ಚಿತ್ರ-ಬರಹ: ಬಿಂಬ-ಪ್ರತಿಬಿಂಬ – ಶ್ರೀವತ್ಸ ದೇಸಾಯಿ

ಈ ಕೆಳಗಿನ ಚಿತ್ರದಿಂದ ಪ್ರೇರಿತರಾದ ಇಬ್ಬರ (ಡಾ ದಾಕ್ಷಾಯಣಿ ಮತ್ತು ಡಾ ರಾಜಾರಾಮ್) ಕವನ ಮತ್ತು ಬರಹಗಳನ್ನು ಓದಿರಿ:

(22-9-2014  ಇಂದು ಇದೇ ಚಿತ್ರಕ್ಕೆ ಡಾ ಸುದರ್ಶನ ಗುರುರಾಜರಾವ್ ಬರೆದ ಇನ್ನೊಂದು ಕವನವನ್ನೂ ಪ್ರಕಟಿಸಿದ್ದೇವೆ. -ಸಂ)

BimbaPratibimba
Photo: Siri Gowda

   (೧)  ಬಿಂಬ, ಪ್ರತಿಬಿಂಬ

ನೋಡಿ ಪ್ರತಿಬಿಂಬ, ಮೂಡಿದೆ ಪರಿಪೂರ್ಣವಾಗಿ

ಎಂದ ವಿಚಾರವಾದಿ ಹುಡುಗ.

ನನ್ನ ಕಣ್ಣಲಿ ಮೂಡಿದ ಬಿಂಬ ನೋಡದೆ ಹೋದನೆ,

ನಿಡುಸುಯ್ದಳು ಭಾವುಕ ಹುಡುಗಿ.

ಒಂದರೊಳಗೊಂದು ಬೆರತ ರೀತಿ

ವ್ಯತ್ಯಾಸವೇ ತಿಳಿಯದ ಹಾಗಿದೆಯಲ್ಲ ಅಂದನವ

ಇರಬೇಕು ನಮ್ಮಿಬ್ಬರ ಪ್ರೀತಿ, ಆದೇ ರೀತಿ,

ಕೈ ಹಿಡಿದು ಹತ್ತಿರ ಸರಿದು ನುಡಿದಳವಳು.

ಎರಡು ಶತಮಾನ ಹಳೆಯದೀ ಸೇತುವೆ

ಕಟ್ಟಡದ ಕಲೆಯಿದು ಅಮೋಘ,

ಶತಮಾನಗಳ ಲೆಕ್ಕ ಮರೆತಿದೆ ಈ ನದಿ

ಕವಲೊಡೆದ೦ತೆ ಕ೦ಡರೂ ಒ೦ದೆ ಉಸಿರಿನ ವೇಗ.

ಎರಡೇ ಕಂಬ ಎತ್ತಿ ಹಿಡಿದಿದೆ, ಈ ಉದ್ದ ಸೇತುವೆ,

ದೂರವಿದ್ದ ಹಾಗೆ ಕಂಡರೂ, ಉದ್ದೇಶವೊಂದೆ ಆಗಿದೆ.

ಬಾಳಿನುದ್ದಕ್ಕೂ ಅಲುಗದ ಗಟ್ಟಿ ಕಟ್ಟಡವಾಗಿ,

ಈ ಎರಡು ಜೀವ ಜೊತೆಗಿರಲಿ ಪೂರ್ತಿ ಬಾಳಿಗೆ.

ನಕ್ಕು ನುಡಿದ, ಮೂಡಿಸುತ್ತ ಬಿಂಬ ಅವಳ ಕಣ್ಣಲ್ಲಿ

ನಲ್ಲೆ ಅನುಮಾನವೇಕೆ ನಿನ್ನ ಮನದಲಿ

ನನ್ನ ವಿಚಾರ, ನಿನ್ನ ಭಾವುಕತೆಯ ಮಿಲನದಲ್ಲಿ

ಬದುಕೇ ಶ್ರೀಮ೦ತ ನಾವಿರೆ ಸದಾ ಜೊತೆಯಲಿ.

ಡಾ ದಾಕ್ಷಾಯಣಿ

(೨) ಬಿಂಬ ಪ್ರತಿಬಿಂಬ.

ಇದಕ್ಕೆ ಸ್ಪಂದಿಸಿ ಡಾ ರಾಜಾರಾಮ ಕಾವಳೆ ಅವರು ಹೀಗೆ ಬರೆಯುತ್ತಾರೆ:

ಈ ಕಲ್ಲಿನ ಸೇತುವೆಯ ಈ ಚಿತ್ರಕ್ಕೆ ನನ್ನ ಮನಸ್ಸಿನಲ್ಲಿ ಮೊದಲು ಮೂಡಿದ ಭಾವನೆಯೆಂದರೆ ಕನ್ನಡದ ಗಾದೆ, ’ಕನ್ನಡಿಯಲ್ಲಿರುವ ಗಂಟಿಗಿಂತ ಕೈಯಲ್ಲಿರುವ ಕಾಸೇ ಮೇಲು’. ಮರುಭೂಮಿಯಲ್ಲಿ ಬಿಸಿಲಿಗೆ ಬೇಸತ್ತು, ಬಾಯಾರಿ ನೀರಿಗೆ ಪರಿತಪಿಸುತ್ತಿರುವ ದಾರಿತಪ್ಪಿದ ಪ್ರವಾಸಿಯು ಆಕಾಶದ ಪ್ರತಿಬಿಂಬವನ್ನು ನೀರೆಂದು ಭಾವಿಸಿ ಮೋಸಗೊಂಡು ಹಿಂಬಾಲಿಸುವುದೂ ಜ್ಞಾಪಕಕ್ಕೆ ಬರುವುದು. ಜೀವನದಲ್ಲಿ ಇದೇತರಹದ ’ಬಿಸಿಲು ಕುದುರೆಯ’(mirage) ಮೇಲೆ ಅದೆಷ್ಟು ಜನ ಪಣಕಟ್ಟಿ ಜೂಜಾಡಿದ್ದಾರೆ ಮತ್ತು ಆಡುತ್ತಲೂ ಇದ್ದಾರೆ! ಇಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ದುಡಿದು ಜೀವಿಸುವುಸುವುದರ ಬದಲು ಜೀವನದಲ್ಲಿ ಸುಲಭಮಾರ್ಗದಿಂದ ಹಣಗಳಿಸುವ ಬಿಸಿಲು ಕುದುರೆಗಳಮೇಲೆ ಪಣಕಟ್ಟಿ ಸೋಲುವರೇ ಅಧಿಕವಾಗಿದ್ದಾರೆ. ಇವರ ಈ ಹೂಟಕ್ಕೆ ಬಲಿಯಾಗುವವರೂ ಹೆಚ್ಚಾಗಿದ್ದಾರೆ. ’ಟೋಪಿಹಾಕುವವರು ಏಕೆ ಹೆಚ್ಚಾಗಿದ್ದಾರೆ ಎಂದರೆ, ಟೋಪಿಹಾಕಿಸಿಕೊಳ್ಳುವವರೂ ಹೆಚ್ಚಾಗಿರುವುದೇ ಕಾರಣ’. ಇದು ಪಾಶ್ಚಿಮಾತ್ಯದೇಶಗಳಲ್ಲಿ ಹೆಚ್ಚಾದಂತೆ ತೋರುವುದು. ಭಾರತ ಮತ್ತು ಪೂರ್ವದೇಶಗಳಲ್ಲಿ ಲಂಚಾವತಾರವು ಹೇಗೆ ಹೆಚ್ಚಾಗಿದೆಯೋ ಹಾಗೆ ಈ ದುಶ್ಕರ್ಮಾವತಾರವು ಪಾಶ್ಚಿಮಾತ್ಯದೇಶಗಲ್ಲಿ ಹೆಚ್ಚಾಗಿದೆ. ಸಾಮಾಜಿಕ ಭದ್ರತಾ ವ್ಯವಸ್ಥೆ ( Social security system) ಇಲ್ಲದಿದ್ದರೆ ಈ ದೇಶಗಳಲ್ಲೂ ಲಂಚಾವತಾರವು ಹೆಚ್ಚಾಗುತ್ತಿತ್ತೋ ಏನೊ. ಅಂದರೆ ಕಷ್ಟಪಟ್ಟು ದುಡಿಯುವುದರ ಬದಲು ಸುಲಭಮಾರ್ಗದಲ್ಲೇ ಹಣಗಳಿಸುವರು ಹೆಚ್ಚುತ್ತಿದ್ದಾರೆ. ಈ ಜಾಡ್ಯವು ಭಾರತ ದೇಶದಲ್ಲೂ ಹೆಚ್ಚುತ್ತಿದೆ.

ಈ ಪ್ರತಿಬಿಂಬಕ್ಕೆ ಮೋಸಹೋಗುವುದು ಮಾನವನಲ್ಲಿ ಮಾತ್ರ ಇಲ್ಲ, ಪಕ್ಷಿಗಳಲ್ಲೂ ಉಂಟು. ನಾವೆಷ್ಟು ನೋಡಿಲ್ಲ, ನಮ್ಮ ಮನೆಗಳ ಕಿಟಕಿಗಳ ಗಾಜಿನಲ್ಲಿ ಆಕಾಶದ ಪ್ರತಿಬಿಂಬವನ್ನು ನೋಡಿ ಮೋಸಹೋಗಿ ಅದೆಷ್ಟು ಪಕ್ಷಿಗಳು ಆಹುತಿಗೊಂಡಿವೆ. ಪಕ್ಷಿಗಳನ್ನು ಮೋಸಗೋಳಿಸಿ ಹಿಡಿಯುವ ದುರುದ್ದೇಶದ ಸಲುವಾಗಿ ಮಾನವನು ಈ ಗಾಜಿನ ಕಿಟಕಿಗಳನ್ನು ನಿರ್ಮಿಸಿಲ್ಲ. ಆದರೆ ಇತರ ಮಾನವರನ್ನು ಮೋಸಗೊಳಿಸುವ ಮತ್ತು ಸುಲಭವಾದ  ಮಾರ್ಗಗಳಿಂದ ಹಣಗಳಿಸುವ ಹೂಡುಗಳನ್ನು ಮಾನವನೇ ನಿರ್ಮಿಸಿದ್ದಂತೆ ಕಾಣುತ್ತದೆ. ಈ ಹೂಡು ಪಕ್ಷಿಗಳಲ್ಲೂ ಇದೆ. ಪ್ರಾಣಿಗಳ ಮತ್ತು ಸಸ್ಯ ವರ್ಗಗಳಲ್ಲಿ ಇತರ ಜೀವಿಗಳ ಅಪಾಯಗಳಿಂದ ಪಾರಾಗಲು, ಛದ್ಮ ವೇಶವನ್ನು (Camouflage) ಧರಿಸಿ ಯೋಗ್ಯವಾದ ಸಂತತಿಗಳು ಬದುಕಿ ಜೀವಿಸುವುವು (survival of the fittest) ಎಂದು ಚಾರ್ಲ್ಸ್ ಡಾರ್ವಿನ್ನನು ತನ್ನ ಸಿದ್ಧಾಂತವನ್ನು ಪ್ರತಿಪಾದಿಸಿದ.

ಆದರೆ ಅವನು ಮರೆತುದುದೇನೇಂದರೆ ಹಲವು ಜೀವಿಗಳು ಇತರ ಜೀವಿಗಳನ್ನು ಮೋಸಮಾಡಿ ತಿನ್ನುವುವು ಎಂಬುದು. ಈ ಛದ್ಮ ವೇಷ ವನ್ನು ಧರಿಸಿ, ಜೀವಿಸಿ ಇತರ ಜೀವಿಗಳನ್ನು ಮೋಸಗೊಳಿಸಿ ತಮ್ಮೆಡೆಗೆ ಸೆಳೆದು ಆಹುತಿಗೊಳಿಸಿ, ಹುಳಗಳನ್ನು ತಿನ್ನುವ ಬಾಡುತಿ ಗಿಡಗಳು (carnivorous) ಬದುಕಿ ಬಾಳುವುದನ್ನು ನೋಡಿಲ್ಲವೇ? ಹಾಗಾದರೆ ಇತರರನ್ನು ವಂಚಿಸಿ ಜೀವನ ಮಾಡುವುದು ಸರಿಯೆಂದು ಆಯಿತಲ್ಲವೇ?

ಡಾ ರಾಜಾರಾಮ ಕಾವಳೆ.

 3 )

ಬಿಂಬ ಪ್ರತಿಬಿಂಬ

 ನದಿಯು ನಿಶ್ಚಲ ಸೇತುವೆಯು ತಾ ಅಚಲ

ಶುಭ್ರ ಆಗಸದ ತುಂಬೆಲ್ಲ ಬೆಳಕು

ಸೇತುವೆಯ ಪ್ರತಿಬಿಂಬ ನದಿಯ  ನೀರಿನ ಮೇಲೆ

ಮೂಡಿಹುದು  ಇರದಂತೆ ಯಾವ ಹುಳುಕು

ಜೀವನದ ನದಿಯಲ್ಲಿ ಭಾವಗಳ ತಿಳಿನೀರು

ಸಾವಧಾನದಿ ತಾನು ಹರಿಯುವಾಗ

ನಿತ್ಯನಿರ್ಮಲ ಚಿತ್ತ ಶುದ್ಧಿಯಿರೆ ಜಗದೆಲ್ಲ

ಪ್ರತಿಬಿಂಬ ಮೂಡುವುದು ಮನದೊಳಾಗ

ನಾನು ನೀನೆಂದೆಂಬ ವ್ಯತ್ಯಯವು ಇಲ್ಲಿಲ್ಲ

ನೀನು ನಾನಾಗಿ ನಾನು ನೀನಾಗಿರಲು

ನೀ ಮಾಯೆಯೊಳಗೋ ನಿನ್ನಲ್ಲಿ ಮಾಯೆಯೋ

ಎಂದೆಂಬ ಭಾವಕ್ಕೆ ಜೀವ ಮೂಡಿರಲು

                                                                                                                    ಸುದರ್ಶನ ಗುರುರಾಜರಾವ್

7 thoughts on “ಚಿತ್ರ-ಬರಹ: ಬಿಂಬ-ಪ್ರತಿಬಿಂಬ – ಶ್ರೀವತ್ಸ ದೇಸಾಯಿ

  1. ಸುದರ್ಶನ ಅವರು ತಮ್ಮ ಕವನದಲ್ಲಿ ಇದೇ ವಸ್ತುವನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸಿ ಇನ್ನೊಂದು ಮಜಲಿಗೆ ಇದರ ಚರ್ಚೆಯನ್ನು ಎತ್ತಿದ್ದಾರೆ! ಸೇತುವೆ (ಇಹದಿಂದ ಪರಕ್ಕೆ?)ಯೊಳಗೆ ಹೋಗುವ (ಜೀವ)ನದಿಯಲ್ಲಿ ಅದರ ಪ್ರತಿಬಿಂಬ ಕಂಡು ‘ನೀ ಮಾಯೆಯೊಳಗೋ ನಿನ್ನಲ್ಲಿ ಮಾಯೆಯೋ“ ಎಂಬ ದರ್ಶನ ತೋರಿಸುತ್ತಾರೆ. ಆ ತತ್ವದಲ್ಲಿ ರಾಜಾರಾಮರು ಬರೆದ ಮೆರುಭೂಮಿಯ ಯಾತ್ರಿಕ ಕಂಡ ಮೃಗಜಲದ ಮಾಯೆ, ಜೂಜುಖೋರನ ಕನಸಿನ ಗಂಟಿನ ಮಾಯೆಗೆ ಕನ್ನಡಿ ಹಿಡಿದಿದ್ದಾರೆ. ವಿಶ್ಲೇಷಣೆ ಆಸಕ್ತಿಪೂರ್ಣವಾಗಿದೆ.

    Like

  2. ದಾಕ್ಷಾಯಿಣಿ ಯವರ ಕವನ ತುಂಬಾ ಚೆನ್ನಾಗಿ ಬಂದಿದೆ. ಗಂಡು ಹೆಣ್ಣುಗಳು ಯೋಚಿಸುವ ವಿಭಿನ್ನ ಲಹರಿಯನ್ನು ಮನತಟ್ಟುವಂತೆ ಬರೆದಿದ್ದಾರೆ. ಅನುಮಾನ, ಅನುಸಂಧಾನಗಳ ಮೂಲಕ ಕವಿತೆಯನ್ನು ಮುಗಿಸಿರುವುದು ಖುಷಿ ತಂದಿತು.

    ಇನ್ನು ರಾಜಾರಾಮರ ವಿಶ್ಲೇಷಣೆ ನನ್ನು ಬೆರಗುಗೊಳಿಸಿತು. ಸೇತುವೆಯ ಪ್ರತಿಬಿಂಬವನ್ನು ಹೀಗೂ ಅರ್ಥೈಸಬಹುದೇ ಎಂಬ ಯೋಚನೆಯೇ ವಿಸ್ಮಯಕಾರಕ. ಒಂದೇ ವಸ್ತುವನ್ನು ಹನ್ನೆರೆಡು ವಿಧದಲ್ಲಿ ಅರ್ಥೈಸಬಹುದೆಂದು ಮನೋ ವೈಜ್ಞಾನಿಕ ಲೇಖನಗಳು ಹೇಳುತ್ತವೆ. ಬಹಳ ಅರ್ಥಪೂರ್ಣವಾದ

    Like

  3. ’ಪೂರ್ವದೇಶಗಳಲ್ಲಿ ಲಂಚಾವತಾರವು ಹೆಚ್ಚಾಗಿದ್ದರೆ, ಪಾಶ್ಚಿಮಾತ್ಯದೇಶಗಳಲ್ಲಿ ವಂಚಾವತಾರವು ಹಿಚ್ಚಾಗಿದೆ’ ಎಂದು ನನ್ನ ಅನಿಸಿಕೆ.

    Like

  4. ಒಂದೇ ವಸ್ತು, ವಿಭಿನ್ನ ಪ್ರತಿಫಲನಗಳು. ’ಕೈ ಹಿಡಿದು ಹತ್ತಿರ ಸರಿದ ಅವಳಿಗೆ ಸಮತೋಲನ ತಿಳಿಹೇಳಿದ ವಿಚಾರವಾದಿ ಅವನು’ ಇವರ ಸಂಗಮದ ಕವನದಲ್ಲಿ ’ಸೆಂಟಿಮೆಂಟಲ್’’ ಭಾವ ಸುಳಿದರೆ, ರಾಜಾರಾಮರದು ವ್ಯಾವಹಾರಿಕ (pragmatic) ದೃಷ್ಟಿಕೋನ. ಅತ್ತ, ಆತ ’ಅವಳ ಕಣ್ಣಲಿ ಬಿಂಬವ ಮೂಡಿಸಿ’ದರೂ (ಅಂದದ ಸಾಲು) ಅದು ಅಶಾಶ್ವತವೇ ಏನೋ! ಇತ್ತ, ಪ್ರತಿಬಿಂಬವ ನಂಬಿದ ಶತಮಾನಗಳ ಲೆಕ್ಕ ಮರೆತ ನದಿಗೆ ಛದ್ಮವೇಶದ ಎಚ್ಚರಿಕೆ ಕೊಡುವ ವಾಸ್ತವವಾದಿ. ಅಂತೂ ಬಿಂಬ-ಪ್ರತಿಬಿಂಬ ಚಿತ್ರ-ಕವನದ ಉದ್ದೇಶವನ್ನು ಎರಡೂ ಕಡೆ ಕೈಚಾಚಿ ”ಎತ್ತಿ ಹಿಡಿದಿದೆಈ ಉದ್ದ ಸೇತುವೆ”!

    Like

  5. ಒಂದೇ ಚಿತ್ರ ಎರಡು ಬಗೆಯ ವಿಚಾರಗಳನ್ನು ಕೆದಕಿದೆ. ಇದು ಚಿತ್ರ ತೆಗೆದವರ ಮತ್ತು ಬರಹಗಾರರಿಬ್ಬರ ಪ್ರತಿಭೆಯ ಬಿಂಬ ಮತ್ತು ಪ್ರತಿಬಿಂಬವೇ ನಿಜ!

    Like

  6. ಈ ಬಾರಿಯ ಚಿತ್ರದಂತೆ, ಅದನ್ನು ವಿಶ್ಲೇಷಿಸಿ ಬರೆದಿರುವ ಕವನ ಮತ್ತು ಗದ್ಯ ನಿರೂಪಣೆಯೂ ಅಷ್ಟೇ ಸೊಗಸಾಗಿದೆ. ದಾಕ್ಷಾಯಣಿ ಅವರು ಚಿತ್ರದಲ್ಲಿ ಮೂಡಿರುವ ಸೇತುವೆಯ ಪ್ರತಿಬಿಂಬವನ್ನು, ಪ್ರೇಮಿಗಳ ಪ್ರೀತಿ ಮತ್ತು ಬಂಧನಗಳಿಗೆ ಹೋಲಿಸಿ ಬರೆದ ಕವನವು, ಎರಡು ಬೆರೆತ ಜೀವಗಳ ಮನಸ್ಥಿತಿಯನ್ನು ವರ್ಣಿಸುವಲ್ಲಿ ಸಫಲವಾಗಿದೆ. ”ಒಂದರಳೊಂದು ಬೆರೆತ ರೀತಿ, ಅದೇ ರೀತಿ ಇರಬೇಕು ನಮ್ಮ ಪ್ರೀತಿ” ಸಾಲುಗಳು ನನಗೆ ಬಹಳ ಹಿಡಿಸಿದವು. ಇದಕ್ಕೆ ವಿರುದ್ಧವೋ ಎಂಬಂತೆ, ಡಾ ಕಾವಳೆ ಅವರು, ಈ ಬಿಂಬ ಮತ್ತು ಪ್ರತಿಬಿಂಬವನ್ನು, ನಿಜ ಜೀವನದಲ್ಲಿನ ಹೋರಾಟಕ್ಕೆ ಹೋಲಿಸಿ, ಬಿಸಿಲುಗುದುರೆಯ ಬೆನ್ನೆತ್ತಿ ಹೋಗಿ ಮೋಸ ಹೋಗುವ ಜೀವಿಗಳಿಗೆ ಹೋಲಿಸಿ, ವಾಸ್ತವತೆಯ ಅರಿವನ್ನು ಮೂಡಿಸಿದ್ದಾರೆ.
    ಉಮಾ ವೆಂಕಟೇಶ್

    Like

Leave a comment

This site uses Akismet to reduce spam. Learn how your comment data is processed.