“ಅಕ್ಕ” ವಿಶ್ವ ಕನ್ನಡ ಸಮ್ಮೇಳನ 2014 – ಉಮಾ ವೆಂಕಟೇಶ್ ಅವರ ವರದಿ

ಸಿಲಿಕಾನ್ ಕಣಿವೆಯಲ್ಲಿ ಸಿಡಿದ ಸಿರಿಗನ್ನಡದ ಸಿಡಿಮದ್ದು !

                            ಡಾ ಉಮಾ ವೆಂಕಟೇಶ್

AKKA Razzmatazz
Photo: Uma Venkatesh

“ಸಾಧನೆ. ಸಂಭ್ರಮ. ಸಂಕಲ್ಪ” ಈ ನುಡಿಗಳ ಧ್ಯೇಯ ವಾಕ್ಯವನ್ನು ಹೊತ್ತ ೮ನೆಯ ಅಕ್ಕ ವಿಶ್ವ ಕನ್ನಡ ಸಮ್ಮೆಳನವನ್ನು, ಉತ್ತರ ಕ್ಯಾಲಿಫ಼ೋರ್ನಿಯಾದಲ್ಲಿನ, ಸಿಲಿಕಾನ್ ಕಣಿವೆಯ ಪ್ರಸಿದ್ಧ ನಗರಿ, ಸ್ಯಾನ್ ಹೊಸೆಯಲ್ಲಿ ನೋಡುವ ಸುವರ್ಣಾವಕಾಶವೊಂದು, ಆಂಗ್ಲ ಕನ್ನಡತಿಯಾದ ನನಗೆ ದೊರಕಿತು. ೫೦ ರಾಜ್ಯಗಳ ವಿವಿಧ ಕನ್ನಡ ಕೂಟಗಳ ಆಗರದ, ಈ ಕನ್ನಡ ಹಬ್ಬವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ, ಅಮೆರಿಕೆಯ ವಿವಿಧ ದಿಕ್ಕುಗಳಲ್ಲಿ ನಡೆಸುವ ಈ ಸಮಾರಂಭದಲ್ಲಿ, ಇಲ್ಲಿರುವ ಸಹಸ್ರಾರು ಕನ್ನಡಿಗರು ಒಂದೆಡೆ ನೆರೆಯುತ್ತಾರೆ. ಇವರಲ್ಲಿ ಎಷ್ಟೇ ವಿಭಿನ್ನ ಅಭಿಪ್ರಾಯಗಳಿದ್ದರೂ, ಅವೆಲ್ಲವನ್ನೂ ಆಚೆ ತಳ್ಳಿ, ೩ ದಿನಗಳು ಎಲ್ಲರೂ ಒಮ್ಮನದಿಂದ ಕಲೆತು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಒಟ್ಟಾಗಿ ಮೆರೆಸುವ ಇವರ ವೈಖರಿಗೆ, ಯಾರಾದರೂ  ತಲೆದೂಗಲೇ ಬೇಕು. ಸಂಖ್ಯೆಯಲ್ಲಿ ದೊಡ್ಡದಾಗಿದ್ದರೆ ಅದರಲ್ಲಿರುವ ಲಾಭ ಮತ್ತು ಅನುಕೂಲತೆಗಳು ಏನೆಂಬುದು ನನಗೆ ಕಳೆದ ವಾರ ನಡೆದ ಈ ಸಮಾರಂಭದ ಮೂರು ದಿನಗಳಲ್ಲಿ ಚೆನ್ನಾಗಿ    ಅರಿವಾಯಿತು. ಕೇವಲ ಹಣವೊಂದೇ ಅಲ್ಲ, ಮನುಷ್ಯ ಪ್ರಯತ್ನ ಮತ್ತು ಇನ್ನಿತರ ಸಂಪನ್ಮೂಲಗಳ ಅನುಕೂಲಗಳು ಅನೇಕ ಪಟ್ಟು ಹೆಚ್ಚಿ, ಈ ದೊಡ್ಡ ಕಾರ್ಯವನ್ನು ವೈಭವದಿಂದ ಆಚರಿಸಲು ಸಹಾಯಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

೧೯೮೦ರ ದಶಕದಲ್ಲಿ, ಗಣಕಯಂತ್ರಗಳ ಅರ್ಥಾತ್ ಕಂಪ್ಯೂಟರುಗಳ ಮಹತ್ಕ್ರಾಂತಿ ನಡೆದು, ತಂತ್ರಾಂಶಗಳು ಅಂದರೆ ಸಾಫ಼್ಟವೇರ್ ಉದ್ಯಮದಲ್ಲಿ ಮಹತ್ತರ ಬೆಳವಣಿಗೆ ನಡೆದು, ಜಗತ್ತಿನ ಲಕ್ಷಾಂತರ ಮಂದಿ ಇಂಜಿನೀಯರುಗಳು, ಹಾಗೂ ಮತ್ತಿತರ ವೃತ್ತಿಪರರಿಗೆ ಜೀವನದಲ್ಲಿ ಒಂದು ಹೊಸ ಆಯಾಮವನ್ನೇ ನೀಡಿದ, ಈ ಸಿಲಿಕಾನ್ ಕಣಿವೆ ಎಂಬ ಮಾಯಾನಗರಿಯನ್ನು ಹಲವಾರು ಬಾರಿ ನೋಡಿದ್ದೆನಾದರೂ, ೩ ಸಹಸ್ರ ಕನ್ನಡಿಗರನ್ನು ಒಟ್ಟಾಗಿ ಕಂಡದ್ದು ಈಗಲೇ! ಆಗಸ್ಟ್ ತಿಂಗಳ ಕೊನೆಯ ಮೂರು ದಿನಗಳು ಈ ದೇಶದಲ್ಲಿ “Labor holiday weekend” ಎಂದು ದೀರ್ಘ ವಾರಾಂತ್ಯದ ರಜೆಯನ್ನು ಎಲ್ಲರಿಗೂ ನೀಡುತ್ತದೆ. ೮ ನೆಯ ವಿಶ್ವ ಕನ್ನಡದ ಈ ಬಾರಿಯ ಸಮಾರಂಭವನ್ನು ಇದೇ ಆಗಸ್ಟ್ ೨೯-೩೧ ರವರೆಗೆ ಸಾನ್ ಹೊಸೆಯಲ್ಲಿರುವ “ಮೆಕೆನ್ರಿ ಸಮಾವೇಶ ಸಭಾಂಗಣದಲ್ಲಿ” ಉತ್ತರ ಕ್ಯಾಲಿಫ಼ೋರ್ನಿಯಾದ ಕನ್ನಡ ಕೂಟದ ಆಶ್ರಯದಲ್ಲಿ ಅಯೋಜಿಸಿದ್ದರು. ಸುಮಾರು ೩ ಸಹಸ್ರ ಸದಸ್ಯರು ಒಟ್ಟಾಗಿ ನೆರೆದು, ಕುಳಿತು ಸಮಾರಂಭವೊಂದನ್ನು ಆಚರಿಸಲು ಅನುಕೂಲತೆಗಳಿರುವ ಈ ಸಭಾಂಗಣವೇ ನನಗೆ ಒಂದು ಅದ್ಭುತ ಸ್ಥಳವೆನಿಸಿತು. ಈ ಸಭಾಂಗಣವನ್ನು, ಪ್ರಸಿದ್ಧ ಹೊಟೇಲುಗಳಾದ ಹಿಲ್ಟನ್ ಮತ್ತು ಮ್ಯಾರಿಯೆಟ್ಟುಗಳೊಂದಿಗೆ ಸಂಪರ್ಕವನ್ನೇರ್ಪಡಿಸಿ, ಸಮಾರಂಭಗಳಲ್ಲಿ ಭಾಗವಹಿಸುವ ಸದಸ್ಯರಿಗೆ ಬಹಳ ಅನುಕೂಲವನ್ನು ಕಲ್ಪಿಸಿದ್ದಾರೆ. ಇದು ನಿಜಕ್ಕೂ ಅಮೆರಿಕನ್ ಸ್ಟೈಲ್ ಎನ್ನಬಹುದು. ಮೊದಲ ದಿನ ಅಂದರೆ ಆಗಸ್ಟ್ ೨೯ನೆಯ ಬೆಳಿಗ್ಗೆ ೧೦ ಗಂಟೆಗೆ, ನಾನು ನನ್ನ ಪತಿ ಮತ್ತು ಪುತ್ರನೊಂದಿಗೆ ಶಿಸ್ತಾಗಿ ಕನ್ನಡ ಶೈಲಿಯಲ್ಲಿ ಗೌರಮ್ಮನಂತೆ ಸಿಂಗರಿಸಿ ಸಜ್ಜುಗೊಂಡು, ಈ ಸಭಾಂಗಣದ ಮುಂದೆ ನಿಂತಾಗ, ಅಲ್ಲಿನ ಸಿಂಗಾರವನ್ನು ಕಂಡು ದಂಗಾದೆ. ಸಂಪೂರ್ಣವಾಗಿ ಕನ್ನಡ ನಾಡಿನ ಶೈಲಿಯಲ್ಲಿ, ರಂಗೋಲೆ, ಬಾಳೆ ಕಂದು ಮತ್ತು ಇನ್ನಿತರ ಪರಿಕರಗಳನ್ನುಪಯೋಗಿಸಿ ಸಿಂಗರಿಸಿದ ರೀತಿ ನೋಡಿಯೇ, ಮುಂದಿನ ಮೂರು ದಿನಗಳು ಕಾದಿರುವ ಸಂಭ್ರಮದ ಝಲಕನ್ನು ಅರಿತೆ.Suvasiniyaru

ಸಮಾರಂಭದ ನೋದಣಿಗೆ ಸಾಲು ನಿಂತಾಗ, ವಿವಿಧ ರಾಜ್ಯಗಳಿಂದ ಬಂದವರಲ್ಲಿ ನನಗೆ ತಿಳಿದ ನನ್ನ ಊರಿನ ಅನೇಕ ಮಂದಿಯನ್ನು ಕಂಡಾಗ, ಈ ಪ್ರಪಂಚ ಇಷ್ಟೊಂದು ಸಣ್ಣದೇ ಎನ್ನಿಸಿತು. ನನ್ನ ಕಾಲೇಜಿರಲಿ, ಹೈಸ್ಕೂಲಿನ ಗೆಳತಿಯರೂ ತಮ್ಮ ಪರಿವಾರದೊಂದಿಗೆ ಅಲ್ಲಿದ್ದಾರೆ! ಆಹಾ ! ಎಂತಹ ಸೊಗಸಾದ ಅನುಭವ!

Photo: Uma Venkatesh                                        ನೋಂದಣಿಯನ್ನು ಅಲ್ಲಿನ ವೃತ್ತಿಪರ ಮಾಹಿತಿ ತಜ್ಞರು ಬಹಳ ಸುಲಲಿತವಾಗಿ ಅಚ್ಚುಕಟ್ಟಾಗಿ ಏರ್ಪಡಿಸಿದ್ದರು. ನಮ್ಮ ಬ್ಯಾಡ್ಜ್ ಮತ್ತು ೩ ದಿನಗಳ ಕಾರ್ಯಕ್ರಮದ ರಸದೌತಣವನ್ನು ಹೊತ್ತ ಫಲಕದ ಕಿರುಹೊತ್ತಿಗೆಯನ್ನು ತೆಗೆದುಕೊಂಡು, ಸಭಾಂಗಣದ ವೀಕ್ಷಣೆಗೆ ತೆರೆಳಿದೆವು. ಈ ಸಭಾಂಗಣದಲ್ಲಿ, ಸುಮಾರು ೩ ಸಹಸ್ರ ಮಂದಿ ಒಟ್ಟಿಗೆ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಲು, ಊಟ ಮಾಡಲು ಸಾಧ್ಯವಿರುವ ಬೃಹತ್ ಹಾಲುಗಳಿವೆ. ನಮ್ಮ ಕನ್ನಡದ ಶೈಲಿಯಲ್ಲಿ ಈ ಸಭಾಂಗಣಗಳಿಗೆ ನಮ್ಮೂರಿನ ನೆಚ್ಚಿನ ಕುಸುಮಗಳ ಹೆಸರುಗಳಾದ ಮಲ್ಲಿಗೆ, ಸಂಪಿಗೆ, ಕಣಿಗಿಲೆ, ನೈದಿಲೆ, ಪಾರಿಜಾತ, ಕಮಲ, ಸ್ಫಟಿಕ, ಮಂದಾರ, ಸೇವಂತಿಗೆ, ಸೂರ್ಯಕಾಂತಿ ಎನ್ನುವ ಹೆಸರುಗಳನ್ನಿತ್ತು ಅಲ್ಲಿ ಪರ್ಯಾಯವಾದ ಕಾರ್ಯಕ್ರಮಗಳನ್ನು ನಡೆಸುವ ಸಿದ್ಧತೆಯಿತ್ತು. ಭೋಜನ ಶಾಲೆಗೆ “ಅನ್ನಪೂರ್ಣ” ಎಂಬ ಸೊಗಸಾದ ನಾಮಕರಣವಿತ್ತು. ಎಲ್ಲಾ ಸದಸ್ಯರೂ ಮೇಜಿನ ಸುತ್ತಾ ಕುಳಿತು, ಭೋಜನವನ್ನು ಸವಿಯುವ ಏರ್ಪಾಡಿತ್ತು.

ಸಮಾರಂಭದ ಮೊದಲ ದಿನ ಗಣೇಶ ಮತ್ತು ಗೌರಿ ಹಬ್ಬವಾದ್ದರಿಂದ, ಅಲ್ಲಿನ ಸಭಾಂಗಣದಲ್ಲಿ ಸಾಮೂಹಿಕವಾಗಿ ಸುಮಾರು ನೂರಾಐವತ್ತು ದಂಪತಿಗಳು, ಸಾಂಪ್ರದಾಯಿಕ ರೀತಿಯಲ್ಲಿ ಕುಳಿತು ಪೂಜೆ ಮಾಡುತ್ತಿದ್ದನ್ನು ಕಂಡು, ನಮ್ಮ ನಾಡೇ ಇಲ್ಲಿದೆಯಲ್ಲಾ ಎಂದು ಮೂಗಿನ ಮೇಲೆ ಬೆರಳಿಟ್ಟು ಕೊಂಡೆ. ಭವ್ಯವಾಗಿ ಅಲಂಕರಿಸಿದ್ದ ಪೂಜಾ-ಮಂಟಪದಲ್ಲಿ, ಗೌರಿಯರಂತೆ ಕುಚ್ಚು-ಜಡೆ ಬಿಲ್ಲೆ ಹೂವುಗಳಿಂದ ಸಾಲಂಕೃತರಾಗಿದ್ದ ಸುವಾಸಿನಿಯರು, ಗರ್ವದಿಂದ ಪೂಜೆಗಯ್ಯುತ್ತಿದ್ದ ವೈಖರಿ ನೋಡಲು ಅರ್ಹವೆನಿಸಿತ್ತು. ಮೈಸೂರಿನಿಂದ ಈ ಸಮಾರಂಭದ ವೈದಿಕ ವಿಧಿಗಳಿಗೆಂದೇ ಕರೆಸಿದ್ದ ವೈದಿಕರು ತಮ್ಮ ಕಂಚಿನ ಕಂಠದಿಂದ, ಧ್ವನಿಯಂತ್ರದ ಮೂಲಕ ಹರಿದಿದ್ದ ಮಂತ್ರಗಳ ಘೋಷಣೆ ಸಿಲಿಕಾನ್ ಕಣಿವೆಯಲ್ಲಾ ವ್ಯಾಪಿಸಿರುವಂತೆ ಭಾಸವಾಯಿತು. ಪೂಜೆಯ ನಂತರ, ಪೂಜೆಗೈದ ಸುವಾಸಿನಿಯರಿಗೆಲ್ಲಾ, ಬಾಳೆಯ ಎಲೆಯ ಮೇಲೆ ಹಬ್ಬದೂಟ. ಇತರರಿಗೆಲ್ಲಾ ಅನ್ನಪೂರ್ಣಾ ಹಾಲಿನಲ್ಲಿ ಅದೇ ಭಕ್ಷ್ಯಭೋಜ್ಯಗಳ ಮೇಜಿನೂಟ. ಈ ಸಮಾರಂಭದ ಮೂರೂ ದಿನಗಳೂ, ಸ್ವಚ್ಛ, ಸುಗ್ರಾಸ ಭೋಜನವನ್ನು, ಸರಿಯಾದ ಸಮಯಕ್ಕೆ, ಬಹಳ ಅನುಕೂಲವಾದ ರೀತಿಯಲ್ಲಿ ಒದಗಿಸಿದ್ದ ಏರ್ಪಾಡು ಮೂಗಿನ ಮೇಲೆ ಬೆರಳಿಡುವಂತಹುದೇ! ಮೈಸೂರು, ಧಾರವಾಡ, ಮಂಗಳೂರು ಹೀಗೆ ಕರ್ನಾಟಕದ ಎಲ್ಲಾ ಶೈಲಿಯ ಊಟೋಪಚಾರಗಳೂ ಅಲ್ಲಿ ಲಭ್ಯವಿದ್ದವು.

ಸಮ್ಮೇಳನದ ಉದ್ಘಾಟನೆ: ೨೯ನೆಯ ತಾರೀಖು ಸಂಜೆ ೫:೩೦ಕ್ಕೆ ಸರಿಯಾಗಿ, ಮುಖ್ಯ ಸಭಾಂಗಣ ಮಲ್ಲಿಗೆಯಲ್ಲಿ, ಸಮ್ಮೇಳನದ ಉದ್ಘಾಟನೆಯನ್ನು, ಕರ್ನಾಟಕದಿಂದ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಶ್ರೀಮತಿ. ಉಮಾಶ್ರಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಜ್ಯೋತಿ ಬೆಳಗುವ ಮೂಲಕ ನೆರವೇರಿಸಲಾಯಿತು. ಇತರ ಗಣ್ಯರಲ್ಲಿ ಹೆಸರಾಂತ ಸಾಹಿತಿ ಡಾ ಎಸ್.ಎಲ್. ಭೈರಪ್ಪ, ಮಾಜಿ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಐ.ಎಮ್. ವಿಟ್ಟಲಮೂರ್ತಿ ಅವರು ಸೇರಿದ್ದರು. ಸಚಿವೆ ಉಮಾಶ್ರೀ ತಮ್ಮ ಭಾಷಣವನ್ನು ಚಿಕ್ಕದಾಗಿ ಚೊಕ್ಕವಾಗಿ ಸಿರಿಗನ್ನಡದಲ್ಲಿ ಮುಗಿಸಿ, ಮುಂದಿನ ಭಾಷಣಕಾರರಿಗೆ ಅನುವು ಮಾಡಿಕೊಟ್ಟರು. ಐ.ಎಮ್. ವಿಟ್ಟಲಮೂರ್ತಿಯವರು ತಮ್ಮ ಭಾಷಣದಲ್ಲಿ, ೧೯೮೮ ಇಸವಿಯಲ್ಲಿ ಯು.ಕೆ.ಕನ್ನಡ ಬಳಗ, ಮ್ಯಾಂಚೆಸ್ಟರಿನಲ್ಲಿ ನಡೆಸಿದ ಮೊಟ್ಟಮೊದಲ ವಿಶ್ವ ಕನ್ನಡ ಸಮ್ಮೇಳನದ ಸಮಾರಂಭವನ್ನು ಪ್ರಸ್ತಾಪಿಸಿ ಮಾತನಾಡಿದ್ದು, ಅಲ್ಲಿ ಹಾಜರಿದ್ದ ನನಗೆ ಮತ್ತು ಅಂದಿನ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಿದ್ದ ನಮ್ಮ ಬಳಗದ ಮಾಜಿ ಅಧ್ಯಕ್ಷೆ ಡಾ ಭಾನುಮತಿ ಅವರಿಗೆ ಸ್ವಲ್ಪ ನೆಮ್ಮದಿಯೆನಿಸಿತು. ನಾವೆಲ್ಲಾ ಕಾಯುತ್ತಿದ್ದ ನಮ್ಮ ನೆಚ್ಚಿನ ಲೇಖಕ ಶ್ರೀಯುತ ಎಸ್.ಎಲ್.ಭೈರಪ್ಪನವರ ಭಾಷಣದ ಸರದಿ ಬಂದಿತು. ಸಮಾರಂಭಕ್ಕೆ ಮುಂಚೆ, ಸಭಾಂಗಣದ ಹೊರಗೆ ಅವರ ಅಭಿಮಾನಿ ತಂಡವನ್ನು ಭೇಟಿ ಮಾಡಲು ಅನುಕೂಲವಾಗುವಂತೆ ಅಲ್ಲಿನ ಕಾರ್ಯಕರ್ತರು ಮಾಡಿದ್ದ ಏರ್ಪಾಡು ನನಗೆ ಬಹಳ ಮೆಚ್ಚುಗೆಯಾಯಿತು. ನನಗೆ ಮತ್ತು ನನ್ನ ಪತಿಗೆ ಅವರೊಡನೆ ೫ ನಿಮಿಷಗಳು ಸಂಭಾಷಿಸಿ, ಅವರೊಡನೆ ಛಾಯಾಚಿತ್ರವನ್ನು ತೆಗೆಸಿಕೊಳ್ಳೂವ ಸೌಭಾಗ್ಯವೂ ಒದಗಿತು. ಭೈರಪ್ಪನವರನ್ನು ಮೈಸೂರಿನಲ್ಲಿ ನಾನು ಮಾನಸಗಂಗೋತ್ರಿಯಲ್ಲಿ ಮೊದಲ ವರ್ಷದ ಸ್ನಾತಕೋತ್ತರ ಪದವಿಯಲ್ಲಿದ್ದಾಗ, ನಮ್ಮ ನೆಚ್ಚಿನ ಪ್ರೊಫ಼ೆಸರ್, ದಿವಂಗತ ಬಿ.ಜಿ.ಎಲ್. ಸ್ವಾಮಿ ಅವರ ನಿಧನಾಂತರದ ಶ್ರದ್ಧಾಂಜಲಿ ಸಭೆಯಲ್ಲಿ ಭೇಟಿ ಮಾಡಿದ್ದೆ.With SLB ಅವರ ನಿವಾಸ ನಮ್ಮ ಮನೆಯ ಹತ್ತಿರವೇ ಇದ್ದಿದ್ದರಿಂದ, ದಿನವೂ ಅವರು ಬೆಳಗಿನ ಹೊತ್ತು ವಾಕಿಂಗ್ ಹೋಗುವುದನ್ನೂ ಕಂಡಿದ್ದೆ. ಆದರೆ ಅವರೊಡನೆ ಮಾತನಾಡಲು ನಾನು ಉತ್ತರ ಅಮೆರಿಕೆಗೆ ಹೋಗ ಬೇಕಾಯ್ತಲ್ಲಾ ಎನ್ನುವುದು ನಿಜಕ್ಕೂ ಬೆರಗಿನ ಸಂಗತಿಯಲ್ಲವೇ!

The author with Dr S L Bharappa  Photo: Uma Venkatesh

ಕಡಲಾಚೆಯ ಕನ್ನಡ ಲೇಖಕರಿಗೆ ಭೈರಪ್ಪನವರ ಕಿವಿಮಾತು: ಸಭಾಂಗಣದಲ್ಲಿ ನೆರೆದಿದ್ದ ೩ ಸಹಸ್ರ  ವೃತ್ತಿಪರ ಪ್ರತಿಭಾವಂತ ಕನ್ನಡಿಗರನ್ನು ಕಂಡಾಗ, ನಮ್ಮ ದೇಶವೂ   ಮುಂದುವರೆದ ಪಾಶ್ಚಾತ್ಯ ದೇಶಗಳಂತೆಯೇ, ಅನೇಕ ಕಾರ್ಯಗಳನ್ನು ಸಾಧಿಸಬಲ್ಲದು ಎಂಬ ವಿಶ್ವಾಸ ತಮ್ಮಲ್ಲಿ ಮೂಡಿದೆ ಎಂಬ  ವಾಕ್ಯದೊಂದಿಗೆ ಭಾಷಣವನ್ನು ಪ್ರಾರಂಭಿಸಿದ ಶ್ರೀಯುತ. ಭೈರಪ್ಪನವರು, ಕಡಲಾಚೆಯ ಕನ್ನಡ ಬರಹಗಾರರ ಸಮಸ್ಯೆಗಳು, ಕಡಲಾಚೆಯಲ್ಲಿರುವ ಕನ್ನಡೇತರ ಬರಹಗಾರರು ಎದುರಿಸುತ್ತಿರುವ ಸಮಸ್ಯೆಗಳಿಗಿಂತ ಭಿನ್ನವಾಗಿಲ್ಲ ಎಂದು ಹೇಳಿದರು. ೧೯೬೦ರಿಂದ ಪ್ರಾರಂಭವಾಗಿ, ೭೦ ಮತ್ತು ೮೦ರ ದಶಕಗಳಲ್ಲಿ ಮುಂದುವರೆದು, ೯೦ರ ದಶಕದಲ್ಲಿ ಸ್ಫೋಟನೆಗೊಂಡ ಕನ್ನಡಿಗರ ವಲಸೆ, ಈಗ ಅಮೆರಿಕೆಯಲ್ಲಿ ಒಂದು ದೊಡ್ಡ ಜನಾಂಗವಾಗಿ ಬೆಳೆದಿದೆ. ಈ ಜನಾಂಗದಲ್ಲಿ ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತರ ಮಟ್ಟದ ಲೇಖಕರಿಲ್ಲದಿದ್ದರೂ, ಕನ್ನಡವನ್ನು ಸುಲಲಿತವಾಗಿ ಬಳಸಿ, ತಮ್ಮ ಅನುಭವಗಳನ್ನು ಆಸಕ್ತಿಪೂರ್ಣ ರೀತಿಯಲ್ಲಿ ಬರೆದು, ನಮ್ಮ ಸಾಹಿತ್ಯಕ್ಕೆ ಹೊಸ ಆಯಾಮವನ್ನೇ ನೀಡಿರುವ ಲೇಖಕರು ಇದ್ದಾರೆ. ಒಮ್ಮೆ ನಮ್ಮ ನಾಡನ್ನು ಬಿಟ್ಟ ನಂತರ, ಹೊರ ದೇಶದಲ್ಲಿ, ಹೊಸ ಪರಿಸರದಲ್ಲಿ, ಹೊಸ ಭಾಷೆಯ ನಡುವೆ ಜೀವನ ನಡೆಸುವ ಪರಿಸ್ಥಿತಿಯಲ್ಲಿ ನಮ್ಮ ಭಾಷೆಯನ್ನು ಜೀವಂತವಾಗಿಟ್ಟು, ಅದನ್ನು ತಮ್ಮ ಮುಂದಿನ ಪೀಳಿಗೆಗೆ ಮುಂದುವರೆಸುವುದೇನೂ ಸಣ್ಣ ಕಾರ್ಯವಲ್ಲ. ಅದೊಂದು ಮಹತ್ತರವಾದ ಸವಾಲು. ಅದನ್ನು ಎದುರಿಸಿ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಡಲು ನೀವು ನಡೆಸುತ್ತಿರುವ ಇಂತಹ ಸಮ್ಮೇಳನಗಳು, ನಮ್ಮ ನಾಡಿಗೇ ಒಂದು ದೊಡ್ಡ ಗರ್ವದ ಮಾತು ಎಂದು ತಮ್ಮ ಭಾಷಣವನ್ನು ಮುಂದುವರೆಸಿದರು.

ನಂತರ ತಾವು ಕರ್ನಾಟಕದಿಂದ ಹೊರಗೆ, ಗುಜರಾತ್, ಮಹಾರಾಷ್ಟ್ರ, ದೆಹಲಿಯಲ್ಲಿದ್ದಾಗ, ಕನ್ನಡ ಭಾಷೆಯ ಪರಿಸರದ ಅಭಾವದಿಂದಿಂದಾಗಿ, ತಮ್ಮ ಭಾಷೆಯ ಶಬ್ದ-ಸಂಪತ್ತು (Vocabulary) ಕ್ಷೀಣವಾಗತೊಡಗಿತ್ತು ಎಂದೂ, ಆ ಶಬ್ದ-ಸಂಪತ್ತಿನ ಅಭಾವವೇ ಹೊರನಾಡ ಅರ್ಥಾತ್ ಕಡಲಾಚೆಯ ಕನ್ನಡಿಗರು ಎದುರಿಸುತ್ತಿರುವ ಬೃಹತ್ ಸಮಸ್ಯೆ ಎಂದು ನಮ್ಮೆಲ್ಲರ ಮನದಲ್ಲಿ ನಡೆದಿರುವ ತೊಳಲಾಟಕ್ಕೆ ಅರ್ಥವನ್ನು ನೀಡಿದರು. ಹೊರನಾಡಿಗೆ ಬಂದು ನೆಲಸುವ ಕನ್ನಡಿಗರಿಗೆ, ಅಲ್ಲಿನ ವೃತ್ತಿ ಸಮಸ್ಯೆಗಳು, ಬದಲಾಗುವ ಜೀವನ ಪರಿಸ್ಥಿತಿಗಳು ಅವರ ವ್ಯಕ್ತಿತ್ವವನ್ನೇ ಬದಲಾಯಿಸಿ ಬಿಡುತ್ತದೆ ಎಂಬುದನ್ನು, ಅವರ ಜೀವನದಲ್ಲಿ ಕಂಡ ಹಲವಾರು ಸ್ನೇಹಿತರ ಉದಾಹರಣೆಗಳೊಂದಿಗೆ ವಿವರಿಸಿದರು. ತಾವು ಹೊರನಾಡಿನಲ್ಲಿದ್ದಾಗ ಕನ್ನಡದಲ್ಲಿ ಕಾದಂಬರಿಗಳನ್ನು ಬರೆಯುತ್ತಿದ್ದಾಗ, ತಮಗೆ ಕನ್ನಡ ಭಾಷೆಯ ಮೇಲಿನ ಬಿಗಿ ಕಡಿಮೆಯಾಗಲು ತೊಡಗಿತ್ತು, ಮತ್ತು ಕನ್ನಡದ ಮೇಲಿನ ಹಿಡಿತ ಸಡಿಲವಾಗುತ್ತಿತ್ತು ಎನ್ನುವ ಅರಿವಾಗಿತ್ತೆಂದೂ, ಅಂತಹ ಪರಿಸ್ಥಿತಿಯಲ್ಲಿ ತಾವು ಬರೆದ ಲೇಖನಗಳು ಎಷ್ಟರ ಮಟ್ಟಿಗೆ ಓದುಗರನ್ನು ತಲುಪುತ್ತದೆ ಎಂದು ಭಾಸವಾಗತೊಡಗಿತ್ತು. ಹಾಗೇ, ಕಡಲಾಚೆಯ ಕನ್ನಡಿಗರಿಗೂ ಕೂಡಾ, ಅವರು ಬರೆದ ಲೇಖನಗಳು ಕರ್ನಾಟಕದಲ್ಲಿ ಪ್ರಕಟವಾಗಬೇಕು, ಜೊತೆಗೆ ಅದನ್ನು ಅಲ್ಲಿನ ಜನತೆ ಓದಬೇಕು. ಇಷ್ಟೆಲ್ಲಾ ಆಗದಿದ್ದರೆ, ತಾವು ಯಾರಿಗಾಗಿ ಬರೆಯಬೇಕು ಎನ್ನುವ ಭಾವನೆ ಇಲ್ಲಿನ ಲೇಖಕರಲ್ಲಿ ಬೆಳೆಯುವುದು ಸಹಜ ಎಂದು ತಿಳಿಸಿದರು. ಜೊತೆಗೆ ಮನೆಯಲ್ಲಿ ಮಕ್ಕಳು ಬೆಳೆದಂತೆಲ್ಲಾ, ಅವರೊಂದಿಗೆ ಇಂಗ್ಲೀಷ್ ಬಳಕೆ ಹೆಚ್ಚಾಗಿ, ಕನ್ನಡದ ಬಳಕೆ ಕ್ಷೀಣಿಸುತ್ತಾ ಹೋಗುತ್ತದೆ. ಇದು ಕೇವಲ ಕಡಲಾಚೆಯಲ್ಲೇ ಅಲ್ಲಾ, ನಮ್ಮ ದೇಶದಲ್ಲಿ ಕರ್ನಾಟಕದಿಂದ ಹೊರಗಿರುವ ಬರಹಗಾರರ ಪರಿಸ್ಥಿತಿಯೂ ಇದೇ ಆಗಿದೆ ಎನ್ನುತ್ತಾ, ಪ್ರಸಿದ್ಧ ಕನ್ನಡ ಕಾದಂಬರಿಕಾರ ದಿ. ಯಶವಂತ ಚಿತ್ತಾಲರ ಉದಾಹರಣೆಯನ್ನು ನೀಡಿದರು. ಚಿತ್ತಾಲರು ಮುಂಬೈನಲ್ಲಿ ನೆಲಸಿದ್ದು, ಅವರ ಪತ್ನಿ ಕೊಂಕಣಿಯವರು. ಚಿತ್ತಾಲರ ಕನ್ನಡ ಭಾಷೆ ಕೇವಲ ಗ್ರಂಥಸ್ಥವಾಗಿತ್ತೇ ಹೊರತು, ಆಡುಗನ್ನಡದ ಸೊಗಡು ಅವರ ಪುಸ್ತಕಗಳಲ್ಲಿ ಕಂಡು ಬರಲಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ತಾವು ಹೊರನಾಡಿನಲ್ಲಿ ಉತ್ತಮ ಮಟ್ಟದ ಕನ್ನಡವನ್ನು ಬಳಸಲು ಅಶಕ್ಯರೆಂದು ಅನ್ನಿಸಿದಾಗ, ಕರ್ನಾಟಕಕ್ಕೆ ಹೋಗಿ ಬಿಡ ಬೇಕು, ಅಲ್ಲಿ ಕನ್ನಡದಲ್ಲಿ ಬರೆಯಬೇಕು ಎಂಬ ಉತ್ಕಟವಾದ ಬಯಕೆ ಅವರನ್ನು ಕಾಡಲಾರಂಬಿಸಿತ್ತು. ಆದರೆ ವೃತ್ತಿಯನ್ನು ತೊರೆದು ಹೊಟ್ಟೆತುಂಬಿಸಿಕೊಳ್ಳುವ ಬೇರಾವ ಮಾರ್ಗವೂ ಅವರಿಗಿರಲಿಲ್ಲ. ಆದರೆ ಅವರ ಅದೃಷ್ಟವಶಾತ್, ಅವರಿರುವ ವಿಭಾಗಕ್ಕೆ ಕನ್ನಡದ ಮೇಲಧಿಕಾರಿಯೊಬ್ಬರು ಬಂದಾಗ ಅವರ ನೆರವಿನಿಂದ ಮೈಸೂರಿಗೆ ವರ್ಗಾಯಿಸಲ್ಪಟ್ಟ ಶ್ರೀಯುತ ಭೈರಪ್ಪನನವರು ಮುಂದೆ ತಮ್ಮ ಕನ್ನಡ ಶಬ್ದ ಸಂಪತ್ತಿನ ಬೆಳವಣಿಗೆಯನ್ನು ಹೇಗೆ ಉತ್ತಮಗೊಳಿಸಿಕೊಂಡರು ಎನ್ನುವ ವೈಖರಿ ನಿಜಕ್ಕೂ ಅಪರೂಪದ ಸಂಗತಿ. ಮೈಸೂರಿನ ಸುತ್ತಮುತ್ತ ಇರುವ ಹಳ್ಳಿಗಳ ಸಂತೆ ಮತ್ತು ಜಾತ್ರೆಗಳಿಗೆ ಹೋಗಿ, ಅಲ್ಲಿ ಒಂದು ಕಲ್ಲಿನ ಮೇಲೆ ಕುಳಿತು ಬಿಡುತ್ತಿದ್ದರಂತೆ. ಅಲ್ಲಿ ಅವರ ಕಿವಿಯ ಮೇಲೆ ಬೀಳುತ್ತಿದ್ದ ಕನ್ನಡ ಶಬ್ದಗಳ ಗ್ರಹಣೆಯೇ, ಅವರ ಭಾಷೆಯ ಸಂಪತ್ತನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಯಿತು. ಅವರ ಪ್ರಕಾರ, ಈ ಸಂತೆ ಮತ್ತು ಜಾತ್ರೆಗಳಲ್ಲಿ ಅಲ್ಲಿನ ಜನರಾಡುವ ಆಡು ಕನ್ನಡವೇ, ಲೇಖನಗಳಿಗೆ ಸರಕನ್ನು ಒದಗಿಸುವ ಸಂಪನ್ಮೂಲವಾಯಿತೆಂದು ತಿಳಿಸಿದರು. ಅಲ್ಲಿ ಜನಗಳ ಮಧ್ಯೆ ನಡೆಯುವ ಉಭಯಕುಶಲೋಪರಿ ಸಂಭಾಷಣೆ, ವ್ಯಾಪಾರಗಳ ವಾಗ್ವಾದ, ಅವರ ನಡುವೆ ನಡೆಯುವ ಜಗಳಗಳ ಸಮಯದಲ್ಲಿ ಅವರು ಬಳಸುವ ಕನ್ನಡವೇ ನಿಜವಾದ ಆಡುಗನ್ನಡ ಎಂದು ಭೈರಪ್ಪನವರು ಹೇಳಿದರು. ಇದನ್ನು ಸುಮಾರು ಆರು ತಿಂಗಳುಗಳು ಮಾಡಿದ ನಂತರ, ತಮ್ಮ ಕನ್ನಡ ಉತ್ತಮಗೊಂಡು, ತಾವು ಮುಂದೆ ರಚಿಸಿದ ಕಾದಂಬರಿಗಳಾದ ದಾಟು, ಪರ್ವ ಹಾಗೂ ಇನ್ನು ಅನೇಕ ಕೃತಿಗಳು ಜನಪ್ರಿಯವಾದವು ಎಂದರು. ತಾವು ಹೊರರಾಜ್ಯದಲ್ಲಿದ್ದಾಗ ರಚಿಸಿದ ಪುಸ್ತಕಗಳು ಬಹಳ ಸಪ್ಪೆಯೆಂದು ಅವರ ಅಭಿಪ್ರಾಯ.

ಆದ್ದರಿಂದ, ಇಂದು ಹೊರನಾಡಿನಲ್ಲಿರುವ ಇಲ್ಲಿನ ಕನ್ನಡ ಲೇಖಕರ ಸಮಸ್ಯೆಯೂ ಇದೇ ಆಗಿದೆ. ಅವರ ಶಬ್ದ ಸಂಪತ್ತೂ ಬಹಳ ಮಿತವಾದದ್ದು. ಅದಕ್ಕಾಗಿ ಅವರು ಬರೆಯುದನ್ನು ಬಿಡಬಾರದು. ಅದರಿಂದ ಕನ್ನಡ ನಾಡಿಗೆ ಮತ್ತು ಸಾಹಿತ್ಯಕ್ಕೆ ಅತಿ ದೊಡ್ಡ ನಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡದ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ, ಇಲ್ಲಿನ ಕನ್ನಡ ಸಂಘಗಳದ್ದು ಎಂದು ನೇರವಾಗಿ ನುಡಿದರು. ಈ ಸಂಘಗಳು ಒಟ್ಟಾಗಿ ಸೇರಿದಾಗ, ಅಲ್ಲಿ ಶುದ್ಧ ಕನ್ನಡವನ್ನೇ ಮಾತನಾಡಬೇಕು. ತಮ್ಮಸ್ವಂತ ಊರು ಮತ್ತು ಹಳ್ಳಿಯಲ್ಲಿ ಮಾತನಾಡುತ್ತಿದ್ದ ಕನ್ನಡವನ್ನು ಮಾತನಾಡಿದರೆ, ಅದರಿಂದ ಆಗುವ ಲಾಭ ಹೇರಳವಾಗಿದೆ. ಇದರಿಂದ ಇಲ್ಲಿ ಅನೇಕ ಕನ್ನಡದ ಲೇಖಕರನ್ನು ಬೆಳಸಲು ಸಾಧ್ಯವಾಗುತ್ತದೆ. ಲೇಖಕನಿಗೆ Sophisticated Kannada ಬೇಕಿಲ್ಲ. ಆಡು ಕನ್ನಡದಲ್ಲಿ ಬರೆದ ಪುಸ್ತಕಗಳನ್ನು ಪ್ರಕಟಿಸಬೇಕು. ಈಗ ನಿಮ್ಮ ಸಮಾರಂಭದಲ್ಲಿ ನಾನು ಬಿಡುಗಡೆ ಮಾಡಿರುವ ೫ ಪುಸ್ತಕಗಳ ಕಾರ್ಯವೇ, ಈ ವಿಶ್ವಕನ್ನಡ ಸಮ್ಮೇಳನದಲ್ಲಿ ಎಲ್ಲಕ್ಕಿಂತಲೂ ಅತ್ಯಂತ ಮಹತ್ವದ ಕಾರ್ಯ ಎಂದು ಉದ್ಗರಿಸಿದರು. ಇಲ್ಲಿನ ಲೇಖಕರು ಬರೆಯುವ ಪುಸ್ತಕಗಳನ್ನು, ಕರ್ನಾಟಕದಲ್ಲಿರುವ ಪ್ರಕಾಶಕರು ಪ್ರಕಟಿಸಬೇಕು. ಆ ಪುಸ್ತಕಗಳನ್ನು ಅಲ್ಲಿನ ಜನತೆ ಓದಬೇಕು, ಅಲ್ಲಿನ ಪತ್ರಿಕೆಗಳಲ್ಲಿ ಈ ಪುಸ್ತಕಗಳಿಗೆ ಹೆಚ್ಚಿನ ಪ್ರಚಾರ ಸಿಕ್ಕಬೇಕು. ಸಾಮಾನ್ಯವಾಗಿ ಯಾವುದೇ ಲೇಖಕ ತನ್ನ ಕೃತಿಗಳಲ್ಲಿ, ಜೀವನದ ಮೊದಲ ೨೦ ವರ್ಷಗಳ ತನ್ನ ದಟ್ಟವಾದ ನೆನಪನ್ನು ಕುರಿತು ಬರೆಯುತ್ತಾನೆ. ಆದರೆ ಹೊರನಾಡ ಕನ್ನಡ ಲೇಖಕರು, ಹೊರದೇಶದಲ್ಲಿ ತಮ್ಮ ವೃತ್ತಿ ಜೀವನ, ವೈಯಕ್ತಿಕ ಜೀವನ ಮತ್ತು ಇತರ ರಂಗಗಳಲ್ಲಿ ತಮಗಾದ ಅನುಭವಗಳನ್ನು ಕುರಿತು ಬರೆದರೆ, ಅದನ್ನು ಓದಿ ಸಂತೋಷಪಡುವ ಅವಕಾಶ ಕರ್ನಾಟಕದ ಜನತೆಗೆ ಲಭ್ಯವಾಗುತ್ತದೆ. ಈ ಅನುಭವದ ವಿಷಯಗಳನ್ನು ಆಸಕ್ತಿಪೂರ್ಣವಾಗಿ ಬರೆಯುವ ಸಾಮರ್ಥ್ಯ ಕೇವಲ ಇಲ್ಲಿನ ಲೇಖಕರಿಗೆ ಮಾತ್ರಾ ಸಾಧ್ಯ ಎಂದು ಸಲಹೆ ನೀಡಿದರು. ಹೀಗೆ ಬರೆಯುವುದರಿಂದ, ಹೊರನಾಡ ಕನ್ನಡ ಲೇಖಕರು, ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ನೀಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಕಡಲಾಚೆಯ ಕನ್ನಡ ಲೇಖಕರಿಗೆ, ಕನ್ನಡ ಸಾಹಿತ್ಯಕ್ಕೆ ಹೊಸರೀತಿಯ ಕೊಡುಗೆಯನ್ನು ನೀಡುವ ಅವಕಾಶವಿದೆ. ಅನೇಕ ಹೊರನಾಡ ಕನ್ನಡ ಲೇಖಕರಿಗೆ ತಾವು ಇಂಗ್ಲೀಷಿನಲ್ಲಿ ಏಕೆ ಬರೆಯಬಾರದು ಎಂಬ ಆಲೋಚನೆ ಇದೆ. ಆದರೆ ನನ್ನ ಪ್ರಕಾರ, ಮೊದಲ ತಲೆಮಾರಿನ ಕನ್ನಡಿಗರಿಗೆ, ಇಂಗ್ಲೀಷ್ ಭಾಷೆಯಲ್ಲಿ ಬರೆಯುವ ಸಾಮರ್ಥ್ಯವಿರುವುದಿಲ್ಲ. ನಾವು ಓದಿ, ಬರೆದು ಕಾರ್ಯ ನಿರ್ವಹಿಸುವ ಮಾಧ್ಯಮ ಇಂಗ್ಲೀಷ್ ಆದರೂ, ಸಾಹಿತ್ಯ ಸೃಷ್ಟಿಗೆ ಅಗತ್ಯವಿರುವ ಭಾಷೆಯ ಹದ ನಮ್ಮಲ್ಲಿಲ್ಲ. ಒಂದು ಸಾಹಿತ್ಯ ಸೃಷ್ಟಿಯಲ್ಲಿ, ಆ ಭಾಷೆಯ ಬೈಗುಳು, ಹೊಗಳುವಿಕೆ, ಅಂತರಂಗ ವಿಷ್ಲೇಷಣೆ, ಹೀಗೆ ಅನೇಕ ಪ್ರಕಾರದ ಭಾಷೆಯ ಮೇಲಿನ ಹಿಡಿತದ ಅಗತ್ಯ ಇರುತ್ತದೆ. ಅದು ನಮ್ಮ ಆಡು ಭಾಷೆಯಲ್ಲದೇ, ಇತರ ಭಾಷೆಯಲ್ಲಿ ಇರಲು ಸಾಧ್ಯವಿಲ್ಲ. ಆರ್.ಕೆ.ನಾರಾಯಣ್ ಅಥವಾ ರಾಜಾರಾವ್ ಅಂತಹವರು ಬಹಳಷ್ಟು ಮಂದಿ ನಮ್ಮಲ್ಲಿಲ್ಲ. ನಾವು ಚಿಕ್ಕ ವಯಸ್ಸಿನಲ್ಲಿ ನಮ್ಮ ತಾಯಿಯೊಡನೆ, ನಮ್ಮ ಗೆಳೆಯರೊಡನೆ ನಡೆಸಿದ ಮಾತುಕಥೆಗಳು, ಶಾಲೆಯಲ್ಲಿ ಕಲಿತ ರಾಜರತ್ನಂ ಅವರ ಕನ್ನಡ ಗೀತೆಗಳು, ಇಂಗ್ಲೀಷ್ ಭಾಷೆಯಲ್ಲಿ ನಮಗೆ ಲಭ್ಯವಿಲ್ಲ. ಹಾಗಾಗಿ ಮೊದಲ ತಲೆಮಾರಿನ ಕನ್ನಡಿಗರಿಗೆ ಸಾಹಿತ್ಯ ಸೃಷ್ಟಿ ಕೇವಲ ಕನ್ನಡದಲ್ಲಿ ಮಾತ್ರಾ ಸಾಧ್ಯ ಎಂದರು. ನಮ್ಮ ಮುಂದಿನ ಪೀಳಿಗೆಯ ಹೊರನಾಡ ಮಕ್ಕಳಿಗೆ, ಇಂಗ್ಲೀಷಿನಲ್ಲಿ ಬರೆಯುವುದು ಸಾಧ್ಯ. ಅದಕ್ಕೆ ಕಾರಣ ಅವರಿಗೆ ಇಂಗ್ಲೀಷ್ ಭಾಷೆಯಲ್ಲಿ ಇರುವ ಸಾಮರ್ಥ್ಯ ಮತ್ತು ಆಂಗ್ಲ ಸಾಹಿತ್ಯದ ಸೃಷ್ಟಿಯಲ್ಲಿ ಇಲ್ಲಿ ದೊರಕುವ ತರಬೇತಿ. ಅವರಿಗೆ ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲ. ಆದ್ದರಿಂದ ಕಡಲಾಚೆಯ ಕನ್ನಡಿಗರು ಬರೆದಾಗ ಅದನ್ನು ಇಲ್ಲಿನ ಕನ್ನಡ ಜನತೆ ಪ್ರೋತ್ಸಾಹಿಸ ಬೇಕು. ಅದರಿಂದ ನಮ್ಮ ಭಾಷೆ ಉಳಿಯುವುದಲ್ಲದೇ, ನಮ್ಮ ಸಾಹಿತ್ಯದ ಬೆಳವಣಿಗೆಯೂ ಆಗಿ, ನೀವು ಹೊಸ ಲೇಖಕರನ್ನು ಬೆಳಸಿದಂತಾಗುತ್ತದೆ ಎಂದು ಸೂಚಿಸಿದರು. ಹಾಗಾಗಿ, ಇಂತಹ ಬೃಹತ್ ಸಮಾವೇಶಗಳು, ಕೇವಲ ಕನ್ನಡಿಗರನ್ನು ಸಾಮಾಜಿಕವಾಗಿ ಒಂದುಗೂಡಿಸುವ ಸಭೆಗಳಾಗದೇ, ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸಿ ಉಳಿಸುವ ಸಮ್ಮೇಳನಗಳಾಗ ಬೇಕು ಎಂದು ತಿಳಿಸುತ್ತಾ, ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಪ್ರೇಕ್ಷಕರ ದೀರ್ಘ ಕರತಾಡನದೊಂದಿಗೆ ಕೊನೆಗೊಂಡ, ಈ ಉದ್ಘಾಟನೆಯ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮೆಲ್ಲರ ಕಣ್ಣು ಕೋರೈಸುವಂತಿದ್ದವು.AKKA dancers

ಇಲ್ಲಿ ನಾನು ಒಂದು ಮಾತನ್ನು ಹೇಳಲೇ ಬೇಕು. ಅಮೆರಿಕೆಯಲ್ಲಿ ನಮ್ಮ ನೃತ್ಯ ಮತ್ತು ಸಂಗೀತದ ಪರಂಪರೆಯನ್ನು ಮುಂದುವರೆಸುತ್ತಿರುವ ಕಲೆಯ ಅಕ್ಯಾಡೆಮಿಗಳು, ತಮ್ಮ ಕಾರ್ಯವನ್ನು ಅತ್ಯಂತ ನಿಸ್ಪೃಹತೆಯಿಂದ ನಿರ್ವಹಿಸುತ್ತಿವೆ ಎನ್ನುವುದಕ್ಕೆ, ನಾನು ಈ ಮೂರೂ ದಿನಗಳು ನೋಡಿದ ವಿವಿಧ ಪ್ರಕಾರದ ನೃತ್ಯ-ರೂಪಕಗಳು, ಸಂಗೀತ ಗೋಷ್ಠಿಗಳೇ ಸಾಕ್ಷಿ. ಕೇವಲ ಕನ್ನಡಿಗರೇ ಅಲ್ಲದೇ, ಸ್ಥಳೀಯ ಅಮೆರಿಕನ್,

Photo: Courtesy ‘That’s Kannada’ Shamsundara

,ಸ್ಪಾನಿಶ್,ತಮಿಳು, ಸಿಂಹಳೀಯರು, ಆಫ಼್ರಿಕನ್ ಅಮೆರಿಕನ್ನರು, ಹೀಗೆ ಹಲವು ಹತ್ತು ವರ್ಣದ ಕಲಾವಿದರ ಪ್ರತಿಭೆಯನ್ನು ಕಂಡು ಬೆರಗಾದೆ. ಜೊತೆಗೆ ನಮ್ಮ ಕಲಾವಿದರು, ನೃತ್ಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿ, ಪ್ರದರ್ಶಿಸುತ್ತಿರುವ ಕಾರ್ಯಕ್ರಮಗಳು ಬಹಳ ರೋಚಕವೆನಿಸುತ್ತವೆ. ನಮ್ಮ ನಾಡಿನಿಂದ ಬಂದ ಕಲಾವಿದರೂ ಕೂಡಾ, ಈ ದಿಶೆಯಲ್ಲಿ ಬಹಳ ಸಾಧನೆಗಳನ್ನು ಮಾಡಿದ್ದಾರೆ. ಇಂತಹ ಪ್ರಯೋಗಗಳಲ್ಲಿ, ನಿರ್ಮಲ ಮಾಧವ್ ಅವರ “ಸಂಭ್ರಮ”, ಮೈಸೂರು ನಾಗರಾಜರ “ತಮಸೋಮಾ ಜ್ಯೋತಿರ್ಗಮಯ” ಅಪರ್ಣಾ ಸಿಂಧೂರರ “ಒಂದು ಕಥೆ ಮತ್ತು ಒಂದು ಹಾಡು” ಸಭಿಕರ ಮನಸೂರೆಗೊಂಡವು.

ಎರಡನೆಯ ದಿನದ ಕಾರ್ಯಕ್ರಮಗಳಲ್ಲಿ, “ವಿಜಯನಗರದ ವೈಭವ” ನೃತ್ಯ ರೂಪಕ, ಪೌರಾಣಿಕ ನಾಟಕಗಳು, ಚಿತ್ರಪಟಗಳಲ್ಲದೇ, ಅಂದಿನ ಸಂಜೆ ಹೆಸರಾಂತ ನೃತ್ಯ ಕಲಾವಿದೆ ಶ್ರೀಮತಿ. ಅಲಮೇಲು ಅಯ್ಯಂಗಾರ್ ನೃತ್ಯಕ್ಕೆ ಅಳವಡಿಸಿರುವ, ಪ್ರಸಿದ್ಧ ಕನ್ನಡ ಕವಿ ಪು.ತಿ.ನ ಅವರ “ಗೋಕುಲ ನಿರ್ಗಮನ” ಮತ್ತು ಖ್ಯಾತ ವೇಣು ಪಟು ಶಶಾಂಕ್ ಸುಬ್ರಮಣ್ಯ ಮತ್ತು ಬೆಂಗಳೂರಿನ ಚಕ್ರಫ಼ೋನಿಕ್ಸ್ ಅವರ ಸಂಗೀತ ಸಮ್ಮಿಳನ ಕಾರ್ಯಕ್ರಮಗಳು ಅಪರೂಪವೆನಿಸಿದವು. ಅಂದಿನ ಮಧ್ಯಾನ್ಹ ಎಸ್.ಎಲ್. ಭೈರಪ್ಪನವರ ಜೊತೆ ನಡೆದ ಒಂದು ಪರಸ್ಪರ ಸಂಭಾಷಣೆಯ ಅಧಿವೇಶನದಲ್ಲಿ, ಪ್ರೇಕ್ಷಕರು ಭೈರಪ್ಪನವರನ್ನು ಕುರಿತು ಕೇಳಿದ ಅನೇಕ ರೀತಿಯ ಪ್ರಶ್ನೆಗಳಿಗೆ, ಅವರು ನೀಡಿದ ಬಿಚ್ಚುಮನಸ್ಸಿನ ಉತ್ತರಗಳು ಬಹಳ ಮೆಚ್ಚುಗೆಯಾದವು. ಅವರು ಬರೆಯಲು ಪ್ರಾರಂಭಿಸಿದ್ದು ಏಕೆ, ಅವರ ಕಥಾವಸ್ತುಗಳ ಹಿನ್ನೆಲೆ ಕೇವಲ ಸಂಶೋಧನೆಯ ಮೂಲಕವೇ ಇಲ್ಲಾ ಅವರ ಅನುಭವಗಳೇ, “ಮಂದ್ರ” ಕಾದಂಬರಿಯಲ್ಲಿ ಸಂಗೀತಗಾರರನ್ನೇಕೆ ಅಷ್ಟೊಂದು ಕೆಳಮಟ್ಟದಲ್ಲಿ ಚಿತ್ರಿಸಿದ್ದೀರಿ,ಆವರಣ ಕಾದಂಬರಿಯಲ್ಲಿನ ಹಿಂದು-ಮುಸ್ಲಿಮ್” ಧರ್ಮಗಳ ನಡುವಿನ ತಿಕ್ಕಾಟದ ಸನ್ನಿವೇಶಗಳು, ದಾಟು, ತಬ್ಬಲಿಯು ನೀನಾದೆ ಮಗನೆ ಕಥೆಯ ಹಿನ್ನೆಲೆ, ಪರ್ವ ಕಾದಂಬರಿಯ ಬಗ್ಗೆ ವಿಶ್ಲೇಷಣೆ ಹೀಗೆ ಹಲವು ಹತ್ತು ವಿಷಯಗಳ ಬಗ್ಗೆ ನಡೆದ ಸಂಭಾಷಣೆಗಳು, ಭೈರಪ್ಪನವರ ಎದೆಗಾರಿಕೆ ಮತ್ತು ವಾಸ್ತವತೆಯಲ್ಲಿ ಅವರಿಗಿರುವ ಅಚಲ ನಂಬಿಕೆ ಮತ್ತು ಪ್ರೇಮವನ್ನು ಎತ್ತಿ ಹಿಡಿದವು. ಅವರ ನೂತನ ಕಾದಂಬರಿ “ಯಾನ” ಪುಸ್ತಕವನ್ನು, ಅಲ್ಲಿ ನೆರೆದಿದ್ದ ಸಾಹಿತ್ಯಾಭಿಮಾನಿಗಳಿಗೆ, ಅಕ್ಕ ಸಮಿತಿಯವರು ಉಚಿತವಾಗಿ ಕೊಡಿಗೆ ನೀಡಿದ್ದು ಒಂದು ವಿಶೇಷವಾದ ಸಂಗತಿ. ಅಲ್ಲಿ ಎಲ್ಲಾ ಸಭಾಂಗಣಗಳಲ್ಲೂ ನಡೆಯುತ್ತಿದ್ದ ಪರ್ಯಾಯ ಕಾರ್ಯಕ್ರಮಗಳನ್ನೆಲ್ಲಾ ನನಗೆ ನೊಡಲಾಗಲಿಲ್ಲ. ಉದಾಹರಣೆಗೆ, ಯುವಕ-ಯುವತಿಯರಿಗಾಗಿ ಏರ್ಪಡಿಸಿದ್ದ, ಫ಼ಾಶನ್ ಶೋ” ಕಾರ್ಯಕ್ರಮದಲ್ಲಿ, ಪ್ರಸಿದ್ಧ ಬಾಲಿವುಡ್ ನಟಿ ಪ್ರೀತಿ ಝಿಂಟಾ ಬಂದಿದ್ದಳೆಂದು ನನ್ನ ಸ್ನೇಹಿತರೆಲ್ಲಾ ಹಾಡಿ ಹೊಗಳಿದರು. ಅದರಲ್ಲಿ ನನಗೇನೂ ಅಭಿರುಚಿಯಿಲ್ಲ. ಆದರೆ ಅವರವರ ಭಾವಕ್ಕೆ ಮತ್ತು ಭಕುತಿಗೆ ಬೇಕಾಗಿದ್ದ ಕಾರ್ಯಕ್ರಮಗಳು ಹೇರಳವಾಗಿದ್ದವು.

೩ನೆಯ ದಿನವಾದ ಭಾನುವಾರ, ಜನಪದ ಸಿಂಚನ, ಕರ್ನಾಟಕದ ದೇಗುಲಗಳು, NRI-Non Respected Indian ನಾಟಕವಲ್ಲದೇ, ವಿವೇಕ್ ಶಾನುಭಾಗರ  “ಕಾರವಾರ್ ಟು ಮ್ಯಾಂಗಳುರ್ ಎಕ್ಸಪ್ರೆಸ್”, “ಮುದ್ದಣ್ಣನ ಪ್ರಮೋಶನ್ ಪ್ರಸಂಗ”, “ವರಲಕ್ಷ್ಮಿ ಅವಾಂತರ” ಹೀಗೆ ಹಲವಾರು ನಾಟಕಗಳು ಸೊಗಸಾಗಿದ್ದವು ಎಂದು ನಮ್ಮ ಗೆಳೆಯರು ಹೇಳಿದರು. ಭಾನುವಾರ ನಡೆದ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಲ್ಲಿ, ಪ್ರಸಿದ್ಧ ವಿದ್ವಾಂಸ ಹಾಗೂ ಲೇಖಕ ಪದ್ಮಶ್ರಿ, ಡಾ ಬನ್ನಂಜೆ ಗೋವಿಂದಾಚಾರ್ಯ ಅವರ, “ಬೇಂದ್ರೆ ಅವರ ಸಮಗ್ರ ಕಾವ್ಯಗಳು” ಬಗ್ಗೆ ಅವರು ನೀಡಿದ ಉಪನ್ಯಾಸ ಬಹಳ ವಿದ್ವತ್ ಪೂರ್ಣವಾಗಿತ್ತು. ಬೇಂದ್ರೆ ಅವರನ್ನು ಬಹಳ ಹತ್ತಿರದಿಂದ ಕಂಡಿದ್ದ, ಗೋವಿಂದಾಚಾರ್ಯರು ಅವರ “ನಾಕು-ತಂತಿ” ಕವನ ಸಂಗ್ರಹದ ಬಗ್ಗೆ ನೀಡಿದ ವಿಶ್ಲೇಷಣೆ ನನಗೆ ಬೇಂದ್ರೆಯವರ ಬಗ್ಗೆ ಅನೇಕ ಹೊಸ ಸಂಗತಿಗಳನ್ನು ತಿಳಿಸಿದವು. ಇವೆಲ್ಲದರ ಮಧ್ಯೆ, ಕನ್ನಡಿಗರ ಮನಸ್ಸನ್ನು ತಮ್ಮ ಉತ್ತಮ ಅಭಿರುಚಿಯ ಹಾಸ್ಯದಿಂದ ಸೂರೆಗೊಂಡಿರುವ ಮೈಸೂರಿನ ಪ್ರೊಫ಼ೆಸರ್. ಕೃಷ್ಣೇಗೌಡರ ಮತ್ತೊಂದು ಹಾಸ್ಯ ರಸಾಯನ ಕಾರ್ಯಕ್ರಮ ಪ್ರೇಕ್ಷಕ ವೃಂದವನ್ನು ನಕ್ಕುನಲಿಸಿತು. ಭಾಷೆಯಲ್ಲಿ ಭಾವಕ್ಕೇ ಹೊರತು, ಅದರಲ್ಲಿನ ಅರ್ಥಕ್ಕೆ ಅಷ್ಟೊಂದು ಬೆಲೆಯಿಲ್ಲ ಎಂಬ ಸಂಗತಿಯನ್ನು, ಅನೇಕ ಉದಾಹರಣೆಗಳ ಸಹಿತ ನಮ್ಮ ಮನಗಳನ್ನು ರಂಜಿಸಿದ ಕೃಷ್ಣೇಗೌಡರ ಪ್ರತಿಭೆಗೆ ನಾವೆಲ್ಲಾ ತಲೆದೂಗಲೆ ಬೇಕಾಯಿತು.

Sadhanewith titleಸಂಸ್ಕೃತಿ ಕಾರ್ಯಕ್ರಮಗಳ ನಡುವೆ, ಉದ್ದಿಮೆದಾರರ ಭೇಟಿ, ವಿಚಾರ-ವಿನಿಮಯಗಳೂ ಹೇರಳವಾಗಿ ನಡೆದವು. ಹಣವಿಲ್ಲದೇ ಇಂತಹ ಬೃಹತ್ ಸಮ್ಮೇಳನವನ್ನು ಆಯೋಜಿಸಲು ಸಾಧ್ಯವೇ? ಒಂದು ಸಭಾಂಗಣವನ್ನು ಇದಕ್ಕಾಗಿಯೇ ಮೀಸಲಾಗಿಟ್ಟು ಅಲ್ಲಿ ಸೀರೆ, ಪುಸ್ತಕ, ಒಡವೆ ಇತ್ಯಾದಿಗಳ ಅಂಗಡಿಗಳನ್ನು ಸ್ಥಾಪಿಸಿದ್ದರು. ಅಲ್ಲಿ ಹೆಂಗಳೆಯರು ನೆರೆದಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

Photo: Courtesy ‘That’s Kannada’ Shamsundara

ಇಷ್ಟೇಲ್ಲಾ ಪುಸ್ತಕಗಳ ಮಳಿಗೆಯಲ್ಲಿ, ಉತ್ತರ ಅಮೆರಿಕೆಯ ಸಾಹಿತ್ಯ ರಂಗದ ಬರಹಗಾರರು ಬರೆದು ಪ್ರಕಟಿಸಿದ ಕೆಲವು ಪುಸ್ತಕಗಳನ್ನು ಕೊಂಡೆ. ರಾಜಾರಾವ್ ಅವರ ಜನಪ್ರಿಯ ಕಾದಂಬರಿಯ ಅನುವಾದಿತ ಕೃತಿ “ನಾರಿಗೀತೆ”, ಮೈ.ಶ್ರಿ. ನಟರಾಜರ, “ಗೀತ-ರಾಮಾಯಣ” ಇತ್ಯಾದಿ. ಇವೆಲ್ಲಾ ಚಟುವಟಿಕೆಗಳ ಮಧ್ಯೆ ಯೋಗದ ಶಿಬಿರ, ಕುಶಲಕಲೆಗಳ ಕಮ್ಮಟ, ಇಕೆಬಾನಾ, ರಸಪ್ರಶ್ನೆಗಳ ಸ್ಪರ್ದೆ, ಕ್ರಿಕೆಟ್ ಆಟದ ಸ್ಪರ್ದೆ, ಆಧ್ಯಾತ್ಮಿಕ ಶಿಬಿರ, ಪ್ರಸಿದ್ಧ ಉದ್ದಿಮೆದಾರರ ಭಾಷಣಗಳು, ವೈದ್ಯಕೀಯ ರಂಗದ ಖ್ಯಾತರ ಭಾಷಣಗಳು, ಕರ್ನಾಟಕದ ವಿಶ್ವವಿದ್ಯಾಲಯಗಳ ಆಲುಮಿನಿಗಳ ಸಮಾವೇಶ, ಗಾಲ್ಫ಼್ ಟೂರ್ನಮೆಂಟ್ ಹೀಗೆ ಒಂದೇ ಎರಡೇ, ಹಲವು ಹತ್ತು ಚಟುವಟಿಕೆಗಳು ಹಿನ್ನೆಲೆಯಲ್ಲಿ ನಡೆಯುತ್ತಲಿದ್ದವು ಈ ಮೂರೂ ದಿನಗಳು. ಇವೆಲ್ಲಕ್ಕೂ ನೆರವಾಗಿ ನಿಂತಿತ್ತು ಕ್ಯಾಲಿಫ಼ೋರ್ನಿಯಾದ ಬೇಸಿಗೆಯ ಹವಾಮಾನ. ಈ ಹವಾಮಾನದಲ್ಲಿ ನಡೆದ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮೆರವಣಿಗೆ ಇವೆಲ್ಲವನ್ನೂ ಮೀರಿಸುವಂತಿತ್ತು.

ಈ ಸಮ್ಮೇಳನಕ್ಕೆ ಮುಕ್ತಾಯ ಹಾಡಲು, ಅಕ್ಕ ಆಯೋಜಕರು ಕರ್ನಾಟಕದಿಂದ, ಪ್ರಸಿದ್ಧ ಚಲನಚಿತ್ರ ನಟ Power star ಪುನೀತ್ ರಾಜಕುಮಾರ್ ಅವರನ್ನೇ ಆಮಂತ್ರಿಸಿದ್ದದ್ದು ಈ ಸಮಾರಂಭದ ವೈಶಿಷ್ಟ್ಯತೆಯನ್ನು ಎತ್ತಿ ಹಿಡಿಯುತ್ತದೆ. “ಅಕ್ಕ ಅದೃಷ್ಟಾಧಿಪತಿ” ಎಂಬ ಕಾರ್ಯಕ್ರಮವನ್ನು ನಿರ್ವಹಿಸಲು ಬಂದಿದ್ದ ಈ ನಟನಿಗೆ, ಸಮಯದ ಅಭಾವದಿಂದಾಗಿ ಕಾರ್ಯಕ್ರಮವನ್ನು ಮೊಟಕುಗೊಳಿಸಬೇಕಾಯಿತು. ಅವನ ಅಭಿಮಾನಿಗಳಿಗೆ ಇದರಿಂದ ನಿರಾಶೆಯಾಯಿತು ಎನ್ನುವುದರಲ್ಲಿ ಸಂಶಯವಿಲ್ಲ. ಅದೇನೇ ಇರಲಿ, ನಾನು ನನ್ನ ಕುಟುಂಬ ಈ ಮೂರೂ ದಿನಗಳೂ, ಕನ್ನಡದ ವಾತಾವರಣದಲ್ಲಿ, ಬೆಳಗಿನಿಂದ ಸಂಜೆಯವರೆಗೆ ಮನಃಪೂರ್ತಿಯಾಗಿ ಮಿಂದು ನಕ್ಕು ನಲಿದೆವು. ನಮ್ಮ ನಾಡಿನ ಬಮ್ಧು-ಬಳಗವನ್ನು ಭೇಟಿಮಾಡಿ ಮನಸಾರೆ ಅಲ್ಲಿನ ರಸಾನುಭವಗಳನ್ನು ಹೆಕ್ಕಿ ನಮ್ಮ ನೆನಪಿನ ಬುಟ್ಟಿಯಲ್ಲಿ ತುಂಬಿಕೊಂಡೆವು. ನಮ್ಮ ಬಾಲ್ಯದ, ಶಾಲೆಯ, ಕಾಲೇಜಿನ ಒಡನಾಡಿಗಳನ್ನು, ಹಲವಾರು ದಶಕಗಳ ನಂತರ ಭೇಟಿಯಾಗಿ, ಅದರ ಸ್ವಾದವನ್ನು ಸವಿದೆವು. ನಮ್ಮ ನಾಡು, ನಡೆ, ನುಡಿಗಳನ್ನು, ಅಮೆರಿಕೆಯಂತಹ ಬೃಹತ್ ದೇಶದಲ್ಲಿ ಜೀವಿತವಾಗಿಡಲು ಶ್ರಮಿಸಿ, ಇಂತಹ ಮಹಾನ್ ಅಧಿವೇಶನವನ್ನು ಆಯೋಜಿಸಿದ ಅಕ್ಕ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ನನ್ನ ನೂರು ವಂದನೆಗಳು. ನಮ್ಮ ಬ್ರಿಟಿಷ್ ದ್ವೀಪದಲ್ಲೂ, ನಮ್ಮ ಕನ್ನಡ ಬಳಗ, ಇಂತಹುದೇ ಒಂದು ಬೃಹತ್ ಸಮ್ಮೇಳನವನ್ನು ಆಯೋಜಿಸಿ, ಇಲ್ಲಿನ ಕನ್ನಡಿಗರೆಲ್ಲರನ್ನೂ ಇನ್ನೂ ಹತ್ತಿರ ತರಲಿ ಎಂದು ಹಾರೈಸುತ್ತೇನೆ. ಕನ್ನಡ ಭಾಷೆ, ಸಂಸ್ಕೃತಿಗಳು ಹೀಗೆ ಬೆಳೆದು ನಮ್ಮ ಮುಂದಿನ ಪೀಳಿಗೆಗೂ ಜೀವಂತವಾಗಿರಲಿ ಎಂದು ಆಶಿಸುತ್ತಾ ನನ್ನ ಲೇಖನಕ್ಕೆ ಮುಕ್ತಾಯ ಹಾಡುತ್ತೇನೆ.

“ಕನ್ನಡವೇ ಸತ್ಯ, ಕನ್ನಡವೇ ನಿತ್ಯ”’

ತಮ್ಮ ವಿಶ್ವಾಸಿ

ಡಾ ಉಮಾ ವೆಂಕಟೇಶ್, ಕಾರ್ಡಿಫ಼್, ಯು.ಕೆ

7 thoughts on ““ಅಕ್ಕ” ವಿಶ್ವ ಕನ್ನಡ ಸಮ್ಮೇಳನ 2014 – ಉಮಾ ವೆಂಕಟೇಶ್ ಅವರ ವರದಿ

  1. ಉಮಾ, ನೀವು ಬರೆದ ವರೆದಿ ಬಹಳ ಚನ್ನಾಗಿದೆ. ” ಅಕ್ಕ ” ಸಮಾವೇಶದ ಬಗ್ಗೆ ಕೇಳಿದ್ದೆ, ಈಗ ಒಂದು ರೀತಿಯಿಂದ ನೋಡಿದ ಹಾಗಾಯಿತು. ನೀವು ಕಾರ್ಯಕ್ರಮವನ್ನು ವಿಧವಿಧವಾದ ದೃಷ್ಟಿಯಲ್ಲಿ ನೋಡಿ ನಮ್ಮಲ್ಲಿ ಹಂಚಿಕೊಂಡಿರುವುದು ಒಂದು ರೀತಿಯ ಪೂರ್ಣತೆ ಇತ್ತ ಹಾಗಿದೆ. ಫೋಟೋಗಳು ತುಂಬ ಚನ್ನಾಗಿವೆ. ಗೌರಿ ಪೂಜೆಯ ಸಂಭ್ರಮ ಕೇಳಿ ಆಶ್ಚರ್ಯವಾಯಿತು. ಭೈರಪ್ಪನವರು ಹೋದ ವರ್ಷ ಇಲ್ಲಿಗೆ ಬಂದಿದ್ದಾಗ, ವಿಚಾರಗೋಷ್ಠಿಯಲ್ಲಿ ಮಾತನಾದಿದ್ದು ಕೇಳಿದ್ದೆ. ಯಾವುದೇ ವಿಷಯದಲ್ಲಿನ ಅವರ ಜ್ಞಾನ ಮತ್ತು ನೇರವಾದ ಮಾತು ಕೇಳಿದಾಗ ಅವರ ಬಗೆಗಿನ ಗೌರವ ದ್ವಿಗುಣಗೊಳ್ಳುತ್ತದೆ.

    ದಾಕ್ಷಾಯಣಿ

    Like

    • ದಾಕ್ಷಾಯಣಿ, ಮೊದಲ ದಿನ ಅಲ್ಲಿ ಪೂಜೆ ಮಾಡುತ್ತಿದ್ದ ದಂಪತಿಗಳ ಸಂಖ್ಯೆಯನ್ನು ನೋಡಿ ಬೆರಗಾದೆ. ಒಂದು ವಿಧದಲ್ಲಿ ಅಮೆರಿಕನ್ನಡಿಗರು ಬಹಳ ಸಂಪ್ರದಾಯಸ್ಥರು. ಕರ್ನಾಟಕದಲ್ಲಿರುವ ನಮ್ಮ ಕನ್ನಡಿಗರಿಗಿಂತ ಇವರು ಇನ್ನೂ ಹೆಚ್ಚಿಗೆ ನಮ್ಮ ನಡೆ-ನುಡಿಗಳನ್ನು ಮುಂದುವರೆಸಿದ್ದಾರೆ ಎಂದು ನನ್ನ ಭಾವನೆ. ಇದರ ಬಗ್ಗೆ ಬಹಳ ಜನರಿಂದ ಕೇಳಿಯೂ ಇದ್ದೆ. ಭೈರಪ್ಪನವರು ನಿಜಕ್ಕೂ ಎದಿಗಾರಿಕೆ ಇರುವ ಲೇಖಕರು. ಅದನ್ನು ಅವರು ನಮ್ಮೊಡನೆ ನಡೆದ ಸಂವಾದದಲ್ಲಿ ನೇರವಾಗಿ ಒಪ್ಪಿಕೊಂಡರು ಮತ್ತು ವಿವಾದಾತ್ಮಕ ವಿಷಯಗಳ ಬಗ್ಗೆ, ಗಂಭೀರವಾದ ಸಾಹಿತ್ಯ ಸೃಷ್ಟಿಯಲ್ಲಿ ತಮಗಿರುವ ಆಸಕ್ತಿಯನ್ನು ಸಭಿಕರೊಡನೆ ಹಂಚಿಕೊಂಡರು.
      ಉಮಾ ವೆಂಕಟೇಶ್

      Like

  2. ಉಮಾ ಅವರ ಸವಿವರ ವರದಿ ಅಕ್ಕ ಕನ್ನಡ ಕೂTaವನ್ನು ಕಣ್ನಮುಂದೆ ತಂದು ನಿಲ್ಲಿಸಿದಂತಿದೆ. ನಾಗತಿ ಹಳ್ಳಿ ಬರೆದ ಪ್ರಜಾವಾಣಿಯ ವರದಿಯನ್ನು ಓದಿದೆ. ಅವರಿಗೆ ನಿಮ್ಮಷ್ಟು ಸಂತೋಷ ಆಗಿಲ್ಲವೆಮ್ದೆನಿಸಿತು.
    ಏನೇ ಆಗಲಿ, ಅಷ್ಟು ದೊಡ್ದ ಮಟ್ಟದಲ್ಲಿ , ದೊಡ್ಡ ಪ್ರಮಾಣದಲ್ಲಿ ಆಯೋಜಿಸಿ ನಡೆಸುವುದು ಸುಲಭಸಾಧ್ಯವಲ್ಲ.
    ಬಹುತೇಕ ಇಂಜಿನಿಯರುಗಳು ಅಲ್ಲಿರುವುದರಿಂದ ಹಾಗೂ ಆ ಕಾಲಘಟ್ಟದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕನ್ನಡ ಜ¬ಜ್ಞಾನವೂ , ಅಭಿಮಾನವೂ ನಿಜವಾಗಿಯೂ ಹ್ಹೆಮ್ಮೆ ಪಡಬೇಕಾದಂಥ ವಿಷಯ.ಅದನ್ನು ಉಳಿಸಿ-ಬೆಲೆಸಿಕೊಂಡ್ ಸಾಕಾರಗೊಳಿಸಿದ್ದಾರೆ ಕೂಡಾ. ಇದಕ್ಕೆ ತದ್ವಿರುದ್ಧ ನಮ್ಮ ಪರಿಸ್ಥಿತಿ. ಇಲ್ಲಿ ಬಹುತೇಕರು ಡಾಕ್ಟರುಗಳು. ಅವರ ಭಾಷಾಭಿಮಾನವೂ, ಭಾಷಾಜ್`ಜ್ಞಾನವೂ ಅಷ್ಟಕ್ಕಷ್ಟೆ. ನಮ್ಮ ಸಂಖ್ಯೆಯೂ ಕಡಿಮೆ. ಸಂಪನ್ಮೂಲಗಳು ಅಲ್ಪ.
    ಭೈರಪ್ಪನವರ ಭಾಷಣದ ಸಾರಾಂಶ ಚೆನ್ನಾಗಿ ತಿಳಿಸಿದೀರಾ.
    ಅವರಿಗೆ ಸಿಕ್ಕಂತೆ ನಮಗೇಕೆ ಅನುದಾನ ಕರ್ನಾಟಕ ಸರಕಾರದಿಂದ ದೊರೆಯುವುದಿಲ್ಲ? ಎಂಬುದು ಯೋಚಿಸಬೇಕಾದ ವಿಷಯ..
    ಅವರ ಕಾರ್ಯವೈಖರಿಯನ್ನು, ಸಂಘಟನಾ ವಿಧಾನವನ್ನು, ನಮ್ಮ ಇಲ್ಲಿನ ,ಇಂದಿನ ಕಾರ್ಯವೈಖರಿಗೆ ಹೋಲಿಸಿ ಕಲಿಕೆಯ ಅಂಶಗಳನ್ನು ಪಟ್ಟಿಮಾಡಿದರೆ, ನಾವೂ ಆ ನಿಟ್ಟಿನಲ್ಲಿ ಶ್ರಮಿಸಲು ಸಹಾಯಕವಾಗಬಹುದು.

    ಸುದರ್ಶನ

    Like

    • ಸುದರ್ಶನ್ ಅವರೆ, ನಮ್ಮಲ್ಲಿ ವ್ಯಾಪಾರೋದ್ಯಮಿಗಳ ಸಂಖ್ಯೆ ಅಷ್ಟಿಲ್ಲ. ಜೊತೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ರಾಜಕಾರಣಿಗಳ ಸಹವಾಸದಲ್ಲಿರುವವರ ಸಂಖ್ಯೆಯೂ ತೀರಾ ಕಡಿಮೆ. ಇಲ್ಲಿರುವ ವೈದ್ಯ ಸಮುದಾಯಕ್ಕೆ ತಮ್ಮ ವೃತ್ತಿ ಜೀವನದ ಕಾರ್ಯನಿಭಾಯಿಸುವಲ್ಲಿಯೇ ಸಮಯ ಸಿಕ್ಕದೇ ಸಾಕಾಗಿರುತ್ತದೆ. ಆದ್ದರಿಂದ ಬ್ರಿಟಿಷ್ ದ್ವೀಪದಲ್ಲಿನ ಕನ್ನಡ ಬಳಗದ ಕನ್ನಡಿಗರಿಗೆ, ಇಂತಹದೊಂದು ದೊಡ್ಡ ಸಮಾರಂಭವನ್ನು ಆಯೋಜಿಸುವುದು ಕಷ್ಟಕರವಾದ ವಿಷಯವಾಗಿದೆ. ಜೊತೆಗೆ ದೊಡ್ಡ ಸಂಖ್ಯೆ ಪ್ರಜಾಪ್ರಭುತ್ವದಲ್ಲಿ ಒಂದು ಅಡ್ವಾಂಟೇಜಿನ ವಿಷಯವೆನ್ನುವುದು ನಿಮಗೂ ತಿಳಿದಿರುವ ವಾಸ್ತವದ ಸಂಗತಿ. ಅಮೆರಿಕನ್ನಡಿಗರಲ್ಲಿ ಎಲ್ಲಾ ವೃತ್ತಿರಂಗದಲ್ಲೂ ಪಳಗಿದ ಜನರಿದ್ದಾರೆ, ಅಲ್ಲಿ ನಡೆದ ಅಲುಮಿನಿಗಳ ಸಭೆಗೆ ಹೋದಾಗ ನನಗೆ ಈ ಸಂಗತಿ ತಿಳಿದು ಬಂತು. ಇನ್ನು ಪುಸ್ತಕ ಪ್ರಕಾಶಕರ ಜೊತೆಗೆ ಸಂಬಂಧದ ವಿಷಯ, ಈಗ ಅಷ್ಟೇನೂ ಕಷ್ಟಕರವಾದದ್ದಲ್ಲ. ನಾವೆಲ್ಲಾ ಒಟ್ಟುಗೂಡಿ ಶ್ರಮಿಸಿದರೆ ಆ ಕಾರ್ಯವನ್ನು ನಿಭಾಯಿಸ ಬಹುದು. ಇ ಬಾರಿ ವೇದಿಕೆಯ ಸಭೆಯಲ್ಲಿ ಕೂಡಿದಾಗ ಮಾತನಾಡೋಣ.
      ಉಮಾ ವೆಂಕಟೇಶ್

      Like

  3. ನಿಮ್ಮ ‘ಅಕ್ಕ’ ಸಮ್ಮೇಳನದ ವರ್ಣನೆ ಸುಂದರವಾಗಿ ಮೂಡಿಬಂದಿದೆ. ಸಾಮಾನ್ಯವಾಗಿ ವರದಿಗಳು ಶುಷ್ಕವಾಗಿರುತ್ತವೆ. ನೀವು ಜೋಡಿಸಿದ ವಿವರಗಳು ( ಉದಾ: ಭೈರಪ್ಪನವರ ಭಾಷಣ), ನಿಮ್ಮ ವೈಯಕ್ತಿಕ ಅನುಭವಗಳು, ಮುಗ್ಧ ಕಣ್ಣಿನ ನೋಟ, ನೀವು ಕಂಡು ಅಚ್ಚರಿಪಟ್ಟ, ಸಂತೋಷಪಟ್ಟ ವಿಷಯಗಳು, ಎಲ್ಲವನ್ನು ಓದುಗನೂ ಅನುಭವಿಸುವಂತೆ ಕಣ್ಣಿಗೆ ಕಟ್ಟಿದ್ದೀರಿ. ಅಷ್ಟು ದೊಡ್ಡ ಸಮ್ಮೇಳನದ ಅಂಥ ಸಂಘಟನೆ ಶ್ಲಾಘನೀಯವೇ. ಭೈರಪ್ಪನವರ ಸಲಹೆಗಳು ಅನಿವಾಸಿ ಕನ್ನಡಿಗರು ಅನುಸರಿಸುವಂಥವೇ. ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಮತ್ತೆ ಮತ್ತೆ ಓದಿ ಆನಂದಿಸಿದೆ.

    Like

  4. ನಿಮ್ಮ ಲೇಖನ ನಮ್ಮ ಕಣ್ಮನ ತಣಿಸಿತು. ನಿಮ್ಮ ಸಹಜ ಬರವಣಿಗೆಯಿಂದಾಗಿ ನಾನೇ ಅಲ್ಲಿದಂತೆ ಅನಿಸಿ
    ಸಂಭ್ರಮ ಪಟ್ಟೆ.
    ಈ ದ್ವೀಪದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಂಚೆ ಬರೆದು ಉಪಕಾರವನ್ನೆ ಮಾಡಿದ್ದೀರ. ಈ ನಿಮ್ಮ ಅನುಭವದಿಂದ ಮತ್ತು ಎಸ್ ಎಲ್ ಬ್ಯೆರಪ್ಪ ರ ಅನುಭವವಾಣಿಯಿಂದ ಕಲಿಯಬೇಕಾದ್ದು ಬೆಟ್ಟದಸ್ಟಿದೆ.

    Like

    • ನಮಸ್ಕಾರ ಕನ್ನಡ ಪೇಮಿ ಅವರೆ. ಎಸ್.ಎಲ್.ಭೈರಪ್ಪನವರ ಅನುಭವವಾಣಿಯನ್ನುಹೊರನಾಡ ಕನ್ನಡಿಗ ಲೇಖಕರು ಕೃತಿಗಿಳಿಸಿದಲ್ಲಿ, ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಆಯಾಮ ದೊರೆಯುವುದರಲ್ಲಿ ಸಂದೇಹವೇ ಇಲ್ಲ. ಅಕ್ಕ ಸಮ್ಮೇಳನ ನಿಜಕ್ಕೂ ಕನ್ನಡಿಗರ ಹೃದಯದಲ್ಲಿ ಕನ್ನಡತನವನ್ನು ಬಡಿದೆಬ್ಬಿಸುವುದರಲ್ಲಿ ಯಶಸ್ವಿಯಾಯಿತು ಎಂದು ನನ್ನ ಅನಿಸಿಕೆ.
      ಉಮಾ ವೆಂಕಟೇಶ್

      Like

Leave a comment

This site uses Akismet to reduce spam. Learn how your comment data is processed.