವಿ ಅಂತ ನನಗೆ ಗೊತ್ತಿಲ್ಲ!

  ಅದು ಅಲ್ಲದೆ ಮನೇಲಿ ಅಮ್ಮನೋ, ಅಜ್ಜಿನೋ, ಅತ್ತೇನೋ, ಅಮ್ಮಾಮಿನೋ ಯಾರೋ, ಹೀಗೆ ಒಂದು ಹೆಣ್ಣು ದಿಕ್ಕು ಯಾವಾಗಲೂ ಮನೇಲಿ ಇರೋವ್ರು. ಮಕ್ಕಳ ಆಗುಹೋಗುಗಳ ಬಗ್ಗೆ ಒಂದು ನಿಗಾ ಇಟ್ಟಿರೋವ್ರು. ಮಕ್ಕಳ ಬಗ್ಗೆ ಕಾಳಜಿ ಇರೋದು ಆದ್ರೆ ಈಗಿನ ತರಹ over protective ಆಗಿ ಇರ್ತಿರ್ಲಿಲ್ಲ… ಹಾಗಾಗಿ ನಾವೆಲ್ಲಾ ನಮ್ಮ ರಜಾಕಾಲದ ಮುಖಾಲು ಭಾಗಾನ ಬೀದೀಲಿ ಕಳೀತಿದ್ವಿ 🙂 ಮಕ್ಕಳನ್ನ ಕದ್ಕೊಂಡು ಹೋಗೊವ್ರು ಬಂದು ಕರ್ಕೊಂಡು ಹೋಗಿ ಬಾಂಬೆ ಲಿ ಭಿಕ್ಷಕ್ಕೆ ಹಾಕ್ತಾರೆ ಅಂತ ದಿನ ಬೆಳಗಾದರೆ paper ನಲ್ಲಿ ಓದ್ತಿದ್ವಿ, ಆದ್ರೆ ಸಿಕ್ಕಾಪಟ್ಟೆ ನಾವೂ ತಲೆ ಕೆಡಿಸ್ಕೊತಿರ್ಲಿಲ್ಲ ಮತ್ತು ನಮ್ಮ ತಂದೆ ತಾಯಿಗಳೂ ಅದಕ್ಕೆ ಅಷ್ಟೊಂದು ಆದ್ಯತೆ ಕೊಡ್ತಿರ್ಲಿಲ್ಲ. ಗೊತ್ತಿಲ್ದೆ ಇರೋವ್ರ ಹತ್ರ ಮಾತಾಡಬೇಡಿ ಅನ್ನೋವು, ನಾವೂ ನಮ್ಮ ಜೋಪಾನದಲ್ಲಿ ಇರ್ತಿದ್ವಿ. ಏನೂ ಕೆಟ್ಟದ್ದು ಆಗ್ಲಿಲ್ಲ ಆನ್ನೋದು ಬೇರೆ ವಿಷಯ..

  ಈಗ ಮನೆಗಳಲ್ಲಿ ಇರೋದೇ ಗಂಡ, ಹೆಂಡತಿ, ಮಕ್ಕಳು. ಗಂಡ ಹೆಂಡತಿ ಇಬ್ಬರೂ ಕೆಲ್ಸಕ್ಕೆ ಹೊದ್ರಂತೂ ಮಕ್ಕಳು childcare ನಲ್ಲಿರ್ತಾರೆ. ಅವರನ್ನ ಮನೆಗೆ ಕರ್ಕೊಂಡು ಹೋಗೋ ಹೊತ್ತಿಗೇ ರಾತ್ರಿ ಆಗಿರತ್ತೆ. ಹಾಗಾಗಿ ಹೊರಗೆ ಕಳಿಸೋದೆ ಕಷ್ಟ.. weekend ಗಳಲ್ಲಿ ಬೀದಿಯಲ್ಲಿರುವ ಬೇರೆ ಮಕ್ಕಳೂ ಹೊರಗೆ ಬಂದರೆ ಸ್ವಲ್ಪ ಹೊತ್ತು ಹೋಗಬಹುದು… ಆದ್ರೆ ಹೋದ ಸ್ವಲ್ಪ ಹೊತ್ತಿಗೇ ಮನೆಯಲ್ಲಿರುವ ಬೇರೆ ಆಟಗಳ ಮೇಲೆ ಮನಸ್ಸು ಬಂದು ವಾಪಸ್ ಬರ್ತಾರೆ. ಈ alternatives ಗಳಿರೋದೇ ಇದಕ್ಕೆ ಕಾರಣ.. ಆದ್ರೆ ಇದೆಲ್ಲ ನಮ್ಮ ಪ್ರಗತಿಯ ಹಂತಗಳು. ಒಂದು ತರಹಾ ಬಿಸಿ ತುಪ್ಪ! ಉಗಿಯಕ್ಕೋ ಆಗಲ್ಲ ನುಂಗಕ್ಕೋ ಆಗಲ್ಲ!

  ಈ ಸಲ ಬೆಂಗಳೂರಿಗೆ ಹೋದಾಗ ಒಂದು ನೋಡಿದೆ. ಈ ಅಪಾರ್ಟ್ ಮೆಂಟ್ ಗಳಲ್ಲಿ ಇರೋ ಮಕ್ಕಳು ಸ್ವಲ್ಪ ಹೊರಗೆ ಹೋಗಿ ಆಡ್ತಾರೆ. ಅಲ್ಲಿ ಆಡಲು ಸ್ವಲ್ಪ ಜಾಗಾನೂ ಮಾಡಿರ್ತಾರೆ ಮತ್ತು security ಬಾಗಿಲಲ್ಲೇ ಇದ್ದು ಮಕ್ಕಳ ಮೇಲೆ ನಿಗಾ ಇಟ್ಟಿರ್ತಾರೆ. ಇದೊಂದು ಒಳ್ಳೆ ವಿಷಯ…

  ನಮ್ಮ ಮನೆಯಲ್ಲಿ ಮಕ್ಕಳು ಚಿಕ್ಕವರಿದಾಗ ಒಂದು ಪದ್ಧತಿ ಇಟ್ಕೊಂಡಿದ್ವಿ. weekend ನಲ್ಲಿ ತಪ್ಪದೆ boardgames ಆಡ್ತಿದ್ವಿ. ಇದರಿಂದ ನಮಗೂ ಅವರ ಜೊತೆ ಕಾಲ ಕಳೆದ ಹಾಗೆ ಆಗೋದು and screentime ಕೂಡ ಕಡಿಮೆ ಆಗೋದು 🙂 ಈಗ ನಮ್ಮ ಮಕ್ಕಳು ದೊಡ್ಡವರಾಗಿದ್ದಾರೆ. ಆದರೂ ಈಗಲೂ ನಾವು boardgames ಆಡ್ತೀವಿ.

  ನಮ್ಮ ಊರಾದ cheltenham ನಲ್ಲಿ ಹೋದ ಬೇಸಿಗೆಯಲ್ಲಿ ಮಕ್ಕಳು ಹೊರಗೆ ಆಡಲು ಪ್ರೋತ್ಸಾಹಿಸಕ್ಕೊಸ್ಕರ ಕೆಲವು ಬೀದಿಗಳನ್ನ “no traffic zone ” ಅಂತ ಮಾಡದ್ರು. ಆದ್ರೆ ಎರಡೇ ವಾರಕ್ಕೆ ಇದನ್ನ ತೆಗೆದರು, ಯಾಕಂದ್ರೆ, ಮಕ್ಕಳು ಹೊರಗೆ ಆಡಕ್ಕೆ ಬರಲೇ ಇಲ್ಲ! ತಂದೆ ತಾಯಂದಿರನ್ನ ಕೇಳದ್ರೆ, traffic ಇಲ್ದೆ ಇದ್ರೆ ಏನಂತೆ ಓಡಾಡೋ ಜನ ಹೇಗೋ ಏನೋ ಯಾಕೆ risk ಅಂತಾರೆ…

  ಹೊರಗೆ ಹೋಗಿ ಆಡುವಷ್ಟು ಒಳ್ಳೆಯದು ಬೇರೊಂದಿಲ್ಲ..ಆದರೆ ಈಗಿನ ಸಮಾಜ ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಂಡು ಇರೋದ್ರಲ್ಲೇ ಸ್ವಲ್ಪ adjust ಮಾಡ್ಕೊಬೇಕು ಅಷ್ಟೇ! ನಿರ್ವಾಹ ಇಲ್ಲ 😦

  Like

 7. ವಿನುತೆ ಅವರೆ, ಸಧ್ಯದ ಪರಿಸ್ಥಿತಿಯಲ್ಲಿ ನೀವು ಪ್ರಸ್ತಾಪಿಸಿರುವ ವಿಷಯ ನಿಜಕ್ಕೂ ಗಂಭೀರವಾದದ್ದು. ಆಧುನಿಕ ತಂತ್ರಗ್ನಾನದ ನೆರವಿಲ್ಲದೆ ಹೊರಕ್ಕೆ ಹೆಜ್ಜೆಯನ್ನೂ ಇಡದ ಪರಿಸ್ಥಿತಿಯಲ್ಲಿ ನಾವೆಲ್ಲಾ ಸಿಲುಕಿದ್ದೇವೆ. ಇದೊಂದು ವಿಷವರ್ತುಲವಾಗಿದೆ. ಇದರಿಂದ ಪಾರಾಗಿ ಹೊರಬರುವ ಸುಳಿವು ಕಾಣುತ್ತಿಲ್ಲ. ಪ್ರತಿಯೊಂದೂ ವಿಷಯವನ್ನೂ ವ್ಯಾಪಾರಿ ಮನೋಭಾವನೆಯಿಂದಲೆ ಅಳೆಯಲಾಗುತ್ತಿದೆ. ಒಂದೆಡೆ ತಂತ್ರಗ್ನಾನದ ಅನುಪಮ ಸೌಲಭ್ಯಗಳು ನಮ್ಮ ಜೀವನವನ್ನು ಉತ್ತಮ ಮಟ್ಟಕ್ಕೇರಿಸಿದರೆ, ಮತ್ತೊಂದೆಡೆ ಅದರ ನಕಾರಾತ್ಮಕ ಕಬಂಧ ಬಾಹುಗಳು ನಮ್ಮ ಮುಂದಿನ ಪೀಳೀಗೆಯ ಸದಸ್ಯರನ್ನು ತನ್ನ ಬಲವಾದ ಪಾಶದಲ್ಲಿ ಹಿಡಿದಿರಿಸುತ್ತಿದೆ. ಇವೆರಡರ ನಡುವಿನ ಸಮತೋಲನವನ್ನು ಕಾಪಾಡುವಲ್ಲಿ, ನಾವೆಲ್ಲರೂ ಅತ್ಯಂತ ಎಚ್ಚರಿಕೆಯಿಂದ ಮುನ್ನಡೆಯಬೇಕಿದೆ. ಮಕ್ಕಳ ಮಾತಾಪಿತೃಗಳು ಇಲ್ಲಿ ದೊಡ್ಡ ಜವಾಬ್ದಾರಿಯನ್ನು ಹೊರಬೇಕಿದೆ. ಅದೊಂದೇ ಈ ಸಮಸ್ಯೆಗೆ ನಮ್ಮ ಮುಂದಿರುವ ಒಂದು ಉತ್ತಮವಾದ ಪರಿಹಾರ. ನಮ್ಮ ಮನದಲ್ಲಿ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕುವ ಇಂತಹ ಲೇಖನಗಳೂ ಒಂದು ರೀತಿಯಲ್ಲಿ ನೆರವಾಗಬಲ್ಲವು. ನಿಮ್ಮ ವಿಚಾರಪೂರ್ಣ ಲೇಖನಗಳು ಹೀಗೆಯೇ ಮುಂದಕ್ಕೂ ನಮ್ಮ ಜಾಲಜಗುಲಿಯಲ್ಲಿ ಹೊರಬರಲಿ.
  ಉಮಾ ವೆಂಕಟೇಶ್

  Like

 8. ನಿಮ್ಮ ಬರಹ ಮನಮುಟ್ಟುವಂತಿದೆ. ನಿಮ್ಮ ಕಾಳಜಿ ನಮ್ಮ ಕಾಳಜಿ ಕೂಡ. ಇನ್ನೂ ಹೀಗೇ ಬರೆಯುತ್ತಿರಿ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.