ನನ್ನೂರು ಬೆಂಗಳೂರು – ಅನ್ನಪೂರ್ಣಾ ಆನಂದ್

ನನ್ನ ಜೀವನದ ಸುಮಾರು 28 ವಸಂತಗಳನ್ನು ಕಳೆದಿರುವ ಈ ಊರು, ನಿಸ್ಸಂದೇಹವಾಗಿ ನನ್ನೂರೆಂದು ಹೇಳಬಹುದು. ಬೇಸಿಗೆ ರಜೆಯಲ್ಲಿ ಒಮ್ಮೊಮ್ಮೆ ಮೈಸೂರಿಗೆ ಹೋಗಿದ್ದನ್ನು ಬಿಟ್ಟರೆ, ಬೆಂಗಳೂರಿಂದ ಒಂದು ಹೆಜ್ಜೆ ಆ ಕಡೆ ಈ ಕಡೆ ಇಡದೆ ಬೆಳೆದವಳು ನಾನು. ಓದು ಮುಗಿಯುವವರೆಗೂ ಮಲ್ಲೇಶ್ವರ, ಮಜೆಸ್ಟಿಕ್, ಎಮ್.ಜಿ.ರೋಡ್ ಮತ್ತು ಕಮೆರ್ಶಿಯಲ್ ಸ್ಟ್ರೀಟ್ ನನ್ನ ಪ್ರಪಂಚವಾಗಿತ್ತು. ಮದುವೆಯಾದ ನಂತರವೇ ನನಗೆ ದಕ್ಷಿಣ ಬೆಂಗಳೂರಿನ ಪರಿಚಯವಾಗಿದ್ದು! ಈಗಲೂ ಬೆಂಗಳೂರು ಅಂದ ತಕ್ಷಣ ಕಣ್ಮುಂದೆ ಬರುವುದು ನಾನು ಬೆಳೆದ ಮಲ್ಲೇಶ್ವರದ 2ನೇ ಅಡ್ಡರಸ್ತೆ, ಗುಲ್ ಮೊಹರ್ ಮರಗಳಿಂದ ತುಂಬಿದ್ದ ಸಂಪಿಗೆ ಮತ್ತು ಮಾರ್ಗೊಸ ರಸ್ತೆಗಳು. (ಈಗ ಬೆಂಗಳೂರಿನಲ್ಲಿ ಗುಲ್ ಮೊಹರ್ ಕಾಣೋದೇ ಕಡಿಮೆ!)

cc-Wiki
ಸ್ಯಾಂಕಿ ಟ್ಯಾಂಕು

ಮಲ್ಲೇಶ್ವರ – ಸಂಪಿಗೆ ರೋಡಿನ ಇಕ್ಕೆಲಗಳಲ್ಲೂ, ಲಿಂಕ್ ರೋಡಿಂದ ಮಾರ್ಗೋಸಾ ರೋಡಿನವರೆಗೂ, ೧ನೇ ಅಡ್ಡರಸ್ತೆಯಿಂದ ೧೮ನೇ ಅಡ್ಡರಸ್ತೆಯವರೆಗೆ ಬೆಳೆದ ಒಂದು ಬಡಾವಣೆ. ವಿಶಾಲ ಮನೆಗಳಿದ್ದ ಈ ಬಡಾವಣೆ ಒಂದು ರೀತಿಯಲ್ಲಿ self-contained ಆಗಿತ್ತು. ೮ನೇ ಮತ್ತು ೧೫ನೆ ಅಡ್ಡರಸ್ತೆಯಲ್ಲಿದ್ದ ತರಕಾರಿ ಮಾರ್ಕೆಟ್ಗಳು, ಗಣಪತಿ, ಕನ್ಯಕಾಪರಮೇಶ್ವರಿ, ಕೃಷ್ಣ ಮತ್ತು ಕಾಡುಮಲ್ಲೇಶ್ವರ ದೇವಾಲಯಗಳು, ರಾಮಮಂದಿರದಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳು, ಉಪನ್ಯಾಸಗಳು, gymkhana (ಪ್ರಕಾಶ್ ಪಡುಕೋಣೆ ಇಲ್ಲಿ ಬ್ಯಾಡ್ಮಿಂಟನ್ ಆಡಲು ಬರುತ್ತಿದ್ದರು), ಸಂಪಿಗೆ, ಸವಿತಾ, ಗೀತಾಂಜಲಿ ಸಿನಿಮಾ ಮಂದಿರಗಳು, ಹಲವಾರು ಮದುವೆ ಮಂಟಪಗಳು, ಉತ್ತಮ ಶಾಲಾ ಕಾಲೇಜುಗಳು, IISc ಯಂಥಾ ಪ್ರತಿಷ್ಟಿತ ಸಂಸ್ಥೆ , NKB , CTR , ಜನತಾ ಹೋಟೆಲ್ ಗಳು, ಆಸ್ಪತ್ರೆಗಳು, ಪಾರ್ಕುಗಳು, Sankey ಟ್ಯಾಂಕ್ ನ ಪ್ರಶಾಂತ ಕೆರೆ… ಇಲ್ಲಿದ್ದವರು ಬೆಂಗಳೂರಿನ  ಬೇರೆ ಕಡೆಗಳಿಗೆ ಏನಕ್ಕೂ ಹೋಗೋ ಪ್ರಮೇಯವೇ ಇರಲಿಲ್ಲ!  ಹಬ್ಬ ಹರಿದಿನಗಳಲ್ಲಂತೂ ಇಲ್ಲಿಯ ಸಂಭ್ರಮ ನೂರ್ಮಡಿಸುತ್ತಿತ್ತು. ೧ನೇ ಅಡ್ಡರಸ್ತೆಯಿಂದ ೧೮ನೇ ಅಡ್ಡರಸ್ತೆಯವರೆಗೆ ಒಂದು ಸಾರಿ ನಡೆದು ಹೋದರೆ ಸಾಕು, ಮಲ್ಲೇಶ್ವರದ ಆ ವೈವಿಧ್ಯಮಯ ಬೆಡಗಿನ ಅನುಭವವಾಗಲು! ಮಲ್ಲೇಶ್ವರ ಈಗ ಬಹಳ ಬದಲಾಯಿಸಿದೆ ಆದರೂ ಅದರ ವೈವಿಧ್ಯತೆಯನ್ನ ಉಳಿಸಿಕೊಂಡಿದೆ. ಈಗಲೂ ಮಲ್ಲೇಶ್ವರ ಅಂದರೆ ಸಾಕು ನನ್ನ ಎದೆ ಹಕ್ಕಿಯಂತೆ ಹಾರಿ ಒಂದು ಸುತ್ತುಹೊಡೆದು ಬರತ್ತೆ.

ಬಾಲ್ಯದಲ್ಲಿ ಕಬ್ಬನ್ ಪಾರ್ಕಿಗೆ ಬಹಳ ಹೋಗುತ್ತಿದ್ದೆವು (ನಾನು, ನನ್ನ ತಮ್ಮ ಮತ್ತು ತಂಗಿ).. ಪುಟಾಣಿ ರೈಲ್ ನಲ್ಲಿ ಒಂದು ಸುತ್ತು ಹಾಕಿ,

cc-Wiki
ಕಬ್ಬನ್ ಪಾರ್ಕ್

ಕಾಟನ್ ಕ್ಯಾಂಡಿ ತಿಂದು ಕೈಬಾಯ್ ಅಂಟು ಮಾಡಿಕೊಂಡು, ಐಸ್ ಕ್ಯಾಂಡಿ ಚೀಪುತ್ತಾ, ವಿಧಾನಸೌಧದ ಬೆಳಕಿನ ಬೆಡಗಿಗೆ ಮಾರುಹೋಗುತ್ತಾ ಆಟೋ ಹತ್ತಿ ಮನೆ ಸೇರುತ್ತಿದ್ದೆವು. ಬಾಲಭವನದಲ್ಲಿ ನನ್ನ ನೃತ್ಯಶಾಲೆಯಿಂದ ಪ್ರದರ್ಶಿಸಿದ ‘ತಿರುಕನ ಕನಸು’ ‘ಕರಿಭಂಟನ ಕಾಳಗ’ ‘ಲವ ಕುಶ’ ಇನ್ನೂ ಜ್ನಾಪಕದಲ್ಲಿದೆ.

ಲಾಲ್ ಬಾಗ್ ನಮ್ಮ ಇನ್ನೊಂದು ನೆಚ್ಚಿನ ತಾಣ! ಪ್ರತಿವರುಷ ಹೂವಿನ ಪ್ರದರ್ಶನಕ್ಕೆ ತಪ್ಪದೆ ಹೋಗುತ್ತಿದ್ದೆವು. ಬಣ್ಣ ಬಣ್ಣ ದ ಗುಲಾಬಿ, ಡೇರ, ಕ್ಯಾನ, ಚೆಂಡುಹೂವು ಹೀಗೆ ಮುಂತಾದ ಹೂವುಗಳ ವಿನ್ಯಾಸದೊಂದಿಗೆ ಭೂತಾಕಾರದ ಕ್ಯಾಕ್ಟಸ್ ಗಿಡಗಳು ಮನ ಸೆಳೆಯುತ್ತಿದ್ದವು. ಜೊತೆಗೆ

cc-Wiki
ಲಾಲ್ ಬಾಗ್

ವಿವಿಧ ತರಕಾರಿ ಗಿಡಗಳು, ತರಹಾವರಿಯ ವಿನ್ಯಾಸಗಳು ವಿಸ್ಮಯಗೊಳಿಸುತ್ತಿದ್ದವು! ಇದರೂಂದಿಗೆ ಅಲ್ಲಿದ್ದ ಜಿಂಕೆ ಹಿಂಡಿಗೆ ಕಡ್ಲೇಕಾಯಿ ತಿನ್ನಿಸುವ ಸಂಭ್ರಮಬೇರೆ! ನನ್ನ ತಾಯಿ ಚಿಕ್ಕವರಿದ್ದಾಗ ಹುಲಿ ಸಿಂಹ ಕೂಡ ಇತ್ತಂತೆ! ನಮ್ಮ ಕಾಲಕ್ಕೆ ಬರೀ ಜಿಂಕೆ ಗಿಣಿಗಳಿದ್ದವು, ಈಗ ಅದೂ ಇಲ್ಲ !

ಕ್ರಿಸ್ ಮಸ್ ಸಮಯದಲ್ಲಿ ನೀಲಗಿರೀಸ್ ಬೇಕರಿಯವರು ನಡೆಸುತ್ತಿದ್ದ ಕೇಕ್ ಶೋ ನಮ್ಮಗೆಲ್ಲಾ ಅಚ್ಚುಮೆಚ್ಚು! ಮೈಸೂರು ಅರಮನೆ, ವಿಧಾನಸೌಧ ಮತ್ತಿತರ ವಿನ್ಯಾಸಗಳನ್ನ ಕೇಕ್ ನಲ್ಲಿ ಬಹಳ ನಾಜೂಕಾಗಿ ಮಾಡುತ್ತಿದ್ದರು. ಪ್ರದರ್ಶನ ನೋಡಿದಮೇಲೆ ಸಿಗುವ ಕೇಕ್ ಮೇಲೆ ನಮ್ಮ ಆಸಕ್ತಿ ಜಾಸ್ತಿ ಅಂತ ಬೇರೆಯಾಗಿ ಹೇಳೋ ಅವಶ್ಯಕತೆ ಇಲ್ಲ.

ಬಾಲ್ಯದ ನಮ್ಮ ಮತ್ತೊಂದು ಆಕರ್ಷಣೆ “ಸರ್ಕಸ್”! animal rights, animal cruelty ಎಲ್ಲ ಗೊತ್ತಾಗದ ಆ ಮುಗ್ಧ ವಯಸ್ಸಿನಲ್ಲಿ ಆನೆ ಚೆಂಡು ಒದೆಯುವುದು, ಸಿಂಹ ಚಂಗನೆಗರಿ ಸ್ಟೂಲ್ ಮೇಲೆ ನಿಲ್ಲುವುದು, ನೀರಾನೆ ಪೌಂಡ್ಗಟ್ಟಲೆ ಬ್ರೆಡ್ ತಿನ್ನೋದನ್ನ ಬಿಟ್ಟ ಬಾಯಿ ಬಿಟ್ಟ ಕಣ್ಣಿನಿಂದ ನೋಡುತಿದ್ದೆವು. ದುರಾದೃಷ್ಟವಶಾತ್ ಒಮ್ಮೆ ಬೆಂಕಿಯ ಅನಾಹುತವಾದಮೇಲೆ ಮತ್ತೆ ಸರ್ಕಸ್ ಬೆಂಗಳೂರಿಗೆ ಬರಲೇಯಿಲ್ಲ!

ಹರೆಯದ ದಿನಗಳಲ್ಲಿ ಬೆಂಗಳೂರು ನನಗೆ ಮತ್ತೊಂದು ಬಾಗಿಲು ತೆಗೆಯಿತು. ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಅವಕಾಶ. ಪ್ರತಿ ವರ್ಷ ರಾಮನವಮಿ ಪ್ರಯುಕ್ತ, ಶೇಷಾದ್ರಿಪುರಂ ಸ್ಕೂಲ್ ನಲ್ಲಿ ಹತ್ತು ದಿನ ಸಂಗೀತ ಕಚೇರಿ ನಡೆಯುತ್ತಿತ್ತು. ತಪ್ಪದೆ ನಾನು ಹೋಗುತ್ತಿದ್ದೆ. ಪಟ್ಟಮ್ಮಾಳ್, ಎಮ್.ಎಲ್.ವಿ, ಬಾಲಮುರಳಿ, ಯೇಸುದಾಸ್, ಕುನ್ನಕ್ಕುಡಿ, ಲಾಲ್ಗುಡಿ, ಚಿಟ್ಟಿಬಾಬು ಹೀಗೆ ಹಲವು ಹತ್ತಾರು ಘಟಾನುಘಟಿ ಸಂಗೀತಗಾರರ ಕಚೇರಿಗಳನ್ನ ನಿರಾಯಾಸವಾಗಿ ಕೇಳುವ ಅವಕಾಶ! ಮನೆಗೆ ಬರುತ್ತಿದ್ದ ಸುಧಾ/ಪ್ರಜಾಮತ ನನ್ನ ಸಾಹಿತ್ಯದ ಒಲವಿಗೆ ಕಾರಣವಾಯಿತು. ಮನೆಯ ಹತ್ತಿರದಲ್ಲೇ ಇದ್ದ Shankar’s ವಾಚನಾಲಯ ಈ ಒಲವನ್ನು ಹೆಮ್ಮರವಾಗಿ ಬೆಳೆಸಿತು. ಕಾಲೇಜ್ ಗೆ ಬಂದಮೇಲಂತೂ, ನಾನು ನನ್ನ ಗೆಳತಿ ರೇಖಾ ಅಲ್ಲಿದ್ದ ಮುಕ್ಕಾಲು ಭಾಗ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನ ಓದಿ ಮುಗಿಸಿದ್ದೆವು!. ಪ್ರತಿದಿನ ಸಾಯಂಕಾಲ 8th ಕ್ರಾಸ್ ವರೆಗೂ ಹರಟೆ ಹೊಡೆದುಕೊಂಡು ಹೋಗಿ ವಾಪಸ್ ಬರ್ತಿದ್ವಿ. “ದೇವರ ಮೇಲೆ ಹೂ ತಪ್ಪಿದರೂ ನೀವಿಬ್ಬರು 8th ಕ್ರಾಸ್ ಗೆ ಹೋಗೋದು ತಪ್ಪಲ್ಲ!” ಅಂತ ನಮ್ಮ ಮನೆಗಳಲ್ಲಿ ತಮಾಷೆ ಮಾಡ್ತಿದ್ದರು.  ದಾರಿಯಲ್ಲಿ ಕಾಲಕಾಲಕ್ಕೆ ಸಿಗುವ ಸೀಬೇಕಾಯಿ, ಹಲಸಿನ ಹಣ್ಣು, ಮಾವಿನಕಾಯಿ, ನಲ್ಲಿಕಾಯಿ, ನೇರಳೆ ನಮ್ಮ ಹೊಟ್ಟೆಸೇರುತ್ತಿತ್ತು.  ಹೀಗೆ ಹೋದಾಗ ಮನೆಗೆ ತರಕಾರಿ ಮತ್ತು ಬೇರೆ ಪದಾರ್ಥಗಳನ್ನು ತರುವ, ಲೈಬ್ರರಿಯಲ್ಲಿ ಪುಸ್ತಕ ಬದಲಾಯಿಸುವ ಕೆಲಸಗಳನ್ನೂ ಪೂರೈಸುತ್ತಿದ್ದೆವು. Exams ಇದ್ದರಂತೂ ಗಣಪತಿಗೆ pressure ಹಾಕಿ ಬರೋದಂತೂ ಗ್ಯಾರಂಟಿ.

ಸಿನಿಮಾ ಮಂದಿರಗಳ ಮಧ್ಯದಲ್ಲಿದ್ದ ನಾವು ಬಹಳಷ್ಟು ಕನ್ನಡ ಸಿನಿಮಾ ನೋಡಿದೀವಿ. “ಅಣ್ಣಾವ್ರ” ಸಿನಿಮಾ ಅಂತೂ ಖಂಡಿತ ತಪ್ಪಿಸುತ್ತಿರಲಿಲ್ಲ.. ವಿಷ್ಣುವರ್ಧನ, ಅನಂತ್ ನಾಗ್, ಶಂಕರ್ ನಾಗರಿಗೂ ಮೋಸ ಮಾಡ್ತಿರಲಿಲ್ಲ. ಬೆಂಗಳೂರಿಗೆ ಟಿ.ವಿ. ಬಂದು, ಹಿಂದಿಯ ಪ್ರಭಾವ ಬೀರಿದಮೇಲೆ, ಹಿಂದಿ ಸಿನಿಮಾಗಳು ನಮ್ಮ ಲಿಸ್ಟ್ ಗೆ ಸೇರಿದವು!

“woody’s” ಬೆಂಗಳೂರಿನ ಮೊಟ್ಟಮೊದಲ fastfood joint. American chopsey ಮೊಟ್ಟಮೊದಲ ದಿನ ತಿಂದಾಗ ಚಂದ್ರನನ್ನು ಮುಟ್ಟಿದ ಖುಷಿ! Chinese ಗೆ Rice Bowl, Ice Cream ಗೆ Lake View, rasmalai ಗೆ Anand sweets, Cake ಗೆ Sweet Chariot … ಬೆಂಗಳೂರಿನ eating joints ಮೇಲೇ, ಒಂದು ಲೇಖನ ಬರೀಬೇಕಾಗತ್ತೆ!   

ಮದುವೆಯ ನಂತರವೇ ನನಗೆ  ಗಿರಿನಗರ, ಗಾಂಧಿಬಜಾರ್, ಜಯನಗರದ ಪರಿಚಯವಾಗಿದ್ದು. ನವೆಂಬರ್, ಡಿಸೆಂಬರಿನ ಚುಮು ಚುಮು ಚಳಿಯಲ್ಲಿ ನಡೆಯುವ ಕಡ್ಲೆಕಾಯಿ ಪರಿಷೆ ಬಲ್ಲು ಚೆನ್ನ. ಹೊಸದಾಗಿ ಬೆಳೆದ ಕಡ್ಲೇಕಾಯಿ ಗುಡ್ಡೆಗಳು ಬುಲ್ ಟೆಂಪಲ್ ರೋಡಿನ ಇಕ್ಕೆಲದಲ್ಲಿ ರಾಶಿ ರಾಶಿ! ಬೆಂಡು, ಬತ್ತಾಸು, ಬಳೆ ಟೇಪು ಜಾತ್ರೆಯ ಒಂದು ವಾತಾವರಣವನ್ನ ಸೃಷ್ಟಿಸುತ್ತದೆ! ಬೆಂಗಳೂರು ಮಹಾನಗರದಲ್ಲಿ ಬೆಳೆದ ನನಗೆ ಇದೊಂದು ಮರೆಯಲಾಗದ ಅನುಭವ

ರಾಮಕೃಷ್ಣ ಆಶ್ರಮ ನನ್ನ ಮತ್ತೊಂದು ಫೇವರಿಟ್ ಜಾಗ!  ಗಾಂಧಿಬಜಾರಿನ ಆ ಜನಜಂಗುಳಿ, ಗಿಜಿ ಗಿಜಿಯಲ್ಲಿ ಇಂಥಾ ಒಂದು  ಪ್ರಶಾಂತ ಸ್ಥಳ ಇದೆಯೆಂದರೆ ನಂಬಲಸಾಧ್ಯ! ಅಲ್ಲಿ ನಡೆಯುವ ಭಜನೆ, discourse ಗಳು ಮನಸ್ಸಿಗೆ ಬಲುಹಿತ!

೧೧ ಘಂಟೆ ರಾತ್ರಿಯಲ್ಲಿ ವಿಶ್ವೇಶ್ವರಪುರಂ ಸರ್ಕಲ್ ನಲ್ಲಿ ಅಕ್ಕಿರೊಟ್ಟಿ ತಿಂದವರಿಗೆ ಗೊತ್ತು ಅದರ ಅನುಭವ! ನಾನು ಆನಂದ್ ನಮ್ಮ ಹೀರೋ ಹೋಂಡಾದಲ್ಲಿ ತಿರುಗದ ಬೀದಿಗಳಿಲ್ಲ, ತಿನ್ನದ ಜಾಗಗಳಿಲ್ಲ! “ತೆಂಗಿನ ಮರದ ಮೇಲೆ ಊಟ ಅಂದ್ರೆ ಕಟ್ಟು ಜನಿವಾರಕ್ಕೆ ಲೋಟ” ಅನ್ನೋಹಾಗೆ ಯಾರು ಎಲ್ಲಿ ಏನು ಚೆನ್ನಾಗಿದೆ ಅಂತಾರೋ next day ನಾವಲ್ಲಿ ಹಾಜರ್ J

ಹೀಗೆ, ಬೆಂಗಳೂರಿನ ಬಗ್ಗೆ ಹೇಳ್ತಾ ಹೋದ್ರೆ ಲಿಸ್ಟ್ ಮುಗಿಯಲ್ಲ! ಕರಗ, ವಿಶ್ವೇಶ್ವರಯ್ಯ museum, ಬುಗಲ್ ರಾಕ್, ISKON ಟೆಂಪಲ್, ಅಶೋಕ ಪಿಲ್ಲರ್, ರಾಗಿ ಗುಡ್ಡ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಜಯನಗರ ಕಾಂಪ್ಲೆಕ್ಸ್, ಡಿ.ವಿ.ಜಿ. ರೋಡ್, ರೆಸಾರ್ಟ್ಗಳು, ಮಾಲ್ ಗಳು, ಪಬ್ ಮತ್ತು ಕ್ಲಬ್ಗಳು, ಹೀಗೆ ಜನರ ಅಭಿರುಚಿಗೆ ತಕ್ಕಂತೆ ಜೀವನ ನಡೆಸುವ ಎಲ್ಲ ಸೌಕರ್ಯ ಇರೋ ವೈವಿಧ್ಯಮಯ ಬೆಡಗಿನ ನಗರ ಬೆಂಗಳೂರು.

cc-wiki
ಯು ಬಿ ಮಾಲ್

ಅಲ್ಲಿದ್ದ ನನ್ನ ಜೀವನದ ಪ್ರತಿ ಘಳಿಗೆಯಲ್ಲೂ ಬೆಂಗಳೂರು ಹಾಸುಹೊಕ್ಕಿದೆ. ನಿಜ, ಈಗ ಬೆಂಗಳೂರು ಬಹಳ  ಬದಲಾಗಿದೆ, ಮೊದಲಿನಂತಿಲ್ಲ… ಆದರೆ ಅದು ನಾ ಬೆಳೆದ ಊರು, ಹೇಗಿದ್ದರೂ ಅದು ನನ್ನೂರು. ಹೆತ್ತ ತಾಯಿಯಂತೆ ಸದಾ ನಾನು ಪ್ರೀತಿಸುವ ಊರು.

“ಅನಿವಾಸಿ” ಯಾಗಿರುವ ನಾನು ಮತ್ತೆ ಅಲ್ಲಿಯ ನಿವಾಸಿಯಾಗುವ ಹಂಬಲ ಸದಾ ನನ್ನ ಮನಸ್ಸಿನಲ್ಲಿದೆ

ನನ್ನ ಊರು ಬೆಂಗಳೂರು, ಆನಂದದ ತವರೂರು …:)

6 thoughts on “ನನ್ನೂರು ಬೆಂಗಳೂರು – ಅನ್ನಪೂರ್ಣಾ ಆನಂದ್

  1. ನಾನು ಬೆಂಗಳೂರಿನ N R Colony ಸರಕಾರೀ ಆಸ್ಪತ್ರೆಯಲ್ಲಿ ಹುಟ್ಟಿದರೂ ಬೆಳೆದಿದ್ದೆಲ್ಲ ಧಾರವಾಡ ಹರಿಹರದಲ್ಲಿ. ೧೯೮೧ ರಲ್ಲಿ PUC ಓದಲು ಎರಡು ವರ್ಷ ರಾಮಕೃಷ್ಣ ವಿಧ್ಯಾರ್ಥಿ ಮಂದಿರದಲ್ಲಿದ್ದೆ. ಹೌದು ಎಂಭತ್ತರ ದಶಕದಲ್ಲಿ ಬೆಂಗಳೂರು ಇನ್ನೂ ತಣ್ಣಗಿತ್ತು, ವಾಹನ ಸಂಚಾರ ಕಡಿಮೆ ಇತ್ತು (ಮಧ್ಯಾಹ್ನ ೨ ರಿಂದ ೪ BTS ಬಸ್ ಸಹ ಇರ್ತಾ ಇರಲಿಲ್ಲ), ನಾನು ಸೈಕಲ್ನಲ್ಲಿ MG Road, Brigade Road, ಮೆಜೆಸ್ಟಿಕ್ ಎಲ್ಲ ಒದ್ದಾಡ್ತಾ ಇದ್ದೆ. ಆದರೆ ಕೆಲಸಕ್ಕೆ ೧೯೮೮ ರಲ್ಲಿ ಬೆಂಗಳೂರಿಗೆ ಬಂದಾಗ ಸ್ವಲ್ಪ ಬದಲಾಗಿತ್ತು. ಈಗ ಇನ್ನೂ ಹೆಚ್ಚು ಬದಲಾಗಿದೆ. ಕೆಲವೊಂದು ಬಡಾವಣೆಗಳು ಬೆಂಗಳೂರಲ್ಲ ಕರ್ನಾಟಕದಲ್ಲೇ ಇಲ್ಲ ಅನ್ನೋ ಥರಹ ಇವೆ.
    ಆದರೂ ಕೆಲ ಹಳೆ ಬಡಾವಣೆಗಳಾದ ಗಾಧಿ ಬಜಾರ್, ಮಲ್ಲೇಶ್ವರಂ, ವಿಜಯನಗರ, ರಾಜಾಜಿನಗರ, ಜಯನಗರ N R Colony, ತ್ಯಾಗರಜನಗರ ಇತ್ಯಾದಿ ತಮ್ಮ ಮೂಲ ರೂಪವನ್ನು ಉಳಿಸಿಕೊಂಡಿವೆ ಅಂತ ಹೇಳಬಹುದು. ಈ ಬಹುತೇಕ ಬಡಾವಣೆಗಳಲ್ಲಿ ಕನ್ನಡ ಇನ್ನೂ ಕೇಳುತ್ತೆ. ಹೊಸ ಬಡಾವಣೆಗಳನ್ನ ಹೊಸ ಜನರನ್ನ ಹೊಸ ಅಪಾರ್ಟಮೆಂಟ್ ಸಂಸ್ಕೃತಿಯನ್ನ ಹೊಸ ತಿನಿಸುಗಳನ್ನ ಹೊಸ ಮಾಲ್ ಗಳನ್ನ ಹಾಗೆ ಇನ್ನೂ ಅನೇಕ ಹೊಸತುಗಳನ್ನ ನಮ್ಮ ಬೆಂಗಳೂರು ತನ್ನದಾಗಿಸಿಕೊಂಡಿದೆ. ಅದಕ್ಕೆ ಇದು cosmopolitan ನಗರ.
    ನಾವು ಅಮೇರಿಕಾದಲ್ಲಿ ಸ್ವಲ್ಪ ವರ್ಷ ಇದ್ದು ೧೯೯೯ ರಲ್ಲಿ ಬೆಂಗಳೂರಿಗೆ ಬಂದಾಗ ಈ ಹೊಸತನದ ಬೆಂಗಳೂರನ್ನ ಚೆನ್ನಾಗಿ ಆಸ್ವಾದಿಸಿದೀವಿ.
    ಪ್ರತೀ ಸರ್ತಿ ಬೆಂಗಳೂರಿಗೆ ಭೆಟ್ಟಿ ಕೊಟ್ಟಾಗ ಅಲ್ಲಿನ ಹೊಸ ಮಾಲ್ ಇರಬಹುರು ಇಲ್ಲ ಉತ್ತದ ಭಾರತದಿಂದ ಬಂದ ಹಿಂದಿಯವನ ಪಾನಿ ಪೂರಿ ಇರಬಹುದು, ನಾವು ಅದನ್ನ ನಮ್ಮ ಬೆಂಗಳೂರು ಅಂತಾನೆ ಅಂದುಕೊಂಡಿದೀವಿ.
    ಯಾರೇ ಬೈಯ್ಯಲಿ ಯಾರೇ ತೆಗಳಲಿ ಯಾರೇ ಏನೇ ಅನ್ನಲಿ ಬೆಂಗಳೂರು ಯಾವಾಗಲೂ ಬೆಂಗಳೂರೇ. ನಾವಾರೂ ಅಲ್ಲಿಗೋ ಹೋಗೋದನ್ನ ನಿಲ್ಲಿಸೋಲ್ಲ.

    Like

  2. ಅನ್ನಪೂರ್ಣಾ ಅವರ ಬೆಂಗಳೂರಿನ ಚಿತ್ರಣ ಸಚಿತ್ರಸಮೇತ ಸವಿಯಾಗಿ ಮೂಡಿ ಬಂದಿದೆ. ಬೆಂಗಳೂರಿನ ವಿರಾಟ್ ದರ್ಶನ ನನಗಾಗಿದ್ದು ನಾನು ಮೆಡಿಕಲ್ ಓದಲು ೮೯ ರಲ್ಲಿ ಬಂದಾಗಲೇ. ಅಲ್ಲಿಯವರೆಗೆ ರಜೆಗೆ ಬರುತ್ತಿದ್ದರೂ, ಹೆಚ್ಚು ಓಡಾಟ ಇರದೇ ವಿಜಯನಗರದ ಸುತ್ತ ನಮ್ಮ ಕಾರ್ಯ ಚಟುವಟಿಕೆಗಳು ವ್ಯಾಪಿಸಿದ್ದವು. ಇಂದಿಗೂ ನಾನು ಸ್ಯಾಂಕಿಕೆರೆಯೆಅ ಬಳಿ ಓಡಾಡಿಯೇ ಇಲ್ಲ. ನನ್ನ ಹೆಚ್ಚಿನ ವ್ಯವಹಾರ ನಂತರ ಬಸವನಗುಡಿ , ಕೆ ಆರ್ ಮಾರ್ಕೆಟ್ ಇಲ್ಲಿಯೇ ಹೆಚ್ಚು. ಮಲ್ಲೇಶ್ವರ ವೂ ಚೆನ್ನಾಗಿ ಪರಿಚಯ ಇದೆ-೧೮ನೇ ಕ್ರಾಸ್, ಮತ್ತು ಸಂಪಿಗೆ ರಸ್ತೆ ನನ್ನ ನೆಚ್ಚಿನ ತಾಣ. ನೆನಪಿನ ಸುರುಳಿಗಳನ್ನು ಬಿಚ್ಚಿಸಿದ್ದಕ್ಕೆ ಧನ್ಯವಾದಗಳು.
    ಉತ್ತರ ಬೆಂಗಳುರಿನಿಂದ ದಕ್ಷಿಣಕ್ಕೆ ಬಂದುದರಿಂದ ನೀವು ಆನಂದ್ ಅವರ ಜೊತೆ ‘’ ಉತ್ತರಧ್ರುವದಿಂ ದಕ್ಷಿಣ ಧ್ರುವಕೂ’’ ಎಂದೂ ಹಾಡಬಹುದು……. ಅಂದದೂರು ಬೆಂಗಳೂರು ,” ಆನಂದ”ರ .. ತವರೂರು” ಎಂದೂ ಹಾಡಬಹುದು.

    Like

  3. ಬೆಂಗಳೂರು ನಗರ ಕಂಡಿರುವ ದುರ್ಗತಿಯನ್ನು ಬಹುಶಃ ಇನ್ನಾವ ನಗರವೂ ಕಾಣಲಿಲ್ಲ ಅಂತ ನನ್ನ ಅನಿಸಿಕೆ. ಒಮ್ಮೆ ಉದ್ಯಾನೆ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ನಗರದ ಗತ ಕಾಲದ ವೈಭವ, ಇಂದು ಅನ್ನಪೂರ್ಣ ಮತ್ತು ಕಾವಳೆ ಅವರು ಬರೆದಿರುವ ಲೇಖನಗಳಲ್ಲಿ ಮಾತ್ರಾ ಕಂಡು ಸಂತೋಷಪಡುವ ಸ್ಥಿತಿ ಉಂಟಾಗಿದೆ. ನನ್ನ ತಂದೆ ೪೦ ರ ದಶಕದಲ್ಲಿ, ಇದೇ ಮಲ್ಲೇಶ್ವರಂ ಬಡಾವಣೆಯಲ್ಲಿ ಕಳೆದ ಸುಂದರ ದಿನಗಳ ಬಗ್ಗೆ ಇನ್ನೂ ನಮ್ಮ ಕೈಯಲ್ಲಿ ಹೇಳುತ್ತಿರುತ್ತಾರೆ. ಅನ್ನಪೂರ್ಣಾ ಅವರು ತಮ್ಮ ಬಾಲ್ಯದ ಸುಂದರ ಚಿತ್ರವನ್ನು ಸರಳವಾಗಿ ಚಿತ್ರಿಸಿದ್ದಾರೆ. ಅವರು ಲೇಖನದಲ್ಲಿ ಪ್ರಸ್ತಾಪಿಸಿರುವ ಜಾಗಗಳು ಇನ್ನೂ ಅನೇಕರ ಮನಸ್ಸಿನಲ್ಲಿ ಸುಂದರ ನೆನಪುಗಳಾಗಿಯೇ ಉಳಿದಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಇಂದು ಮಲ್ಲೇಶ್ವರಂ ಗತಿ ನೋಡಿದರೆ, ದುಃಖವಾಗುತ್ತದೆ. ಆದರೆ, ಅನ್ನಪೂರ್ಣಾ ಅವರ ಲೇಖನದಲ್ಲಿ ವ್ಯಕ್ತವಾಗಿರುವ ಆ ಸುಂದರ ಚಿತ್ರ ನಮ್ಮ ಮನದಲ್ಲಿ ಉಳಿಯುತ್ತದೆ. ಇಂದು ನಮ್ಮ ಪಾಲಿಗೆ ಉಳಿದಿರುವುದು ಕೇವಲ ನೆನಪುಗಳು ಮಾತ್ರಾ. ಹಳೆಯ ಕನ್ನಡ ಚಲನಚಿತ್ರವೊಂದರಲ್ಲಿ ದಿ.ಪಿ.ಬಿ.ಶ್ರೀನಿವಾಸ್ ತನ್ನ ಮಧುರ ಕಂಠದಲ್ಲಿ ಹಾಡಿದ್ದ “ಬೆಳದಿದೆ ನೋಡಾ ಬೆಂಗಳೂರು ನಗರ, ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ“ ಎಂಬ ಹಾಡನ್ನು ಅಂದು ೬೦ ರ ದಶಕದಲ್ಲಿ ಕೇಳುತ್ತಿದ್ದಾಗ, ನಮಗೆಲ್ಲಾ ಹೆಮ್ಮೆಯೇನೋ ಆಗುತ್ತಿತ್ತು. ಆದರೆ ಕೈಗಾರೀಕರಣದ ಇನ್ನೊಂದು ಕುರೂಪ ಮುಖ ಹೀಗಿರುತ್ತದೆ ಎನ್ನುವ ಅಂಶ ಅಂದು ನಮಗೆ ತಿಳಿದಿರಲಿಲ್ಲ.
    ಕಡೆಯಲ್ಲಿ ಪ್ರತಿ ಬೆಳವಣಿಗೆಯ ಜೊತೆಗೂ ಒಂದು ಭಾರಿ ಸರಕಿನ ಮೂಟೆ ಬರುತ್ತದೆ. “It is a package deal”
    ಉಮಾ ವೆಂಕಟೇಶ್

    Like

  4. ಅನ್ನಪೂರ್ಣ ಆನಂದ್ ಅವರು ಬರೆದ ಬೆಂಗಳೂರಿನ ವರ್ಣನೆ ನಾನು ಅನುಭವಿಸಿದಹಾಗೇ ಇದೆ. ಅವರು ನೆನಪಿಸಿಕೊಂಡ ಜಾಗಗಳನ್ನು ನಾನೂ ಅನುಭವಿಸಿದ್ದೇನೆ. ಆದರೆ ಅದರಲ್ಲಿ ಒಂದೇ ಒಂದು ಬದಲಾವಣೆ, ಅದೇನೆಂದರೆ ನಾನು ಹುಟ್ಟಿ ಬೆಳೆದ ಜಾಗ ಬಸವನಗುಡಿ, ಲಾಲ್‍ಬಾಗಿನ ಮಡಿಲಲ್ಲಿ. ಅವರ ಅನುಭವಗಳೆಲ್ಲಾ ನನ್ನ ಅನುಭವದ ಹಾಗೇ ಇದೆ. ಒಂದೇ ಒಂದು ಅಂಶವನ್ನು ನಾನು ಸೇರಿಸುತ್ತೇನೆ, ಅನ್ನಪೂರ್ಣ ಅವರೂ ಅನುಭವಿಸಿರಬಹುದು. ಅದೇನೆಂದರೆ ವಿದ್ಯಾರ್ಥಿಭವನ ಮತ್ತು ಅದರ ಮಸಾಲೆದೋಸೆ. ಈಗಲೂ ದೊರೆಯುವುದು ಆದರೆ ಆ ರುಚಿ ಅದಕ್ಕಿಲ್ಲ. ಈಗ ಬೆಂಗಳೂರಿನಲ್ಲೇ ತಂಗಿದ್ದು, ಅನ್ನಪೂರ್ಣ ಅವರು ನೆನಪಿಸಿಕೊಂಡ ಕಳೆದುಹೋದ ಆನಂದಮಯ ಆ ಬೆಂಗಳೂರನ್ನು ನೆನೆಪಿಸಿಕೊಳ್ಳುತ್ತಿದ್ದೇನೆ.
    —- ರಾಜಾರಾಮ ಕಾವಳೆ.

    Like

  5. Dear Anu.
    Interesting to know that you lived in second cross Malleswaram, we lived on the junction of 4th and link road before I came to England. we used to walk up to 18th after Dose either at the Planters coffee on the 3rd cross or at MTR on the 8th cross. Yes attending Music concerts in Shehadripuram was a real treat! Alas you can’t walk anywhere these days.
    I used to catch number 11 bus to Basavanagudi to meet Seethu and always ended up at new Modern Hotel (NMH) near Sajjan rao circle or Vidhyarthi Bhavan in Gandhi Bazar. The original Congress Kadlekai was introduced by a chap called Gokhale who used to come on his bicycle to National college circle which has since disappeared, what a shame they have built an ugly flyover there.
    Happy days and memories linger on!

    Like

  6. ಎಷ್ಟು ಸುಂದರ ಸಂತೋಷದಿಂದ ಕಳೆದ ಬಾಲ್ಯದ, ಯುವ ದಿನಗಳು! ಈ ಸರಣಿಯಲ್ಲಿ ಬಂದ ಎಲ್ಲ ಬರಹಗಳೂ ಕಳೆದುಹೋದ, ಕಾಣೆಯಾದ ’ನಮ್ಮೂರು’ಗಳನ್ನು ಸೆರೆ ಹಿಡಿದಿಟ್ಟಿವೆ. ಆ ಸಮಯದ ನಮ್ಮೂರೇ ’ಜನನಿ- ಜನ್ಮಭೂಮಿಯಷ್ಟೇ’ ”ಸ್ವರ್ಗಾದಪಿ ಗರೀಯಸಿ” ಎಂದು ಸಿದ್ಧವಾಯಿತು, ಅನ್ನಿ! ಎಪ್ಪತ್ತರಲ್ಲೂ ಆ ಮಲ್ಲೇಶ್ವರಂದಲ್ಲಿ ಈಗಿನಷ್ಟು ಗುಲ್ಲಿರಲಿಕ್ಕಿಲ್ಲ. ನಾನು ಎಪ್ಪತ್ತಕ್ಕೆ ಸಮೀಪಿಸುತ್ತಿದ್ದಂತೆ ಈಗ ತಾನೆ ಪರಿಚಯವಾದ ಎರಡು ಚದುರಡಿಯ ಜಗತ್ತಿನಲ್ಲಿ ಏನೆಲ್ಲ ನಡೆದಿಲ್ಲ? ಎಲ್ಲವನ್ನು ಸುಂದರವಾಗಿ, ಉತ್ಸಾಹದಿಂದ nostalgicಆಗಿ ವರ್ಣಮಯವಾಗಿ ಅನ್ನಪೂರ್ಣ ಅವರು ಬಣ್ಣಿಸಿದ್ದಾರೆ. ಆಗಿನ ಉದ್ಯಾನನಗರದಿಂದ ಈಗ ’ಬಹುವಿಧ ಉದ್ಯಮ ನಗರ”ಯಾಗಿ ಬೆಳೆದ ಬೆಂಗಳೂರನ್ನು ಈಗ ನೋಡಿದರೆ ಅವರಿಗೆ ಅಗ ತಾನೆ ರುಚಿ ಹತ್ತಿದ ಸಿನಿಮಾ ಗೀತೆ ನೆನಪಾಗ ಬಹುದು, ನನಗೂ ಆಗುತ್ತಿದೆ: ಜಾನೆ ಕಹಾನ್ ಗಯೇ ವೊ ದಿನ್! ಈಗದಕ್ಕೆ ಜೋಡಿಸುವೆ: ’ಜಾನೆ ಕಹಾನ್ ಗಯೀ ವೊ ಜಗಃ?”

    Like

Leave a comment

This site uses Akismet to reduce spam. Learn how your comment data is processed.