ಇಂಗ್ಲಂಡಿನಲ್ಲಿ ಮಾವಿನ ಹಣ್ಣು – ಕೇಶವ ಕುಲಕರ್ಣಿ ಬರೆದ ಕವಿತೆ

ಇಂಗ್ಲಂಡಿನಲ್ಲಿ ಮಾವಿನ ಹಣ್ಣು

mango‘ಮಾವು’ ಎಂದೆ ನೋಡಿ
ಮನೆಯೆಲ್ಲ
ಮನವೆಲ್ಲ
ಕಂಪು, ಬಣ್ಣ, ಸ್ವಾದ, ನಾರು, ಗೊರಟ,
ಜೊತೆಗೆ ಭಾರತ

ಗೆಳೆಯ,
ಮಾವಿನ
ಸಿಹಿ ಗೊತ್ತಿದ್ದೂ
ಒಗರು ಗೊತ್ತಿದ್ದೂ
’I am not missing it’ ಎಂದು
ದ್ರಾಕ್ಷಿಯ ವೈನು ಹಿಡಿದು ಕೂತಿದ್ದೇನೆ

ನಿದ್ದೆಗೆ ಜಾರುವಾಗ ಕನಸಿನಲ್ಲಿ
ಬೆನ್ನುಹುರಿಯಲ್ಲಿ ಅಳುಕಿದಂತಾಗಿ
ಎದೆಯೆಲ್ಲ ಹಿಂಡಿದಂತಾಗಿ
ಹುಳಿದ್ರಾಕ್ಷಿಯ ತೇಗಿನಲ್ಲೂ
ಮಾವಿನ ವಾಸನೆ

ತ್ರಿಶಂಕುವಿನ ಸ್ವರ್ಗದಲ್ಲಿ
ಮಾವು ಸಿಗುವುದಿಲ್ಲ
ಸಿಕ್ಕರೂ ತಿಂದಂತಾಗುವುದಿಲ್ಲ

ಅಭಿಮನ್ಯುವಿನ ಚಕ್ರವ್ಯೂಹವಿದು
ಎಂದು ಯಾರಿಗೆ ಗೊತ್ತಿತ್ತು?

ಮಾವನ್ನು ದಿಟ್ಟಿಸುತ್ತ ಕೂತಿದ್ದೇನೆ
ಇಂಟರ್ನೆಟ್ಟಿನ ಮುಂದೆ
ಇನ್ನು ಒಂದೇ ಕ್ಲಿಕ್ಕು
ಆನ್‍ಲೈನ್ ಆರ್ಡರು
ರತ್ನಾಗಿರಿಯಿಂದ ಸೀದಾ ಮನೆಗೆ ಆಪೂಸು!

10 thoughts on “ಇಂಗ್ಲಂಡಿನಲ್ಲಿ ಮಾವಿನ ಹಣ್ಣು – ಕೇಶವ ಕುಲಕರ್ಣಿ ಬರೆದ ಕವಿತೆ

  1. ಮಾವು ಮಾವು ಎಂದು
    ಮಾವಿಗಾಗಿ ಕಾದು ಪರದಾಡಿ
    ಈಗ ಇ.ಯು ಬನ ಆಗಿ
    ಬ್ರಾಜಿಲ್ ಮತ್ತು ಪೆರುವಿನ
    ಚಪ್ಪೆ ಮಾವು ತಿಂದು
    ಸಪ್ಪಗಾಗಿ ಹೋಗಿದೆವೆಲ್ಲೋ ಶಿವಾ!

    Like

  2. Nimma Kavana odi nanna ballyada mavina hannu, adara rasa thindu,tegi ,angiya mele kale beelisikondu, tandeyavarinda baigala thindudannu maretu anandisiddu jnapaka baruttalde. Yegye illi mavina hannannu tarisalu nirbhandeyinda haliya nenapugallu
    Kanasagive.
    Aravind

    Like

  3. ಈ ಸಂದರ್ಭದಲ್ಲಿ ನನಗೆ ಜಿ ಎಸ್ ಎಸ್ ಅವರ ’ಕವಿಯ ಮನಸು’ ಎಂಬ ಕವನದ ಮೊದಲ ಕೆಲವು ಸಾಲುಗಳು ನೆನಪಿಗೆ ಬರುತ್ತಿದೆ

    ಪ್ರಕೃತಿಯಂತೆ ಕವಿಯ ಮನಸು
    ವಿಪುಲ ರೂಪ ಧಾರಿಣಿ
    ಬ್ರಹ್ಮನೆದೆಯ ಕನಸಿನಂತೆ
    ಕೋಟಿ ಕಲ್ಪ ಗಾಮಿನಿ…..

    Like

  4. ಹ್ದೌದು ನಿಮ್ಮ ಮಾತು ನೂರಕ್ಕೆ ನೂರು ಸತ್ಯ ! ಕನಸು ಕಾಣದ ಮನುಶ್ಯ ಕವನಿಸುವುದು ಸಾಧ್ಯವಿಲ್ಲ .

    Like

  5. ಕೇಶವ ಕುಲಕರ್ಣಿ ಅವರ ’ಇಂಗ್ಲಂಡಿನಲ್ಲಿ ಮಾವಿನ ಹಣ್ಣು’ ಕವನ – ಒಂದು ಪ್ರತಿಕ್ರಿಯೆ ಡಾ ಶಿವಪ್ರಸಾದ್ ಅವರಿಂದ,

    ಹೊರದೇಶದಲ್ಲಿ ನೆಲಸಿರುವ ಭಾರತೀಯರಾದ ನಾವು ಸ್ಥಳೀಯ ದೇಶಗಳ ಭಾಷೆ ಸಂಸ್ಕೃತಿಗಳನ್ನು ಹೀರಿಕೊಂಡು ಒಂದು ಸಂತೃಪ್ತಿಯ ಜೀವನವನ್ನು ನಡೆಸಿರುವಂತೆ ಕಂಡರೂ, ಒಳಗಿನ ಆಳದಲ್ಲಿ ನಮ್ಮ ನೆಲದ ಭಾಷೆ ಸಂಸ್ಕೃತಿಯ, ಹಳೆಯ ಸವಿನೆನಪುಗಳು ನಮ್ಮನ್ನು ಕಾಡುವುದು ಸಾಮಾನ್ಯ. ಇದನ್ನು ನಾವು “I am not missing it’ ಎಂದು ಅಲ್ಲಗೆಳೆದರೂ, ಅದು ನಮ್ಮನ್ನು ನಿದ್ದೆ ಕನಸುಗಳಲ್ಲಿ ಬೆನ್ನಟ್ಟುವ ಅನುಭವವನ್ನು ಕೇಶವ್ ಅವರು ತಮ್ಮ ಕವನದಲ್ಲಿ ಪ್ರಸ್ಥಾಪಿಸಿದ್ದಾರೆ. ಕೈಯಲ್ಲಿ ಹುಳಿ ದ್ರಾಕ್ಷಿಯ wine glass ಹಿಡಿದು ಕೊಂಡು ಮಾವಿನ ಸಿಹಿಯನ್ನು ನೆನೆಯುವುದರಲ್ಲಿ ಉಂಟಾಗುವ ನಿರಾಶೆ ಕೇಶವ್ ಅವರ ಕವನದಲ್ಲಿ ಬಹಳ ಚನ್ನಾಗಿ ಮೂಡಿಬಂದಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗುವ ಹಾಗು ಬೆಳೆಯುವ ಸೇಬು ದ್ರಾಕ್ಷಿ ನಮ್ಮ ಮಾವಿನಹಣ್ಣಿನ ಕೆಂಪಿಗೆ, ಕಂಪಿಗೆ, ಸಿಹಿಗೆ ಹಾಗು ಸವಿಗೆ ಸರಿಸಾಟಿಯಾಗಿ ನಿಲ್ಲಲಾರದು ಎಂಬುದು ನಮ್ಮೆಲ್ಲರ ಅಭಿಪ್ರಾಯ.

    ಹೊರದೇಶದಲ್ಲಿ ನೆಲಸಿರುವ ಭಾರತೀಯರಿಗೆ ಪಾಶ್ಚಿಮಾತ್ಯ ದೇಶಗಳ ವ್ಯವಸ್ಥಿತ ಬದುಕು, ಹಣ, ಸೌಕರ್ಯಗಳು ಬೇಕು, ಅದರ ಜೊತೆಗೆ ಮಾವಿನ ಹಣ್ಣಿನ ಸವಿಯೂ ಬೇಕು. ಇಂತಹ ಒಂದು ತ್ರಿಶಂಕುವಿನ ಸ್ವರ್ಗದ ಚಕ್ರವ್ಯೂಹದಲ್ಲಿ ಸಿಲುಕಿರುವ ನಮ್ಮ ಪರಿಸ್ಥಿತಿಯನ್ನು ಕೇಶವ್ ಅವರು ತಮ್ಮ ಕವನದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಲಂಕೇಶ್ ಅವರ ಬರವಣಿಗೆಯಿಂದ ಪ್ರಭಾವಿತರಾಗಿರುವ ಕೇಶವ್ ತಮ್ಮ ಕವನದ ಶೈಲಿಯಲ್ಲಿ ಆ ಒಂದು ಸಂಪ್ರದಾಯವನ್ನು ತೋರಿರುವುದು ವಿಶೇಷವಾಗಿದೆ.

    ಡಾ ಶಿವಪ್ರಸಾದ್ , ಶೆಫ಼ೀಲ್ಡ್,

    Like

    • ಪ್ರಸಾದ್, ನಿಮ್ಮ ಪ್ರತಿಕ್ರಿಯೆ ಹುಮ್ಮಸ್ಸು ತರುತ್ತಿದೆ, ಇನ್ನೂ ಹೆಚ್ಚು ಬರೆಯಲು.

      Like

  6. ಇನ್ನೇನು ಎರಡು ತಿಂಗಳು ಕಾದರೆ ಈ ವರ್ಷದ ಮಾವು ಬರುವ ಸಮಯ! ನಿಮ್ಮ ನಿದ್ದೆಯಲ್ಲಿ ನಿಮ್ಮನ್ನು ಕಾಡುತ್ತಿರುವ ಫಲ, ನಿಮ್ಮ ಬಾಯಿಗೂ ಬಂದು ಬೀಳುತ್ತೆ! ಅಂದ ಹಾಗೆ ರತ್ನಗಿರಿಯಿಂದ ಆನ್ಲೈನಿನಲ್ಲಿ ಮಾವನ್ನು ಇಲ್ಲಿಗೆ ತರಿಸಲು ಸಾಧ್ಯವೇ ಇಲ್ಲಾ ಅದೂ ಕನಸೇ? ಚೆನ್ನಾಗಿದೆ ಕವನ.

    Like

    • ಇಲ್ಲಿ ಎಲ್ಲ ಕನಸೇ. ಕವನಿಸುವುದು ಕೂಡ ಕನಸೇ ಅಲ್ಲವೇ?

      Like

  7. chennaagide! It is early for it to be sold in lots here. But, no excuse to dream of it, at least the taste of it. Liked ಹುಳಿದ್ರಾಕ್ಷಿಯ ತೇಗಿನಲ್ಲೂ .ಮಾವಿನ ವಾಸನೆ. Like seeing mango when I look at apple while sipping cider! Good, Keshav! Shrivatsa

    Like

Leave a comment

This site uses Akismet to reduce spam. Learn how your comment data is processed.