‘ಕಂಪ್ಯೂಟರಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಮತ್ತು ಫೋನಿನಲ್ಲಿ ಕನ್ನಡದಲ್ಲಿ ಹೇಗೆ ಬರೆಯುವುದು?’ – ಕೇಶವ ಕುಲಕರ್ಣಿ

ಲ್ಯಾಟಿನ್/ ರೋಮನ್ ಲಿಪಿಯಲ್ಲಿ (ಇಂಗ್ಲೀಷ್ ಭಾಷೆಯನ್ನು ಬರೆಯುವ ಲಿಪಿ) ಕನ್ನಡವನ್ನು ಬರೆದರೆ ಅದನ್ನು ಓದಲು ಪಡುವ ಕಷ್ಟ ಹೇಳುವುದೂ ಕಷ್ಟ (Latin/ Roman lipyalli kannadavannu baredare adannu odalu paduva kashta heluvudu kashta).  ಕನ್ನಡವನ್ನು ಕನ್ನಡದಲ್ಲಿ ಬರೆದರೇ ಚೆಂದ, ಓದುವವರಿಗೂ ಅನುಕೂಲ. ಕನ್ನಡ ಲಿಪಿ ತುಂಬ ಸುಂದರ ಕೂಡ. ಕನ್ನಡವನ್ನು ಉಳಿಸುವ ಕೆಲಸ ಆಗಬೇಕು ಅಂತಿದ್ದರೆ ಕನ್ನಡದಲ್ಲಿ ಬರೆಯುವ ಕೆಲಸ ನಿರಂತರವಾಗಿ ನಡೆಯಬೇಕು. ಆದ್ದರಿಂದ ಕನ್ನಡವನ್ನು ಅದಷ್ಟು ಹೆಚ್ಚಾಗಿ ಬಳಸ ಬೇಕು.

cc-wiki

‘ಕಂಪ್ಯೂಟರಿನಲ್ಲಿ ಫೋನಿನಲ್ಲಿ ಕನ್ನಡದಲ್ಲಿ ಹೇಗೆ ಬರೆಯುವುದು?’, ಇದು ಬಹಳ ಜನ ಕನ್ನಡಿಗರು ಕೇಳುವ ಪ್ರಶ್ನೆ, ‘ಕಂಪ್ಯೂಟರಿನಲ್ಲಿ ಕನ್ನಡದಲ್ಲಿ ಬರೆಯಲು ಬರುತ್ತಾ?’ ಎಂದು ಹುಬ್ಬೇರಿಸುವವರನ್ನೂ ನೋಡಿದ್ದೇನೆ. ‘ಕನ್ನಡದಲ್ಲಿ ಯಾಕ್ರಿ ಬರೀಬೇಕು?’ ಎಂದು ಶುದ್ಧ ಕನ್ನಡದಲ್ಲೇ ಕೊಂಕು ನುಡಿದವರನ್ನೂ ಕೇಳಿದ್ದೇನೆ.

ಅದೆಲ್ಲ ಇರಲಿ… ಕಾಲವೊಂದಿತ್ತು. ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳು ಕಣ್ಣಿಗೆ ಬಿದ್ದರೆ ಆನಂದವಾಗುತ್ತಿತ್ತು. ಬರಬರುತ್ತ ತಂತ್ರಾಂಶ (software)ದಲ್ಲಿ ಬದಲಾವಣೆಗಳಾದವು, ಕನ್ನಡ ಭಾಷೆ ಜಾಲದಲ್ಲಿ ಕಾಣಿಸಿಕೊಳ್ಳಲು ಆರಂಭವಾಯಿತು. ಕನ್ನಡ ಭಾಷೆಯನ್ನು ಕಂಪ್ಯೂಟರಿನ ಕೀಲಿಮಣೆಯಲ್ಲಿ ಕುಟ್ಟಲು ಸುಮಾರು ತಂತ್ರಾಂಶಗಳು ಬಂದರೂ, ಕನ್ನಡ ಕೀಲಿಮಣೆಯನ್ನು ಕನ್ನಡಿಗರ ಮನೆ ಮನೆಗೆ ತಲುಪಿಸಿದ್ದು, ಬರಹ (www.baraha.com). ಸುಮಾರು ಒಂದೂವರೆ ದಶಕದ ನಂತರ ಕನ್ನಡಕ್ಕೀಗ ಯುನಿಕೋಡ್ ಸಿಕ್ಕಿದೆ. ಕನ್ನಡ ಲಿಪಿಯನ್ನು ಕಂಪ್ಯೂಟರಿಗೆ ತರಲು ಮಾಡಿದ ಸಾಹಸಗಳು, ಜಗಳಗಳು, ವಾದಗಳು, ಯುನಿಕೋಡ್ ಮಾಡುವವರೆಗಿನ ಪ್ರಯತ್ನಗಳು – ಅವೆಲ್ಲ ಇರಲಿ, ಅವುಗಳ ಬಗ್ಗೆ ಬರೆಯದೇ ಕನ್ನಡವನ್ನು ಕಂಪ್ಯೂಟರಿನಲ್ಲಿ, ಫೋನಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಹೇಗೆ ಕುಟ್ಟುವುದು ಎನ್ನುವುದನ್ನು ನೋಡೋಣ:

ಈ ಎಲ್ಲ ತಂತ್ರಾಂಶಗಳೂ ಮಾಡುವ ಸುಲಭದ ಕೆಲಸವೆಂದರೆ, ಕನ್ನಡ ಪದವನ್ನು ಇಂಗ್ಲೀಷಿನಲ್ಲಿ ಬರೆಯುತ್ತ ಹೋದರೆ ಸಾಕು, ಕನ್ನಡ ತಾನೇ ತಾನಾಗಿ ಮೂಡುತ್ತೆ!

ಉದಾಹರಣೆಗಳು:

‘ಗಮನ’ ಎಂದು ಬರೆಯಲು gamana ಎಂದು ಬರೆದರಾಯಿತು.kannada transliteration

ಘಮ = Gama ಅಥವಾ ghama

ಪರಿಮಳ = parimaLa

ಆಗಂತುಕ = aagaMtuka

ದೃಷ್ಟದ್ಯುಮ್ನ = dRShTadyumna

ಯಾವಾಗ ದೊಡ್ಡಕ್ಷರ (capital letter), ಯಾವಾಗ ಚಿಕ್ಕಕ್ಷರ (small letters) ದಲ್ಲಿ ಬರೆಯಬೇಕು ಎನ್ನುವುದನ್ನು ಸ್ವಲ್ಪೇ ಸ್ವಲ್ಪ ಪ್ರಯತ್ನ ಮಾಡಿ ಕಲಿಯಬಹುದು.

ವಿಂಡೋಸ್ ಕಂಪ್ಯೂಟರ್ (Windows OS):

ವಿಂಡೋಸ್ ಬಳಸುವವರಿಗೆ ಕನ್ನಡದಲ್ಲಿ ಬರೆಯಲು ಬೇಕಾದಷ್ಟು ತಂತ್ರಾಂಶಗಳು ಇವೆ. ಅವುಗಳಲ್ಲಿ ಉಪಯುಕ್ತವಾಗಿರುವುದನ್ನು ಇಲ್ಲಿ ಬರೆಯುತ್ತೇನೆ:

ಇಳಿಸಿಕೊಳ್ಳಬಹುದಾದ ತಂತ್ರಾಂಶಗಳು (Downloadable Softwares): ಇವುಗಳಿಗೆ ಇಂಟರ್ನೆಟ್ ಸಂಪರ್ಕ ಬೇಕಿಲ್ಲ.

ಬರಹ (www.baraha.com): ಇದು ಕನ್ನಡದ ಅತ್ಯುತ್ತಮ ತಂತ್ರಾಂಶ. ಇದರಲ್ಲಿ ಕನ್ನಡದಲ್ಲಿ ಮಾತ್ರವಲ್ಲದೇ ಭಾರತದ ಬಹುತೇಕ ಭಾಷೆಗಳಲ್ಲಿ ಬರೆಯಲು ಬರುತ್ತದೆ. ಬರಹದ ನೋಟ್ ಪ್ಯಾಡಿನಲ್ಲಿ ಕನ್ನಡದಲ್ಲಿ ಬರೆದು ಅದನ್ನು ಉಳಿಸಿಕೊಳ್ಳಬಹುದು.

ನುಡಿ: ಕನ್ನಡದಲ್ಲಿ ಬರೆಯಲು ಕರ್ನಾಟಕ ಸರಕಾರ ಕನ್ನಡ ತಂತ್ರಾಂಶವನ್ನು ಉಚಿತವಾಗಿ ಕೊಟ್ಟಿದೆ, ಆದರೆ ಇತ್ತೀಚೆ ಅದು ಕರ್ನಾಟಕ ಸರಕಾರದ ಜಾಲದಲ್ಲಿ ಪತ್ತೆಗೇ ಇಲ್ಲ.

ಪದ (http://www.pada.pro): ಇದು ಕನ್ನಡದಲ್ಲಿ ಬರೆಯಲು ಇರುವ ಉಚಿತ ತಂತ್ರಾಂಶ (ನಾನೀಗ ಕನ್ನಡದಲ್ಲಿ ಬರೆಯುತ್ತಿರುವುದು ಇದರಿಂದ). ಕನ್ನಡದಲ್ಲಿ ಅಲ್ಲದೇ ಭಾರತದ ಇತರ ಭಾಷೆಗಳಲ್ಲಿ ಕೂಡ ಕುಟ್ಟಲು ಬರುತ್ತದೆ.  ಪದದ ನೋಟ್ ಪ್ಯಾಡಿನಲ್ಲಿ ಕನ್ನಡದಲ್ಲಿ ಬರೆದು ಅದನ್ನು ಉಳಿಸಿಕೊಳ್ಳಬಹುದು.

.ime (input method editor) ತಂತ್ರಾಂಶಗಳು: ಇವುಗಳಿಗೂ ಇಂಟರ್ನೆಟ್ ಸಂಪರ್ಕ ಬೇಕಿಲ್ಲ. ಈ ತಂತ್ರಾಂಶದಿಂದ ಎಲ್ಲಿ ನೀವು ಟೈಪಿಸಿದ್ದೆಲ್ಲ ಕನ್ನಡದಲ್ಲೇ ಇರುತ್ತದೆ, ಅದು ವರ್ಡ್ ಇರಬಹುದು, ಇಮೇಲ್ ಇರಬಹುದು, ಗೂಗಲ್ಲಿನ ಹುಡುಕು ಇರಬಹುದು.

.ime ತಂತ್ರಾಂಶಗಳು ಮೇಲೆ ಹೇಳಿದ ತಂತ್ರಾಂಶಗಳಿಗಿಂತ ಹೆಚ್ಚು ಉಪಯುಕ್ತ. ಏಕೆಂದರೆ ಈ .ime ಕಂಪ್ಯೂಟರಿನ ಬಲಬದಿಯ ಮೂಲೆಯಲ್ಲಿ ಕುಳಿತುಕೊಳ್ಳುತ್ತದೆ (ಬ್ಯಾಟರಿ, ಧ್ವನಿವರ್ಧಕದ ಚಿತ್ರಗಳು ಇರುತ್ತದಲ್ಲ, ಅಲ್ಲಿ). ಇದರ ಲಾಭ ಏನೆಂದರೆ, ಕನ್ನಡವನ್ನು ಎಲ್ಲಿ ಬೇಕಾದರೂ ಬರೆಯಲು ಶುರುಮಾಡಬಹುದು. ವರ್ಡ್, ಪಾವರ್ ಪಾಂಯ್ಟ್, ಫೇಸ್ ಬುಕ್, ಬ್ಲಾಗ್… ಎಲ್ಲಿ ಬೇಕೆಂದರಲ್ಲಿ. ಕನ್ನಡದಿಂದ Englishಗೆ, ಇಂಗ್ಲೀಷಿನಿಂದ ಕನ್ನಡಕ್ಕೆ ಅದಲು ಬದಲು ಮಾಡಲು F11 (ಅಥವಾ ಅಂಥಹದೇ ಇನ್ನೊಂದು) ಗುಂಡಿ ಒತ್ತಿದರೆ ಸಾಕು.

ಬರಹ (www.baraha.com) ದಲ್ಲಿ .ime ತಂತ್ರಾಂಶವಿದೆ.

ಪದ (http://www.pada.pro/download/) ದಲ್ಲಿ ಕೂಡ .ime ತಂತ್ರಾಂಶವಿದೆ (ನಾನೀಗ ಬಳಸುತ್ತಿರುವುದು ಇದನ್ನೇ).

ಗೂಗಲ್ (http://www.google.com/inputtools/windows/installation.html)ನಲ್ಲಿ .ime ತಂತ್ರಾಂಶವನ್ನು ಇಳಿಸಿಕೊಳ್ಳಬಹುದು.

Add-on/ Extension ಆಗಿ ಕನ್ನಡದಲ್ಲಿ ಬರೆಯುವುದು:

Internet Explorer, Mozilla Firefox, Google Chrome ಮತ್ತು Apple Safari ಈ ನಾಕು ಜನಪ್ರಿಯ ವೀಕ್ಷಕ ತಂತ್ರಾಂಶಗಳು (browser). ಇವುಗಳಲ್ಲಿ add-on ಅಥವಾ extension ಹಾಕಿಕೊಳ್ಳುವುದು ಸುಲಭ. ಗೂಗಲ್ ಕ್ರೋಮಿನಲ್ಲಿ ಅತಿ ಸುಲಭ. ಗೂಗಲ್ಲಿನ Indian languages extension ಹಾಕಿಕೊಂಡರೆ ಸಾಕು, ಯಾವ ತಂತ್ರಾಂಶಗಳನ್ನು ಇಳಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಅದೇ ತರಹ Quillpad Roaming ಕೂಡ ಇದೆ.

ಮ್ಯಾಕ್ (Apple ಕಂಪ್ಯೂಟರ್):

ಆಪಲ್ಲಿನ  ಮ್ಯಾಕ್ ಕಂಪ್ಯೂಟರಿನಲ್ಲಿ ಕನ್ನಡ ತಂತ್ರಾಂಶಗಳು ಇಲ್ಲವೆಂದೇ ಹೇಳಬೇಕು. ಹಾಗೆಂದ ಮಾತ್ರಕ್ಕೆ ಆಪಲ್ಲಿನಲ್ಲಿ ಕನ್ನಡ ಬರೆಯಲು ಬರುವುದಿಲ್ಲ ಎಂದಲ್ಲ. ಅದು ಸ್ವಲ್ಪ ಕಷ್ಟಕರ. ಮ್ಯಾಕಿನಲ್ಲಿ ಕನ್ನಡದಲ್ಲಿ ಬರೆಯುವುದು ಹೇಗೆ ಎಂದು ಈ ಕೊಂಡಿಯನ್ನು ಒತ್ತಿ: http://shreevatsa.wordpress.com/2013/04/07/typing-kannada-on-mac-os-x/  ಅಥವಾ http://www.hpnadig.net/blog/typing-kannada-mac-uim-and-m17n-mac-os-x

ಇಷ್ಟೆಲ್ಲ ಕಷ್ಟ ಬೇಡಪ್ಪ, ಇದು ಅರ್ಥವಾಗುತ್ತಿಲ್ಲ ಎನ್ನುವುದಾದರೆ, ಸಫಾರಿಯ ಸಹಾಯದಿಂದ ಗೂಗಲ್ ಕ್ರೋಮನ್ನು ಇಳಿಸಿಕೊಳ್ಳಿ, ಅದರಲ್ಲಿ Indian language extension ಅನ್ನು ಇಳ್ಳಿಸಿಕೊಳ್ಳಿ, ಕನ್ನಡದಲ್ಲಿ ಬರೆಯಿರಿ.

ಐಫೋನ್ ಮತ್ತು ಐಪ್ಯಾಡ್ (iOS):

ಕನ್ನಡ ಲಿಪಿಯನ್ನು ಐಫೋನು ಐಪ್ಯಾಡುಗಳಲ್ಲಿ ಓದುವುದು ಮೊದಲಿನಿಂದಲೂ ಬಂದಿದೆ, ಆದರೆ ಬರೆಯುವ ವಿಷದಲ್ಲಿ ಬಂದರೆ ಐ-ಆಸಿನಲ್ಲಿ ಕನ್ನಡ ಬರೆಯುವುದು ಕಷ್ಟದ ಕೆಲಸವೆನ್ನದೇ ವಿಧಿಯಿಲ್ಲ. Type Kannada ಎನ್ನುವ app ಇದೆ. ಅದರಲ್ಲಿ ಕನ್ನಡದಲ್ಲಿ ಟೈಪಿಸಿ, ಅದನ್ನು Copy-Paste ಮಾಡಬೇಕು. iOS8ರಲ್ಲಿ ಬೇರೆ ಕೀಲಿಮಣೆಗೆ ಮೊಟ್ಟಮೊದಲ ಬಾರಿಗೆ ಆಸ್ಪದ ಮಾಡಿಕೊಟ್ಟಿದೆ, ಆಪಲ್. ಕನ್ನಡ ಕೀಬೋರ್ಡುಗಳು iTunesನಲ್ಲಿ ಕಾಣಿಸಲು ಶುರುವಾಗುವೆ. ಉದಾ: https://itunes.apple.com/us/app/id913006887, https://itunes.apple.com/us/app/kannada-keyboard/id443730529https://itunes.apple.com/tc/app/kannada-keyboard-for-ios/id591308262. ಯಾವುದು ಕಾಳು ಯಾವುದು ಜೊಳ್ಳು ಉಪಯೋಗಿಸುವವರೇ ನಿರ್ಧರಿಸಬೇಕು.

ಆಂಡ್ರಾಯ್ಡ್ ಫೋನು ಮತ್ತು ಟ್ಯಾಬ್ಲೆಟ್ಟುಗಳು (Android OS):

ಆಂಡ್ರಾಯ್ಡಿನಲ್ಲಿ ಇತ್ತೀಚಿನವರೆಗೂ (version 3) ವರೆಗೂ ಕನ್ನಡದಲ್ಲಿ ಬರೆಯುವುದನ್ನು ಬಿಡಿ, ಓದಲು ಕೂಡ ಆಗುತ್ತಿರಲಿಲ್ಲ. ಅದಾದ ನಂತರ ಕನ್ನಡವನ್ನು ಓದಬಹುದು, ಬರೆಯಬಹುದು. ಇನ್ನೂ ಗೂಗಲ್ಲಿನ ಕೀಲಿಮಣೆಯಲ್ಲಿ ಕನ್ನಡವಿಲ್ಲ, ಆದರೆ ಹೊಸ ಆಂಡ್ರಾಯ್ಡಿ ನಲ್ಲಿ, ಅಂದರೆ Android Lollipopನಲ್ಲಿ ಕನ್ನಡ ಹಾಸುಹೊಕ್ಕಾಗಿದೆ (inbuilt) ಎಂದು ಗೂಗಲ್ ಪ್ರಕಟಿಸಿದೆ. ಕನ್ನಡದ appಗಳಿಗೆ ಕನ್ನಡದ ಕೀಲಿಮಣೆ appಗಳಿಗೆ ಬರವಿಲ್ಲ. ಹುಡುಕಿದರೆ ಹತ್ತರಿಂದ ಹದಿನೈದು appಗಳು ಸಿಗುತ್ತವೆ. ನಾನು ಆಂಡ್ರಾಯ್ಡಿನಲ್ಲಿ ಬಂದಿರುವ ಎಲ್ಲ ಕನ್ನಡದ appಗಳನ್ನು ಜಾಲಾಡಿಸಿದ್ದೇನೆ. ಅವುಗಳಲ್ಲಿ ತುಂಬ ಚೆನ್ನಾಗಿರುವುದನ್ನೇ ಇಲ್ಲಿ ಕೊಡುತ್ತೇನೆ:

ಪದ ನೋಟ್ ಪ್ಯಾಡಿನಂತೆ ಉಪಯೋಗಿಸಲು ಚೆನ್ನಾಗಿದೆ.

ಅತ್ಯುತ್ತಮ ಕೀಲಿಮಣೆ: ‘Just Kannada‘. ಅದು ಬಿಟ್ಟರೆ uKeyboard. ಇನ್ನೂ ಬೇಕಾದಷ್ಟು ಕನ್ನಡದ ಕೀಲಿಮಣೆಗಳಿವೆ. ಆದರೆ Just Kannada’ದ ಉಪಯೋಗಿಸಲು ತುಂಬ ಸುಲಭ. ಗೂಗಲ್ಲಿನ ಕೀಬೋರ್ಡಿನಲ್ಲೇ ಕನ್ನಡ ಅತೀ ಶೀಘ್ರದಲ್ಲೇ ಬರಲಿದೆ.

ಸಾರಾಂಶ:

ಕನ್ನಡದಲ್ಲಿ ಬರೆಯುವುದು ವಿಂಡೋಸಿನಲ್ಲಿ, ಮ್ಯಾಕಿನಲ್ಲಿ, ಐಫೋನಿನಲ್ಲಿ, ಐಪ್ಯಾಡಿನಲ್ಲಿ, ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಲೆಟ್ಟುಗಳಲ್ಲಿ ತುಂಬ ಸುಲಭ. ವಿಂಡೋಸ್ ಮತ್ತು ಮ್ಯಾಕು ಕಂಪ್ಯೋಟರುಗಳಲ್ಲಿ ಗೂಗಲ್ಲಿನ ಕ್ರೊಮ್ ಬ್ರೌಸರಿನಲ್ಲಿ ಕನ್ನಡ ಭಾಷೆಯ extension ಹಾಕಿಕೊಂಡರೆ ಸಾಕು, ಯಾವುದೇ ತಂತ್ರಾಂಶಗಳನ್ನು ಇಳಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಐಫೋನು ಮತ್ತು ಐಪ್ಯಾಡಿನಲ್ಲಿ iOS8 ಇರುವವರು ಕನ್ನಡದ ಕೀಲಿಮಣೆಗಳ appಗಳನ್ನು ಕೊಂಡುಕೊಳ್ಳಬಹುದು, iOS8 ಇಲ್ಲದಿರುವವರು Type Kannada ಹಾಕಿಕೊಳ್ಲಬೇಕು. ಆಂಡ್ರಾಯ್ಡ್ ಫೋನು ಮತ್ತು ಟ್ಯಾಬ್ಲೆಟ್ ಇರುವವರು Just Kannada ಅಥವಾ uKeyboard ಎಂಬ ಉಚಿತ appಗಳನ್ನು ಇಳಿಸಿಕೊಂಡರೆ ಸಾಕು. ಇನ್ನೇಕೆ ತಡ, ನಿಮ್ಮ ಮನೆಯವರಿಗೆ, ಕನ್ನಡದ ಗೆಳೆಯರಿಗೆ ಕನ್ನಡದಲ್ಲಿ sms ಮತ್ತು ಇಮೇಲ್ ಕಳಿಸಲು ಶುರುಮಾಡಿ. ಕನ್ನಡ ಉಳಿಸಿ, ಬೆಳೆಸಿ.

6 thoughts on “‘ಕಂಪ್ಯೂಟರಿನಲ್ಲಿ, ಟ್ಯಾಬ್ಲೆಟ್ಟಿನಲ್ಲಿ ಮತ್ತು ಫೋನಿನಲ್ಲಿ ಕನ್ನಡದಲ್ಲಿ ಹೇಗೆ ಬರೆಯುವುದು?’ – ಕೇಶವ ಕುಲಕರ್ಣಿ

  1. ನನ್ನ ಲ್ಯಾಪ್ ಟಾಪ್ ಆಪಲ್ ಮ್ಯಾಕ್‍ಬುಕ್. ಆದುದರಿಂದ ಅದರ ಹಾರ್ಡ್‍ಡಿಸ್ಕನ್ನು ಇಬ್ಭಾಗ ಮಾಡಿಸಿ, ಒಂದು ಭಾಗದಲ್ಲಿ ವಿಂಡೋಸ್ ೮.೧ಅನ್ನು ಅಳವಡಿಸಿ ಅದರಲ್ಲಿ ’ಬರಹ’ ತಂತ್ರಾಂಶವನ್ನು ಮೇಲೇರಿಸಿರುವೆ. ಕರ್ನಾಟಕಕ್ಕೆ ಹೋದಾಗ ಮಾತ್ರ ಕನ್ನಡದಲ್ಲಿ ಬರೆಯಲು ನನ್ನ ಲ್ಯಾಪ್‍ಟಪನ್ನು ಉಪಯೋಗಿಸುತ್ತಿದ್ದೆ. ಈಗ ನಿಮ್ಮ ಲೇಖನವನ್ನು ಓದಿ ನನ್ನ ಆಪಲ್ ಮ್ಯಾಕ್‍ಬುಕ್ಕಿನಿಂದ ನೇರವಾಗಿ ಕನ್ನಡದಲ್ಲಿ ಬರೆಯಬಹುದೆಂಬುದನ್ನು ಅರಿತೆ. ತಮಗೆ ಧನ್ಯವಾದಗಳು.
    ರಾಜಾರಾಮ ಕಾವಳೆ.

    Like

  2. ಕೇಶವ್ ಅವರೇ,
    ಇದನ್ನು ಬಿಡಿ ಲೇಖನವಾಗಿ ನಿಲ್ಲಿಸಬೇಡಿ. ವಿದ್ಯುನ್ಮಾನ ಸಲಕರಣೆ ಗಳು, ಅಂತರ್ಜಾಲದಲ್ಲಿ ಇರುವ ಕನ್ನಡ ಕುರಿತ ಮಾಹಿತಿ ತಾಣಗಳು, ಗೂಗಲ್ ನಲ್ಲಿ ಕೂಡಾ ಕನ್ನಡದ ಲಿಪಿ ಬೆರಳಚ್ಚಿಸಿ ಹುದುಕಬಲ್ಲ ಅವಕಾಶ ಹೀಗಿ ಇದನ್ನು ಪರಿಪೂರ್ಣ ಸರಣಿಯಾಗಿ ವೃದ್ಧಿಸುವ ಅವಕಾಶ ಇದೆ. ಎಲ್ಲ ಮಾಹಿತಿಗಳ ತಂಗುದಾನವಾಗಿ ಬೆಳೆಸಬಹುದು. ಯೋಚಿಸಿ ನೋಡಿ .
    ಸುದರ್ಶನ

    Like

    • ಸುದರ್ಶನ್ ಅವರ ಅಭಿಪ್ರಾಯವನ್ನು ಅನುಮೋದಿಸುತ್ತೇನೆ . ಈ ವಿಶಯವನ್ನು ಕುರಿತು ಸರಣಿಯನ್ನು ಬರೆಯುವುದು ಒಳ್ಳೆಯದು. ನಮಗೆಲ್ಲಾ ತಂತ್ರಗ್ನಾನದ ಮಾಹಿತಿಯನ್ನು ನಿರಂತರವಾಗಿ ನೀಡುತ್ತಲಿರಿ.
      ಉಮಾ

      Like

  3. ಟೈಪ್ ಕನ್ನಡ, Ipad ನಲ್ಲಿ download ಮಾಡಿ. ಇದರ ಬಳಗ ತುಂಬಾ ಸುಲಭ
    ಟೈಪ್ ಮಾಡಿದಮೇಲೆ ಕಾಪಿ ಅಂಡ್ ಪೇಸ್ಟ್ ಮಾಡಿ
    Sent from http://bit.ly/KIoyYL

    Like

  4. ಕೇಶವ ಅವರೆ,
    ಬಹಳ ದಿನಗಳಿಂದ ಕಾಯುತ್ತಿದ್ದ ಬರಹಕ್ಕೆ ಎರಡೂ ಕೈಗಳಿಂದ (ಕೀಲಿಮಣೆಯಮೇಲಿನ ಬೊಟ್ಟುಗಳಿಂದ!) ಸ್ವಾಗತಿಸುತ್ತೇನೆ. ಬಹಳಷ್ಟು ಮಾಹಿತಿ ಇದೆ. ಇನ್ನೂ ಬರೆಯಲು ಶುರು ಮಾಡದವರಿಗೆ ಮೊದಲ ಪಾಠ. ನನ್ನಂಥವರಿಗೂ ಎಷ್ಟೋ ಇದೆ. ಜೀರ್ಣಿಸಿಕೊಳ್ಲಲು ಸಮ ಬೇಕು.ನಿಮಗೆ ’ಬರಹ’ಕ್ಕಿಂತ ’ಪದ’ದ ಮೇಲೆ ಏಕೆ ಹೆಚ್ಚು ಮೋಹ? ಅದು ಸುಲಭವೇ? ಎಲ್ಲರೂ ಈ ಲೇಖನದ ಉಪಯೋಗ ತೊಗೊಂಡಾರು. ಭಲೇ!

    Like

Leave a comment

This site uses Akismet to reduce spam. Learn how your comment data is processed.