ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಯು.ಕೆ ಸದಸ್ಯರ ಸಭೆಯ ನಡುವಳಿಕೆಗಳು – ಜೂನ್ ೮, ಸೋಲಿಹಲ್, ಬರ್ಮಿಂಗಹ್ಯಾಮ್ -ವರದಿ ಡಾ ಶ್ರಿವತ್ಸ ದೇಸಾಯಿ, ಡಾ ಉಮಾ ವೆಂಕಟೇಶ್

ಸ್ಥಳ : ಆಲಿವರ್ ಬರ್ಡ್ ಹಾಲ್, ಸೋಲಿಹಲ್, ಬರ್ಮಿಂಗಹ್ಯಾಮ್

ಸಭೆಯಲ್ಲಿ ಹಾಜರಿದ್ದವರು: ಡಾ ಶ್ರೀವತ್ಸ ದೇಸಾಯಿ, ಡಾ ಶಿವಪ್ರಸಾದ, ಡಾ ಉಮಾ ವೆಂಕಟೇಶ್, ಡಾ ಕೇಶವ್ ಕುಲಕರ್ಣಿ, ಡಾ ಗಿರಿಧರ್ ಹಂಪಾಪೂರ್, ಡಾ ಸುದರ್ಶನ್, ಡಾ ಬಿ.ಎಸ್. ಸತ್ಯಪ್ರಕಾಶ್, ಡಾ ದಾಕ್ಷಾಯಣಿ ಗೌಡ, ಡಾ ಪ್ರೇಮಲತಾ, ಅನ್ನಪೂರ್ಣಾ ಆನಂದ್, ಆನಂದ್ ಕೇಶವಮೂರ್ತಿ, ಡಾ ರಾಮಶರಣ್,  ಗುರುಪ್ರಸಾದ್, ಬಸವರಾಜ್.

2014-06-08 13.37.07Photo:©DrSatyaprakash

 ಸಭೆಯ ಅಧ್ಯಕ್ಷರು: ಡಾ ಶ್ರಿವತ್ಸ ದೇಸಾಯಿ

೧. ಪರಿಚಯ:  ಡಾಶ್ರಿವತ್ಸ ದೇಸಾಯಿ ಅವರು ಸಭೆಯ ಮೊದಲಲ್ಲಿ ಸದಸ್ಯರೆಲ್ಲರನ್ನೂ ಸ್ವಾಗತಿಸಿ, ಹಿಂದಿನ ಸಭೆಯಲ್ಲಿ ಗೈರುಹಾಜರಾಗಿದ್ದವರನ್ನು ತಮ್ಮ ಪರಿಚಯ ಮಾಡಿಕೊಡಲು ಆಮಂತ್ರಿಸಿದರು.  ಹಲವು ಸದಸ್ಯರ ಪರಿಚಯ ವೈಖರಿ ಬಹಳ ಆಸಕ್ತಿಪೂರ್ಣವಾಗಿತ್ತು. ಅಧ್ಯಕ್ಷರು ಈ ವೇದಿಕೆಯ ಪ್ರಾರಂಭದ ಹಿನ್ನೆಲೆಯನ್ನು ವಿವರಿಸಿ, ಅದರ ಸಂಚಾಲ ಸಮಿತಿಯ ಮೊದಲ ಭೇಟಿಯ ವಿವರಗಳನ್ನು ನೀಡಿದರು.  ವೇದಿಕೆಯ ಪ್ರಾರಂಭದ ಹಿಂದೆ ಯು.ಕೆ.ಕನ್ನಡ ಬಳಗದ ಹಲವು ಹಿರಿಯ ಮತ್ತು ಕಿರಿಯ ಸಾಹಿತ್ಯಾಭಿಮಾನಿ ಸದಸ್ಯರ ಆಸಕ್ತಿ ಮತ್ತು ಪರಿಶ್ರಮಗಳ ಬಗ್ಗೆಯೂ ಸಂಕ್ಷಿಪ್ತವಾಗಿ ಚರ್ಚಿಸಲಾಯಿತು. ಸಂಚಾಲನಾ ಸಮಿತಿಯ ಮೊದಲ ಸಭೆ,  ೧೮ ಅಕ್ಟೋಬರ್ ೨೦೧೩ರಂದು, ಯುಟಾಗ್ಸೆಟರ್ ನಲ್ಲೂ, ಮತ್ತು ಎರಡನೆಯ ಸಭೆ ಶೆಫೀಲ್ಡಿನಲ್ಲಿ, ಡಾ ಶಿವಪ್ರಸಾದರ ಮನೆಯಲ್ಲಿ ನಡೆಯಿತೆಂದು ತಿಳಿಸಿದರು. ಈ ಸಭೆಗಳ ನಂತರ, ವೇದಿಕೆಯ ಜಾಲ-ಜಗುಲಿಯ ಅಂತರಜಾಲಾ ತಾಣವನ್ನು  ”ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ,ಯು.ಕೆ,” ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು.

೨. ಕೆ.ಎಸ್.ಎಸ್.ವಿ.ವಿ ಜಾಲ-ಜಗುಲಿಯ ವಿಚಾರಗಳು:  ಜಾಲ-ಜಗುಲಿಯ ಪ್ರಧಾನ ಕಾರ್ಯನಿರ್ವಾಹಕ, ಡಾ ಕೇಶವ್ ಕುಲಕರ್ಣಿ ಅವರು, ಕನ್ನಡದಲ್ಲಿ ಟೈಪ್ ಮಾಡಲು ಲಭ್ಯವಿರುವ ವಿವಿಧ ಅನ್ವಯ ತಂತ್ರಾಂಶಗಳ ಬಗ್ಗೆ ವಿಶದವಾಗಿ ಮಾತನಾಡಿ, ಅವುಗಳನ್ನು ಬಳಸುವ ರೀತಿಯನ್ನು ವಿವರಿಸುತ್ತಾ, ಸಧ್ಯದಲ್ಲಿಯೇ, ಈ ವಿಷಯದ ಬಗ್ಗೆ ಲೇಖನವೊಂದನ್ನು ಸಿದ್ಧಪಡಿಸಿ, ವೇದಿಕೆಯ ಜಾಲ-ಜಗುಲಿಯಲ್ಲಿ ಪ್ರಕಟಿಸುವುದಾಗಿ ವರದಿ ಮಾಡಿದರು. ಸಧ್ಯದಲ್ಲಿ ಲೇಖನವನ್ನು ಪಿಡಿಎಫ಼ ಆವೃತ್ತಿಯನ್ನು ಬಳಸದೆ,  ವರ್ಡ್ ಆವೃತ್ತಿಯಲ್ಲಿ ಸಿದ್ಧಪಡಿಸಿ, ಲೇಖಕರು ತಮ್ಮ ಲೇಖನಗಳನ್ನು ನೇರವಾಗಿ ಜಾಲ-ಜಗುಲಿಯಲ್ಲಿ ಪ್ರಕಟಣೆಗೆ ರವಾನಿಸಬೇಕಾಗಿಯೂ ತಿಳಿಸಿದರು. ಎಲ್ಲಾ ಲೇಖಕರಿಗೂ, ತಮ್ಮ ಲೇಖನಗಳ ಕರಡು ಪ್ರತಿಯನ್ನು, ಜಾಲ-ಜಗುಲಿಗೆ ಮಿನ್ನೇರಿಸುವ ಅಧಿಕಾರವನ್ನು ನೀಡುವುದಾಗಿಯೂ ಹೇಳಿದರು. ಪ್ರತಿಯೊಬ್ಬ ಸದಸ್ಯರೂ, ಜಾಲ-ಜಗುಲಿಯಲ್ಲಿ ಪ್ರಕಟವಾಗುವ ಲೇಖನಗಳನ್ನು ಓದಿ, ಅವುಗಳ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲು ಕೋರಿಕೊಂಡರು.  ಗೂಗಲ್- ಅನ್ವೇಷಣೆಯ ಚಾಲಕ ತಂತ್ರಾಂಶದಲ್ಲಿ, ವೇದಿಕೆಯ ಮುಖ ಪುಟವನ್ನು ನೇರವಾಗಿ ಹುಡುಕಲು ಮತ್ತು ವ್ಯಾಪಕ ಓದುಗರ ಅನುಕೂಲತೆಗಾಗಿ, ಸೂಕ್ತವಾದ ಹೆಸರು-ಪಟ್ಟಿಗಳನ್ನು (Tags) ಗಳನ್ನು ಉತ್ತಮಪಡಿಸಬೇಕೆಂಬ ವಿಷಯದ (ಗೂಗಲ್ ವಿಸ್ತರಣೆ) ಬಗ್ಗೆ ಚರ್ಚಿಸಲಾಯಿತು. ಜಾಲ-ಜಗುಲಿಯ ಸಂದರ್ಶಕರ ಸಂಖ್ಯೆಯ ವಿವರಗಳನ್ನು, ವೀಕ್ಷಕರಿಗಾಗಿ ಪ್ರಕಟಿಸಬಹುದೆಂದೂ, ಸಧ್ಯದಲ್ಲಿ ಈ  ಸಂಖ್ಯಾಂಶದ ವಿವರಗಳು, ಜಾಲ-ಜಗುಲಿಯ ಆಡ್ಯಳಿತ ನಿರ್ವಾಹಕರಿಗೆ ಮಾತ್ರ ಲಭ್ಯವಿರುವುದಾಗಿ ತಿಳಿಸಿದರು.  ಸೂಕ್ತವಾದ ಹೆಸರು-ಪಟ್ಟಿಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಣೆಯ ಕಾರ್ಯದ  ಜವಾಬ್ದಾರಿಯನ್ನು ಕೇಶವ್ ಮತ್ತು ಗಿರಿಧರ್ ಅವರಿಗೆ ಒಪ್ಪಿಸಲಾಗಿದೆ. Dr Cavale Photo courtesy Dr Rajaram Cavale

೨.೧  (ಹಿಂದಿನ ಸಭೆಯ ವರದಿಯ ವಿವರಗಳನ್ನು ಮೇಲಿನ  ವಿಭಾಗದಲ್ಲಿ ತಿಳಿಸಲಾಗಿದೆ). ವೇದಿಕೆಯ ಲೇಖಕರಿಗೆ ಲೇಖನಗಳನ್ನು ಸಿದ್ಧಪಡಿಸುವಾಗ ಎದುರಾಗುವ ಸಮಸ್ಯೆಗಳನ್ನು ಚರ್ಚಿಸಲಾಯಿತು. ಇವುಗಳಲ್ಲಿ, ಕನ್ನಡ ಅಕ್ಷರಗಳನ್ನು ಟೈಪ್ ಮಾಡುವಾಗ ಉಂಟಾಗುವ ತೊಡಕುಗಳು, ಲೇಖನಗಳ ಜೊತೆಯಲ್ಲಿ ಛಾಯಾಚಿತ್ರಗಳನ್ನು ಜಾಲ-ಜಗುಲಿಗೆ ರವಾನಿಸುವ ವಿಧಾನಗಳು, ಹಕ್ಕುಸ್ವಾಮ್ಯ ಸಮಸ್ಯೆಗಳು, ಮತ್ತು ಕನ್ನಡ ಬಳಗ ಅಂತರಜಾಲಾ ತಾಣದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಗೆ ಕೊಂಡಿಯ ಸಂಪರ್ಕ ಸೌಲಭ್ಯವನ್ನು ಒದಗಿಸುವ ರೀತಿಯನ್ನು ಉತ್ತಮಗೊಳಿಸುವ ವಿಧಾನಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಉತ್ತಮಗೊಳಿಸುವ ಬಗ್ಗೆ ಹಲವಾರು ಸಲಹೆಗಳನ್ನೂ ನೀಡಲಾಯಿತು.

ವೇದಿಕೆಯ ಲಾಂಛನ:  ಈಗಾಗಲೆ  ಮಂಡಿಸಿರುವ ಲಾಂಛನವನ್ನು, ಹಲವಾರು ಮಾರ್ಪಾಟಿನ ಸಲಹೆಗಳೊಂದಿಗೆ ಸದಸ್ಯರು ಸಮರ್ಥಿಸಿ ಅನುಮೋದಿಸಿದರು. ಮಾರ್ಪಾಟುಗಳಲ್ಲಿ, ಲಾಂಛನದ ಹೊರವಲಯದ ಹಳದಿ ಬಣ್ಣದ ಅಂಚಿನ ಅಗಲದ ವಿಸ್ತರಣೆ, ಹಾಗೂ ಮಧ್ಯದಲ್ಲಿರುವ ಕ ಮತ್ತು ವಿ ಅಕ್ಷರಗಳ ಗಾತ್ರವನ್ನು ಹೆಚ್ಚಿಸುವ  ಸಲಹೆಗಳಿಗೆ ಸದಸ್ಯರೆಲ್ಲರೂ ಒಪ್ಪಿಗೆ ನೀಡಿದರು. 2014-06-08 13.37.31

                                                                                      Photo:© Dr Basavaraj

೨.೨ ಚಿತ್ರ-ಕವನ ರಚನೆ:  ಡಾ ಪ್ರೇಮಲತಾ ಅವರು ಈ ವಿಷಯದ ಬಗ್ಗೆ ತಮ್ಮ ವಿಚಾರವನ್ನು ವಿವರಿಸುತ್ತಾ, ಆಯ್ಕೆಮಾಡಿದ ಚಿತ್ರವೊಂದರ ಬಗ್ಗೆ, ಕವನವನ್ನು ರಚಿಸಲು ವೀಕ್ಷಕರನ್ನು ಅಹ್ವಾನಿಸಬೇಕಾಗಿ ಸೂಚಿಸಿದರು. ಸದಸ್ಯರು ಈ ಯೋಜನೆಯನ್ನು ಅನುಮೋದಿಸಿದರು, ಹಾಗೂ, ಈ ಕಲ್ಪನೆಯ ಸ್ವಾಮ್ಯವನ್ನು ಪ್ರೇಮಲತಾ ಅವರಿಗೆ ನೀಡಿ, ಈ ಕಾರ್ಯ-ಯೋಜನೆಯ ನಾಯಕತ್ವವನ್ನು ಅವರಿಗೇ ವಹಿಸಲಾಯಿತು. ರಾಮಶರಣ್ ಅವರು, ಈ ಛಾಯಾಚಿತ್ರ-ಕವನ ಯೋಜನೆಯ, “WhatsApp” ಗುಂಪಿನ ನಾಯಕತ್ವವನ್ನು ನಿರ್ವಹಿಸುವರು

೨.೩:  ಡಾ ಸುದರ್ಶನ್ ಅವರು, ಕನ್ನಡ ಭಾಷೆಯ ಉಳಿವು-ಅಳಿವಿನ ಬಗ್ಗೆ ಸಿದ್ಧಪಡಿಸಿರುವ  ಶಿಕ್ಷಣಾತ್ಮಕ ಕಡತ ”ನುಡಿ-ಮರಣ”  ಬಗ್ಗೆ ಸದಸ್ಯರಿಗೆ ಪರಿಚಯ ಮಾಡಿಕೊಟ್ಟರು.  ನುಡಿ-ಮರಣ ಕನ್ನಡ ಭಾಷೆಯ ಉಳಿವು-ಅಳಿವಿನ ವಿಷಯದ ಬಗ್ಗೆ ಚರ್ಚಿಸಲಾಯಿತು. ಕನ್ನಡ ಭಾಷೆಯ ಭವಿಶ್ಯದ ಬಗ್ಗೆ , ಬಹಳ ಎಚ್ಚರಿಕೆಯಿಂದ, ಆಳವಾಗಿ ಯೋಚಿಸಿ, ರಚಿಸಿದ ಈ ಕಡತದ ವಿವರಗಳನ್ನು, ಸದಸ್ಯರು ಬಹಳ ಲಕ್ಷ್ಯವಿಟ್ಟು ಆಲಿಸಿದರು. ಈ ಕಿರು-ಹೊತ್ತಿಗೆಯನ್ನು, ಬೆಂಗಳೂರಿನ ಸಮಾಚಾರ ಪತ್ರಿಕೆ ಕನ್ನಡ-ಪ್ರಭದ ಸಂಪಾದಕೀಯವು ಪ್ರಕಟಿಸಲು ಒಪ್ಪಿಗೆ ನೀಡಿದ್ದಾರೆ. ಈ ಕಡತದ ಬಗ್ಗೆ ಬಹಳ ಆಸಕ್ತಿಪೂರ್ಣವಾದ ಚರ್ಚೆ ನಡೆಯಿತು. ಚರ್ಚೆಯ ನಂತರ, ಸದಸ್ಯರು ಈ ದೀರ್ಘವಾದ ಲೇಖನವನ್ನು, ವಿವಿಧ ಶೀರ್ಷಿಕೆಗಳಡಿಯಲ್ಲಿ, ಸ್ವಂತ ಅನುಭವಗಳನ್ನು ಸೇರಿಸಿ, ಜನಪ್ರಿಯ ಲೇಖನಗಳಂತೆ ಪ್ರಕಟಿಸುವ ಸಲಹೆಗಳನ್ನು ನೀಡಿದಾಗ, ಲೇಖಕ ಡಾ ಸುದರ್ಶನ್ ಅವರು, ಈ ದಿಶೆಯಲ್ಲಿ ಸದಸ್ಯರು ತಮ್ಮ ಆಸಕ್ತಿಪೂರ್ಣ ಅನುಭವಗಳನ್ನು ಹಂಚಿಕೊಳ್ಳಲು ಕೋರಿಕೆ ನೀಡಿದರು. ಕರ್ನಾಟಕದಲ್ಲಿ ಹಳ್ಳಿಗಳಲ್ಲಿರುವ, ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವಾಗಲು, ವಿವಿಧ ವಿಷಯಗಳ ಬಗ್ಗೆ ಕನ್ನಡದಲ್ಲಿ ಭೋಧನಾ ವೀಡಿಯೋಗಳನ್ನು ತಯಾರಿಸಿ ಕಳಿಸ ಬಹುದೆಂದು ವಿವರಿಸಿದ ನಂತರ, ಅದಕ್ಕಾಗಿ, ವೇದಿಕೆಯ ಸದಸ್ಯರ ಸಮಯ ಮತ್ತು ಪರಿಶ್ರಮಗಳನ್ನು ಕೋರಿ ಮನವಿ ಮಾಡಿಕೊಳ್ಳಲಾಯಿತು. ಈ ವಿಷಯದ ಬಗ್ಗೆ ನಡೆದ ಚರ್ಚೆಯ ನಂತರ,  ವೇದಿಕೆಯ ಸದಸ್ಯ ಡಾ ಗಿರಿಧರ್ ಅವರು ಈ ಯೋಜನೆಗೆ ಅಗತ್ಯವಾದ ಅಂತರಜಾಲಾ ತಾಣದ ತೆರವು ಮತ್ತು ಹಣದ ಸಹಾಯವನ್ನು ನೀಡುವುದಾಗಿ ಘೋಷಿಸಿದಾಗ, ಸದಸ್ಯರು ಕರತಾಡನ ಮಾಡಿ, ಅವರ ನಿರ್ಧಾರವನ್ನು ಸ್ವಾಗತಿಸಿದರು. ಡಾ ಸುದರ್ಶನ್ ಅವರು, ಮುಂಬರುವ ದೀಪಾವಳಿ ಸಮಾರಂಭದ ಸಮಯದಲ್ಲಿ, ಚೆಸ್ಟರಫೀಲ್ಡ್ ನಲ್ಲಿ,  ಕನ್ನಡ ಬಳಗದ ಸದಸ್ಯರನ್ನು ಕನ್ನಡ ಮಾತನಾಡುವ ಮತ್ತು ಬರೆಯುವ ಚಟುವಟಿಕೆಯಲ್ಲಿ ತೊಡಗಿಸಲು ಪ್ರೋತ್ಸಾಹ ನೀಡಲು ಸಹಾಯಕಾರಿಯಾದ ಕಮ್ಮಟವನ್ನು ನಡೆಸುವ ಪ್ರಸ್ತಾಪವನ್ನೂ ವೇದಿಕೆಯ ಸದಸ್ಯರ ಮುಂದಿಟ್ಟರು. (ಈ ಕಮ್ಮಟದ ವಿವರಗಳನ್ನು ಮುಂದಿನ ಈಮೇಲ್ ವಿನಿಮಯದಲ್ಲಿ ತಿಳಿಸಲಾಗುವುದು). ೩.೦:  ಡಾ ಶಿವಪ್ರಸಾದ್ ಅವರು, ಅಕ್ಟೋಬರ್ ೧೮-೧೯ ರಂದು, ಚೆಸ್ಟರಫೀಲ್ಡಿನಲ್ಲಿ ನಡೆಸುವ ಎರಡು ದಿನಗಳ, ದೀಪಾವಳಿ ಸಮಾರಂಭದ ರೂಪರೇಖೆಗಳನ್ನು ಸದಸ್ಯರಿಗೆ ತಿಳಿಸಿದರು. ಈ ಎರಡು ದಿನಗಳ ಸಮಾರಂಭದ ಸಮಯದಲ್ಲಿ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಉದ್ಘಾಟನೆಯನ್ನು, ಸಮಾರಂಭದ ಮುಖ್ಯ ಅತಿಥಿಗಳ ಕೈಯಲ್ಲಿ ನೆರವೇರಿಸಲಾಗುವುದು. ಈ ವಿಷಯದ ಬಗ್ಗೆ ನಡೆದ ಚರ್ಚೆಯಲ್ಲಿ, ಸದಸ್ಯರು, ಉದ್ಘಾಟನೆಯನ್ನು, ವೇದಿಕೆಯ ಲಾಂಛನ ಮತ್ತು ಜಾಲ-ಜಗುಲಿಯ ಚಿತ್ರಗಳನ್ನು ಅನಾವರಣಗೊಳಿಸಿ ನಡೆಸ ಬಹುದೆಂದು ಅಭಿಪ್ರಾಯಪಟ್ಟರು.  ಉದ್ಘಾಟನೆಯ ಸಮಯದಲ್ಲಿ, ಮುಖ್ಯ ಅತಿಥಿಗಳು  ಕನ್ನಡ ಭಾಷಾ  ಬೆಳವಣಿಗೆಯ ಬಗ್ಗೆ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವುದಾಗಿಯೂ, ನಂತರ ಎರಡನೆಯ ದಿನದ ಅಧಿವೇಶನದಲ್ಲಿ, ವೇದಿಕೆಯ ಸದಸ್ಯರು ಮತ್ತು ಅದರಲ್ಲಿ ಪಾಲ್ಗೊಂಡ ಪ್ರೇಕ್ಷಕರನ್ನು ಉದ್ದೇಶಿಸಿ, ಕನ್ನಡ ಸಾಹಿತ್ಯ ಮತ್ತು ಭಾಷೆಯ ಬಗ್ಗೆ ಗಂಭೀರವಾದ ವಿಷಯವೊಂದರ ಮೇಲೆ ಮಾತನಾಡಬಹುದು ಮತ್ತು ಆ ವಿಷಯವನ್ನು ಸದಸ್ಯರ ಅಭಿಪ್ರಾಯ ಸಂಗ್ರಹಣೆಯ ಮೂಲಕ ನಿರ್ಧರಿಸಬಹುದೆಂದು ಚರ್ಚಿಸಲಾಯಿತು.  ಸದಸ್ಯರು ಭಾಷಣದ ಹಲವು ವಿಷಯಗಳನ್ನು ಸಭೆಯಲ್ಲೇ ಸೂಚಿಸಿದರು.  ಮುಖ್ಯ ಅತಿಥಿಗಳಾಗಿ ಬರಲಿರುವ ಡಾ. ಎಚ್.ಎಸ್.ವೆಂಕಟೇಶಮೂರ್ತಿ  ಅವರು ಪ್ರಖ್ಯಾತ ಕವಿ ಹಾಗೂ ಸಾಹಿತಿಗಳಾದ್ದರಿಂದ, ಕವಿ-ಗೋಷ್ಟಿಯಲ್ಲಿ, ವೇದಿಕೆಯ ಸದಸ್ಯರ ಕವನಗಳನ್ನು ವಾಚನವನ್ನು ಏರ್ಪಡಿಸಲಾಗುವುದು.  ಸಮಾರಂಭ್ಹದ ಮುಖ್ಯ ಸಭಾಂಗಣದಲ್ಲಿ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳು ನಡೆಯುವ ಸಮಯದಲ್ಲಿ, ಕವಿ-ಗೋಷ್ಟಿಯ ಅಧಿವೇಶನವನ್ನು ಪರ್ಯಾಯ ಕಾರ್ಯಕ್ರಮವನ್ನಾಗಿ ನಡೆಸಲಾಗುವುದು. ಈ ಯೋಜನೆಯನ್ನು ಸರ್ವ ಸದಸ್ಯರೂ ಒಪ್ಪಿಕೊಂಡ ನಂತರ, ಈ  ಸಾಹಿತ್ಯ ಸಂಬಂಧಿ ಚಟುವಟಿಕೆಗಳ ಗುಂಪಿನ ಜವಾಬ್ದಾರಿಯನ್ನು ನಿಭಾಯಿಸುವ ಹೊಣೆಯನ್ನು ಡಾ ಪ್ರೇಮಲತಾ ಅವರು ಒಪ್ಪಿಕೊಂಡರು.  ಪ್ರತಿ ವರ್ಷ ವೇದಿಕೆಯ ಸಭೆಯನ್ನು ಎರಡು ಬಾರಿ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.  ಕನ್ನಡ ಬಳಗದ ಯುಗಾದಿ ಸಮಾರಂಭದ ಸಮಯದಲ್ಲಿ, ವೇದಿಕೆಯ ಪರ್ಯಾಯ ಅಧಿವೇಶನವನ್ನು ನಡೆಸುವ ಹಾಗೂ ದೀಪಾವಳಿಯ ಸಮಾರಂಭಕ್ಕೆ ಮುಂಚೆ ಮತ್ತೊಂದು ಸಭೆಯನ್ನು ನಡೆಸುವ ಸಾಧ್ಯತೆಯ ಬಗ್ಗೆ ಚರ್ಚಿಸಲಾಯಿತು.

೪.೦:  ಪುಸ್ತಕ ವಿಮರ್ಶೆ:  ಸಭೆಯ ಈ ಸ್ಥಾನವನ್ನು, ಡಾ ಸತ್ಯಪ್ರಕಾಶ್ ಮತ್ತು ಡಾ ಗಿರಿಧರ್ ಅವರಿಗೆ ಹಂಚಲಾಗಿತ್ತು.  ಅಂದಿನ ವಿಮರ್ಶೆಗೆ ಆಯ್ಕೆ ಮಾಡಲಾಗಿದ್ದ ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ ಸಣ್ಣಕಥೆಗಳ ಸಂಗ್ರಹದಿಂದಾರಿಸಿದ್ದ ಕಥೆ ” ಅಬಚೂರಿನ ಪೋಸ್ಟ್ ಆಫೀಸ್” .  ಡಾ ಗಿರಿಧರ್ ಅವರು, ಈ ಲೇಖಕನ ಬರವಣಿಗೆಯ ಶೈಲಿ ಮತ್ತು ಕಥೆಯ ಸಾರಾಂಶವನ್ನು ಚೊಕ್ಕವಾಗಿ ವಿವರಿಸಿದ ನಂತರ ನಡೆದ ಗಾಢವಾದ ಚರ್ಚೆಯಲ್ಲಿ  ಭಾಗವಹಿಸಿದ ವೇದಿಕೆಯ ಸದಸ್ಯರು, ಈ ಕಥೆಯ ಕಥಾವಸ್ತು, ಶೈಲಿ, ಕಥೆಯಲ್ಲಿನ ವಿವಿಧ ಪಾತ್ರಗಳು, ತಾಂತ್ರಿಕ ವಿವರಗಳು, ಕಥೆಯ ಹಠಾತ್ ಅಂತ್ಯ ಮತ್ತು ಈ ಕಥೆಯನ್ನಾಧರಿಸಿ ನಿರ್ಮಿಸಿರುವ ಚಲನಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಳ ಆಸಕ್ತಿಪೂರ್ಣವಾಗಿ ಮಂಡಿಸಿದರು. ಸಮಯದ ಅಭಾವದ ಕಾರಣ, ಪುಸ್ತಕ ವಿಮರ್ಶೆಯ ಮತ್ತೊಂದು ಕಥೆ ”ತಬರನ ಕಥೆಯ” ವಿಮರ್ಶೆಯನ್ನು ರದ್ದು ಪಡಿಸಲಾಯಿತು. ಕಡೆಯಲ್ಲಿ, ಡಾ ಶ್ರಿವತ್ಸ ದೇಸಾಯಿ ಅವರು, ಅಂದಿನ ಸಭೆಯಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನರ್ಪಿಸಿ, ವೇದಿಕೆಯ ಕಾರ್ಯಕಲಾಪಗಳನ್ನು ಮುಕ್ತಾಯಗೊಳಿಸಿದರು.

5 thoughts on “ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಯು.ಕೆ ಸದಸ್ಯರ ಸಭೆಯ ನಡುವಳಿಕೆಗಳು – ಜೂನ್ ೮, ಸೋಲಿಹಲ್, ಬರ್ಮಿಂಗಹ್ಯಾಮ್ -ವರದಿ ಡಾ ಶ್ರಿವತ್ಸ ದೇಸಾಯಿ, ಡಾ ಉಮಾ ವೆಂಕಟೇಶ್

  1. ಕಾರ್ಯ ಕಲಾಪ

    ಸೇರಿತ್ತೊ೦ದು ಸಭೆ ಸೋಲಿಹಳ್ಳಿಯಲ್ಲಿ
    ಕನ್ನಡಕ್ಕಾಗಿ ಮಿಡಿದು, ಕನ್ನಡ ನುಡಿದು
    ಕನ್ನಡ ಬೆಳೆಸುವ ಗು೦ಗಿನಲ್ಲಿ.

    ನಗೆ ಚಟಾಕಿ ಹಾಸ್ಯಗಳ ಹೊನಲು ಹರಿಸಿದರು ಕೆಲವರು
    ಅರಿವಳಿಕೆ ನಿಪುಣರು ಮಾತಲ್ಲಿ ತಮ್ಮ ಕಲೆ ಮರೆತರು

    ಭಾಷೆ, ದೇಶ,ನೀತಿಗಳ ಮು೦ದಿಟ್ಟರು ಕೆಲ ಭಾವುಕರು
    ಆಳ ಅಳೆದು ತಲೆದೂಗಿದರು ಕೆಲ ನಿರ್ಲಿಪ್ತರು.

    ಕತೆ ಕಾದ೦ಬರಿ,ಗದ್ಯ ಪದ್ಯ ಇಣುಕಿದವು ಮಾತಲಿ
    ಆ೦ಡ್ರೈಡ್, ಅಪ್ಪ್ಸ್, ಯು ಟೂಬ್ ಗಳ ಜೊತೆಯಲಿ

    ಮಾತೃಭಾಷೆಗಾಗಿ ಹೋರಾಡುವ ಕೆಚ್ಚಿನಲಿ

    ಧ್ವ೦ಸವಾಯಿತು ತಿ೦ಡಿ ತೀರ್ಥಗಳು ಮಧ್ಯದಲಿ

    ಅಪರೂಪದ ರವಿರಾಯ ಕಾದು ನೋಡಿದ ಈ ಪರಾಕ್ರಮವನು
    ಅಭಿನ೦ದಿಸಿ ಹೊಸ ಉತ್ಸಾಹದ ಈ ವೀರಾಗ್ರಣಿಗಳನು

    — ಡಾ. ದಾಕ್ಷಾಯಣಿ

    Like

  2. ಸ್ನೇಹಿತರೇ,
    ಸೋಲೀಹಲ್‍ನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅಬಚೂರಿನ ಪೋಸ್ಟ್‍ಆಫೀಸಿನ ಬಗ್ಗೆ ವಿಚಾರ ವಿನಿಮಯದಲ್ಲಿ ನನ್ನ ಅಭಿಪ್ರಾಯವನ್ನು ಇನ್ನೂ ವಿಸ್ತಾರವಾಗಿ ಹೇಳಲಿದ್ದೆ. ಆದರೆ ಸಮಯಾಭಾವದಿಂದ ಅದು ಸಾಧ್ಯವಾಗಲಿಲ್ಲ. ಈಗ ಇಲ್ಲಿ ಸಂಕ್ಷಿಪ್ತವಾಗಿ (ವಿಸ್ತಾರವಾಗಿ?) ಹೇಳಬಯಸುವೆ.
    ನಾನು ಆ ಸಭೆಯಲ್ಲಿ ಹೇಳಿದಹಾಗೆ ಈ ರೀತಿಯ ಸಾಂಸಾರಿಕ ತೊಡಕುಗಳು ಈ ದೇಶದಲ್ಲಿ ಸಾಮಾನ್ಯವಾಗಿ ನನ್ನಂತಹ ಮನೆ-ವೈದ್ಯರ ( Family doctors) ಬಳಿಗೆ ಬರುವುವು. ಈ ತೊಡಕುಗಳನ್ನು ಧಾರ್ಮಿಕ ಸಂಸ್ಥೆಗಳ ಪಾದ್ರಿಗಳೂ ಮತ್ತು ರಾಬೈ ಮುಂತಾದವರೂ ಕೂಡ ಬಗೆಹರಿಸಬಲ್ಲರು. ಈ ಕಥೆಯಲ್ಲಿ ಪಾತ್ರದಾರಿಗಳಾದ ಬೋಬಣ್ಣ, ಅವನ ಹೆಂಡತಿ ಮತ್ತು ಅವನ ಅತ್ತೆಯ ಪಾತ್ರ ಮುಖ್ಯವಾಗಿ ವರ್ಣಿಸಲಾಗಿದೆ. ಒಟ್ಟಿನಲ್ಲಿ ನೋಡಿದರೆ ಇಲ್ಲಿ ಗಂಡಹೆಂಡಿರ ಸಮಸ್ಯೆಯೇ ಮುಖ್ಯವಾಗಿ ಕಾಣುವುದು. ಆದರೆ ಅವನ ಅತ್ತೆಯಪಾತ್ರ ಎಲ್ಲಕ್ಕಿಂತಲೂ ಬಹುಮುಖ್ಯ.
    ಈ ಕಥೆಯನ್ನು ಓದುತ್ತಿರುವಾಗ, ಪಾಶ್ಚಿಮಾತ್ಯದೇಶದಲ್ಲೇ ಕೆಲಸಮಾಡಿದ ನನಗೆ, ಅಬಚೂರಿನಂತಹ ಗ್ರಾಮೀಣನಾಡಿನಲ್ಲಿ ಈ ರೀತಿಯ ಸಾಂಸಾರಿಕ ತಾಪತ್ರಯಗಳು ಹೇಗೆ ಬಗೆಹರಿಯಲ್ಪಡುವುವು ಎಂಬ ಕುತೂಹಲವು ಆವರಿಸಿತ್ತು. ಆದುದರಿಂದ ಆ ಕಥೆಯನ್ನು ಇನ್ನೂ ಕುತೂಹಲದಿಂದ ಓದತೊಡಗಿದೆನು.

    ಮೊದಲು ಬೋಬಣ್ಣನು ಅತ್ತೆಯಾಗುವವಳಿಂದ ಬಲಾತ್ಕಾರವಾಗಿ ಅವಳ ಮಗಳನ್ನು ಮದುವೆಯಾದನೆಂದು ನನ್ನ ಅನಿಸಿಕೆ. ಅಲ್ಲದೆ ತಾನು ಬಡವನಾಗಿದುದರಿಂದ ಅತ್ತೆಯಮನೆಯಲ್ಲೇ ವಾಸಮಾಡುವ ಪರಿಸ್ಥಿತಿ ಅವನಿಗೆ ಅನಿವಾರ್ಯವಾಯಿತು. ಅವನ ಅತ್ತೆಯು ಬೋಬಣ್ಣನ ಬಡತನದ ಪರಿಸ್ಥಿತಿಯನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಂತೆ ತೋರುತ್ತದೆ. ಅತ್ತೆಯು ಸೊಸೆಯನ್ನು ಗೋಳುಹೊಯ್ಯಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲಿ ಅತ್ತೆ ಅಳಿಯನನ್ನು ಗೋಳುಹೊಯ್ಯಿದಂತೆ ಕಾಣುತ್ತದೆ. ಇದರಿಂದ ಅಳಿಯನು ತನ್ನ ಹೆಂಡತಿಯನ್ನು ಗೋಳುಹೊಯ್ಯಿದಹಾಗೆ ತೋರುತ್ತದೆ. ಇದರಿಂದ ಅವನ ಹೆಂಡತಿಯು ಕಷ್ಟವನ್ನು ಅನುಭವಿಸುತ್ತಿದ್ದಂತೆ ಕಾಣುತ್ತದೆ.
    ಒಂದುವೇಳೆ ಅವಳು ಸೊಸೆಯಾಗಿದ್ದರೆ ಈ ಕಷ್ಟಪರಿಸ್ಥಿತಿಯಿಂದ ಪಾರಾಗಲು ತನ್ನ ತಾಯಿಯ ಮನೆಗೆ ಹೋಗಬಹುದಿತ್ತು. ಆದರೆ ಅವಳು ಮಗಳಾದುದರಿಂದ ತಾಯಿಮನೆಯಲ್ಲೇ ಗಂಡನೊಂದಿಗೆ ಇರುವಾಗ ಆ ಪರಿಸ್ಥಿತಿಯಿಂದ ಪಾರಾಗಲು ಆಗದೆ ಗಂಡನೊಂದಿಗೆ ವಿರಸಳಾಗಿ ತನ್ನಲ್ಲೇ ತಾನಾಗಿ ಹುದುಗಿಕೊಂಡಂತೆ ಕಾಣುತ್ತದೆ.
    ಗಂಡಹೆಂಡರು ಏಕಾಂತದಲ್ಲಿ ಗೌಪ್ಯವಾಗಿ ಸರಸವಾಗಿ ಮಾತಾಡುವುದಕ್ಕೆ ಅವಕಾಶವಿದ್ದಂತೆ ಕಾಣುವುದಿಲ್ಲ. ಅವರು ಸರಿಯಾಗಿ ಒಟ್ಟಿಗೆ ಮಾತಾಡಿದರೋ ಇಲ್ಲವೋ ಗೊತ್ತಿಲ್ಲ.

    ಇದೇ ರೀತಿಯ ಪರಿಸ್ಥಿತಿ ಈ ದೇಶದಲ್ಲಿ ಇದ್ದರೆ, ಸಾಮಾನ್ಯವಾಗಿ ಹೆಂಡತಿಯು ವೈದ್ಯನಬಳಿ ಯಾವದೋ ಒಂದು ಸಣ್ಣಬೇನೆಯ ನೆಪದಲ್ಲಿ ಬಂದು ತನ್ನ ಗಂಡ ಮತ್ತು ತಾಯಿಯ ವರ್ತನೆಗಳ ಬಗ್ಗೆ ದೂರುಮಾಡುತ್ತಿದ್ದಳು. ಇದರ ಸಲುವಾಗಿ ವೈದ್ಯನು ಯಾವುದೋ ನೆಪಹೂಡಿ ಅವಳ ಗಂಡನನ್ನು ಕರೆಸಿ ಚಾತುರ್ಯದಿಂದ ಅವರುಗಳ ತೊಡಕುಗಳಿಗೆ ಸಲಹೆನೀಡುತಲಿದ್ದ. ಸ್ವಲ್ಪದಿನಗಳನಂತರ ಅವಳ ತಾಯಿಯನ್ನೂ ಕರೆಸಿ ಅವರ ತಾಪತ್ರಯಗಳನ್ನು ವಿವರಿಸಿ ಪರಿಹಾರವನ್ನು ಕಂಡು ಹಿಡಿಯುತ್ತಿದ್ದ. ಆದರೆ ಇದು ಕರ್ನಾಟಕದ ಅಬಚೂರೆಂಬ ಗ್ರಾಮದಲ್ಲಿ ನಡೆದ ಕಥೆ. ಅಲ್ಲಿ ವೈದ್ಯರಿದ್ದರೋ ಇಲ್ಲವೋ ಗೊತ್ತಿಲ್ಲ ಅಥವ ಈ ಬಗೆಯ ಸಾಂಸಾರಿಕ ತೊಡಕುಗಳನ್ನು ಪರಿಹರಿಸುವ ಹಿರಿಯರು ಆ ಗ್ರಾಮದಲ್ಲಿ ಇದ್ದಂತೆ ಕಾಣುವುದಿಲ್ಲ.

    ಹಲವು ವರ್ಷಗಳಹಿಂದೆ ಬೆಂಗಳೂರಿನ ದೂರದರ್ಶನದಲ್ಲಿ ಗ್ರಾಮಸ್ಥರ ಕಾರ್ಯಕ್ರಮದಲ್ಲಿ ಗ್ರಾಮೀಣ ಆರೋಗ್ಯ ಕೇಂದ್ರದ ಒಬ್ಬ ಕುಟುಂಬಯೋಜನ ವೈದ್ಯರು ನವದಂಪತಿಗಳು ತಮಗೆ ಮಕ್ಕಳಾಗದಿರುವ ಕಾರಣಗಳನ್ನು ವಿವರಿಸುತ್ತಿದ್ದರು. ಒಂದೇ ಸಣ್ಣ ಮನೆಯಲ್ಲಿ ಪರಿವಾರವೆಲ್ಲಾ ವಾಸವಾಗಿರಲು, ನವದಂಪತಿಗಳಿಗೆ ಗೌಪ್ಯವಾಗಿ ಮಾತಾಡಲೂ ಅವಕಾಶವಿಲ್ಲದಿರಲು, ಆ ವೈದ್ಯರು ಈ ನವ ದಂಪತಿಗಳಿಗೆ ಜಾತ್ರೆಗೆ ತಾವಿಬ್ಬರೇ ಹೋಗುವಂತೆ ಸಲಹೆ ಮಾಡುತ್ತಿದ್ದರು.

    ಈ ರೀತಿಯಾಗಿ ಏನಾದರೂ ಉಪಾಯ ಸಾಧನಗಳನ್ನು ಲೇಖಕರು ಈ ಕಥೆಯಲ್ಲಿ ಬಳಸುವರೋ ಏನೋ ಎಂದು ನಾನು ಕಾತುರನಾಗಿ ಓದತೊಡಗಿದೆ. ಆದರೆ ಆದುದೇ ಬೇರೆ. ತೋಟದ ಒಡಯರು ಬಂದು ಬೋಬಣ್ಣನ ಮೇಲೆ ಎದುರುಬಿದ್ದಾಗ ಅವರನ್ನು ಮೂರ್ಛೆಬೀಳುವಹಾಗೆ ಹೊಡೆದು ಕೋಪದ ಆವೇಶದಿಂದ ಅಲ್ಲಿದ್ದ ಎತ್ತುಗಳ ಹೊಟ್ಟೆಗೆ ಒದ್ದು ಜನಗಳಮೇಲೆ ನುಗ್ಗಿ ಊರಿಂದ ಎಲ್ಲೋಮಾಯವಾಗಿ ಹೋಗುತ್ತಾನೆ.

    ಆದರೆ ನಾವು ಓದುಗರು, ಕಥೆಯ ಪಾತ್ರಗಳೊಂದಿಗೇ ಇರುವುದನ್ನು ಬಿಟ್ಟು ಹೊರಬಂದು ನೋಡಿದರೆ, ಅಲ್ಲಿ ಬೋಬಣ್ಣನೂ ಇಲ್ಲ, ಅವನ ಹೆಂಡತಿಯೂ ಇಲ್ಲ, ಅತ್ತೆಯೂ ಇಲ್ಲ. ಎಲ್ಲರೂ ಲೇಖಕನ ಮಾನಸಿಕ ಕ್ರಿಯೆಗಳು. ಬೋಬಣ್ಣನು ತನ್ನ ಪರಿಸ್ಥಿತಿಯನ್ನು ಬಗೆಹರಿಸಲಾರ ಎಂಬುದು ಲೇಖಕನಿಗೆ ಆ ತೊಡಕನ್ನು ಬಗೆಹರಿಸುವುದು ಕಷ್ಟವಾಯಿತೋ ಏನೋ ಎಂಬ ಶಂಖೆ ಬರುತ್ತದೆ. ಆದುದರಿಂದ ಕಥಾನಾಯಕನನ್ನು ಹಠಾತ್ತನೆ ಅಲ್ಲಿಂದ ಮಾಯಗೊಳಿಸುವುದು ಅನಿವಾರ್ಯ ಮತ್ತು ಸುಲಭವಾದ ಮಾರ್ಗವೆಂಬಂತೆ ತೋರುತ್ತದೆ. ಇದಕ್ಕೆ ಇನ್ನೊಂದು ಕಾರಣವೂ ಇರಬಹುದು. ಈ ಕಥಾವಸ್ತುವು ಮೊದಲು ಬಹಳ ಸರಳವಾಗಿ ಕಂಡರೂ ಅಲ್ಲಿನ ಸಮಸ್ಯೆ ಮತ್ತು ಸಂಧರ್ಭಗಳು ಜಟಿಲವಾಗಿ ಬೆಳೆಯುವ ಪ್ರವೃತ್ತಿ ಇದೆ. ಸಣ್ಣಕತೆಯು ಬೇಳೆದು ಕಾದಂಬರಿಯಾಗಿ ಬೇಳೆಯುವ ಪ್ರವೃತ್ತಿ ಇರುವುದರಿಂದ, ಲೇಖಕರು ಅದನ್ನು ನಿಭಾಯಿಸಲಾಗದೆ ಆ ಕಥೆಯನ್ನು ಅಲ್ಲೇ ಮೊಟಕುಗೊಳಿಸಿರಬಹುದು.
    –ರಾಜಾರಾಮ್ ಕಾವಳೆ

    Like

  3. ಧನ್ಯವಾದಗಳು, ಪ್ರೇಮಲತ. ಹಿನ್ನೆಲೆಯಲ್ಲಿ ಬಹಳ ಜನರ ಪರಿಶ್ರಮವಿದೆ. ನಿಮ್ಮೆಲ್ಲರ ಬೆಂಬಲದಿಂದಲೆ ಇಂಥ ಕಾರ್ಯ ಮುನ್ನಡೆಯ ಬೇಕು. ಮಿಕ್ಕ ಸದಸ್ಯರ ಪ್ರತಿಕ್ರಿಯೆ, ಸಹಕಾರಕ್ಕೆ ಕಾಯುವೆ.
    ಶ್ರೀವತ್ಸ

    Like

  4. ಸಭೆಯ ವರದಿ ಎಲ್ಲ ಮುಖ್ಯಾಂಶಗಳನ್ನು ಪರಿಗಣಿಸಿದೆ ಮತ್ತು ಕರಾರುವಕ್ಕಾಗಿದೆ.
    ಈ ಸಭೆ ನಮಗೆ ಎಲ್ಲರನ್ನು ಭೇಟಿ ಮಾಡಲು ಅವಕಾಶ ಒದಗಿಸಿತು ಮತ್ತು ಮುಂದಿನ ಯೋಜನೆಗಳಿಗೆ ಅಡಿಪಾಯ ಹಾಕಲು ಅವಕಾಶ ಒದಗಿಸಿತು.
    ಈ ಸಭೆಯನ್ನು ಆಯೋಜಿಸಿದ ಸದಸ್ಯರುಗಳಿಗೆ ಧನ್ಯವಾದ.
    ಮುಂದಿನ ಬೆಳವಣಿಗೆಗೆ ನಾವೆಲ್ಲ ಸಹಕರಿಸಲು ಉತ್ಸುಕರಾಗಿದ್ದೇವೆ.

    Like

  5. ಕಾರ್ಯಕಲಾಪಗಳ ವರದಿ ಚೆನ್ನಾಗಿ ದಾಖಲಾಗಿದೆ.
    ಇನ್ನು ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರಬೇಕು!

    Like

Leave a comment

This site uses Akismet to reduce spam. Learn how your comment data is processed.