ಬಿ ಎಂ ಶ್ರೀ ಅವರ ”ಪದುಮ” – ಶ್ರೀವತ್ಸ ದೇಸಾಯಿಯವರಿಂದ ಒಂದು ಅನ್ವೇಷಣೆ

1024px-Sacred_lotus_Nelumbo_nucifera cc
CC – Wiki

ಬಿ ಎಂ ಶ್ರೀಯವರು ಬರೆದ ‘ಪದುಮ’

ಅರಸಿನ ಕುಲವೋ, ಏನಿದ್ದೇನು!

ಸುರವಧುರೂಪೋ, ಏನಿದ್ದೇನು!

ಗುಣವೋ, ಸೊಬಗೋ, ಏನಿದ್ದೇನು!

ಪದುಮಾ, ಇದ್ದವು ನಿನಗೆಲ್ಲ.

ಪದುಮಾ, ಎಚ್ಚತ್ತಳುವುದೆ ಅಲ್ಲದೆ

ಕಣ್ಣಿವು ನಿನ್ನನ್ನು ಕಾಣುವುವೆ?

ನೆನಸಿ ಕೊಳ್ಳುವೆ, ಬಿಸುಸುಯ್ಯುವೆ, ಇರುಳನು

ನಿನಗೆಯೆ ಮೀಸಲು ತೆಗೆದಿಡುವೆ.

                ಇದು ’ಕನ್ನಡದ ಕಣ್ವ’ ಬಿ ಎಂ ಶ್ರೀಕಂಠಯ್ಯನವರ ಎಂಟೇ ಸಾಲಿನ ಪದ್ಯ ’ಪದುಮ’. ಇದೊಂದು ಚರಮ ಗೀತ. ಆದರೂ ಅದರ ಸೌಂಧರ್ಯವೇನೂ ಕಡಿಮೆಯಿಲ್ಲ.ಅದರ ರಚನೆ, ಛಂದಸ್ಸು, ಲಯಗಳು ಕವಿಯ ಉದ್ವಿಗ್ನತೆಯನ್ನು ಚೆನ್ನಾಗಿ ಪ್ರತಿಬಿಂಬಿಸುತ್ತವೆ. ’ಇಂಗ್ಲಿಷ್ ಗೀತಗಳು’1926ರಲ್ಲಿ ಮೊದಲು ಪ್ರಕಟವಾದರೂ, ಈ ಕವನ ಸಂಕಲನದ 1952ರ ಆವೃತ್ತಿಯಲ್ಲಿ ಪ್ರಸ್ತಾವನೆಯಲ್ಲಿ ತೀ ನಂ ಶ್ರೀಕಂಠಯ್ಯನವರು ಹೀಗೆ ಹೇಳುತ್ತಾರೆ: “ಹೊಸ ಕವಿತೆಗೆ ಒಳ್ಳೆಯ ಮೇಲ್ಪಂಕ್ತಿಯನ್ನು ಇಂಗ್ಲಿಷ್ ಗೀತಗಳಲ್ಲಿ ಅವರು ಹಾಕಿ ಕೊಟ್ಟರು”. ಈ ಕವಿತೆ ಅದಕ್ಕೆ ಒಂದು ಉದಾಹರಣೆ. ಅನುವಾದವೇ ಆದರೂ ಸ್ವಂತ ರಚನೆಯೆನ್ನುವಂತೆ ನಿಲ್ಲುವಷ್ಟು ಸತ್ವ ಇದರಲ್ಲಿದೆ.

’ಪದ್ಯಂ ವಧ್ಯಂ; ಗದ್ಯಂ ಹೃದ್ಯಂ’ ಎಂದನಂತೆ ಮುದ್ದಣ. ಈ ಪದ್ಯ ಮಾತ್ರ ಎಷ್ಟೊಂದು ಹೃದ್ಯಂ! ಅದಕ್ಕೆ ನನ್ನದೂ ಇಂದು ”ಪದ್ಯಂ ಶ್ಲಾಘ್ಯಂ” ಎಂದು ದನಿಗೂಡಿಸುವೆ! ಮನಸ್ಸನ್ನು ನೇರವಾಗಿ ಮುಟ್ಟುವಂತೆ, ಎದೆಯನ್ನು ಗಾಸಿ ಗೊಳಿಸುವಂತೆ ಸಹ ಗದ್ಯವನ್ನೂ ಬರೆಯ ಬಹುದು. ಆದರೆ ಪದ್ಯ ಅದನ್ನು ಕಡಿಮೆ ಶಬ್ದಗಳಲ್ಲಿ ಪದಗಳ ಆಯ್ಕೆ ಮತ್ತು ಜೋಡಣೆಯಿಂದ ಅಭಿವ್ಯಕ್ತ ಮಾಡುತ್ತದೆ. ಪ್ರತಿಯೊಬ್ಬ ಓದುಗನೂ ಒಂದೇ ತರಹ ಅರ್ಥ ಮಾಡಿಕೊಂಡ ಅಥವಾ ಕವಿ ಮನಸ್ಸಿನಲ್ಲಿದ್ದದ್ದನ್ನೇ ಅನುಭವಿಸಿದ ಎಂದು ಹೇಳಲು ಬರುವದಿಲ್ಲ. ಅವರವರ ಅನುಭವ, ಓದುವಾಗಿನ ಮನಃಸ್ಥಿತಿಯನ್ನು ಅವಲಂಬಿಸಿ ಕವನದ ಪರಿಣಾಮ ಬೇರೆ ಬೇರೆಯೇ ಆಗ ಬಲ್ಲದೆಂದು ನನ್ನ ಮತ. ಅದ್ದರಿಂದಲೇ ಏನೋ, ನಾನು ಮೊದಲು ಇದನ್ನು ಓದಿ ಇಷ್ಟಪಟ್ಟಾಗ ನನ್ನ ಮನೋಧರ್ಮ ಹಾಗಿದ್ದಿತ್ತೇನೋ!

ಒಂದು ವರ್ಷದ ಕೆಳಗೆ ಒಂದು ರಾತ್ರಿ ಮಲಗುವ ಮೊದಲು ಈ ಪುಸ್ತಕವನ್ನೆತ್ತಿಕೊಂಡಿದ್ದೆ. ಈ ಚಿಕ್ಕ ಪದ್ಯ ನನ್ನ ಗಮನ ಸೆಳೆಯಿತು:       ಪದುಮಾ, ಎಚ್ಚತ್ತಳುವುದೆ ಅಲ್ಲದೆ  ಕಣ್ಣಿವು ನಿನ್ನನುಕಾಣುವುವೆ? ಈ ಸಾಲುಗಳು ನೇರವಾಗಿ ನನ್ನ ಎದೆಯನ್ನು ಮುಟ್ಟಿದವು. ಪ್ರಥಮ ಅವಲೋಕನದಲ್ಲೇ ಇದು ಕವಿ ಕಳೆದುಕೊಂಡ ಗೆಳತಿ ಅಥವಾ ಪ್ರೇಮಿಯ ಬಗೆಗೆ ಬರೆದುದು ಎಂದು ಸ್ಪಷ್ಟವಾಗುತ್ತದೆ. ಮೊದಲ ನಾಲ್ಕು ಸಾಲುಗಳೆಲ್ಲ ತಪ್ಪದೆ 4+4+6 ಮಾತ್ರೆಗಳನ್ನು ಮತ್ತು ಆದಿ ಪ್ರಾಸವನ್ನು ಕಾಯ್ದು ಕೊಂಡಿವೆ. ’ಪದುಮ’ವನ್ನು ಓದಲು ಶುರು ಮಾಡಿದಂತೆಯೆ ಓದುಗನ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳು: ಅವಳು ಯಾರು? ಎಂಥವಳು? ಅದಕ್ಕೆ ಉತ್ತರವಾಗಿ ಪ್ರಾರಂಭದಲ್ಲೇ ಅವಳ ವರ್ಣನೆಯಿದೆ. ಅವಳಲ್ಲಿ ಏನಿಲ್ಲ? ಅವಳು ಉಚ್ಚ ಕುಲದವಳು, ಸ್ಫುರದ್ರೂಪ, ಸದ್ಗುಣ, ಸೊಬಗಿನಿಂದ ಕೂಡಿದವಳು; ಆದರೆ ಏನಿದ್ದೇನು, ಅವಳು ಇನ್ನಿಲ್ಲ ಎಂಬ ಉದ್ಗಾರ, ನೋವು! ಆದರೂ ಆತನಿಗೆ ಅವಳ ಬಗ್ಗೆ ಮಮತೆ. ಏನಿದ್ದೇನು ಎಂಬ ಪದ ಇಷ್ಟು ಚಿಕ್ಕ ಪದ್ಯದಲ್ಲಿ ಮೂರೂ ಸಾಲಿನ ಕೊನೆಗೆ ಬರುವದರಿಂದ ಅದರ ವೈವಿಧ್ಯತೆಗೆ ಕೊರತೆ ಬಂತೆ? ಇಲ್ಲ. ಯಾಕೆಂದರೆ, ಪ್ರತಿಯೊಂದು ಸಾಲಿನಲ್ಲಿಯೂ ಬೇರೆ ಬೇರೆ ಅರ್ಥವನ್ನೆ ಕೊಟ್ಟದ್ದಲ್ಲದೇ ಅದರ ಪುನಾವರ್ತನೆ ಕವಿಯ ಉದ್ವಿಗ್ನತೆಗೆ ಒತ್ತುಕೊಡುತ್ತ ಹೋಗುತ್ತದೆ. ಹುಟ್ಟುವ ಕುಲವನ್ನು ಮನುಜ ಆಯ್ದು ಕೊಳ್ಳಲು ಬರುವಂತಿಲ್ಲ. ಆದರೂ ಪದುಮ ಅದೃಷ್ಟವಶಾತ್ ಉಚ್ಚ ಕುಲದಲ್ಲೇ ಜನಿಸಿದ್ದಳು. ರೂಪವೂ ಅಷ್ಟೇ. ದೇವರು ಕೊಟ್ಟದ್ದನ್ನು ಸ್ವೀಕರಿಸಬೇಕು. ರೂಪವತಿಯೇ ಆಗಿದ್ದಳು ಪದುಮ. ಆದರೆ ಯಾವುದೂ ಶಾಶ್ವತವಲ್ಲ. ಸುಗುಣಗಳನ್ನು ಸ್ವಲ್ಪ ಮಟ್ಟಿಗೆ ಸಂಪಾದಿಸ ಬಹುದು. ಇವೆಲ್ಲ ಇದ್ದವೆಂದು ಹೇಳುವಾಗ ನಾಲ್ಕನೆ ಸಾಲಿನಲ್ಲಿ, ಕವಿಯ ನಿರಾಶೆಯ ದನಿಯೇ ಎದ್ದು ಕಾಣುವದು. ಅವಳೀಗ ಇಲ್ಲದ್ದರಿಂದ ಮೊದಲ ನಾಲ್ಕು ಸಾಲುಗಳಲ್ಲಿ ಅಗಲಿಕೆಯ ಸುಳಿವು ಕೊಟ್ಟು, ಕೊನೆಗೆ ವಿರಹ-ಶೋಕ ಹಟಾತ್ತನೆ ಎದುರು ಬಂದು ನಿಲ್ಲುತ್ತದೆ. ನೆನಹು, ಕಣ್ಣೀರು, ನಿಟ್ಟುಸಿರು ಇವೆಲ್ಲ ಭಾವನೆಗಳು ತುಂಬಿದ ಇರುಳನ್ನು ಅವಳಿಗಾಗಿಯೇ ಮೀಸಲಿಟ್ಟು, ಓದುಗನ ಮೇಲೆ ಕೇವಲ ಕತ್ತಲೆಯನ್ನು ಹರಿಸಿ ಕವಿ ಹಿಂದಕ್ಕೆ ಸರಿಯುತ್ತಾನೆ!

ಪದ್ಮಾನ್ವೇಷಣೆ!

ಪದುಮ ಯಾರಿರಬಹುದು? ”ಪದುಮ” ಆಂಗ್ಲ ಕವಿ ವಾಲ್ಟರ್ ಲ್ಯಾಂಡೋರನ (1775-1864) ’Rose Aylmer” ಕವನದ ಅನುವಾದ. ಈ ಕವನದ ಲಾವಣ್ಯ ಆಗಿನ ಹೆಸರಾಂತ ಸಾಹಿತಿಗಳು ಚಾರ್ಲ್ಸ್ ಲ್ಯಾಮ್, ವರ್ಡ್ಸ್‌ವರ್ಥ, ಯೇಟ್ಸ್ ಮುಂತಾದ ಆಂಗ್ಲಭಾಷೆಯ ಕವಿಗಳನ್ನೊಳಗೊಂಡು ಅನೇಕಾನೇಕ ಜನರನ್ನು ಆಕರ್ಷಿಸಿತ್ತು. ಆತ ಕಾವ್ಯಗಳಿಗಿಂತ, ಗದ್ಯ, ಮತ್ತು ಇತರ ಲೇಖನಗಳಿಂದ ಆಂಗ್ಲ ಸಾಹಿತ್ಯದಲ್ಲಿ ಹೆಸರುವಾಸಿಯಾಗಿದ್ದ. ಶ್ರೇಷ್ಠ ಬರಹಗಾರನಾಗಿದ್ದ ಚಾರ್ಲ್ಸ್ ಡಿಕ್ಕಿನ್ಸ್ ಅಂತೂ ಅವನನ್ನು ಎಷ್ಟು ಮೆಚ್ಚಿಕೊಂಡಿದ್ದನೆಂದರೆ ತನ್ನ ಎರಡನೆಯ ಮಗನಿಗೆ ಇವನ ಹೆಸರನ್ನಿಟ್ಟಿದ್ದನು.

ಲ್ಯಾಂಡೋರ 1792 ರಲ್ಲಿ ಆಕ್ಸ್‌ಫರ್ಡದ ಟ್ರಿನಿಟಿ ಕಾಲೇಜಿನಿಂದ ಮ್ಯಾಟ್ರಿಕ್ ಪಾಸಾಗಿದ್ದ. ಆದರೆ ತನ್ನ ಉದ್ಧಟ ವರ್ತನೆಯಿಂದ ಆಕ್ಸ್‌ಫರ್ಡಿನಲ್ಲಿಕಾಲೇಜಿನ ನಿಯಮೋಲ್ಲಂಘನ ಮಾಡಿದ್ದಕ್ಕಾಗಿ ಹೊರಗೆ ಹಾಕಲ್ಪಟ್ಟಿದ್ದ! 1796ರಲ್ಲಿ ದಕ್ಷಿಣ ವೇಲ್ಸ್ ಪ್ರಾಂತದಲ್ಲಿ ಸ್ವಾನ್‍ಸೀ ಎಂಬ ಊರಿನಲ್ಲಿ ವಾಸವಾಗಿದ್ದಾಗ ಆತನ ಮತ್ತು ರೋಸಳ ಭೇಟಿಯಾಯಿತು, ಅವಳ ತಂದೆಗೆ ಬ್ಯಾರನ್ ಎಂಬ ಬಿರುದು ಆನುವಂಶಿಕವಾಗಿ ಬಂದಿತ್ತು (’ಅರಸಿನ ಕುಲವೊ’). ಹಿಂದಿನ ವರ್ಷ ತಾನೆ ಬ್ಯಾರನ್ ಐಲ್ಮರ್ ಅಸು ನೀಗಿದ್ದ. ತನ್ನ ಸೋದರಿ ಮತ್ತು ತಾಯಿಯೊಂದಿಗೆ ವಾಸಿಸುತ್ತಿದ್ದ ಹದಿನೇಳು ವರ್ಷದ ಈ ರೂಪವತಿಯ ಪರಿಚಯ ಪ್ರೇಮದಲ್ಲಿ ಪರಿವರ್ತನೆ ಆಯಿತು. ಆಗ ಅವನಿಗೆ ಇಪ್ಪತ್ತೊಂದು ವರ್ಷ. ಅವರಿಬ್ಬರ ಒಡನಾಟ ಬಹಳ ದಿನಗಳವರೆಗೆ ಮುಂದುವರೆಯಲಿಲ್ಲ. ಏಕೆಂದರೆ, 1799 ರಲ್ಲಿ ಅವಳು ತನ್ನ ಕುಟುಂಬದವರೊಂದಿಗೆ ಭಾರತಕ್ಕೆ ಬಂದಳು. ಅವಳ ಸೋದರ ಮಾವ ಬಂಗಾಲದಲ್ಲಿ ಸುಪ್ರೀಮ ಕೋರ್ಟ ನ್ಯಾಯಾಧೀಶನಾಗಿದ್ದ. ಅವಳು ಮಾರ್ಚ 1800ರಲ್ಲಿ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಕಲಕತ್ತಾದಲ್ಲಿ ಕಾಲರಾ ಸಾಂಕ್ರಾಮಿಕ ರೋಗಕ್ಕೆ ತುತ್ತಾದಳು. ಅಲ್ಲಿಯೇ ಅವಳ ಸಮಾಧಿಯಿದೆ. ಅವಳ ಮೇಲಿನ ಪ್ರೀತಿಯಿಂದ ಲ್ಯಾಂಡೋರ ಬರೆದ ಈ ಕವನ (ಕೆಳಗೆ ನೋಡಿರಿ) ಅತ್ಯಂತ ಜನಪ್ರಿಯವಾದ ಆಂಗ್ಲ ಕವನಗಳಲ್ಲೊಂದು.ಅವಳು ಅವನ ಹೃದಯದಲ್ಲಿ ಯಾವಾಗಲೂ ಮನೆಮಾಡಿದ್ದಳು ಎಂದೆನಿಸುವಂತಿದೆ. ಅವನ 90 ವರ್ಷಗಳ ಬದುಕಿನಲ್ಲಿ ಅವಳನ್ನು ಮತ್ತೆ ಮತ್ತೆ ನೆನಸಿದ ಉಲ್ಲೇಖವನ್ನು ಸಂಶೋಧಕರು ಹುಡುಕಿದ್ದಾರೆ. Rose's TombDSCN3466

Rose Aylmer’s Tomb, South Park Street Cemetery, Kolkatta. Lines from Landor’s poem are engraved at the base

ಯಾತರದ ಹೂವೇನು?                                                    

“What’s in a name? That which we call a rose By any other name would smell as sweet.” ಎಂದ ಶೇಕ್ಸಪಿಯರ್ ಮಹಾಕವಿ. ಗುಲಾಬಿ ಹೂವನ್ನೇ ಇಂಗ್ಲಿಷ್ ಗೀತೆಗಳಲ್ಲಿ ಪ್ರತಿಮೆಯಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಹೆಣ್ಣಿನ ಪ್ರೇಮದ ಸಂಕೇತಕ್ಕೆ ಅದನ್ನು ಉಪಯೋಗಿಸುವರು. ಅನುವಾದದಲ್ಲಿ ಬಿ ಎಂ ಶ್ರೀ ಯವರು ಕಮಲವನ್ನು ಆಯ್ದುಕೊಂಡದ್ದು ಉಚಿತವೆ. ಸೌಂದರ್ಯ ಮತ್ತು ಪರಿಶುದ್ಧತೆಯ ಪ್ರತೀಕವಾಗಿ ಅದನ್ನು ಕವಿಯು ನೋಡಿರ ಬಹುದು. ‘ಕಣ್ಣೀರು, ನಿಟ್ಟುಸಿರು ಮಿಶ್ರಿತ ಒಂದು ರಾತ್ರಿಯನ್ನೆ ಅವಳಿಗೆ ಮೀಸಲಾಗಿಡುವೆ’ ಎಂದು ಮೂಲ ಕವನದಲ್ಲಿದೆಯಾದರೂ ”ಪದುಮ’ದಲ್ಲಿ ತನ್ನ ಉಳಿದ ಜೀವನದ ಎಲ್ಲ ರಾತ್ರಿಗಳನ್ನೂ ಅವಳ ನೆನಪಿಗೇ ಮೀಸಲಾಗಿಡುವೆ ಎಂಬ ಭಾವ ಕಂಡಿದೆ ಎಂದರೆ ತಪ್ಪಿಲ್ಲ. ಕಡೆಯ ನಾಲ್ಕು ಸಾಲುಗಳಲ್ಲಿ ಮೊದಲ ಸಾಲುಗಳಲ್ಲಿಯಂತೆ 4+4+6 ಮಾತ್ರೆಗಳನ್ನು ಉಳಿಸಿಕೊಂಡಿಲ್ಲ. ಅರ್ಥಕ್ಕೆ ಅನುಕೂಲವಾಗುವಂತೆ ಸ್ವಲ್ಪ ಸ್ವಾತಂತ್ರ್ಯ ತೆಗೆದುಕೊಂಡಿದ್ದರೂ, ಕೊನೆಯ ಸಾಲಿನಲ್ಲಿ ಮತ್ತೆ ಅದೇ ಲಯ ಬಂದು ಕೂಡುತ್ತದೆ. ಕೊನೆಯ ನಾಲ್ಕು ಪದಗಳು ಇಡೀ ಕವನದ ಭಾವವನ್ನು ಎರಕ ಹಾಕಿದಂತಿದೆ. ಅದು ಓದುಗನ ಮನದಲ್ಲಿ ಬಹು ಸಮಯದವರೆಗೆ ಉಳಿಯುವುದರಲ್ಲಿ ಸಂದೇಹವಿಲ್ಲ. ಚಾರ್ಲ್ಸ ಲ್ಯಾಮ್ ಈ ಕವನದಿಂದ ಪ್ರಭಾವಿತನಾಗಿ ಕವಿಗೆ 1832ರಲ್ಲಿ ಒಂದು ಪತ್ರ ಬರೆದನಂತೆ: “This for Rose Aylmer, which has a charm, I cannot explain. I lived upon it for weeks.”

ಅದೇ ತರಹ ನಾನೂ ಸಹ ’ಪದುಮ’ಳ ನೆನಪಿನಲ್ಲಿ ಅದೆಷ್ಟೋ ದಿನಗಳನ್ನು ಕಳೆದಿದ್ದೆ!

7 thoughts on “ಬಿ ಎಂ ಶ್ರೀ ಅವರ ”ಪದುಮ” – ಶ್ರೀವತ್ಸ ದೇಸಾಯಿಯವರಿಂದ ಒಂದು ಅನ್ವೇಷಣೆ

  1. Desaiavare
    Nimma kavana oddida mele english hale kalada padya galannu odabeku mattu adaralli adageetu a nudi muttu galannu horatarabeku anta hummus su barutede.
    Thumba chennagi manasege tagaluvu hage bereddera.
    Vandanegalu.
    Vathsala Ramamurthy.

    Like

  2. ಇಂಗ್ಲೀಷಿಗಿಂತ ಕನ್ನಡದಲ್ಲಿ ಹೆಚ್ಚು ಆಪ್ತವಾಗುತ್ತೆ, ಕವಿತೆ. ಅದು ಬಿ ಎಂ ಶ್ರೀ ಯವರ ಶಕ್ತಿ ಇರಬಹುದೇ ಅಥವಾ ನನಗೆ ಕನ್ನಡದಲ್ಲಿ ಬಿಟ್ಟರೆ ಬೇರೆ ಭಾಷೆಯಲ್ಲಿ ಕವನ ತಾಕುವುದಿಲ್ಲವೇ? ನಿಮ್ಮ ಕವಿ-ಕ್ರಿಯೆ-ಕಾರ್ಯ ತುಂಬಾ ಇಷ್ಟವಾಯಿತು. ಇನ್ನೂ ಇಂಥವು ಹೆಚ್ಚು ಹೆಚ್ಚು ಬರಲಿ.

    Like

  3. ಶ್ರೀವತ್ಸ ಅವರೆ,

    ಇಂಗ್ಲಿಷ್ ಗೀತೆಗಳು ಅನ್ನೋ ಪುಸ್ತಕ ಓದಿಲ್ಲ.
    ಆದರೆ ನಿಮ್ಮ ಬರಹದಿಂದ ಬಹಳ ವಿಚಾರ ತಿಳಿಯಿತು.
    ಕಮಲದ ಚಿತ್ರ ಕೂಡ ತುಂಬಾ ಚೆನ್ನಾಗಿದೆ.

    ನಮ್ಮ ಹಳೆಯ ಬರಹಗಾರರ ಬಗ್ಗೆ ಕೂಡ ನಿಮ್ಮ ಅನ್ವೇಷಣೆ ಮುಂದುವರೆಯಲಿ.

    Like

  4. ದೇಸಾಯಿ ಅವರೆ, ನಿಮ್ಮ ಲೇಖನಿಯಿಂದ ಮತ್ತೊಂದು ಬಾರಿ ಉತ್ತಮವಾದ ಕವನದ ವಿಷ್ಲೇಷಣೆ ಹೊರಬಂದಿದೆ. ಸುದರ್ಶನ್ ಅವರು ಪ್ರತಿಕ್ರಿಯಿಸಿರುವಂತೆ, ಕಮಲದ ಪುಷ್ಪಕ್ಕೆ , ಭಾರತೀಯ ಗ್ರಂಥಗಳು ಮತ್ತು ಸಾಹಿತ್ಯದಲ್ಲಿ ಅತಿಉನ್ನತವಾದ ಸ್ಥಾನವಿದೆ. ಕಮಲ ಪುಶ್ಪದ ಸೌಂಧರ್ಯವನ್ನು ನಮ್ಮ ಕವಿಗಳು ಸಾಹಿತ್ಯದಲ್ಲಿ ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಇದರ ಜೊತೆಗೆ, ತಾತ್ವಿಕವಾಗಿಯೂ ಕಮಲದ ಮೇಲಿನ ನೀರಿನ ಹನಿಗಳಂತೆ ಇದ್ದು, ಜೀವನದಲ್ಲಿ ಬಂಧನಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡದಿರುವುದು ಒಳ್ಳೆಯದು ಎಂಬ ವಾದವಂತೂ ನಮ್ಮೆಲ್ಲರಿಗೂ ಚೆನ್ನಾಗಿ ಪರಿಚಿತವಾಗಿದೆ. ಆದ್ದರಿಂದ, ಕನ್ನಡ ಸಾಹಿತ್ಯದ ಕಣ್ವರೆನಿಸಿದ ಬಿ.ಎಮ್.ಶ್ರಿ ಅವರು, ತಮ್ಮ ಈ ಅನುವಾದಿತ ಕವನದಲ್ಲಿ, ಮೂಲ ಕವನದಲ್ಲಿರುವ ಗುಲಾಬಿಗೆ ಬದಲಾಗಿ, ನಮ್ಮ ಕಮಲವನ್ನು ಆರಿಸಿ ಕೊಂಡು, ಪದುಮಳ ಪಾತ್ರಕ್ಕೆ ಹೊಸ ಆಯಾಮವನ್ನು ನೀಡಿ, ಈ ಕವನದ ಸೌಂಧರ್ಯವನ್ನು ನೂರ್ಮಡಿಗೊಳಿಸಿದ್ದಾರೆ. ನಿಮ್ಮ ದಯೆಯಿಂದ, ಇಂಗ್ಲೀಷ ಕವಿತೆಗಳತ್ತ ನಮ್ಮ ಸದಸ್ಯರ ದೃಷ್ಟಿ ಹರಿಯಲಿ. ನಿಮ್ಮ ಕಾರೆ ಹೆಗ್ಗಡೆಯ ಮಗಳು ಕವನದ ವಿಷ್ಲೇಷಣೆಯೂ ಇಷ್ಟೇ ಆಸಕ್ತಿಪೂರ್ಣವಾಗಿದೆ.
    ಉಮಾ ವೆಂಕಟೇಶ್

    Like

  5. ಸುದರ್ಶನ ಅವರೆ, ಧನ್ಯವಾದಗಳು. ಕವಿ ಕಾಣದ್ದನ್ನು(?), ಲೇಖಕ ಕಾಣದ್ದನ್ನು ರಸಿಕ-ಮಿಮರ್ಶಕ ಕಂಡಂತೆ ನಿಮ್ಮ ವಿಸ್ತೃತ ಪ್ರತಿಕ್ರಿಯೆ ಪದುಮಳ ಪಟಕ್ಕೆ ಹೂವೇರಿಸಿ ಬೆಳಗಿಸಿದೆ ಎನ್ನಲೆ? ನೀವು ಬರೆದ ”ನೀರಿನಲ್ಲಿದ್ದರೂ ಅದಕ್ಕೆ ಅಂಟದಂತೆ ಕಮಲವಿದ್ದರೆ, ಮುಳ್ಳುಗಳಿದ್ದೂ ಅದರಿಂದ ದೂರವುಳಿದ ಗುಲಾಬಿಯನ್ನು ಕಾಣಬಹುದು!!” ಅಹಾ! ನೊಂದು,ಹಲುಬಿದ ಲ್ಯಾಂಡೋರನ ಕನವರಿಕೆಯನ್ನು ’ಶ್ರೀ’ಯವರು ಇನ್ನೂ ಎತ್ತರಕ್ಕೆ ಒಯ್ದಿದ್ದನ್ನು ನೀವು ತೋರಿಸಿದಿರಿ. ಇಲ್ಲಿ ಇಂಗ್ಲಿಷ್, ಕನ್ನಡ ಎರಡೂ ಆವೃತ್ತಿಯಿರುವದರಿಂದ ಓದುಗರು ತಮ್ಮ ಅನುಭವ, ಗ್ರಹಿಕೆಯಂತೆ ಆನಂದಿಸಬಹುದು, ಸ್ಪಂದಿಸಬಹುದು.
    ಈ ಮೊದಲೆ ಯುಕೆ ಕನ್ನಡ ಬಳಗದ ೩೦ನೆಯ ವರ್ಷದ ಸ್ಮರಣಸಂಚಿಕೆಯಲ್ಲಿ (Page 23 ನೋಡಿ) ಅವರ ’ಕಾರಿ ಹೆಗ್ಗಡೆಯ ಮಗಳು’ ಕವನವನ್ನು ಮೂಲಕ್ಕೆ ಹೋಲಿಸಿ ಬರೆದದ್ದನ್ನು ಇಷ್ಟವಿದ್ದವರು ಓದಬಹುದು.ಆ ಕವನವನ್ನು ಎರಡೂ ಭಾಷೆಯಲ್ಲಿ ಈ ಕೊಂಡಿಯಲ್ಲಿ ನೋಡಿರಿ: http://wonderingminstrels.blogspot.co.uk/1999/09/lord-ullin-daughter-thomas-campbell.html
    ಕನ್ನಡ ಕವಿತೆಗೆ ಆ ಜಾಲದಲ್ಲಿ ಮಾರ್ಚ ೭, ೨೦೧೩ ನೋಡಿರಿ. ಶ್ರೀವತ್ಸ

    Like

  6. Lekhan tumba chennagide. Manassu higgitu. Heegeye ninninda lekhana,Kavana odalu Ishtar paduve.
    Aravind

    Like

  7. ಪದುಮಳ ಬಣ್ಣನೆ ತಾವರೆ ಹೂವಿನಷ್ಟೇ ಸುಂದರ ಹಾಗೂ ಮನೋಹರವಾಗಿ ಮೂಡಿ ಬಂದಿದೆ.
    ಬಿ.ಎಂ.ಷ್ರೀ ಯವರ ಇಂಗ್ಲೀಶ್ ಗೀತೆಗಳು ಸಂಕಲನದಲ್ಲಿ ’ಕರುಣಾಳು ಬಾ ಬೆಳಕೆ’ ಹಾಡು ಬಿಟ್ಟು ಉಳಿದವುಗಳನ್ನು ಕನ್ನಡದ ಹಾಡುಗಾರರು ಬಳಸಿಕೊಳ್ಲಲಿಲ್ಲ. ನನ್ನನ್ನೂ ಒಳಗೊಂಡಂತೆ ಹಲವಾರು ಜನರಿಗೆ ಈ ಕವಿತಾ ಸಂಕಲದ ವ್ಯಾಪ್ತಿ ತಿಳಿಯದೆಂದೇ ಕಾಣುತ್ತದೆ. ನನ್ನ ಮಿತ್ರನಲ್ಲಿ ಈ ಪುಸ್ತಕ ಇದ್ದರೂ ಅದನ್ನು ಓದುವ ಅವಕಾಶ ಕೂಡಿಬಂದಿರಲಿಲ್ಲ. ಇನ್ನು ಮುಂದೆ ಓದಬೇಕು! ದೇಸಾಯಿಯವರ ಕೃಪೆ!!
    ಕವನದ ಅವಲೋಕನದ ಜೊತೆ ಜೊತೆಗೆ ”ಹಾಡು ಹುಟ್ಟಿದ ಸಮಯ’ದ ಇತಿಹಾಸಕ್ಕೂ ನಮ್ಮನ್ನು ಕೊಂಡೊಯ್ದು ಕಥೆ ಹೇಳಿದ್ದೀರಿ; ಧನ್ಯವಾದಗಳು.
    ವ್ಯಾಕರಣದ ಜೊತೆಗೆ ಕಾರ್ಯ ಕಾರಣ ವಿಶ್ಲೇಷಣೆಯನ್ನೂ ಮಂಡಿಸಿ ಸಾಹಿತ್ಯಿಕ ಮಂಡಿಗೆಯನ್ನೂ ಉಣ್ಣಿಸಿದಿರಿ. ವೇದಿಕೆಗೊಂದು ಹೊಸ ಆಯಾಮ ಸಿಕ್ಕಿದಂತಾಯ್ತು.
    ನೀವು ಹೇಳಿದಂತೆ ಚರಮ ಗೀತೆಯಾದರೂ ಮನವನ್ನು ಕಲಕುತ್ತದೆ. ಮನದ ಕೆಸರಿನಲ್ಲಿ ಭಾವನೆಗಳ ಪದುಮಗಳನ್ನು ಅರಳಿಸುತ್ತದೆ. ಸುಂದರ ಕವನ ಹಾಗೂ ಭಾವಾನುವಾದ.
    ಗುಲಾಬಿ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನ ಪಡೆದರೆ, ನಮ್ಮ ಭಾರತೀಯ ತತ್ವ, ಶಾಸ್ತ್ರ, ಪುರಾಣ, ಕಥೆ, ಉಪಮೆ, ರೂಪಕಗಳಲ್ಲಿ ಪದ್ಮಕ್ಕೇ ಅಗ್ರಸ್ಥಾನ.ದೇವದೇವತೆಗಳ ವರ್ಣನೆಯಲ್ಲೂ, ಅವರ ಕೈಗಳಲ್ಲೂ, ಆಸನವಾಗಿಯೂ, ಪೂಜೆಗಾಗಿಯೂ ಹೀಗೆ ಎಲ್ಲಾ ಶುಭದ ಸಂಕೇತ. ಅದಕ್ಕೇ ನಮ್ಮ ಕವಿ ಪದುಮಳನ್ನು ಆಯ್ದುಕೊಂಡಿರಬಹುದು. ಕಮಲ, ಪದ್ಮ, ರಾಜೀವ, ಪಂಕಜ, ಅಂಬುಜ,ತಾವರೆ ಹೀಗೆ ಅದಕ್ಕಿರುವ ಉಪನಾಮಗಳು ಬೇರೆ ಯಾವ ಹೂವಿಗೂ ಇಲ್ಲ!!
    ನೀವು ಹೇಳಿದಂತೆ ಕವನದ ಭಾವ ವೈವಿಧ್ಯಮಯ.
    ಈ ಕವನ ಗಂಡು- ಹೆಣ್ಣಿನ ಆಕರ್ಷಣೆ ಮೀರಿಯೂ ನಿಂತಿರುವುದನ್ನು ಕಾಣುತ್ತೇವೆ.
    ನೀರಿನಲ್ಲಿದ್ದರೂ ಅದಕ್ಕೆ ಅಂಟದಂತೆ ಕಮಲವಿದ್ದರೆ, ಮುಳ್ಳುಗಳಿದ್ದೂ ಅದರಿಂದ ದೂರವುಳಿದ ಗುಲಾಬಿಯನ್ನು ಕಾಣಬಹುದು!!
    ತಾತ್ವಿಕವಾಗಿ ಹೇಳುವುದಾದರೆ, ಕಮಲದ ಹೂವು ನೀರೊಳಗಿದ್ದೂ ಇರದಂತಿರುವುದರ , ಬಂಧನವಿದ್ದೂ ಇರದಂತಿರುವುದರ ಸಂಕೇತ. ಇದನ್ನು ರಾತ್ರಿಯಲ್ಲಿ ನೆನೆದು, ಮನನ ಮಾಡಿ ಬೆಳಗಾಗುವುದರಲ್ಲಿ ಮರೆತು ಮತ್ತೆ ನಮ್ಮನಮ್ಮ ರಾಗ ಗಳಿಗೆ ಅನುಗುಣವಾಗಿ ಬದಲಾಗುವುದರಿಂದ, ರಾಜನಾಗಿದ್ದರೂ, ಸೌಂದರ್ಯವಂತರಾಗಿದ್ದರೂ, ಯಾರನ್ನೂ ಬಿಡದೆ ಬಾಧಿಸುವ ಪ್ರಾಪಂಚಿಕ ವಾಸನೆಗಳ ಪ್ರತಿನಿಧಿ ಈ ರಾತ್ರಿಯ ಕಮಲದ ಕನವರಿಕೆ ಎಂದೂ ಅರ್ಥೈಸಬಹುದು.
    ಉತ್ತಮ ಬರಹಕ್ಕೆ ವಂದನೆಗಳು.
    ಸುದರ್ಶನ

    Like

Leave a comment

This site uses Akismet to reduce spam. Learn how your comment data is processed.