ಶ್ರೀಮತಿ ಆರ್. ಡಿ. ಅಹಲ್ಯಾ ಅವರು ಬರೆದ “’ಕದ್ರಿ ಗೋಪಾಲನಾಥ್ ಸ್ಯಾಕ್ಸೋಫೋನ್ ಕಚೇರಿ- ಸಂಗೀತದ ಒಂದು ರಸಸಂಜೆ!”

Kadri solo)
Photo: Ramasharan

ಇಲ್ಲಿನ ಯು.ಕೆ ಕನ್ನಡ ಬಳಗದ, ಯಾರ್ಕಶೈರ್ ಚಾಪ್ಟರ್ ಆಯೋಜಿಸಿ ನಡೆಸಿದ, ಡಾ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫ಼ೋನ್ ಕಚೇರಿ ನನ್ನ ಪಾಲಿಗೆ “ರಾಮರಸಾಯನ”ವಾಗಿತ್ತು. ಅವರೊಡನೆ ವೇದಿಕೆಯಲ್ಲಿ ಸಹವಾದಕರಾಗಿದ್ದ, ಶ್ರೀಮತಿ. ಡಾ ಜ್ಯೋತ್ನಾ ಶ್ರೀಕಾಂತ್ ಅವರ ಪಿಟೀಲು, ಹಾಗೂ ತಂಜಾವೂರು ಗೋವಿಂದರಾಜು ಅವರ ಡೋಲು ವಾದನ, ಪಂಚಾಮೃತವೆನಿಸಿತ್ತು. ಈ ಸಂಗೀತ ರಸಸಂಜೆಯು, ಒಂದು ನವರಸಭರಿತ, ವೈವಿಧ್ಯಮಯ, ರಾಗ-ರಂಜಿತ, ರಸಪೂರ್ಣ, ವಿಶ್ವವಿಖ್ಯಾತ, ವಾದ್ಯ-ವೈಭವ, ಕನ್ನಡ ಕಲಾಪ್ರೇಮಿಗಳ ಸಮ್ಮಿಳನವೆಂದರೆ ಅತಿಶಯೋಕ್ತಿಯೇನಲ್ಲ. ಇದೇ ಹಿಂದೂ ಸಂಸ್ಕೃತಿಯ, “ಕರ್ನಾಟಕ ಶಾಸ್ತ್ರೀಯ ಸಂಗೀತ” ಹಾಗೂ ಸಾಮವೇದ ರಸಗಾನ. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳೆನಿಸಿದ, ಪ್ರಸಿದ್ಧ ವಾಗ್ಗೇಯಕಾರರಾದ, ಶ್ರೀ ಮುತ್ತುಸ್ವಾಮಿ ದೀಕ್ಷಿತರು, ಶಾಮಾಶಾಸ್ತ್ರಿಗಳು ಹಾಗೂ ಶ್ರೀ ತ್ಯಾಗರಾಜ ಮಹಾಸ್ವಾಮಿಗಳು ರಚಿಸಿದ ಮಹಾಕೃತಿಗಳ ಅನಾವರಣ ಇಲ್ಲಿ ಈ ಸಂಗೀತ ಸಂಜೆಯಲ್ಲಿ ನಡೆಯಿತು. ಡಾ ಕದ್ರಿ ಗೋಪಾಲನಾಥ್ ಅವರ ವಾದ್ಯ ವೈಭವ ಮಾಧುರ್ಯವು, ರಂಜನೀಯವಾದ ನವರಸಭರಿತ ಶ್ರವಣಜ್ಞಾನವಾಯಿತು. ಮೊದಲನೆಯದಾಗಿ ವಿಘ್ನವಿನಾಶಕ ವಿಘ್ನೇಶ್ವರನಾದ, ಮಹಾಗಣಪತಿಯ ಪ್ರಾರ್ಥನೆ, ಸಭಿಕರ ಮನಸೆಳೆಯುವ ಭಕ್ತಿರಸಪ್ರಧಾನವಾದ, ಹಂಸಧ್ವನಿ ರಾಗದಲ್ಲಿ, ಆದಿತಾಳದ ಸಮೇತ, ಮುತ್ತುಸ್ವಾಮಿ ದೀಕ್ಷಿತರ “ವಾತಾಪಿ ಗಣಪತಿ ಭಜೇಹಂ”, ಎಂಬ ಪ್ರಖ್ಯಾತ ಕೀರ್ತನೆಯೊಂದಿಗೆ ಪ್ರಾರಂಭವಾಯಿತು. ಅದರ ಸವಿಯನ್ನು ಸಭಿಕರಿಗೆ ಉಣಿಸಿದ ನಂತರ, ಎರಡನೆಯದಾಗಿ ತ್ಯಾಗರಾಜರ ರಚನೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತವಾದ, ಅಭೇರಿ ರಾಗದ ವಿಳಂಬ ಕೃತಿ, “ನಗುಮೋಮು ಗನಲೇನಿ,” ಕೃತಿಯನ್ನು ಅತ್ಯಮೋಘವಾಗಿ ನುಡಿಸುತ್ತಾ, ನೆರವಲ್ ಪ್ರಸ್ತಾರ, ಸ್ವರ-ವಿನ್ಯಾಸ, ಮನೋಧರ್ಮ, ವಿವಿಧ ಶೈಲಿಯ ಸ್ವರ ನಡೆಯೊಂದಿಗೆ, ಪಿಟೀಲು ಹಾಗೂ ಡೋಲು ವಾದ್ಯಗಳ ಸಹಕಾರದೊಂದಿಗೆ, ಮನಮೋಹಕವಾಗಿ ಮುಕ್ತಾಯ ಸ್ವರಗಳೊಂದಿಗೆ ರಂಜಿಸುತ್ತಾ, ಸಕಲ ಸಭಿಕರನ್ನೂ ರಾಗ-ಸ್ವರ ಲೋಕಕ್ಕೊಯ್ದರು.

Kadri Concert 2014)
Photo: Ramasharan

ಮೂರನೆಯದಾಗಿ ಪ್ರೇಕ್ಷಕರನ್ನುದ್ದೇಶಿಸಿ ಗೌರವ ಭಾವದೊಂದಿಗೆ ವಂದಿಸುತ್ತಾ, ಶ್ರೀ.ತ್ಯಾಗರಾಜ ಸ್ವಾಮಿಗಳ, ವಿಶ್ವವಿಖ್ಯಾತ ಪಂಚರತ್ನ ಕೃತಿಗಳಲ್ಲಿ ಒಂದಾದ, “ಎಂದರೋ ಮಹಾನುಭಾವುಲು, ಅಂದರಿಕಿ ವಂದನಮು” ಎಂದು ನಮಸ್ಕರಿಸುತ್ತಾ, ಪರಬ್ರಹ್ಮ ಸ್ವರೂಪನಾದ ಭಗವಂತನನ್ನು ಸ್ಮರಿಸುತ್ತಾ ನಮ್ಮನ್ನೆಲ್ಲಾ ನಾದಲೋಕಕ್ಕೇ ಕರೆದೊಯ್ದರು. ಕಚೇರಿಯ ಉತ್ತರಾರ್ಧದಲ್ಲಿ, ವಿವಿಧ ವಾಗ್ಗೇಯಕಾರರುಗಳ, ವಿವಿಧ ರಾಗಗಳ, ವಿವಿಧ ಶೈಲಿಯ, ವಿವಿಧ ಸ್ವರವಿನ್ಯಾಸಗಳ, ರಾಗ-ತಾಳ ವಾದ್ಯ ಮೇಳದ ವೈವಿಧ್ಯತೆ ಕಂಡು ಬಂತು. ಮೊದಲಿಗೆ “ಹಿಂದೋಳ ರಾಗದಲ್ಲಿ” ಪಾಶ್ಚಾತ್ಯ ಶೈಲಿಯ ಸ್ವರನಡೆ, ಅಲ್ಲಿದ್ದ ಸರ್ವರನ್ನೂ, ಯುವಕರನ್ನಾಗಿಸಿತು. ನಂತರ ಗಾಂಧಿಯವರ ನಿತ್ಯ ಪ್ರಾರ್ಥನಾ ಭಜನೆಯಾಗಿದ್ದ, ”ವೈಷ್ಣವ ಜನತೋ ತೇನೇ ಕಹಿಯೆರೇ,” (ನರಸಿನ್ ಮೆಹ್ತಾ ಅವರ ರಚನೆ) ಎಂಬ ಭಜನೆಯನ್ನು ಹಿಂದೂಸ್ತಾನಿ ಶೈಲಿಯ ಖಮಾಚ್ ರಾಗದಲ್ಲಿ, ನುಡಿಸಿದ ಭಂಗಿಯು ತಲೆದೂಗುವಂತಿತ್ತು. ಅದರ ಮುಂದಿನ ಕೃತಿ ರಾಗಮಾಲಿಕೆಯಲ್ಲಿದ್ದು, ಭಕ್ತಿರಸ ಪ್ರಧಾನವಾದ ರಾಗಸಮ್ಮಿಳನ, “ಪುರಂದರೋಪನಿಶತ್” ಎಂದೇ ಬಿರುದುಳ್ಳ, ನಮ್ಮ ಸಂಗೀತ ಪಿತಾಮಹರಾದ, ಶ್ರೀ.ಪುರಂದರದಾಸರ ಕೃತಿಗಳು. ಮೊದಲಿಗೆ ಮನಮೋಹಕ ಮೋಹನ ರಾಗದಲ್ಲಿ ನಿಬದ್ಧವಾಗಿರುವ, “ಪಿಳ್ಳಂಗೋವಿಯ ಚಲುವ ಕೃಷ್ಣನ”, ಎಂಬ ದೇವರನಾಮ. ನಂತರ ಕಲ್ಯಾಣ ವಸಂತದಲ್ಲಿ ”ಇನ್ನೂ ದಯಬಾರದೇ” ಎಂಬ ಕೂಗು ಭಗವಂತನನ್ನು ತಲುಪುವಂತಿದ್ದರೆ, ನಂತರ ವಾದ್ಯಮೇಳದಿಂದ ಹೊರಹೊಮ್ಮಿದ ಅನ್ನಮಾಚಾರ್ಯರ ಕೃತಿ ”ಬ್ರಹ್ಮಮೊಕ್ಕುಟೇ” ತಿರುಪತಿಯನ್ನೇ ಯು.ಕೆ.ಗೆ ಬರಮಾಡಿಕೊಂಡಂತಿತ್ತು! ಕೊನೆಗೆ ಪುರಂದರ ದಾಸರ ”ವೆಂಕಟಾಚಲನಿಲಯಂ ವೈಕುಂಠಪುರವಾಸಂ” ಮತ್ತು ”ಭಾಗ್ಯದ ಲಕ್ಷ್ಮಿ ಬಾರಮ್ಮ” ಸಿಂಧುಭೈರವಿ ಹಾಗು ಶ್ರೀ ರಾಗಗಳಲ್ಲಿ ಶಾಸ್ತ್ರೀಯವಾಗಿ ನುಡಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಡಾ. ಕದ್ರಿ ಗೋಪಾಲನಾಥ, ಡಾ ಜ್ಯೋತ್ಸ್ನಾ ಶ್ರೀಕಾಂತ,  ಗೋವಿಂದರಾಜು ಮತ್ತು ಸಂಗಡಿಗರಾದ ಶ್ರೀ ಮಂಜುನಾಥ್ ಹಾಗು ಸೋಲೋಮನ್ ಅವರಿಗೆ ಅಭಿನಂದನೆಗಳು ಮತ್ತು ವಂದನೆಗಳು. ಕಾರ್ಯಕ್ರಮ ಧ್ವನಿವರ್ಧಕದ ತಾಂತ್ರಿಕ ತೊಂದರೆಯ ಕಾರಣದಿಂದ ತಡವಾಗಿ ಪ್ರಾರಂಭವಾದರೂ ಎಲ್ಲ ಸಭಿಕರು ತಾಳ್ಮೆಯಿಂದ ಕಾಯ್ದು ಕುಳಿತು ಪೂರ್ತಿ ಕಚೇರಿಯನ್ನು ಕೇಳಿ ಆನಂದಿಸಿದರು.

ಲೇಖಕಿಯ ಪರಿಚಯ:  ಶ್ರೀಮತಿ ಆರ್.ಡಿ. ಅಹಲ್ಯಾ ಅವರು ಶಿವಮೊಗ್ಗಾದಲ್ಲಿ, “ಸುಪ್ರದಾ ಕಲಾನಿಕೇತನ” ಎಂಬ ಸಂಗೀತಶಾಲೆಯನ್ನು ನಡೆಸುತ್ತಿದ್ದಾರೆ. ಪ್ರತಿ ನಿತ್ಯವೂ, ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಾರ್ಥನಾ ಶ್ಲೋಕಗಳು, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಹಾಗೂ ದೇವರನಾಮಗಳನ್ನು ಹೇಳಿಕೊಡುತ್ತಿದ್ದಾರೆ. ಮಹಿಳೆಯರು ಮಕ್ಕಳಿಗೆ, ನಮ್ಮ ಸಂಸ್ಕೃತಿ ಮತ್ತು ಹಬ್ಬಗಳ ವೈಶಿಷ್ಟ್ಯಗಳ ಬಗ್ಗೆ ವಿವರಿಸಿ ಹೇಳುತ್ತಾ, ಅವರನ್ನು ತಯಾರು ಮಾಡುತ್ತಿದ್ದಾರೆ. ಸದ್ಯದಲ್ಲಿ ಅವರು ಸಾಗರದಾಚೆ ಇರುವ ಈ ಆಂಗ್ಲನಾಡಿಗೆ ಅವರ ಮನೆಗೆ ಬಂದಿದ್ದಾರೆ. ಅವರದೇ ಮಾತುಗಳಲ್ಲಿ ಹೇಳುವುದಾದರೆ, “ಇಲ್ಲಿ ನನಗೆ ದೀಪಾವಳಿ ಹಬ್ಬದ ನೋಟ, ಊಟ, ಮನೋರಂಜನೆ ಮತ್ತು ಸಂಗೀತ ಇವೆಲ್ಲವನ್ನೂ ಅನುಭವಿಸಿ ಆನಂದಿಸುವ ಸೌಭಾಗ್ಯ ದೊರೆತಿದೆ. ಭಾರತೀಯ ಸಂಸ್ಕೃತಿಯು, ಭಾರತೀಯ ಕಲಾಪ್ರೇಮಿಗಳನ್ನು ಎಂದಿಗೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿಯೆನಿಸಿದೆ.”

(ವಿಮರ್ಶೆಯನ್ನು ಬೇಗನೆ ಬರೆದುಕೊಟ್ಟ ಶ್ರೀಮತಿ ಅಹಲ್ಯ ಅವರಿಗೆ ಧನ್ಯವಾದಗಳು -ಸಂ)

3 thoughts on “ಶ್ರೀಮತಿ ಆರ್. ಡಿ. ಅಹಲ್ಯಾ ಅವರು ಬರೆದ “’ಕದ್ರಿ ಗೋಪಾಲನಾಥ್ ಸ್ಯಾಕ್ಸೋಫೋನ್ ಕಚೇರಿ- ಸಂಗೀತದ ಒಂದು ರಸಸಂಜೆ!”

  1. ಕದ್ರಿ ಗೋಪಾಲನಾಥ್ ಅವರ ಕಛೇರಿಗೆ ಹೋಗಲಾರದವರಿಗೂ ಅಲ್ಲೇ ಕುಳಿತು ಕೇಳಿದಂತಹ ಅನುಭವ ಮಾಡಿಸಿದ ಅಹಲ್ಯಾ ದೇವಿಯವರಿಗೆ ಧನ್ಯವಾದ. ಸುದರ್ಶನ್ ಹೇಳಿದಂತೆ, ಅವರು ಸಂಗಿತದ ಬಗ್ಗೆ ಒಂದೆರಡು ಲೇಖನಗಳನ್ನು ಬರೆದರೆ, ನಮಗೊಂದು ಓದುವ ಸದವಕಾಶ ಸಿಗುತ್ತದೆ.

    Like

  2. ಶ್ರೀಮತಿ ಅಹಲ್ಯಾ ಅವರ ವರದಿ ತುಂಬಾ ಚೆನ್ನಾಗಿದೆ. ಸಂಗಿತದ ಆಳಕ್ಕೆ ( ನಮ್ಮ ಯೋಗ್ಯತೆ ಗೆ ಅನುಸಾರ) ನಮ್ಮನ್ನು ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ನಾನು ಕಾರಣಾಂತರಗಳಿಂದ ಬರಲಾಗಲಿಲ್ಲ. ನಷ್ಟ ಸಂಪೂರ್ಣ ನನ್ನದೇ.
    ಸಂಗಿತದ ರಾಗ ತಾಳಗಳ ವಿವರಗಳಿಗೆ ಜೊತೆಯಾಗಿ ಕೃತಿಕಾರರ ಬಗೆಗೂ ಸ್ವಲ್ಪ ಸಾಂದರ್ಭಿಕ ಪರಿಚಯ ಮಾಡಿಸಿದ್ದು ಅವರ ಬಗೆಗೆ ಇನ್ನೂ ತಿಳಿಯುವ ಆಸಕ್ತಿ ನನ್ನಲ್ಲಿ ಮೂಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
    ಅಹಲ್ಯಾ ಅವರು ಇಲ್ಲಿರುವಾಗಲೇ ಸಂಗೀತದ ಕುರಿತಾಗಿ ಕೆಲವು ನನ್ನಂಥ ಪಾಮರರಿಗೆ ಸಂಗೀತದ ಜ್ಞಾನ ಮೂಡಿಸಿ ವಿಸ್ತರಿಸುವಂಥ ಕೆಲವು ಲೇಖನಗಳನ್ನಾದರೂ ಬರೆದರೆ ನಮ್ಮ ಜಾಲಜಗುಲಿಯೂ ಕಳೆ ಕಟ್ಟೀತು
    ಧನ್ಯವಾದಗಳು

    Like

    • ಅಹಲ್ಯಾ ಅವರು, ತಮ್ಮ ವರದಿಯ ಮೂಲಕವೇ, ಕದ್ರಿ ಗೋಪಾಲನಾಥ ಅವರ ಸಂಗಿತದ ರಾಮರಸಾಯನವನ್ನು ನಮಗೆಲ್ಲಾ ಬಡಿಸಿದ್ದಾರೆ. ಈಗ ಎರಡು ವರ್ಷಗಳ ಹಿಂದೆ ಕದ್ರಿ ಅವರ ಸಂಗೀತವನ್ನು, ಲಂಡನ್ನಿನ ಹ್ಯಾರೋ ಪ್ರೌಢಶಾಲೆಯಲ್ಲಿ ಸವಿದಿದ್ದ ನನಗೆ, ಅಹಲ್ಯಾ ಅವರ ವರದಿಯಲ್ಲಿನ ಯಾವುದೇ ಮೆಚ್ಚುಗೆಯ ನುಡಿಗಳೂ ಅತಿಶಯೋಕ್ತಿ ಅನಿಸಲಿಲ್ಲ. ಕದ್ರಿ ಅವರ ವಿದ್ವತ್ತನ್ನು ವರ್ಣಿಸಲು, ಅಂತಹ ಅತಿಶಯೋಕ್ತಿಗಳು ಅವಶ್ಯ. ಸಾಕ್ಸೋಫೋನಿನಲ್ಲಿ ಕರ್ನಾಟಕ ಸಂಗೀತದ ಸವಿಯನ್ನು ಕದ್ರಿ ಅವರ ಕಚೇರಿಯಲ್ಲಿ ಸವಿದವರಿಗೇ ಗೊತ್ತು ಅದರ ಮಾಧುರ್ಯತೆ. ಯು.ಕೆ.ಕನ್ನಡ ಬಳಗದ ಸದಸ್ಯರಿಗೆ ಇಂತಹ ಒಂದು ಸದವಕಾಶವನ್ನಿತ್ತ ಡಾಶಿವಪ್ರಸಾದ್ ಅವರಿಗೆ ಮತ್ತು ಯಾರ್ಕಶೈರ್ ಕನ್ನಡ ಬಳಗದ ಚಾಪ್ಟರ್ ಆಯೋಜಕರಿಗೆ, ನಾವೆಲ್ಲಾ ಧನ್ಯವಾದಗಳನ್ನು ಅರ್ಪಿಸಬೇಕು. ಅದರ ಜೊತೆಗೆ, ಈ ಸಮಾರಂಭದ ವರದಿಯನ್ನು ಇಷ್ಟು ಸೊಗಸಾಗಿ ಬರೆದ ಅಹಲ್ಯಾ ಅವರಿಗೂ ನನ್ನ ಹ್ರುತ್ಪೂರ್ವಕ ವಂದನೆಗಳು.
      ಉಮಾ ವೆಂಕಟೇಶ್

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.