ಮನೆಯ ಉಪ್ಪಿನಕಾಯಿ – ರಾಜಾರಾಮ ಕಾವಳೆಯವರ ಅನುಭವಗಳು

[ಉಪ್ಪಿನಕಾಯಿಯ ನೆಪದಲ್ಲಿ ರಾಜಾರಾಮ ಕಾವಳೆಯವರು ಅನಿವಾಸಿ ಕನ್ನಡಿಗರನ್ನು ಸದಾ ಸತಾಯಿಸುವ ಪ್ರಶ್ನೆಗಳಾದ ’’ನಮ್ಮ ಮನೆ ಯಾವುದು?ನಮ್ಮ ಊರು ಎಲ್ಲಿದೆ?” ಇದರ ಬಗ್ಗೆ ಸೀರಿಯಸ್ಸಾಗಿ ವಿಚಾರ ಲಹರಿ ಹರಿಸಿದ್ದಾರೆ.-ಸಂ]

ಲವು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಹಲವು ಸ್ನೇಹಿತರು ಬಂದಿದ್ದರು. ಮಾತುಕತೆ ಉಪಚಾರಗಳ ನಂತರ ನಾವೆಲ್ಲರೂ ಊಟಕ್ಕೆ ಕುಳಿತಿದ್ದೆವು. ನನ್ನಪತ್ನಿ ತಯಾರಿಸಿದ್ದ ರುಚಿಕರವಾದ ಊಟವನ್ನು ಸ್ವಾರಸ್ಯವಾಗಿ ಎಲ್ಲರೂ ಸವಿಯುತ್ತಿದ್ದಾಗ, ಉಪ್ಪಿನಕಾಯಿಯನ್ನು ಇಡುವುದನ್ನು ಮರೆತಿದ್ದನ್ನು ಕಂಡು ಪದ್ಮಳು ನನಗೆ ಹೇಳಿದಳು- ‘ರೀ, ಉಪ್ಪಿನಕಾಯಿಯನ್ನು ತಂದಿಡ್ರೀ’.

ಅದಕ್ಕೆ ಕಬ್ಬೋರ್ಡಿನಲ್ಲಿದ್ದ ಅನೇಕ ಉಪ್ಪಿನಕಾಯಿಗಳನ್ನು ನೋಡಿ ನಾನು ಅವಳನ್ನು ಕೇಳಿದೆ- ‘ಯಾವ ಉಪ್ಪಿನಕಾಯಿ ತರಲಿ?’ ಅದಕ್ಕೆ ಅವಳು, ‘ಅದೇ ಮನೇ ಉಪ್ಪಿನಕಾಯಿ ತನ್ನಿ’ ಎಂದಳು. ಅಲ್ಲಿದ್ದ ಅನೇಕ ಅಂಗಡಿಯಿಂದ ಕೊಂಡ ಉಪ್ಪಿನಕಾಯಿಗಳ ಜತೆಗಿದ್ದ, ನಮ್ಮ ಮನೆಯಲ್ಲೇ ಬೆಳೆದ ಸೇಬಿನಿಂದ, ನಾನೇ Picklesತಯಾರಿಸಿದ ಆ ಉಪ್ಪಿನಕಾಯಿಯ ಬಾಟಲನ್ನು ತಂದು ನಮ್ಮ ಅತಿಥಿಗಳ ಮುಂದಿಟ್ಟೆನು. ಅದಕ್ಕೆ ನನ್ನ ಸತಿ ‘ಏನ್ರಿ, ಎಲ್ಲಾಬಿಟ್ಟು ನೀವು ಮಾಡಿದ ಆ ಹಾಳು ಹುಳುಕಟ್ಟೆಯ ಕೊಳೆತ ಉಪ್ಪಿನ ಕಾಯಿ ತಂದ್ರಲ್ಲ್ರೀ’ ಎಂದಳು. ಎಲ್ಲಾ ಉಪ್ಪಿನಕಾಯಿಗಳು ಅಂಗಡಿಯಿಂದ ತಂದದ್ದಾದರಿಂದ, ಅವಳಿಗೆ ಇನ್ನಾವುದೂ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಇಲ್ಲವೆಂದು ಹೇಳಿದಾಗ ಆಕೆ- ‘ಅದೇರೀ ಬೆಂಗಳೂರಿನಿಂದ ನಮ್ಮಮ್ಮನ ಮನೆಯಿಂದ ತಂದ ಆ ದೊಡ್ಡ ಬಾಟಲು, ಪ್ಲಾಸ್ಟಿಕ್ಕವರಿನಿಂದ ಮುಚ್ಚಿರುವ ಬಾಟಲು ಫ್ರಿಜ್ಜಿನಲ್ಲಿ ಇದೆಯಲ್ಲಾ ಅದೇ ಮನೇ ಉಪ್ಪಿನ ಕಾಯಿ’ ಎಂದಳು.

”ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ!”

ಇಂಗ್ಲೆಂಡಿನಲ್ಲಿ ನೆಲೆಸಿ, ಸಂಸಾರಹೂಡಿ ಸುಮಾರು ಹದಿನೈದು ವರ್ಷಗಳಾಗಿದ್ದರೂ, ನನ್ನ ಸತಿಗೆ ‘ನಮ್ಮಮನೆ’ ಎಂದರೆ ಬೆಂಗಳೂರಿನಲ್ಲಿರುವ ತನ್ನ ಮಾತಾಪಿತೃಗಳ ಮನೆಯೇ. ನಾವು ಈ ಹೊರದೇಶದಲ್ಲಿ ಹೂಡಿದ ಈ ನಮ್ಮ ಮನೆ ‘ನಮ್ಮ ಮನೆ’ಯಾಗಿರಲಿಲ್ಲ. ಈ ಮಾತಿನ ಸನ್ನಿವೇಶ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದದ್ದು. ಅನೇಕ ವರ್ಷಗಳ ಹೊರದೇಶಗಳ ವಾಸದ ನಂತರ, ಅನೇಕ ಮನೆಗಳ ಬದಲಾವಣೆಗಳ ನಂತರ, ನಾವು ಆ ‘ಮನೆ ಉಪ್ಪಿನಕಾಯಿ’ ಮಾಡದ ಮನೆಗೇ ಮತ್ತೆ ಹಿಂತಿರುಗಿ ಬಂದು ನೆಲೆಹೂಡಿದ್ದೇವೆ. ಈಗ ಇದು ‘ನಮ್ಮಮನೆ’ಯಾಗಿದೆಯೆ? ನಮ್ಮ ಉಪ್ಪಿನಕಾಯಿ ‘ಮನೆಉಪ್ಪಿನಕಾಯಿ’ ಎಂದು ಕರೆಸಿಕೊಳ್ಳುವುದೇ? ನಮ್ಮಮನೆ ಎಂಬುದು ಯಾವುದು? ಅದು ಎಲ್ಲಿದೆ? ಹಾಗೆ ಹೇಳುವವರು ಯಾರು? ಅದು ಒಂದೇಕಡೆ ಅಚಲವಾಗಿರುವ ಕಟ್ಟಡವೇ? ಅಥವ ಅದು ಕೇವಲ ಮಾನಸಿಕ ಭ್ರಮೆಯೇ? ನಮ್ಮ ಮನೆ ಯಾವುದು ಎಂದು ವಿಚಾರ ಮಾಡುವ ಮೊದಲು ಹಾಗೆ ಕೇಳುವವರು ಯಾರು ಎಂದು ಮೊದಲು ವಿಚಾರ ಮಾಡೋಣ. ಅಂದರೆ ಯಾರು ನಮ್ಮ ಮನೆ ಎಂದು ಕೇಳುವಾಗ ಯಾವುದು ನಮ್ಮ ಮನೆ ಎಂದೆನಿಸಿಕೊಳ್ಳುವುದು? ಈ ಮೊದಲೇ ನೋಡಿದ ಹಾಗೆ, ನಾನು ತಿಳಿದುಕೊಂಡ ನಮ್ಮ ಮನೆ, ನನ್ನ ಸತಿಯ ನಮ್ಮ ಮನೆಯಲ್ಲ. ಇನ್ನು ನಮ್ಮ ಮಕ್ಕಳ ‘ನಮ್ಮ ಮನೆ’ ಮತ್ತು ನಮ್ಮ ‘ನಮ್ಮಮನೆ’ ಒಂದೇ ಆಗಿರಲಾರದು. ಅಣ್ಣತಮ್ಮಂದಿರ ಮತ್ತು ಅಕ್ಕತಂಗಿಯರೊಡಗೂಡಿ ಬೆಳೆದ ಮನೆಯು ಯಾವಾಗಲೂ ನಮ್ಮ ಮನೆಯಾಗಿರುವುದೇ? ನಮ್ಮ ಮನೆಯೆಂದು ದೃಢೀಕರಿಸಿ ಅದರಲ್ಲಿ ನಮ್ಮನ್ನು ಬೆಳೆಸಿದ ಮಾತಾಪಿತೃಗಳಿಗೆ ಅದೇಮನೆ ಅವರಿಗೆ ‘ನಮ್ಮಮನೆ’ಯಾಗಿದ್ದೀತೆ? ನಮ್ಮ ಅಜ್ಜಿತಾತರ ಕಾಲದ ಮನೆ, ನಮ್ಮ ಮಾತಾಪಿತೃಗಳ ಮನೆ, ನಾವು ಈ ಹೊರದೇಶದಲ್ಲಿ ಮಾಡಿರುವ ಮನೆ, ನಮ್ಮ ಮಕ್ಕಳು ಬೆಳೆದಮನೆ ಮತ್ತು ಅವರುಗಳು ಸ್ವತಂತ್ರವಾಗಿ ಮಾಡಿರುವ ಮನೆ ಇವುಗಳೆಲ್ಲವೂ ಅವರಿಗವರುಗಳಿಗೆ ಅನುಸಾರವಾಗಿ ಅವರವರ ‘ನಮ್ಮಮನೆ’ಗಳಾಗಿದ್ದರೂ ಅವುಗಳಾವುವೂ ಒಂದೇ ಗುಣಗಳನ್ನು ಉಳ್ಳದ್ದಾಗಿರುವುದಿಲ್ಲ. ಕಾಲಾನುಸಾರವಾಗಿ ಆಯಾಮನೆಗಳು ಬೇರೆಬೇರೆ ಗುಣಗಳ ಹೊಂದಿರುತ್ತವೆ. ನಮ್ಮ ಅಜ್ಜಿತಾತರ ಮನೆ ಅವಿಭಕ್ತ ಕುಟುಂಬದ ಮನೆಯಾಗಿತ್ತು. ಸುಮಾರು ಇಪ್ಪತ್ತು ಮೂವತ್ತು ಮಂದಿಗಳಿಗೆ ಆ ಮನೆ ‘ನಮ್ಮಮನೆ’ಯಾಗಿದ್ದಿತು. ಈರೀತಿಯ ಕೂಡೊಕ್ಕಲ ಮನೆಯ ‘ಬೇರುಗಳು’ ಅಲ್ಲಿನ ಬಳಗಗಳ ಮನೆಗಳನ್ನೂ, ಹಳ್ಳಿಗಳನ್ನೂ ಮತ್ತು ಗ್ರಾಮಗಳನ್ನೂ ಆವರಿಸಿದ್ದವು. ನಾವು ಹುಟ್ಟಿಬೆಳೆದ ನಮ್ಮ ತಂದೆ ತಾಯಿಯರ ಮನೆ ಸ್ವತಂತ್ರವಾದ ಏಕತಾ ಸಂಸಾರ ವಾಗಿದ್ದರೂ, ಬಂದೂಹೋಗಿ ಮಾಡುವ ಸಂಬಂದಿಕರಿಂದ ಅದು ಒಂದು ಅವಿಭಕ್ತ ಕುಟುಂಬವಾಗಿದ್ದಿತು. ಈ ಅವಿಭಕ್ತ ಕುಟುಂಬ ಮತ್ತು ವಿಸ್ತೃತ ಕುಟುಂಬಗಳು ಅವುಗಳ ಭಾಗಿಗಳಿಗೆ ಕ್ಷೇಮ, ಸುರಕ್ಷತೆ ಮತ್ತು ಭದ್ರತೆಗಳನ್ನು ಒದಗಿಸುತ್ತಿದ್ದವು. ಆಶ್ರಯ ಮತ್ತು ಸಂರಕ್ಷಣೆಗಳೊಂದಿಗೆ ಅವುಗಳು ಅಡ್ಡಿ ಆತಂಕಗಳನ್ನೂ ತರುತ್ತಿದ್ದವು. ರಹಸ್ಯ ಮತ್ತು ಗುಟ್ಟಿನ ವಿಚಾರಗಳಿಗೆ ಅವಕಾಶಗಳು ಅತಿ ವಿರಳವಾಗಿದ್ದವು. ಇರುವ ಸ್ವಲ್ಪ ಭಾಗ್ಯಕ್ಕೆ ಭಾಗೀದಾರರನೇಕರಿದ್ದರು. ಕುಟುಂಬಗಳು ಬೆಳೆದಂತೆ ಇತರರಿಂದ ನಿರ್ಬಂಧ ಮತ್ತು ಒತ್ತಾಯಗಳು ಜಾಸ್ತಿಯಾಗಿ ಕಾರ್ಯಕಸುಬುಗಳು ಕೊಂಡೊಯ್ದಲ್ಲಿಗೆ ಹೋಗಬೇಕಾದ ಸಂದರ್ಭ ಬಂದುದರಿಂದ, ನಮ್ಮ ಕಾಲಕ್ಕೆ ಏಕತಾ ಸಂಸಾರವು ಅನಿವಾರ್ಯವಾಯಿತು.

ಪರದೇಶಿ-ಅಲೆಮಾರಿ

ನನ್ನ ಕಾರ್ಯದ ಸಂಬಂಧವಾಗಿ ಬೆಂಗಳೂರಿನಲ್ಲಿ, ಇಂಗ್ಲೆಂಡಿನಲ್ಲಿ ಮತ್ತು ಸೌದೀಅರೇಬಿಯಾದಲ್ಲಿ ನಾನು ಮನೆಗಳನ್ನು ಮಾಡಬೇಕಾಗಿದ್ದಿತು. ಬೆಂಗಳೂರಿನಲ್ಲಿ ನಾವು ಬಾಲ್ಯದಲ್ಲಿ ಬೆಳೆದ ಮನೆ, ಇಂಗ್ಲೆಂಡಿನಲ್ಲಿ ನಮ್ಮ ಮಕ್ಕಳನ್ನು ಬೆಳೆಸಿ ಪೋಷಿಸಿ ಬೆಳಸಿದ ಮನೆ, ಕೆಲವೇ ವರ್ಷಗಳ ನಂತರ ಬೆಂಗಳೂರಿಗೆ ಮಕ್ಕಳೊಂದಿಗೆ ವಾಪಸ್ಸು ತೆರಳಿ ವಾಸಿಸಿದ ಮನೆಗಳು ನಮಗೆ ‘ನಮ್ಮ ಮನೆ’ ಎಂಬ ಭಾವನೆ ಸಹಜವಾಗೇ ಕೊಟ್ಟಿದ್ದವು.

ಆದರೆ ಇತ್ತೀಚಿನವರೆಗೂ ಸುಮಾರು ಒಂಭತ್ತು ವರ್ಷಗಳ ಮೇಲೂ ವಾಸ ಮಾಡಿದ ಸೌದೀಅರೇಬಿಯಾದ ಮನೆಗೆ ‘ನಮ್ಮಮನೆ’ ಎಂಬ ಭಾವನೆ ಅಷ್ಟೇನೂ ಬರಲಿಲ್ಲ. ಆದರೆ ಸೌದೀಅರೇಬಿಯಾದಿಂದ ವಾಪಸ್ಸು ಬಂದು, ಮಕ್ಕಳನ್ನು ಬೆಳೆಸಿದ, ಬಾಡಿಗೆಗೆ ಕೊಟ್ಟಿದ್ದ, ನಮ್ಮ ಹಳೆಯ ಮನೆಗೆ ಬಂದಾಗ, ‘ನಮ್ಮ ಮನೆ’ ಎಂಬ ಭಾವನೆ ತಕ್ಷಣ ಬಂದಿತು. ಅದೇಕೆ ಸೌದಿಯಲ್ಲಿ ಬರಲಿಲ್ಲ? ‘ನಮ್ಮ ಮನೆ’ಯೆಂಬ ಭಾವನೆ ಯಾವುದರಿಂದ ಬರುತ್ತದೆ? ಎಂಬ ಪ್ರಶ್ನೆ ಮೇಲೇರುತ್ತದೆ. ಈ ಭಾವನೆಯನ್ನು ತರುವ ಮನೆಗಳ ಲಕ್ಷಣಗಳೇನಾದರೂ ಇವೆಯೇ? ಎಂದು ಯೋಚಿಸತೊಡಗಿದೆನು.

”ನಮ್ಮ ಮನೆ”

ಮೊದಲನೆಯದಾಗಿ, ಯಾವ ಮನೆ ರಕ್ಷಣೆ ಮತ್ತು ಕ್ಷೇಮವನ್ನು ಕೊಡುವುದೋ ಅದು ನಮ್ಮ ಮನೆಯಾಗುವುದು. ಎರಡನೆಯದಾಗಿ ನಾವು ಯಾವ ಮನೆಯಲ್ಲಿ ನಮ್ಮ ಮಕ್ಕಳನ್ನು ಪೋಷಿಸಿ ಬೆಳೆಸುವೆವೋ ಆ ಮನೆ ನಮ್ಮ ಮನೆಯಾಗುವುದು. ಈ ಕಾರಣಗಳಿಂದ ನಮಗೆ ಸೌದಿಯಮನೆಗೆ ನಮ್ಮಮನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ ಆ ದೇಶಕ್ಕೆ ನಾನು ಹೋದಾಗ ನಮ್ಮ ಮಕ್ಕಳಿಬ್ಬರೂ ದೊಡ್ಡವರಾಗಿ ಕೆಲಸಕ್ಕೆ ಸೇರಿ ಸ್ವತಂತ್ರರಾಗಿ ಇಂಗ್ಲೆಂಡಿನಲ್ಲೇ ಉಳಿದುಕೊಂಡರು. ಅಂದರೆ ನಮ್ಮ ಮಕ್ಕಳು ನಮ್ಮ ಜತೆಯಲ್ಲೇ ವಾಸಮಾಡಲಿಲ್ಲ. ಆದರೂ ಈ ನಮ್ಮ ಹಳೇಮನೆಯು, ಮಕ್ಕಳು ನಮ್ಮೊಂದಿಗಿಲ್ಲದಿದ್ದರೂ ಅದೇಕೆ ನಮ್ಮಮನೆ ಎಂಬ ಭಾವನೆಯನ್ನು ಕೊಡುತ್ತದೆ? ಅದೇಕೆಂದರೆ, ಈ ಮನೆಯು ನಮ್ಮ ಮಕ್ಕಳು ಪೋಷಿಸಿ ಬೆಳೆದದಿನಗಳನ್ನು ಜ್ಞಾಪಕಕ್ಕೆ ತರುತ್ತದೆ. ಅದಲ್ಲದೆ ಆ ದಿನಗಳಲ್ಲಾದ ಸನ್ನಿವೇಶಗಳ ಭಾವನೋದ್ವೇಗಗಳ ನೆನಪನ್ನೂ ತರುತ್ತದೆ. ನಮ್ಮ ಮನಸ್ಸಿನ ಅಂತರಾಳದಲ್ಲಿ ಹುದುಗಿದ್ದ ಎಲ್ಲಾ ಭಾವೋದ್ವೇಗಗಳು ಒಮ್ಮೆಯೇ ಹೊರಹೊಮ್ಮಿ ನಮಗೆ ಆನಂದವನ್ನು ತರುತ್ತದೆ. ಮನೋವಿಜ್ಞಾನಿಗಳು ಹೇಳುವ ಹಾಗೆ ನಮ್ಮ ಅಂತರಾಳದ ಮನಸ್ಸಿಗೆ ಅಂದರೆ ಸಬ್-ಕಾಂಷಿಯಸ್ಮನಸ್ಸಿಗೆ ಸಾಮಾನ್ಯವಾಗಿ, ಈ ಭಾವೋದ್ವೇಗಗಳು ನಿಜ ಸನ್ನಿವೇಶಗಳಿಂದ ಬರುತ್ತಿವೆಯೇ ಅಥವ ಪ್ರಬಲವಾಗಿ ಯೋಚಿಸಿದ ಕೃತಕ ಸನ್ನಿವೇಶಗಳಿಂದ ಬರುತ್ತಿವೆಯೇ ಎಂಬುದನ್ನು ಬಿಡಿಸಿಹೇಳುವುದಕ್ಕಾಗುವುದಿಲ್ಲ. ನಿಜಸ್ಥಿತಿಯ ಸನ್ನಿವೇಶದಷ್ಟೇ ಆನಂದವನ್ನು ಕೃತಕ ಸನ್ನಿವೇಶವೂ ತರುತ್ತದೆ. ಅದೇರೀತಿಯಲ್ಲಿ ದುಃಖ, ವ್ಯಸನ, ಭಯ, ಕಷ್ಟ , ಕೋಪ ಇವುಗಳನ್ನು ಹೊಂದಿದ ಹಳೆಯ ಸನ್ನಿವೇಶಗಳೂ ಆಯಾ ವ್ಯತಿರಿಕ್ತವಾದ, ಆನಂದದಾಯಕವಲ್ಲದ ಭಾವೋದ್ರೇಕಗಳನ್ನು ತರುವುದು. ಆದರೆ ನಾವು ಸಾಮಾನ್ಯವಾಗಿ ಒಳ್ಳೆಯ ನೆನಪುಗಳನ್ನೇ ಹೆಚ್ಚಾಗಿ ಜ್ಞಾಪಕದಲ್ಲಿಟ್ಟುಕೊಂಡಿರುತ್ತೇವೆ. ಅದೂ ಅಲ್ಲದೆ, ಮಕ್ಕಳ ವಿಚಾರವಾಗಿ, ವಾತ್ಸಲ್ಯ, ಪ್ರೇಮ, ಸುಖ ಮತ್ತು ಆನಂದಗಳ ನೆನಪುಗಳನ್ನೇ ಜ್ಞಾಪಿಸಿಕೊಳ್ಳುವ ತಾಯಿ(ತಂದೆ)ಯರಿಗೆ ಆ ಮನೆಯೇ ಅವರಿಗೆ ‘ನಮ್ಮಮನೆ’ಯಾಗಿರುತ್ತದೆ. ಆದರೆ, ನಮ್ಮ ಬೆಳೆದಮಕ್ಕಳಿಗೆ ನಮ್ಮ ಈ ಮನೆ ಅವರ ‘ನಮ್ಮಮನೆ’ಯಾಗಿ ಇನ್ನೂ ಉಳಿದಿದೆಯೇ? ಅಥವ ಅದು ಅವರ ಮಾತಪಿತೃಗಳ ಮನೆಯೇ? ಕೆಲಸದ ನಿಮಿತ್ತ ಸ್ವಂತವಾಗಿ ಲಂಡನ್ನಿನಲ್ಲಿ ಒಂದು ಅಪಾರ್ಟ್ಮೆಂಟ್ಮಾಡಿರುವ ನಮ್ಮ ಮಗಳಿಗೆ ಈ ನಮ್ಮಮನೆ ಅವಳ ‘ನಮ್ಮಮನೆ’ ಯಾಗಿ ಇನ್ನೂ ಉಳಿದಿದೆ. ಈ ಸಲದ ಕ್ರಿಸ್ಮಸ್ರಜೆಯಲ್ಲಿ ‘ನಮ್ಮಮನೆ’ಗೆ ಅವಳು ಬರುವುದನ್ನು ಬಹಳ ಆದರದಿಂದ ಎದುರುನೋಡುತ್ತಿದ್ದೇವೆ. ಅವಳಿಗೂ ಅದೇ ಸಡಗರ. ಅವಳ ಸಹೋದ್ಯೋಗಿಗಳಿಗೆ, ‘ಈಸಲ ನಾನು ‘ನಮ್ಮಮನೆಯಲ್ಲಿ’ ಕ್ರಿಸ್ಮಸ್ಸನ್ನು ಕಳೆಯುತ್ತೇನೆ’ ಎಂದು ಹೇಳಿದ್ದಾಳೆ. ಆದರೆ ಈ ವರ್ಷ ಹೊಸದಾಗಿ ಮದುವೆಯಾದ ನಮ್ಮ ಮಗನು ಮಾಡಿರುವ ಹೊಸ ಮನೆಗೆ ನಾವೆಲ್ಲರೂ ಕ್ರಿಸ್ಮಸ್ದಿನ ಹೋಗುತ್ತೇವೆ. ಅವನು ಹೊಸ ಪತ್ನಿಯಾಂದಿಗೆ ಅವರ ‘ನಮ್ಮ ಮನೆ’ ಮಾಡಿರುವುದರಿಂದ ಅವನಿಗೆ ಈ ‘ನಮ್ಮಮನೆ’ಯ ಮೇಲೂ ಗಮನ ಕೊಡುವುದು ಸ್ವಲ್ಪ ಕಷ್ಟ.

”ನಮ್ಮ ಊರು”

ಇದೇ ರೀತಿಯಲ್ಲಿ ನಾವು ಹುಟ್ಟಿಬೆಳೆದ ಊರು ‘ನಮ್ಮಊರು’ ಎಂಬ ಭಾವನೆ ಕೊಡುತ್ತವೆಯೇ? ಯಾವಯಾವ ಭಾವನೋದ್ವೇಗಗಳು ನಮ್ಮಮನೆ ಎಂಬ ಭಾವನೆಯನ್ನು ಕೊಡುವುವೋ ಅದೇರೀತಿಯಲ್ಲಿ ನಮ್ಮ ಊರುಗಳು ಅದೇರೀತಿಯ ಭಾವನೆಗಳನ್ನು ತೋರುವುವು. ನಮ್ಮ ಬೆಳವಣಿಗೆ, ವಿದ್ಯಾಭ್ಯಾಸ, ಊರಿನಲ್ಲಿ ನಡೆಸಿದ ಕಾರ್ಯಚಟುವಟಿಕೆಗಳು, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸಮಾಜದಲ್ಲಿನ ವ್ಯವಹಾರಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಸೇರಿರುವ ಭಾವನೆ ಕೊಡುವ ಊರೇ ‘ನಮ್ಮಊರು’ ಆಗಿರುತ್ತದೆ. ಈ ಭಾವನೆ ನನಗೆ ಸೌದೀಅರೇಬಿಯಾದಲ್ಲಿ ಬರಲಿಲ್ಲ. ನನ್ನ ಆಸ್ಪತ್ರೆ, ನನ್ನ ಕ್ಲಿನಿಕ್, ನನ್ನ ರೋಗಿಗಳು ಎಂಬ ಭಾವನೆಗಳು ಇದ್ದವೇ ಹೊರತು, ಅದು ನನ್ನ ಊರು, ನನ್ನ ದೇಶ ಎಂಬ ಭಾವನೆ ಬರಲೇ ಇಲ್ಲ. ಅದು ನನ್ನ ತಪ್ಪೂ ಅಲ್ಲ , ಅಥವಾ ಸೌದೀಅರೇಬಿಯಾದ ತಪ್ಪೂ ಅಲ್ಲ. ಅದೆಲ್ಲಾ ಇರಲಿ. ನೀವೇನಾದರು ನಮ್ಮ ಊರಿಗೆಬಂದಾಗ ನಮ್ಮ ಮನೆಗೆ ಊಟಕ್ಕಾದರೂ ಬನ್ನಿ. ನಮ್ಮ ಮನೆಯಲ್ಲೇ ಮಾಡಿದ ‘ಮನೆ ಉಪ್ಪಿನಕಾಯಿ’ಯನ್ನೇ ಹಾಕುವೆನು. ಈಗ ಅದನ್ನು ನನ್ನ ಸತಿಯೂ ‘ಮನೆ ಉಪ್ಪಿನಕಾಯಿ’ ಎಂದು ಕರೆಯುವಳು. ನಮಸ್ಕಾರ.

ಡಾ ರಾಜಾರಾಮ ಕಾವಳೆ

(”ನನ್ನ ಊರು” ಎಂಬ ಶೀರ್ಷಿಕೆಯಲ್ಲಿ ಓದುಗರಿಂದ ಲೇಖನಗಳನ್ನು ಆಹ್ವಾನಿಸುತ್ತಿದ್ದೇವೆ. ಆಯ್ದವುಗಳನ್ನು ಪ್ರಕಟಿಸುವ ಯೋಚನೆ ಇದೆ. -ಸಂ)

(ಈಗ ಪ್ರಕಟವಾಗಿವೆ -ಸಂ)

 

6 thoughts on “ಮನೆಯ ಉಪ್ಪಿನಕಾಯಿ – ರಾಜಾರಾಮ ಕಾವಳೆಯವರ ಅನುಭವಗಳು

  1. ರಾಜಾರಾಮ್ ಅವರೆ, ನೀವೇನೇ ಮಾಡಿದರೂ, ಹೆಣ್ಣುಮಕ್ಕಳು ಅವರ ತವರು ಮನೆಯನ್ನೇ ತಮ್ಮಮನೆ ಎಂದು ಹೇಳಿಕೊಳ್ಳುವುದು ನಿಲ್ಲೋದಿಲ್ಲ. ನಮ್ಮ ಮನೆ ನಮ್ಮ ನಮ್ಮ ಗಂಡಂದಿರ ಜೊತೆಯಿರುವ ಮನೆಯಾದರೂ, ಬಾಲ್ಯದ, ಹರಯದ ಹಲವು ವರ್ಷಗಳನ್ನು , ಸ್ವಚ್ಛಂದವಾಗಿ ಅನುಭವಿಸಿದ ಆ ಮನೆ, ನಮ್ಮ ಮನಗಳಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿರುತ್ತದೆ. ಅಂತೆಯೇ, ನಿಮ್ಮಾಕೆಯ ಮನದಲ್ಲೂ, ಮನೆಯ ಉಪ್ಪಿನಕಾಯಿ ಅಂದರೆ, ಬೆಂಗಳೂರಿನಿಂದ ಬಂದದ್ದು ಮಾತ್ರಾ ಅನ್ನಿಸಿರುವುದರಲ್ಲಿ ಯಾವ ಆಶ್ಚ್ರಯವೂ ಇಲ್ಲ.
    ಉಮಾ ವೆಂಕಟೇಶ್

    Like

  2. ಮನೆಯ ಉಪ್ಪಿನಕಾಯಿಯ ಸ್ವಾದವಿದೆ ಈ ಲೇಖನದಲ್ಲಿ. ನಮ್ಮ ಹೆಣ್ಣು ಮಕ್ಕಳಿಗೆ ಎಷ್ಟು ವರ್ಷವಾದರೂ ತವರುಮನೆ ಹೇಗೆ ‘ನಮ್ಮ ಮನೆ’ ಯಾಗಿರುತ್ತದೆನ್ನುವುದು ನಿಜಕ್ಕೂ ಆಶ್ಚರ್ಯಕರ. ಈ ಅಭಿಮಾನ ನಮ್ಮ ಮಕ್ಕಳಲ್ಲೂ ಬೆಳೆಯಲಿ, ಉಳಿಯಲಿ.

    ದಾಕ್ಷಾಯಣಿ

    Like

  3. ಕಾವಳೆಯವರೆ,
    ಒಂದು ಸಣ್ಣ ಸಂಧರ್ಭ ನಿಮ್ಮ ಮನಸ್ಸನ್ನು ಇಷ್ಟು ಆಳವಾಗಿ ಚಿಂತಿಸುವಂತೆ ಮಾಡಿರುವುದು ನಿಮ್ಮ ವಿಚಾರವಂತಿಕೆಗೆ ಕನ್ನಡಿ.
    ತುಂಬಾ ಮೂಲಭೂತ ವಿಚಾರವನ್ನೇ ವಿಶ್ಲೇಶಿಸಿದ್ದೀರಿ.
    ನೀವು ಹೇಳಿದ ಹಾಗೆ ‘ನಮ್ಮ ಮನೆ” ಎನ್ನುವುದು ಆಯಾ ವ್ಯಕ್ತಿಗೆ ಸಂಬದ ಪಟ್ಟ ಹಾಗೆ ಬಹಳ ಭಿನ್ನ.
    ಏಲ್ಲಿರ್ತೀವೊ ಅದೇ ನಮ್ಮ ಮನೆ ಆಗಿಬಿಡುವುದಿಲ್ಲ. ಪ್ರಾಪಂಚಿಕ ಬದುಕಿನ ಪ್ರಕಾರ ನಾವೆಲ್ಲೇ ಬದುಕಿದರು ‘ನಮ್ಮ ಮನೆ ಎನ್ನುವ ಭಾವನೆ ಕೆಲವೊಂದು ಜಾಗಗಳಿಗೆ ಮಾತ್ರ ಸೀಮಿತವಾಗಿಬಿಡುತ್ತದೆ.
    ನಿಮ್ಮ ಶ್ರೀಮತಿಯವರು ಎಷ್ಟು ಸರಳವಾಗಿ , ‘ನಮ್ಮ ಮನೆ ‘ ಯನ್ನು ಗುರುತಿಸಿಕೊಂಡರೋ, ಅವರಿಗೆ ಅದೇ ಸತ್ಯ.
    ಇದು ಮೆದುಳಿಗೆ ಸಂಬಂದಿಸಿದ ವಿಚಾರವಲ್ಲ, ಹೃದಯಕ್ಕೆ ಸ್ಮಭಂದಿಸಿದ ಪ್ರಶ್ನೆ.
    ತುಂಬಾ ಚೆನ್ನಾಗಿ ಬರೆದಿದ್ದೀರಿ.

    Like

  4. ರಾಜಾರಾಮ್ ಅವರೆ,
    ನಿಮ್ಮ ’ಉಪ್ಪಿನಕಾಯಿ’ ಇಲ್ಲಿ ನಮ್ಮಂಥ ಅನಿವಾಸಿಗಳ ಮುಂದಿರುವ ಬಿಡಿಸಲಾಗದ ಒಗಟನ್ನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತದೆ. ವಿಚಾರಭರಿತ ಲೇಖನ. ನಮ್ಮ ನಮ್ಮ ಮನೆಯ ಉಪ್ಪಿನಕಾಯಿ ಹೇಗೆ ಬೇರೆ ಬೇರೆ ರುಚಿಯೋ ಹಾಗೆಯೇ ನಾವು ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಉತ್ತರ ಹುಡುಕಬೇಕಾಗುತ್ತದೆಯೇನೋ! ಹಿಂದೊಮ್ಮೆ Desert Iland Disks ಕಾರ್ಯಕ್ರಮದಲ್ಲಿ ಸಲ್ಮಾನ್ ರಶೀದಿಗೂ ಇದೇ ಪ್ರಶ್ನೆ ಕೇಳಲಾಗಿತ್ತು. ಪೂರ್ವಜರಿದ್ದ ವಲಸೆ ಪೂರ್ವದ ಪಾಕಿಸ್ತಾನವೋ, ಮುಂಬಯಿಯ ಭಾರತವೋ ಅಥವಾ ಬ್ರಿಟನ್ನೋ, ಎಂದು? “Home is where you live!” ಎಂದು ಉತ್ತರ ಬಂತು. ಅದಕ್ಕೆ “where you make home!” ಎಂದು ಜೋಡಿಸಬಹುದೇನೋ. ಆ ಭಾವನೆ ಒಳಗಿಂದ ಬರಬೇಕಲ್ಲವೆ? ”ಊಟಕ್ಕೆ ಮೊದಲು ಉಪ್ಪಿನಕಾಯಿ” ಅಂತೆ. ಈಗ ಉಪ್ಪಿನಕಾಯಿ ಕೊಟ್ಟು ಬಾಯಲ್ಲಿ ನೀರೂರಿಸಿದಿರಿ. ಮುಂದೆ ನಿಮ್ಮ ರಸದೂಟಕ್ಕೆ (ಇನ್ನೂ ಬರಹ ಬರಲಿ) ನಿಮ್ಮ ಮನೆಗೆ ಬರುತ್ತೇವಂತೆ!
    ಶ್ರೀವತ್ಸ ದೇಸಾಯಿ

    Like

Leave a comment

This site uses Akismet to reduce spam. Learn how your comment data is processed.