ಸಿ ಅಶ್ವಥ್ ಎಂಬ ಭಾವಸಂಗೀತಗಾರ – ಕೇಶವ ಕುಲಕರ್ಣಿ

(೨೯ ಡಿಸೆಂಬರ್ ಸಿ ಅಶ್ವಥ್ ಜನ್ಮದಿನ, ಹಾಗೆಯೇ ಪುಣ್ಯತಿಥಿ ಕೂಡ. ಅವರು ನಮ್ಮನ್ನಗಲಿ ಈಗ ಐದು ವರ್ಷ. ಆಧುನಿಕ ಕನ್ನಡ ಕಾವ್ಯವನ್ನು, ಅದರಲ್ಲೂ ನವೋದಯ ಕಾವ್ಯವನ್ನು, ಕನ್ನಡದ ಮನೆ ಮನೆಗೆ ತಲುಪಿಸಿದವರು ಸಿ ಅಶ್ವಥ್. ಅವರ ನೆನಪಿನಲ್ಲಿ ಒಂದು ಶೃದ್ಧಾಂಜಲಿ.)

CC-Wiki

ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ. ಸರಿ ಸುಮಾರು ಅದೇ ಕಾಲದಲ್ಲಿ, ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು. ಆ ಹಾಡುಗಳಲ್ಲಿರುವ ಕವನ, ಭಾಷೆ, ಧಾಟಿ ಮತ್ತು ಆ ಧ್ವನಿ, ಬರೀ ಸಿನಿಮಾ ಹಾಡುಗಳನ್ನು ಕೇಳಿ ಬೆಳೆಯುತ್ತಿದ್ದ ನಮಗೆ ಹೊಸಲೋಕವನ್ನೇ ತೆರೆದಂತಾಯಿತು. ಮತ್ತು ಅದೇ ಕಾಲಕ್ಕೆ ನಾವು ಲಂಕೇಶ್ ಪತ್ರಿಕೆ ಓದಲು ಶುರುಮಾಡಿದ್ದೆವು. ಕನ್ನಡ-ಕರ್ನಾಟಕದ ಸಾಹಿತ್ಯ-ಕವನ-ಜನಪದ-ಸಂಗೀತಗಳಿಗೆ ಒಮ್ಮೆಲೇ ನಾವು ತೆರೆದುಕೊಂಡಿದ್ದು ಹೀಗೆ. ಹೀಗೆ ಆ ನನ್ನ ಎಳೆಯ ವಯಸ್ಸಿನಲ್ಲೇ, ಕೆ ಎಸ್ ನರಸಿಂಹಸ್ವಾಮಿ, ಬೇಂದ್ರೆ, ಅಡಿಗರಿಂದ ಹಿಡಿದು ಜಿ ಎಸ್ ಎಸ್, ಹೆಚ್ ಎಸ್ ವೆಂಕಟೇಶ್ ಮೂರ್ತಿ, ಬಿ ಆರ್ ಲಕ್ಷ್ಮಣರಾವ್ ವರೆಗೆ ಕವಿಗಳ ಪರಿಚಯ ಮಾಡಿಸಿದವರು ಸಿ ಅಶ್ವಥ್.

ಸಿ ಅಶ್ವಥ್ ಮತ್ತು ರಾಜ್ ಕುಮಾರ್ ಕನ್ನಡದ unique ಹಾಡುಗಾರರು ಮತ್ತು ಅವರದು ಯಾವ ಹಿಂದಿನ ಹಾಡುಗಾರರ ಅನುಕರಣೆಯಿರದ ಗಾಯನ. ಬರೀ ಸಂಗೀತವನ್ನೇ ತೆಗೆದುಕೊಂಡು ಅವರಿಬ್ಬರನ್ನೂ ಇಷ್ಟಪಡದ ಬಹಳ ಜನರನ್ನು ನೋಡಿದ್ದೇನೆ, ಕೆಲವು ಬರಹಗಳನ್ನೂ ಓದಿದ್ದೇನೆ. ಆದರೆ ಅವರೇನೂ ಕರ್ನಾಟಕೀ ಅಥವಾ ಹಿಂದುಸ್ಥಾನೀ ಶಾಸ್ತ್ರೀಯ ಹಾಡುಗಾರರಲ್ಲ, ಸಿ ಅಶ್ವಥ್ ಭಾವಗೀತಗಾಯಕ, ರಾಜ್ ಭಾವತುಂಬಿ ಹಾಡುವ ಸಿನಿಮಾ ಗಾಯಕ. ಕನ್ನಡ ಸುಗಮಸಂಗೀತ ಪಿ. ಕಾಳಿಂಗರಾವ್ ರಿಂದ ಶುರುವಾಗಿ, ಮೈಸೂರು ಅನಂತಸ್ವಾಮಿಯಲ್ಲಿ ಕೊನೆಯಾಗುತ್ತೇನೋ ಎಂದುಕೊಳ್ಳುವಾಗ, ಹೊಸ ಧ್ವನಿ, ಹೊಸ ರಾಗ, ಹೊಸ ಭಾವ ತುಂಬಿ ನಮ್ಮನ್ನು ಕನ್ನಡ ಕಾವ್ಯಲೋಕಕ್ಕೆ ತೆರೆದಿದ್ದು ಸಿ ಅಶ್ವಥ್.

ಹಾಗೆಂದು ನಾನು ಸಿ ಅಶ್ವಥ್ ರ ಎಲ್ಲ ಕ್ಯಾಸೆಟ್ ಗಳನ್ನು ಕೇಳಿದ್ದೇನೆ ಎಂದಾಗಲೀ, ಕೇಳಿದ ಎಲ್ಲ ಹಾಡುಗಳನ್ನು ಮೆಚ್ಚುತ್ತೇನೆ ಎಂದಾಗಲಿ, ಎಲ್ಲ ಶೈಲಿಗಳನ್ನೂ ಒಪ್ಪಿಕೊಳ್ಳುತ್ತೇನೆ ಎಂದಾಗಲೀ ಅಲ್ಲ. ನನ್ನದೂ ಸುಮಾರು ತಕರಾರುಗಳಿವೆ. ತಕರಾರಿಗಿಂತ ಮೊದಲು ನನಗೆ ಇಷ್ಟವಾದವುಗಳನ್ನು ಹೇಳುತ್ತೇನೆ.

ಶರೀಫರ ಮೊದಲೆರೆಡು ಕ್ಯಾಸೆಟ್ ಗಳಲ್ಲಿ ಜನಪದದೊಂದಿಗೆ ರಾಗಗಳ ಮಿಶ್ರಣ, ಅದರ ಜೊತೆ ಸಿ ಅಶ್ವಥ್ ಮತ್ತು ಶಿವಮೊಗ್ಗ ಸುಬ್ಬಣ್ಣರ ಹಾಡುಗಾರಿಕೆ ಆಗಿನ ಕಾಲದಲ್ಲಿ ನಿಂತನೀರಾಗಿದ್ದ ಭಾವಗೀತ ಪ್ರಪಂಚದಲ್ಲಿ ಹೊಸ ಅಲೆಗಳನ್ನೆಬ್ಬಿಸಿದವು. ಮುಂದೆ ‘ಸಂತ ಶಿಶುನಾಳ ಶರೀಫ’ ಚಲನಚಿತ್ರ ಬಂದಾಗ ಪುನಃ ಹೊಸ ಸಂಯೋಜನೆ ಮಾಡಿ ಮತ್ತೆ ಹಾಡಿದ ಕ್ಯಾಸೆಟ್ ಸಿ ಅಶ್ವಥ್ ಶರೀಫ ಸಾಹೇಬರಿಗೆ ಕೊಟ್ಟ ಶ್ರೇಷ್ಟ ಕಾಣಿಕೆ ಎನ್ನಬಹುದು. ‘ಅಳಬೇಡ ತಂಗಿ ಅಳಬೇಡ’, ಶಿವಮೊಗ್ಗ ಸುಬ್ಬಣ್ಣನವರ ಬಾಯಲ್ಲೇ ಕೇಳಬೇಕು. ‘ತರವಲ್ಲ ತಗೀ ನಿನ್ನ ತಂಬೂರಿ’, ‘ಸೋರುತಿಹುದು ಮನೆಯ ಮಾಳಿಗಿ’, ಸಿ ಅಶ್ವಥ್ ರ ಹಾಡುಗಾರಿಕೆಯಲ್ಲಿ ಪ್ರತಿ ಶಬ್ದದ ಅರ್ಥ ತುಂಬಿ ತುಳುಕುತ್ತದೆ. ಸಿನಿಮಾಗೆ ಹಾಡಿದ ‘हम तो देखा महम्मद..’, ಸಿ ಅಶ್ವಥ್ ಮಾತ್ರ ಹಾಡಲು ಸಾಧ್ಯ (ಬಹುಷಃ ಸುಖಬಿಂದರ್ ಸಿಂಗ್ ಹಾಡಬಹುದೇನೋ?). ಉತ್ತರ ಕರ್ನಾಟಕದ ಶರೀಫ ಸಾಹೇಬ ಸಮಗ್ರ ಕರ್ನಾಟಕದ ಸಂತ ಶಿಶುನಾಳ ಶರೀಫರನಾಗಿಸಿದ್ದು ನಮ್ಮ unique ಸಿ ಅಶ್ವಥ್.

ಕೆ ಎಸ್ ನರಸಿಂಹಸ್ವಾಮಿ, ‘ಕ್ಯಾಸೆಟ್ ಕವಿ’ಗಳು ಹುಟ್ಟುವ ಮೊದಲು, ಭಾವಗೀತಹಾಡುಗಾರರ ಅಚ್ಚುಮೆಚ್ಚಿನ ಕವಿ; ಅದಕ್ಕೆ ಸಿ ಅಶ್ವಥ್ ಏನೂ ಹೊರತಲ್ಲ. ಮೈಸೂರು ಅನಂತಸ್ವಾಮಿ ಹಾಡಿದ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…’ ಹಾಡು ಕೇಳದ ಭಾವಗೀತಪ್ರೀಯನಿಲ್ಲ, ಆದರೆ ಮೈಸೂರು ಅನಂತಸ್ವಾಮಿ ಹೆಂಡತಿಯನ್ನು ಬಿಟ್ಟು ಮುಂದೆ ಹೋಗಲೇಯಿಲ್ಲ. ಸಿ ಅಶ್ವಥ್, ಕೆ ಎಸ್ ನ ರ ಕವನಸಂಕಲನಗಳಿಂದ ಭಾವಗೀತೆಗಳನ್ನು ಹೆಕ್ಕಿ ಹೆಕ್ಕಿ ಹಾಡಿದರು, ಹಾಡಿಸಿದರು. ಮುಂದೆ ‘ ಮೈಸೂರು ಮಲ್ಲಿಗೆ’ ಚಿತ್ರವಾದಾಗ ಮರುಸಂಯೋಜನೆ ಮಾಡಿ, ಎಸ್ ಪಿ ಬಾಲಸುಬ್ರಮಣ್ಯಂ ಧ್ವನಿಗೂಡಿಸಿದಾಗ, ಪ್ರತಿ ಕವನವೂ ಭಾವದುಂಬಿ ಹರಿಯಿತು. ‘ಬಳಿಗಾರ ಚನ್ನಯ್ಯ’, ‘ಒಂದಿರುಳು ಕನಸಿನಲಿ’, ‘ಕತ್ತಲೆ ತುಂಬಿದ’, ‘ ನಿನ್ನ ಪ್ರೇಮದ ಪರಿಯ’ ಚಿತ್ರದ ಪ್ರತೀ ಹಾಡೂ ಭಾವವಾಗಿ ಹಾರಿತು.

ಬೇಂದ್ರೆಯನ್ನು ಮೆಚ್ಚದ ಕಾವ್ಯರಸಿಕರುಂಟೇ? ಬೇಂದ್ರೆ ತಮ್ಮ ಹಾಡುಗಳಿಗೆ ತಾವೇ ರಾಗ ಹಾಕುತ್ತಿದ್ದರು ಅಥವಾ ಸಿದ್ಧ ಧಾಟಿಯಲ್ಲಿ ಬರೆಯುತ್ತಿದ್ದರು ಎಂದು ಕೇಳಿದ್ದೇನೆ, ಆದರೆ ಆ ರಾಗಗಳನ್ನು ನಾನು ಕೇಳಿಲ್ಲ. ಧಾರವಾಡದ ಆಕಾಶವಾಣಿಯಲ್ಲಿ, ಕ್ಯಾಸೆಟ್ ಯುಗ ಶುರುವಾಗುವ ಮೊದಲು, ಬೇಂದ್ರೆ ಹಾಡುಗಳಿಗೇನೂ ಕಡಿಮೆಯಿರಲಿಲ್ಲ. ಸಿ ಅಶ್ವಥ್ ರ ‘ ಶ್ರಾವಣ’ದಲ್ಲಿ ‘ಬದುಕು ಮಾಯೆಯ ಮಾಟ’, ‘ಕುರುಡು ಕಾಂಚಾಣ’, ‘ ಘಮ ಘಮಡಸತಾವ ಮಲ್ಲಿಗೆ’ ನನಗೆ ಇಷ್ಟವಾದ compositions.

ಮೈಸೂರು ಅನಂತಸ್ವಾಮಿ, ಅಡಿಗರ ನವೋದಯಕಾಲದ ‘ಯಾವ ಮೋಹನ ಮುರಲಿ ಕರೆಯಿತು’ ಶ್ರುತಿಮಾಡಿದ್ದಾರೆ; ಆದರೆ ಆ ಕವನದ ‘ಓಲಿದ ಮಿದುವೆದೆ..’ ಯ ಎರಡು ಸಾಲುಗಳನ್ನು ಸೆನ್ಸಾರ್ ಮಾಡಿ, ಕವನಕ್ಕೇ ಮೋಸ ಮಾಡಿದ್ದಾರೆ. ಮತ್ತು ಅಡಿಗರ ನವ್ಯ ಕಾವ್ಯವನ್ನು ಹಾಡುವ ಗೋಜಿಗೆ ಹೋಗಲಿಲ್ಲ (ಕವನವನ್ನು ಹಾಡಿ ಅರ್ಥೈಸಬಹುದೇ? – ಚರ್ಚೆಯ ವಿಷಯ). ಸಿ ಅಶ್ಚಥ್ ಅಡಿಗರ ಅರೆನವ್ಯ ಕಾವ್ಯವನ್ನೂ ಹಾಡಿಸಿದರು. ಅಡಿಗರ ‘ಅಮೃತವಾಹಿನಿ’ ರಾಜ್ ಧ್ವನಿಯಲ್ಲಿ ಕೇಳುತ್ತಿದ್ದರೆ ಮೈ ಝುಂಯೆನ್ನಬೇಕು. ‘ ತಳದೊಳೆಲ್ಲೊ ತಳುವಿ’ ಎಂಬ ಸಾಲನ್ನು ರಾಜ್ ಬಾಯಲ್ಲೇ ಕೇಳಬೇಕು. ಈ ಕವನದ composition ಸಿ ಅಶ್ವಥ್ ರ ಸೃಜನಶೀಲತೆಗೆ ಸಾಕ್ಷಿ.

ಇನ್ನು ಚೆನ್ನವೀರ ಕಣವಿ, ಜಿ ಎಸ್ ಶಿವರುದ್ರಪ್ಪ ಮೊದಲಾದ ಹಿರಿಯರ ಕವನಗಳೂ ತುಂಬ ಚೆನ್ನಾಗಿ ಮೂಡಿಬಂದಿವೆ. ‘ಕಾಣದಾ ಕಡಲಿಗೆ ಹಂಬಲಿಸಿದೇ ಮನ’ ಮತ್ತು ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಯ ಸ್ವರಸಂಯೋಜನೆ ಆ ಕವಿತೆಗಳ ಅರ್ಥವನ್ನು ಪದರು ಪದರಾಗಿ ಬಿಡಿಸುತ್ತದೆ.

ಮಂಕುತಿಮ್ಮನ ಕಗ್ಗ ಇತ್ತೀಚಿಗೆ ಪುರಾಣ-ಪ್ರವಚನವಾಗಿದೆ. ಸಿ ಅಶ್ವಥ್ ಅದಕ್ಕೆ ಹಾಡಿನ ಅಲಂಕಾರವನ್ನೊ ಮಾಡುವ ಪ್ರಯತ್ನ ಮಾಡಿದ್ದಾರೆ ಮಾತ್ತು ರಾಜ್ ಭಾವತುಂಬಿದ್ದಾರೆ. ‘ಶ್ರೀವಿಷ್ಣುವಿಶ್ವಾದಿ ಮೂಲ’ದಿಂದ ಆರಂಭಿಸಿ ‘ಶರಣುವೊಗು ಜೀವನ್ ರಹಸ್ಯದಲಿ’ ವರೆಗು, ಸಿ ಅಶ್ವಥ್ ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಬಿ ಆರ್ ಲಕ್ಷ್ಮಣರಾವ್, ನಾವು ಪಡ್ಡೆಹುಡುಗರ ವಯಸ್ಸಿರುವಾಗ, ಮೂಡಿಬಂದ ಯುವಕವಿ. ‘ಜಾಲಿ ಬಾರಿನಲ್ಲಿ’, ‘ನಾ ಚಿಕ್ಕವನಾಗಿದ್ದಾಗ’, ‘ಬಿಡಲಾರೆ ನಾ ಸಿಗರೇಟು’, ‘ಬಣ್ಣಿಸಲೇ ಹೆಣ್ಣೇ’ ಸಿ ಅಶ್ವಥ್ ರ ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತವೆ. ಕವನಗಳ ಬಾವಗಳಿಗೆ, ಬಾಷೆಗೆ ತಕ್ಕಂತೆ ಸ್ವರಸಂಯೋಜನೆ ಅಶ್ವಥ್ ರಷ್ಟು ಇನ್ನಾವ ಭಾವಗೀತ ಸಂಯೋಜಕನೂ ಮಾಡಿಲ್ಲ.

ಸಿ ಅಶ್ವಥ್ ಕನ್ನಡಭಾವಲೋಕದಲ್ಲಿ ಹೊಸ ಅಲೆಯೆಬ್ಬಿಸಲು ಕಾರಣವಾಗಿದ್ದು ಅವರ ರಂಗಭೂಮಿ ಸಂಗೀತ. ನಾನು ಅವರ ಸಂಗೀತ ನಿರ್ದೇಶನದ ಒಂದೇ ಒಂದು ನಾಟಕವನ್ನೂ ನೋಡಿಲ್ಲ. ಆದರೆ ‘ನಾಗಮಂಡಲ’ ದಲ್ಲಿ ಗೋಪಾಲ ವಾಜಪೇಯಿಯ ಹುಚ್ಚು ಹಿಡಿಸುವ ಸಾಹಿತ್ಯ ಮತ್ತು ಅಶ್ವಥ್ ರ ಜನಪದದಿಂದ ಸ್ಫೂರ್ತಿ ಪಡೆದ ಮತ್ತು ಹಿಡಿಸುವ ಸಂಗೀತವಿದೆ.

ಇಷ್ಟೆಲ್ಲವಾದರೂ ಸಿ ಅಶ್ವಥ್, ಕನ್ನಡ ಚಿತ್ರರಂದ untapped ಸಂಗೀತ ನಿರ್ದೇಶಕರಾಗಿ ಉಳಿದುಹೋಗಿದ್ದು ಕನ್ನಡ ಚಿತ್ರರಂಗದ ವಿಪರ್ಯಾಸಗಳಲ್ಲಿ ಒಂದು. ಬರೀ art ಚಿತ್ರಗಳಿಗೆ ಮಾತ್ರ ಸೀಮಿತಗೊಳಿಸಿದ ನಮ್ಮ ಚಿತ್ರ ನಿರ್ಮಾಪಕರು ‘ನಮ್ಮೂರ ಮಂದಾರ ಹೂವೇ’ ಹಾಡನ್ನು ಕೇಳಿದ್ದಾರೆಯೇ ಎಂದು ಸಂಶಯ ಬರುತ್ತದೆ. ‘ ನೇಸರ ನೋಡು’, ಕಾಕನಕೋಟೆಯ ಹಾಡು, ಸಲೀಲ್ ಚೌಧರಿ ಸಂಗೀತವನ್ನು ನೆನಪಿಸುತ್ತದೆ.

ನನ್ನ ಪ್ರಕಾರ ಸಿ ಅಶ್ವಥ್ ಸ್ವರಸಂಯೋಜಿತ ಹಾಡುಗಳನ್ನು ಸಿ ಅಶ್ವಥ್ ಬಾಯಿಂದ ಕೇಳಿದರೇ ಇನ್ನೂ ಹೆಚ್ಚು ಸೊಗಸು. ರಾಜ್ ಮತ್ತು ಎಸ್ಪಿ ಬಾಲಸುಬ್ರಮಣ್ಯಂ ಅದಕ್ಕೆ ಅಪವಾದವೇನೋ? ‘ನಮ್ಮೂರ ಮಂದಾರ ಹೂವೇ’ ಎಸ್ ಪಿ ಬಿ ಯನ್ನಲ್ಲದೇ ಬೇರೆಯವರನ್ನು ಊಹಿಸಿ ನೋಡಿ; ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’ ರಾಜ್ ಹೊರತು ಇನ್ನೊಬ್ಬರು ಆ ಭಾವತುಂಬಿ ಹಾಡಿಯಾರೇ? ಶಿವಮೊಗ್ಗ ಸುಬ್ಬಣ್ಣ, ಯಶವಂತ್ ಹಳಬಂಡಿ, ರತ್ನಮಾಲಾ ಪ್ರಕಾಶ್, ಸಂಗೀತಾ ಕಟ್ಟಿ ಕೂಡ ನ್ಯಾಯ ಒದಗಿಸಿದ್ದಾರೆ. ಉಳಿದ ಹಾಡುಗಾರರು ಸಿ ಅಶ್ವಥ್ ಸಂಗೀತಕ್ಕೆ ಭಾವತುಂಬಿ ಹಾಡನ್ನು ಯಶಸ್ವಿಯಾಗಿಸುವಲ್ಲಿ ವಿಫಲರಾಗಿದ್ದಾರೆ.

ಸಿ ಅಶ್ವಥ್ ಹಾಡುಗಾರನಾಗಿ ಬಹಳ ಜನರಿಗೆ ಇಷ್ಟವಾಗದೇ ಇರಬಹುದು, ಅದರಲ್ಲೂ ಹಾಡುಗಳಲ್ಲಿರುವ ಸಾಹಿತ್ಯ ಅರ್ಥವಾಗದವರಿಗೆ ಸಿ ಅಶ್ವಥ್ ಕೂಗಿದಂತೆ ಕೇಳಿದರೂ ಅಚ್ಚರಿಪಡಬೇಕಿಲ್ಲ. ಸಾಹಿತ್ಯದ ರುಚಿಯಿರುವವರಿಗೆ ಮಾತ್ರ ಸಿ ಅಶ್ವಥ್ ಹಾಗೇಕೆ ಹಾಡುತ್ತಾರೆಯೆಂದು ಅರ್ಥವಾಗುತ್ತದೆ ಮತ್ತು ಪ್ರತಿ ಶಬ್ದಗಳ, ಸಾಲುಗಳ ಹೊಸ ಅರ್ಥಗಳನ್ನು ಹುಡುಕಲು ಅವರ ಹಾಡುಗಾರಿಕೆ ನೆರವಾಗುತ್ತದೆ.

ಆದರೂ ಅವರು ಅಷ್ಟು ವರ್ಷದಿಂದ ಹಾಡುತ್ತಿದ್ದರೂ ಉತ್ತರಕರ್ನಾಟಕದ ‘ಅ’ ಅನ್ನು ‘ಆ’ ಎಂದು ಹೇಳುವುದನ್ನು ಬಿಡಲಿಲ್ಲ ಎನ್ನುವುದು ಆಶ್ಚರ್ಯ (ಉದಾ: ಬೇಂದ್ರೆಯವರ ‘ಹೊಸದ್ವೀಪಗಳಿಗೆ ಹೊರಟಾನs ಬನ್ನಿ’, ಅಶ್ವಥ್ ರ ಬಾಯಲ್ಲಿ ‘ಹೊಸದ್ವೀಪಗಳಿಗೆ ಹೊರಟಾನಾs ಬನ್ನಿ’ ಆಗಿತ್ತದೆ). ಇದನ್ನು ಯಾಕೆ ಯಾರೂ ಅವರಿಗೆ ಹೇಳಲಿಲ್ಲವೋ ನಾ ಕಾಣೆ.

ಅಶ್ವಥ್ ಸುಗಮಸಂಗೀತದ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ. ಪುಸ್ತಕ ಅವರ ಸಂಗೀತದಷ್ಟು ಇಷ್ಟವಾಗುವಿದಿಲ್ಲವಾದರೂ ಕನ್ನಡ ಸುಗಮಸಂಗೀತದ ಬಗ್ಗೆ ಅವರ ನಿಲುವನ್ನು ತೋರಿಸುತ್ತದೆ. ಆ ಪುಸ್ತಕದಲ್ಲಿ ಸುಗಮಸಂಗೀತದಲ್ಲಿ interlude ಬಗ್ಗೆ ಸಿ ಅಶ್ವಥ್ ನಿಲುವು ಏನೇ ಇರಬಹುದು, ಆದರೆ ಚಲನಚಿತ್ರ ಸಂಗೀತದಂತೆ ಸುಗಮಸಂಗೀತದಲ್ಲಾಗಲೀ, ಭಕ್ತಿಗೀತೆಗಳಲ್ಲಾಗಲೀ ಈ interlude ಅದೇಕೆ ಬರುತ್ತದೋ ನನಗೆ ಅರ್ಥವಾಗುವುದಿಲ್ಲ. ಸಿ ಅಶ್ವಥ್ ಪ್ರಕಾರ interlude ಹಾಡಿನ ಅರ್ಥವನ್ನು ಹೆಚ್ಚಿಸುತ್ತದೆ, ಆದರೆ ನನ್ನ ಪ್ರಕಾರ ಅದು ಹಾಡನ್ನು ಕೊಲ್ಲುತ್ತದೆ. Interlude ಹಾಡುಗಾರನಿಗೆ ಉಸಿರುತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕೇ ಹೊರತು, ಕೇಳುಗಾರನಿಗೆ ಹಾಡಿನ continuity ನೇ ಬಿಟ್ಟು ಹೋಗುವಂತಿರಬಾರದು. ಏಷ್ಟೊಂದು ಸಲ interludeನ ಸಮಯ ಹಾಡುಗಾರನ ಸಮಯಕ್ಕಿಂತ ಹೆಚ್ಚಾಗಿರುತ್ತದೆ. ಚಿತ್ರಗೀತೆಯಲ್ಲಾದರೆ interlude ಅನ್ನು ಕುಣಿತಕ್ಕೋ ಏನಕ್ಕೋ ಉಪಯೋಗಿಸಿಕೊಳ್ಳುತ್ತಾರೆ. ಕೆಲವು ಸಂಗೀತ ನಿರ್ದೇಶಕರು interludeಅನ್ನು ತಮ್ಮ ಪ್ರತಿಭೆ ಎಂದುಕೊಳ್ಳುತ್ತಾರೆ. ಸುಗಮಸಂಗೀತದ ಇನ್ನೊಂದು ಸಮಸ್ಯೆ ಹಾಡನ್ನು ೪-೬ ನಿಮಿಷ ಇರಲೇಬೇಕೆಂಬ ಅಲಿಖಿತ ನಿಮಯ; ಅದಕ್ಕಾಗಿ interludeಅನ್ನು ಹಿಗ್ಗಿಸುತ್ತಾರೆ ಅಥವಾ ಕವನದ ಕೆಲ ಸಾಲುಗಳನ್ನು ತಿನ್ನುತ್ತಾರೆ. ನನಗೆ ಇದೇಕೆ ಎಂದೇ ಅರ್ಥವಾಗಿಲ್ಲ.

ದೇವಗಿರಿ ಶಂಕರರಾವ್ ಜೋಷಿಯವರಲ್ಲಿ ಹಿಂದುಸ್ತಾನಿ ಸಂಗೀತ ಕಲಿತು, ರಂಗಭೂಮಿ ಸಂಗೀತದಲ್ಲಿ ಪಳಗಿ, ಜನಪದ ಸಂಗೀತ ಬೆರೆಸಿ ಕನ್ನಡ ಕಾವ್ಯಲೋಕವನ್ನು ಜನಸಾಮಾನ್ಯರಿಗೆ ತೋರಿಸಿದ ಸಿ ಅಶ್ವಥ್ ಕನ್ನಡ ಕಾವ್ಯ-ಸಂಗೀತ ಲೋಕದ ರಾಯಭಾರಿ. ಅಶ್ವಥ್ ಸ್ವರಸಂಯೋಜಕ, ಹಾಡುಗಾರರಷ್ಟೇ ಅಲ್ಲ, he was a great entertainer. ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ‘ಕನ್ನಡವೇ ಸತ್ಯ’ ಕಾರ್ಯಕ್ರಮಕ್ಕೆ ನೆರೆದ ಒಂದು ಲಕ್ಷ ಜನರೇ ನಿದರ್ಶನ.

ಸಿ ಅಶ್ವಥ್ ಇಲ್ಲದ ಕನ್ನಡ ಸುಗಮಸಂಗೀತ ಇನ್ನೂ ಮುಂದುವರೆದೀತೇ? ಹೇಳುವುದು ಕಷ್ಟ.

8 thoughts on “ಸಿ ಅಶ್ವಥ್ ಎಂಬ ಭಾವಸಂಗೀತಗಾರ – ಕೇಶವ ಕುಲಕರ್ಣಿ

  1. ಕೇಶವ ಅವರ ಈ ಲೇಖನ ತುಂಬಾ ಸೊಗಸಾಗಿದೆ. ನನ್ನ ಅಭಿನಂದನೆಗಳು.
    ಕೇಶವ ಹೇಳುವಂತೆ ಸಿ ಅಶ್ವಥ್ ಮೇಧಾವಿ ಸ್ವರ ಸಂಯೋಜಕ. ಅವರು ಸ್ವರ ಸಂಯೋಜಿಸಿರುವ ಹಾಡುಗಳನ್ನು ಬೇರೆ ಗಾಯಕರು ಹೇಳಿದಾಗ ನಮಗೆ ಎಷ್ಟು ಇಂಪಾಗಿ ಹಾಗೂ ಭಾವಗೀತೆಯ ಭಾವ ಮನಸ್ಸಿಗೆ ಹಿಡಿಯುತ್ತೋ ಅದು ಸ್ವತಃ ಸಿ ಅಶ್ವಥ್ ಅವರೇ ಹಾಡಿದಾಗ ಅನ್ನಿಸುವುದಿಲ್ಲ. ಬಹಳಷ್ಟು ಹಾಡುಗಳಲ್ಲಿ ಅವರು ಕಿರುಚುತ್ತಿದ್ದಾರೆ ಅನ್ನಿಸಿದರೆ ಇನ್ನು ಕೆಲವು ಸಲ ಭಾವವೇ ಇಲ್ಲದೆ ಹಾಡುತ್ತಿದ್ದಾರೆ ಅನ್ನಿಸುತ್ತದೆ.
    ಹೌದು ಸಿ ಅಶ್ವಥ್ ಅವರ ಸಾವು ಕನ್ನಡ ಸುಗಮ ಸಂಗೀತಕ್ಕೆ ತುಂಬಲಾರದ ನಷ್ಟ. ಒಂದು ಹೆಮ್ಮರದ ಕೆಳಗೆ ಬೆಳೆಯಲು ಕಷ್ಟ ಪಡುತ್ತಿರವ ಸಸಿ/ಗಿಡಗಳು ಆ ಹೆಮ್ಮರ ಬಿದ್ದಾಗ ಬೆಳೆದು ಇನ್ನೊದು ಹೆಮ್ಮರ ಆಗಬಲ್ಲದು. ಅದೇ ರೀತಿ ಇನ್ನೊಂದು ಪ್ರತಿಭೆ ಅಥವಾ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರಲಿ ಹಾಗೂ ತಮ್ಮದೇ ಶೈಲಿಯ ಸುಗಮ ಸಂಗೀತ ನಮಗೆ ಕೊಡಲಿ ಅಂತ ಪ್ರಾರ್ಥಿಸೋಣ.

    ಆನಂದ

    Like

  2. ಲೇಖನ ಬಹಳ ಸೊಗಸಾಗಿ ಮೂಡಿಬಂದಿದೆ. ಕೇಶವ್ ಹೆಸರಿಸಿರುವ ಕೆಲವು ಹಾಡುಗಳನ್ನ ನಾನು ಕೇಳಿಲ್ಲ.. ನನ್ನ list ಗೆ ಸೇರಿಸಿಕೊಂಡಿರುವೆ 🙂

    ಅಶ್ವಥ್ ಅವರ ಸಂಗೀತ ಸಂಯೋಜನೆಯನ್ನು ಬಹಳ ಮೆಚ್ಚುತ್ತೇನೆ. ಮೇಧಾವಿ ಸಂಗೀತ ಸಂಯೋಜಕ ಅನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅವರ ಗಾಯನ ನನಗೆ ಅಷ್ಟು ರುಚಿಸದು!

    ಇಂಥ ಒಂದು ಉತ್ತಮ ಅವಲೋಕನವನ್ನ ನಮಗೆ ಓದಲು ಅವಕಾಶ ಮಾಡಿಕೊಟ್ಟ ಕೇಶವ್ ಗೆ ಧನ್ಯವಾದಗಳು

    Like

  3. ಕನ್ನಡದ ಸುಗಮ ಸಂಗೀತಕ್ಕೆ ನೂತನ ಆಯಾಮವನ್ನೇ ನೀಡಿದ ಗಾಯಕ, ನಿರ್ದೇಶಕ, ಸಿ.ಅಶ್ವಥ್ ಅವರ ಹೆಸರನ್ನು ಮರೆಯಲು ಸಾಧ್ಯವೇ. ಕನ್ನಡಿಗರ ಮನಗಳಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿರುವ ಅಶ್ವಥ್ ಅವರು ೮೦ರ ದಶಕದಲ್ಲಿ ಒಂದು ಹೊಸ ಕ್ರಾಂತಿಯನ್ನೇ ಎಬ್ಬಿಸಿದ ಮಹಾನ್ ವ್ಯಕ್ತಿ. ಕೇಶವ್ ಅವರು ಲೇಖನದಲ್ಲಿ ಉಲ್ಲೇಖಿಸಿರುವಂತೆ, ನಮ್ಮ ನಾಡಿನ ನೆಚ್ಚಿನ ಕವಿವರ್ಯರ ಕವನಗಳನ್ನು ಸಾಮಾನ್ಯರಿಗೆ ತಲುಪಿಸಿದ ಕಲಾವಿದ. ಅವರ ಜೀವನದ ಸಾಧನೆಗಳನ್ನು ಕೇಶವ್ ತಮ್ಮ ಲೇಖನದಲ್ಲಿ ಚೊಕ್ಕವಾಗಿ ಕ್ರೋಢೀಕರಿಸಿ, ನಮ್ಮ ಮನದ ನೆನಪುಗಳನ್ನು ಮತ್ತೊಮ್ಮೆ ತಾಜಾಗೊಳಿಸಿದ್ದಕ್ಕೆ ನನ್ನ ಧನ್ಯವಾದಗಳು. ಅವರ ನಿಧನದ ೫ನೆಯ ಪುಣ್ಯ ತಿಥಿಯಂದು ಅವರಿಗೆ ಸಲ್ಲಿಸಿರುವ ನಿಜವಾದ ಭಾವಪೂರ್ಣ ಶ್ರದ್ಧಾಂಜಲಿ ಇದು.
    ಉಮಾ ವೆಂಕಟೇಶ್

    Like

  4. ನನ್ನ ಸಮಕಾಲೀನ ೧೯೬೦-೭೦ರ ಸಮಯದಲ್ಲಿಈ ದೇಶಕ್ಕೆ ಬಂದ ಅನೇಕ ಹಿರಿಯ ಕನ್ನಡಬಳಗದ ಸದಸ್ಯರುಗಳು, ಬಂದ ಹೊಸದರಲ್ಲಿ ಈ ಆಂಗ್ಲದೇಶದಲ್ಲಿ ತಮ್ಮ ಹುದ್ದೆ, ಉನ್ನತ ಶಿಕ್ಷಣ ಮತ್ತು ತಮ್ಮ ಸಂಸಾರದ ನಿರ್ವಹಣೆಯಲ್ಲೇ ಹತ್ತಾರು ವರ್ಷಗಳನ್ನು ಕಳೆಯಬೇಕಾಯಿತು. ಅಂದು ಸ್ಯಾಟಲೈಟ್ ದೂರದರ್ಶಿಣಿ, ಅಂತರಜಾಲೆ ಮತ್ತು ಸಂಚಾರಿದೂರವಾಣಿಗಳ ಪೂರ್ವಕಾಲ. ಅದೂ ಅಲ್ಲದೆ ವಿಮಾನಯಾನ ಬಹುದುಬಾರಿಯಾಗಿ ಸಿಲುಕಲಾರದಾಗಿದ್ದಿತು. ಆದುದರಿಂದ ಐದು ಅಥವ ಆರು ವರ್ಷಗಳಷ್ಟು ಕರ್ನಾಟಕಕ್ಕೆ ಹೋಗಲಾಗುತ್ತಿರಲಿಲ್ಲ. ಇದರಿಂದ ಕರ್ನಾಟಕದ ರಾಜಕೀಯ, ಸಂಗೀತ, ಸಾಹಿತ್ಯದ ಮುನ್ನಡೆಗಳ ಅರಿವು ನಮಗೆ ಅಷ್ಟು ಇರಲಿಲ್ಲ. ೧೯೮೮ರಲ್ಲಿ ಕನ್ನಡಬಳಗ ಮೊಟ್ಟಮೊದಲ ವಿಶ್ವಕನ್ನಡಿಗರ ಸಮ್ಮೇಳನವನ್ನು ಕರ್ನಾಟಕದ ಹೊರಗಡೆ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿತು. ಆಗ ಮೊಟ್ಟಮೊದಲು ಸಿ. ಅಶ್ವಥ್ ಅವರನ್ನು ಭೇಟಿಯಾಗಿ ಅವರ ಸುಗಮ ಸಂಗೀತವನ್ನು ಕೇಳುವ ಸುಯೋಗವು ಒದಗಿತು. ಆದರೂ ಅವರ ಮತ್ತು ಇನ್ನಿತರ ಸಮಕಾಲೀನ ಕಲಾಕಾರರ ವಿಷಯ ಮತ್ತು ಅವರ ಪ್ರತಿಭೆಗಳು ನಮಗೆ ಅಷ್ಟು ಸವಿಸ್ತರವಾಗಿ ತಿಳಿಯಲಿಲ್ಲ. ೨೦೦೦ನೇಯ ಇಸವಿಯ ನಂತರವೇ ಮೊದಲು ಹೇಳಿದ ಆಧುನಿಕ ಸಂಪರ್ಕ ಸೌಲಭ್ಯಗಳು ದೊರೆತುದರಿಂದ ನಮಗೆ ಕರ್ನಾಟಕದ ಸಂಗೀತ, ಸಾಹಿತ್ಯ ಮತ್ತು ಇತರ ವಲಯಗಳ ವಿಷಯ ಚರಿತ್ರೆಗಳು ಅರಿವಾದವು. ಆದರೂ ಪ್ರಪಂಚದ ಅದರಲ್ಲೂ ಕರ್ನಾಟಕದ ಆಗುಹೋಗುಗಳ ವಿಷಯಗಳನ್ನು ಅನೇಕ ವರ್ಷಗಳಕಾಲ ತಿಳಿಯದೇಹೋಗಿದ್ದೇವೆ. ಕೇಶವ ಕುಲಕರ್ಣಿಯವರ ಈ ಲೇಖನದಿಂದ ಸಿ. ಅಶ್ವಥ್ ಅವರ ವಿಚಾರ ತಿಳಿಯಿತು. ಹೀಗೆಯೇ ಅವರಿಂದ ಇನ್ನೂ ಅನೇಕ, ನಮಗೆ ಕೈತಪ್ಪಿದ ಕರ್ನಾಟಕದ ಮಹನೀಯರ ವಿಷಯಗಳನ್ನೊಳಗೊಂಡ ಲೇಖನಗಳು ಬರಲಿ.
    –ರಾಜಾರಾಮ ಕಾವಳೆ.

    Like

    • ಜನ್ಮದಿನ-ಪುಣ್ಯತಿಥಿ ನೆಪದಲ್ಲಿ ಇದು ಬರೀ ಒಂದು hagiography ಅಲ್ಲ. ಕೇಶವ ಅವರು ಈ ತುಲನಾತ್ಮಕ ಅವಲೋಕನದಲ್ಲಿ ದಿ. ಅಶ್ವಥ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವದರೊಡನೆ ಕನ್ನಡ ಸುಗಮ ಸಂಗೀತದ ನಕ್ಷೆಯನ್ನೂ ಬರೆದಿದ್ದಾರೆ. ವಿವಿಧ ಸಂಗೀತ ಪ್ರಕಾರಗಳಲ್ಲಿ (genre) ಕೇಶವ ಅವರಿಗಿರುವ ಆಸ್ಥೆಯ ಪರಿಚಯವಾಗುತ್ತದೆ. ರಾಜಾರಾಮ್ ಕಾವಳೆ ಬರೆದಂತೆ ೧೯೮೮ರವರೆಗೆ ನನಗೂ ಈ ಸುಗಮ ಸಂಗೀತದ ಕ್ರಾಂತಿಯ ಝಳ ಹತ್ತಿರಲಿಲ್ಲ. ಕಳೆದ ಎರಡು ಮೂರು ದಶಕದಲ್ಲಿ ಅವರ ಪ್ರತಿಭೆಯ ಪರಿಚಯವಾಗಿ ಬೆರಗಾಗಿದ್ದೇನೆ. ಕೇಶವ ಅವರು ಅಶ್ವತ್ಥರನ್ನು ಆಳವಾಗಿ ಅಭ್ಯಯಿಸಿದ್ದಾರೆಂದಾಯಿತು. ಕವಿಗಳ ಶಬ್ದಕ್ಕೆ ವಿವಿಧ ಗಾಯಕರು ಭಾವ ತುಂಬುವದರ ಬಗ್ಗೆ ಬರೆಯುವಾಗ ಅವರಲ್ಲಿಯ ಕವಿ ಭಾವಪರವಶನಾಗುತ್ತಾನೆ! ಅವರಂತೆಯೇ ಹಾಡುಗಳಲ್ಲಿಯ ಸುದೀರ್ಘ interlude ಗೆ ನಾನೂ ರೇಗಿದ್ದೇನೆ. ಅಶ್ವತ್ಥರ ಹಾಡಿಗೆ ಅವರೊಂದಿಗೆ ನನ್ನದೂ ಚಪ್ಪಾಳೆ; ಅವರ ತಕರಾರಿಗೆ (ಧಾರವಾಡ ಕನ್ನಡದ ಅ-ಆ, ನಽ -ನಾಽ) ನನ್ನದೂ ದನಿ ಕೂಡಿದೆ! ಇದು ಮತ್ತೆ ಮತ್ತೆ ಓದುವಂಥ ಲೇಖನ.

      Like

  5. ಕೇಶವರಿಗೂ ಶಿಶುನಾಳರಿಗೂ ಬಾದರಾಯಣ ಸಂಬಂಧ ಇರುವುದು ತಿಳಿದು ಸಂತೋಷವಾಯ್ತು. ನಿಜಕ್ಕೂ ಅಶ್ವತ್ ಅವರ ಬಗೆಗಿನ ನಿಮ್ಮ ಲೇಖನ ಓದಿ ಬಹಳ ಅಭಿಮಾನ ಮೂಡಿತು.
    ಅಶ್ವತ್ ಅವರ ಸುಗಮ ಸಂಗೀತ ಕೇಳುತ್ತಿದ್ದೇನೆ ಹೊರತು ಅದರ ವಿಮರ್ಷೆಯ ಬಗೆಗೆ ಅಷ್ಟು ತಲೆ ಹಾಕಿರಲಿಲ್ಲ. ನಿಮ್ಮಿಂದ ಹಲವಾರು ಸಂಗೀತದ ಒಳಸುಳಿಗಳು ತಿಳಿದಂತಾಯಿತು. ಕೆಲವು ಹಾಡುಗಳು ಅಷ್ಟು ಸೊಗಸಾಗಿಲ್ಲದಿದ್ದರೂ ಅವರ ಬಹುತೇಕ ಹಾಡುಗಳು ಗುಂಗು ಹಿಡಿಸುವಂಥಹವೇ.
    ಅವರ ನಿಧನಾನಂತರದಲ್ಲಿ ಕನ್ನಡ ಸುಗಮ ಸಂಗೀತ ನಿಂತ ನೀರಾಗಿರುವುದು ಖೇದಕರ. ಎಲ್ಲಾ ಗಾಯಕ ಗಾಯಕಿಯರು ಹಳೆಯದನ್ನೇ ಹಾಡುವಲ್ಲಿ ಸಂತೃಪ್ತರಾಗಿಬಿಟ್ಟಿದ್ದಾರೆ. ಹೊಸ ಗೀತೆಗಳಿಗೆ ಸೂಕ್ತ ರಾಗ ಹಾಕುವ ಪ್ರತಿಭೆಯೇ ಇಲ್ಲದಂತಾಗಿದ್ದು, ಈ ಫ್ಯೂಶನ್ ಎಂಬ ಕನ್ಫಫ್ಯುಸಿಂಗ್ ಪರಿಕಲ್ಪನೆ ಆವರಿಸಿಕೊಳ್ಳುತ್ತಿರುವುದು ಸುಗಮ ಸಂಗಿತದ ವಿಕಾಸಕ್ಕೆ ಪೂರಕವಾಗಿಲ್ಲ.
    ಕನ್ನಡ ಬಳಗದ ಕಾರ್ಯಕ್ರಮದಲ್ಲಿ ಪ್ರವೀಣ ರಾವ್ ಅವರ ಕರ್ಕಶ ಸಂಗೀತ ಗೋಷ್ಠಿ ಇದಕ್ಕೆ ಸಾಕ್ಷಿಯಾಯಿತು.

    Like

Leave a comment

This site uses Akismet to reduce spam. Learn how your comment data is processed.