ಹರಪ್ಪ ಪುಸ್ತಕ ಸರಣಿಯ ಹಿನ್ನೆಲೆ – ಡಾ ಶಂಕರ್ ಕಾಶ್ಯಪ್ ಅವರು ಬರೆದ ಲೇಖನ

ನಾನು ಇತ್ತೀಚೆಗೆ ಹರಪ್ಪ ನಾಗರೀಕತೆಯ ಪುಸ್ತಕಗಳ ಸರಣಿಯನ್ನು ಬರೆಯಲು ಪ್ರಾರಂಭ ಮಾಡಿದ್ದೇನೆ. ಈ ಸರಣಿಯ ಮೊದಲ ಪುಸ್ತಕ ”ಹರಪ್ಪ; ಸೋಮನ ಆಕರ್ಷಣೆ”  (The Lure of Soma)  ಕಳೆದ ವರ್ಷ (2013) ಪ್ರಕಟವಾಗಿದೆ

.Final Cover oct 3CiviltàValleIndoMappa

Map: CC Wiki

ನಾನೇಕೆ ಬರೆದೆ?

ಶಾಲೆಯಲ್ಲಿ ಹರಪ್ಪ ಮತ್ತು ಮೊಹೆಂಜೋದಾರೋ ಅವಶೇಷಗಳ ಬಗ್ಗೆ ಕಲಿತ ನಂತರದ ದಿನಗಳಿಂದಲೂ, ನಾನು ಭಾರತದ ಪ್ರಾಚೀನ ಇತಿಹಾಸದಿಂದ ಬಹಳಷ್ಟು  ‌ಆಕರ್ಷಿಸಲ್ಪಟ್ಟಿದ್ದೇನೆ.  ಆ ಸಮಯದಲ್ಲಿ, ಈ ವಿಷಯದ ಬಗ್ಗೆ ಲಭ್ಯವಿದ್ದ ಸಾಹಿತ್ಯ ಬಹಳ ವಿರಳವಾಗಿದ್ದು, ಅದನ್ನು ದೊರಕಿಸಿಕೊಳ್ಳುವುದು ಒಬ್ಬ ಶಾಲಾ ವಿದ್ಯಾರ್ಥಿಯ ಪಾಲಿಗಂತೂ ಅತ್ಯಂತ ಕಷ್ಟಕರವಾದ ಕಾರ್ಯವೆನಿಸಿತ್ತು.  ಅಲ್ಲಿಂದೀಚೆಗೆ, ಸಿಂಧೂ ಕಣಿವೆ ನಾಗರೀಕತೆಯ ಉತ್ಖನನದ ಕೆಲಸದ ಗತಿ ಚುರುಕಾಗಿ ನಡೆದಿದೆ, ಹಾಗೂ ಇದರಿಂದ, ಭಾರತೀಯ  ಪೂರ್ವ ಇತಿಹಾಸದ ಬಗ್ಗೆ ನಮಗಿರುವ ಗ್ರಹಿಕೆ ಅಗಾಧವಾಗಿ ಬದಲಾಯಿಸಿದೆ. ಶಾಲೆಯಲ್ಲಿ ನಮ್ಮ ಶಿಕ್ಷಕರು, ಈ ಮಹಾನ್ ಸಿಂಧೂ ಕಣಿವೆಯ ನಾಗರೀಕತೆಯ ಬಗ್ಗೆ ನಮಗೆ ಪಾಠ ಮಾಡಿದ್ದು ಈಗಲೂ ನೆನಪಿದೆ. ಅದೇನೆಂದರೆ, ಕ್ರಿ.ಪೂ 1500 ರಲ್ಲಿ,  ರಶಿಯಾದ ಸ್ಟೆಪ್ಪೀಸ್ ಹುಲ್ಲುಗಾಡು ಪ್ರದೇಶದಿಂದ ಬಂದ ಲೂಟಿಕೋರರಾದ ಆರ್ಯರು, ಈ ನಾಗರೀಕತೆಯನ್ನು ನಾಶ ಮಾಡಿದರು ಎಂದು.  ದುರದೃಷ್ಟವಶಾತ್, ಅನೇಕ ವಿದ್ವಾಂಸರು ಈಗಲೂ ವಿಶ್ವದಾದ್ಯಂತ ಇದೇ ಕಥೆಯನ್ನು ಪ್ರಚಾರ ಮಾಡುತ್ತಿದ್ದಾರೆ.ಆದರೂ ಸಹಾ, ಅವರಿಗೆ ಅಗಾಧವಾದ ವೇದ ಸಂಗ್ರಹಗಳ ಸೃಷ್ಟಿಯ ಕರ್ತೃತ್ವವನ್ನು ನೀಡಲಾಗಿದೆ.  ವೇದಗಳನ್ನು,  ಪ್ರಾಚೀನ ಜಗತ್ತಿನ ಅತ್ಯಂತ ಬೃಹತ್ ಮತ್ತು ಗಹನವಾದ ಜ್ಞಾನವುಳ್ಳ  ಗ್ರಂಥಗಳೆಂದು ಒಪ್ಪಿಕೊಂಡಿದ್ದಾರೆ.  ಗ್ರಂಥಗಳಲ್ಲಿ ಅಡಕವಾಗಿರುವ ಜ್ಞಾನ, ಎಷ್ಟೊಂದು ಪ್ರಗತಿಪರವಾಗಿದೆ ಎಂದರೆ, ಇವು, ಇಂತಹ ಪ್ರಾಚೀನ ಕಾಲದಲ್ಲಿ, ಉತ್ಪತ್ತಿಯಾಯಿತೆಂಬುದನ್ನು, ಗ್ರಹಿಸುವುದು ಕಠಿಣವಾಗಿದೆ.

ನಶಿಸಿ ಹೋದ ನಾಗರೀಕತೆ:
ನಾನು ಬೆಳೆಯುತ್ತಿದ್ದ ದಿನಗಳಲ್ಲಿ, ಅಷ್ಟೊಂದು‌ ಅಭಿವೃದ್ಧಿ ಹೊಂದಿರುವ ಮತ್ತು ಮುಂದುವರಿದ ನಾಗರೀಕತೆಯೊಂದು, ಯಾವುದೇ ಜಾಡಿಲ್ಲದಂತೆ, ಹಾಗೇಕೆ ಏಕಾಏಕಿ ಕೊನೆಗೊಂಡಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟವೆನಿಸಿತ್ತು. ನಾನು ಇದರ ಆಳವಾದ ಅಭ್ಯಾಸ ಶುರು ಮಾಡಿದಾಗ ಈ ಕಥೆಯಲ್ಲಿ  ಹಲವಾರು ಅಸಂಗತಗಳು ಬೆಳಕಿಗೆ ಬಂದವು. ಈ ಸುಲಿಗೆಗಾರರು ಕುದುರೆಗಳು ಎಳೆಯುವ ರಥಗಳನ್ನೇರಿ, ಪರ್ವತಗಳ ದುರ್ಗಮ ಹಾದಿಗಳಲ್ಲಿ ಮತ್ತು ಕಣಿವೆಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಭಾವಿಸಲಾಗಿದೆ.  ವೇಗವಾಗಿ ಚಲಿಸುವ ಎರಡು ಚಕ್ರಗಳ ಈ ರಥಗಳು, ಸಮತಟ್ಟಾದ ಬಯಲು ಸೀಮೆಯ ಮೇಲೆ ಓಡಲು ಸೂಕ್ತವಾಗಿವೆಯೇ ಹೊರತು, ಪರ್ವತ ಪ್ರದೇಶಗಳಲ್ಲಿ ಅಲ್ಲ.  ಲಭ್ಯವಿರುವ ಪುರಾತತ್ವ ಸಾಹಿತ್ಯದ ವ್ಯಾಪಕ ಶೋಧನೆಯ ಹೊರತಾಗಿಯೂ, ಅಲ್ಲಿನ ಯಾವುದೇ ಅವಶೇಷಗಳಲ್ಲಿಯೂ, ಇಂತಹ ಯಾವುದೇ ಹತ್ಯಾಕಾಂಡಕ್ಕೆ ಸಂಬಂಧಿಸಿದ ಸಾಮೂಹಿಕ ನಾಶದ ಅಥವಾ ದಳ್ಳುರಿಯ ಬಗ್ಗೆ ಮುಂದಿಡಲು ಯಾವುದೇ ಪುರಾವೆಗಳು ನನಗೆ ದೊರೆತಿಲ್ಲ . ಇದಷ್ಟೇ ಅಲ್ಲ, ಯಾವುದೇ ಸಾಮೂಹಿಕ ಸಮಾಧಿಗಳು, ಬೆಂಕಿಯಿಂದ ನಾಶವಾದ ನಗರಗಳು, ಅಥವಾ ಅಂಕೆಯಿಲ್ಲದೇ ದ್ವಂಸವಾದ ಕಟ್ಟಡಗಳ ಪುರಾವೆಯೂ ಸಿಕ್ಕಿಲ್ಲ. ಈ ಆರ್ಯರನ್ನು, ಬೌದ್ಧಿಕ ಅನ್ವೇಷಣೆಗಳಿಗೆ ಕೊಂಡಾಡುವ ಬದಲಾಗಿ, ಕೇವಲ ಹಳ್ಳಿಗಳನ್ನು ಲೂಟಿ ಮಾಡುವ ಮತ್ತು ಜಾನುವಾರುಗಳನ್ನು ಕದಿಯುವಲ್ಲಿ ಹೆಚ್ಚು ಆಸಕ್ತಿ ಇದ್ದ ಅನಾಗರಿಕ ಮತ್ತು ಅಸಂಸ್ಕೃತ ಪಶುಗಳೆಂದು, ಚಿತ್ರಿಸಲಾಗಿದೆ.

ವೇದಗಳು 

  R Griffith's book

ನಾನು ಮನೆಯಲ್ಲಿ, ಪೂಜಾ ಸಮಯದಲ್ಲಿ, ದೇವರ ವಿಗ್ರಹಗಳ ಮುಂದೆ ಕುಳಿತು, ಪುರೋಹಿತರು ಪಠಿಸುವ ದೇವರ ಸ್ತೋತ್ರಗಳನ್ನು ಕೇಳುತ್ತಿದ್ದಾಗ, ಅವೇನಿರಬಹುದೆಂದು ಚಕಿತಗೊಳ್ಳುತ್ತಿದ್ದ ಸಂಧರ್ಭಗಳು ನೆನಪಿದೆ.  “ಇದು ಋಗ್ವೇದದಿಂದ ಬಂದದ್ದು”, ಅಥವಾ ಇದು “ದೇವರನ್ನು ಒಲಿಸಿಕೊಳ್ಳುವ ಸ್ತುತಿಗೀತೆ,” ”ಇದು ನಿನಗೆ ಬೇಡಿಕೊಳ್ಳುವುದನ್ನೆಲ್ಲಾ ದಯಪಾಲಿಸುತ್ತದೆ”- ಎನ್ನುವುದು ಅವರು ನನ್ನ ಪ್ರಶ್ನೆಗಳಿಗೆ ಸಾಮಾನ್ಯವಾಗಿ ನೀಡುತ್ತಿದ್ದ ಉತ್ತರವಾಗಿತ್ತು.  ಕೆಲವು ಪುರೋಹಿತರಿಗೆ ಅವರು ಪಠಿಸುತ್ತಿದ್ದ ಶ್ಲೋಕಗಳ ನಿಖರವಾದ ಅರ್ಥ ತಿಳಿದಿರುತ್ತಿತ್ತೋ ಇಲ್ಲವೋ ಎಂದು  ಕೂಡ ಸಂದೇಹಪಡುತ್ತಿದ್ದೆ! ಈ ರೀತಿ ಶತಮಾನಗಳಿಂದ, ಬಾಯಿ ಪಾಠದ ಮೂಲಕ, ಒಂದು ಪೀಳಿಗೆಯಿಂದ, ಮತ್ತೊಂದು ಪೀಳಿಗೆಗೆ ಹರಡಿದ್ದ, ಈ ಪವಿತ್ರ ಗ್ರಂಥಗಳ ಬಗ್ಗೆ ತಿಳಿಯಲು ನಾನು ಬಹಳ ಕುತೂಹಲಿಯಾಗಿದ್ದೆ.

ಅಂತರ್ಜಾಲತಾಣಗಳಲ್ಲಿ ಮತ್ತು ವಿಶ್ವದಾದ್ಯಂತ ಗ್ರಂಥಾಲಯಗಳಲ್ಲಿ, ಹರಪ್ಪ ನಾಗರೀಕತೆ ಹಾಗೂ ವೇದಗಳ ಬಗ್ಗೆ ಅಪಾರವಾದ ಮಾಹಿತಿ ಹಾಗೂ ಸಾಹಿತ್ಯದ ಲಭ್ಯವಿದೆ. ಆದರೆ, ಈ ವಿಚಾರದಲ್ಲಿ,  ಧಾನ್ಯವನ್ನು ಹೊಟ್ಟಿನಿಂದ ಬೇರ್ಪಡಿಸುವುದು ಅಸಾಧ್ಯವಾದ ಕಾರ್ಯವೆನಿಸಿದೆ. ನನ್ನ ಈ ಸಂಶೋಧನೆಯಲ್ಲಿ, ನಾನು ಕೇವಲ ವಿದ್ವತ್ಪೂರ್ಣ ಪ್ರಭಂಧಗಳನ್ನಷ್ಟೇ ಅಲ್ಲ, ಅನೇಕ ಗ್ರಂಥಗಳನ್ನೂ ಅಭ್ಯಸಿಸಿದ್ದೇನೆ. ಈ ವಿಷಯದ ಬಗ್ಗೆ ಪುಸ್ತಕಗಳು ಅಗಾಧ ಪ್ರಮಾಣದಲ್ಲಿವೆ.

ಈ ಗ್ರಂಥಗಳು ಹಾಗೂ ಲೇಖನಗಳು ಮೂರು ಪ್ರಕಾರಗಳಲ್ಲಿವೆ. ಒಂದನೆಯ ಗುಂಪಿನಲ್ಲಿ, ಬಹುತೇಕವಾದ ವಿದ್ವತ್ಪೂರ್ಣ ಚರಿತ್ರಕಾರರಿಂದ ರಚಿಸಲ್ಪಟ್ಟ ಪುಸ್ತಕಗಳೆನ್ನಬಹುದು. ಇವು ವಿಪರೀತ ಶುಷ್ಕವಾಗಿದ್ದು, ಓದಿ ಜೀರ್ಣಿಸಿಕೊಳ್ಳುವದೇ ಕಷ್ಟಕರವಾಗಿದೆ. ಎರಡನೆಯ ಗುಂಪಿನವು, ಬಹುಶಃ ಪುನರಾವರ್ತನೆಯ ಪುಸ್ತಕಗಳಾಗಿದ್ದು, ಇವುಗಳನ್ನು ಕೇವಲ ಪ್ರಚಾರವನ್ನೇ ಮೂಲ ಉದ್ದೇಶವನ್ನಾಗಿ ಇಟ್ಟುಕೊಂಡು ರಚಿಸಲಾಗಿವೆ ಎನ್ನಬಹುದು. ಈ ಪುಸ್ತಕಗಳು ಹಿಂದೂಧರ್ಮದ ಮೂಲಭೂತವಾದಿಗಳ ಕಹಳೆಯೋ ಎಂಬ ಸಂಶಯವನ್ನು ಹುಟ್ಟಿಸುವಂಥವು!  ಮೂರನೆಯ ವರ್ಗದ ಪುಸ್ತಕಗಳು ಆಸಕ್ತಿಪೂರ್ಣವಾಗಿದ್ದು, ಸಾಮಾನ್ಯ ಮನುಷ್ಯನ ಮನಸ್ಸನ್ನು ತಲಪುವ ಉದ್ದೇಶವನ್ನಿಟ್ಟುಕೊಂಡು ಬರೆದಿದ್ದು, ಇವು ಬರೀ ಕಥಾರೂಪದಲ್ಲಿವೆ.

ಏನೇ ಆಗಲಿ, ಭಾರತ ದೇಶದ ಪೂರ್ವೇತಿಹಾಸ ಮತ್ತು ಪವಿತ್ರಗ್ರಂಥಗಳತ್ತ ಆಕರ್ಷಿಸುವಂತೆ ಬರೆದ ಯಾವ ಪುಸ್ತಕಗಳೂ ನನಗೆ ಸಿಗಲಿಲ್ಲ. ನನ್ನ ಅನ್ವೇಷಣೆಯಲ್ಲಿ ಈಜಿಪ್ಟ್, ಗ್ರೀಕ್  ಮತ್ತು ರೋಮನ್ ಇತಿಹಾಸಗಳನ್ನು, ಕಾದಂಬರಿ ಮತ್ತು ಕಾಲ್ಪನಿಕ ರೂಪದಲ್ಲಿ ವರ್ಣಿಸಿದ ಅನೇಕ ಪುಸ್ತಕಗಳು ನನಗೆ ಕಂಡುಬಂದವು. ಇವು ಓದುವುದಕ್ಕೆ ಬಹಳ ಆಸಕ್ತಿ ಪೂರ್ಣವಾಗಿದ್ದು, ಯುವಜನತೆಯನ್ನು ಆಕರ್ಷಿಸುವಂತಿವೆ.  ಇದೇ ಕಾರಣದಿಂದಲೇ, ನನ್ನ ಸಮಾಗಮ, ಹರಪ್ಪ ನಾಗರೀಕತೆಯ ಪುಸ್ತಕಗಳ ಸರಣಿಯ ಜೊತೆ ಪ್ರಾರಂಭವಾಯಿತು.

ಮುಂದೆ ಬರಲಿರುವ ನನ್ನ ಈಪುಸ್ತಕಗಳು, ನಮ್ಮ ಯುವಪೀಳಿಗೆಯ ಆಸಕ್ತಿಯನ್ನು ಕೆರಳಿಸಿ, ಅದರಿಂದ ನಮ್ಮಪುರಾತನ ಸಂಸ್ಕೃತಿಯ ಬಗ್ಗೆ ಅವರಿಗೆ ಜಾಗೃತಿ ಮೂಡುವಂತಾಗುವುದೆಂದು ನಾನು ಆಶಿಸುತ್ತೇನೆ. ಈ ಪುಸ್ತಕಗಳ ಮೂಲಕ, ಅವರಿಗೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಇನ್ನೂ ಕುತೂಹಲ ಮೂಡಿ, ಆ ವಿಷಯದ ಬಗ್ಗೆ ಹೆಚ್ಚಾಗಿ ಓದುವಂತೆ ಪ್ರೇರೇಪಿಸಬೇಕೆಂಬುದೇ ನನ್ನ ಉತ್ಕಟ ಇಚ್ಛೆ!

ವೇದಗಳ ಉಗಮ

ಈಗ ಹಲವಾರು ದಶಕಗಳಿಂದ ವೇದಗಳ ಕರ್ತೃತ್ವದ ಬಗ್ಗೆ ಉತ್ಕಟವಾದ ಚರ್ಚೆಗಳು ನಡೆಯುತ್ತಿವೆ. ಹಿಂದೂಗಳ ನಂಬಿಕೆಯ ಪ್ರಕಾರ, ದೇವತೆಗಳು ಮೊದಲಲ್ಲಿ ವೇದಗಳನ್ನು ಋಷಿಗಳಿಗೆ ಅರುಹಿದರು, ಆನಂತರ ಋಷಿಗಳು ಈ ಶ್ಲೋಕಗಳಿಗೆ, ನಾಲ್ಕು ವೇದಗಳಾದ – ರಿಗ್,ಯಜುರ್ವ, ಅಥರ್ವ ಮತ್ತು ಸಾಮಗಳ ರೂಪವನ್ನು ನೀಡಿದರು ಎಂದು ಪ್ರತೀತಿ.  ಆದ್ದರಿಂದ, ವೇದಗಳನ್ನು “ಶ್ರುತಿ” ಅಥವಾ “ಕೇಳಿದ” ಗ್ರಂಥಗಳು ಎನ್ನುತ್ತಾರೆ.  ಆದರೆ ಕೆಲವು ವಿದ್ವಾಂಸರು ಇವುಗಳ ಒಡೆತನವನ್ನು ಪುರಾತನ ರಷ್ಯಾ ಮೂಲದ ಆರ್ಯರಿಗೆ ನೀಡಿ, ಅದನ್ನು ಪಂಜಾಬ್ ಭೂಮಿಯಲ್ಲಿ ರಚಿಸಿದರು ಎನ್ನುತ್ತಾರೆ.  ಕೆಲವರು ಪ್ರಾಚೀನ ದ್ರಾವಿಡರು ಇದರ ರಚನೆಕಾರರು ಎನ್ನುತ್ತಾರೆ.   ಭಾಷಾಶಾಸ್ತ್ರದ ಆಧಾರವಿಟ್ಟು ವಿದ್ವಾಂಸರು ಲಾಟ್ವಿಯಾ, ಇಂದಿನ ಟರ್ಕಿ ಮೂಲದ ಹಿತ್ತಿಯರು, ಪ್ರಸಕ್ತ ಇರಾನ್ ದೇಶದ ಅವೆಸ್ಟನ ಜನರೂ ಕೂಡ ಬರೆದಿರಬಹುದು ಎಂದು ಅಭಿಪ್ರಾಯ ಪಡುತ್ತಾರೆ.  ಈ ವಿಷಯಕ್ಕೆ ಬೆಂಬಲವಾಗಿ, ಅವರು ಮುಂದಿಡುವ ಸಾಕ್ಷಿ, ಅತಿ ಸೂಕ್ಷ್ಮವಾಗಿದ್ದು, ಪರಿಶೀಲನೆಗೆ ಒಳಪಡಿಸಲು ಸಾಧ್ಯವಿಲ್ಲ. ಈ ಶ್ಲೋಕಗಳ ಸಂಯೋಜನೆಯ ಸಮಯ ಕೂಡ ವಿವಾದಾತ್ಮಕವೆನಿಸಿದ್ದು, ಇದು  ಕ್ರಿ.ಪೂ ೬೦೦೦ ರಿಂದ ಕ್ರಿ.ಪೂ  ೯೦೦ ಕಾಲದವರೆಗೂ ವಿಸ್ತರಿಸಲ್ಪಟ್ಟಿದೆ.  ಆದರೆ ಸಾಮಾನ್ಯವಾಗಿ, ಈ ಶ್ಲೋಕಗಳು, ಕ್ರಿ.ಪೂ ೧೫೦೦ ನಿಂದ ೬೦೦ ವರ್ಷಗಳ ಅವಧಿಯಲ್ಲಿ ರಚಿಸಲಾಗಿತ್ತು ಎಂದು ವಿದ್ವಾಂಸರು ಒಪ್ಪಿಕೊಂಡಿದ್ದಾರೆ.  ಆದರೆ, ಇವೆಲ್ಲವೂ, ಬರೀ ವ್ಯಕ್ತಿಗತ ಅಭಿಪ್ರಾಯಗಳು ಹಾಗೂ ಅತಿ ಸೂಕ್ಷ್ಮರೀತಿಯ ಭಾಷಾಶಾಸ್ತ್ರಗಳಿಂದ ದೊರೆತಿರುವ ಪುರಾವೆಗಳಾಗಿವೆ.

ಇತ್ತೀಚೆಗೆ, ಹೊರಬರುತ್ತಿರುವ ಸಾಧ್ಯತೆಗಳ ಪ್ರಕಾರ, ವೇದಗಳನ್ನು ರಚಿಸಿದವರು ಮತ್ತಾರೂ ಅಲ್ಲ, ಆರ್ಯನ್ನರು ಆಕ್ರಮಣದಿಂದ ನಶಿಸಿ ಹೋದ ಹರಪ್ಪನ್ನರೇ ಎಂದು.  ಋಗ್ವೇದದಲ್ಲೇ ಅದರ ಸಂಯೋಜನೆಯ ದಿನಾಂಕ ಮತ್ತು ಸ್ಥಳದ ಪುರಾವೆಗಳು ಸಿಗುತ್ತವೆ.  ಋಗ್ವೇದದ ಏಳನೇ ಮಂಡಲದಲ್ಲಿ (ಏಳನೇ ಪುಸ್ತಕ) ಮೇಷ ಸಂಕ್ರಾಂತಿಯ ಸಮಯದಲ್ಲಿ ಮೃಗಶಿರಾ ತಾರಾಪುಂಜದಲ್ಲಿ (Orion constellation) ಸೂರ್ಯ ಮೇಲೇರುವುದನ್ನು ವಿವರ ಸಹಿತ ಬಣ್ಣಿಸಲಾಗಿದೆ. ಖಗೋಳಶಾಸ್ತ್ರಜ್ಞರ ಗಣಿಕೆಗಳ ಪ್ರಕಾರ, ಈ ಘಟನೆ ಕ್ರಿ.ಪೂ  ೪೦೦೦ನೇ ವರ್ಷದ ಹತ್ತಿರ ನಡೆಯಿತು ಎನ್ನುವ ವಿಷಯ ನಮಗೀಗ ತಿಳಿದಿದೆ.  ಇದರ ಅರ್ಥ, ಇಲ್ಲ ಈ ಘಟನೆಯು ಕ್ರಿ.ಪೂ ೪೦೦೦ ನಲ್ಲಿ ನಡೆದಿರಬೇಕು ಅಥವಾ ಇದನ್ನು ದಾಖಲಿಸಿದ ಲೇಖಕ ಕ್ರಿ.ಪೂ ೪೦೦೦ ನಲ್ಲಿ ವಾಸಿಸುತ್ತಿದ್ದ ಎಂದು ಖಚಿತವಾಗಿ ಹೇಳಬಹುದು..

 ನದಿಗಳು

ಋಗ್ವೇದದಲ್ಲಿ, ಸರಸ್ವತಿ ನದಿಗೆ ಅತ್ಯಂತ ಪ್ರಮುಖವಾದ ಸ್ಥಾನವನ್ನು ನೀಡಲಾಗಿದ್ದು, ಅನೇಕ ಶ್ಲೋಕಗಳನ್ನು ಈ ಮಹಾ ನದಿಗೆ ಅರ್ಪಿಸಲಾಗಿದೆ.  ಅನೇಕ ಘಟನೆಗಳನ್ನು, ಆ ಸಮಯದಲ್ಲಿನ ಅತ್ಯಂತ ದೊಡ್ಡ ನದಿಯಾಗಿದ್ದ ಪೃಷ್ನಿಯ ಸುತ್ತ-ಮುತ್ತಾ  ಹೆಣೆಯಲಾಗಿದೆ. ಆ ನದಿ, ಇಂದಿನ ರಾವಿ ನದಿಯ ಪೂರ್ವಕ್ಕೆ ಹರಿಯುತ್ತಿದ್ದಿತು ಎಂದೂ ಹೇಳಲಾಗುತ್ತದೆ.

ನಮಗೀಗ ಲಭ್ಯವಿರುವ ಮಾಹಿತಿಯ ಪ್ರಕಾರ, ಹಿಮಾಲಯ ಪರ್ವತಗಳಿಂದ ಉಗಮವಾದ ಭಾರಿ ನದಿಯೊಂದು, ಅಲ್ಲಿನ ಮಾನಸ ಸರೋವರದಿಂದ ಹಿಡಿದು, ರಾಜಾಸ್ತಾನದ ಮರಭೂಮಿಗಳ ಮೂಲಕ ಇಂದಿನ ಗುಜರಾತ್ ರಾಜ್ಯದಲ್ಲಿನ ಕಚ್ಛದ ರಣದವರೆಗೂ, ಹರಿಯುತ್ತಿತ್ತು. ಈ ನದಿ, ಸುಮಾರು ಕ್ರಿ.ಪೂ. ೧೯೦೦ ರಲ್ಲಿ ಬತ್ತಲು ಪ್ರಾರಂಭಿಸಿ, ಕ್ರಿ.ಪೂ.೧೩೦೦ರ ಹೊತ್ತಿಗೆ ಪೂರ್ಣವಾಗಿ ಇಂಗಿಹೋಗಿ, ಕೇವಲ ಋತುಕಾಲಿಕವಾಗಿ ಹರಿಯುವ ಇಂದಿನ ಗಗ್ಗ ಮತ್ತು ಹಕ್ರ  ಎಂಬ ಎರಡು ಉಪನದಿಯ ಭಾಗಗಳಾಗಿ ಮಾತ್ರ ಉಳಿದಿದೆ.

ಈ ಮಹಾ ನದಿ ಬತ್ತಿ ಹೋದ ಘಟನೆಯನ್ನು ಬೆಂಬಲಿಸಲು ಹಲವಾರು ಪುರಾವೆಗಳು ದೊರೆತಿವೆ.  ಅಮೆರಿಕಾದ ನಾಸಾ ಸಂಸ್ಥೆಯ ಉಪಗ್ರಹದ ಚಿತ್ರಗಳಲ್ಲಿ, ಅಗಲವಾದ ವಿಸ್ತೀರ್ಣವುಳ್ಳ ನದಿಯ ಇರುವಿಕೆ,  ಸುಮಾರು, ೧೦೦ ಮೀಟರುಗಳ ಅಡಿಗಳಷ್ಟು, ಭೂಮಿಯ ಕೆಳಗಿರುವುದು ಕಂಡು ಬಂದಿದ್ದು, ಈ ಪಾತ್ರವನ್ನು ಸರಸ್ವತಿ  ನದಿ ಹರಿಯುತ್ತಿದ್ದ ಪಥವೆಂದು ಪರಿಗಣಿಸಲಾಗಿದೆ. ಕ್ರಿ.ಪೂ ಎರಡನೆಯ ಸಹಸ್ರಮಾನದಲ್ಲಿ, ಭೂಮಿಯ ಹೊರಪದರದಲ್ಲಿ ಜರುಗಿದ ಅನೇಕ ಭೀಕರ ಘಟನೆಗಳು ಮತ್ತು  ಕ್ರಮೇಣವಾಗಿ ಈಶಾನ್ಯ ಮುಂಗಾರು ಮಾರುತ, ಪೂರ್ವಕ್ಕೆ ತನ್ನ ಚಲನೆಯನ್ನು ಬದಲಿಸಿದ ಕಾರಣಗಳಿಂದಾಗಿ ಈ ಮಹಾನದಿ ಬತ್ತಿಹೋಯಿತು ಎಂದು ತಿಳಿದು ಬರುತ್ತದೆ. ಈ ಪ್ರದೇಶದಲ್ಲಿ ಸಂಭವಿಸಿದ ಮೊಟ್ಟಮೊದಲ ಭೂಕಂಪ ಕ್ರಿ.ಪೂ. ೨೬೦೦ ರಲ್ಲಿ ಎಂದು ದಾಖಲಿಸಲ್ಪಟ್ಟಿದೆ (B.B.Lal) . ಇದರ ಪ್ರಕಾರ, ವೇದಗಳ ರಚನೆ ಕ್ರಿ.ಪೂ. ೧೯೦೦ರಲ್ಲಿ ಅಂದರೆ, ಮೂರನೆಯ ಸಹಸ್ರಮಾನದಲ್ಲಿ ನಡೆದಿದೆಯೆಂದು ಗ್ರಹಿಸಬಹುದು. ಆದ್ದರಿಂದ, ಈ ಘಟನೆಗೆ ಮುಂಚೆ, ಸುಮಾರು ೫೦೦ ವರ್ಷಗಳಷ್ಟು ಹಿಂದೆಯೇ ಬತ್ತಿ ಹೋಗಿದ್ದ ಈ ಮಹಾನದಿಯ ಬಗ್ಗೆ ಈ ಗ್ರಂಥಗಳಲ್ಲಿ ಬರೆದಿರುವುದು ಅಸಂಭವವೆನಿಸಿದೆ.

ಲೋಹ ಮತ್ತು ಅಶ್ವ

ಆರ್ಯರ ಆಕ್ರಮಣವನ್ನು ಪ್ರತಿಪಾದಿಸುವ ಸಿದ್ಧಾಂತಿಗಳು,  ಬಳಸುವ ವಾದಗಳಲ್ಲಿ ಒಂದೆಂದರೆ, ವೇದಗಳಲ್ಲಿರುವ ಕಬ್ಬಿಣದ ಬಳಕೆ.  ಪದ ‘ಆಯಸ್’ ಅನ್ನು ಕಬ್ಬಿಣ ಎಂದು ಭಾಷಾಂತರಿಸಿ, ವೇದಗಳ ಸೃಜನ ಸಮಯವನ್ನು, ಕ್ರಿ.ಪೂ ೧೫೦೦ರ ನಂತರ ಅಂದರೆ ಕಬ್ಬಿಣದ ಯುಗಕ್ಕೆ ಬದಲಾಯಿಸಲಾಗಿದೆ.  ಹಲವಾರು ಸಂಸ್ಕೃತ ವಿದ್ವಾಂಸರು, ಈಗ ಈ “ಕಬ್ಬಿಣದ ಪದವನ್ನು” ಬದಲಿಸಿ, ಅದನ್ನು “ಲೋಹವೆಂಬ” ಅರ್ಥಕ್ಕೆ ವ್ಯಾಖ್ಯಾನಿಸುತ್ತಾರೆ.  ಆದ್ದರಿಂದ, ಈ ಲೋಹ ತಾಮ್ರ ಮತ್ತು ಕಂಚು ಸೇರಿದಂತೆ ಯಾವುದೇ ಲೋಹವಾಗಿರಬಹುದು.

ಇದೇ ಸಿದ್ಧಾಂತಿಗಳು ಮಂಡಿಸುವ ಮತ್ತೊಂದು ವಾದವೆಂದರೆ, ಋಗ್ವೇದದ ಘಟನೆಗಳಲ್ಲಿ ವಿವರಿಸಲಾಗಿರುವ, ಅಶ್ವಗಳ ಬಳಕೆ, ಹಾಗೂ ಕ್ರಿ.ಪೂ ಎರಡನೆಯ ಸಹಸ್ರಮಾನದವರೆಗೂ, ಭಾರತದಲ್ಲಿ ಅಶ್ವಗಳು ಇರಲಿಲ್ಲವೆಂಬ ವಾದಸರಣಿ.  ಕ್ರಿ.ಪೂ.೩೦೦೦ ವರ್ಷಗಳ ಹಿಂದಿನ ಪುರಾತತ್ವ ಸಾಕ್ಷಿಗಳ ಪ್ರಕಾರ, ನಿಜವಾದ ಪಳಗಿಸಿದ ಕುದುರೆಗಳ ಮೂಳೆಗಳನ್ನು, ಡೋಲಾವೀರಾ ಮತ್ತು ಮೆಹೆಂಜೋದಾರೋ ಅವಶೇಷಗಳಲ್ಲಿಯೂ, ಸುರ್ಕೊಟಾಡಾ, ಕಾಲಿಬಂಗನ್, ರೂಪರ್ ಪ್ರದೇಶಗಳ ಅವಶೇಷಗಳ ಎಲ್ಲಾ ಪದರಗಳಲ್ಲಿಯೂ ಅಲ್ಲದೇ, ಹರಪ್ಪ ಅವಶೇಷಗಳಲ್ಲಿಯೂ ಪತ್ತೆಹಚ್ಚಲಾಗಿದೆ.

ಹೀಗಾಗಿ, ಪ್ರಸ್ತುತದಲ್ಲಿ ಹಲವಾರು ವಿದ್ವಾಂಸರ ದೃಢವಾದ ನಂಬಿಕೆಯ ಪ್ರಕಾರ, ಹರಪ್ಪನ್ನರೇ ವೇದಗಳ ಕರ್ತೃಗಳು ಎನ್ನುವ ಸಂಗತಿ ಪ್ರಚಲಿತವಾಗಿದ್ದು, ಅವರಲ್ಲಿ ನಾನೂ ಒಬ್ಬನಾಗಿದ್ದೇನೆ.

 

ಲೇಖಕರು: ವೃತ್ತಿಯಿಂದ ಡಾಕ್ಟರರಾದ ಶಂಕರ್ ಕಾಶ್ಯಪ್ ಅವರು ಮೂಲತಃ ಬೆಂಗಳೂರಿನವರು. ಈಗ ನ್ಯೂಕಾಸಲ್ ಅಪಾನ್ ಟೈನ್ ದಲ್ಲಿ ಮೂಳೆ-ಎಲಬುಗಳ ಸರ್ಜನ್ನರಾಗಿ ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ವಿಷಯದಲ್ಲಿ ಅವರು ನಡೆಸಿದ  ಸಂಶೋಧನೆಯನ್ನು ವಿದ್ವತ್ ಪ್ರಬಂಧಗಳಾಗಿ  ಪ್ರಕಟಿಸಿದ್ದಾರೆ. ಸತ್ಯ ಘಟನೆಗಳ ಆಧಾರದ ಮೇಲೆ ಬರೆದ “A Kangaroo Court” ಅವರ ಚೊಚ್ಚಲ ಪುಸ್ತಕ. ಭಾರತದ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಯ ಬಗೆಗೆ ಆಳವಾಗಿ ಅಭ್ಯಸಿಸಿ ಹರಪ್ಪ ನಾಗರೀಕತೆಯ ಬಗ್ಗೆ  ಅವರು ಬರೆಯಲು ಹಮ್ಮಿಕೊಂಡ ಸರಣಿಯ ಮೊದಲ ಕೊಡುಗೆಯಾದ “ಸೋಮನ ಆಕರ್ಷಣೆ”ಗೆ ಋಗ್ವೇದದ ಆಧಾರವನ್ನು ಗುರುತಿಸುತ್ತಾರೆ. ಅದು ಓದುಗರಿಂದ ಉತ್ತಮ ವಿಮರ್ಶೆಗಳನ್ನು ಪಡೆಯಿತು. ಸರಣಿಯ ಎರಡನೆಯ ಪುಸ್ತಕ, ಶುರುಪ್ಪಾಕ್ಕನ ಪತನ ಈ ವರ್ಷ(2014)ಜೂನ್/ ಜುಲೈನಲ್ಲಿ ಬಿಡುಗಡೆಯಾಗಲಿದೆ

.front cover2

©All other photos: Author

ಆಧಾರ:

  1. B B Lal: The Sarawathi Flows on, Aryan Books International, 2002, Pages 38-39.
  2. Vahia MN, Yadav N: Reconstructing the History  of Harappan Civilisation. Social Evolution and History. Vol 10: Sep 2011.
  3. Kenoyer JM: From Sumer to Meluhha, Wisconsin Archaeological Reports, Vol 3, 1994.
  4. Meadow RH, Kenoyer JM: Excavations at Harappa 2000-2001.  South Asian Archaeology. 2001-2003.  Ed. C Jumge, CNRS, Paris.  Pages 207-225.
  5. Kenoyer JM:  Uncovering the keys to the lost Indus Cities.  Scientific American, 2003

 

12 thoughts on “ಹರಪ್ಪ ಪುಸ್ತಕ ಸರಣಿಯ ಹಿನ್ನೆಲೆ – ಡಾ ಶಂಕರ್ ಕಾಶ್ಯಪ್ ಅವರು ಬರೆದ ಲೇಖನ

  1. It is good to know that people still have interest in our culture. There are some videos in you tube about harrappan culture and disapproval of aryan invasion theory from “www.gosai.com” . I am interested in Vedic Mathematics. You will be amazed by the mental mathematic tricks used in Vedas. I do not have many books. I only have a few, but it is enough to give an idea of , what is inside in the head of our four fathers.

    Like

  2. ಎಲ್ಲರೂ ಹರಪ್ಪ ಪುಸ್ತಕದ ಬಗ್ಗೆ ಬರೆದಿರುವ ಅಭಿಪ್ರಾಯಗಳು ಕೇಳಿ ನನಗೆ ಬಹಳ ಸಂತೊಷವಾಯಿತು. ಈ ಹರಪ್ಪ ನಾಗರೀಕತೆಯ ಬಗ್ಗೆ ಉಪನ್ಯಾಸ ಕೊದಲು ಕೆಲವರು ಕೇಳಿದ್ದಾರೆ. ಕನ್ನಡ ಸಾಹಿತ್ಯ ವೇದಿಕೆಯವರು ವ್ಯವಸ್ತೆ ಮಾಡಿದರೆ, ಇದು ನನ್ನ ಸವಲತ್ತು ಎಂದುಕೊಳುತ್ತೆನೇ.
    ಶಂಕರ್

    Like

  3. My apologies for writing this comment in English. I could not figure out how to get kannada script on to this. It is touching to read the comments about my article. It really makes me feel very humble. One of my friends, Mahesh Kallare is in the process of translating the books into Kannada. As usual, there is the problem of finding a publisher for the Kannada version!!
    I would be honored to be involved in any discussion about our pre-history. I think it is very important that we pass our knowledge to our youngsters in any form. Anyone wishing to discuss any part of the book or about Harappan civilisation can get in touch with me through mudigere@hotmail.com.
    Kind regards
    Shankar

    Like

  4. Very interesting to read dr kashap’s article on Harappa. As a part of educating our children born and brought up here, Kannada Balaga should have an interactive session on subjects like this during one of our events. Why not during Deepavali event in October?
    Rama Murthy
    Basingstoke

    Like

  5. ಸ್ನೇಹಿತರೆ ನದಿ ಮೂಲ, ಋಷಿ ಮೂಲದಂತೆ, ಇತಿಹಾಸದ ಮೂಲವು ಒಂದು ರೀತಿಯಲ್ಲಿ ವಿವಾದಾತ್ಮಕವಾದ ಸಂಗತಿ. ಸಾಮಾನ್ಯವಾಗಿ ಇತಿಹಾಸದ ಘಟನೆಗಳು ವಿವಿಧ ಬರಹಗಾರರ ಕೈಯ್ಯಲ್ಲಿ ಸಿಕ್ಕಾಗ ಪೂರ್ವಾಗ್ರಹಗಳಿಂದ ತುಂಬಿ ತಿರುಚಲ್ಪಡುತ್ತದೆ ಎಂಬುದು ಈಗ ಎಲ್ಲರಿಗೂ ತಿಳಿದ ವಿಷಯವೇ ಸರಿ. ಆದರೆ ಕಾಶ್ಯಪ ಅವರು ಮಾಡಿರುವ ಒಂದು ಪ್ರಯತ್ನ, ಈ ಪೂರ್ವಾಗ್ರಹ ಪೀಡಿತ ಇತಿಹಾಸದ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕಿ, ನಮ್ಮ ದೇಶದ ಸಂಸ್ಕೃತಿ ಮತ್ತು ನಾಗರೀಕತೆಯ ಬಗ್ಗೆ ನಾವೆಲ್ಲರೂ ಆಳವಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ. ಕಾಶ್ಯಪ್ ಅವರನ್ನು ಒಮ್ಮೆ ನಮ್ಮ ವೇದಿಕೆಯ ಸಭೆಗೆ ಆಹ್ವಾನಿಸಿ, ಅವರ ಒಂದು ಉಪನ್ಯಾಸವನ್ನು ಏರ್ಪಡಿಸಿದರೆ ಚೆನ್ನಾಗಿರುತ್ತದೆ ಎಂದು ನನ್ನ ಅನಿಸಿಕೆ.
    ಉಮಾ ವೆಂಕಟೇಶ್

    Like

  6. ಆಸಕ್ತಿ ಪೂರ್ಣ ಬರಹ. ಈ ಯುರೋಪಿಯನ್ನರ ಕಲಬೆರಕೆ ಹಾಗೂ ಪೂರ್ವಾಗ್ರಹಗಳಿಂದ ಕೂಡಿದ ಇತಿಹಾಸವನ್ನೇ ವಾಮ ಪಂಥೀಯ ನೆಹರೂ ಹಾಗೂ ಅವರ ಕಂಪಣ ದೇಶಾಭಿಮಾನವಿಲ್ಲದೆ ಪಠ್ಯಗಳಲ್ಲಿ ತುರುಕಿಸಿದ್ದು, ಇತಿಹಾಸಕಾರರ ಕೈತಿರುಚಿದ್ದು ಎಲ್ಲರಿಗೂ ಇಂದು ತಿಳಿದೇ ಇದೆ. ಸತ್ಯದ ಒರೆಗೆ ಹಚ್ಚುವ ಇಂತಹ ಐತಿಹಾಸಿಕ ಬರಹಗಳು ಕುತೂಹಲವನ್ನು ತಣಿಸುವುದಷ್ಟೇ ಅಲ್ಲ ದೇಶಿಗರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬಲ್ಲವು./
    ಈ ಪುಸ್ತಕಗಳು ಕನ್ನಡದಲ್ಲಿ ಲಭ್ಯವಿದ್ದರೆ ಚೆನ್ನ. ನಮ್ಮ ದೇಶದ ಕಥೆಗಳನ್ನು ನಮ್ಮ ಭಾಷೆಯಲ್ಲಿ ಓದುವುದು ನನಗೆ ಬಹಳಲ್ ಮುದ ನಿಡುವ ವಿಚಾರ.. ಪುಸ್ತಕಗಳು ದೊರೆಯುವ ಬಗೆ ತಿಳಿಸಿದರೆ ನಾನು ಮುನ್ದಿಅತಿಂಗಳು ಭಾರತಕ್ಕೆ ಹೋದಾಗ ತೆಗೆದುಕೊಂಡು ಬರುತ್ತೇನೆ.
    ಕನ್ನಡ ಬಳಗದ ಕಾರ್ಯಕ್ರಮದಲ್ಲಿ ಇವರ ವಿಚಾರ ಗೋಷ್ಠಿಯನ್ನು ಮಾಡಿದರೆ ಬಹಳ ಚೆನ್ನಾಗಿರುತ್ತದೆ

    sudarshana

    Like

  7. ತುಂಬಾ ಸೊಗಸಾಗಿ ಬರೆದಿದ್ದಾರೆ. ಒಳ್ಳೆ ಕನ್ನಡ ಹಾಗೂ ವಿಷಯ ಮಂಡನೆ.
    Lure of Soma ಕನ್ನಡದಲ್ಲೂ ಇದೆಯಾ?

    Like

    • ನಾನು ಬೆಂಗಲೂರಿನಲ್ಲಿರುವ ಮಹೆಶ್ ಕಲ್ಲರೆ ಅವರಿಂದ ಈ ಪುಸ್ತಕವನ್ನು ಅನುವಾದ ಮಾಡಿಸಲು ಪ್ರಯತ್ನ ಮಾಡುತ್ತಿದ್ದೇನೆ. ಸದ್ಯದಲ್ಲಿ ಪ್ರಕಾಶಕರು ಸಿಗುವುದು ಕಶ್ಟವಾಗಿದೆ

      Like

  8. ರಾಮ್ ಅವರೇ,
    ಅವರ ಎರಡೂ ಪುಸ್ತಕಗಳು Kindle ಆವೃತ್ತಿಯಲ್ಲಿ ಅಮೇಝಾನ್ ನಲ್ಲಿ ದೊರಕುವುವೆಂದು ಈಗ ತಾನೇ ತಿಳಿಯಿತು.
    ಶ್ರೀವತ್ಸ

    Like

  9. ದೇಸಾಯಿಯವರೆ,
    ಕುತೂಹಲ ಕೆರಳಿಸಿದ್ದೀರಿ. ಆದಷ್ಟು ಬೇಗ ಓದುವ ತವಕ. ಕಾಂಗರೂ ಕೋರ್ಟ್ ಎಲ್ಲಿ ಸಿಗಬಹುದು?
    ಕಶ್ಯಪರನ್ನು ಸಪ್ಟೆಂಬರ್ ಕೂಟಕ್ಕೆ ಕರೆಸಬಹುದು.

    Like

  10. If he is in UK , it would be a splendid idea to invite the author . After school education this is the first time I am reading about our great civilisation .
    I would like to read more and the whole series.
    As a personality the author should be so talented to be in the field of medicine and to do a great research about our history. We would be inspired to see/ hear about his inner drive which has made this book possible!

    Like

  11. ಸೊಗಸಾಗಿದೆ ಬರಹ. ಕುತೂಹಲ ಹೆಚ್ಚುತ್ತಿದೆ. ಬೇಗ ಪುಸ್ತಕವನ್ನು ಓದುವ ಆಸೆ. ಹಾಗೆಯೇ ಶಂಕರ ಕಶ್ಯಪರ ಜೊತೆ ಒಂದು ಸಂವಾದವನ್ನು ಎರ್ಪಡಿಸುವ ಆಸೆ.

    Like

Leave a reply to Premalatha Cancel reply

This site uses Akismet to reduce spam. Learn how your comment data is processed.