‘ನೋಡು ಬಾ ನಮ್ಮೂರ ಸರಣಿ’: ನಮ್ಮೂರು ತಟಸ್ಠ ತುಮಕೂರು – ಪ್ರೇಮಲತ ಬಿ

ದ್ವಿತೀಯ ಪಿಯುಸಿ ಮುಗಿಸಿ ಬೆಂಗಳೂರಿನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿಗೆ ಸೇರಲು  ಸಾಲಿನಲ್ಲಿ ನಿಂತಿದ್ದೆ. ದ್ವಿತೀಯ ದರ್ಜೆಯ  ಗುಮಾಸ್ತ   ತಲೆ ಎತ್ತದೆ,

“ಊರು?” ಎಂದ.

“ತುಮಕೂರು” ಎಂದೆ.

“ತರ್ಲೆ ತುಮಕೂರಾ?” ಅಂದ.

ನಾನು ಮೌನವಾಗಿದ್ದೆ.

ಕಾಲೇಜಿಗೇನೋ ಸೇರಿದ್ದಾಯ್ತು ಆದರೆ, ‘ನಮ್ಮೂರು ತರ್ಲೇನಾ?’ ಅನ್ನೋ ಪ್ರಶ್ನೆ ಉಳೀತು.!!!

ನಾಲ್ವರಲ್ಲಿ ಕಿರಿಯಳಾದ ನನ್ನ ವಿದ್ಯಾಭ್ಯಾಸ ಎರಡನೇ ತರಗತಿಯಿಂದ ಎರಡನೇ ಪಿಯುಸಿ ವರೆಗೂ ತುಮಕೂರಲ್ಲೇ ನಡೆದದ್ದು. ಸರ್ಕಾರೀ ಹುದ್ದೆಯಲ್ಲಿದ್ದ ತಂದೆ,  ಮಂತ್ರಿಗಳಿಗೆ ಲಂಚ ಕೊಡಲು ನಿರಾಕರಿಸಿದ ಕಾರಣ ವರ್ಗಾವಣೆ ಮಾಡಿದ ಎಲ್ಲ ಜಾಗಗಳಲ್ಲಿ ಕೆಲಸ ಮಾಡಿದರು. ನನಗಿಂತ ಹಿರಿಯರು ಈ ಕಾರಣ ನಾನಾ ಶಾಲೆಗಳನ್ನು ನೋಡಬೇಕಾಯ್ತು. ಅವರೆಲ್ಲ ದೊಡ್ಡವರಾಗುವ ವೇಳೆಗೆ, ಅವರ ಶಿಕ್ಷಣಕ್ಕಾಗಿ ನಮ್ಮ ತಂದೆ ತುಮಕೂರಲ್ಲಿ ಸಂಸಾರ ಉಳಿಸಿ ತಾವು ಮಾತ್ರ ಓಡಾಡಿಕೊಂಡು ಕೆಲಸ ಮಾಡಿದರು. ಹೀಗಾಗಿ ಕಿರಿಯಳಾದ ನನಗೆ ಭದ್ರವಾಗಿ ಒಂದೂರು ಸಿಕ್ಕಿತು. ನಿಮ್ಮೂರು ಯಾವುದು ಎಂದರೆ ನನ್ನಲ್ಲಿ ಯಾವುದೇ ಸಂದೇಹವಿಲ್ಲ!

‘ನನ್ನ ಈ ಊರು ತರ್ಲೇನಾ?’  ಅಂತ ಪ್ರಶ್ನಿಸಿಕೊಂಡೆ. ಕೆಲವೊಂದು ಘಟನೆಗಳು ನೆನಪಿಗೆ ಬಂದವು.

೩-೪ ನೇ ತರಗತಿಯಲ್ಲಿ ನನ್ನದೇ ದಂಡು ಕಟ್ಕೊಂಡು ನಮ್ಮನ್ನ ಎದುರು ಹಾಕಿಕೊಂಡ ಹುಡುಗಿಯರಿಗೆ ಬಹಿಷ್ಕಾರದ ಹೆದರಿಕೆ ಹುಟ್ಟಿಸ್ಕೊಂಡು ಓಡಾಡಿದ್ದುಂಟು !

ಶಾಲೆ ನಡೀತಿದ್ದಾಗ, ಶಾಲೆಗೆ ಚಕ್ಕರ್ ಹೊಡೆದು, ಶಾಲೆಯ ಪಕ್ಕದ ಕಟ್ಟಡದಿಂದ ಶಾಲೆ ತಾರಸಿ ಮೇಲೆ ಜಿಗಿದು, ಕಡ್ಡಿ-ಪುರಲೆ,ಕಾಗದ ಎಲ್ಲ ಹಾಕಿ, ಬೆಂಕಿಯಿಟ್ಟು, ಸಣ್ಣ ಮಣ್ಣಿನ ಕುಡಿಕೇಲಿ ಅನ್ನ ಮಾಡೋ ಆಟ ಆಡಿದ್ದುಂಟು. ಕಟ್ಟಡಕ್ಕೆ ಬೆಂಕಿ ಬಿದ್ದಿದೆ ಅಂತ ಕೆಳಗೆ ನಿಂತು ನೋಡಿದ ಜನ ಮುಖ್ಯೋಪಾದ್ಯಾಯರಿಗೆ ಹೇಳಿ, ಇಡೀ ಶಾಲೆಯ ಮಕ್ಕಳು ಹೌಹಾರಿ ಈಚೆ ಬಂದ ಕೂಡಲೇ ಹೀಗಾಗಬಹುದು ಅಂತ ಊಹಿಸಿರದ ನಾನು ಮತ್ತು ನನ್ನ ದಂಡು, ಓಟ ಕಿತ್ತದ್ದು ನೆನಪಿಗೆ ಬಂತು. ಅಷ್ಟೇ ಅಲ್ಲ, ಅದಾದ ಮೇಲೆ ಮೂರು ದಿನ ಒಂದು ಚೂರೂ ಗಲಾಟೆ ಮಾಡದೆ, ಶಾಲೆಯ ಮಾದರಿ ವಿದ್ಯಾರ್ಥಿನಿಯರಂತೆ ವರ್ತಿಸಿಕೊಂಡು ತಿರುಗಿದ್ದುಂಟು.

ಶಾಲೆಗಿದ್ದ ಬೇರೆ ಬೇರೆ ರಸ್ತೆಗಳಲ್ಲಿ,  ಯಾವ ಯಾವ ಮನೆಗಳಲ್ಲಿ ಸೀಬೆಕಾಯಿಗಿಡ ಮತ್ತು ದಾಳಿಂಬೆ ಗಿಡಗಳ ವಿವರ ನಮ್ಮ ಗುಂಪಿಗಿತ್ತು. ಮನೇವ್ರೆಲ್ಲ ಒಳಗಿದ್ದ ಮದ್ಯಾನ್ಹದ ವೇಳೆ ಕಾಂಪೌಂಡು ಹತ್ತಿ ಎಷ್ಟು ಸಾದ್ಯವೋ ಅಷ್ಟು ಪೀಚು ಕಾಯಿಗಳನ್ನೆಲ್ಲ ಕಿತ್ತು ಓಡ್ತಿದ್ದೆವು. ಅಕಸ್ಮಾತ್ ಗೇಟಿನ ಶಬ್ದವಾದರೆ,

“ಬಿಸಿಲಿತ್ತು, ನೀರು ಕೇಳೋಣ ಅಂತ ಬಂದ್ವಿ , ಒಂದ್ಲೋಟ ನೀರು ಕೊಡಿ,  ಆಂಟಿ” ಅಂತ ಕೇಳ್ತಿದ್ದೆವು. ಅವರು ನೀರು ತರಲು ಒಳಹೋದಾಗ ಒಂದಿಬ್ಬರು, ಕೈಗೆ ಸಿಕ್ಕ, ಸೀಬೆ ಕಾಯಿ, ನೆಲ್ಲಿ ಕಾಯಿ, ದಾಳಿಂಬೆ ಮತ್ತು ಗುಲಾಬಿಗಳನ್ನು ಕಿತ್ತು ಸದ್ದಾಗದಂತೆ ಗಾಡಿ ಬಿಡ್ತಿದ್ದೆವು! ಹಾಗೂ ಸಿಕ್ಕಿಕೊಂಡರೆ ನಮ್ಮನ್ನು ಕೋತಿಗಳನ್ನು ಓಡಿಸುವಂತೆ ಓಡಿಸ್ತಿದ್ದರು!

ಮಾಧ್ಯಮಿಕ ತರಗತಿ ಸೇರಿದ ನಂತರ, ಈ ಆಟಗಳನ್ನೆಲ್ಲ ಬಿಟ್ಟು ಬೇರೆ ತರ ತುಮಕೂರಿನ ಜನತೆಗೆ ಗೊತ್ತಾದೆ. ಈ ಮಾಧ್ಯಮಿಕ ತರಗತಿ ಬಿಟ್ಟ ೧೫ ವರ್ಷಗಳ ನಂತರ ಬಾಯ್ಮಾತಿನ ಮೂಲಕವೇ (ಫೋನು, ಅಂತರ-ಜಾಲಗಳಿಲ್ಲದೆ) ಇಲ್ಲಿ ಒಟ್ಟಾಗಿ ಓದಿದ ೧೨ ಮಂದಿ ಮತ್ತೆ ಕಲೆತೆವು. ಇವರಲ್ಲಿ ಕೆಲವರು ಮತ್ತೆ ಕೆಲವರನ್ನು ಒಟ್ಟು ಗೂಡಿಸಿ ನಮ್ಮ ಚಾರಣ ತಂಡವನ್ನು ಕಟ್ಟಿದೆವು.

ಪದವಿ ಕಾಲೇಜಿನ ಅತಿ ಸ್ಮರಣೀಯವಾದ  ಸಮಯವೆಂದರೆ ಚಾರಣದ ದಿನಗಳು!

ಈ ಗುಂಪಿನ ನನ್ನ ಗೆಳತಿಯೊಬ್ಬಳು ಮದುವೆಯಾಗಿ, ಕೆನಡಾದ  ಜಲಪಾತವನ್ನು ನೋಡಲು ಹೋದಾಗ, “ಅಯ್ಯೋ ಏನೋ ಅಂದುಕೊಂಡಿದ್ದೆ, ನಮ್ಮ ಚಾರಣದಲ್ಲಿ ಕಾಣ್ತಿದ್ದ ಜಲಪಾತಗಳ ಮುಂದೆ ಇದೇನು ಅಲ್ಲ”(!) ಅಂತ ಹೇಳಿ ಕರಕೊಂಡು ಹೋದ ಗಂಡನಿಗೆ ಪೆಚ್ಚು ಬಡಿಸಿದ್ದುಂಟು!

ನನಗೆ ತಿಳಿದಂತೆ, ತುಮಕೂರು ಒಂದು ಕಾಲದಲ್ಲಿ ಮರದ ಬಾಚಣಿಗೆಗಳಿಗೆ ಪ್ರಸಿದ್ದವಾಗಿತ್ತು. ಪ್ಲಾಸ್ಟಿಕ್ ಬಂದ ನಂತರ ಅದರ ಸದ್ದು ಅಡಗಿ ಹೋಯ್ತು.

ಬಯಲು ಸೀಮೆ ನಾಡಾದ ತುಮಕೂರು, ಮಂಡ್ಯ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು ಮತ್ತು ಆಂದ್ರದ ಅನಂತಪುರ ಜಿಲ್ಲೆಗಳ ಮದ್ಯವಿದೆ. ೧೦ ತಾಲ್ಲೂಕು,೧೨ ಪಟ್ಟಣಗಳು,೨೭೨೫ ಗ್ರಾಮಗಳನ್ನೊಳಗೊಂಡ ಇದು ಒಟ್ಟು ೧೦,೬೦೬ ಚದರ ಕಿ. ಮೀ.ಗಳ ವಿಸ್ತೀರ್ಣ ಹೊಂದಿದೆ.

ಐತಿಹಾಸಿಕವಾಗಿ ಈ ಬಯಲುಸೀಮೆಯಲ್ಲಿ ಕಿಬ್ಬನಹಳ್ಳಿ, ಪಾವಗಡ ಮತ್ತು ಮೂಗ್ನಾಯಕನ ಕೋಟೆಗಳು ಶಿಲಾಯುಗದ ಜನರ ನೆಲೆಗಳಾಗಿದ್ದವು. ತುಮಕೂರು ಆರಂಭದಲ್ಲಿ ಕದಂಬರ ಮತ್ತು ಗಂಗರ ಆಳ್ವಿಕೆಯಲ್ಲಿತ್ತು.  ೯-೧೦ನೇ ಶತಮಾನದ ವೇಳೆಗೆ ನೊಳಂಬರು ಆಳಿದ್ದಾರೆ. ನಂತರ ಇದು ವಿಜಯನಗರದ ಆಳ್ವಿಕೆಗೆ ಬಂತು. ಇಲ್ಲಿ ೨೫ ಪಾಳೇಗಾರ ಕುಟುಂಬಗಳು ಆಳ್ವಿಕೆ ಮಾಡಿದ್ದಾರೆ. ಕೊನೆಗೆ ಇವೆಲ್ಲ ಪಾಳೇಪಟ್ಟುಗಳು ಮೈಸೂರಿಗೆ ಸೇರಿದವು. ಪೂರ್ಣಯ್ಯನವರ ಕಾಲದಲ್ಲಿ ಮಧುಗಿರಿ ತಾಲೂಕು ಫೌಜುದಾರಿಯ ಒಂದು ಭಾಗವಾಗಿತ್ತು.೧೮೩೨ ರಲ್ಲ್ಲಿ ತುಮಕೂರು ಕಮಿಷನ್ನರ ಆಡಳಿತಕ್ಕೆ ಬಂದು ನಂದಿದುರ್ಗದ ಭಾಗವಾಯ್ತು. ೧೮೮೬ ರಲ್ಲಿ ಸರ್ಕಾರ ಪಾವಗಡಕ್ಕೆ ಜಿಲ್ಲೆಯ ಪಟ್ಟ ಕೊಟ್ಟು, ಪಾವಗಡವನ್ನುತುಮಕೂರಿಗೆ ಸೇರಿಸಿತು. ಈ ಜಿಲ್ಲೆಯಲ್ಲಿ ೨೦೦ ವರ್ಷ ಹಳೆಯ ರೋಮನ್ನರ ಕ್ಯಾಥೊಲಿಕ್ ಚರ್ಚ್ ಮತ್ತು ೭೦ ವರ್ಷ ಹಳೆಯ ಪಾರ್ಶ್ವನಾಥ ದೇವಾಲಯಗಳಿವೆ. ಈ ಜಿಲ್ಲೆ ಹಲವು ಸಿದ್ದರಿಗೆ ತಾಣವಾಗಿದೆ. ನಮ್ಮ ಜಿಲ್ಲೆಯ ಕೆಲವು ವಿಶೇಷ ಜಾಗಗಳ ಬಗ್ಗೆ ತಿಳಿಯೋಣ.

ಸಿದ್ದಗಂಗೆ

ಇದು ಸಿದ್ದರ ಪೂಜಾಸ್ಥಳವಾದರೂ , ಇಲ್ಲಿಯ ಮಠ ೫.೫೦೦ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕಲಿಸುತ್ತಿದೆ. ಇಲ್ಲಿ ಪ್ರಾಚೀನ ಅರ್ವಾಚೀನ ಪದ್ದತಿಯಲ್ಲಿ ಶಿಕ್ಷಣ ದೊರೆಯುತ್ತಿದ್ದು ಎಲ್ಲ ಜಾತಿಯ, ಮತದ ಮಕ್ಕಳಿಗೆ ಮತ್ತು ಅಂಧ ಮಕ್ಕಳಿಗೆ ಉಚಿತವಾಗಿ ಶಾಲೆ, ಊಟ ಮತ್ತು ವಸತಿಗಳಿವೆ.

ಗೂಳೂರು ಮತ್ತು ಕೈದಾಳ

ಇದು ತುಮಕೂರಿನ ದಕ್ಷಿಣಕ್ಕೆ ೫ ಕಿ.ಮೀ. ದೂರದಲ್ಲಿದೆ. ಇದು ಢಕಣಾಚಾರಿ ಕಡೆದ ದೊಡ್ಡ ಗಣಪತಿಗೆ ಪ್ರಸಿದ್ದ. ಕ್ರಿ.ಶ.೧೬೦೦ ರ ಅವಧಿಯಲ್ಲಿ ಶೂನ್ಯ ಸಂಪಾದನೆ ರಚಿಸಿದ ಸಿದ್ದವೀರಣ್ಣೊಡೆಯರು ಇದೇ ಊರಿನವರು.

ಕುಣಿಗಲ್

ಕ್ರಿ.ಶ. ೭೮೫ ರಿಂದ ಪ್ರಾರಂಭವಾಗಿ ಇದು, ಗಂಗವಂಶ,ರಾಷ್ತ್ರಕೂಟ ಮತ್ತು ಚೋಳರಿಂದ ಆಳಲ್ಪಟ್ಟಿದೆ. ಇಲ್ಲಿನ ಒಂದು ಕಲ್ಲಿನ ಮೇಲೆ ಶಿವನು ನರ್ತಿಸಿದ ಎಂಬ ಕಾರಣಕ್ಕೆ ’ಕುಣಿ-ಕಲ” ಆಗಿ, ಕುಣಿಗಲ್ ಆಯಿತು ಅನ್ನೊ ಪ್ರತೀತಿಯಿದೆ.

ಗೊರವನಹಳ್ಳಿ

ಸುಮಾರು ೩೦ ಕಿ.ಮೀ. ದೂರವಿದ್ದು ಇತ್ತೀಚೆಗೆ ಇಲ್ಲಿನ ಲಕ್ಷ್ಮಿ ದೇವಸ್ಠಾನಕ್ಕೆ ಪ್ರಸಿದ್ದಿ ಪಡೆದಿದೆ.

ಸಿದ್ದರ ಬೆಟ್ಟ

ಇದು ನಾನು ಪ್ರಥಮಬಾರಿಗೆ ಚಾರಣಕ್ಕೆ  ಬಳಸಿದ  ಸಣ್ಣ ಬೆಟ್ಟ. ೬,೬೦೦ ಅಡಿ ಎತ್ತರವಿದ್ದು ಪೊದೆ ಮತ್ತು ಮರಗಳಿಂದ ತುಂಬಿದೆ. ಇಲ್ಲಿ ಅಲ್ಲಮರು, ರೇವಣ ಸಿದ್ದೇಶ್ವರ, ಮರಳು ಸಿದ್ದ ಮತ್ತು ಸಿದ್ದಲಿಂಗೇಶ್ವರು ತಪಸ್ಸು ಮಾಡಿದರೆಂಬ ಪ್ರತೀತಿಯಿದೆ.

ಈ ಬೆಟ್ಟದ ಮೇಲೆ ಪೂರ್ತಿ ಕತ್ತಲೆ ಮತ್ತು ಮೌನ ಆವರಿಸಿರುವ ನೈಸರ್ಗಿಕ ಗುಹೆ ಇದ್ದು ,ಇದರ ಆಳದಲ್ಲಿ ಸುವರ್ಣಮುಖಿ ನದಿಯು ಉಗಮವಾಗುತ್ತದೆ. ಇದು ಎಂದಿಗೂ ಬತ್ತಿಲ್ಲವಂತೆ.  ತೆವಳಿ ಕುಳಿತು, ನೆಗೆದು ಈ ಗುಹೆಯ ಒಳಗಿಂದ ಬೆಟ್ಟದ ಹೊಟ್ಟೆಯೊಳಕ್ಕೆ ಇಳಿದು ನೋಡಿದರೆ ಈ ಇಡೀ ಬೆಟ್ಟ ಟೊಳ್ಳು ಎಂದು ಗೊತ್ತಾಗುತ್ತದೆ.

೪೦೦ ವರ್ಷಗಳ ಹಿಂದೆ, ಸಿದ್ದರಬೆಟ್ಟದ ನೆತ್ತಿಯಿಂದ ನಿಮ್ನ ವರ್ಗಕ್ಕೆ ಸೇರಿದ ಆದಿ ಕರ್ನಾಟಕ ಜನಾಂಗದ ಅರಸ ’ಕುರಂಗರಾ” ಎಂಬ ಅರಸ ಆಳಿದ್ದನಂತೆ,ಅವನ ನೆನಪಲ್ಲಿ ’ಕುರಂಕೋಟ” ಎಂಬ ಸಣ್ಣ ಊರಿದೆ.

ಈ ಜಾಗಕ್ಕಿರುವ ಮಹತ್ವ ಇಲ್ಲಿನ ಆಯುರ್ವೇದ ಮೂಲಿಕೆಗಳು ಮತ್ತು ಔಷಧೀಯ ಗುಣದ ನೀರಿನಿಂದ. ಈ ಕಾರಣ ಇಲ್ಲಿ ನಾನಾ ಕತೆಗಳಿವೆ.

೧) ಒಮ್ಮೆ ಕುರಂಗರಾಯನ ಆನೆ ತಪ್ಪಿಸಿಕೊಂಡು ಈ ಬೆಟ್ಟದ ಕಾಡೆಲ್ಲ ಸುತ್ತಾಡಿ, ಸೊಪ್ಪು-ಸದೆ ತಿಂದು ಹಿಂತಿರುಗಿ ಬಂತು. ಅದರ ಕಾಲಲಿದ್ದ ಸರಪಣಿ ಔಷಧೀಯ ಗುಣಗಳಿಂದಾಗಿ ಚಿನ್ನವಾಗಿತ್ತಂತೆ!

೨) ಒಮ್ಮೆ ಭೇಟೆಗಾರರು ಮೊಲವನ್ನು ಬೇಟೆಯಾಡಿ ಈ ಬೆಟ್ಟದ ಮೇಲೆ ಬಂದು ಬೇಯಿಸಲು ಕುಳಿತರಂತೆ. ಆಲ್ಲೇ ಇದ್ದ ಗಿಡದ ಕೋಲೊಂದನ್ನು ಮುರಿದು ಮಾಂಸವನ್ನು ತಿರುಗಿಸಲು ಬಳಸಿದ ಕೂಡಲೆ ಮೊಲಕ್ಕೆ ಜೀವ ಬಂದು ಜಿಗಿದು ಓಡಿಹೋಯ್ತಂತೆ!

೩) ಶ್ರೀರಾಮ ತನ್ನ ವನವಾಸದಲ್ಲಿ ಇಲ್ಲಿಗೆ ಬರದೆ ಇರಲಿಲ್ಲ, ಇಲ್ಲಿ ಕಾಕಾಸುರನೆಂಬ ರಾಕ್ಷಸ ಇಲ್ಲಿಗೆ ಬಂದಿದ್ದ ಸೀತೆಯ ಮೇಲೆ ಕಣ್ಣು ಹಾಕಿ ರಾಮನಿಂದ ಸೋಲಲ್ಪಟ್ಟು, ಶರಣಾಗತನಾದನಂತೆ. ಮತ್ತೆ ಆ ಕಡೆ ಎಂದೂ ಸುಳಿಯುವುದಿಲ್ಲ ಎಂದು ಮಾತು ಕೊಟ್ಟನಂತೆ. ಅಂದಿನಿಂದ ಈ ಬೆಟ್ಟದ ಸುತ್ತ ಕಾಗೆಗಳ ಸಂಚಾರ ಇಲ್ಲವಂತೆ!

ನಾನು ಚಾರಣಕ್ಕೆ ಹೋದಾಗ ಈ ಕತೆಗಳು ಗೊತ್ತಿಲ್ಲದ ಕಾರಣ ಯಾವುದನ್ನೂ ಪರೀಕ್ಷಿಸಿ ನೋಡಲಿಲ್ಲ. ಕ್ಷಮಿಸಿ.

ಮಧುಗಿರಿ

ಇದಕ್ಕಿದ್ದ ಮೊದಲ ಹೆಸರು ’ಮದ್ದಗಿರ”. ’ಒಮ್ಮೆ ಮಾಸ್ತಿ ವೆಂಕಟೇಶ ಅಯ್ಯಂಗಾರರು ಭೇಟಿ ನೀಡಿ, ಅಲ್ಲಿನ ಬೆಟ್ಟಗಳು, ಪ್ರಕೃತಿ ನೋಡಿ ಮೋಡಿ ಹೋದರಂತೆ. ಆ ಬೆಟ್ಟದಲ್ಲಿ ಸಮೃದ್ಧವಾಗಿದ್ದ  ’ಜೇನು ತವನಿಧಿ’ ನೆನಪು  ಸಾರ್ಥಕವಾಗುವಂತೆ ’ಮಧುಗಿರಿ’ ಎಂದು ನಾಮಕರಣ ಮಾಡಿದರಂತೆ.

ಮಿಡಿಗೇಶಿ

ಇದು ಮಧುಗಿರಿಯಿಂದ ೧೯ ಕಿ.ಮೀ. ದೂರದಲ್ಲಿದೆ. ಇಲ್ಲಿ ಹಿಂದೆ ಆಳ್ವಿಕೆ ನಡೆಸುತ್ತಿದ್ದ ನಾಗಿರೆಡ್ಡಿಯ ಸುಂದರ ಪತ್ನಿಯ ಕೂದಲು ಹಿಮ್ಮಡಿ ಮುಟ್ಟುತ್ತಿದ್ದ ಕಾರಣ ಈ ಜಾಗಕ್ಕೆ ’ಮಿಡಿಗೇಶ” ಎಂಬ ಹೆಸರು ಬಂತಂತೆ. ಇದು ಬಿಜ್ಜದರಸುಗಳ ರಾಜಧಾನಿಯೂ ಆಗಿತ್ತು.

ದೇವರಾಯನ ದುರ್ಗ-ನಾಮದ ಚಿಲುಮೆ

image

image

ತುಮಕೂರಿಂದ ೧೫ ಕಿ.ಮೀ. ದೂರದಲ್ಲಿ ದತ್ತ ಅರಣ್ಯದಿಂದ ಕೂಡಿದ ಈ ಜಾಗ ವಿಜಯನಗರದರಸನ ಸೇನಾಕೇಂದ್ರವಾಗಿತ್ತು. ೧೬೯೬ ರಲ್ಲಿ ಇದು ಮೈಸೂರಿನ ಚಿಕ್ಕದೇವರಾಜ ಒಡೆಯರ ವಶವಾಗಿ ಆಳಲ್ಪಟ್ಟಿತು.

ಇಲ್ಲಿ ಯೋಗನರಸಿಂಹ ಮತ್ತು ಭೋಗನರಸಿಂಹ ನ ದೇವಾಲಯಗಳಿವೆ. ಇಲ್ಲಿಗೆ ತಲುಪುವ ದಾರಿಯಲ್ಲಿ ನಾಮದ ಚಿಲುಮೆಯದೆ.

ರಾಮ ವನವಾಸದಲ್ಲಿದ್ದ ಸಮಯದಲ್ಲಿ ಇಲ್ಲಿಗೆ ಬಂದಿದ್ದನಂತೆ. ತನ್ನ ನಾಮವನ್ನು ತೇಯಲು ನೀರು ಸಿಗದ ಕಾರಣ, ತಾನು ಕೂತಿದ್ದ ಬಂಡೆಗೇ ಬಾಣ ಬಿಟ್ಟು ಅಂತರ್ಜಲ ಚಿಮ್ಮುವಂತೆ ಮಾಡಿದನಂತೆ. ಹೀಗಾಗಿ ಇದು ನಾಮದ ಚಿಲುಮೆಯಾಯಿತು. ಇಲ್ಲಿ ಸರ್ಕಾರ ಒಂದು ಜಿಂಕೆವನವನ್ನು ಮಾಡಿದೆ. ಇಲ್ಲಿನ ಅರಣ್ಯದಲ್ಲಿ ಆಗೀಗ ಚಿರತೆಗಳ ಹಾವಳಿ ನಡೆಯುತ್ತಲೇ ಇರುತ್ತದೆ. ಮಾಧ್ಯಮಿಕ ಶಾಲೆಯನ್ನು ಬಿಟ್ಟ ೧೫ ವರ್ಷಗಳ ನಂತರ  ನಾವೆಲ್ಲ ಮತ್ತೆ ಸೇರಿದ್ದು ಇಲ್ಲಿಯೇ!

ಎಡೆಯೂರು

೭೦೭ ವಚನಗಳನ್ನೊಳಗೊಂಡ ಷಟ್ಸ್ಥಲ  ಘ್ನಾನ ಸಾರಾಮೃತವನ್ನು ಬರೆಯ ಯತಿ ಸಿದ್ದಲಿಂಗ ಎನ್ನುವವರ ಸಮಾಧಿ ಸ್ಠಳವಿದು. ಇವರ ಸಮಾಧಿಯನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಿದ್ದಾರೆ. ನಾಗಿಣಿ ಎನ್ನುವ ನದಿ ತೀರದ ಕಗ್ಗೆರೆ ಎನ್ನುವ ಊರಿನ ತೋಪಿನಲ್ಲಿ ತಪಸ್ಸು ಮಡಿದ್ದರಿಂದ ಈ ಸಿದ್ದರಿಗೆ ’ತೋಂಟದ ಸಿದ್ದಲಿಂಗ’ ಎಂಬ ಹೆಸರು ಬಂದಿದೆ.

ಬಸವಣ್ಣನವರ ನಂತ ಬಂದ ಸಿದ್ದರಲ್ಲಿ ಇವರಿಗೆ ಪ್ರಮುಖ ಸ್ಠಾನ.

ಬರಗೂರು

ಇದು ಶಿರಾ ತಾಲ್ಲೂಕಿಂದ ಹೆಂಜೇರು-ಹೇಮಾವತಿಗೆ ಹೋಗುವ ದಾರಿಯಲ್ಲಿದೆ.ಇದು ನೊಣಂಬರ ಕಾಲದಲ್ಲಿ ಪ್ರಸಿದ್ದ ಶಿಕ್ಷಣ ಕೇಂದ್ರವಾಗಿತ್ತು. ವಿಶೇಷವೆಂದರೆ ಇಲ್ಲಿ ಬ್ರಹ್ಮಚಾರಿಗಳಿಗೆ ಮಾತ್ರ ವಿದ್ಯೆ ಹೇಳಿಕೊಡಲಾಗುತಿತ್ತು. ಇವರಲ್ಲಿ ಸೋಮಭಟ್ಟಾರಕ, ವಿಮಲೆ ಮತಿ ಭಟ್ಟಾರಕ ಇತರರು ಪ್ರಸಿದ್ದರು.

ಮಂದರಗಿರಿimage

ಇದೊಂದು ಬೆಟ್ಟ. ಇತ್ತೀಚೆಗೆ ಇಲ್ಲಿ ಜೈನರು ಮಹಾಬಲಿಯನ್ನು ಸ್ಠಾಪಿಸಿದ್ದಾರೆ. ಇದರ ಬಗಲಲ್ಲಿರುವ ಬಸ್ತಿ ಜೈನ ಆಚಾರ್ಯಯರು ಉಪಯೋಗಿಸುವ  ‘ಪಿಂಚಿ ‘ ಆಕಾರದಲ್ಲಿರುವುದು ಆಕರ್ಷಕವೆನಿಸುತ್ತದೆ.

ಆರಳುಗುಪ್ಪ

ತಿಪಟೂರಿನ ಕೆಬಿ ಕ್ರಾಸ್ ಬಳಿ ಇರುವ ಇತಿಹಾಸಿಕ ಗ್ರಾಮ.೧೧ ನೇ ಶತಮಾನದಲ್ಲಿ ಪುಲಕೇಶಿ ರಾಜರಿಂದ ಆಳಲ್ಪಟ್ಟು ನಂತರ ದ್ರಾವಿಡರ ಪಾಲಾಯ್ತು.೧೦೯೧ ರಲ್ಲಿ ಕಟ್ತಿದ ಕಲ್ಲೇಶ್ವರನ ದೇವಾಲಯವನ್ನು ಇಲ್ಲಿ ನೀವು ನೋಡ ಬಹುದು.

ತುಮಕೂರಿನಲ್ಲಿ ಒಟ್ಟು ೮೮೩ ಚದರ ಕಿ.ಮೀ. ಅರಣ್ಯ ಪ್ರದೇಶವಿದೆ. ಜಯಮಂಗಲಿ, ಶಿಂಷಾ,ಸುವರ್ಣಮುಖಿ,ನಾಗಿಣಿ, ಗರುಡಾಚಲ ಮತ್ತು ಉತ್ತರ ಪಿನಾಕಿನಿ  ಈ ಜಿಲ್ಲೆಯ ನದಿಗಳು.

ಇಲ್ಲಿನ ಜನಗಳಿಗೆ ಧಾವಂತದ ಬದುಕು ಗೊತ್ತಿಲ್ಲ. ಶಿಕ್ಷಣಕ್ಕೆ ಆದ್ಯತೆ, ಆಲಸ್ಯದ ಜೀವನ ಶೈಲಿ ಇಲ್ಲಿದ್ದು, ಬೆಂಗಳೂರಿನ ಸಮೀಪವೇ ಇದ್ದರೂ ಕನ್ನಡವನ್ನು  ಕೈ ಬಿಟ್ಟಿಲ್ಲ. ಯಾವುದೇ ದೊಡ್ಡ ವ್ಯಾಜ್ಯಗಳಲ್ಲಿ ಸಿಲುಕದೆ, ದೊಡ್ಡ ಹೆಸರಿಲ್ಲದೆ, ಮಂದಗತಿಯ ಬೆಳವಣಿಗೆಯಿಂದ ಕೂಡಿದ ಈ ಜಿಲ್ಲೆ ಬೆಂಗಳೂರಿನಂತೆ ಅಪರಿಚಿತವಾಗುವ ಕಾಲ ಸದ್ಯಕ್ಕಂತೂ ಇಲ್ಲ.

ಇಂತ ತಟಸ್ಠ ಊರಿನವರನ್ನು ಯಾವುದೋ ತರ್ಲೆ ಮಾಡಿ, ತಲೆ ನೀರು ಕಾಯಿಸಿಕೊಂಡಿದ್ದನೇನೋ ಆ ಗುಮಾಸ್ತ ಅನ್ನುವುದು ನನ್ನ ಗುಮಾನಿ!

4 thoughts on “‘ನೋಡು ಬಾ ನಮ್ಮೂರ ಸರಣಿ’: ನಮ್ಮೂರು ತಟಸ್ಠ ತುಮಕೂರು – ಪ್ರೇಮಲತ ಬಿ

  1. ಸೊಗಸಾಗಿದೆ. ಇನ್ನಷ್ಟು ಚಿತ್ರಗಳಿದ್ದರೆ ಒಳ್ಳೆ ರಂಗು ಬರುತ್ತಿತ್ತು.

    Like

  2. ’ಏನ ಕೇನ ಪ್ರಕಾರೇಣ’ ಯಾರೊಬ್ಬರಿಗೋ ಯಾವ ಊರಿಗೋ ಹೆಸರು ಬಿದ್ದುಬಿಟ್ಟಿರುತ್ತದೆ, ತರ್ಲೆ ಅಂತ. ಅದನ್ನು ಸಾಮಾನ್ಯೀಕರಿಸಲಾಗದು (generalise), ಬಾರದು! ಬರೀ ಟ್ರೇನಿನಲ್ಲಿ ಕುಳಿತಾಗ ಆ ಸ್ಟೇಶನ್ನಿನಲ್ಲಿ ತುಮಕೂರಿನ ಹೆಸರು ಮೊದಲು ಓದಿದ್ದೆ. ನಂತರವೂ ಆ ಊರಿನ ಬಗ್ಗೆ ಏನೂ ಗೊತ್ತಿರದ ನನಗೆ ಈಗ ಸ್ಥಳ ಮಹಾತ್ಮೆ, ಜನ ಮಹಾತ್ಮೆಯ ಪರಿಚಯವಾಯ್ತು! ಈಗ ತಾನೆ ಏರಿಸಿದ ಚಿತ್ರಗಳಿಂದ ಕೆಲ ಸ್ಥಳಗಳ ಪರಿಚಯ ಸಹ. ಪ್ರೇಮಲತಾ ಅವರಿಗೆ ಧನ್ಯವಾದಗಳು. ಚಿಕ್ಕಂದಿನಲ್ಲಿ ತರ್ಲೆ ಮಾಡಿದ, ತುಂಟತನ ಮಾಡಿದ ಖ್ಯಾತಿ (ನನ್ನನ್ನೂ ಕೂಡಿಸಿ) ಯಾರಿಗಿಲ್ಲ?
    ಶ್ರೀವತ್ಸ ದೇಸಾಯಿ

    Like

  3. ಪ್ರೇಮಲತಾ ನಮ್ಮಮ್ಮ ಮಧುಗಿರಿ ಬೆಟ್ಟದ ಬಗ್ಗೆ ನಮಗೆಲ್ಲಾ ಬಹಳಷ್ಟು ಸಾರಿ ಹೇಳಿದ ನೆನಪು. ಆದರೆ ಅದರ ಹೆಸರಿನ ಹಿಂದೆ ಕನ್ನಡದ ದೊಡ್ಡ ಆಸ್ತಿ , ಮಾಸ್ತಿ ಅವರ ಕೈವಾಡ ಇದೆ ಎಂದು ನಿಮ್ಮ ಲೇಖನದಿಂದಲೇ ತಿಳಿಯಿತು. ತರ್ಲೆ ತುಮಕೂರಿಗೆ ಒಂದು ಸಾರಿ ನಾನು ೨ ನೆಯ ಕ್ಲಾಸಿನಲ್ಲಿ ಇದ್ದಾಗ ಭೇಟಿ ನೀಡಿದ್ದ ನೆನಪು. ನಿಮ್ಮ ಶಾಲೆ ದಿನಗಳಲ್ಲಿ, ನಿಮ್ಮ ತಂಡದೊಡನೆ ನೀವೂ ಬಹಳ ತುಂಟಾಟದ ಕಾರ್ಯಗಳನ್ನು ನಡೆಸಿದ್ದೀರಿ ಎಂದಾಯ್ತು. ನಿಮ್ಮೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಉತ್ತಮ ಮಾಹಿತಿಯನ್ನು ನೀಡಿದ್ದೀರಿ. ಆ ಸ್ಥಳಗಳ ಹಿಂದಿನ ಇತಿಹಾಸ ಮತ್ತು ಪೌರಾಣಿಕ ವಿಷಯಗಳನ್ನು ಬಹಳ ಆಸಕ್ತಿಪೂರ್ಣವಾಗಿ ನಮಗೆಲ್ಲಾ ತಿಳಿಸಿದ್ದೀರಿ. ನೀವು ಹೇಳಿರುವಂತೆ ತುಮಕೂರು ಒಂದು ರೀತಿಯಲ್ಲಿ ತಟಸ್ಥ ಊರೇ . ಅಲ್ಲಿಂದ ಸಾಧಾರಣವಾಗಿ ಯಾವ ರೀತಿಯ ವೈಪರೀತ್ಯ ಘಟನೆಗಳನ್ನೂ ಅಷ್ಟಾಗಿ ಕೇಳುವುದಿಲ್ಲ. ಅಲ್ಲಿನ ಜನತೆ ತಟಸ್ಥವಾಗಿಯೇ ಇರುತ್ತಾರೆ ಅನ್ನಿಸುತ್ತೆ. ಆದರೆ ಈಗ ತುಮಕೂರು ಒಂದು ಪ್ರಸಿದ್ಧ ಶೈಕ್ಷಣಿಕ ಕೇಂದ್ರವಾಗಿ ಅಭಿವೄದ್ಧಿ ಹೊಂದಿದೆ ಅಲ್ಲವೇ. ನಿಮ್ಮೂರಿನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಮಗೆಲ್ಲಾ ಹೀಗೆ ನೀಡುತ್ತಿರಿ. ಈ ಸರಣಿಯಲ್ಲಿ ಇನ್ನೂ ಅನೇಕ ಲೇಖನಗಳು ನಿಮ್ಮಿಂದ ಹೊರಬರಲಿ.
    ಉಮಾ

    Like

  4. ಪ್ರೇಮಲತಾ ಅವರ ನೋಡು ಬಾ ಸರಣಿಯ ತಟಸ್ಥ ತುಮಕೂರಿನ ವಿವರಣೆ ಚೆನ್ನಾಗಿದೆ. ತಿಳಿಹಾಸ್ಯ ಇದ್ದರೂ ವಿಷಯ ನಿರೂಪಣೆ ವಿಸ್ತಾರವಾಗಿ , ಮಾಹಿತಿ ಪೂರ್ಣವಾಗಿರುವುದು ವಿಶೇಷ. ನಾನು ಕೂಡಾ ತುಮಕೂರಿನ ನೀರು ಕುಡಿದವನೇ. ಮೈದಾಳ ಎಂಬ ಗ್ರಾಮದಿಂದ ಕ್ಯಾತ್ಸಂದ್ರಕ್ಕೂ, ತುಮಕೂರಿಗೂ ಕೆಲವೊಮ್ಮೆ ನಡೆದು ಹೋಗುತ್ತಿದ್ದೆವು. ಬೆಳಕು , ಸಮಯ ಇದ್ದಾದರೆ ನಮ್ಮ ಸವಾರಿ ಸಿದ್ಧಗಂಗೆ ಗೂ “ಆನ್ ದಿ ವೇ “ ಹೋಗುವುದಿತ್ತು. ಅಂದಹಾಗೆ ಇವರು ಉಲ್ಲೇಖಿಸಿದ ಬರಗೂರು ನಾನು ಬೆಳೆದ ಬರಗೂರಲ್ಲ , ಹಾಗೇ ಇಲ್ಲಿನ ಕಗ್ಗೆರೆಯ ಬಳಿ ನನ್ನದೊಂದು ಚಿಕ್ಕ ಜಮೀನು ಇದೆ! ತುಮಕೂರಿನ ಅಂಧ್ರ ಸೀಮೆಯ ಜಾಗಗಳು ತರಲೆಗೆ ಹೆಸರುವಾಸಿಯೇ. ಗುಮಾಸ್ತನಿಂದ ಪ್ರಾರಂಭವಾಗಿ ಅವನ ಉಲ್ಲೇಖದೊಂದಿಗೇ ಮುಗಿಯುವ ಪರಿಯೂ ಚಕ್ರಸುತ್ತಿ ಬಂದ ಅನುಭವ ನೀಡುತ್ತದೆ
    ತವರೂರಿನ ನೆನಪಿನ ಬರಹ ಇಷ್ಟವಾಯ್ತು.

    Like

Leave a comment

This site uses Akismet to reduce spam. Learn how your comment data is processed.